varthabharthi

ಕರಾವಳಿ

ಪೊಲೀಸ್ ಆಯುಕ್ತ ವಿಪುಲ್‌ಕುಮಾರ್

'ಸಾಮಾಜಿಕ ಜಾಲತಾಣದಲ್ಲಿ ಕಾನೂನುಬಾಹಿರ ಸಂದೇಶ ರವಾನೆ ವಿರುದ್ಧ ಕ್ರಮ'

ವಾರ್ತಾ ಭಾರತಿ : 13 Jun, 2018

ಮಂಗಳೂರು, ಜೂ.13: ಸಾಮಾಜಿಕ ಜಾಲತಾಣಗಳಲ್ಲಿ ಭಾವನೆಗೆ ಧಕ್ಕೆ ತರುವ ಯಾವುದೇ ಸಂದೇಶಗಳನ್ನು ಬೇರೆಯವರಿಗೆ ಕಳುಹಿಸಿದರೆ ಕಾನೂನು ವಿರೋಧಿ ಕ್ರಮವಾಗುತ್ತದೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ವಿಪುಲ್‌ಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಶಾಂತಿಸಭೆಯಲ್ಲಿ ಸಾರ್ವಜನಿಕರೋರ್ವರು, ‘ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಗಳ ವಿರುದ್ಧ ಅವಹೇಳನಕಾರಿ ಹೇಳಿಕೆ, ಫೋಟೋ-ಮಾಹಿತಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂಬ ಪ್ರಶ್ನೆಗೆ ಆಯುಕ್ತರು ಪ್ರತಿಕ್ರಿಯಿಸಿದರು.

ಇತ್ತೀಚೆಗೆ ನಡೆದ ಇಂತಹ ಎರಡು ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕೆ.ಎಂ. ಮುಹಮ್ಮದ್ ಇಬ್ರಾಹೀಂ ಮಾತನಾಡಿ, ದ.ಕ. ಜಿಲ್ಲೆ ಸೌಹಾರ್ದಯುತ ಪ್ರದೇಶವಾಗಿದೆ. ಆದರೆ ಕಣ್ಣೂರು, ಅಡ್ಯಾರ್‌ಪದವುಗಳಲ್ಲಿ ಇತ್ತೀಚೆಗೆ ಮಸೀದಿಗೆ ಕಲ್ಲು ತೂರಿ, ಗಲಾಟೆ ನಡೆದಿತ್ತು. ಇಂತಹ ಘಟನೆ ಮುಂದಿನ ದಿನಗಳಲ್ಲಿ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ವಿಪುಲ್‌ಕುಮಾರ್, ಖಂಡಿತವಾಗಿ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ಪೊಲೀಸ್ ಸಿಬ್ಬಂದಿಯಿಂದ ಶೇ.100ರಷ್ಟು ಕೆಲಸ ಮಾಡುವ ಭರವಸೆಯನ್ನು ಇಲಾಖೆ ನೀಡುತ್ತದೆ. ಮೇಲಧಿಕಾರಿಯಾಗಿ ತನಗೆ ಭರವಸೆಯಿದೆ. ಒಳ್ಳೆಯ ಕೆಲಸ ಮಾಡುವಾಗ ತಪ್ಪಾಗುವುದು ಶೇ.1ರಷ್ಟು ಇರಬಹುದು. ಆದರೆ ಬೇಕೆಂದೇ ಪೊಲೀಸರಿಂದ ತಪ್ಪು ಕ್ರಮ ಕಂಡುಬಂದಲ್ಲಿ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ತಾಕೀತು ಮಾಡಿದರು.

‘ಹಬ್ಬ ಹರಿದಿನಗಳ ಮೊದಲು ಶಾಂತಿ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಶಾಂತಿಸಭೆಗಳು ಹಬ್ಬಗಳಿಗಾಗಿ ಸೀಮಿತವಾಗಬಾರದು. ವರ್ಷಕ್ಕೆ ಇಂತಹ ಹಲವು ಶಾಂತಿ ಸಭೆಗಳನ್ನು ಹಮ್ಮಿಕೊಳ್ಳಬೇಕು’ ಎಂದು ಪೊಲೀಸ್ ಆಯುಕ್ತರಿಗೆ ಸಾರ್ವಜನಿಕರು ಮನವಿ ಮಾಡಿದರು.

ಶಾಂತಿಸಭೆಯಲ್ಲಿ ಸೌಹಾರ್ದ, ಸಾರಿಗೆ, ಸಂಚಾರ, ಪಾರ್ಕಿಂಗ್ ಮತ್ತಿತರ ವಿಷಯಗಳ ಕುರಿತ ಚರ್ಚೆ ನಡೆಸಲಾಯಿತು. ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ರಮಝಾನ್ ಆಚರಣೆ ದಿನಾಂಕವನ್ನು ಚಂದ್ರದರ್ಶನದ ಬಳಿಕವೇ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಶಾಂತಿಸಭೆಯಲ್ಲಿ ಡಿಸಿಪಿ ಹನುಮಂತರಾಯ, ಎಸಿಪಿಗಳಾದ ಜಗದೀಶ್, ರಾಜೇಂದ್ರ, ಮಂಜುನಾಥ್ ಉಪಸ್ಥಿತರಿದ್ದರು. ಪೌಲ್ ಮೆಲ್ವಿನ್ ಡಿಸೋಜ, ಫಾ.ವಿಜಯ ಮಚ್ಛಾದೋ, ಕಾರ್ಪೋರೇಟರ್ ಪ್ರೇಮಾನಂದ ಮತ್ತಿತರರು ಶಾಂತಿಸಭೆಯಲ್ಲಿ ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)