varthabharthi

ಅನುಗಾಲ

ಎಲ್ಲಿ ಮನಕಳುಕಿರದೊ

ವಾರ್ತಾ ಭಾರತಿ : 14 Jun, 2018
ಬಾಲಸುಬ್ರಹ್ಹಣ್ಯ ಕಂಜರ್ಪಣೆ

ಒಂದು ಶತಮಾನದ ಅನಂತರ ಈ ಕವಿತೆಗಳನ್ನು ಗಮನಿಸಿದರೆ ಅವು ಅಂದು ಎಷ್ಟು ಸತ್ಯವನ್ನು ಅನಾವರಣಗೊಳಿಸಿವೆಯೋ ಅದಕ್ಕಿಂತಲೂ ಹೆಚ್ಚನ್ನು ಇಂದು ಹೇಳುತ್ತಿವೆ. ಪ್ರಾಯಃ ಕಾಲ ಸರಿದಂತೆಲ್ಲ ಅವು ಇನ್ನೂ ಹೆಚ್ಚು ಅರ್ಥವನ್ನು ಬಿಚ್ಚಿಕೊಳ್ಳುವಂತಿವೆ; ಬಿಟ್ಟುಕೊಡು ವಂತಿವೆ. ಕನ್ನಡ ನವೋದಯದ ಶ್ರೇಷ್ಠರಾಗಿರುವ ಆದರೆ ಕನ್ನಡ ಸಾಹಿತ್ಯಶ್ರೇಷ್ಠರ ಸಾಲಿನಲ್ಲಿ ಅಷ್ಟೊಂದು ಉಲ್ಲೇಖಿತರಾಗದ ಕಾಮತರ ಈ ಎರಡು ಕವಿತೆಗಳನ್ನು ಇಂದೂ ಮುಂದೂ ಅನಿವಾರ್ಯವೆಂಬಂತೆ ಚರ್ಚಿಸಬಹುದು.1917ರಷ್ಟು ಹಿಂದೆ ದಿವಂಗತ ಎಂ.ಎನ್.ಕಾಮತ್ (1884- 1940) ಅವರು ಬರೆದ ಎರಡು ಕವಿತೆಗಳ ಶೀರ್ಷಿಕೆಯೂ ಪ್ರಾರ್ಥನೆ ಎಂದೇ ಆಗಿತ್ತು. ಒಂದು ‘ತ್ರಿವೇಣಿ’ ಪತ್ರಿಕೆಯಲ್ಲಿ ಪ್ರಕಟವಾದರೆ ಇನ್ನೊಂದು ‘ಬೋಧಿನಿ’ ಎಂಬ ಪತ್ರಿಕೆಯಲ್ಲಿ ಪ್ರಕಟವಾದಂತಿದೆ. (ಈ ಪತ್ರಿಕೆಗಳ ಕುರಿತ ಅನ್ವೇಷಣೆ ಇಲ್ಲಿ ಅಪ್ರಸ್ತುತ.) ಅವರ ಸಮಗ್ರ ಕೃತಿಗಳ ಸಂಪುಟ (ಪ್ರಕಟನೆ: ಕರ್ನಾಟಕ ಸಂಘ, ಪುತ್ತೂರು, 1995)ದಲ್ಲಿ ಇವನ್ನು ‘ಪ್ರಾರ್ಥನೆ (1)’ ಮತ್ತು ‘ಪ್ರಾರ್ಥನೆ (2)’ ಎಂದು ಅಚ್ಚು ಹಾಕಲಾಗಿದೆ. ಒಂದು ಶತಮಾನದ ಅನಂತರ ಈ ಕವಿತೆಗಳನ್ನು ಗಮನಿಸಿದರೆ ಅವು ಅಂದು ಎಷ್ಟು ಸತ್ಯವನ್ನು ಅನಾವರಣಗೊಳಿಸಿವೆಯೋ ಅದಕ್ಕಿಂತಲೂ ಹೆಚ್ಚನ್ನು ಇಂದು ಹೇಳುತ್ತಿವೆ. ಪ್ರಾಯಃ ಕಾಲ ಸರಿದಂತೆಲ್ಲ ಅವು ಇನ್ನೂ ಹೆಚ್ಚು ಅರ್ಥವನ್ನು ಬಿಚ್ಚಿಕೊಳ್ಳುವಂತಿವೆ; ಬಿಟ್ಟುಕೊಡುವಂತಿವೆ. ಕನ್ನಡ ನವೋದಯದ ಶ್ರೇಷ್ಠರಾಗಿರುವ ಆದರೆ ಕನ್ನಡ ಸಾಹಿತ್ಯಶ್ರೇಷ್ಠರ ಸಾಲಿನಲ್ಲಿ ಅಷ್ಟೊಂದು ಉಲ್ಲೇಖಿತರಾಗದ ಕಾಮತರ ಈ ಎರಡು ಕವಿತೆಗಳನ್ನು ಇಂದೂ ಮುಂದೂ ಅನಿವಾರ್ಯವೆಂಬಂತೆ ಚರ್ಚಿಸಬಹುದು.
*ಮೊದಲ ಪ್ರಾರ್ಥನೆ ಹೀಗಿದೆ: ಸರಿದಾರಿ ತಪ್ಪದಂತೆ-ಕರುಣಾ ಕಿರಣ ಬೆಳಗು ಮುಂತೆ ॥

ಅಪರಾಧವನ್ನು ಕ್ಷಮಿಸೀ-ಕೃಪೆದೋರು ಕತ್ತಲಲ್ಲೀ ಮರುಗೆ ಘೋರ ಮಳೆಗೆ-ಗಿರಿಕಾಂತಾರಗಳಿಗೆ ಹೊಳೆಗೆ ॥

ಹನ್ನೊಂದು ಸಾಲುಗಳ ಈ ಕವಿತೆ ಭಕ್ತಿ, ನಿರಾಶೆ, ಶರಣು ಹೋಗುವ ಸರ್ವಸಮರ್ಪಣ ಭಾವವನ್ನು ತೋರುತ್ತದೆ. ದಾಸರ ಪದಗಳನ್ನು ಕೆಲವಂಶದಲ್ಲಿ ಹೋಲುತ್ತದೆ. ಮನುಷ್ಯ ತನ್ನ ಬಳಲಿಕೆಯನ್ನು, ದುರಿತಗಳನ್ನು ಭಗವಂತನೊಂದಿಗೆ ಸಂಭಾಷಿಸುತ್ತ ಹೇಳಿಕೊಳ್ಳುವಂತಿದೆ. ಇದು ಭಜನೆಯಲ್ಲ; ಧ್ಯಾನವೂ ಅಲ್ಲ. ಭಜನೆಯಲ್ಲಿ ಭಕ್ತ ಭಗವಂತನೊಂದಿಗೆ ಮಾತನಾಡಿದರೆ ಧ್ಯಾನದಲ್ಲಿ ಭಗವಂತ ಭಕ್ತನೊಂದಿಗೆ ಮಾತನಾಡುತ್ತಾನೆ. ಇವೆರಡರ ನಡುವಣ ಒಂದು ಸ್ಥಿತಿ. ಕವಿತೆಯು ಸರಳವಾಗಿರುವುದರಿಂದ ಅದನ್ನು ಭಾಷಾ ವಿವರಣೆಗೊಳಪಡಿಸುವ ಅಗತ್ಯ ಕಾಣದು. ತಾನು ಸರಿಯಾಗಿರಬೇಕೆಂಬ ಅರಿವಿರುವವನೇ ಇಲ್ಲಿನ ಕವಿ: ನಿರೂಪಕ. ಆತನಿಗೆ ಬದುಕು ಸಾಕಷ್ಟು ಆಯಾಸವನ್ನುಂಟುಮಾಡಿದೆ. ಇದನ್ನು ಕವಿ ‘ಸಂಸಾರ ಯಾತ್ರೆ’ ಎನ್ನುತ್ತಾರೆ. ಒಂದು ಗೊತ್ತಾದ ಜಾಗದಿಂದ ಒಂದು ಗುರಿಗೆ ಹೋಗುವ ಯಾತ್ರೆ ಇದಲ್ಲ; ಗೂಟಕ್ಕೆ ಕಟ್ಟಿದ ಪ್ರಾಣಿ ಸುತ್ತಿದಂತೆ ತನ್ನ ಕಕ್ಷೆಗೆ ತಾನೇ ಸುತ್ತುವ ಪಾಡು ನಮ್ಮದು ಎನ್ನುತ್ತಾರೆ. ಆದ್ದರಿಂದ ಇದು ನಡೆದ ಬಳಲಿಕೆಯಲ್ಲ; ‘ಸುತ್ತಿ ಬಳಲಿದ’ ಮರುಳಾಟಿಕೆ. (ತನ್ನ ಶಾಪಗ್ರಸ್ತ ಸೆರೆಗೆ ತಾನೆ ಪಹರೆ ಎಂಬ ಧ್ವನಿ.)

ಆದ್ದರಿಂದ ಬದುಕು ಘನಘೋರ ಕತ್ತಲು. ಮನುಷ್ಯನು ಸುಖವಾಗಿರುವಾಗ ಎಗ್ಗಿಲ್ಲದೇ ಢಾಳಾಗಿ ಮುಂದುವರಿಯುವ ದಾರ್ಷ್ಟ ಮತ್ತು ಉಡಾಫೆಯನ್ನು ತೋರುತ್ತಾನೆ. ಇದು ದೇಶ-ಕಾಲಾತೀತವಾದ ನಡತೆ. ಇದನ್ನು ಕವಿ ‘ಜಗವೆಲ್ಲ ನನ್ನದೆಂದೆ’ ಎನ್ನುತ್ತಾರೆ. ಮನುಷ್ಯನಿಗೆ ಹಣ ಮತ್ತು ಅಧಿಕಾರ ಸಿಕ್ಕಿದೊಡನೆಯೇ ಗರ್ವಿತನಾಗುತ್ತಾನೆ. ಎಲ್ಲವೂ ತನ್ನ ಅನುಕೂಲಕ್ಕಾಗಿಯೇ ಇರುವುದೆಂಬ ಭಾವವನ್ನು ತೋರುತ್ತ ಅದಕ್ಕನುಗುಣವಾದ ತರ್ಕಗಳನ್ನು ಸಮಾಜದ ಮುಂದಿಡುತ್ತಾನೆ. ನಮ್ಮ ಪುರಾಣಗಳು, ಚರಿತ್ರೆಗಳು ಈ ಗರ್ವವನ್ನೇ ಹೇಳಿವೆ. ಆ ಕ್ಷಣಕ್ಕೆ ಭಗವಂತನ ಸ್ಮರಣೆಯಿರುವುದಿಲ್ಲ; ಅಥವಾ ಇದ್ದರೂ ಅದನ್ನು ಮರೆಯುತ್ತಾನೆ; ಅಥವಾ ಮರೆತಂತಿರುತ್ತಾನೆ. ಇದು ಅಪರಾಧವೆಂದು ಅರಿವಾಗುವುದು ಅನಂತರದ ಬಾಳಕತ್ತಲೆಯಲ್ಲಿ. ಈ ಹೊತ್ತಿಗೆ ‘ಅಪರಾಧವನ್ನು ಕ್ಷಮಿಸೀ-ಕೃಪೆದೋರು’ ಎಂಬ ಆರ್ತತೆ ಮೂಡುತ್ತದೆ. ಕವಿ ‘ಮರುಗೆ ಘೋರ ಮಳೆಗೆ-ಗಿರಿಕಾಂತಾರಗಳಿಗೆ ಹೊಳೆಗೆ’ ಎನ್ನುತ್ತಾರೆ. ‘ಮರುಗೆ’ ಎಂಬ ಪದ ಎರಡು ಅರ್ಥಗಳನ್ನು ಸೂಚಿಸುತ್ತದೆ. ‘ಮರುಗಲು’ ಒಂದರ್ಥವಾದರೆ ಮರುಗೆನು ಇನ್ನೊಂದು ಅರ್ಥ. ತನ್ನ ಕಷ್ಟ ಕಾರ್ಪಣ್ಯಗಳಿಗೆ ತಾನೇ ಮರುಗುವ ಧಾಟಿ ಧೋರಣೆ ಒಂದಾದರೆ ಇವೆಲ್ಲ ಬಂದರೂ ತಾನು ‘ಮರುಗೆನು’ ಏಕೆಂದರೆ ಇವು ತನ್ನ ಹಣೆಬರಹವೆಂಬ ವಿಭಿನ್ನ ದೃಷ್ಟಿಕೋನ. ಇದು ಹತಾಶ-ನಿರಾಶಾ ಭಾವವೇ ಆಗಬೇಕಿಲ್ಲ; ವಾಸ್ತವಪ್ರಜ್ಞೆಯೂ ಇರಬಹುದು.

ಇವನ್ನೆಲ್ಲ ದಾಟಿ ಮುಂದೆ ನೋಡಲು, ಅಥವಾ ಮುಂದೆ ನೋಡಿದರೆ ಅಲ್ಲಿ ಬೆಳಕಿದೆ; ರವಿ ಮೂಡುತ್ತಾನೆ. ಆ ಬೆಳಕಿನ ಮೋರೆ ಭಕ್ತನ ಆತ್ಮವನ್ನು ಸರಿದಾರಿಗೊಯ್ಯುವ ಧ್ರುವತಾರೆ. ‘ಮೋರೆ’ ಎಂಬ ಪದ ಸಾಹಿತ್ಯದಲ್ಲಿ ಅಪರೂಪಕ್ಕೆ ಬಳಸುವ ಪದ. ಸಾಮಾನ್ಯವಾಗಿ ‘ಮುಖ’ ಎಂಬ ಪದವನ್ನೇ ಬಳಸುತ್ತೇವೆ. ದಕ್ಷಿಣ ಕನ್ನಡದ (1917ರಲ್ಲಿ ಜಿಲ್ಲೆ, ರಾಜ್ಯ, ದೇಶವಿನ್ನೂ ಆಗಿರದ ಕಾರಣ ಕರಾವಳಿಯ ಭಾಗವೆನ್ನಬಹುದು) ಈ ಪ್ರಾದೇಶಿಕ ಬಳಕೆ ವಿಶಿಷ್ಟವಾದದ್ದು. ಇಲ್ಲಿ ಕೈಹಿಡಿದು ನಡೆಸುವವರಿಲ್ಲ; ಬದಲಾಗಿ ಆತ್ಮಕ್ಕೆ ದಿಕ್ಸೂಚಿಯಿದೆ. ಈ ವ್ಯಾಪ್ತಿ ಕೈಹಿಡಿದು ನಡೆಸುವುದಕ್ಕಿಂತ ಹೆಚ್ಚಿನದ್ದು. ಈ ಹಂತಕ್ಕೆ ಬಂದಾಗ ಭಕ್ತ ತನಗೆ ಮಹತ್ವಾಕಾಂಕ್ಷೆಗಳಿಲ್ಲವೆಂದೂ ಬಹಳ ದೂರ ನಡೆವ, ನೋಡುವ ಆಸೆಗಳಿಲ್ಲವೆಂದೂ ಒಂದು ಹೆಜ್ಜೆಯನ್ನು ತೋರಬೇಕೆಂದೂ ಹಾಗೆ ತೋರಿದರೆ ಇನ್ನೆಂದೂ ತನ್ನ ಭಾಗ್ಯಕ್ಕೆ ಭಗವಂತನನ್ನು ಹೊಣೆಯಾಗಿಸೆನೆಂಬ ಕೀಟಲೆಯಲ್ಲಿ ಶರಣಾಗುತ್ತಾನೆ. ಆ ಒಂದು ಹೆಜ್ಜೆ ಬಹಳ ದೊಡ್ಡದು. ಆ ಒಂದು ಹೆಜ್ಜೆಯಲ್ಲಿ ಮುಂದಣ ಜಗತ್ತು ತೋರುವುದು. ಸರಳವಾದ ಪದಪುಂಜಗಳ ಮೂಲಕ ಕವಿ ಬಹಳಷ್ಟನ್ನು ಹೇಳಿದ್ದಾರೆ. ಪ್ರಾರ್ಥನೆಯೆಂಬ ಶೀರ್ಷಿಕೆಯಿದ್ದರೂ ಇದು ಅಲೌಕಿಕದ ಪ್ರಾರ್ಥನೆಯಲ್ಲ; ಅನುಭಾವದ, ಆಧ್ಯಾತ್ಮಿಕ ಆಯಾಮಗಳುಳ್ಳ ಹೊಸಬದುಕಿಗೆ ಹಾರೈಸುವ ಸಾಂಸಾರಿಕ ಗೀತೆ. ಎಲ್ಲೂ ಕವಿತೆ ವಾಚ್ಯವಾಗುವುದಿಲ್ಲ; ಬದಲಾಗಿ ಸಾಂಕೇತಿಕವಾಗುತ್ತದೆ. ನಿಗೂಢ ಅರ್ಥಗಳ ಸೂಚನೆಯಾಗುತ್ತದೆ.
*
14 ಸಾಲುಗಳ ಸುನೀತ (sonnet) ಶೈಲಿಯ ಎರಡನೆಯ ಪ್ರಾರ್ಥನೆ ಹೀಗಿದೆ:
ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ;
ಎಲ್ಲಿ ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು,
ಧೂಳೊಡೆಯದಿಹುದೊ,- ತಾನಾ ನಾಡಿನಲ್ಲಿ;

ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ;

ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ, ತೋಳನೀಡಿಹುದೊ ತಾನಾ ನಾಡಿನಲ್ಲಿ;
ಎಲ್ಲಿ ಸುವಿಚಾರ ಜಲದೊಸರು ನಿರ್ಮಲ ಹರಿದು,
ಕಾಳುರೂಢಿಯ ಮರಳೊಳಿಂಗಿ ಕೆಡದಲ್ಲಿ;
ಎಲ್ಲಿ ನೀನೆಮ್ಮ ಚಿಂತನವನುದ್ಯಮದ ಸುವಿ-
ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ;

ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿರಲಿ.
ಈ ಪದ್ಯವು ಕನ್ನಡದಲ್ಲಿ ಬಹು ಜನಪ್ರಿಯ ಲಯಬದ್ಧ ಗೇಯ ಗೀತೆಗಳಲ್ಲೊಂದು. ಈ ಕವಿತೆಯು ರವೀಂದ್ರ ನಾಥ್ ಠಾಗೋರರ ‘ಗೀತಾಂಜಲಿ’ ಕವಿತಾಗುಚ್ಛದಲ್ಲಿರುವ ‘"Where the mind is without fear’ ಎಂದು ಆರಂಭವಾಗಿ ‘let my country awake’ ಎಂದು ಮುಗಿಯುವ ಜನಪ್ರಿಯ ಹಾಡಿನ ಅನುವಾದವೆಂದೇ ಪ್ರಚಲಿತವಿದೆ. (ಎಂ.ಎನ್. ಕಾಮತ್‌ರನ್ನು ಓದದ ಕೆಲವು ಬಿಎಂಶ್ರೀ ಅಭಿಮಾನಿಗಳು ಇದನ್ನು ಬಿಎಂಶ್ರೀಯವರು ಬರೆದರೆಂದು ಹೇಳುವುದನ್ನೂ ಕೇಳಿದ್ದೇನೆ!) ಇದು ಠಾಗೋರರ ಕವಿತೆಯ ಶಬ್ದಾನುವಾದವಲ್ಲ; ಆದರೆ ಭಾವಾನುವಾದವೆಂದು ಅನ್ನಿಸುವಂತೆ ಕೆಲವು ಸಾಲುಗಳ ಬಳಕೆ ಮತ್ತು ಒಟ್ಟು ಕವಿತೆಯ ಆಶಯದಲ್ಲಿ ರೂಪುತಳೆದಿದೆ. ಅದರಲ್ಲೂ ಮೊದಲ ಸಾಲಿನ ‘ಎಲ್ಲಿ ಮನಕಳುಕಿರದೊ’ ಮತ್ತು ಕೊನೆಯ ‘ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ’ ಮತ್ತು ‘ಪಾಲಿಸೈ ಪಿತ! ನಮ್ಮ ನಾಡೆಚ್ಚರಿರಲಿ.’ ಎನ್ನುವುದು ಠಾಗೋರರ ಕವಿತೆಯ ಅದ್ಭುತ ಕನ್ನಡೀಕರಣವಾಗಿದೆ. ಒಟ್ಟು ಕವಿತೆಯು ಸ್ವಂತ ಮತ್ತು ಸ್ವತಂತ್ರ ವೆಂಬಂತೆ ರಚನೆಯಾಗಿರುವುದು ಈ ಕವಿ(ತೆ)ಯ ಹೆಗ್ಗಳಿಕೆ. ಆದರೂ ಇದು ಠಾಗೋರರ ಗೀತೆಯ ಭಾವಾನುವಾದವೇ ಇರಬಹುದೆಂದು ಮತ್ತು ಕವಿ ಅದೇ ಮನಸ್ಥಿತಿಯಿಂದ ಇದನ್ನು ಬರೆದಿರಬಹುದೆಂದು ಅನ್ನಿಸುತ್ತದೆ. ಕವಿತೆಯು ಸಾಮಾಜಿಕವಾಗಿ, ಬೌದ್ಧಿಕವಾಗಿ ಪ್ರಸ್ತುತವಾಗಿದೆ. ಭಾರತವು ಬ್ರಿಟಿಷರ ಗುಲಾಮಗಿರಿಯಲ್ಲಿ, ವಸಾಹತುಶಾಹಿಯಲ್ಲಿ ನರಳುತ್ತಿದ್ದಾಗ, ಠಾಗೋರ್, ಗಾಂಧಿ ಮುಂತಾದ ಅನೇಕ ಹಿರಿಯ ಚಿಂತಕರು ಪಾರತಂತ್ರ್ಯದಿಂದ ಸ್ವತಂತ್ರಕ್ಕೆ ಏರುವುದನ್ನು ಕನಸುತ್ತ ಅದಕ್ಕೆ ಬೇಕಾದ ಶಾಂತಿಯುತ ಸಮರೋಪಾಯಗಳನ್ನು ಹುಡುಕುತ್ತಿದ್ದರು. ಆ ಕಾಲದಲ್ಲಿ ಎಲ್ಲ ಪ್ರಾರ್ಥನೆಗಳೂ ಈ ದಿಸೆಯಲ್ಲೇ ಇದ್ದವು.

ಪ್ರಭಾತಫೇರಿಯಂತಹ ಜನಸಾಮಾನ್ಯರ ಚಳವಳಿಗಳು, ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವಗಳು ಧಾರ್ಮಿಕ ಉದ್ದೇಶಕ್ಕಿಂತಲೂ ಉನ್ನತವಾದ ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಉದ್ದೇಶವನ್ನು ಹೊಂದಿದ್ದವು. ಹಾಗೆಯೇ ಕಾವ್ಯವೂ ಕೂಡಾ ಇಂತಹ ಮಹೋನ್ನತ ಗುರಿಯೆಡೆಗೆ ಸಾಗಿದ್ದವು. ಆಯಾಯ ಸಂದರ್ಭಕ್ಕೆ ಹೊಂದುವಂತಹ ಗೀತೆಗಳು ಜನರನ್ನು ಒಂದು ಕಾಲಕ್ಕೆ, ಸಂದರ್ಭಕ್ಕೆ ಹುರಿದುಂಬಿಸಬಹುದು; ಆದರೆ ಅವು ಸದಾ ಜನಮನದಲ್ಲಿ ಅನುರಣನಗೊಳ್ಳಬೇಕಾದರೆ ಅವುಗಳಲ್ಲಿ ಕಾಲಾತೀತವಾದ ಒಂದು ಗತಿ, ಒಂದು ಸ್ಥಿತಿಯಿರಬೇಕಾಗುತ್ತದೆ. ಗಾದೆ ಮಾತುಗಳು, ಸೂಕ್ತಿಗಳು, ಹೇಳಿಕೆಗಳು ಎಲ್ಲ ಸಂದರ್ಭಕ್ಕೆ ಒಪ್ಪುವವಾದರೂ ಅವುಗಳ ಪರಿಣಾಮ ಮತ್ತು ಉದ್ದೇಶವೇ ಬೇರೆ. ಆದರೆ ಕಾವ್ಯದ ಪ್ರಭಾವ, ಪರಿಣಾಮ, ಉದ್ದೇಶ ಬೇರೆ. ಅದು ನಿತ್ಯದ ಸೂರ್ಯನ ಹಾಗೆ ಉದಯಿಸುತ್ತಲೇ ಇರುತ್ತದೆ. ಬೆಳಗುತ್ತಲೇ ಇರುತ್ತದೆ; ಮುಳುಗಲಾರದು. ‘ರವಿ ಕಾಣದ್ದನ್ನು ಕವಿ ಕಂಡ’ ಎಂದು ಹೇಳಿದ್ದು ಪ್ರಾಯಃ ಈ ವ್ಯತ್ಯಾಸದಿಂದಲೇ. ಕುವೆಂಪು ಹೇಳಿದ ‘ಸತ್ತಂತಿಹರನು ಬಡಿದೆಚ್ಚರಿಸು’, ಬೇಂದ್ರೆಯವರ ‘ಇದು ಬರಿ ಬೆಳಗಲ್ಲೋ ಅಣ್ಣ’ ಅಥವಾ ಅಡಿಗರ ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ’ ಎಂಬ ಸಾಲುಗಳು (ಇಂತಹ ಸಾವಿರಾರು ತೊರೆಗಳಿವೆ; ಉದಾಹರಣೆಗಾಗಿ ಇವಿಷ್ಟನ್ನೇ ನೀಡಿದ್ದೇನೆ) ಹೀಗೆ ಎಲ್ಲ ಸಂದರ್ಭಕ್ಕೆ ಒಗ್ಗುವಂತಹವು.

ಈ ಕವಿತೆಯ ವೈಶಿಷ್ಟ್ಯವಿರುವುದೇ ನಾಡಿನ ಬಗ್ಗೆ ತೋರುವ ಅಪೂರ್ವ ಕಾಳಜಿ, ಕಳಕಳಿಯಲ್ಲಿ. ಇದು ದೇವರೆಡೆಗೆ ಹೋಗುವ ಪ್ರಾರ್ಥನೆಯಲ್ಲ; ಒಂದು ಆರೋಗ್ಯಪೂರ್ಣ ಹೊಸ ನಾಡನ್ನು ಕಟ್ಟುವಲ್ಲಿ ತನ್ನ ಒಳಗೊಳ್ಳುವಿಕೆ. ಅಷ್ಟೇ ಅಲ್ಲ- ಎಂತಹ ನಾಡು ಬೇಕು ಎಂಬುದರ ಸದಾಶಯ ಎಲ್ಲ ಸಾಲುಗಳಲ್ಲೂ ಅರಳುತ್ತದೆ. ಕೊನೆಯ ಸ್ಟಾಂಝಾದ ವರೆಗೆ ‘ಎಲ್ಲಿ’ ಎಂಬ ಪದವೇ ಬಳಕೆಯಾಗಿದೆ. ಕೊನೆಗೆ ‘ಅಲ್ಲಿ’ ಎಂಬ ಪದವು ಮೊದಲಿನ ಎಲ್ಲಿ ಎಂಬ ಪದಕ್ಕೆ ಖಚಿತತೆಯೊನ್ನದಗಿಸುತ್ತದೆ. ಮನಕೆ ಅಳುಕಿರದ, ತಲೆ ಬಾಗಿರದ, ತಿಳಿವಿಗೆ ತೊಡಕು ತೋರದ, ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು ಧೂಳೊಡೆಯದ, ಸತ್ಯದ ಅಗಾಧ ನೆಲೆಯಿಂದ ಸವಿಮಾತೂ ಸಲ್ಲಿಲತ ನಡೆಯೂ ಮುಂದುವರಿಯುವ, ಸಫಲತೆಯ ಕಡೆಗೆ ಸಾಗುವ ದಣಿವಿರದ ಸಾಧನೆಗೆ ಬೆಂಬಲ ನೀಡಿದ, ಸುವಿಚಾರಜಲದ ಒರತೆಯು ನಿರ್ಮಲವಾಗಿ ಹರಿಯುವ ಮತ್ತು ಕಾಳು ರೂಢಿಯ ಮರಳೊಳಿಂಗಿ ಕೆಡದ, ಮನೆಯ ಹಿರಿಯನು ಚಿಂತನವನ್ನು ಉದ್ಯಮದ ಸುವಿಶಾಲತೆಯ ಪೂರ್ಣತೆಗೆ ಮುನ್ನಡೆಸುವ ಸ್ವರ್ಗಸಮಾನ ನಾಡು ನಮಗೆ ಬೇಕಾಗಿದೆ. ಅಂತಹ ನಡೆಗೆ ಬೇಕಾದ ಎಚ್ಚರವಿರಲಿ ಎಂಬ ಶ್ರೇಷ್ಠ ಆಶಯ ಈ ಕವಿತೆಯಲ್ಲಿದೆ. ಮತ್ತೆ ಮತ್ತೆ ಎಚ್ಚರಿಸುವ ಈ ಕವಿತೆ ನಮ್ಮನ್ನು ಎಚ್ಚರಿಸಿದರೆ ಈ ಕವಿತೆಯ ಅಂತಲ್ಲ, ಒಟ್ಟಾರೆ ಕಾವ್ಯದ, ಸಾಹಿತ್ಯದ, ಚಿಂತನೆಯ ಅಸ್ತಿತ್ವ ಅರ್ಥಪೂರ್ಣ. ಎರಡೂ ಪ್ರಾರ್ಥನೆಗಳು ಕಾಮತರನ್ನು ಶ್ರೇಷ್ಠ ಕವಿಗಳಾಗಿ ಶಾಶ್ವತವಾಗಿ ನಿಲ್ಲಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)