ವಿಶ್ವಕಪ್ ಪಂದ್ಯಗಳಿಂದ ಬಂದ ಎಲ್ಲ ಗಳಿಕೆಯನ್ನು ಚಾರಿಟಿಗೆ ನೀಡಿದ ಬಾಪ್ಪೆ
ಪ್ಯಾರಿಸ್, ಜು. 17: ಫ್ರಾನ್ಸ್ ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಟಾರ್ ಆಟಗಾರ ಕಿಲಿಯನ್ ಬಾಪ್ಪೆ ವಿಶ್ವಕಪ್ ಪಂದ್ಯಗಳಿಂದ ಬಂದ ಎಲ್ಲ ಗಳಿಕೆಯನ್ನು ದತ್ತಿ ಕಾರ್ಯಗಳಿಗೆ ನೀಡುವ ಮೂಲಕ ಇತರ ಆಟಗಾರರಿಗೆ ಮಾದರಿಯಾಗಿದ್ದಾರೆ. ವಿಶ್ವಕಪ್ ಪಂದ್ಯಗಳಿಂದ ಬಂದ 66 ಲಕ್ಷ ರೂಪಾಯಿ ಸಂಭಾವನೆಯನ್ನು ಬಾಪ್ಪೆ ದತ್ತಿ ಚಟುವಟಿಕೆಗಳಿಗೆ ನೀಡಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯ ಪ್ರತಿ ಪಂದ್ಯಕ್ಕೆ ಬಾಪ್ಪೆ 22,500 ಡಾಲರ್ ಅಥವಾ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಇದರ ಜತೆಗೆ ಟೂರ್ನಿ ಗೆದ್ದ ಕಾರಣಕ್ಕೆ 3.5 ಲಕ್ಷ ಡಾಲರ್ ಅಂದರೆ 46 ಲಕ್ಷ ರೂಪಾಯಿ ಬೋನಸ್ ಪಡೆದಿದ್ದರು. ಈ ಹಣವನ್ನು ಆಸ್ಪತ್ರೆಗೆ ದಾಖಲಾದ ಮಕ್ಕಳಿಗೆ ಅಥವಾ ಕ್ರೀಡೆಗಳ ಸಂದರ್ಭದಲ್ಲಿ ಅಂಗವೈಕಲ್ಯಕ್ಕೆ ಒಳಗಾದವರ ನೆರವಿಗೆ ವೆಚ್ಚ ಮಾಡಲಾಗುವುದು ಎಂದು 19 ವರ್ಷದ ಬಾಪ್ಪೆ ಹೇಳಿದ್ದಾರೆ.
ಟೂರ್ನಿಯಲ್ಲಿ ನಾಲ್ಕು ಗೋಲು ಗಳಿಸಿರುವ ಬಾಪ್ಪೆ, ಮೈದಾನದಲ್ಲಿ ಪಾದರಸದಂಥ ಚಲನೆ ಮತ್ತು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪ್ರದರ್ಶಿಸಿದ ಚಾಕಚಕ್ಯತೆಯಿಂದ ಹೊಸ ಸ್ಟಾರ್ ಆಗಿ ರೂಪುಗೊಂಡಿದ್ದರು.
"ಬಾಪ್ಪೆ ಒಬ್ಬ ಶ್ರೇಷ್ಠ ವ್ಯಕ್ತಿ. ಅವರಿಗೆ ಬಿಡುವು ಇದ್ದಾಗಲೆಲ್ಲ ನಮ್ಮ ಜತೆ ಸಂತಸ ಹಂಚಿಕೊಳ್ಳುತ್ತಿದ್ದರು" ಎಂದು ದತ್ತಿಯ ಪ್ರಧಾನ ವ್ಯವಸ್ಥಾಪಕ ಸೆಬಾಸ್ಟಿಯನ್ ರುಫಿನ್ ಹೇಳಿದ್ದಾರೆ. ಮಕ್ಕಳ ಜತೆ ಅತೀವ ಪ್ರೀತಿ ಹೊಂದಿರುವ ಬಾಪ್ಪೆ ಸದಾ ಅವರಿಗೆ ಸ್ಫೂರ್ತಿ ಎಂದು ಬಣ್ಣಿಸಿದ್ದಾರೆ.
ವಿಶ್ವಕಪ್ ಫೈನಲ್ನಲ್ಲಿ ಗೋಲು ಗಳಿಸಿದ ಎರಡನೇ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಬಾಪ್ಪೆ, ಫುಟ್ಬಾಲ್ ದಂತಕಥೆ ಎನಿಸಿದ ಪೀಲೆ ಗಮನವನ್ನೂ ಸೆಳೆದಿದ್ದರು.