varthabharthi

ಬುಡಬುಡಿಕೆ

ಗ್ರಹಣ ನಿರ್ವಹಣೆಗೆ ಗ್ರಹಣ ಸಚಿವ!

ವಾರ್ತಾ ಭಾರತಿ : 29 Jul, 2018
ಚೇಳಯ್ಯ chelayya@gmail.com

ಸುದೀರ್ಘ ಚಂದ್ರಗ್ರಹಣದಿಂದಾಗಿ ಆಗಿರುವ ಅನಾಹುತಗಳು ಮತ್ತು ಸಂಭವಿಸಿರುವ ನಾಶ ನಷ್ಟಗಳನ್ನು ವೀಕ್ಷಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯಾದ್ಯಂತ ಪ್ರಯಾಣ ಹೊರಟರು. ಚಂದ್ರಗ್ರಹಣಕ್ಕೆ ಮೊದಲು, ಆಗಬಹುದಾದ ಅನಾಹುತಗಳನ್ನು ಜ್ಯೋತಿಷಿಗಳು ಟಿವಿಗಳ ಮೂಲಕ ಮತ್ತು ವೈಯಕ್ತಿಕವಾಗಿಯೂ ತಿಳಿಸಿರುವುದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿರಬಹುದು ಎಂದು ಮುಖ್ಯಮಂತ್ರಿಯ ಆಪ್ತ ಗ್ರಹಣ ಮಾಹಿತಿ ಆಯುಕ್ತರು ವರದಿಯನ್ನು ಈಗಾಗಲೇ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಮಠಮಂದಿರಗಳಿಗೆ ಹಾನಿಯಾಗಿರುವುದನ್ನು ಆದ್ಯತೆಯ ಮೇಲೆ ಪರಿಶೀಲಿಸಿ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ವಿವರಗಳನ್ನು ನೀಡಿದರು. ಅದು ಕೆಳಗಿನಂತಿದೆ.
***
   ‘‘ಈ ಗ್ರಹಣ ಅಂತಕ್ಕದ್ದು ಏನು ಇದೆ, ಅದಕ್ಕಾಗಿ ನಮ್ಮ ಸರಕಾರ ಸಾಕಷ್ಟು ಮುಂಜಾಗ್ರತೆ ಕೈಗೊಂಡಿದ್ದುದರಿಂದ ಭಾರೀ ನಾಶ ನಷ್ಟಗಳು ಸಂಭವಿಸುವುದು ತಪ್ಪಿದೆ. ಇದು ನನ್ನ ಆಡಳಿತದ ಮೊದಲ ಯಶಸ್ಸು ಎಂದು ಹೇಳಬೇಕಾಗುತ್ತದೆ. ಗ್ರಹಣದಿಂದಾಗಿ ಮಂಗಳೂರು ಮುಳುಗುವುದರಲ್ಲಿತ್ತು. ಆದರೆ ಮಂಗಳೂರು ಕ್ಷೇತ್ರ ಅಂತಕ್ಕದ್ದು ಏನಿದೆಯೋ ಅದಕ್ಕೆ ಯಾವುದೇ ಹಾನಿ ಆಗದಂತೆ. ಕೇರಳದ ಮಂತ್ರವಾದಿಯೊಬ್ಬರಿಗೆ ಉಸ್ತುವಾರಿಯನ್ನು ನೀಡಿದೆವು. ಆದುದರಿಂದ ಇಂದು ಮಂಗಳೂರು ಮುಳುಗದೇ ಕರ್ನಾಟಕ ಅಂತಕ್ಕದ್ದು ಏನಿದೆಯೋ ಅದರೊಳಗೆ ಇನ್ನೂ ಉಳಿದುಕೊಂಡಿದೆ. ದಕ್ಷಿಣ ಕನ್ನಡಕ್ಕೆ ಏನೂ ಕೊಟ್ಟಿಲ್ಲ ಅಂತಕ್ಕ ಆರೋಪಕ್ಕೆ ಇದು ಉತ್ತರವಾಗಿದೆ. ದಕ್ಷಿಣ ಕನ್ನಡದ ಜನರ ಮೇಲೆ ಸಿಟ್ಟಿದ್ದಿದ್ದರೆ ಗ್ರಹಣದ ಪರಿಣಾಮದಿಂದ ಮಂಗಳೂರು ಮುಳುಗುವುದಕ್ಕೆ ಬಿಡುತ್ತಿದ್ದೆ. ಕೇರಳದ ನೂರು ಮಂತ್ರವಾದಿಗಳು ಜೊತೆ ಸೇರಿ ಸುಮಾರು 200 ಕೋಟಿ ರೂಪಾಯಿಯ ವೆಚ್ಚದಲ್ಲಿ ಮಾಡಿದ ಹೋಮದ ಪರಿಣಾಮವಾಗಿ ಮಂಗಳೂರು ಅಂತಕ್ಕಂತದ್ದು ಮಂಗಳೂರಾಗಿಯೇ ಉಳಿದಿದೆ....’’ ಕುಮಾರಸ್ವಾಮಿ ವಿವರಿಸತೊಡಗಿದರು.
ಈಗ ಪತ್ರಕರ್ತ ಎಂಜಲು ಕಾಸಿ ಎದ್ದು ನಿಂತು ಕೇಳಿದ ‘‘ಸಾರ್...ರಾಜ್ಯಾದ್ಯಂತ ಗ್ರಹಣದಿಂದ ಆದ ಹಾನಿಗಳೇನೇನು ಸಾರ್...?’’
 ಕುಮಾರ ಸ್ವಾಮಿ ವಿವರಿಸಿದರು ‘‘ನೋಡಿ, ಈ ಬಾರಿಯ ಗ್ರಹಣಅಂತಕ್ಕಂತದ್ದು ಏನಿದೆಯೋ ಅದರ ಕುರಿತಂತೆ ಹಿರಿಯ ಜ್ಯೋತಿಷಿಗಳಿಂದ ಸರಕಾರ ಸಾಕಷ್ಟು ಮಾಹಿತಿ ಪಡೆದು ಆಗುವ ಅನಾಹುತಗಳನ್ನು ತಡೆಯುವ ದಾರಿಯನ್ನು ಹುಡುಕಿತ್ತು. ಆದುದರಿಂದ ಭಾರೀ ನಾಶ ನಷ್ಟದಿಂದ ಕರ್ನಾಟಕ ಪಾರಾಗಿದೆ. ಆದರೆ ಕೆಲವು ಕಡೆ ಭಾರೀ ನಾಶ ನಷ್ಟ ಉಂಟಾಗಿರುವ ಬಗ್ಗೆ ವರದಿಗಳು ಬರುತ್ತಿವೆ. ಮುಖ್ಯವಾಗಿ ಉಡುಪಿಯಲ್ಲಿ ಕೃಷ್ಣ ಮಠದೊಳಗೆ ತುಂಬಾ ಅನಾಹುತಗಳಾಗಿವೆ. ಶಿರೂರು ಶ್ರೀ ಅವರ ಸಾವು ಅನ್ನತಕ್ಕಂತದ್ದೇನಿದೆಯೋ ಅದರ ಹಿಂದೆ ಗ್ರಹಣದ ಪರಿಣಾಮಗಳು ಎಷ್ಟು ಇವೆ ಎನ್ನುವುದನ್ನು ಅರ್ಹ ಜ್ಯೋತಿಷಿಗಳು ಮತ್ತು ಗ್ರಹಣ ತಜ್ಞರ ಮೂಲಕ ತನಿಖೆ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಸದ್ಯಕ್ಕೆ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೂ ಗ್ರಹಣವೇ ಕಾರಣವಾಗಿದ್ದು, ಅಲ್ಲಿನ ನಾಶ ನಷ್ಟಗಳು ಎಷ್ಟು ಎನ್ನುವುದರ ಕುರಿತಂತೆ ಒಂದು ವರದಿಯನ್ನು ತಯಾರಿಸಲು ಹೇಳಿದ್ದೇನೆ. ಶ್ರೀಗಳಿಗೂ ತುಂಬಾ ನಷ್ಟ ವುಂಟಾಗಿದ್ದು, ಅದನ್ನು ತುಂಬಿಸಿಕೊಡುವ ಭರವಸೆಯನ್ನು ನಾನು ನೀಡಿದ್ದೇನೆ....’’ ಎನ್ನುತ್ತಾ ಕುಮಾರಸ್ವಾಮಿ ಒಂದಿಷ್ಟು ಬೆವರೊರಸಿಕೊಂಡರು. ಬಳಿಕ ಮುಂದುವರಿಸಿದರು.
‘‘ಉತ್ತರ ಕರ್ನಾಟಕದಲ್ಲಿ ಗ್ರಹಣ ತನ್ನ ತೀಕ್ಷ್ಣ ಪರಿಣಾಮವನ್ನು ಬೀರಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವುದರ ಹಿಂದೆ ಗ್ರಹಣ ಕೆಲಸ ಮಾಡಿದೆ ಎಂದು ನನ್ನ ಆಸ್ಥಾನ ಜ್ಯೋತಿಷಿಗಳು ನನಗೆ ತಿಳಿಸಿದ್ದಾರೆ. ರಾಹು ಮತ್ತು ಕೇತು ಜೊತೆಯಾಗಿ ಶ್ರೀರಾಮುಲು ಜೊತೆಗೆ ಸೇರಿ ನೇರವಾಗಿ ಉತ್ತರಕರ್ನಾಟಕದ ಮೂಲಕ ಹಾದುಹೋಗಿರುವುದರಿಂದ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಆದರೆ ಈ ಗ್ರಹಣ ಬಿಡಿಸುವುದಕ್ಕೆ ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನವನ್ನು ಮಾಡಲಾಗಿದೆ. ಮುಖ್ಯವಾಗಿ ಬಳ್ಳಾರಿಯಲ್ಲಿ ಗಣಿರೆಡ್ಡಿಗಳು ತೋಡಿರುವ ಬೃಹತ್ ಹೊಂಡಗಳಲ್ಲೇ ನಾನೂರು ಸ್ವಾಮೀಜಿಗಳು ಹೋಮ ಹವಣ ಮಾಡಿದ್ದಾರೆ. ಗ್ರಹಣ ಇದೀಗ ಶಮನವಾಗಿರುವ ಕಾರಣ ನಿಧಾನಕ್ಕೆ ಉತ್ತರಕರ್ನಾಟಕದ ನಾಶ ನಷ್ಟಗಳು ಕಡಿಮೆಯಾಗಬಹುದು. ಈ ಸಂಬಂಧ ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ಬೇಕಾದ ಪರಿಹಾರವನ್ನು ನೀಡಬೇಕು ಎಂದಿದ್ದೇನೆ....ಸರಕಾರದ ಮೇಲೂ ಗ್ರಹಣ ತನ್ನ ದುಷ್ಪರಿಣಾಮಗಳನ್ನು ಬೀರಿದ್ದು ಹಲವು ನಾಶ, ನಷ್ಟಗಳನ್ನು ಉಂಟು ಮಾಡಿದೆ. ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾರ್ಯಾರ ಮೇಲೆ ಗ್ರಹಣ ಪರಿಣಾಮ ಬೀರಿದೆಯೋ ಅವರೆಲ್ಲರಿಗೂ ಸೂಕ್ತ ಪರಿಹಾರವನ್ನು ನೀಡಲಿದ್ದೇವೆ. ಮುಂದಿನ ನಿಗಮ ಮಂಡಳಿಯ ಹಂಚಿಕೆಯಲ್ಲಿ ಈ ಪರಿಹಾರವನ್ನು ನಾವು ಹಂಚಲಿದ್ದೇವೆ. ಸದ್ಯಕ್ಕೆ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಮುಷ್ಕರಗಳಿಗೂ ಗ್ರಹಣವೇ ಕಾರಣ ಎನ್ನುವ ವರದಿಯನ್ನು ನಮಗೆ ಅಧಿಕಾರಿಗಳು ನೀಡಿದ್ದಾರೆ. ಗ್ರಹಣ ತನ್ನ ಪರಿಣಾಮವನ್ನು ನಿಲ್ಲಿಸಿದ ತಕ್ಷಣ ಅವರೂ ತಮ್ಮ ಮುಷ್ಕರವನ್ನು ಹಿಂದೆಗೆಯಲಿದ್ದಾರೆ....’’
‘‘ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕೆ ಗ್ರಹಣವೇ ಕಾರಣವೆ?’’ ಕಾಸಿ ಕೇಳಿದ.
‘‘ಹೌದು. ಗ್ರಹಣ ಅಲ್ಪಮಟ್ಟಿಗೆ ಬಜೆಟ್‌ನ ಮೇಲೆ ಪರಿಣಾಮ ಬೀರಿದೆ. ಆದುದರಿಂದಲೇ ಗ್ರಹಣದ ಸಂದರ್ಭದಲ್ಲಿ ಉತ್ತರಕರ್ನಾಟಕದಲ್ಲಿ ಪರಿಸ್ಥಿತಿ ಉಲ್ಬಣಿಸಿದೆ. ಈ ಬಗ್ಗೆ ನಾನು ರಾಹು ಮತ್ತು ಕೇತು ಬಳಿ ಮಾತುಕತೆ ನಡೆಸಿ, ಒಂದು ಒಪ್ಪಂದಕ್ಕೆ ಬರಲು ನಿರ್ಧರಿಸಿದ್ದೇನೆ....’’ ಕುಮಾರ ಸ್ವಾಮಿ ಹೇಳಿದರು.
‘‘ರಾಹು ಮತ್ತು ಕೇತು ಅಂದರೆ....ಶ್ರೀರಾಮುಲು ಮತ್ತು ಯಡಿಯೂರಪ್ಪ ಅವರೇ ? ’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಬ್ರದರ್, ಏನೇನೋ ಅಪಾರ್ಥ ಕಲ್ಪಿಸಿ ಮತ್ತೆ ನನ್ನನ್ನು ಅಳುವ ಹಾಗೆ ಮಾಡಬೇಡಿ. ರಾಹು ಮತ್ತು ಕೇತು ಜೊತೆಗೆ ಮಾತುಕತೆಗೆ ಹಿರಿಯ ಮಂತ್ರವಾದಿಗಳ ನಿಯೋಗವೊಂದನ್ನು ಕಳುಹಿಸಲಿದ್ದೇವೆ.....ಈ ಬಗ್ಗೆ ಇಸ್ರೋ ವಿಜ್ಞಾನಿಗಳ ಜೊತೆಗೂ ನಾವು ಮಾತನಾಡಿದ್ದೇವೆ. ರಾಹು ಮತ್ತು ಕೇತು ಇರುವಲ್ಲಿಗೆ ಉಪಗ್ರಹಗಳನ್ನು ಕಳುಹಿಸಲು ಅವರು ವ್ಯವಸ್ಥೆ ಮಾಡುತ್ತಾರೆ ಎಂದು ಭರವಸೆ ಕೂಡ ಕೊಟ್ಟಿದ್ದಾರೆ. ಈ ಕರ್ನಾಟಕ ಜ್ಯೋತಿಷಿಗಳ ಮಹಿಮೆಯಿಂದ ವಿಶ್ವ ಮಟ್ಟದಲ್ಲಿ ಗುರುತಿಸುತ್ತಿದೆ. ಗ್ರಹಣದ ಸಂದರ್ಭದಲ್ಲಿ ಕರ್ನಾಟಕದ ಜ್ಯೋತಿಷಿಗಳು ಮಾಧ್ಯಮಗಳಲ್ಲಿ ನಡೆಸಿರುವ ಸಂಶೋಧನೆಗಳು ಇಂದು ವಿಶ್ವದ ಜನರ ಹುಬ್ಬೇರಿಸಿದೆ. ಭಾರತದ ಅಗಾಧ ಗ್ರಹಣ ಜ್ಞಾನಕ್ಕೆ ಬೆಕ್ಕಸ ಬೆರಗಾಗಿದ್ದಾರೆ...’’ ಕುಮಾರಸ್ವಾಮಿ ಹೇಳಿದರು.
‘‘ಸಾರ್, ಮುಂದಿನ ದಿನಗಳಲ್ಲಿ ಸರಕಾರ ಗ್ರಹಣಕ್ಕೆ ಸಂಬಂಧಿಸಿ ಇನ್ನೇನಾದರೂ ಯೋಜನೆಗಳನ್ನು ರೂಪಿಸಲಿದೆಯೇ?’’ ಕಾಸಿ ಕೇಳಿದ.
  ‘‘ಈ ಗ್ರಹಣ ಅಂತಕ್ಕಂತದ್ದೇನಿದೆಯೋ ಅದರ ಉಸ್ತುವಾರಿ ನೋಡಿಕೊಳ್ಳಲು ಗ್ರಹಣ ಖಾತೆಯೊಂದನ್ನು ತೆರೆಯಲಿದ್ದೇವೆ. ಗೃಹ ಸಚಿವರು ಇದ್ದ ಹಾಗೆಯೇ ಈ ಗ್ರಹಣ ಸಚಿವರು ನವಗ್ರಹಗಳ ಬದಲಾವಣೆಗಳ ಬಗ್ಗೆ ಗಮನ ಹರಿಸಿ, ಆ ಸಂದರ್ಭಗಳಲ್ಲಿ ನಾಡಿನ ಯೋಗಕ್ಷೇಮಕ್ಕೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳನ್ನು ಪರಿಶೀಲಿಸಲಿದ್ದಾರೆ. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಖಾತೆಗಳನ್ನು ಬೇರೆ ಬೇರೆ ಮಾಡಬೇಕೋ ಅಥವಾ ಒಂದೇ ಖಾತೆಯಡಿಯಲ್ಲಿ ಎರಡೂ ಗ್ರಹಣಗಳನ್ನು ನಿಭಾಯಿಸಬೇಕೋ ಎನ್ನುವುದನ್ನು ನಾವು ಚರ್ಚಿಸಲಿದ್ದೇವೆ....ಹಾಗೆಯೇ ರಾಜ್ಯಾದ್ಯಂತ ಪ್ರತಿ ತಾಲೂಕಿಗೆ ಹತ್ತು ಹೋಮಕುಂಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಮತ್ತು ಆ ಹೋಮಕುಂಡಗಳನ್ನು ನಿರ್ವಹಿಸಲು ಅರ್ಹ ವಿದ್ವಾಂಸರನ್ನು ನೇಮಕ ಮಾಡಲಾಗುತ್ತದೆ. ಎಲ್ಲ ಹೋಮಕುಂಡಗಳಿಗೆ ಸುರಿಯಲು ಬೇಕಾದಷ್ಟು ತುಪ್ಪ, ಹಾಲು ಮೊದಲಾದವುಗಳನ್ನು ಸರಕಾರದ ವತಿಯಿಂದಲೇ ಪೂರೈಸಲಾಗುತ್ತದೆ....’’
‘‘ಸಾರ್...ವೌಢ್ಯ ಕಾಯ್ದೆಯನ್ನು ಜಾರಿಗೊಳಿಸುವ ಕುರಿತಂತೆ ಯಾವುದಾದರೂ ಕ್ರಮ ಕೈಗೊಂಡಿದ್ದೀರಾ...?’’ ಕಾಸಿ ಮೆಲ್ಲಗೆ ಕೇಳಿದ.
  ‘‘ನೋಡು ಬ್ರದರ್....ವೌಢ್ಯದ ವಿರುದ್ಧ ಕಾಯ್ದೆಗೆ ಗ್ರಹಣ ಬಡಿದಿದೆ. ಆದುದರಿಂದ ಅದನ್ನು ಸದ್ಯಕ್ಕೆ ಅನುಷ್ಠಾನಗೊಳಿಸುವಂತಿಲ್ಲ. ಹಿಂದಿನ ಸರಕಾರ ರಾಹುಕೇತುಗಳ ಜೊತೆಗೆ ವೈರ ಕಟ್ಟಿಕೊಂಡ ಕಾರಣಕ್ಕೆ ಇಂದು ಅವರು ಕೈ ಕಟ್ಟಿ ಕೂರಬೇಕಾಗಿದೆ. ನಮ್ಮ ಸರಕಾರ ರಾಹುಕೇತುಗಳ ಬೆಂಬಲದಿಂದ ರಚನೆಯಾಗಿರುವುದರಿಂದ ಅವರ ವಿರುದ್ಧ ಕಾನೂನು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ...’’ ಎಂದವರೇ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಮುಗಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)