varthabharthi

ಕರಾವಳಿ

ಪ್ರೊ. ಎ.ವಿ.ನಾವಡರ ಎರಡು ಸಂಶೋಧನಾ ಕೃತಿಗಳ ಅನಾವರಣ

ವಾರ್ತಾ ಭಾರತಿ : 23 Jul, 2018

ಮಂಗಳೂರು, ಜು.23: ಮಿಷನರಿಗಳು ಮತಾಂತರಿಗಳು, ಪಾಶ್ಚಾತ್ಯ ಸಂಸ್ಕೃತಿಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂಬ ಆರೋಪವಿದೆ. ಆದರೆ, ಅದು ವಾಸ್ತವ ಅಲ್ಲ. ಭಾರತದ ಸಂಸ್ಕೃತಿಯ ಅದರಲ್ಲೂ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಗೌರವ ಹೊಂದಿದ್ದ ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರಲ್ಲಿ ಸಾಮಾಜಿಕ ಸ್ವರೂಪದ ಕಲ್ಪನೆ ಇತ್ತೇ ವಿನಃ ಬೇರೆ ಯಾವ ದುರುದ್ದೇಶವೂ ಇರಲಿಲ್ಲ ಎಂದು ಚೆನ್ನೈ ಸಿಎಸ್‌ಐ ಇದರ ಪ್ರಧಾನ ಕಾರ್ಯದರ್ಶಿ ಡಾ.ಡಿ.ಆರ್.ಸದಾನಂದ ಹೇಳಿದರು.

ದಕ್ಷಿಣ ಭಾರತ ಕ್ರೈಸ್ತ ಸಭೆಯ ಕರ್ನಾಟಕ ದಕ್ಷಿಣ ಸಭಾಪ್ರಾಂತದ ವತಿಯಿಂದ ಬಲ್ಮಠದ ಮಹಿಳಾ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ನಡೆದ ಪ್ರೊ.ಎ.ವಿ.ನಾವಡ ಅವರ ಸಂಶೋಧನಾ ಕೃತಿಗಳಾದ ‘ಮಿಷನರಿಗಳ ಕನ್ನಡ ವೃತ್ತಾಂತವು’ ಮತ್ತು ‘ಕರ್ಣಾಟ ಗ್ರಾಮರ್’ ಎಂಬ ಕೃತಿಗಳನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ಭಾಷಾ ಶಾಸ್ತ್ರದ ನೆಲೆಯಲ್ಲಿ ಕನ್ನಡ ವ್ಯಾಕರಣ ರಚಿಸಲು ಮುಂದಾದ ಜರ್ಮನಿ ಮಿಷನರಿಗಳು ಕನ್ನಡ ಜ್ಞಾನದ ಧಾರೆಯನ್ನೇ ಎರೆದಿದ್ದಾರೆ. ಇತಿಹಾಸವನ್ನು ಯಥಾವತ್ತಾಗಿ ಬಿಂಬಿಸಲು ಅವರು ಪಟ್ಟ ಶ್ರಮ ಅಪಾರ. ಈ ಕೃತಿಗಳು ಕೂಡಾ ಹತ್ತಾರು ವರ್ಷದ ವ್ಯವಸಾಯದ ಫಲವಾಗಿದೆ. ಪ್ರೊ.ಎ.ವಿ.ನಾವಡರು ಸಂಶೋಧನೆಯ ಮೂಲಕ ಹೊಸ ನೋಟ ಬೀರಿದ್ದಾರೆ. ಅವರು ಜೇನುನೊಣಗಳ ಹಾಗೆ ಎಲ್ಲವನ್ನೂ ಮುತ್ತಿಕೊಳ್ಳುತ್ತಾರೆ. ಹಾಗೇ ಅಮೂಲ್ಯ ಸಂಪತ್ತನ್ನು ನಾಡಿಗೆ ಅರ್ಪಿಸುತ್ತಿದ್ದಾರೆ ಎಂದು ಡಾ.ಡಿ.ಆರ್.ಸದಾನಂದ ಶ್ಲಾಘಿಸಿದರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಕೃತಿಗಳ ಲೇಖಕ ಪ್ರೊ.ಎ.ವಿ.ನಾವಡ 18-19ನೆ ಶತಮಾನವು ಕನ್ನಡದ ಮಟ್ಟಿಗೆ ಕತ್ತಲೆಯ ಯುಗ ಎಂದು ಕೆಲವರು ಹೇಳುತ್ತಾರೆ. ಆದರೆ, ಅದು ಸರಿಯಲ್ಲ. ಕ್ರೈಸ್ತ ಪಾದ್ರಿಗಳು ಆ ಕಾಲಘಟ್ಟದಲ್ಲಿ ಮಾಡಿದ ಸಾಧನೆಯು ಬೆಳಕಿಗೆ ಬಾರದ ಕಾರಣ ಇಂತಹ ಮಾತುಗಳು ಹೊರಬೀಳುತ್ತಲೇ ಇರುತ್ತವೆ. ಅಲ್ಲದೆ ಮಿಷನರಿಗಳು ಮತಾಂತರಿಗಳು ಎಂದು ಆರೋಪಿಸಿ ಅವರು ಕನ್ನಡಕ್ಕೆ, ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ನಗಣ್ಯ ಮಾಡುವ ಪ್ರಯತ್ನ ನಡೆಯುತ್ತಿದೆ. ಮಿಷನರಿಗಳ ಸಾಹಿತ್ಯಗಳನ್ನು ವೌಲ್ಯಮಾಪನ ಮಾಡದೆ ಇಂತಹ ಆರೋಪಗಳನ್ನು ಮಾಡುವುದು ಸಾಹಿತ್ಯಕ್ಕೆ ಮಾಡುವ ಅಪಚಾರ ಎಂದರು.

ದಕ್ಷಿಣ ಸಭಾಪ್ರಾಂತದ ಮಾಜಿ ಬಿಷಪ್ ಡಾ.ಸಿ.ಎಲ್. ಪುರ್ತಾಡೊ ಮತ್ತು ಕೇರಳ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಪ್ರೊ.ಶ್ರೀಕೃಷ್ಣ ಭಟ್ ಕೃತಿಗಳನ್ನು ಪರಿಚಯಿಸಿದರು. ದಕ್ಷಿಣ ಸಭಾಪ್ರಾಂತದ ಬಿಷಪ್ ರೈ.ರೆ. ಮೋಹನ್ ಮನೋರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಹನಿಬಲ್ ಕಬ್ರಾಲ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)