varthabharthi

ನೇಸರ ನೋಡು

ಸಿನೆಮಾಕ್ಕೆ ಸಂದ ಕಥೆಗಾರ

ವಾರ್ತಾ ಭಾರತಿ : 24 Jun, 2018
ಜಿ.ಎನ್.ರಂಗನಾಥ ರಾವ್

ನಾಗತಿಹಳ್ಳಿಯವರಿಗೆ ಸಾಹಿತ್ಯವಾಗಲಿ, ಸಿನೆಮಾ ಆಗಲಿ ಎಂದಿಗೂ ಕೇವಲ ಹವ್ಯಾಸವಾಗಿರಲಿಲ್ಲ. ಎರಡೂ ಮಾರ್ಗಗಳಲ್ಲಿ ಅವರ ಸಂವೇದನೆ ಸಂಪೂರ್ಣವಾಗಿ ಆಧುನಿಕ ಚಿಂತನೆ ಮತ್ತು ಪರಂಪರೆಯ ಅಧ್ಯಯನಶೀಲತೆಗೆ ಬದ್ಧವಾದದ್ದು. ಆಸಕ್ತಿ, ಅಧ್ಯಯನ ಮತ್ತು ಸೃಜನಶೀಲ ಪ್ರತಿಭೆ ಮುಪ್ಪುರಿಗೊಂಡು ಬೆಳೆದ ಲೇಖಕ ನಾಗತಿಹಳ್ಳಿ. ಚಿತ್ರಕಥೆ, ಸಂಭಾಷಣೆ, ಗೀತೆಗಳ ರಚನೆ, ನಿರ್ದೇಶನ, ನಿರ್ಮಾಣ ಹೀಗೆ ಸಿನೆಮಾದ ಎಲ್ಲ ವಿಭಾಗಗಳಲ್ಲೂ ಒಳಹೊಕ್ಕು ಚಲನಚಿತ್ರ ಮಾಧ್ಯಮವನ್ನು ಪೂರ್ತಿಯಾಗಿ ತಮ್ಮ ಸೃಜನಶೀಲ ಪ್ರತಿಭೆಯ ತೆಕ್ಕೆಗೆ ಒಗ್ಗಿಸಿಕೊಳ್ಳುವ ಶ್ರದ್ಧಾಪೂರ್ಣ ಪ್ರಯತ್ನ ಮಾಡಿದ ಸಾಹಿತಿಗಳಲ್ಲಿ ನಾಗತಿಹಳ್ಳಿ ಲಂಕೇಶ್ ನಂತರದ ಪ್ರಮುಖರು.


ಕನ್ನಡ ಚಲನಚಿತ್ರಕ್ಕೂ ಕನ್ನಡ ಸಾಹಿತ್ಯಕ್ಕೂ ಒಂದು ವಿಶಿಷ್ಟ ಬಗೆಯ ನಂಟು ಇದೆ. ಚಲನಚಿತ್ರದ ಹೆಗ್ಗಳಿಕೆ ದೃಶ್ಯ ಮಾಧ್ಯಮವೆನಿಸಿದರೂ ಅದು ಸಾಹಿತ್ಯಾವಲಂಬಿಯೇ. ಮಾತು ದನಿ ಕಳೆದುಕೊಂಡಾಗ ದೃಶ್ಯ ಹೇಗೆ ಅನಿವಾರ್ಯವೋ ಹಾಗೆ ದೃಶ್ಯ ಭಾಷೆಯೂ ಮೂಕಿಯಾದಾಗ ಮಾತಿನ ನೆರವು ಬೇಕಾಗುತ್ತದೆ. ಎಂದೇ ಸಿನೆಮಾದಲ್ಲೂ ಒಂದು ಮಾತಿನ ಮನೆ ಇದೆ. ಈ ಒಂದು ಅವಿನಾಭಾವ ಸಂಬಂಧದಲ್ಲಿ ಒಂದು ವಿಶಿಷ್ಟವಾದ ನಂಟು ಇದೆ. ಈ ವಿಶಿಷ್ಟ ನಂಟು ನಮಗೆ ಎರಡು ಬಗೆಯಲ್ಲಿ ಗೋಚರಿಸುತ್ತದೆ. ಒಂದು, ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳು ಸಿನೆಮಾ ಜಗತ್ತನ್ನು ಆಕರ್ಷಿಸಿ ದೃಶ್ಯ ಮಾಧ್ಯಮದಲ್ಲಿ ಮೆರೆದದ್ದು. ಇನ್ನೊಂದು ಸಿನೆಮಾ ಜಗತ್ತು ಕನ್ನಡದ ಸೃಜನಶೀಲ ಲೇಖಕರನ್ನು ಪ್ರಲೋಭಿಸಿ, ದೃಶ್ಯಕಾವ್ಯ ನಿರ್ಮಾಣಕ್ಕೆ ತನ್ನತ್ತ ಅವರನ್ನು ಸೆಳೆದುಕೊಂಡದ್ದು.

ಸಿನೆಮಾಕ್ಕೂ ಸಾಹಿತ್ಯಕ್ಕೂ ಇರುವ ಸಂಬಂಧ ಟಾಕಿ ಯುಗಾರಂಭದಿಂದಲೇ ಶುರುವಾಗಿ, ಕನ್ನಡದಲ್ಲಿ ಹುಣಸೂರು ಕೃಷ್ಣಮೂರ್ತಿ, ದೇವುಡು, ನರಸಿಂಹಶಾಸ್ತ್ರಿ, ಕು.ರಾ.ಸೀತಾರಾಮ ಶಾಸ್ತ್ರಿಗಳು ಮೊದಲಾದ ಸಾಹಿತ್ಯಾಸಕ್ತರು ಶುರುವಿನಲ್ಲೇ ಇದಕ್ಕೆ ಮೋಹಪರವಶರಾದುದನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ. ಆದರೆ ಈ ವಿಶಿಷ್ಟ ನಂಟು ನಮಗೆ ಎದ್ದು ಕಂಡದ್ದು ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ, ಚದುರಂಗರು ತಮ್ಮ ಕಾದಂಬರಿಗಳನ್ನು ಸ್ವತಃ ನಿರ್ದೇಶಿಸಿ ಸಿನೆಮಾ ಮಾಡಿದಾಗ. ಮುಂದೆ ಚದುರಂಗರಂತೆಯೇ ಹಲವಾರು ಸೃಜನಶೀಲ ಸಂವೇದನೆಯ ಕನ್ನಡ ಕಥಾ ಲೇಖಕರು ಸಿನೆಮಾದ ಪ್ರಭಾವದಿಂದ ಆಕರ್ಷಿತರಾಗಿ ಕನ್ನಡ ಚಲನಚಿತ್ರರಂಗಕ್ಕೆ ದಾಳಿ ಇಟ್ಟರು. ಇವರಲ್ಲಿ ಲಂಕೇಶ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಎಸ್. ದಿವಾಕರ್, ಮಾವಿನಕೆರೆ ರಂಗನಾಥನ್ ಮುಖ್ಯರು. ಈ ಪಟ್ಟಿಯಲ್ಲಿ ಇನ್ನೊಂದು ಮುಖ್ಯವಾದ ಹೆಸರು ಈಗ ಕರ್ನಾಟಕ ಚಲನಚನಚಿತ್ರ ಅಕಾಡಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್.

 ಕನ್ನಡ ಸಾಹಿತ್ಯಕ್ಕೆ ಕೆ.ಎಸ್.ನರಸಿಂಹಸ್ವಾಮಿ, ಎ.ಎನ್.ಮೂರ್ತಿ ರಾವ್, ಅ.ರಾ.ಮಿತ್ರ, ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಂಥ ಪ್ರತಿಭೆಗಳನ್ನು ನೀಡಿರುವ ಕರ್ನಾಟಕದ ಸಿಹಿಸಿಹಿ ಜಿಲ್ಲೆ ಮಂಡ್ಯದ ಮತ್ತೊಂದು ಕೊಡುಗೆ ನಾಗತಿಹಳ್ಳಿ ಚಂದ್ರಶೇಖರ್. ಚಿರಂತನ ಕನಸುಗಾರ ಚಂದ್ರಶೇಖರ್ ಹುಟ್ಟಿದ್ದು (15-8-1958) ಮಂಡ್ಯ ಸಮೀಪದ ನಾಗತಿಹಳ್ಳಿಯಲ್ಲಿ, ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಂದು, ಸ್ವಾತಂತ್ರ್ಯ ಬಂದ ಮಾಹೆಯಲ್ಲಿ. ಕರುಳಬಳ್ಳಿ ಸಂಬಂಧವಾಗಿ ಹುಟ್ಟಿದ ಹಳ್ಳಿ ಹೆಸರಿಗೆ ಅಂಟಿಕೊಂಡು ನಾಗತಿಹಳ್ಳಿ ಚಂದ್ರಶೇಖರ್ ಆದರು. ಪ್ರಾಥಮಿಕ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಎಲ್ಲ ಮಂಡ್ಯ, ಮೈಸೂರುಗಳಲ್ಲಿ. ಬಾಲ್ಯದಿಂದಲೇ ಬೆಳೆದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿನ ಆಸಕ್ತಿ ಮುಂದೆ ಕನ್ನಡ ಸಾಹಿತ್ಯವನ್ನೇ ಸ್ನಾತಕೋತ್ತರ ಅಧ್ಯಯನಕ್ಕೆ ಆರಿಸಿಕೊಳ್ಳಲು ಪ್ರೇರಣೆಯಾಗಿರಬೇಕು. ಮಾನಸಗಂಗೋತ್ರಿಯ ಪರಿಸರ ಯುವಜನರಿಗೆ ಕನಸು ಕಾಣಲು ಹದವಾದ ನೆಲವಾಗಿದ್ದ ದಿನಗಳು. ಸಾಹಿತ್ಯ ಕಲೆಗಳ ಕನಸು ಕಾಣುತ್ತ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಪ್ರವೃತ್ತಿಯಾಗಿ ಒಗ್ಗಿ ಬಂದಿದ್ದ ಕನ್ನಡ ಭಾಷೆ ಮತ್ತು ಸಾಹಿತ್ಯ ಬೋಧನೆಯನ್ನೇ ವೃತ್ತಿಯಾಗಿ ಆರಿಸಿಕೊಂಡರು.

ಕನ್ನಡ ಸಾಹಿತ್ಯ ಬೋಧಿಸುತ್ತಲೇ ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯ ರಚನೆಯಲ್ಲಿ ಪ್ರಯೋಗಶೀಲರಾದರು. ನಾಗತಿಹಳ್ಳಿಯವರ ಸೃಜನಶೀಲ ಪ್ರತಿಭೆ ಮೊದಲು ದಾಂಗುಡಿ ಇಟ್ಟಿದ್ದು ಸಣ್ಣ ಕಥೆಯಲ್ಲಿ. ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ನಾಗತಿಹಳ್ಳಿಯವರ ಕಥೆಗಳು ಪ್ರಕಟವಾಗತೊಡಗಿದವು. ‘ಹದ್ದುಗಳು’ ಮೊದಲ ಕಥಾ ಸಂಕಲನ. ನಾಗತಿಹಳ್ಳಿಯವರು ಇಲ್ಲಿಯವರೆಗೆ ಸುಮಾರು ಹನ್ನೆರಡು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಡಜನ್‌ಮೇಲೊಂದು ‘ಪ್ರೇಮ ಕಥಾ ಸಂಪುಟವೂ’ ಬಂದಿದೆ. ನಾಗತಿಹಳ್ಳಿಯವರ ಕಥೆಗಳಲ್ಲಿ ವಸ್ತು ವೈವಿಧ್ಯತೆ ಇದೆ, ಕಾವ್ಯಮಯತೆ ಇದೆ. ಶೋಷಿತ ಗ್ರಾಮ ಸಮಾಜ, ಶೋಷಿತ ಸ್ತ್ರೀಯರ ಕರುಣಾಜನಕ ಬದುಕು, ಬಡತನ, ಸಾಮಾಜಿಕ ವಿಡಂಬನೆ, ರಾಜಕೀಯ ವಿಡಂಬನೆ, ಹದಿಹರೆಯದ ಪ್ರೇಮ, ಸಮಾಜ ಸುಧಾರಣೆಯ ಆದರ್ಶ, ಕನಸುಗಾರಿಕೆ ಹೀಗೆ ನಾಗತಿಹಳ್ಳಿಯವರ ಕಥೆಗಳ ಹಾಸುಬೀಸು ದೊಡ್ಡದು. ವಿಮರ್ಶಕರು ಗುರುತಿಸಿರುವಂತೆ ನಾಗತಿಹಳ್ಳಿಯವರಲ್ಲಿ ಒಳ್ಳೆಯ ಕತೆಗಾರಿಕೆ ಇದೆ. ಆದರ್ಶ, ಬದುಕಿನ ಕಟುವಾಸ್ತವತೆಯ ದರ್ಶನ ಮತ್ತು ಕನಸುಗಾರಿಕೆಗಳಿಂದ, ವಿಮರ್ಶೆ-ವಿಡಂಬನೆಗಳಿಂದ ಹದಗೊಂಡ ಕತೆಗಾರಿಕೆ ಇದು.

‘ಮನೆಗೆ ಬಂದ ಮಹಾಲಕ್ಷ್ಮೀ’ ಅವರ ಪ್ರಸಿದ್ಧ ಕಥೆಗಳಲ್ಲಿ ಒಂದು. ವೇಶ್ಯೆಯೊಬ್ಬಳು ‘ಗೃಹಲಕ್ಷ್ಮೀ’ಯಾಗುವ ಕನಸುಗಳು ಇಲ್ಲಿ ಹೃದಯಂಗಮವಾಗಿ ಮೂಡಿಬಂದಿದೆ. ವಸ್ತು ವೈವಿಧ್ಯತೆಯಂತೆಯೇ ಭಾಷಾಪ್ರಯೋಗದಲ್ಲೂ ನಾಗತಿಹಳ್ಳಿಯವರ ವಿಶೇಷ ಛಾಪನ್ನು ನಾವು ಅವರ ಕಥೆಗಳಲ್ಲಿ ಕಾಣಬಹುದು. ಭಾಷೆಯ ಬಳಕೆಯಲ್ಲಿ ನಾಗತಿಹಳ್ಳಿಯವರು ತೋರುವ ಕಲಾತ್ಮಕ ಸಂಯಮ ಮತ್ತು ಭಾಷೆಯ ಸೃಜನಶೀಲ ಸಾಧ್ಯತೆಗಳ ಅರಿವು ಇವುಗಳಿಂದಾಗಿ ನಾಗತಿಹಳ್ಳಿಯವರ ಕಥೆಗಳು ಕಾವ್ಯಾತ್ಮಕವಾಗಿ ಹೆಚ್ಚಿನ ಪರಿಣಾಮ ಸಾಧಿಸುತ್ತವೆ. ಲಂಕೇಶ್ ನಂತರ ಕನ್ನಡ ಚಿತ್ರೋದ್ಯಮದಲ್ಲಿ ವೃತ್ತಿನಿಷ್ಠೆಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡವರಲ್ಲಿ ಮೊದಲಿಗರು ನಾಗತಿಹಳ್ಳಿ ಚಂದ್ರಶೇಖರ್. ಅವರಿಗೆ ಸಾಹಿತ್ಯವಾಗಲಿ ಸಿನೆಮಾ ಆಗಲಿ ಎಂದಿಗೂ ಕೇವಲ ಹವ್ಯಾಸವಾಗಿರಲಿಲ್ಲ. ಎರಡೂ ಮಾರ್ಗಗಳಲ್ಲಿ ಅವರ ಸಂವೇದನೆ ಸಂಪೂರ್ಣವಾಗಿ ಆಧುನಿಕ ಚಿಂತನೆ ಮತ್ತು ಪರಂಪರೆಯ ಅಧ್ಯಯನಶೀಲತೆಗೆ ಬದ್ಧವಾದದ್ದು. ಆಸಕ್ತಿ, ಅಧ್ಯಯನ ಮತ್ತು ಸೃಜನಶೀಲ ಪ್ರತಿಭೆ ಮುಪ್ಪುರಿಗೊಂಡು ಬೆಳೆದ ಲೇಖಕ ನಾಗತಿಹಳ್ಳಿ.

ಚಿತ್ರಕಥೆ, ಸಂಭಾಷಣೆ, ಗೀತೆಗಳ ರಚನೆ, ನಿರ್ದೇಶನ, ನಿರ್ಮಾಣ ಹೀಗೆ ಸಿನೆಮಾದ ಎಲ್ಲ ವಿಭಾಗಗಳಲ್ಲೂ ಒಳಹೊಕ್ಕು ಚಲನಚಿತ್ರ ಮಾಧ್ಯಮವನ್ನು ಪೂರ್ತಿಯಾಗಿ ತಮ್ಮ ಸೃಜನಶೀಲ ಪ್ರತಿಭೆಯ ತೆಕ್ಕೆಗೆ ಒಗ್ಗಿಸಿಕೊಳ್ಳುವ ಶ್ರದ್ಧಾಪೂರ್ಣ ಪ್ರಯತ್ನ ಮಾಡಿದ ಸಾಹಿತಿಗಳಲ್ಲಿ ನಾಗತಿಹಳ್ಳಿ ಲಂಕೇಶ್ ನಂತರದ ಪ್ರಮುಖರು. ಕಥಾ ಸಾಹಿತ್ಯ ರಚನೆಯಲ್ಲಿ ಮಗ್ನರಾಗಿದ್ದ ನಾಗತಿಹಳ್ಳಿಯವರನ್ನು ಕನ್ನಡ ಚಲನಚಿತ್ರ ರಂಗ ಕಣ್‌ಮಿಟುಕಿಸಿ ಕರೆದದ್ದು 1980ರ ದಶಕದ ಮಧ್ಯದಲ್ಲಿ. ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆಯುವುದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕಾಡಿನ ಬೆಂಕಿ, ಪ್ರಥಮ ಉಷಾಕಿರಣ, ಉದ್ಭವ ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದರು. 1988ರಲ್ಲಿ ‘ಸಂಕ್ರಾಂತಿ’ ಚಿತ್ರಕ್ಕೆ ಕಥೆ ಮತ್ತು ಗೀತೆಗಳನ್ನು ರಚಿಸಿದರು. ಚಲನಚಿತ್ರ ಹೇಳಿಕೇಳಿ ನಿರ್ದೇಶಕನ ಮಾಧ್ಯಮ. ಚಿತ್ರರಂಗದ ಆಳ-ಅಗಲ, ವಿಸ್ತಾರ, ಅದರ ಸಾಹಿತ್ಯ ಸೌಷ್ಠವ, ತಾಂತ್ರಿಕ ಹಿರಿಮೆ ಇವೆಲ್ಲದರ ಸಮ್ಯಕ್ ದರ್ಶನವಾಗಬೇಕಾದರೆ ನಿರ್ದೇಶಕನಾಗಿ ಚಲನಚಿತ್ರ ಸಾಗರದಲ್ಲಿ ಒಂದು ಮುಳುಗು ಹಾಕಲೇ ಬೇಕು. ಇಂಥದೊಂದು ಕುತೂಹಲ, ಅದಮ್ಯ ಬಯಕೆ ನಾಗತಿಹಳ್ಳಿಯವರನ್ನು ಕಾಡಿರಬೇಕು. ಎಂದೇ 1990ರಲ್ಲಿ ನಿರ್ದೇಶನಕ್ಕೆ ಇಳಿದರು.

ಚಲನಚಿತ್ರ ಸಾಗರದಲ್ಲಿ ಮುಳುಗು ಹಾಕಿ ಮುತ್ತುರತ್ನಗಳನ್ನು ತರುವ ಪ್ರಯತ್ನ ಮಾಡಿದರು. ‘ಉಂಡೂ ಹೋದ ಕೊಂಡೂ ಹೋದ’ ನಾಗತಿಹಳ್ಳಿ ಚಂದ್ರಶೇಖರ್ ಅವರ ಮೊದಲ ನಿರ್ದೇಶನದ ಚಿತ್ರ. ಅನಂತನಾಗ್ ಮತ್ತು ತಾರಾ ಪ್ರಧಾನ ಭೂಮಿಕೆಯಲ್ಲಿರುವ ನಾಗತಿಹಳ್ಳಿಯವರ ಈ ಚಿತ್ರ ‘ಪ್ರಥಮ ಚುಂಬನಂ ದಂತಭಗ್ನಂ’ ಎಂಬ ನಾಣ್ನುಡಿಗೆ ಅಪವಾದವೆಂಬಂತೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತು, ಕರ್ನಾಟಕ ಸರಕಾರದ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು. ಈ ವಿನೋದ ಪ್ರಧಾನ ಚಿತ್ರದಿಂದ ನಿರ್ದೇಶಕನ ಪಟ್ಟಕ್ಕೇರಿದ ನಾಗತಿಹಳ್ಳಿಗೆ ಹಿಂದಿರುಗಿ ನೋಡಲು ಪುರುಸೊತ್ತೇ ಸಿಕ್ಕಂತೆ ಕಾಣುತ್ತಿಲ್ಲ. ನಂತರ ಅವರ ನಿರ್ದೇಶನದಲ್ಲಿ ಸಾಲಾಗಿ ಬಂದವು, ‘ಬಾ ನಲ್ಲೆ ಮಧುಚಂದ್ರಕೆ’(1993), ‘ಕೊಟ್ರೇಶಿ ಕನಸು’(1994), ‘ಅಮೆರಿಕ ಅಮೆರಿಕ’(1995), ‘ಹೂಮಾಲೆ’(1996), ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’(2000) ಚಿತ್ರಗಳು. ರಂಜನೆ-ರಸಾಭಿಜ್ಞತೆ-ಕಲಾತ್ಮಕತೆ ಸೂತ್ರದ ನಾಗತಿಹಳ್ಳಿಯವರ ಟಿಪಿಕಲ್ ಟಚ್‌ನ ಚಿತ್ರಗಳು. ‘ಹೂಮಾಲೆ’ ನಾಗತಿಹಳ್ಳಿಯವರಿಗೆ ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿಯ ಹಿಗ್ಗು ತಂದುಕೊಟ್ಟ ಚಿತ್ರ. ‘ಅಮೃತ ಧಾರೆ’ ಮತ್ತು ‘ಮಾತಾಡ್ ಮಾತಾಡು ಮಲ್ಲಿಗೆ’ ರಾಜ್ಯಪ್ರಶಸ್ತಿಗೆ ಭಾಜನವಾದವು. ‘ಮಾತಾಡ್ ಮಾತಾಡು ಮಲ್ಲಿಗೆ’ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

 ನಾಗತಿಹಳ್ಳಿ ಚಂದ್ರಶೇಖರ್ ಅವರ ಚಲನಚಿತ್ರ ರಂಗದ ಅನುಭವ ಮೂರು ದಶಕಗಳಿಗೂ ಮೀರಿದ್ದು. ಈ ಅವಧಿಯಲ್ಲಿ ಅವರು ಹದಿನೈದು ಚಿತ್ರಗಳನ್ನು ಕೊಟ್ಟಿದ್ದಾರೆ. ಕಿರು ತೆರೆಗೆ ಹತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮಧ್ಯೆ ಬಿಡುವಿನಲ್ಲಿ ಅಭಿನಯ ಇತ್ಯಾದಿ ಸಿನೆಮಾ ಬಾಬುಗಳಲ್ಲಿ ಎಳೆಯ ತಲೆಮಾರಿಗೆ ತರಬೇತಿ ನೀಡುವ ಕಾರ್ಯದಲ್ಲೂ ನಿರತರು. ಅವರ ಈ ಅನುಭವವನ್ನು ಅರಸಿಕೊಂಡು ಬಂದಿದೆ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸ್ಥಾನ. ಇದು ನಾಗತಿಹಳ್ಳಿಯವರ ಸೃಜನಶೀಲ ಪ್ರತಿಭೆ, ಪರಿಣತಿ ಮತ್ತು ಅನುಭವಕ್ಕೆ ಸಂದಿರುವ ಗೌರವ. ಸಹಜವಾಗಿಯೇ ಅಭಿಮಾನಿಗಳಲ್ಲಿ ಕೆಲವು ನಿರೀಕ್ಷೆಗಳನ್ನು ಹುಟ್ಟಿಸಿರುವ ಹೊಣೆಗಾರಿಕೆ. ರಾಜ್ಯದಲ್ಲಿ ಚಲನಚಿತ್ರ ಸಂಸ್ಕೃತಿಯ ಸಂವರ್ಧನೆ ಉದ್ದೇಶದಿಂದ ಕರ್ನಾಟಕ ಸರಕಾರ 2009ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿಯನ್ನು ಸ್ಥಾಪಿಸಿತು. ಸಂಸ್ಕೃತಿಯ ಅರ್ಥವ್ಯಾಪ್ತಿ ಸಾಗರದಷ್ಟು ವಿಸ್ತಾರವಾದುದು. ಎಂದೇ ಕೆಲಸ ಮಾಡುವ ಹುಮ್ಮಸ್ಸು ಇದ್ದಲ್ಲಿ, ಧನ ಬೆಂಬಲವಿದ್ದಲ್ಲಿ ಅವಕಾಶಗಳೂ ಅಪರಿಮಿತ.

ಕರ್ನಾಟಕ ಚಲನಚಿತ್ರ ಅಕಾಡಮಿ ವರ್ಷಕ್ಕೊಮ್ಮೆ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವುದು, ಚಿತ್ರ ಮಾಧ್ಯಮ ಕುರಿತು ವಿಚಾರ ಸಂಕಿರಣಗಳು, ಹಿರಿಯ ನಿರ್ದೇಶಕರ ಸಾಧನೆಗಳನ್ನು ಬಿಂಬಿಸುವ ಸಮಾರಂಭಗಳು ಹೀಗೆ ತನ್ನ ಇತಿಮಿತಿಯೊಳಗೆ ಕೆಲಸ ಮಾಡಿಕೊಂಡು ಬಂದಿದೆ. ರಾಜ್ಯದಲ್ಲಿ ಸಿನೆಮಾ ಸಂಸ್ಕೃತಿ ಸಂವರ್ಧನೆಯಾಗಬೇಕಾದರೆ ಕರ್ನಾಟಕ ಚಲನಚಿತ್ರ ಅಕಾಡಮಿ ಬೆಂಗಳೂರು ಮಹಾನಗರಕ್ಕಷ್ಟೆ ಸೀಮಿತವಾಗಬಾರದು. ಅದರ ಕಾರ್ಯಚಟುವಟಿಕೆಗಳು ಜಿಲ್ಲೆ ಮತ್ತು ತಾಲೂಕು ಮಟ್ಟಕ್ಕೂ ಚಾಚಿಕೊಳ್ಳುವುದು ಅಪೇಕ್ಷಣೀಯ. ಹೊಸ ತಲೆಮಾರಿನವರಲ್ಲಿ ಸಾಹಿತ್ಯ, ಕಲೆಗಳಲ್ಲಿ ಅಭಿರುಚಿ/ಹೊಸ ಅಭಿರುಚಿಗಳನ್ನು ಬೆಳೆಸುವ ಕಾರ್ಯ ಪ್ರೌಢ ಶಾಲೆಯ ಶಿಕ್ಷಣ ಹಂತದಿಂದಲೇ ಆರಂಭವಾಗಬೇಕಾದ್ದು ಅಪೇಕ್ಷಣೀಯ. ಆದರೆ ನಮ್ಮ ಪ್ರೌಢ ಶಾಲೆಗಳ ಪಠ್ಯಕ್ರಮಗಳಲ್ಲಿ ಇದರ ಸುಳಿವೂ ಸಿಗುವುದಿಲ್ಲ. ನಮ್ಮ ಅಕಾಡಮಿಗಳು ಈ ನಿಟ್ಟಿನಲ್ಲಿ ಗಮನಹರಿಸುವುದು ಸೂಕ್ತವಾದೀತು.

ಶಾಲೆಗಳು ತಿಂಗಳಿಗೊಮ್ಮೆಯಾದರೂ ಒಂದೆರಡು ಪೀರಿಯಡ್ಡುಗಳನ್ನು ಸಾಹಿತ್ಯ, ಕಲೆಗಳಲ್ಲಿ ಅಭಿರುಚಿ ರೂಢಿಸುವ ಶಿಕ್ಷಣಕ್ಕೆ ಮೀಸಲಿಡಬೇಕು. ಚಲನಚಿತ್ರ ಅಕಾಡಮಿ ಶಾಲೆಗಳ ವಿದ್ಯಾರ್ಥಿಗಳಿಗೆ ಒಳ್ಳೆಯ ಚಿತ್ರಗಳನ್ನು ತೋರಿಸಿ, ಅವುಗಳ ನಿರ್ದೇಶಕರು/ತಂತ್ರಜ್ಞರನ್ನು ಪರಿಚಯಿಸಿ, ಅವರಿಂದ ಚಲನಚಿತ್ರ ಮಾಧ್ಯಮ ಕುರಿತು ಉಪನ್ಯಾಸ ಕೊಡಿಸಬೇಕು. ಚರ್ಚೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಚಲನಚಿತ್ರ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಹೆಜ್ಜೆಯಾದೀತು. ಜೊತೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಚಲನಚಿತ್ರ ಕ್ಲಬ್ಬು/ಸೊಸೈಟಿಗಳಿಗೂ ಇಂಥ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಬೇಕು. ಕನ್ನಡದಲ್ಲಿ ಹೊಸ ಅಲೆ ಚಿತ್ರ ಬರುತ್ತಿದ್ದ ಕಾಲಘಟ್ಟದಲ್ಲಿ ರಾಜ್ಯದ ಕೆಲವೆಡೆ ಫಿಲ್ಮ್ ಸೊಸೈಟಿಗಳು ಅಭಿರುಚಿ/ಹೊಸಭಿರುಚಿ ಮೂಡಿಸುವ ನಿಟ್ಟಿನಲ್ಲಿ, ಕಿರುಚಿತ್ರಗಳನ್ನು ತಯಾರಿಸುವುದರಲ್ಲಿ ಕಾರ್ಯಪ್ರವೃತ್ತವಾಗಿದ್ದವು. ಈಗ ಅಂತಹ ಚಟುವಟಿಕೆಯ ವರದಿಗಳು ಅಷ್ಟಾಗಿ ಬರುತ್ತಿಲ್ಲ. ಫಿಲ್ಮ್ ಸೊಸೈಟಿಗಳ ಮೂಲಕ ಚಲನಚಿತ್ರ ಅಭಿರುಚಿ ಮತ್ತು ರಸಾಭಿಜ್ಞತೆಗಳನ್ನು ಮೂಡಿಸುವ ಇಂಥ ಚಳವಳಿಯನ್ನು ಪುನುರುಜ್ಜೀವಗೋಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಫಿಲ್ಮ್ ಕ್ಲಬ್ಬುಗಳು ಮತ್ತು ಫಿಲ್ಮ್ ಸೊಸೈಟಿಗಳನ್ನು ಪ್ರಾರಂಭಿಸುವುದಾಗಿ ಮೊನ್ನೆಯಷ್ಟೆ ಅಧಿಕಾರ ವಹಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಹೇಳಿರುವುದು ಸ್ವಾಗತಾರ್ಹವಾದುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)