ಮೂರೇ ದಿನದಲ್ಲಿ 181 ಕೋಟಿ ಬಾಚಿದ ರೇಸ್ 3
ಸಲ್ಮಾನ್ಖಾನ್ ಅಭಿನಯದ ‘ರೇಸ್3’, ಬಾಕ್ಸ್ಆಫೀಸ್ನಲ್ಲಿ ನಾಗಾಲೋಟದಿಂದ ಓಡುತ್ತಿದ್ದು, ಗಳಿಕೆಯಲ್ಲಿ ದಾಖಲೆ ಮಾಡುವ ಸೂಚನೆಗಳನ್ನು ನೀಡಿದೆ. ಈದುಲ್ಫಿತ್ರ್ ದಿನವಾದ ಜೂನ್ 15ರಂದು ತೆರೆಕಂಡ ಈ ಚಿತ್ರ, ಮೂರೇ ದಿನಗಳಲ್ಲಿ 100 ಕೋಟಿ ರೂ.ಗಳಿಸಿ ದಾಖಲೆ ನಿರ್ಮಿಸಿದೆ. ಎಬಿಸಿಡಿ ಖ್ಯಾತಿಯ ರೆಮೊ ಡಿ ಸೋಝಾ ನಿರ್ದೇಶನದ ರೇಸ್3ನಲ್ಲಿ, ಸಲ್ಮಾನ್ಖಾನ್, ಅನಿಲ್ಕಪೂರ್, ಬಾಬ್ಬಿ ಡಿಯೋಲ್, ಜಾಕ್ವೆಲಿನ್ ಫೆರ್ನಾಂಡಿಸ್, ಡೈಸಿ ಶಾರಂತಹ ಮಲ್ಟಿಸ್ಟಾರ್ ತಾರಾಗಣವೇ ಇದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ 100 ಕೋಟಿ ರೂ. ಗಳಿಸಿದ ಸಲ್ಮಾನ್ ಅಭಿನಯದ ಚಿತ್ರಗಳ ಪೈಕಿ ರೇಸ್3 ನಾಲ್ಕನೆಯದ್ದಾಗಿದೆ.
ಮೊದಲ ಪ್ರದರ್ಶನದಲ್ಲೇ 29.17 ಕೋಟಿ ರೂ.ಗಳಿಸುವ ಮೂಲಕ ರೇಸ್3 ಚಿತ್ರವು ದೀಪಿಕಾ ಅಭಿನಯದ ಪದ್ಮಾವತಿ ಬಳಿಕ, ಅತ್ಯಧಿಕ ಓಪನಿಂಗ್ ಗಳಿಕೆ ಕಂಡ ಬಾಲಿವುಡ್ ಚಿತ್ರವೆನಿಸಿಕೊಂಡಿದೆ. ಮುಂದಿನ ಎರಡು ವಾರಗಳವರೆಗೆ ಯಾವುದೇ , ಬಿಗ್ಬಜೆಟ್ ಚಿತ್ರಗಳು ತೆರೆಕಾಣುತ್ತಿಲ್ಲವಾದ್ದರಿಂದ, ರೇಸ್3ನ ಓಟ ಅಬಾಧಿತವಾಗಿ ಮುಂದುವರಿಯಲಿದೆಯೆಂದು ಬಾಕ್ಸ್ಆಫೀಸ್ ಪಂಡಿತರು ಲೆಕ್ಕಹಾಕುತ್ತಿದ್ದಾರೆ.