varthabharthiನೇಸರ ನೋಡು

ಪ್ರಜೆಗಳ ಮೇಲೆ ನಿಗಾ ಇಡುವ ಹೊಸ ಹುನ್ನಾರ

ವಾರ್ತಾ ಭಾರತಿ : 17 Jun, 2018
ಜಿ.ಎನ್.ರಂಗನಾಥ ರಾವ್

ಅಭಿವೃದ್ಧಿ, ವಿಕಾಸ ಎನ್ನುವ ಮಾತುಗಳನ್ನು ಮುಂದುಮಾಡಿ ಸರಕಾರ ಜನರ ಖಾಸಗಿತನದೊಳಕ್ಕೆ ಮೂಗು ತೂರಿಸುತ್ತಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಹಲವು ರೀತಿಗಳಲ್ಲಿ ನಮ್ಮ ಅನುಭವಕ್ಕೆ ಬರುತ್ತಿರುವ ಸಂಗತಿಗಳಾಗಿವೆ. ಅಭಿವೃದ್ಧಿ ಎಂದರೆ ಸ್ವಾತಂತ್ರ್ಯ. ಪ್ರಜೆಗಳ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸುವುದು, ನಿಯಂತ್ರಿಸುವುದು ಸ್ವಾತಂತ್ರ್ಯದ ಪರಿಕಲ್ಪನೆಗೆ ತದ್ವಿರುದ್ಧವಾದುದು.


ಹಿಂದೆ ರಾಜಸತ್ತೆಯಿದ್ದ ಕಾಲದಲ್ಲಿ ಸದಾ ಸಂಚುಗೈಯ್ಯುವ ಶತ್ರುಗಳ ಕಾಟ ತಪ್ಪಿಸಿಕೊಳ್ಳಲು ರಾಜಮಹಾರಾಜರು ತಬ್ಬುಗಾರ ಸುಬ್ಬಯ್ಯನಂಥ ಬೇಹುಗಾರರನ್ನು ನೇಮಿಸಿಕೊಳ್ಳುತ್ತಿದ್ದರು, ರಾಜ್ಯದ ಎಲ್ಲ ಮೂಲೆಮೂಲೆಗಳಲ್ಲೂ ಶತ್ರುಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಎಂಬುದನ್ನು ನಾವು ಚರಿತ್ರೆಯಲ್ಲಿ ತಿಳಿಯುತ್ತೇವೆ. ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಪ್ರಜೆಗಳ ಕಾರ್ಯಚಟುವಟಿಕೆಗಳ ಮೇಲೆ ಕಣ್ಣಿಡಲು ಚೀನಾದಂಥ ದೇಶಗಳಲ್ಲಿ ಇಂಥ ವ್ಯವಸ್ಥೆ ಇದೆ. ಸಂಪೂರ್ಣವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತವಾದ ಇದನ್ನು ‘ಸೋಶಿಯಲ್ ಕ್ರೆಡಿಟಿಂಗ್ ಸಿಸ್ಟಮ್’ ಎಂದು ಕರೆಯಲಾಗುತ್ತದೆ. ನಾವು ವಿಶ್ವದಲ್ಲಿ ಯಾರಿಗೂ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಬಡಾಯಿ ಕೊಚ್ಚುವ ನರೇಂದ್ರ ಮೋದಿ ಸರಕಾರವೂ ಈಗ ತನ್ನ ಪ್ರಜೆಗಳ ಮೇಲೆ ಬೇಹುಗಾರಿಕೆ ನಡೆಸಲು ಸಿದ್ಧತೆ ನಡೆಸಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಬೇಹುಗಾರಿಕೆ ನಡೆಸಿ ಪ್ರಜೆಗಳ ಮನಸ್ಸಿನ ಆಲೋಚನೆ ಮತ್ತು ಅವರ ಭೌತಿಕ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡುವ ವ್ಯವಸ್ಥೆಯೊಂದನ್ನು ಮೋದಿ ಸರಕಾರದ ವಾರ್ತೆ ಮತ್ತು ಪ್ರಸಾರ ಸಚಿವಾಲಯ ರೂಪಿಸುತ್ತಿದೆಯೆಂದು ವರದಿಯಾಗಿದೆ.

ಮಂಡಲಾಕಾರದ ಕಾರಾಗೃಹ ಪಾಶ್ಚಾತ್ಯ ವಾಸ್ತುಶಿಲ್ಪದ ಒಂದು ಪರಿಕಲ್ಪನೆ. ಈ ಕಾರಾಗೃಹದ ಕೇಂದ್ರಭಾಗದಲ್ಲಿ ಒಂದು ಕಾವಲು ಗೋಪುರವಿರುತ್ತದೆ. ಈ ಕಾವಲು ಗೋಪುರದಿಂದ ಇಪ್ಪತ್ನಾಲ್ಕು ಗಂಟೆಯೂ ಕೆಳಗಿರುವ ಎಲ್ಲ ಕೈದಿಗಳನ್ನು ಗಮನಿಸುತ್ತಿರಬಹುದು. ಮೇಲಣ ಗೋಪುರ ಅಪಾರದರ್ಶಕವಾಗಿರುವುದರಿಂದ ಗೋಪುರದಿಂದ ತಮ್ಮ ಕಾರ್ಯಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ ಎಂಬುದು ಕೈದಿಗಳಿಗೆ ಗೊತ್ತಾಗುವುದಿಲ್ಲ. ಭಾರತವನ್ನು ಇಂಥ ಮಂಡಲಾಕಾರದ ಬಂದಿಖಾನೆ ಮಾಡಿ ದಿಲ್ಲಿಯಿಂದ ಪ್ರಜೆಗಳ ಮೇಲೆ ನಿಗಾ ಇಡಲು ಹೊರಟಿದೆ ಕೇಂದ್ರ ಸರಕಾರ. ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯ ಎಪ್ರಿಲ್‌ನಲ್ಲಿ ಕರೆದಿರುವ ಟೆಂಡರ್‌ನಿಂದ ಈ ಒಂದು ಸುಳಿವು ನಮಗೆ ಸಿಕ್ಕಿದೆ. ಸಾಮಾಜಿಕ ಮಾಧ್ಯಮ ಸಂವಹನ ವ್ಯವಸ್ಥೆಯೊಂದನ್ನು ರೂಪಿಸಲು ಕೇಂದ್ರ ವಾರ್ತೆ ಮತ್ತು ಪ್ರಸಾರ ಸಚಿವಾಲಯ ಟೆಂಡರ್ ಕರೆದಿದೆ. ಈ ವ್ಯವಸೆಯು ದೇಶದ ಎಲ್ಲ 716 ಜಿಲ್ಲೆಗಳಿಗೂ ವ್ಯಾಪಿಸುವಂಥ ನಿಯಂತ್ರಣ ಜಾಲವನ್ನು ಹೊಂದಿರಬೇಕು. ಜಿಲ್ಲೆಗಳ ವ್ಯಾಪ್ತಿಯ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಹಗಲು ರಾತ್ರಿ ಕಣ್ಣಿಡುವುದು ಮತ್ತು ಅದನ್ನು ವರದಿಮಾಡುವುದು ಇದರ ಮುಖ್ಯ ಉದ್ದೇಶ. ಇದನ್ನು ಸರಕಾರದ ಡಿಜಿಟಲ್ ಬಂದಿಖಾನೆ ಎಂದು ಕರೆಯಬಹುದೇನೋ.

ಉದ್ದೇಶಿತ ಸಾಮಾಜಿಕ ಮಾಧ್ಯಮ ಸಂವಹನ ವ್ಯವಸ್ಥೆಗೆ ಸರಕಾರ ಎರಡು ಮುಖ್ಯ ಜವಾಬ್ದಾರಿಗಳನ್ನು ವಹಿಸಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರ ಸಂವಹನ ಚಟುವಟಿಕೆಗಳ ಮೇಲೆ ನಿಗಾ ಇಡುವುದು. ಎರಡನೆಯ ಜವಾಬ್ದಾರಿ ಎಂದರೆ ಜನರನ್ನು ಪ್ರಭಾವಿಸುವಂಥಹ ನಿರ್ದಿಷ್ಟ ಕಾರ್ಯಕ್ರಮಗಳನ್ನು ಪ್ರಸಾರಕ್ಕೆ ಸಿದ್ಧಪಡಿಸಿಕೊಡುವುದು. ಪ್ರಮುಖ ಸಾಮಾಜಿಕ ಮಾಧ್ಯಮ ಜಾಲಗಳು ಮತ್ತು ಡಿಜಿಟಲ್ ಜಾಲಗಳಲ್ಲಿ ನಡೆಯುವ ಚಿಲಿಪಿಲಿಗುಟ್ಟುವಿಕೆಗಳನ್ನು ಸಂಗ್ರಹಿಸಿಕೊಡುವಂತಹ, ವರದಿ ಮಾಡುವಂಥ ತಾಂತ್ರಿಕ ವ್ಯವಸ್ಥೆ ತನ್ನ ಮುಖ್ಯ ಅಗತ್ಯವಾಗಿದೆಯೆಂದು ಟೆಂಡರಿನಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆಯಂತೆ.

ಈ ತಾಂತ್ರಿಕ ವ್ಯವಸ್ಥೆಯಲ್ಲಿ ಸರಕಾರ ಬಯಸಿರುವ ಕೆಲವು ಮುಖ್ಯ ಅಂಶಗಳು ಹೀಗಿವೆ:

1. ವ್ಯವಸ್ಥೆಯಲ್ಲಿ ಇಂಗ್ಲಿಷ್, ಚೀನೀ, ಜರ್ಮನ್, ಫ್ರೆಂಚ್, ಅರಬ್ಬಿ, ಕನ್ನಡ, ಹಿಂದಿ, ಉರ್ದು, ತೆಲುಗು, ಉರ್ದು, ಮಲಯಾಳಂ, ತಮಿಳು, ತೆಲುಗು, ಬಂಗಾಳಿ ಭಾಷೆಗಳಲ್ಲಿ ವ್ಯವಹರಿಸುವ ಅನುಕೂಲವಿರಬೇಕು.
2. ವ್ಯವಸ್ಥೆಯಲ್ಲಿ ಮೇಲಿನ ಭಾಷೆಗಳಲ್ಲಿನ ಭಾವನೆಗಳು-ಸಂವೇದನೆ ಗಳನ್ನು, ಸಂದರ್ಭ ಸನ್ನಿವೇಶಗಳನ್ನು ಗ್ರಹಿಸುವ ಹಾಗೂ ಅವುಗಳನ್ನು ಪ್ರತ್ಯೇಕಿಸಿ ದಾಖಲಿಸುವ ಎನ್.ಎಲ್.ಪಿ. ಇಂಜಿನ್ ಇರಬೇಕು.

3.ಪ್ರಜೆಗಳಿಂದ ಮಾಹಿತಿ ಹಾಗೂ ಪ್ರಜೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿಮಾಡುವ ತಾಂತ್ರಿಕ ಸವಲತ್ತುಗಳಿರಬೇಕು.

ಇಂಥದೊಂದು ತಾಂತ್ರಿಕ ವ್ಯವಸ್ಥೆಯನ್ನು ಹೊಂದುವುದರಿಂದ ಸರಕಾರಕ್ಕೆ ಆಗ ಬಹುದಾದ ಲಾಭಗಳೇನು? ಪ್ರಯೋಜನಗಳೇನು?
1. ಪ್ರಜೆಗಳ ಆಲೋಚನೆ, ಚಿಂತನಾ ಕ್ರಮ ಮತ್ತು ಪ್ರವೃತ್ತಿಗಳನ್ನು ಕಾಲಕಾಲಕ್ಕೆ ತಿಳಿಯಬಹುದು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಬಿಕ್ಕಟ್ಟು ನಿರ್ವಹಣಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು. ಜನರ ಆಲೋಚನೆ, ಜಿಜ್ಞಾಸೆಗಳನ್ನು ಪ್ರಭಾವಿಸಬಹುದು.
2. ವೃತ್ತ ಪತ್ರಿಕೆಗಳು ಮತ್ತು ದೂರದರ್ಶನ ವಾಹಿನಿಗಳನ್ನು ಪ್ರಭಾವಿಸಬಹುದು. ಪತ್ರಿಕೆಗಳಲ್ಲಿ ಶೀರ್ಷಿಕೆಗಳು ಹೇಗಿರಬೇಕು, ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಯಾವುದಿರಬೇಕು, ಪತ್ರಿಕೆಗಳು ಮತ್ತು ವಾಹಿನಿಗಳ ರಾಜಕೀಯ ಒಲವು ಧೋರಣೆಗಳೇನು, ಅವುಗಳ ವಾಣಿಜ್ಯಾಸಕ್ತಿಗಳೇನು, ಓದುಗರು ಹಾಗೂ ನೋಡುಗರ ಭಾವನೆಗಳೇನು, ಜನಪ್ರಿಯ ಮಾದರಿಗಳು ಯಾವುವು ಇತ್ಯಾದಿಗಳನ್ನು ತಿಳಿದುಕೊಳ್ಳುವುದು.

ಇದನ್ನೆಲ್ಲ ಈ ವ್ಯವಸ್ಥೆಯ ಮೂಲಕ ತಿಳಿದುಕೊಂಡು ಸರಕಾರ ಏನು ಮಾಡಲಿದೆ? ಮುಖ್ಯವಾಗಿ:
(ಅ)ಸಾರ್ವಜನಿಕ ಗ್ರಹಿಕೆ ಮತ್ತು ತಿಳಿವನ್ನು ಸಕಾರಾತ್ಮಕವಾಗಿ ರೂಪಿಸುವುದು.
(ಆ)ಪ್ರಜೆಗಳಲ್ಲಿ ರಾಷ್ಟ್ರೀಯ ಭಾವನೆಗಳನ್ನು ಮೂಡಿಸುವುದು/ ಬೋಧಿಸುವುದು.
(ಇ)ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲಗಳಲ್ಲಿನ ಸುದ್ದಿಗಳು ಮತ್ತು ಚರ್ಚೆಗಳು ಸಕಾರಾತ್ಮಕವಾಗಿರುವಂತೆ ನೋಡಿಕೊಳ್ಳುವುದು.

ಸರಕಾರದ ಈ ನಮೂನೆಯ ಘನ ಉದ್ದೇಶಗಳು ಏನೇ ಇದ್ದರೂ ಇದರ ಸಾಧ್ಯತೆಗಳು ಹಲವಾರು. ಅವುಗಳಲ್ಲಿ ಕೆಲವು: ಈ ಹೊಸ ತಾಂತ್ರಿಕ ವ್ಯವಸ್ಥೆಯ ಮೂಲಕ ವಿಷಯವಾರು ಜನರ ಅಭಿಪ್ರಾಯಗಳನ್ನು ತಿಳಿಯಲು ಸಾಮಾಜಿಕ ಮಾಧ್ಯಮಗಳ ಜಾಡು ಹಿಡಿದು ಬೇಹುಗಾರಿಕೆ ನಡಸುವುದು; ಈ ಬೇಹುಗಾರಿಕೆಯಿಂದ ಲಭ್ಯವಾಗುವ ಮಾಹಿತಿ, ಸರಕಾರದ ಬಗೆಗಿನ ಜನರ ಅಭಿಪ್ರಾಯಗಳು, ಜನರ ಭಾವನೆಗಳು ಇವುಗಳನ್ನು ವಿಶ್ಲೇಷಿಸಿ ತನ್ನ ಅನುಕೂಲಕ್ಕೆ ಬಳಕೆಮಾಡಿಕೊಳ್ಳುವುದು ಸರಕಾರದ ಒಳಉದ್ದೇಶವಾಗಿದೆ ಎಂಬುದು ಸ್ಪಷ್ಟ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡುವ ಸರಕಾರದ ಉದ್ದೇಶವನ್ನು ಗಮನಿಸಿದಾಗ ಇದರ ಪರಿಣಾಮಗಳೇನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬ ಸರಕಾರದ ವಿರುದ್ಧ ನೇತ್ಯಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಸಾಮಾಜಿಕ ಮಾಧ್ಯಮ ಸಂವಹನ ವ್ಯವಸ್ಥೆ ಬೇಹುಗಾರಿಕೆ ಇದನ್ನು ಪತ್ತೆಹಚ್ಚಬಲ್ಲದು ಹಾಗೂ ಆ ವ್ಯಕ್ತಿಯ ಮೇಲೆ ಚಾಟಿ ಬೀಸಬಹುದು ಅಥವಾ ಸರಕಾರದ ಪರವಾಗಿ ಆತನ ತಲೆತಿಕ್ಕಬಹುದು(ಬ್ರೈನ್ವಾಶ್)/ಪ್ರಭಾವಿಸಬಹುದು.

ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈ ರೀತಿ ಪ್ರಭಾವ ಬೀರುವುದರಿಂದ ಸರಕಾರಿ ವಿರೋಧಿ ಧೋರಣೆಯನ್ನು ತಟಸ್ಥಗೊಳಿಸಬಹುದು. ವಿಷಯ ತೀವ್ರತೆ ಮತ್ತು ಪರಿಸ್ಥಿತಿಗನುಗುಣವಾಗಿ ಅಂಥ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲೂ ಬಹುದು. ಇದು ತನ್ನ ನೀತಿ-ಧೋರಣೆಗಳು, ಕೆಲಸಕಾರ್ಯಗಳ ಬಗ್ಗೆ ಕಟುಟೀಕೆ ಮಾಡುವರ ಮೇಲೆ ನಿಗಾ ಇಡಲು ಸರಕಾರ ಹೂಡಿರುವ ಕುಟಿಲೋಪಾಯವಲ್ಲದೆ ಬೇರೇನೂ ಅಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಅಥವಾ ಮಾಹಿತಿಗಳು ಸಾರ್ವತ್ರಿಕವಾಗಿರಬಹುದಾದರೂ ಅದನ್ನು ವಿಶ್ಲೇಷಿಸುವ ಮತ್ತು ತೀರ್ಮಾನಗಳಿಗೆ ಬರುವ ಹಕ್ಕು ಸರಕಾರಕ್ಕಿಲ್ಲ. ನಿಜ, ಸಾಮಾಜಿಕ ಮಾಧ್ಯಮ ಪ್ರತಿನಿತ್ಯದ ಮುಕ್ತ ಅಭಿವ್ಯಕ್ತಿಗೆ ಒಂದು ಪರಿಣಾಮಕಾರಿ ಸಾಧನವಾಗಿದೆ. ಇದರಲ್ಲಿ ಪ್ರಜೆಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು, ಸರಕಾರವನ್ನು, ರಾಜಕೀಯ ಪಕ್ಷಗಳನ್ನು, ವ್ಯಕ್ತಿಗಳನ್ನು ಟೀಕಿಸಬಹುದು, ಸರಕಾರದ ಸಾಧನೆಗಳನ್ನು ಪ್ರಶ್ನಿಸಬಹುದು. ಸಾಮಾಜಿಕ ಮಾಧ್ಯಮಗಳು ಪ್ರಜಾಸತ್ತಾತ್ಮಕವಾದುವು,ಮುಕ್ತವಾದುವು ಎಂದು ಜನ ತಿಳಿದಿರುವುದರಿಂದ ಅಲ್ಲಿ ಮುಕ್ತ ಅಭಿವ್ಯಕ್ತಿ ಸಾಧ್ಯವಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳ ಮೇಲೆ ಸರಕಾರದ ಗೃಧ್ರ ದೃಷ್ಟಿ ಬಿದ್ದಿದೆ, ಅದು ಸರಕಾರದ ನಿಗಾದಲ್ಲಿದೆ ಎಂದು ತಿಳಿದಾಕ್ಷಣ ಸಾರ್ವಜನಿಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಣ್ಣೀರೆರಚಿದಂತಾಗಬಹುದು. ತಮ್ಮ ಮೇಲೆ ನಿಗಾ ಇಡಲಾಗಿದೆ ಎಂಬ ಭೀತಿಯಿಂದಾಗಿ ಜನ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸದೆ ಹೋಗಬಹುದು. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಇದರಿಂದ ಸರಕಾರ ಸತ್ಯದ, ನಿರ್ಭೀತ ಅಭಿಪ್ರಾಯದ ಒಂದು ಮಾರ್ಗದ ಬಾಗಿಲನ್ನು ತಾನೇ ಮುಚ್ಚಲಿದೆ.

 ಸರಕಾರದ ಈ ವ್ಯವಸ್ಥೆಯು ಎಲ್ಲ ಕಡೆ ತನ್ನ ಅಕ್ಟೋಪಸ್ ಬಾಹುಗಳನ್ನು ಚಾಚಲಿದ್ದು ಇದರ ‘ನಿಗಾ’ ಹಿಡಿತಕ್ಕೆ ಮೊದಲ ಬಲಿಯಾಗಲಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ. ಈಗಾಗಲೇ ಪತ್ರಿಕಾ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ, 180 ರಾಷ್ಟ್ರಗಳ ಸಾಲಿನಲ್ಲಿ ಭಾರತದ ಸ್ಥಾನ 138ನೆಯದಾಗಿದೆ. ಮಾನಹಾನಿ, ರಾಷ್ಟ್ರ ದ್ರೋಹದಂಥ ಓಬೀರಾಯನ ಕಾನೂನುಗಳನ್ನು ಬಳಸಿ ಹಾಗೂ ಬೆದರಿಕೆಗಳಿಂದ ಪತ್ರಕರ್ತರ ಸ್ವಾತಂತ್ರ್ಯ ಹರಣ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಸರಕಾರದ ದೋಷಗಳನ್ನು ಎತ್ತಿತೋರಿಸಿದ ಸಂದರ್ಭಗಳಲ್ಲಿ ಅಂಥ ನಿರ್ಭೀತ ಪತ್ರಕರ್ತರನ್ನು ಭೌತಿಕವಾಗಿ ಇಲ್ಲವಾಗಿಸುವ ‘ತೀವ್ರಶಿಕ್ಷೆಯ’ ಕ್ರಮಗಳಿಗೂ ಕೊರತೆಯಿಲ್ಲ. ಇದಕ್ಕೆ ಉದಾಹರಣೆಯಾಗಿ ಗೌರಿ ಲಂಕೇಶ್ ಹತ್ಯೆಯ ಪ್ರಕರಣ ನಮ್ಮ ಮುಂದಿದೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ತನ್ನ ವೈಫಲ್ಯಗಳನ್ನು, ಮಾನವದ್ರೋಹಿ ಕ್ರಮಗಳನ್ನು ಬಯಲುಮಾಡುವ ಪತ್ರಿಕೆಗಳನ್ನು, ಪತ್ರಕರ್ತರನ್ನು ಅದು ಸಹಿಸುವುದಿಲ್ಲ.

ಹೀಗಿರುವಾಗ ಪತ್ರಕರ್ತರ ಮೇಲೆ ನಿಗಾ ಇಟ್ಟು ಅವರ ವೈಚಾರಿಕ ಹಿನ್ನೆಲೆ, ಆಲೋಚನೆಗಳು, ವೃತ್ತಿಬದ್ಧತೆಗಳ ಮೇಲೆ ನಿಗಾ ಇಡುವ ವ್ಯವಸ್ಥೆಯೊಂದು ಜಾರಿಗೆ ಬಂದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಗತಿ ಏನಾದೀತು ಎಂಬುದನ್ನು ಊಹಿಸುವುದು ಕಷ್ಟವಾಗದು. ಸರಕಾರದಪರ ಅವರ ಮನಸ್ಸನ್ನು ಬದಲಿಸುವಂಥ, ತಲೆತಿಕ್ಕುವಂಥ ಕಾರ್ಯಕ್ರಮಗಳಿಗೆ ಅವರು ಬಲಿಪಶುವಾಗಬಹುದು ಅಥವಾ ವೃತ್ತಿಯನ್ನೇ ತ್ಯಜಿಸಬೇಕಾದಂಥ ಪರಿಸ್ಥಿತಿಯೂ ತಲೆದೋರಬಹುದು. ಸರಕಾರದ ಈ ಕಾರ್ಯಸಂಚಿನ ವ್ಯಂಗ್ಯವೆಂದರೆ ತೆರಿಗೆದಾರರ ಮೇಲೆ ಬೇಹುಗಾರಿಕೆ ನಡೆಸಲು ತೆರಿಗೆದಾರರ ಹಣವನ್ನೇ ವ್ಯಯಮಾಡುತ್ತಿರುವುದು. ಇದೊಂದು ವಿಕರಾಳ ಸಂಚು. ಆನ್‌ಲೈನ್‌ಗೆ ಹೆಚ್ಚು ಜನರನ್ನು ತಂದು, ತಂತ್ರಜ್ಞಾನ ಹೇಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು ಎಂದು ತಿಳಿಸುತ್ತಲೇ ಅದೇ ತಂತ್ರಜ್ಞಾನದ ಮೂಲಕ ಪ್ರಜೆಗಳನ್ನು ನಿಯಂತ್ರಿಸುವ ಜ್ಞಾನದ್ರೋಹದ ಕುತಂತ್ರ ಇದಾಗಿದೆ.

ಹೊಸ ತಂತ್ರಜ್ಞಾನ ಎರಡು ಅಲಗಿನ ಕತ್ತಿಯಿದ್ದಂತೆ ಎಂಬುದು ಈಗೀಗ ಜನರ ಅನುಭವಕ್ಕೆ ಬರುತ್ತಿದೆ. ಇವು ಜನರ ಬಳಿ ಹೋಗಿ ಹೆಚ್ಚು ಪ್ರಜಾಸತ್ತಾತ್ಮಕ ಕ್ರಮ ಎಂದು ಜನಪ್ರಿಯಗೊಳ್ಳುತ್ತಿರುವುದರ ಜೊತೆಗೆ ಅಧಿಕಾರ ಕೇಂದ್ರೀಕರಣದ ಅಪಾಯವನ್ನೂ ತಂದೊಡ್ಡಿದೆ. ಇದು ಪ್ರಜಾಸತ್ತಾತ್ಮಕ ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ನಿಯಂತ್ರಣಕ್ಕೆ ದುರುಪಯೋಗವಾಗುತ್ತಿರುವುದು ಖೇದಕರ. ಜನರನ್ನು ನಿಯಂತ್ರಿಸಲು ಸರಕಾರಗಳು ತಮ್ಮಲ್ಲಿರುವ ಸಾಧನ ಸಂಪತ್ತುಗಳನ್ನೆಲ್ಲ ಬಳಸಿರುವುದು ಚರಿತ್ರೆಯುದ್ದಕ್ಕೂ ಕಾಣಬರುವ ವಿದ್ಯಮಾನವಾಗಿದೆ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನದಲ್ಲಿ ಇಂಥ ನಿಯಂತ್ರಣಗಳನ್ನು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಹೇರಲು ವಿಪುಲ ಸಾಧ್ಯತೆಗಳಿವೆ. ಆದ್ದರಿಂದ ಆಧಾರ್, ಸಾಮಾಜಿಕ ಮಾಧ್ಯಮಗಳು, ಸಾಮಾಜಿಕ ಸಂವಹನಾ ವ್ಯವಸ್ಥೆ ಇತ್ಯಾದಿ ಮಾರ್ಗಗಳ ಮೂಲಕ ತನ್ನ ಕೈಯಲ್ಲಿ ಅಧಿಕಾರ ಕೇಂದ್ರೀಕರಿಸಿಕೊಂಡು ಪ್ರಜೆಗಳನ್ನು ನಿಯಂತ್ರಿಸಲು, ಶಿಸ್ತುಬದ್ಧಗೊಳಿಸಲು ಸರಕಾರ ಪ್ರಯತ್ನಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಅಭಿವೃದ್ಧಿ, ವಿಕಾಸ ಎನ್ನುವ ಮಾತುಗಳನ್ನು ಮುಂದುಮಾಡಿ ಸರಕಾರ ಜನರ ಖಾಸಗಿತನದೊಳಕ್ಕೆ ಮೂಗು ತೂರಿಸುತ್ತಿರುವುದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದು ಹಲವು ರೀತಿಗಳಲ್ಲಿ ನಮ್ಮ ಅನುಭವಕ್ಕೆ ಬರುತ್ತಿರುವ ಸಂಗತಿಗಳಾಗಿವೆ. ಅಭಿವೃದ್ಧಿ ಎಂದರೆ ಸ್ವಾತಂತ್ರ್ಯ. ಪ್ರಜೆಗಳ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸುವುದು, ನಿಯಂತ್ರಿಸುವುದು ಸ್ವಾತಂತ್ರ್ಯದ ಪರಿಕಲ್ಪನೆಗೆ ತದ್ವಿರುದ್ಧವಾದುದು. ಈಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಜಾರಿಗೆ ತರಲುದ್ದೇಶಿಸಿರುವ ಸಾಮಾಜಿಕ ಮಾಧ್ಯಮ ಸಂವಹನ ವ್ಯವಸ್ಥೆ ಪ್ರಜೆಗಳ ಮನಸ್ಸುಗಳ ಮೇಲೆ ನಿಗಾ ಇಡುವ, ಅವರ ಆಲೋಚನೆ, ಚಿಂತನಾಕ್ರಮಗಳನ್ನು ಪ್ರಭಾವಿಸುವ ಸಾಧನವಾಗಲಿದೆ. ಪ್ರಜೆಗಳ ಮನಸ್ಸನ್ನು ನಿಯಂತ್ರಿಸುವ ಈ ಕ್ರಮಕ್ಕೆ ಸರಕಾರ ಮುಂದಾಗಿರುವ ಸಮಯವನ್ನು ಗಮನಿಸಬೇಕು. ಲೋಕಸಭೆ ಚುನಾವಣೆ ಇನ್ನು ಒಂದು ವರ್ಷದಲ್ಲಿ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಪ್ರಭಾವಿಸಲು, ಟೀಕಾಕಾರರ ಬಾಯಿ ಮುಚ್ಚಿಸಲು, ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಸರಕಾರ ಈ ಹೊಸ ವ್ಯವಸ್ಥೆಯನ್ನು ಬಳಸಿಕೊಳ್ಳುವುದು ಖಚಿತ. ಕೇಂದ್ರ ಸರಕಾರದ ಇಂಥ ಕ್ರೂರ ಅಮಾನವೀಯ ಅಲೋಚನೆಗಳ ಬಗ್ಗೆ ಪ್ರಜೆಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಅದಕ್ಕೆ ತೆರಬೇಕಾದ ಬೆಲೆ ನಮ್ಮ ಸ್ವಾತಂತ್ರ್ಯವೇ ಆದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)