varthabharthi

ಕರಾವಳಿ

ಸರ್ವ ಧರ್ಮ ಇಫ್ತಾರ್ ಕೂಟ

ಸಹಬಾಳ್ವೆ ಎಲ್ಲಾ ಧರ್ಮಗಳ ತಿರುಳು-ವಿನಯ ಕುಮಾರ್ ಸೊರಕೆ

ವಾರ್ತಾ ಭಾರತಿ : 13 Jun, 2018

ಪುತ್ತೂರು, ಜೂ. 13: ಎಲ್ಲ ಧರ್ಮಗಳ ಜನ ಒಟ್ಟಾಗಿ ಸಹಬಾಳ್ವೆಯಿಂದ ಬದುಕುವುದು ನಮ್ಮ ದೇಶದ ಮೂಲ ತಿರುಳಾಗಿದ್ದು, ಅದು ಈಗಲೂ ಜನ ಸಾಮಾನ್ಯರಲ್ಲಿದೆ. ಆದರೆ ಕೆಲವು ಸ್ವಹಿತಾಸಕ್ತಿಗಾಗಿ ಮಾತ್ರ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಎಲ್ಲರೂ ಜತೆಯಾಗಿ ಸಾಗಿದರೆ ಮಾತ್ರ ಈ ದೇಶ ಬೆಳಗಲು ಸಾಧ್ಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಪುತ್ತೂರಿನ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ರಂಝಾನ್ ಉಪವಾಸದ ಸಂದರ್ಭ ಬುಧವಾರ ಸಂಜೆ ಏರ್ಪಡಿಸಲಾಗಿದ್ದ 33ನೇ ವರ್ಷದ ಸರ್ವ ಧರ್ಮ ಇಫ್ತಾರ್ ಕೂಟದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಸ್ಲಾಂನಲ್ಲಿ ರಂಝಾನ್ ಉಪವಾಸಕ್ಕೆ ಮಹತ್ವವಿದೆ. ಹಿಂದೂ ಧರ್ಮದಲ್ಲೂ ನಿರ್ದಿಷ್ಟ ವಾರ, ನಿರ್ದಿಷ್ಟ ತಿಥಿಗಳಂದು ಉಪವಾಸ ಮಾಡುತ್ತಾರೆ. ಕ್ರೈಸ್ತರಲ್ಲೂ ಕಪ್ಪು ದಿನಗಳಂದು ಉಪವಾಸ ಮಾಡುತ್ತಾರೆ. ಎಲ್ಲ ಧರ್ಮಗಳಲ್ಲೂ ಉಪವಾಸಕ್ಕೆ ಮಹತ್ವವಿದೆ. ಉಪವಾಸದ ಮೂಲಕ ಇಂದ್ರಿಯಗಳ ನಿಯಂತ್ರಣ ಸಾಧ್ಯ. ಅದೇ ರೀತಿ ಹಸಿವಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ವಿನಯ ಕುಮಾರ್ ಸೊರಕೆ ಅವರು ಪುತ್ತೂರಿನಲ್ಲಿ ಶಾಸಕರಾಗಿದ್ದ ಸಂದರ್ಭ ಈ ಸೌಹಾರ್ಧ ಇಫ್ತಾರ್ ಕೂಟ ಆರಂಭಿಸಿದ್ದರು. ಈಗಲೂ ಮುಂದುವರಿಸುತ್ತಿದ್ದಾರೆ. 33 ವರ್ಷಗಳ ಸುದೀರ್ಘ ಇತಿಹಾಸ ಇದಕ್ಕಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ನಿರ್ದಿಷ್ಟ ಧರ್ಮದವರು ನನ್ನ ಬಳಿಗೆ ಬರಬೇಡಿ ಎಂದು ಕೋಮುವಾದಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಹೇಳುತ್ತಿದ್ದಾರೆ. ಆದರೆ ಜಾತ್ಯತೀತ ಪಕ್ಷಗಳು ಎಲ್ಲರನ್ನೂ ಜತೆಯಾಗಿ ಕರೆದೊಯ್ಯುವ ಈ ದೇಶದ ಮೂಲಸತ್ವವನ್ನು ಗೌರವಿಸುತ್ತವೆ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವಾ, ಧಾರ್ಮಿಕ ಮುಖಂಡರಾದ ಹುಸೇನ್ ದಾರಿಮಿ ರೆಂಜಲಾಡಿ, ಎಸ್. ಬಿ. ದಾರಿಮಿ. ಜೆಡಿಎಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ, ಕಾಂಗ್ರೆಸ್ ಮುಖಂಡರಾದ ಕೃಷ್ಣ ಪ್ರಸಾದ್ ಆಳ್ವಾ, ಜೋಕಿಂ ಡಿಸೋಜ, ದುರ್ಗಾ ಪ್ರಸಾದ್ ರೈ ಕುಂಬ್ರ, ಪ್ರಸಾದ್ ಕೌಶಲ್ ಶೆಟ್ಟಿ, ನೂರುದ್ದೀನ್ ಸಾಲ್ಮರ, ವೇದನಾಥ ಸುವರ್ಣ, ನಿರ್ಮಲ್ ಕುಮಾರ್ ಜೈನ್, ಉದ್ಯಮಿ ಕೆ.ಪಿ. ಅಹಮ್ಮದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)