ರಾಮ್ಕುಮಾರ್ ಫೈನಲ್ಗೆ
ನ್ಯೂಪೋರ್ಟ್(ಅಮೆರಿಕ), ಜು.22: ಅಮೆರಿಕದ ಟಿಮ್ ಸ್ಮೈಝೆಕ್ರನ್ನು ನೇರ ಸೆಟ್ಗಳಿಂದ ಮಣಿಸಿದ ರಾಮ್ಕುಮಾರ್ ರಾಮನಾಥನ್ ನ್ಯೂಪೋರ್ಟ್ ಎಟಿಪಿ ಟೂರ್ನಮೆಂಟ್ನಲ್ಲಿ ಫೈನಲ್ಗೆ ತಲುಪಿದ್ದಾರೆ. ಈ ಮೂಲಕ ಭಾರತದ 20 ವರ್ಷಗಳ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಬರವನ್ನು ನೀಗಿಸಲು ಚೆನ್ನೈ ಆಟಗಾರ ಸಜ್ಜಾಗಿದ್ದಾರೆ.
ರಾಮ್ಕುಮಾರ್ ಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕದ ಸ್ಟೀವ್ ಜಾನ್ಸನ್ರನ್ನು ಎದುರಿಸಲಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ರಾಮ್ಕುಮಾರ್ ಅವರು ಟಿಮ್ರನ್ನು 6-4, 7-5 ನೇರ ಸೆಟ್ಗಳಿಂದ ಸೋಲಿಸಿದ್ದಾರೆ.
ರಾಮ್ಕುಮಾರ್ಗೆ ಫೈನಲ್ನಲ್ಲಿ ಎದುರಾಳಿಯಾಗಿರುವ ಅಮೆರಿಕದ ಜಾನ್ಸನ್ ಒಟ್ಟಾರೆ ನಾಲ್ಕನೇ ಪ್ರಶಸ್ತಿ, ಈ ವರ್ಷ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಜಾನ್ಸನ್ ಮತ್ತೊಂದು ಸೆಮಿ ಫೈನಲ್ನಲ್ಲಿ ಸ್ಪೇನ್ನ ಮಾರ್ಸೆಲ್ ಗ್ರಾನೊಲ್ಲರ್ಸ್ರನ್ನು 6-3, 6-3 ನೇರ ಸೆಟ್ಗಳಿಂದ ಸೋಲಿಸಿದ್ದಾರೆ. ರಾಮ್ಕುಮಾರ್ 2011ರ ಬಳಿಕ ಎಟಿಪಿ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೆ ತಲುಪಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ಜೋಹಾನ್ಸ್ ಬರ್ಗ್ನಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಸೋಮ್ದೇವ್ ದೇವವರ್ಮನ್ ಫೈನಲ್ಗೆ ತಲುಪಿದ್ದರು. ಆದರೆ, ದ.ಆಫ್ರಿಕದ ಕೆವಿನ್ ಆ್ಯಂಡರ್ಸನ್ಗೆ ಸೋಲುಂಡಿದ್ದರು. ನ್ಯೂಪೋರ್ಟ್ ಭಾರತದ ಪಾಲಿಗೆ ಅದೃಷ್ಟದ ತಾಣ. 20 ವರ್ಷಗಳ ಹಿಂದೆ ಲಿಯಾಂಡರ್ ಪೇಸ್ ತನ್ನ ವೃತ್ತಿಜೀವನದ ಏಕೈಕ ಎಟಿಪಿ ಸಿಂಗಲ್ಸ್ ಪ್ರಶಸ್ತಿಯನ್ನು ನ್ಯೂಪೋರ್ಟ್ ನಲ್ಲಿ ಗೆದ್ದುಕೊಂಡಿದ್ದರು. ಇಲ್ಲಿ ಭಾರತದ ವಿಜಯ್ ಅಮೃತ್ರಾಜ್ 1976,1980 ಹಾಗೂ 1984ರಲ್ಲಿ ಪ್ರಶಸ್ತಿ ಜಯಿಸಿದ್ದಾರೆ.