varthabharthi

ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಕ್ವಿಟ್ ಇಂಡಿಯಾ-ನಾಯಕರ ಮಿತಿಗಳು

ವಾರ್ತಾ ಭಾರತಿ : 7 Jul, 2018
-ಕಾರುಣ್ಯಾ

ಸ್ವಾತಂತ್ರ ಹೋರಾಟ ಕಾಲಘಟ್ಟ ತನ್ನೊಳಗೆ ಹಲವು ರಾಜಕೀಯ ಒಳಸುಳಿಗಳನ್ನು ಬಚ್ಚಿಟ್ಟುಕೊಂಡಿದೆ. ನಾವಿಂದು ಇತಿಹಾಸವನ್ನು ಓದುವಂತೆ ರಮ್ಯ, ರೋಚಕವಾಗಿಯೇನೂ ಅದು ಇದ್ದಿರಲಿಲ್ಲ. ಅಲ್ಲೂ ಬಿಕ್ಕಟ್ಟುಗಳಿದ್ದವು. ಭಿನ್ನಮತಗಳಿದ್ದವು. ಪರಸ್ಪರ ಸಂಚುಗಳಿದ್ದವು. ಎಲ್ಲ ನಾಯಕರಿಗೂ ತಮ್ಮದೇ ಆದ ಮಿತಿಗಳಿದ್ದವು. ಭಾರತಕ್ಕೆ ಸ್ವಾತಂತ್ರ ದೊರಕುವಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿ ಅತ್ಯಂತ ಮಹತ್ವಪೂರ್ಣ ಪಾತ್ರವಹಿಸಿತು ಎಂದು ನಾವೆಲ್ಲ ಓದಿದ್ದೇವೆ. ಆದರೆ ನಾವು ಓದಿದಷ್ಟೇ ಅಲ್ಲ, ಅದರಾಚೆಗೂ ಕೆಲವು ಸತ್ಯಗಳಿವೆ ಎನ್ನುವುದನ್ನು ಯಡೂರ ಮಹಾಬಲ ಅವರು ಬರೆದಿರುವ ‘ಕ್ವಿಟ್ ಇಂಡಿಯಾ-ಚಳವಳಿಯ ಒಳಗುಟ್ಟುಗಳು’ ಕೃತಿ ಹೇಳು ತ್ತದೆ. ಕ್ವಿಟ್ ಇಂಡಿಯಾ ಚಳವಳಿಯ ಬಗೆಗೆ ನಮಗಿರುವ ಅಜ್ಞಾನವನ್ನು, ಪೂರ್ವಗ್ರಹಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಈ ಕೃತಿಯನ್ನು ಬರೆದಿದ್ದೇನೆ ಎಂದು ಲೇಖಕರು ಹೇಳಿಕೊಳ್ಳುತ್ತಾರೆ. ಕ್ವಿಟ್ ಇಂಡಿಯಾಕ್ಕೆ ಸಂಬಂಧಿಸಿದಂತೆ ನಾಲ್ಕು ಸುದೀರ್ಘ ಲೇಖನಗಳಿವೆ. ಈ ಹೋರಾಟದ ಪರಿಣಾಮ, ಅದರ ಮಿತಿಗಳನ್ನು ಈ ಲೇಖನಗಳು ವಿಮರ್ಶೆ ಮಾಡುತ್ತವೆ. ಮುಖ್ಯವಾಗಿ ಗಾಂಧೀಯನ್ನೇ ಕೇಂದ್ರವಾಗಿಟ್ಟುಕೊಂಡು ಕ್ವಿಟ್ ಇಂಡಿಯಾ ಚಳವಳಿಯ ಸೋಲು ಗೆಲುವುಗಳನ್ನು ಚರ್ಚಿಸಲಾಗಿದೆ. ಕ್ವಿಟ್ ಇಂಡಿಯಾ ಚಳವಳಿಯನ್ನು ವಸ್ತು ನಿಷ್ಠವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಎರಡನೇ ಮಹಾಯುದ್ಧದ ಯುದ್ಧಪೂರ್ವ ಹಾಗೂ ಯುದ್ಧ ಕಾಲದ ಘಟನೆಗಳನ್ನು ವಸ್ತು ನಿಷ್ಠವಾಗಿ ಅರ್ಥ ಮಾಡಿಕೊಳ್ಳಬೇಕಾಗು ತ್ತದೆ. ಈ ಸಂದರ್ಭದ ಸಂಕೀರ್ಣ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲಲು ಕೃತಿ ಪ್ರಯತ್ನಿಸುತ್ತದೆ. ಕೃತಿಯಲ್ಲಿ ಗಾಂಧೀಜಿಯ ವಿಗ್ರಹ ಭಂಜನೆಯ ಕೆಲಸ ಉದ್ದಕ್ಕೂ ನಡೆಯುತ್ತದೆ.ಮತ್ತು ಅದಕ್ಕೆ ಪೂರಕವಾದ ಕಾರಣಗಳನ್ನೂ ಕೊಡುತ್ತಾರೆ. ಗಾಂಧೀಜಿ ಸುಭಾಶ್ಚಂದ್ರ ಬೋಸರ ನಡುವಿನ ತಿಕ್ಕಾಟ, ಚುನಾವಣೆಯಲ್ಲಿ ಬೋಸರು ಗೆದ್ದರೂ ಹೇಗೆ ಗಾಂಧೀಜಿ ಭಾವನಾತ್ಮಕವಾಗಿ ಅವರನ್ನು ಕೆಡವಲು ನೋಡುತ್ತಾರೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಗಾಂಧೀಜಿ ಮಹಾತ್ಮರಲ್ಲ, ಎಲ್ಲ ರಾಜಕಾರಣಿಗಳಂತೆಯೇ ಸಣ್ಣ ಮನಸ್ಸುಳ್ಳವರು ಎನ್ನುವುದನ್ನು ಎತ್ತಿ ತೋರಿಸುವ ಉದ್ದೇಶ ಇಲ್ಲಿ ಲೇಖಕರದ್ದಾಗಿದೆ. ಗಾಂಧೀಜಿಯ ಕುರಿತಂತೆ ಬೇರೆ ಬೇರೆ ನಾಯಕರು ಹೊಂದಿದ್ದ ಅಭಿಪ್ರಾಯಗಳನ್ನೂ ಇಲ್ಲಿ ಉಲ್ಲೇಖ ಮಾಡಲಾಗಿದೆ.

ಲೇಖಕರು ಎಡಪಂಥೀಯ ಧೋರಣೆಗಳನ್ನು ಹೊಂದಿದವರಾಗಿರುವುದರಿಂದಲೋ ಏನೋ, ಗಾಂಧೀಜಿಯನ್ನು ಶೇ. 5ರಷ್ಟು ಮಾತ್ರ ಸ್ವೀಕರಿಸುತ್ತಾರೆ. ಗಾಂಧಿ ಸಾಹಿತ್ಯದಲ್ಲಿ ಶೇ. 95ರಷ್ಟು ಕೆಲಸಕ್ಕೆ ಬಾರದ ನಿರರ್ಥಕ ಗೊಜ್ಜಲು ಎಂದು ಅವರು ಹೇಳುತ್ತಾರೆ. ಭಾರತೀಯ ನೆಲದಲ್ಲಿ ಗಾಂಧೀಜಿ ಪ್ರಭಾವಿಸಿದಷ್ಟು ಎಡ ಪಂಥೀಯ ಚಿಂತನೆ ಪ್ರಭಾವಿಸಿಲ್ಲ ಎನ್ನುವುದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಇಂದು ಕಾಂಗ್ರೆಸ್‌ನ ಜಾತ್ಯತೀತ ಚಿಂತನೆಗಳಲ್ಲಾಗಲಿ, ಬಲಪಂಥೀಯ ಚಿಂತನೆಗಳಲ್ಲಾಗಲಿ ತಿಳಿದೋ ತಿಳಿಯದೆಯೋ ಗಾಂಧಿ ಯ ಪ್ರಭಾವ ಇದ್ದೇ ಇದೆ. ಗಾಂಧೀಜಿ ಈ ನೆಲದ ಕೆಲವು ಸತ್ಯಗಳನ್ನು ಹಾಗೆಯೇ ಕೆಲವು ಮಿತಿಗಳನ್ನು ಸ್ಪಷ್ಟವಾಗಿ ಅರಿತಿದ್ದರು. ಆದುದರಿಂದ ಮೇಲ್ವರ್ಗ ಮತ್ತು ಕೆಳವರ್ಗ, ಹಾಗೆಯೇ ಹಿಂದೂ-ಮುಸ್ಲಿಮ್ ಇವೆರಲ್ಲರನ್ನೂ ಸಮನ್ವಯಗೊಳಿಸಬಹುದಾದ ಒಂದು ದಾರಿಯನ್ನು ಹುಡುಕುವುದಕ್ಕೆ ಬದುಕಿನುದ್ದಕ್ಕೂ ಪ್ರಯತ್ನಿಸಿದರು. ಅದರಲ್ಲಿ ಅವರು ಯಶಸ್ವಿಯಾದರು ಎಂದು ಹೇಳುವಂತಿಲ್ಲ.

ಆದರೆ ಹುಡುಕಾಟದ ದಾರಿ, ನಾಥೂರಾಂ ಗೋಡ್ಸೆಯಂತಹ ಉಗ್ರವಾದಿ ಅವರನ್ನು ಕೊಲ್ಲಲೇ ಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು ಎನ್ನುವುದನ್ನು ನಾವು ಮರೆಯಲಾಗದು. ಗಾಂಧೀಜಿಗೆ ಹೇಗೆ ಮಿತಿಗಳಿವೆಯೋ ಹಾಗೆಯೇ ಸುಭಾಶ್ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್‌ರಂತಹ ನಾಯಕರಿಗೂ ಮಿತಿಗಳಿವೆ. ಗಾಂಧಿಯನ್ನು ವಿರೋಧಿಸುತ್ತಾ ನೇತಾಜಿಯವರು ಕೊನೆಗೆ ತಲುಪಿದ್ದು ಹಿಟ್ಲರ್‌ನ ಬಳಿಗೆ ಎನ್ನುವುದು ಚರ್ಚೆಗೆ ಅರ್ಹವಾಗಿರುವ ವಿಷಯ. ಈ ದೇಶ ಇಂದು ಇಷ್ಟಾದರೂ ಪ್ರಜಾಸತ್ತಾತ್ಮಕವಾಗಿರುವುದಕ್ಕೆ ಗಾಂಧೀಜಿಯ ಕೊಡುಗೆ ಮರೆಯಲಾಗದು. ಹಾಗೆಯೇ ಗಾಂಧಿ-ಅಂಬೇಡ್ಕರ್ ತಿಕ್ಕಾಟಗಳೂ ಸ್ವಾತಂತ್ರ ಹೋರಾಟದಲ್ಲಿ ಪ್ರಮುಖವಾದ ಅಂಶ. ಆ ಬಗ್ಗೆ ಕೃತಿ ಹೆಚ್ಚು ಚರ್ಚೆ ಮಾಡುವುದಿಲ್ಲ. ಲಡಾಯಿ ಪ್ರಕಾಶನ ಗದಗ ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 176. ಮುಖಬೆಲೆ 140 ರುಪಾಯಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)