ಟಿಕೆಟ್ ಗಿಟ್ಟಿಸಲು 24 ಕೆ.ಜಿ. ತೂಕ ಏರಿಸಿಕೊಂಡ ಪೆರುವಿನ ಫುಟ್ಬಾಲ್ ಅಭಿಮಾನಿ ..!
ಲಿಮಾ, ಜೂ.19: ಪೆರುವಿನಲ್ಲಿ ಫುಟ್ಬಾಲ್ ವಿಶ್ವಕಪ್ ಜ್ವರ ಏರಿದೆ. ಅಲ್ಲಿನ ಫುಟ್ಬಾಲ್ ಅಭಿಮಾನಿಗಳು ಫುಟ್ಬಾಲ್ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಬ್ಬ ಫುಟ್ಬಾಲ್ ಗಾಗಿ ನೌಕರಿ ತೊರೆದಿದ್ದಾನೆ. ಇನ್ನೊಬ್ಬ ಕಾರು ಮಾರಿದ್ದಾನೆ . ಮತ್ತೊಬ್ಬ 25 ಕೆ.ಜಿ ತೂಕ ಏರಿಸಿಕೊಂಡಿದ್ದಾನೆ.
ರೊಡ್ರಿಗೋ ವೆರೆಸ್ಗುಯಿ ಎಂಬಾತನಿಗೆ ಇನ್ನೊಮ್ಮೆ ಪೆರು ವಿಶ್ವಕಪ್ ಗೆ ಅವಕಾಶ ಪಡೆಯುವ ಧೈರ್ಯ ಇಲ್ಲ. ಈ ಕಾರಣದಿಂದಾಗಿ ಆತ ತನ್ನ ಪತ್ನಿ , ನಾಲ್ಕರ ಹರೆಯದ ಮಗ, ಹೆತ್ತವರ ಜೊತೆ ಪೆರು ತಂಡದ ಫುಟ್ಬಾಲ್ ಪಂದ್ಯಗಳ ವೀಕ್ಷಣೆಗೆ ರಶ್ಯಕ್ಕೆ ತೆರಳಿದ್ದಾನೆ.
ಪೆರು ದೇಶದ ಫುಟ್ಬಾಲ್ ತಂಡ 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ನ ಗ್ರೂಪ್ ಹಂತದ ಸ್ಪರ್ಧೆಗೆ ಅರ್ಹತೆ ಪಡೆದಿತ್ತು.
ವಿಶ್ವಕಪ್ ನಲ್ಲಿ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಪೆರು ತಂಡ ರಶ್ಯದಲ್ಲಿ ಆಡುವುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಪೆರುವಿನ ಫುಟ್ಬಾಲ್ ಅಭಿಮಾನಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಈ ಪೈಕಿ ಒಬ್ಬ ವ್ಯಕ್ತಿ ಸುಲಭವಾಗಿ ಟಿಕೆಟ್ ಪಡೆಯುವ ಉದ್ದೇಶಕ್ಕಾಗಿ 3 ತಿಂಗಳಲ್ಲಿ 24 ಕೆ.ಜಿ. ಭಾರ ಏರಿಸಿಕೊಂಡಿದ್ದಾನೆ. ಗಿಲ್ಲೆರ್ಮೊ ಎಸ್ಪಿನೊಝಾ ಎಂಬಾತನಿಗೆ ಪೆರು ಆಡುವ ಪಂದ್ಯದ ಟಿಕೆಟ್ ದೊರೆಯುವುದಿಲ್ಲ ಎಂಬ ಆತಂಕ ಇತ್ತು. ಈ ಕಾರಣಕ್ಕಾಗಿ ದಪ್ಪ ದೇಹದ ವ್ಯಕ್ತಿಗಳಿಗೆ ಮೀಸಲಾಗಿರುವ ಸೀಟ್ ಪಡೆಯವ ಉದ್ದೇಶಕ್ಕಾಗಿ ಕಳೆದ ಮೂರು ತಿಂಗಳಿನಿಂದ ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಪೆರು ತಂಡ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 0-1 ಅಂತರದಲ್ಲಿ ಸೋಲು ಅನುಭವಿಸಿತ್ತು. ಜೂ.21ರಂದು ಫ್ರಾನ್ಸ್ ತಂಡವನ್ನು ಎದುರಿಸಲಿದೆ.