varthabharthi

ಕ್ರೀಡೆ

ಇಂದಿನಿಂದ ರಶ್ಯದಲ್ಲಿ ಸಾಕರ್ ಹಬ್ಬದ ರಸದೂಟ

ವಾರ್ತಾ ಭಾರತಿ : 14 Jun, 2018

ಮಾಸ್ಕೊ, ಜೂ.14: ಇಪ್ಪತ್ತೊಂದನೇ ಆವೃತ್ತಿಯ ಫುಟ್ಬಾಲ್ ವಿಶ್ವಕಪ್‌ಗೆ ಕ್ಷಣಗಣನೆ ಆರಂಭಗೊಂಡಿದ್ದು, ಗುರುವಾರದಿಂದ ರಶ್ಯದಲ್ಲಿ ಒಂದು ತಿಂಗಳ ಕಾಲ ಸಾಕರ್ ಲೋಕದ ದೊಡ್ಡ ಹಬ್ಬ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ.

  ರಶ್ಯದ 11 ನಗರಗಳ 12 ಕ್ರೀಡಾಂಗಣಗಳಲ್ಲಿ ಫಿಫಾ ವಿಶ್ವಕಪ್‌ನ ಪಂದ್ಯಗಳು ನಡೆಯಲಿದ್ದು, ಜೂ.14ರಿಂದ ಜುಲೈ 15ರ ತನಕ ನಡೆಯಲಿರುವ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಹಣಾಹಣಿ ನಡೆಸಲಿವೆೆ. ಒಟ್ಟು 64 ಪಂದ್ಯಗಳು ನಿಗದಿಯಾಗಿವೆ.

1930ರಲ್ಲಿ ಚೊಚ್ಚಲ ವಿಶ್ವಕಪ್ ಉರುಗ್ವೆನಲ್ಲಿ ನಡೆದಿತ್ತು. ಆತಿಥೇಯ ಉರುಗ್ವೆ ತಂಡ ಫೈನಲ್‌ನಲ್ಲಿ ಅರ್ಜೆಂಟೀನವನ್ನು 4-2 ಅಂತರದಿಂದ ಬಗ್ಗು ಬಡಿದು ಚೊಚ್ಚಲ ಕಿರೀಟ ಧರಿಸಿತ್ತು. 2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ 20ನೇ ಆವೃತ್ತಿಯ ವಿಶ್ವಕಪ್‌ನಲ್ಲಿ ಅರ್ಜೆಂಟೀನ ವಿರುದ್ಧ 1-0 ಜಯ ಗಳಿಸಿ ಪ್ರಶಸ್ತಿ ಎತ್ತಿದ್ದ ಜರ್ಮನಿಯು ಹಾಲಿ ಚಾಂಪಿಯನ್ ತಂಡವಾಗಿದೆ. ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲ್ಲಿ ಒಂದಾಗಿದೆ.

ಗರಿಷ್ಠ ವಿಶ್ವಕಪ್ ಜಯಿಸಿದ ತಂಡ : ಬ್ರೆಝಿಲ್ ಈ ವರೆಗೆ 5 ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಜರ್ಮನಿ ಮತ್ತು ಇಟಲಿ ತಲಾ 4 ಬಾರಿ, ಅರ್ಜೆಂಟೀನ ಮತ್ತು ಉರುಗ್ವೆ ತಲಾ 2 ಬಾರಿ, ಸ್ಪೇನ್, ಫ್ರಾನ್ಸ್ ಮತ್ತು ಇಂಗ್ಲೆಂಡ್ ಒಂದು ಬಾರಿ ಪ್ರಶಸ್ತಿ ಬಾಚಿಕೊಂಡಿದೆ.

 ಯುರೋಪ್‌ನ ತಂಡಗಳು 11 ಬಾರಿ ಮತ್ತು ದಕ್ಷಿಣ ಅಮೆರಿಕದ ತಂಡಗಳು 9 ಬಾರಿ ಪ್ರಶಸ್ತಿ ಜಯಿಸಿದೆ. ಯುರೋಪ್ ಮತ್ತು ದ.ಅಮೆರಿಕವನ್ನು ಹೊರತುಪಡಿಸಿ ಹೊರಗಿನ ಯಾವುದೇ ತಂಡಕ್ಕೂ ಫಿಫಾ ವಿಶ್ವಕಪ್ ಎತ್ತಲು ಸಾಧ್ಯವಾಗಿಲ್ಲ ಎನ್ನುವುದು ಇಲ್ಲಿ ವಿಶೇಷ.

►ಕ್ಲೋಸ್ ಗರಿಷ್ಠ ಗೋಲು: ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲುಗಳನ್ನು ಗಳಿಸಿರುವ ದಾಖಲೆ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಹೆಸರಲ್ಲಿದೆ. ಅವರು 4 ವಿಶ್ವಕಪ್‌ಗಳಲ್ಲಿ 16 ಗೋಲುಗಳನ್ನು ಜಮೆ ಮಾಡಿದ್ದಾರೆ. ಅವರು 2016ರಲ್ಲಿ ಫುಟ್ಬಾಲ್‌ನಿಂದ ನಿವೃತ್ತರಾಗಿದ್ದರು. ಅವರ ಬಳಿಕದ ಸ್ಥಾನವನ್ನು ಬ್ರೆಝಿಲ್‌ನ ರೊನಾಲ್ಡೊ (15) ಹೊಂದಿದ್ದಾರೆ. ಗೆರ್ಡ್ ಮುಲ್ಲರ್ 14 ಗೋಲು ಜಮೆ ಮಾಡಿದ್ದಾರೆ. ಫ್ರಾನ್ಸ್‌ನ ಫಾಂಟೈನೆ ಒಂದೇ ಆವೃತ್ತಿಯಲ್ಲಿ ಗರಿಷ್ಠ ಗೋಲು ದಾಖಲಿಸಿದ ಸಾಧನೆ ಮಾಡಿದ್ದಾರೆ. ಅವರು 1958ರಲ್ಲಿ 6 ಪಂದ್ಯಗಳಲ್ಲಿ 13 ಗೋಲು ಜಮೆ ಮಾಡಿದ್ದರು.

►ಥಾಮಸ್ ಮುಲ್ಲರ್ ಗರಿಷ್ಠ ಗೋಲು ದಾಖಲೆ: ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಆಟಗಾರರ ಪೈಕಿ ಜರ್ಮನಿಯ ಥಾಮಸ್ ಮುಲ್ಲರ್ (13) ಗರಿಷ್ಠ ಗೋಲು ದಾಖಲಿಸಿದ ಆಟಗಾರ. ಅವರಿಗೆ ಕ್ಲೋಸ್ ದಾಖಲೆಯನ್ನು ಸರಿಗಟ್ಟಲು 3 ಗೋಲು ಗಳಿಸಬೇಕಾಗಿದೆ.ಕೊಲಂಬಿಯಾದ ಫಾರ್ವರ್ಡ್ ಆಟಗಾರ ಜೇಮ್ಸ್ ರೋಡ್ರಿಗಸ್ (6)ಕಳೆದ ಆವೃತ್ತಿಯಲ್ಲಿ ಗೋಲ್ಡನ್ ಬೂಟ್ ಜಯಿಸಿದ್ದರು.

ಮೊದಲ ಪಂದ್ಯದಲ್ಲಿ ರಶ್ಯ-ಸೌದಿ ಅರೇಬಿಯ ಹಣಾಹಣಿ

ಆತಿಥೇಯ ರಶ್ಯ ತಂಡ ಗುರುವಾರ ಸೌದಿ ಅರೇಬಿಯಾ ತಂಡವನ್ನು ಮುಖಾಮುಖಿ ಯಾಗುವುದರೊಂದಿಗೆ 2018ರ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಚಾಲನೆ ಸಿಗಲಿದೆ.

‘ಎ’ ಗುಂಪಿನ ಎರಡು ತಂಡಗಳ ನಡುವೆ ನಡೆ ಯಲಿರುವ ಈ ಪಂದ್ಯ ಜನಾಕರ್ಷ ಣೆಯಾಗುವುದು ನಿಶ್ಚಿತ. ರಶ್ಯ ಹಾಗೂ ಸೌದಿ ಅರೇಬಿಯ ಕೂಟದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ಮೂರಂಕವನ್ನು ಪಡೆಯುವ ವಿಶ್ವಾಸದಲ್ಲಿವೆ.

 ರಶ್ಯ ಸಂಪೂರ್ಣ ಬಲದೊಂದಿಗೆ ತವರು ಅಂಗಣದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ವಿಶ್ವದ 70ನೇ ರ್ಯಾಂಕಿನ ರಶ್ಯ ತಂಡ ಕಳೆದ 8 ತಿಂಗಳುಗಳಿಂದ ಗೆಲುವು ಸಾಧಿಸಿಲ್ಲ. 2017 ಹಾಗೂ 18ರಲ್ಲಿ ಒಟ್ಟು 15 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ರಶ್ಯ ಕೇವಲ ಮೂರರಲ್ಲಿ ಜಯ ಸಾಧಿಸಿದೆ. ಹೀಗಾಗಿ ವಿಶ್ವಕಪ್‌ಗೆ ರಶ್ಯದ ತಯಾರಿ ಚೆನ್ನಾಗಿಲ್ಲ. ರಶ್ಯ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 32 ತಂಡಗಳ ಪೈಕಿ ಅತ್ಯಂತ ಕೆಳ ರ್ಯಾಂಕಿನ ತಂಡವಾಗಿದೆ. 2008ರ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಬಳಿಕ ಯಾವುದೇ ಟೂರ್ನಿಯಲ್ಲಿ ಗ್ರೂಪ್ ಹಂತವನ್ನು ದಾಟಿಲ್ಲ. ಐದನೇ ಬಾರಿ ವಿಶ್ವಕಪ್ ಆಡುವ ಅವಕಾಶ ಪಡೆದಿರುವ ರಶ್ಯ ಕನಿಷ್ಠ ಕ್ವಾರ್ಟರ್ ಫೈನಲ್‌ಗೆ ತಲುಪುವ ಗುರಿ ಹಾಕಿಕೊಂಡಿದೆ.

ಟೂರ್ನಿಯ ಆತಿಥ್ಯ ತಂಡವೆಂಬ ಕಾರಣಕ್ಕೆ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ರಶ್ಯ 2017ರ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಕೊನೆಯ ಬಾರಿ ಜಯ ಸಾಧಿಸಿತ್ತು. ಆ ನಂತರ ಆಡಿರುವ 5 ಪಂದ್ಯಗಳನ್ನೂ ಸೋತಿದೆ.

ತಂಡ ಹಿರಿಯ ಗೋಲ್‌ಕೀಪರ್ ಇಗೊರ್ ಅಕಿನ್‌ಫೀವ್ ಕಳೆದ ಒಂದು ದಶಕದಿಂದ ರಶ್ಯ ತಂಡವನ್ನು ಪ್ರತಿನಿಧಿಸುತ್ತಿದ್ದು ಇತ್ತೀಚೆಗಿನ ದಿನಗಳಲ್ಲಿ ಗಂಭೀರ ಕಾಲು ಗಾಯದಿಂದ ಸಮಸ್ಯೆ ಎದುರಿಸಿದ್ದರು. 38ರ ಹರೆಯದ ಡಿಫೆೆಂಡರ್ ಸರ್ಗಿ ಇಗ್ನಶೆವಿಚ್ ತಂಡಕ್ಕೆ ವಾಪಸಾಗಿದ್ದಾರೆ. ಈ ಇಬ್ಬರು ಆಟಗಾರರ ಉಪಸ್ಥಿತಿಯಲ್ಲೂ ಈ ಬಾರಿ ರಶ್ಯ ದುರ್ಬಲ ತಂಡವನ್ನು ವಿಶ್ವಕಪ್‌ಗೆ ಕಣಕ್ಕಿಳಿಸುತ್ತಿದೆ. 2008ರಲ್ಲಿ ರಶ್ಯ ತಂಡದಲ್ಲಿ ಪ್ರತಿಭಾವಂತ ಹಾಗೂ ಯುವ ಆಟಗಾರರಿದ್ದರು. ಅವರಲ್ಲಿ ಹೆಚ್ಚಿನವರು ನಿವೃತ್ತಿಯಾಗಿದ್ದಾರೆ.

 ಮತ್ತೊಂದೆಡೆ ಸೌದಿ ಅರೇಬಿಯ ತಂಡ ಅಲ್ಪ ನಿರೀಕ್ಷೆಯೊಂದಿಗೆ ಟೂರ್ನಿಗೆ ಪ್ರವೇಶಿಸಿದೆ. ರಶ್ಯದಂತೆಯೇ ಸೌದಿ ತಂಡದಲ್ಲಿ ಹಿರಿಯ ಆಟಗಾರರಿಗೆ ಆದ್ಯತೆ ನೀಡಲಾಗಿದೆ. 34ರ ಹರೆಯದ ಒಸಾಮಾ ಹವಾಸವಿ ಡಿಫೆನ್ಸ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಕೆಲವು ಆಟಗಾರರು ರಶ್ಯಕ್ಕೆ ಸವಾಲಾಗಬಲ್ಲರು.

ಶುಕ್ರವಾರ ಎ ಗುಂಪಿನ ಇನ್ನೆರಡು ತಂಡಗಳಾದ ಉರುಗ್ವೆ ಹಾಗೂ ಈಜಿಪ್ಟ್ ನಡುವೆ ಪಂದ್ಯ ನಡೆಯಲಿದೆ.

ಉದ್ಘಾಟನಾ ಸಮಾರಂಭಕ್ಕೆ ಲುಝ್ನಿಕಿ ಸ್ಟೇಡಿಯಂ ಸಜ್ಜು

ಮಾಸ್ಕೋದ 80,000 ಪ್ರೇಕ್ಷಕರ ಸಾಮರ್ಥ್ಯದ ಲುಝ್ನಿಕಿ ಸ್ಟೇಡಿಯಂ ಉದ್ಘಾಟನಾ ಸಮಾರಂಭಕ್ಕೆ ಸಂಪೂರ್ಣ ಸಜ್ಜಾಗಿದೆ. ವಿಶ್ವಕಪ್ ಆಯೋಜನೆಗೆ ರಶ್ಯ 13 ಬಿಲಿಯನ್ ಡಾಲರ್‌ಗೆ ಅಧಿಕ ಮೊತ್ತ ಖರ್ಚು ಮಾಡಿದೆ. ಉದ್ಘಾಟನಾ ಸಮಾರಂಭದಲ್ಲಿ ಬ್ರೆಝಿಲ್ ಲೆಜೆಂಡ್ ಸ್ಟ್ರೈಕರ್ ರೊನಾಲ್ಡೊ ಹಾಗೂ ಬ್ರಿಟನ್ ಪಾಪ್ ಸ್ಟಾರ್ ರಾಬ್ಬಿ ವಿಲಿಯಮ್ಸನ್ ಭಾಗವಹಿಸಲಿದ್ದಾರೆ. ಸುಮಾರು 500 ನೃತ್ಯಗಾರರು, ಜಿಮ್ನಾಸ್ಟ್‌ಗಳು ತಮ್ಮ ಪ್ರದರ್ಶನ ನೀಡಲಿದ್ದಾರೆ. ಸುಡುಮದ್ದು ಸಿಡಿಸುವುದರೊಂದಿಗೆ ಸಮಾರಂಭ ಕೊನೆಗೊಳ್ಳಲಿದೆ. ಹಾಲಿವುಡ್ ನಟ ವಿಲ್ ಸ್ಮಿತ್ ಉದ್ಘಾಟನಾ ಸಮಾರಂಭದಲ್ಲಿ ರಶ್ಯದ ಸೊಪ್ರನೊ ಐಡಾ ಅವರೊಂದಿಗೆ ಪ್ರದರ್ಶನ ನೀಡಿ ಎಲ್ಲರನ್ನು ಸೆಳೆಯಲು ಸಜ್ಜಾಗಿದ್ದಾರೆ.

ಉದ್ಘಾಟನಾ ಸಮಾರಂಭ ಭಾರತೀಯ ಕಾಲಮಾನ ಸಂಜೆ 6:30ರಿಂದ ಸೋನಿ ಟೆನ್-1, ಸೋನಿ ಟೆನ್ 3 ಹಾಗೂ ಸೋನಿ ಇಎಸ್‌ಪಿಎನ್‌ನಲ್ಲಿ ನೇರ ಪ್ರಸಾರವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)