varthabharthi

ನಿಮ್ಮ ಅಂಕಣ

ಮೆಟ್ರೋ ಜನಸ್ನೇಹಿ ಸಮಯ ಅನುಸರಿಸಲಿ

ವಾರ್ತಾ ಭಾರತಿ : 14 Jun, 2018
ಡ್ಯಾನಿಯಲ್ ಜೆ. ಹುಣಸನಹಳ್ಳಿ, ತರೀಕೆರೆ

ಮಾನ್ಯರೇ,

ನಮ್ಮ ಮೆಟ್ರೋ ಸೇವೆಯು ಬೆಂಗಳೂರಿನಲ್ಲಿ ಸುಲಭದ ಸಂಚಾರಿ ವ್ಯವಸ್ಥೆಯಾಗಿದ್ದು, ದಿನ ನಿತ್ಯ ಸಾವಿರಾರು ಜನ ಮೆಟ್ರೋ ಸೇವೆಯನ್ನು ಅವಲಂಬಿಸಿದ್ದಾರೆ. ಸಾರ್ವಜನಿಕರಿಗೆ, ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸುಲಭವಾಗಿ ತಮ್ಮ ಸ್ಥಳಗಳಿಗೆ ಸಂಚರಿಸಬಹುದಾದ ವ್ಯವಸ್ಥೆಯಾಗಿದೆ. ಆದರೆ ಮೆಟ್ರೋ ಸೇವೆಯನ್ನು ಕೇವಲ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಇನ್ನುಳಿದ ಹಲವಾರು ಪ್ರದೇಶಗಳಿಗೂ ಇದರ ಅವಶ್ಯಕತೆ ಇದ್ದು ಸೌಲಭ್ಯವನ್ನು ಕಲ್ಪಿಸುವ ಕಾರ್ಯವನ್ನು ಪ್ರಾಧಿಕಾರ ನಿರ್ವಹಿಸಬೇಕಾಗಿದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ಕಾಮಗಾರಿಗಳು ನಡೆಯುತ್ತಿದ್ದು, ಆಮೆಗತಿಯಲ್ಲಿ ಚಟುವಟಿಕೆಗಳು ಜರುಗುತ್ತಿವೆ. ಕಾಮಗಾರಿ ಅತಿ ಶೀಘ್ರವಾಗಿ ಕಾರ್ಯ ಪೂರ್ಣಗೊಂಡರೆ ಆ ಭಾಗದ ಸಾರ್ವಜನಿಕರಿಗೂ ಮೆಟ್ರೋ ಸೇವೆ ದೊರಕುತ್ತದೆ.
ಅಲ್ಲದೆ ಪ್ರತಿ ನಿತ್ಯ ಮುಂಜಾನೆ ಆರಂಭಗೊಳ್ಳುವ ಮೆಟ್ರೋ ಸೇವೆಯು ರಾತ್ರಿಯವರೆಗೂ ತನ್ನ ಕಾರ್ಯವನ್ನು ಮುಂದುವರಿಸುತ್ತಿದೆ. ಆದರೆ ರವಿವಾರ ಮಾತ್ರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತಿದ್ದು, ಇದರಿಂದಾಗಿ ಅಂದು ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಬೆಳಗಿನ ಜಾವ ಮೆಜೆಸ್ಟಿಕ್ ಮತ್ತು ಇನ್ನಿತರ ಪ್ರದೇಶಗಳಿಗೆ ಸಂಚರಿಸುವ ಜನತೆಗೆ ಅಡಚಣೆ ಉಂಟಾಗಿ ಪರ್ಯಾಯ ಮಾರ್ಗವಾಗಿ ಬಸ್‌ಗಳನ್ನು ಅವಲಂಬಿಸಬೇಕಾಗುತ್ತದೆ.
ಆದ್ದರಿಂದ ಬೇರೆ ದಿನದ ವೇಳಾ ಪಟ್ಟಿಯಂತೆ ರವಿವಾರವೂ ಮೆಟ್ರೋ ಬೇಗ ಆರಂಭಗೊಂಡರೆ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ. ಆ ದಿನ ಹೆಚ್ಚು ಪ್ರಯಾಣಿಕರು ಸಂಚರಿಸುವುದರಿಂದ ಮೆಟ್ರೋ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಮೆಟ್ರೋ ನಿಗಮ ಈ ಬಗ್ಗೆ ಗಮನಹರಿಸಿ ಸಾರ್ವಜನಿಕರ ಬೆಳಗಿನ ಸಂಚಾರದ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)