ರವಿವಾರದಿಂದ ಸೌದಿ ಮಹಿಳೆಯರ ವಾಹನ ಚಾಲನೆ
ರಿಯಾದ್, ಜೂ. 23: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಸೌದಿ ಅರೇಬಿಯದ ಮಹಿಳೆಯರು ನಾಳೆ (ರವಿವಾರ)ಯಿಂದ ವಾಹನ ಚಲಾಯಿಸುವ ಅರ್ಹತೆ ಪಡೆಯುತ್ತಾರೆ.
ದೇಶದ ದೊರೆ ಸಲ್ಮಾನ್ರ ಪುತ್ರ ಮುಹಮ್ಮದ್ ಬಿನ್ ಸಲ್ಮಾನ್ ಯುವರಾಜನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೆತ್ತಿಕೊಂಡ ಹಲವಾರು ಸುಧಾರಣಾ ಕ್ರಮಗಳಲ್ಲಿ ಇದು ಪ್ರಮುಖವಾಗಿದೆ.
ಸಾವಿರಾರು ಮಹಿಳೆಯರು ಈಗಾಗಲೇ ವಾಹನ ಚಾಲನಾ ಪರವಾನಿಗೆ ಪಡೆದುಕೊಂಡಿದ್ದು, ನಾಳೆ ಸಾರ್ವಜನಿಕ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ವಾಹನ ಚಲಾಯಿಸುವುದನ್ನು ಎದುರು ನೋಡುತ್ತಿದ್ದಾರೆ.
ಮಹಿಳಾ ಸಬಲಿಕರಣದತ್ತ ಇದೊಂದು ಮಹತ್ವದ ಹೆಜ್ಜೆ ಎಂಬುದಾಗಿ ಭಾವಿಸಲಾಗಿದೆ.
ಹೆಚ್ಚಿನ ಮಹಿಳೆಯರಿಗೆ ಈ ಕ್ರಮವು ಉಳಿತಾಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಈವರೆಗೆ ಈ ಮಹಿಳೆಯರು ತಮ್ಮ ವಾಹನಗಳಿಗೆ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತು.
ಅದೂ ಅಲ್ಲದೆ, ತಮ್ಮ ಪ್ರಯಾಣಕ್ಕಾಗಿ ಮಹಿಳೆಯರು ಕುಟುಂಬದ ಪುರುಷ ಸದಸ್ಯರ ಸಮಯವನ್ನು ವ್ಯರ್ಥಗೊಳಿಸುವುದನ್ನು ನಿಲ್ಲಿಸಬಹುದಾಗಿದೆ.
‘‘ಇದರಿಂದ ನೆಮ್ಮದಿ ದೊರೆತಿದೆ’’ ಎಂದು ‘ಅರೇಬಿಯ ಫೌಂಡೇಶನ್’ನಲ್ಲಿ ಹಿರಿಯ ವಿಶ್ಲೇಷಕಿಯಾಗಿರುವ ನಜಾ ಅಲ್ ಒಟೈಬಿ ಹೇಳುತ್ತಾರೆ.
ಮಹಿಳಾ ಇನ್ಸ್ಪೆಕ್ಟರ್ಗಳ ಮೊದಲ ತಂಡ ಸಿದ್ಧ
ಮಹಿಳಾ ಚಾಲಕರನ್ನೊಳಗೊಂಡ ವಾಹನಗಳು ಅಪಘಾತಕ್ಕೆ ಗುರಿಯಾದ ಸಂದರ್ಭದಲ್ಲಿ ತನಿಖೆ ನಡೆಸುವುದಕ್ಕಾಗಿ ಮಹಿಳಾ ಕಾರು ಅಪಘಾತ ಇನ್ಸ್ಪೆಕ್ಟರ್ಗಳ ಮೊದಲ ತಂಡ ತರಬೇತಿ ಪಡೆಯುತ್ತಿದೆ.
ಖಾಸಗಿ ವಿಮಾ ಕಂಪೆನಿ ‘ನಜಮ್’ನಿಂದ ನೇಮಕಗೊಂಡ 40 ಮಹಿಳಾ ಇನ್ಸ್ಪೆಕ್ಟರ್ಗಳು ಸೌದಿ ಅರೇಬಿಯ ರಾಜಧಾನಿ ರಿಯಾದ್ನಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಡಿಪ್ಲೊಮಾಗಳನ್ನು ಸ್ವೀಕರಿಸಿದರು.