ಅಶ್ಲೀಲ ವೀಡಿಯೊ ವೀಕ್ಷಿಸಿದ ಮಕ್ಕಳಿಂದ ಬಾಲಕಿ ಮೇಲೆ ಅತ್ಯಾಚಾರ !
ಡೆಹ್ರಾಡೂನ್, ಜು. 17: ಒಂಬತ್ತರಿಂದ ಹದಿನಾಲ್ಕು ವರ್ಷದ ಐವರು ಬಾಲಕರು ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಘಟನೆ ನಗರದ ಸಹಾಸ್ಪುರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿ ಎರಡು ದಿನ ಬಳಿಕ ಬಾಲಕಿಯನ್ನು ಆಸೆತೋರಿಸಿ ಮನೆಗೆ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾರೆ.
ಎಲ್ಲ ಐದು ಮಂದಿ ಬಾಲಕರನ್ನು ವಶಕ್ಕೆ ಪಡೆದು ಸುಧಾರಣಾಗೃಹಗಳಿಗೆ ಕಳುಹಿಸಲಾಗಿದೆ. ಬಾಲಕಿಯೂ ಅದೇ ಪ್ರದೇಶವಳಾಗಿದ್ದು, ಆಟವಾಡುತ್ತಿದ್ದ ಬಾಲಕಿಯನ್ನು ಒಬ್ಬ ಬಾಲಕನ ಮನೆಗೆ ಕರೆಸಿಕೊಂಡು ಹೋಗಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಳೆ ಎನ್ನುವುದನ್ನು ಗಮನಿಸಿದ ಹುಡುಗರು ಆಕೆಗೆ ಬಲೆ ಬೀಸಲು ನಿರ್ಧರಿಸಿದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಎರಡು ದಿನಗಳ ಹಿಂದೆ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿದ ಕ್ಷಣವೇ ಸೂಕ್ತ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ನರೇಶ್ ರಾಥೋಡ್ ವಿವರಿಸಿದ್ದಾರೆ.
ಬಾಲಾರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳನ್ನು ವಶಕ್ಕೆ ಪಡೆದು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಮಕ್ಕಳು ಅಶ್ಲೀಲ ವೀಡಿಯೊ ವೀಕ್ಷಿಸಲು ಮೊಬೈಲ್ ನೀಡಿದ್ದ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ್ದಾರೆ.