ಫಿಫಾ: ಮೆಸ್ಸಿ ಪಡೆಗೆ ಆಘಾತ ನೀಡಿದ ಕ್ರೊವೇಷಿಯಾ
ಮೆಸ್ಸಿಯ ವಿಶ್ವಕಪ್ ಕನಸು ನುಚ್ಚುನೂರಾಗುವ ಭೀತಿ
ನಿಝನಿ ನೊವ್ಗೊರ್ಡ್ (ರಷ್ಯಾ), ಜೂ.22: ಮಾಂತ್ರಿಕ ಆಟಗಾರ ಲಿಯೋನೆಲ್ ಮೆಸ್ಸಿಯ ವಿಶ್ವಕಪ್ ಕನಸಿನ ಅಭಿಯಾನಕ್ಕೆ ಆರಂಭಿಕ ಹಂತದಲ್ಲೇ ಧಕ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಅರ್ಜೆಂಟೀನಾ ತಂಡವನ್ನು 3-0 ಗೋಲುಗಳಿಂದ ಬಗ್ಗುಬಡಿದ ಕ್ರೊವೇಷಿಯಾ 16ರ ಘಟ್ಟ ತಲುಪಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಯಿತು.
ಪಂದ್ಯದ ಉತ್ತರಾರ್ಧದಲ್ಲಿ ಆಂಟ್ ರೆಬಿಕ್, ಲ್ಯೂಕಾ ಮಾಡ್ರಿಕ್ ಹಾಗೂ ಇವಾನ್ ರಿಕಿಟಿಕ್ ಅವರು ಗೋಲು ಗಳಿಸಿ ತಂಡದ ಗೆಲುವನ್ನು ಖಾತರಿಪಡಿಸಿದರು. ಇದರೊಂದಿಗೆ ದುರ್ಬಲ ಅರ್ಜೆಂಟೀನಾ ತಂಡ ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಅಪಾಯ ಎದುರಾಗಿದೆ.
ಡಿ ಗುಂಪಿನ ಪಂದ್ಯದಲ್ಲಿ ಈ ಆಘಾತಕಾರಿ ಸೋಲಿನಿಂದಾಗಿ ಅರ್ಜೆಂಟೀನಾ ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಮೊದಲ ಸುತ್ತಿನಲ್ಲೇ ಹೊರಬೀಳುವುದನ್ನು ತಪ್ಪಿಸಿಕೊಳ್ಳಬೇಕಾದರೆ, ಕೊನೆಯ ಪಂದ್ಯದಲ್ಲಿ ನೈಜೀರಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ.
ಇಂದಿನ ಪಂದ್ಯದ ಫಲಿತಾಂಶದಿಂದ ಆಘಾತಗೊಂಡ ಅರ್ಜೆಂಟೀನಾ ತಂಡದ ಅಭಿಮಾನಿಗಳು ಕ್ರೀಡಾಂಗಣದಲ್ಲೇ ಕಣ್ಣೀರಿಟ್ಟರೆ, ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಡಿಗೊ ಮರಡೋನಾ ಕೂಡಾ ನಿಬ್ಬೆರಗಾದರು.
ಅರ್ಜೆಂಟೀನಾ ಗೋಲ್ಕೀಪರ್ ವಿಲ್ಲಿ ಕಬಲ್ಲೆರೊ ಅವರ ಪ್ರಮಾದದಿಂದಾಗಿ 53ನೇ ನಿಮಿಷದಲ್ಲಿ ಕ್ರೊವೇಷಿಯಾ ಮುನ್ನಡೆ ಪಡೆಯಿತು. ಚೆಂಡನ್ನು ನಿಯಂತ್ರಣಕ್ಕೆ ಪಡೆದ ರೆಬಿಕ್, ಅದ್ಭುತ ವಾಲಿ ಮೂಲಕ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು. ರಿಯಲ್ ಮ್ಯಾಡ್ರಿಡ್ ಸ್ಟಾರ್ ಆಟಗಾರ ಮೋಡ್ರಿಕ್ 80ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮಿಂಚು ಹರಿಸಿದರೆ, ಮೆಸ್ಸಿಯ ಬಾರ್ಸಿಲೋನಾ ತಂಡದ ಸಹ ಆಟಗಾರ ರಕಿಟಿಕ್ ಅವರು ಅರ್ಜೆಂಟೀನಾದ ದುರ್ಬಲ ರಕ್ಷಣಾ ಪಡೆಯನ್ನು ವಂಚಿಸಿ ಸುಲಭ ಗೋಲು ಸಾಧಿಸಿ ಏಕಪಕ್ಷೀಯ ಫಲಿತಾಂಶ ತಂದಿತ್ತರು.
2002ರಲ್ಲೂ ವಿಶ್ವಕಪ್ ಗೆಲ್ಲುವ ಸಂಭಾವ್ಯ ತಂಡ ಎನಿಸಿಕೊಂಡಿದ್ದ ಅರ್ಜೆಂಟೀನಾ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಕ್ರೊವೇಷಿಯಾ ಸಾಧನೆಯೆದುರು ವಿಶ್ವದ ಅತ್ಯುತ್ತಮ ಫುಟ್ಬಾಲ್ ಪಟು ಎನಿಸಿಕೊಂಡ ಮೆಸ್ಸಿ ಕೆಲ ವೇಳೆ ಮಿಂಚಿನ ದಾಳಿ ಸಂಘಟಿಸಿದ್ದು ಬಿಟ್ಟರೆ ಉಳಿದಂತೆ ಮಂಕಾಗಿ ಕಂಡರು. ಇದೀಗ 30 ವರ್ಷದ ಆಟಗಾರನ ವಿಶ್ವಕಪ್ ಗೆಲ್ಲುವ ಕನಸು ಬಹುತೇಕ ನುಚ್ಚುನೂರಾಗಿದೆ. ಪಂದ್ಯಕ್ಕೆ ಮುನ್ನ ಮೆಸ್ಸಿ ಕೇಂದ್ರವ್ಯಕ್ತಿಯಾಗಿದ್ದರು. ಆದರೆ ಪಂದ್ಯದಲ್ಲಿ ಅವರ ರಿಯಲ್ ಮ್ಯಾಡ್ರಿಟ್ ಸಹ ಆಟಗಾರ ಲ್ಯೂಕಾ ಮೋಡ್ರಿಕ್ ನಿಜವಾಗಿಯೂ ಆಟದಲ್ಲಿ ಮಿಂಚಿನ ಸಂಚಲನಕ್ಕೆ ಕಾರಣರಾದರು.