varthabharthi

ಅನುಗಾಲ

ಅರ್ಧಸತ್ಯದ ಸಮಾಜ

ವಾರ್ತಾ ಭಾರತಿ : 12 Jul, 2018
ಬಾಲಸುಬ್ರಹ್ಹಣ್ಯ ಕಂಜರ್ಪಣೆ

ನಮ್ಮ ಜನರಿಗೆ ಅರ್ಧ ಸತ್ಯವೂ ಬೇಡ. ಸುಳ್ಳಿನ ಕೋಟೆಯೊಳಗೆ ವಿಹರಿಸಲು ಕಾತರರು. ತಮಗೆ ಅದು ಸುಳ್ಳೆಂದು ಗೊತ್ತಿದ್ದರೂ ಗೊತ್ತಾದರೂ ಅದನ್ನು ಸತ್ಯವೆಂದೇ ನಂಬಿ(ಸಿ), ಬಿಂಬಿಸಿ ಹಬ್ಬಿಹರಡಿಸುವ ಕಾರ್ಯಕ್ಕೆ ತೊಡಗುತ್ತಾರೆ. ಇದರಿಂದಾಗಿ ಬಹುತೇಕ ಸುಳ್ಳುಗಳೇ ಸತ್ಯದ ಮುಖವಾಡ ಹಾಕಿ ಮೆರವಣಿಗೆಯಲ್ಲಿ ಸಾಗುತ್ತವೆ. 


ಸ್ಥಳೀಯ ಕನ್ನಡ ಪತ್ರಿಕೆಯೊಂದು ಹೀಗೆ ಪ್ರಕಟಿಸುತ್ತಿದೆ: ‘‘ಜಾಹೀರಾತುಗಳ ಸತ್ಯಾಸತ್ಯತೆಗೆ ಪತ್ರಿಕೆ ಜವಾಬ್ದಾರವಾಗುವುದಿಲ್ಲ. ಓದುಗರು ಪರಿಶೀಲಿಸಿ ಕೊಳ್ಳುವಂತೆ ಕೋರಿಕೆ.’’ ಮೊದಲ ನೋಟಕ್ಕೆ ವಿಶೇಷ ಮತ್ತು ವಿಚಿತ್ರವೆಂದೆನ್ನಿಸಿದರೂ ಹೀಗೆ ಪ್ರಕಟಿಸುವ ಮೂಲಕ ಈ ಪತ್ರಿಕೆಯು ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಯನ್ನೇ ಪ್ರದರ್ಶಿಸಿತ್ತು. ಏಕೆಂದರೆ ಜಗತ್ತೇ ಮಾರುಕಟ್ಟೆಮಯವಾಗಿರುವ ಈ ಕಾಲದಲ್ಲಿ ಜನರನ್ನೆಚ್ಚರಿಸುವ ಒಂದು ಬಗೆ ಹೀಗೆ. ಆದರೆ ಇದೇ ಮಾನದಂಡವನ್ನು ಸುದ್ದಿಗೂ ಅನ್ವಯಿಸಿದರೆ ಹೇಗೆ? ಎಂದೆನ್ನಿಸಿತು. ಆಗ ಪತ್ರಿಕೆಗಳು ‘‘ಸುದ್ದಿಗಳ ಸತ್ಯಾಸತ್ಯತೆಗೆ ಪತ್ರಿಕೆ ಜವಾಬ್ದಾರವಾಗುವುದಿಲ್ಲ. ಓದುಗರು ಪರಿಶೀಲಿಸಿ ಕೊಳ್ಳುವಂತೆ ಕೋರಿಕೆ.’’ ಮೊದಲಿನ ಪ್ರಕಟನೆಯಲ್ಲಿ ‘ಕೊಳ್ಳುವಂತೆ’ ಎಂಬ ಪದವು ಜಾಹೀರಾತಿನಲ್ಲಿ ವಿವರಿಸಲಾದ ವಸ್ತು/ಸಾಮಗ್ರಿಗೆ ಸಂಬಂಧಿಸಿದರೆ ಎರಡನೆಯ ಪ್ರಕಟನೆಯು ಪತ್ರಿಕೆಗೇ ಅನ್ವಯಿಸಬಹುದಲ್ಲವೇ? ಜಾಹೀರಾತುಗಳ ಸತ್ಯಾಸತ್ಯತೆಗೆ ಅದನ್ನು ಪ್ರಕಟಿಸಿ ಪ್ರಸಾರ ಮಾಡುವ ಪತ್ರಿಕೆ ಜವಾಬ್ದಾರವಲ್ಲದಿದ್ದರೆ ಜವಾಬ್ದಾರರು ಯಾರು? ದೇಶದ, ಸಂವಿಧಾನದ ಆಧಾರಸ್ತಂಭಗಳಲ್ಲೊಂದೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮತ್ತು ಸಾಮಾಜಿಕ ಬದಲಾವಣೆಗೆ ತಾವೇ ಜವಾಬ್ದಾರರೆಂದು ಹೊಗಳಿ(ಸಿ)ಕೊಳ್ಳುವ ಪತ್ರಿಕೆಗಳ ಹೊಣೆಗೇಡಿತನಕ್ಕೆ ಬೇರೆ ಸಾಕ್ಷ್ಯಗಳ ಅಗತ್ಯವಿಲ್ಲ.

ಇದೊಂದು ಉದಾಹರಣೆಯಷ್ಟೇ ಆಗಿದೆ. ಆದರೆ ಪರಿಸ್ಥಿತಿ ಇದಕ್ಕಿಂತ ಬಹಳ ಭಿನ್ನವೇನಲ್ಲ. ನಮ್ಮಲ್ಲಿ ಎಲ್ಲ ಅನಿಷ್ಟವನ್ನೂ ಸುಳ್ಳುಗಳನ್ನೂ ಹೇಳಿ ಅದನ್ನು ನಂಬಬೇಡಿ ಎಂಬ ವಿರೋಧಾಭಾಸದ ಹೇಳಿಕೆಗಳು ಬಹಳ ಜನಪ್ರಿಯ. ಉದಾಹರಣೆಗಳು ಬೇಕಷ್ಟಿವೆ: ಧೂಮಪಾನ ಕೆಟ್ಟದ್ದು ಎಂಬ ಜಾಹೀರಾತು ಪತ್ರಿಕೆಗಳಲ್ಲಿ ಮಾತ್ರವಲ್ಲ, ಕೊಂಡು ಸೇದುವ ಬೀಡಿ-ಸಿಗರೆಟ್ ಪ್ಯಾಕುಗಳ ಮೇಲೂ ಮುದ್ರಿತವಾಗುತ್ತವೆ. ಹಾಗೆಯೇ ಹೆಂಡ-ಸಾರಾಯಿಗಳ ವಿರುದ್ಧದ ಎಲ್ಲ ಬಗೆಯ ಜಾಹೀರಾತೂ ಅವುಗಳ ಮೇಲೆ ಪ್ರಕಟವಾಗುತ್ತವೆ. ಎಲ್ಲ ಬಗೆಯ ಸರಕಾರಗಳು ರಾವಣ ರಾಜ್ಯದಿಂದ ರಾಮರಾಜ್ಯದ ವರೆಗೂ ತಂಬಾಕನ್ನು ನಿಷೇಧಿಸುವುದಿಲ್ಲ; ಆಲ್ಕೋಹಾಲ್‌ನ್ನು ನಿಷೇಧಿಸುವುದಿಲ್ಲ. ಅವೂ ಬೆಳೆಯಬೇಕು; ಸರಕಾರಕ್ಕೆ ಸಾಕಷ್ಟು ಸುಂಕ ಸಿಗಬೇಕು. ಜೊತೆಗೇ ಅವುಗಳ ವಿರುದ್ಧದ, ನಿಷೇಧದ ಪ್ರಚಾರವೂ ಆಗಬೇಕು. ತಂಬಾಕು, ಆಲ್ಕೋಹಾಲ್‌ನ್ನು ನಿಷೇಧಿಸಿದರೆ ಆದಾಯವಿಲ್ಲ; ಮಾತ್ರವಲ್ಲ, ಅಂತಹ ಕೆಡುಕುಗಳಿಂದ ಪಟ್ಟಭದ್ರ ಹಿತಾಸಕ್ತಿಗಳಿಗಾಗುವ ಲಾಭವೂ ಇಲ್ಲ. ಧೂಮಪಾನ, ಆಲ್ಕೋಹಾಲ್, ಬೇಕು ಮತ್ತು ಬೇಡ. ಹೀಗೆ ಎರಡೂ ಅತಿಗಳ ನಡುವೆ ಸಮಾಜದ ಹಿತವೆಲ್ಲಡಗಿದೆಯೆಂಬ ಬಗ್ಗೆ ಸದ್ಯ ಉತ್ತರವಿಲ್ಲ. ಆದ್ದರಿಂದ ಅದೂ ಬೇಕು; ಇದೂ ಬೇಕು. ಸದ್ಯ ಸ್ವಚ್ಛತೆಯ ಆಂದೋಲನದೊಂದಿಗೇ ಪ್ಲಾಸ್ಟಿಕ್ ಎಂಬ ಅನಾಹುತದತ್ತ ಭಾರೀ ಪ್ರಚಾರ ನಡೆಯುತ್ತಿದೆ.

ಒಂದು ಕಡೆ ಕಾಂಗ್ರೆಸ್ ಮುಕ್ತ ಭಾರತ ಎಂದು ಭಾಜಪ ಘೋಷಿಸುತ್ತಿದ್ದರೆ ಇನ್ನೊಂದೆಡೆ ಪ್ಲಾಸ್ಟಿಕ್ ಮುಕ್ತ ಭಾರತ ಎಂದು ಕೇಂದ್ರ ಹಾಗೂ ಎಲ್ಲ ರಾಜ್ಯ ಸರಕಾರಗಳೂ ಪುಟಗಟ್ಟಲೆ ಜಾಹೀರಾತುಗಳಲ್ಲೂ, ಮುಕ್ತ ವೆಚ್ಚದ ಕಾರ್ಯಕ್ರಮಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಪ್ಲಾಸ್ಟಿಕ್‌ನ ಕಸಕ್ಕಿಂತಲೂ, ಹಾನಿಗಿಂತಲೂ ಈ ಪ್ರಚಾರದಲ್ಲಿ ಸೃಷ್ಟಿಯಾಗುವ ಕಸ ಹೆಚ್ಚೆಂದು ಅನ್ನಿಸುವಂತಿದೆ. ಆದರೆ ಯಾವ ಸರಕಾರವೂ ಈ ಪ್ಲಾಸ್ಟಿಕ್ ಉತ್ಪಾದನೆಯನ್ನು ಯಾಕೆ ನಿಲ್ಲಿಸುವುದಿಲ್ಲವೋ ಗೊತ್ತಿಲ್ಲ. ಅಂದರೆ-ಪ್ಲಾಸ್ಟಿಕ್ ತಯಾರಾಗಬೇಕು; ಮತ್ತು ಅದು ಬಳಕೆಯಾಗಬಾರದು. ಈ ರೀತಿಯ ಆರ್ಥಿಕ ನೀತಿಯನ್ನು ಉದ್ಧಾಲಕನ ಪತ್ನಿ ಚಂಡಿ ಮಾತ್ರ ಕಂಡಿರಬಹುದು. ದೇಶದ ರೈತರು ಹಟ್ಟಿಯ ಹಸಿರು ಗೊಬ್ಬರವನ್ನೇ ಬಳಸಿ ಕೃಷಿಮಾಡುತ್ತಿದ್ದರು. ನೆಲದ ಫಲವತ್ತತೆ ಮುಂದಿನ ತಲೆಮಾರಿಗೂ ಉಳಿದಿತ್ತು.

ಇದ್ದಕ್ಕಿದ್ದಂತೆ ವಿಶ್ವದಲ್ಲೆಡೆಯ ಕೃಷಿಪಂಡಿತರು ರಾಸಾಯನಿಕ ಗೊಬ್ಬರದ ಬಳಕೆಯನ್ನು ಉಪದೇಶಿಸಿದರು. ಅವನ್ನು ತಯಾರಿಸುವ ಕಾರ್ಖಾನೆಗಳು ದೇಶದೆಲ್ಲೆಡೆ ಆರಂಭವಾದವು. ರೈತನಿಗೆ ಇದು ಒಳ್ಳೆಯದು ಎಂದು ಸಲಹೆ ಮಾಡುವುದಕ್ಕೆ ನಮ್ಮ ಎಲ್ಲಾ ಮಾಧ್ಯಮಗಳು ಪೈಪೋಟಿಗಿಳಿದವು. ಪರಿಣಾಮವಾಗಿ ಹಸಿರೆಂಬುದು ಮರೆತುಹೋಗಿ ರಾಸಾಯನಿಕಗಳು ನೆಲವನ್ನು ಉತ್ತು ಸಿಗಿದವು. ಮುಂದಿನ ತಲೆಮಾರಿಗೆ ಬಿಡಿ, ಈ ತಲೆಮಾರಿಗೇ ಇನ್ನು ಯಾವ ಸತ್ವವೂ ಉಳಿಯದಂತೆ ನೆಲವನ್ನು ಹಿಂಡಿದವು. ಎರೆಹುಳಗಳು ಸತ್ತು, ಭೂಮಿ ಜಡವಾಗಲು, ಬರಡಾಗಲು ಏನು ಬೇಕೋ ಅದನ್ನು ಈ ಸತ್ವಶಾಲಿ ರಾಸಾಯನಿಕಗಳು ಮತ್ತು ತತ್ವಶಾಲಿ ಪಂಡಿತವರ್ಗ ಮಾಡಿದವು. ಒಂದಷ್ಟು ವರುಷ, ಅಥವಾ ದಶಕಗಳು; ರಾಸಾಯನಿಕ ವೈರಾಗ್ಯವು ಹುಟ್ಟಿತು. ಎಲ್ಲೆಡೆ ಸಾವಯವ ಕೃಷಿಯ ಪಾಠ ಆರಂಭವಾಯಿತು. ಅದೇ ಕೃಷಿಪಂಡಿತರು ರಾಸಾಯನಿಕಗಳನ್ನು ತ್ಯಜಿಸಿ ಸಾವಯವವನ್ನು ಸ್ವೀಕರಿಸಲು ಹೇಳಿದರು. ರೈತನಿಗೆ ಎಷ್ಟು ಸಾಧ್ಯವೋ ಅಷ್ಟು ಗೊಂದಲಗಳನ್ನು ಸೃಷ್ಟಿಸಿದರು. ಹಾಗೆ ಹೇಳಿದವರೂ ಅವರೇ; ಈಗ ಹೀಗೆ ಹೇಳುವವರೂ ಅವರೇ!

ನೀರನ್ನು ಜನರು ಯಥೇಚ್ಛವಾಗಿ ಬಳಸಿದರೂ ನೆಲದ ನೀರಾರಿರಲಿಲ್ಲ. ದುಂದುವೆಚ್ಚಕ್ಕೆ ನೀರಿನ ಉಪಮೆ ಕೊಡಲಾಗುತ್ತಿತ್ತು. ಆತ ಹಣವನ್ನು ನೀರಿನಂತೆ ವೆಚ್ಚ ಮಾಡಿದ ಅಂತಲೋ ಬಳಸಿದ ಅಂತಲೋ ಹೇಳುತ್ತಿದ್ದರು. ಪ್ರಾಯಃ ಕೂತುಂಡರೆ ಕುಡಿಕೆ ಹಣ ಸಾಲದು ಎಂಬ ಹಾಗೆ ದುಂದುವೆಚ್ಚಕ್ಕೆ ಈ ನೀರೇ ನಿದರ್ಶನವಾಗಿತ್ತು. ಆಕಾಶದಿಂದ ಬೀಳುವ ಎಲ್ಲ ನೀರೂ ಸಾಗರವನ್ನೇ ಸೇರುತ್ತದೆಂಬ ವ್ಯಾಖ್ಯೆಯು ಯಾವ ದೇವರಿಗೆ ಸಲ್ಲಿಸಿದ ಸೇವೆಯೂ ಒಬ್ಬನೇ ದೇವರಿಗೆ ಸೇರುತ್ತದೆಂಬ ಮಾತಿಗೆ ಸಮೀಕರಣವಾಗಿತ್ತು. ಒಟ್ಟಿನಲ್ಲಿ ನೀರು ಜೀವನಕ್ಕೆ ಅತೀ ಅಗತ್ಯಗಳಲ್ಲೊಂದಾಗಿದ್ದರೂ ಅದರ ಬಳಕೆಯಿಂದ ಪ್ರಕೃತಿಗೆ ಹಾನಿಯಾಗಿರಲಿಲ್ಲ. ನೆಲದ ಮೇಲಣ ಹಳ್ಳಕೊಳ್ಳಗಳು ಕೆರೆ ಕಾಲುವೆಗಳು ಸದಾ ತುಂಬಿರುತ್ತಿದ್ದವು.

ಆದರೆ ಜನರು ಹೆಚ್ಚಾದಂತೆ ಈ ಬಳಕೆಯ ರೀತಿ ಬದಲಾಯಿತು. ಅಗತ್ಯವು ದುರ್ಬಳಕೆಗೂ ಆಸೆಯು ದುರಾಸೆಗೂ ದಾರಿಮಾಡಿಕೊಟ್ಟಿತು. ನೀರಿನ ಅಗತ್ಯವಿಲ್ಲದ ಬೆಳೆಗಳಿಗೂ ನೀರಿನ ಬಳಕೆ ಆರಂಭವಾಯಿತು. ಸಂಪತ್ತನ್ನು ವೃದ್ಧಿಸುವ ಉದ್ದೇಶದಿಂದ ಹೊಸಹೊಸ ಬೆಳೆಗಳನ್ನು ಅನ್ವೇಷಿಸಲಾಯಿತು. ಕೃಷಿಯೆಂದು ಹೇಳುತ್ತಿದ್ದ ಕಾಯಕವು ಉದ್ಯಮವಾಗಿ ಪರಿವರ್ತನೆಯಾಯಿತು. ಉದ್ಯಮಕ್ಕೆ ಸಹಜವಾದ ಶೋಷಣೆಗೆ ಮೊದಲ ಬಲಿಯೇ ನೀರು. ಆದ್ದರಿಂದ ನೀರನ್ನು ನೀರಿನಂತೆ ಅಲ್ಲ- ಅದಕ್ಕೂ ಮೀರಿದ ಕ್ರೂರ ಮಟ್ಟದಲ್ಲಿ ಮಿತಿಮೀರಿ ಬಳಸಲಾಯಿತು. ಹೀಗೆ ಬಳಸಲು ಬೇಕಾದಷ್ಟು ನೀರು ನೈಸರ್ಗಿಕವಾಗಿ ಸಿಕ್ಕದಿದ್ದಾಗ ಅನೈಸರ್ಗಿಕವಾದ ಹುಡುಕಾಟ ಆರಂಭವಾಯಿತು. ಅಂತರ್ಜಲಕ್ಕೆ ಕನ್ನಹಾಕಲಾಯಿತು. ವಾಹನಗಳ ರೇಡಿಯೇಟರುಗಳಲ್ಲಿರುವ ನೀರು ಇಂಜಿನನ್ನು ತಂಪಾಗಿರಿಸಲು ನೆರವಾಗುತ್ತದೆಂದು ಕೇಳಿದ್ದೇವೆ. ಹಾಗೆಯೇ ಈ ಅಂತರ್ಜಲವು ಭೂಮಿಯ ಹೊರಮೈಯನ್ನು (ಅಥವಾ ಮೇಲ್ಮೈಯನ್ನು) ತಂಪಾಗಿರಿಸಲು ಸಹಾಯಕವಾಗುತ್ತಿತ್ತು. ಕಲ್ಲುಬಂಡೆಗಳನ್ನು ಒಡೆಯದೇ ಈ ನೀರು ಮೇಲೆ ಬರುವಂತಿರಲಿಲ್ಲ. ಅದನ್ನೂ ಅತ್ಯಾಧುನಿಕ ಸಾಧನೆಗಳಿಂದ ಒಡೆದು ಒಳನೀರನ್ನು ಹೊರಚೆಲ್ಲಲಾಯಿತು. ಪರಿಣಾಮವಾಗಿ ನೀರೆಂಬುದು ಯರ್ರಾಬಿರ್ರಿ ಬಳಕೆಯಾಗಿ ಯಾರಿಗೂ ಸಿಗದ ಮತ್ತು ಕೈಗೆಟಕದ ಸಾಧನವಾಗಿದೆ. ಭೂಮಿ ಪ್ರತಿಯೊಬ್ಬನ ಅಗತ್ಯಗಳಿಗೆ ಬೇಕಾದಷ್ಟನ್ನು ಹೊಂದಿದೆಯಾದರೂ ದುರಾಸೆಗಳನ್ನು ಪೂರೈಸದು ಎಂಬ ಹಾಗೆ ಈ ಭೂಮಿಯಲ್ಲಿ ನೀರು ಸಾಕಾಗದ ಪರಿಸ್ಥಿತಿ ಬಂದಿದೆ. ಮುಂದಿನ ಜಾಗತಿಕ ಯುದ್ಧ ನಡೆದರೆ ಅದು ನೀರಿಗಾಗಿಯೇ ಎಂಬ ವ್ಯಂಗ್ಯ ಸತ್ಯವಾಗುತ್ತಿದೆ. ಇದಕ್ಕೆ ಕಾರಣರಾರು ಎಂದರೆ ನಮ್ಮ ಪಂಡಿತರೇ!

ನೀರಿನ ಬಳಕೆಯ ಕುರಿತಾಗಿ ತಮ್ಮ ವಿದ್ವತ್ತನ್ನು ಹೊರಗೆಡಹಿದ ಮಂದಿ ಅದರ ಪರಿಣಾಮ-ಫಲಿತಾಂಶಗಳ ದೂರದರ್ಶಿತ್ವವನ್ನು ಹೊಂದಿದ್ದರೆ ಈ ಗತಿ ಬರುತ್ತಿರಲಿಲ್ಲ. ಆದರೆ ಅವರು ವಿದ್ಯೆಯ ಒಳ್ಳೆಯವನನ್ನು ಇನ್ನೂ ಒಳ್ಳೆಯವನಾಗಿಸುತ್ತದೆ ಮತ್ತು ಕೆಟ್ಟವನನ್ನು ಇನ್ನೂ ಕೆಟ್ಟವನನ್ನಾಗಿಸುತ್ತದೆಯೆಂಬುದಕ್ಕೆ ಸಾಕ್ಷಿಯಾದರು. (ಅಣುಬಾಂಬಿನ ಕುಶಲಕಲೆಯನ್ನು ಬಲ್ಲವನಿಗೆ ಅದು ಮಾಡಬಲ್ಲ ಮಾರಣಹೋಮದ ಕಡೆಗೆ ಒಂದಿಷ್ಟೂ ಗಮನ ಹೋಗುವುದಿಲ್ಲ.) ಹಣವಿಲ್ಲದವರು ಆರ್ಥಿಕತೆಯ ಬಗ್ಗೆಯೂ ಕೃಷಿಮಾಡದವರು ಕೃಷಿಯ ಬಗ್ಗೆಯೂ ಹೇಳಹೊರಟಾಗ ಸಂಭವಿಸುವ ಪ್ರಮಾದಗಳು ಹೀಗೆಯೇ! ಗಂಗೆಯನ್ನು ಶುದ್ಧೀಕರಿಸುವ ಕೋಟ್ಯಾನುಕೋಟಿ ವೆಚ್ಚದ ನಡುವೆಯೂ ಸರಕಾರಿ ಕೈಗಾರಿಕೆಗಳೇ ಗಂಗೆಗೆ ತಮ್ಮ ತ್ಯಾಜ್ಯವನ್ನು ವಿಸರ್ಜಿಸುತ್ತವೆಂಬ ಸತ್ಯ ಮುಚ್ಚಿಹೋಗುತ್ತಲಿದೆ.

ಧರ್ಮ-ಅಧ್ಯಾತ್ಮಗಳ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಯಮುನಾನದಿಯ ಪರಿಸರವನ್ನೇ ಹಾಳುಮಾಡಿದ್ದು ಭಾರೀ ದೊಡ್ಡ ಸುದ್ದಿಯಾಗುವ ಹೊತ್ತಿಗೆ ಬದುಕುವ ಕಲೆಯು ಜಗತ್ತನ್ನೇ ಆವರಿಸಿದೆ. ನಮ್ಮ ಜನರಿಗೆ ಅರ್ಧ ಸತ್ಯವೂ ಬೇಡ. ಸುಳ್ಳಿನ ಕೋಟೆಯೊಳಗೆ ವಿಹರಿಸಲು ಕಾತರರು. ತಮಗೆ ಅದು ಸುಳ್ಳೆಂದು ಗೊತ್ತಿದ್ದರೂ ಗೊತ್ತಾದರೂ ಅದನ್ನು ಸತ್ಯವೆಂದೇ ನಂಬಿ(ಸಿ), ಬಿಂಬಿಸಿ ಹಬ್ಬಿಹರಡಿಸುವ ಕಾರ್ಯಕ್ಕೆ ತೊಡಗುತ್ತಾರೆ. ಇದರಿಂದಾಗಿ ಬಹುತೇಕ ಸುಳ್ಳುಗಳೇ ಸತ್ಯದ ಮುಖವಾಡ ಹಾಕಿ ಮೆರವಣಿಗೆಯಲ್ಲಿ ಸಾಗುತ್ತವೆ. ಇವೆಲ್ಲದರ ಪರಿಣಾಮವೆಂದರೆ ನಾವು ಒಂದು ಹೆಜ್ಜೆ ಮುಂದಡಿಯಿಟ್ಟರೆ ಎರಡು ಹೆಜ್ಜೆ ಹಿಂದಡಿಯಿಡಬೆಕಾಗಿದೆ; ಅಥವಾ ಹಿಂದಡಿಯಿಡುತ್ತೇವೆ. ಇದು ಅಭಿವೃದ್ಧಿಯೆನಿಸಿಕೊಳ್ಳುವುದು ನಮ್ಮ ಕಾಲದ ದುರಂತ.

ಇದು ಹಸನಾಗುವ ಲಕ್ಷಣವಿಲ್ಲ. ಏಕೆಂದರೆ ಸಮಾಜವು ಒಳ್ಳೆಯದನ್ನು ಸ್ವೀಕರಿಸುವುದಕ್ಕಿಂತ ದುಪ್ಪಟ್ಟು ಹುಮ್ಮಸ್ಸಿನಲ್ಲಿ ಕೆಟ್ಟದ್ದನ್ನು ಸ್ವೀಕರಿಸುತ್ತದೆ. ಸಹಜಕ್ಕಿಂತ ಹೆಚ್ಚು ಬೇಡಿಕೆ ಕೃತಕಕ್ಕಿರುತ್ತದೆ. ಕತ್ತೆಯನ್ನೇ ತಂದು ಕಟ್ಟಿ ಅದು ಅರಚುವುದನ್ನು ಕೇಳುವುದಕ್ಕೆ ಬಾರದ ಜನರು ಕತ್ತೆಯಂತೆ ಮಿಮಿಕ್ರಿ ಮಾಡುವುದನ್ನು ಕೇಳಲು ದುಡ್ಡುಕೊಟ್ಟು ಹೋಗುತ್ತಾರೆ. ಕೆಲಸಮಾಡುವುದಕ್ಕಿಂತಲೂ ಕೆಲಸ ಮಾಡಿದ್ದೇನೆಂದು ಪ್ರಚಾರ ಮಾಡಿ(ಸಿ)ಕೊಳ್ಳುವುದರಲ್ಲಿ ಮನುಷ್ಯನ ಶ್ರಮವು ಅಡಗುತ್ತದೆ. ಸುದ್ದಿಯಾದರೆ ಸಾಕು, ದೊಡ್ಡಸ್ತಿಕೆ ತಾನಾಗಿ ಬರುತ್ತದೆಯೆಂಬ ತಿಳಿವಳಿಕೆ ರೂಢಿಯಾಗುತ್ತಲಿದೆ. ಇದರಿಂದಾಗಿ ಮನುಷ್ಯನ ಆಸೆ, ಆಸಕ್ತಿ, ಬೇಡಿಕೆ-ಕೋರಿಕೆಗಳೆಲ್ಲ ಈ ಕ್ಷಣಿಕವಾದ ಮತ್ತು ತಕ್ಷಣದ ಫಲಿತಾಂಶಕ್ಕೆ ಶರಣಾಗಿದೆ. ಈ ಕೊರತೆಯನ್ನು ಪ್ರಚಾರ- ಮತ್ತು ಪ್ರಸಾರ ಮಾಧ್ಯಮಗಳು ಸಮಯಸಾಧಕತನದಿಂದ ದುರ್ಬಳಕೆ ಮಾಡುತ್ತಲಿವೆ. ಇಂದು ಯಾವುದೇ ಕ್ಷೇತ್ರವನ್ನು ಪರಿಗಣಿಸಿದರೂ ಪ್ರಾಮಾಣಿಕವಾಗಿ ಅನಾಮಿಕರಾಗುಳಿದು ಕೆಲಸಮಾಡುವವರಿಗೆ ಪ್ರಾಶಸ್ತ್ಯವಿಲ್ಲ; ಬದಲಾಗಿ ಸದ್ದು-ಸುದ್ದಿಗಳನ್ನು ಮಾಡುವವರಿಗೇ ಕಾಲ. ಡಿವಿಜಿಯವರ ಕಾಲವೊಂದಿತ್ತು: ಅಥವಾ ಅದು ಅವರ ಕಾಲ ಮಾತ್ರವಾಗಿತ್ತು. ಏಕೆಂದರೆ ಅವರು ತನ್ನ ಕಾಲದಲ್ಲಿ ತನ್ನ ಸಮಾಜವನ್ನು ಎಚ್ಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿ

‘‘ಇಳೆಯಿಂದ ಮೊಳಕೆಯೊಗೆವೊಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ॥
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ

ಹೊಲಿ ನಿನ್ನ ತುಟಿಗಳನ್ನು- ಮಂಕುತಿಮ್ಮ॥
  ಇಂತಹ ಸಮಾಜದಲ್ಲಿ, ಕಾಲದಲ್ಲಿ ತಾವು ಹೇಳುವ ಮಾತುಗಳು ಸತ್ಯವಾಗಿಲ್ಲವೆಂಬ ಸಂಶಯ ಬಹಳ ಜನರಿಗಿದೆ. ತಾವು ಹೇಳುತ್ತಿರುವುದು, ಮಾಡುತ್ತಿರುವುದು ತಮ್ಮ ಹಿತಕ್ಕಷ್ಟೇ ಹೊರತು ಸಮಾಜ, ಕಾಲದ, ಭವಿಷ್ಯದ, ಬರಲಿರುವ ತಲೆಮಾರುಗಳ ಹಿತದಿಂದಲ್ಲ ಎಂಬ ಅರಿವು ಬಹುಜನರಿಗಿದೆ. ಆದ್ದರಿಂದಲೇ ತಾವು ಮಾಡುವ ಕ್ರಿಯೆಗೆ ಸಂಬಂಧಿಸದ, ಮತ್ತು ವಿರೋಧವಾಗಿರುವ ಮಾತುಗಳನ್ನಾಡುತ್ತಾರೆ. ಈ ಮಾತುಗಳನ್ನು ಜನರು ಅಚ್ಚಳಿಯದ ಪ್ರೀತಿ, ಅಭಿಮಾನ, ಮಮಕಾರದಿಂದ ಕಾಣುತ್ತಾರೆ: ಕೇಳುತ್ತಾರೆ. ಅಸತ್ಯದಿಂದ ಸತ್ಯದ ಕಡೆಗೆ ಎಂಬ ಮಹೋನ್ನತ ಉಕ್ತಿ ಪುಸ್ತಕದೊಳಗೇ ವಿಲವಿಲ ಒದ್ದಾಡುತದೆ.

ಎಲ್ಲಿಯ ವರೆಗೆ ಸಮಾಜಕ್ಕೆ ಬದಲಾವಣೆಯ ಆಸೆ ಹುಟ್ಟುವುದಿಲ್ಲವೋ ಅಲ್ಲಿಯವರೆಗೆ ಸುಳ್ಳು ಸತ್ಯದಂತಿರುತ್ತದೆ. ಸತ್ಯ ಸತ್ತಿರುತ್ತದೆ. ಪರಿಸ್ಥಿತಿಯು ಬದಲಾಗುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)