varthabharthi

ಸಂಪಾದಕೀಯ

ದ್ವೇಷ ಕಾರ್ಖಾನೆಗಳಿಗೆ ಬೀಗ ಜಡಿಯುವ ಸಮಯ

ವಾರ್ತಾ ಭಾರತಿ : 14 Jun, 2018

ಪ್ರಮುಖ ಆರೋಪಿಯೋರ್ವನ ಬಂಧನವಾಗುವ ಮೂಲಕ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಸಂಘಪರಿವಾರ ಬಳಗದಲ್ಲಿ ಗುರುತಿಸಿಕೊಂಡಿರುವ ಪರಶುರಾಮ್ ಎಂಬಾತನನ್ನು ಸಿಟ್ ತನಿಖಾಧಿಕಾರಿಗಳು ಬಂಧಿಸಿ 14 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಬಂಧನವಾಗುತ್ತಿದ್ದಂತೆಯೇ ಕೆಲವು ಸಂಘಟನೆಗಳು ತಮಗೂ ಆರೋಪಿಗೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆಗಳನ್ನು ನೀಡತೊಡಗಿವೆ. ಹಾಗೆ ನೋಡಿದರೆ, ಮಹಾತ್ಮಾ ಗಾಂಧೀಜಿಯ ಹಂತಕ ನಾಥೂರಾಂ ಗೋಡ್ಸೆಯ ಕುರಿತಂತೆ ಆರೆಸ್ಸೆಸ್ ಸಂಘಟನೆಯೂ ಇದೇ ಹೇಳಿಕೆಯನ್ನು ನೀಡುತ್ತಾ ಬಂದಿದೆೆ.

ಆದರೆ ಗೋಡ್ಸೆ ಆರೆಸ್ಸೆಸ್ ಚಿಂತನೆಯಿಂದ ಅರಳಿದ ಕಳ್ಳಿ ಹೂವು ಎನ್ನುವುದು ವಿಶ್ವಕ್ಕೆ ಗೊತ್ತಿರುವ ಸತ್ಯ. ಕೆಲವು ವರ್ಷಗಳಿಂದ ಕೇಸರಿ ಸಂಘಟನೆಗಳು ನಡೆಸುತ್ತಾ ಬಂದಿರುವ ಉಗ್ರವಾದಿ ಚಟುವಟಿಕೆಗಳು ಗುಟ್ಟಾಗಿಯೇನೂ ಉಳಿದಿಲ್ಲ. ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ನೇತೃತ್ವದ ತಂಡ ಈ ಜಾಲವನ್ನು ಹಲವು ವರ್ಷಗಳ ಹಿಂದೆಯೇ ಗುರುತಿಸಿದ್ದರು. ಬಳಿಕ ಇಡೀ ತಂಡ ನಿಗೂಢ ರೀತಿಯಲ್ಲಿ ಕೊಲೆಗೀಡಾಯಿತು. ಮಾಲೇಗಾಂವ್ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟಗಳಲ್ಲಿ ಈ ಸಂಘಟನೆಗಳ ಪಾತ್ರವನ್ನು ತನಿಖಾಧಿಕಾರಿಗಳು ಈಗಾಗಲೇ ಘೋಷಿಸಿದ್ದಾರೆ. ಆದರೆ ದುರದೃಷ್ಟವಶಾತ್ ಈ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಈವರೆಗೆ ಯಾವುದೇ ಸರಕಾರಕ್ಕೆ ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿಯೇ ಇದೀಗ ಈ ಉಗ್ರವಾದಿ ಸಂಘಟನೆಗಳು ಬಹಿರಂಗವಾಗಿ ದೇಶವಿರೋಧಿ ಕೃತ್ಯಗಳಿಗೆ ಇಳಿದಿವೆ.

ಪರಶುರಾಮ್ ವಾಗ್ಮೋರೆಯ ಹಿಂದಿನ ಚರಿತ್ರೆಯನ್ನು ನೋಡಿದರೆ ಈತ ಬರೀ ಸಂಘಪರಿವಾರ ಚಿಂತನೆಯನ್ನು ತಲೆಯಲ್ಲಿ ತುಂಬಿಕೊಂಡವನಷ್ಟೇ ಅಲ್ಲ. ಅದರಾಚೆಗೆ ದೇಶವಿರೋಧಿ ಚಿಂತನೆಗಳನ್ನು ಹೊಂದಿದ್ದಾನೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಆ ಮೂಲಕ ಗಲಭೆ ನಡೆಸುವ ಸಂಚು ರೂಪಿಸಿದವರಲ್ಲಿ ಈತನೂ ಒಬ್ಬ. ತನ್ನದೇ ನೆಲದಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸುವ ಮೂಲಕ, ಈ ನೆಲವನ್ನು ಅಭದ್ರಗೊಳಿಸಲು ಎಂತಹ ನೀಚಕೆಲಸಕ್ಕೂ ಸಿದ್ಧ ಎಂದು ಈತ ಮತ್ತು ಈತನ ತಂಡ ಆ ಮೂಲಕ ಹೇಳಿಕೊಂಡಿದೆ. ಅಂದೇ ಈತನ ಹಿಂದಿರುವ ಸಂಘಟನೆಯನ್ನು ಗುರುತಿಸಿ ಅದಕ್ಕೆ ನಿಷೇಧ ಹೇರಿದ್ದಿದ್ದರೆ ಗೌರಿ ಲಂಕೇಶ್ ಅವರ ಹತ್ಯೆ ನಡೆಯುತ್ತಿರಲಿಲ್ಲವೇನೋ? ಹಿಂದುತ್ವದ ಮುಖವಾಡ ಹಾಕಿಕೊಂಡು ಸಾರ್ವಜನಿಕವಾಗಿ ಬೆಂಕಿಯುಗುಳುವ ಪ್ರಮೋದ್ ಮುತಾಲಿಕ್‌ನಂತಹ ವ್ಯಕ್ತಿಯನ್ನು ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯಗಳೇ ನಾಯಕನನ್ನಾಗಿ ಬೆಳೆಸಿವೆ. ನ್ಯಾಯಾಲಯವೊಂದಕ್ಕೆ ಸ್ಫೋಟಕಗಳನ್ನು ಎಸೆದ ಪ್ರಕರಣದಲ್ಲಿ ಈತನ ಅನುಚರರಾದ ಜಂಬಗಿ ಮತ್ತು ಆತನ ತಂಡದ ಬಂಧನವಾದಾಗಲೇ ಪ್ರಮೋದ್ ಮುತಾಲಿಕ್‌ನನ್ನು ರಾಜ್ಯದಿಂದ ಗಡಿಪಾರು ಮಾಡಬೇಕಾಗಿತ್ತು. ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ‘‘ನಾವೂ ಆತ್ಮಹತ್ಯೆ ದಳವನ್ನು ನಿರ್ಮಾಣ ಮಾಡುತ್ತೇವೆ’’ ಎಂದು ಘೋಷಿಸಿದಾಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು.

ವಿಪರ್ಯಾಸವೆಂದರೆ, ಇದೇ ಮುತಾಲಿಕ್‌ನನ್ನು ಗೋವಾ ಸರಕಾರ ನಿಷೇಧಿಸಿದೆ. ಗೋವಾದಲ್ಲಿರುವುದು ಬಿಜೆಪಿ ಸರಕಾರ. ಈತ ನಿಜಕ್ಕೂ ಹಿಂದೂ ಧರ್ಮದ ನಾಯಕನಾಗಿದ್ದರೆ ಬಿಜೆಪಿ ಸರಕಾರ ಯಾಕೆ ಈತನನ್ನು ನಿಷೇಧ ಮಾಡಬೇಕು? ಕನಿಷ್ಠ ಇತರ ಹಿಂದೂ ಸಂಘಟನೆಗಳು ಬಿಜೆಪಿಯ ಮೇಲೆ ಒತ್ತಡ ಹೇರಿಯಾದರೂ ಈ ನಿಷೇಧವನ್ನು ಹಿಂದೆಗೆಸುತ್ತಿದ್ದವು. ಆದರೆ ಬಿಜೆಪಿ ಸರಕಾರ ಯಾವ ಮುಲಾಜೂ ಇಲ್ಲದೆ ಈತನನ್ನು ಅಸ್ಪಶ್ಯವಾಗಿಸಿದೆ. ಇಷ್ಟೊಂದು ಕಠಿಣ ಧೋರಣೆಯನ್ನು ಈತನ ವಿರುದ್ಧ ಬಿಜೆಪಿ ಸರಕಾರ ತಳೆಯುತ್ತದೆ ಎಂದರೆ, ಆತ ರಾಜ್ಯಕ್ಕೆ ಅಪಾಯಕಾರಿ ಎನ್ನುವುದು ಸ್ಪಷ್ಟ. ಹೀಗಿರುವಾಗ, ಕರ್ನಾಟಕವನ್ನೇ ನೆಲೆ ಮಾಡಿಕೊಂಡಿರುವ ಈತನಿಂದ ರಾಜ್ಯಕ್ಕೆ ಯಾವ ಅಪಾಯವೂ ಇಲ್ಲವೇ? ಇದು ನಮ್ಮ ಕಾನೂನು ವ್ಯವಸ್ಥೆಗೆ ಯಾಕೆ ಅರ್ಥವಾಗಿಲ್ಲ? ಅಥವಾ ಅರ್ಥವಾಗಿದ್ದರೂ ಅರ್ಥವಾಗದಂತೆ ನಟಿಸುತ್ತಿದೆಯೇ?

ಪ್ರಮೋದ್ ಮುತಾಲಿಕ್‌ನೊಂದಿಗೆ ಸಂಪರ್ಕ ಹೊಂದಿರುವ ಸಂಘಟನೆಗಳು ದೇಶವಿರೋಧಿ ಕೃತ್ಯಗಳನ್ನು ನಡೆಸುತ್ತಾ ಬಂದಿರುವುದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿವೆ. ಗೋವಾದಲ್ಲಿ ನಡೆದ ಸ್ಫೋಟದಲ್ಲೂ ಈತನ ಕೈವಾಡವಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿಯೇ ಗೋವಾ ಸರಕಾರ ಈತನ ಮೇಲೆ ಕಣ್ಣಿಟ್ಟಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಗೋವಾದಲ್ಲಿ ಈತನಿಗೆ ಸಾರ್ವಜನಿಕ ಭಾಷಣ ಮಾಡುವ ಅವಕಾಶ ನೀಡಿದರೆ ಅದು ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರೀತು ಎನ್ನುವ ಭಯ ಅಲ್ಲಿನ ಬಿಜೆಪಿಗೆ ಇದೆ. ಆದರೆ ಕರ್ನಾಟಕ ಮಾತ್ರ ಈತನ ಪಾಲಿಗೆ ಏನನ್ನು ಬೇಕಾದರೂ ಉಗುಳುವ ಪೀಕದಾನಿಯಾಗಿದೆ. ಇದರ ಪರಿಣಾಮವಾಗಿಯೇ ಇಂದು ಸಂಘಪರಿವಾರದ ಕೆಲವು ಸಂಘಟನೆಗಳಲ್ಲಿ ಭಯೋತ್ಪಾದನಾ ತರಬೇತಿಗಳು ನಡೆಯುತ್ತಿವೆ.

ಸಾಧಾರಣವಾಗಿ ಪಾಕಿಸ್ತಾನ, ಅಫ್ಘಾನಿಸ್ತಾನದ ಸಂಘಟನೆಗಳು ಅಥವಾ ನಕ್ಸಲ್ ಉಗ್ರವಾದಿಗಳು ತಾವು ಎಸಗಿದ ಕೃತ್ಯಗಳನ್ನು ಬಹಿರಂಗವಾಗಿ ಘೋಷಿಸುತ್ತಾರೆ. ಒಪ್ಪಿಕೊಳ್ಳುತ್ತಾರೆ. ಆದರೆ ಈ ಸಂಘಪರಿವಾರದ ಕೆಲವು ಸಂಘಟನೆಗಳಿಗೆ ಆ ಯೋಗ್ಯತೆಯೂ ಇಲ್ಲ. ಮಾಲೇಗಾಂವ್, ಮಕ್ಕಾ ಮಸೀದಿ ಸ್ಫೋಟಗಳನ್ನು ನಡೆಸಿದ ಬಳಿಕ ಅದನ್ನು ಅಮಾಯಕ ಮುಸ್ಲಿಮರ ತಲೆಗೆ ಕಟ್ಟಲು ಅವು ಯಶಸ್ವಿಯಾದವು. ಅಷ್ಟೇ ಅಲ್ಲ, ದೇವಸ್ಥಾನಗಳಿಗೆ ದನದ ಮಾಂಸ ಎಸೆಯುವುದು, ಮಸೀದಿಗಳಿರುವ ಜಾಗದಲ್ಲಿ ಹಂದಿಯ ತಲೆ ಇಟ್ಟು ಬರುವುದು ಇಂತಹ ನೀಚ ಕೃತ್ಯಗಳನ್ನು ಮಾಡುತ್ತಾ, ದೇಶದ ವಿರುದ್ಧ ಸಮರ ಸಾರುತ್ತಾ ಬಂದಿವೆ. ಅವರ ಉದ್ದೇಶ ಹಿಂಸೆ ಅಥವಾ ಭಯವನ್ನು ಸೃಷ್ಟಿ ಮಾಡುವುದಷ್ಟೇ ಅಲ್ಲ. ಭಾರತೀಯರ ನಡುವೆ ದ್ವೇಷವನ್ನು ಬಿತ್ತುವುದು. ಪರಸ್ಪರ ಅಪನಂಬಿಕೆಗಳನ್ನು ಹರಡುವುದು. ಆ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ತಮ್ಮ ದುರುದ್ದೇಶಗಳನ್ನು ಈಡೇರಿಸಿಕೊಳ್ಳುವುದು. ಇವೆಲ್ಲದರ ಬಗ್ಗೆ ಕಾನೂನಿಗೆ ಮಾಹಿತಿ ಇಲ್ಲವೆಂದಲ್ಲ. ನಮ್ಮ ಕಾನೂನು ವ್ಯವಸ್ಥೆಯೇ ಇವರ ಬಗ್ಗೆ ಮೃದುವಾಗಿದೆ. ಆದುದರಿಂದಲೇ ದಿನದಿಂದ ದಿನಕ್ಕೆ ಈ ವಿಷ ವೃಕ್ಷ ದೇಶಾದ್ಯಂತ ಹರಡುತ್ತಿದೆ.

ಆದುದರಿಂದ ಇನ್ನಾದರೂ ಇಂತಹ ಸಂಘಟನೆಗಳನ್ನು ಸಂಪೂರ್ಣ ನಿಷೇಧಿಸುವ ಮತ್ತು ಇಂತಹ ಸಂಘಟನೆಗಳ ನೇತೃತ್ವವನ್ನು ವಹಿಸಿದ ನಾಯಕರನ್ನು ರಾಜ್ಯದಿಂದ ಗಡಿಪಾರು ಮಾಡುವ ಬಗ್ಗೆ ಸರಕಾರ ಮತ್ತು ಕಾನೂನು ವ್ಯವಸ್ಥೆ ಚಿಂತಿಸಬೇಕು. ಗೌರಿ, ಕಲಬುರ್ಗಿ ಹತ್ಯೆಗೆ ಸಂಬಂಧಿಸಿ ಇಂತಹ ಸಂಘಟನೆಗಳಲ್ಲಿರುವ ಒಂದಿಬ್ಬರು ಆರೋಪಿಗಳನ್ನು ಬಂಧಿಸಿದಾಕ್ಷಣ ನ್ಯಾಯ ಸಿಕ್ಕಂತಾಗುವುದಿಲ್ಲ. ಇವರಲ್ಲದಿದ್ದರೆ ಇನ್ನೊಬ್ಬ ಕೊಲೆಗಾರರನ್ನು ಸೃಷ್ಟಿಸಲು ಸಂಘಟನೆಗಳಿಗೆ ಸಾಧ್ಯವಿದೆ. ಈ ಆರೋಪಿಗಳನ್ನು ತಯಾರಿಸುವ ಕಾರ್ಖಾನೆಗಳಿಗೇ ಬೀಗ ಜಡಿಯುವ ಸಮಯ ಬಂದಿದೆ. ಇಲ್ಲವಾದರೆ ಈ ಕೇಸರಿ ಸಂಘಟನೆಗಳ ಗುಂಡಿಗೆ ಅಂತಿಮವಾಗಿ ದೇಶದ ಪ್ರಜಾಸತ್ತೆಯೇ ಬಲಿಯಾಗಬೇಕಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)