14 ತಿಂಗಳ ಮಗುವಿನ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ !
ವಿದಿಷಾ (ಮಧ್ಯಪ್ರದೇಶ), ಜು. 17: ಹದಿನಾಲ್ಕು ತಿಂಗಳ ಹಸುಳೆ ಮೇಲೆ ಸಂಬಂಧಿ (ತಂದೆಯ ಮಾವ) ಅತ್ಯಾಚಾರ ಎಸಗಿದ ಘಟನೆ ವಿದಿಷಾ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಲ್ಲಿ ಮಂಡಸಾರ್, ಗ್ವಾಲಿಯರ್ ಹಾಗೂ ಸಾತ್ನಾಗಳಲ್ಲಿ ಸರಣಿ ಅತ್ಯಾಚಾರ ನಡೆದಿದ್ದು, ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಗಜರಾಜ್ ಸಿಂಗ್ ಭಿಲ್ ಮೊಮ್ಮಗಳ ಜತೆ ಆಡುವ ನೆಪವೊಡ್ಡಿ ತಮ್ಮ ಅಳಿಯನ ಮನೆಗೆ ಹೋಗಿದ್ದ. ಮನೆಯಿಂದ ಪುಟ್ಟ ಬಾಲಕಿಯನ್ನು ಅನತಿ ದೂರಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಅರ್ಧ ಗಂಟೆ ಬಳಿಕ ತಮ್ಮ ಸಹೋದರನೊಬ್ಬನ ಜತೆ ಬಾಲಕಿಯನ್ನು ಮನೆಗೆ ವಾಪಾಸ್ಸು ಕಳುಹಿಸಿದ್ದ ಎಂದು ಲತೇರಿ ಪೊಲೀಸ್ ಠಾಣೆ ಅಧಿಕಾರಿ ಬನ್ವಾರಿಲಾಲ್ ಮಾಳವೀಯ ಹೇಳಿದ್ದಾರೆ.
ಆದರೆ ಮಗು ನೋವಿನಿಂದ ಅಳುತ್ತಿತ್ತು. ತಾಯಿ ಪರಿಶೀಲನೆ ಮಾಡಿದಾಗ ಮಗುವಿನ ಗುಪ್ತಾಂಗದಲ್ಲಿ ಗಾಯದ ಗುರುತುಗಳು ಕಂಡುಬಂದವು. ತಕ್ಷಣ ಸಿರೋಂಜ್ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು. ವೈದ್ಯರು ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆದಿರುವುದನ್ನು ದೃಢಪಡಿಸಿದರು. ಆರೋಪಿ ತಲೆಮರೆಸಿಕೊಂಡಿದ್ದು, ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.