varthabharthi

ಅನುಗಾಲ

ದೇಶವನ್ನು ದೇವರೇ ಕಾಪಾಡಲಿ

ವಾರ್ತಾ ಭಾರತಿ : 2 Aug, 2018
ಬಾಲಸುಬ್ರಹ್ಹಣ್ಯ ಕಂಜರ್ಪಣೆ

ಬಹುಜನ ಹಿತಾಯ ಬಹುಜನ ಸುಖಾಯ ಸರಿ; ಆದರೆ ಈ ಬಹುಜನ ಒಳ್ಳೆಯವರಾದರೆ ಮಾತ್ರ ಇಂತಹ ಮಾತುಗಳು ಅರ್ಥಪೂರ್ಣವಾದಾವು; ಇಲ್ಲವಾದರೆ ಅವು ನಮ್ಮ ಕಾನೂನುಗಳನ್ನು ಕೈಗೆತ್ತಿಕೊಳ್ಳುವವರ ಕೈಯಲ್ಲಿ ಅತ್ಯಾಚಾರ ಕ್ಕೊಳಗಾಗಿ ನಲುಗುವ ಮುಗ್ಧರಂತೆ ಅರ್ಥ ಕಳಕೊಳ್ಳುತ್ತವೆ. ಅಲ್ಲಿಯವರೆಗೆ ದೇವರೇ ಈ ದೇಶವನ್ನು ಕಾಪಾಡಬೇಕು.


ಎಲ್ಲರೂ ಕೇಳಿರಬಹುದಾದ ಒಂದು ಕತೆಯಿದೆ: ಒಬ್ಬ ವಿದೇಶಿ, ನಾಸ್ತಿಕ (ಪ್ರಾಯಃ ಕಮ್ಯುನಿಸ್ಟ್ ರಾಷ್ಟ್ರದವನು!) ಭಾರತಕ್ಕೆ ಬಂದನಂತೆ. ಅವನಿಗೆ ಈ ದೇಶದ ಜನರ ಆಸ್ತಿಕತೆ, ನಂಬಿಕೆಗಳು ಇವನ್ನೆಲ್ಲ ನೋಡುವ ಕುತೂಹಲ. ಅವನ ಭೇಟಿ ಭಾರೀ ಸುದ್ದಿ ಮಾಡಿತ್ತು. ಅವನು ಎರಡು ವರ್ಷ ದೇಶದ ಉದ್ದಗಲವನ್ನು ಅಳೆದ. ಎಲ್ಲ ಕಡೆ ಹೋದ. ಜನರನ್ನು ಭೇಟಿಯಾದ. ಮರಳಿಹೋಗುವಾಗ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಅವನ ಸಂದರ್ಶನಕ್ಕಾಗಿ ಕಾದು ಕುಳಿತಿದ್ದರು. ಈ ಅಸಾಮಿ ವಿಭೂತಿ, ಕುಂಕುಮ, ಗಂಧ ಇನ್ನೇನು ಸಿಕ್ಕುತ್ತದೋ ಅದೆಲ್ಲವನ್ನೂ ಬಳಿದುಕೊಂಡು ಕೊರಳಿಗೆ ರುದ್ರಾಕ್ಷಿ ಮತ್ತು ಹತ್ತು ಹಲವು ಧಾರ್ಮಿಕ ಕುರುಹುಗಳನ್ನು ಧರಿಸಿದ್ದ. ಅವಧೂತರಂತಿದ್ದ ಈ ವ್ಯಕ್ತಿಯನ್ನು ಕಂಡ ಸಂದರ್ಶಕರು ನೀವು ಇಲ್ಲಿಗೆ ಬರುವಾಗ ಅಷ್ಟೊಂದು ನಾಸ್ತಿಕರಾಗಿದ್ದಿರಿ, ಈಗೇನು ಈ ಬದಲಾ ವಣೆ? ಎಂದು ಕೇಳಿದರು. ಅವನು, ‘‘ಇಲ್ಲಿ ಬಂದ ಆನಂತರ ನನಗೆ ಈ ದೇಶದಲ್ಲಿ ಖಂಡಿತಾ ದೇವರಿದ್ದಾನೆ ಅಂತ ಅನ್ನಿಸಿದೆ; ದೇವರು ಇಲ್ಲಿ ಇಲ್ಲದಿರು ತ್ತಿದ್ದರೆ ಈ ದೇಶ ದೇಶವಾಗಿ ಇಷ್ಟರ ತನಕ ಉಳಿಯುತ್ತಿರಲಿಲ್ಲ!’’ ಎಂದ. ನಿಜಕ್ಕೂ ಭಾರತವು ಧರ್ಮಕ್ಕೂ ಧರ್ಮಗ್ಲಾನಿಗೂ ಪುರಾಣಕಾಲದಿಂದ ಹೆಸರಾದ ದೇಶ. ನಮ್ಮ ಹೆಮ್ಮೆಯ ಪುಣ್ಯಭೂಮಿ. ಆದರೆ ಭೂಮಿಗೆ ಭಾರವಾಗುವ ವ್ಯಕ್ತಿಗಳು, ಸಂಗತಿಗಳು ತುಂಬುತ್ತಲೇ ಇರುವುದರಿಂದ ಭೂಭಾರಹರಣಕ್ಕಾಗಿ ಭಗವಂತ ಹತ್ತವತಾರ ಎತ್ತಿದನೆಂದು ಪ್ರತೀತಿ. ಅಲ್ಲಿಗೆ ಅವನ ಕಲ್ಪನಾಶಕ್ತಿಯೂ ಸಂಕಲ್ಪಶಕ್ತಿಯೂ ಉಡುಗಿಹೋಗಿ ಅವನ ಅವತಾರಗಳು ಸಮಾಪ್ತಿಯಾದವು. ಅವನು ದೇವಸ್ಥಾನಗಳಂತಹ ಪೂಜಾ ಕೇಂದ್ರಗಳಲ್ಲೂ ಫೋಟೋ, ಚಿತ್ರಗಳಲ್ಲೂ ಉಳಿದ. ಅವನ ಅಧಿಕಾರಪತ್ರವನ್ನು ಹೊಂದಿದವರೆಂದುಕೊಂಡು ಕೆಲವು ದೇವಮಾನವರು ಆಗಾಗ ಹುಟ್ಟಿ ಬಂದರು. ಮನುಷ್ಯಸಹಜವಾದ ಕಾಯಿಲೆಗಳಿಗೆ, ಮುಪ್ಪಿಗೆ ತುತ್ತಾಗಿ ಸತ್ತುಹೋದರು. ಈಗಲೂ ಕೆಲವರಿದ್ದಾರೆ; ಆದರೆ ಅವರಲ್ಲನೇಕರು ಜೈಲು ಸೇರಿದ್ದಾರೆ. ಹೊರಗಿರುವವರ ಸತ್ಯಶೋಧನೆಯಾಗಬೇಕಾಗಿದೆ.

ಒಂದು ಹಾಸ್ಯ/ವ್ಯಂಗ್ಯ ಚಟಾಕಿಯಿದೆ: ಅಮೆರಿಕ ಮತ್ತು ರಶ್ಯಾದ ಅಧ್ಯಕ್ಷರು ಮತ್ತು ಭಾರತದ ಪ್ರಧಾನಿ ದೇವರಲ್ಲಿ ತಮ್ಮತಮ್ಮ ದೇಶಗಳ ತಾಪತ್ರಯಗಳು, ಕಷ್ಟ ಪರಂಪರೆಗಳು ದೂರವಾಗುವುದು ಯಾವಾಗ ಎಂದು ವಿಚಾರಿಸಲು ದೇವರಲ್ಲಿ ಹೋದರು. ದೇವರು ಅಮೆರಿಕದ ಅಧ್ಯಕ್ಷರಿಗೆ ‘‘ನಿಮ್ಮ ಚುನಾಯಿತ ಅವಧಿಯಲ್ಲಿ ಸಾಧ್ಯವಾಗದು’’ ಎಂದು ಹೇಳಿದ; ರಶ್ಯಾದ ಅಧ್ಯಕ್ಷರಿಗೆ ‘‘ನಿಮ್ಮ ಜೀವಿತಾವಧಿಯಲ್ಲಿ ಸಾಧ್ಯವಾಗದು’’ ಎಂದು ಹೇಳಿದ; (ರಶ್ಯಾದಲ್ಲಿ ಸರ್ವಾಧಿಕಾರವಿದ್ದು ಚುನಾವಣೆಗಳಿಲ್ಲದ ಸಂದರ್ಭವನ್ನು ಟೀಕಿಸಿ ಈ ಉತ್ತರ!) ಮತ್ತು ಭಾರತದ ಪ್ರಧಾನಿಗೆ ‘‘ನಿಮ್ಮ ಅವಧಿ ಬಿಡಿ, ನನ್ನ ಜೀವಿತಾವಧಿಯಲ್ಲೂ ಸಾಧ್ಯವಾಗದು’’ ಎಂದ!

ಮೇಲ್ನೋಟಕ್ಕೆ ಇದು ದೇಶಾಭಿಮಾನದ ಕೊರತೆಯಿಂದಲೋ ಸಿನಿಕತನದಿಂದಲೋ ಮಾಡುವ ಟೀಕೆಗಳೆನ್ನಬಹುದು. ಆದರೆ ನಮ್ಮ ದೇಶದ ವಾಸ್ತವ ಚಿತ್ರ ಇದು. ಪಾಶ್ಚಾತ್ಯರಿಗೆ ಭಾರತವೆಂದರೆ ಒಂದು ಹಾವಾಡಿಗರ, ರೋಗ-ರುಜಿನದ, ಮೂಢನಂಬಿಕೆಗಳ ಆಗರವಾಗಿದ್ದ ಕಾಲವೊಂದಿತ್ತು. ಆ ಪರಿಸ್ಥಿತಿ ಈಗ ಸ್ವಲ್ಪಬದಲಾಗಿದೆ. ಆದರೆ ಇನ್ನೂ ಎಲ್ಲ ದೇಶಗಳಲ್ಲಿ ಜನರು ಕಡಿಮೆಯಿದ್ದು ದೇಶವಿಸ್ತಾರ ಜಾಸ್ತಿಯಿದ್ದರೆ ಈ ದೇಶ (ಮತ್ತು ಭಾರತ ಭೂಖಂಡದ ಪೂರ್ವದ ಇತರ ಅನೇಕ ದೇಶಗಳೂ!) ಜಾಗ ವಿಸ್ತಾರವಾಗದಿದ್ದರೂ ಜನಸಮೃದ್ಧವಾಗಿದೆ.

ಜಗತ್ತಿನ ಎಲ್ಲೆಡೆ ಒಳಿತು ಕೆಡುಕುಗಳು ವಿವಿಧ ವಿನ್ಯಾಸಗಳಲ್ಲಿ ವಿವಿಧ ನಿಷ್ಪತ್ತಿಯಲ್ಲಿವೆಯೆಂದು ಒಪ್ಪಿಕೊಂಡರೂ ಅವುಗಳ ಸಮಸ್ಯೆ ಭಾರತದಷ್ಟು ಆಳವಾಗಿಲ್ಲ. ನಮ್ಮಲ್ಲಿರುವ ಸಾವಿರಾರು ಜಾತಿ, ಪಂಗಡಗಳು, ಭಿನ್ನತೆಗಳು, ಗುಣಾವಗುಣಗಳು ಇನ್ನೆಲ್ಲೂ ಇರಲಾರದು. ಯಾವೊಂದು ವಿಚಾರದಲ್ಲೂ ಒಮ್ಮತಕ್ಕೆ ಬಾರದಷ್ಟು ವಿಕ್ಷಿಪ್ತತೆ, ಅವ್ಯವಸ್ಥೆ ಇಲ್ಲಿದೆಯೆಂದು ಅನ್ನಿಸುತ್ತದೆ. ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳಾದರೂ ನಾವಿನ್ನು ‘ದೂರು ಪೆಟ್ಟಿಗೆ’ಗೆ ಕಸ ಎಸೆಯುವುದರಲ್ಲಿದ್ದೇವೆಯೇ ಹೊರತು ಸರಿಪಡಿಸುವುದಕ್ಕಲ್ಲ. ಜಪಾನಿನಂತಹ ಪುಟ್ಟ ದೇಶವು ಎರಡನೇ ಮಹಾಯುದ್ಧದ ನಂತರ ಹೇಗೆ ಫೀನಿಕ್ಸ್ ಹಕ್ಕಿಯಂತೆ ಮುಂದುವರಿಯಿತು, ಹೊಸದಾಗಿ ಹುಟ್ಟಿದರೂ ಇಸ್ರೆಲ್ ಹೇಗೆ ಒಂದು ಶಕ್ತಿಯುತ ರಾಷ್ಟ್ರವಾಯಿತು, ಸರ್ವಾಧಿಕಾರದಿಂದ, ಮಹಾಯುದ್ಧಗಳಿಂದ ಬಡವಾದ ಜರ್ಮನಿ ಹೇಗೆ ಇಂದು ವಿಶ್ವದ ಒಂದು ಬಲಿಷ್ಠ ರಾಷ್ಟ್ರವಾಗಿದೆ ಮುಂತಾದ ಉದಾಹರಣೆಗಳನ್ನು ನಾವು ಪಾಠ ಹೇಳುತ್ತೇವೆಯೇ ಹೊರತು ಅದನ್ನು ಇಲ್ಲಿ ಕಾರ್ಯಗತವಾಗಿಸುವುದಿಲ್ಲ.

ನಮ್ಮಲ್ಲಿರುವ ಅಜ್ಞಾನ, ಬಡತನ, ಅನಾರೋಗ್ಯ, ಅನಕ್ಷರತೆ, ಭ್ರಷ್ಟತೆ ಮುಂತಾದ ಪಿಡುಗುಗಳಿಗೆ ಪರಿಹಾರವನ್ನು ಹುಡುಕುವುದರ ಬದಲು ನಾವು ನಮಗಿಂತ ಕೆಟ್ಟುಹೋದ ನೆರೆಹೊರೆಯ ಪುಟ್ಟ ದೇಶಗಳನ್ನು ಹೋಲಿಸಿ ನಾವೇ ವಾಸಿ ಎಂದು ಬೆನ್ನುತಟ್ಟಿಕೊಳ್ಳುತ್ತೇವೆ ಮತ್ತು ಇಂತಹ ಕೆಡುಕುಗಳು ಇದ್ದರೇ ನಮಗೆ ಲಾಭ ಎಂದು ಯೋಚಿಸುತ್ತೇವೆ. ಯಾರಾದರೂ ವಿವೇಕದ ಮಾತುಗಳನ್ನಾಡಿದರೆ ಅದು ನಮಗೆ ಹೇಳಿದ್ದೇ ಅಲ್ಲ ಎಂದೋ ಆ ವ್ಯಕ್ತಿಗೆ ಬೇರೆ ಕೆಲಸವಿಲ್ಲ ಎಂದೋ ಆತನಿಗೆ ಯಾವುದೋ ಗುಪ್ತಕಾರ್ಯಸೂಚಿಯಿದೆಯೆಂದೋ ಕೊಡವಿ ಹಾಕುತ್ತೇವೆ. ಪಲಾಯನಮಾಡುವ ಎಲ್ಲ ತಂತ್ರಗಳನ್ನು ನಮ್ಮ ಸಮಾಜ ಕರಗತಮಾಡಿಕೊಂಡಂತಿದೆ. ಅನಕ್ಷರಸ್ಥನಿಂದ ವಿದ್ವಾಂಸನ ವರೆಗೆ, ಬಡವನಿಂದ ಬಲ್ಲಿದನ ವರೆಗೆ, ಜಾತ್ಯತೀತವಾಗಿ ಪಕ್ಷಾತೀತವಾಗಿ, ಉಳಿಸಿ ಕೊಂಡ ತತ್ವ-ಸಿದ್ಧಾಂತವೆಂದರೆ, ನನಗಾಗಿ ಈ ದೇಶವಿದೆ ಎಂಬುದು. ಈ ದೇಶ ನನ್ನದು ಎಂದರೆ ಅದು ನನ್ನ ಸ್ವತ್ತು ಎಂಬಂತಾಗಿದೆಯೇ ಹೊರತು ಅದರ ಅಭಿವೃದ್ಧಿಗೆ ನಾನು ದುಡಿಯಬೇಕು ಎಂಬ ಕಲ್ಪನೆಯೇ ನಮ್ಮಲ್ಲಿ ಇಲ್ಲವೇನೋ ಅಥವಾ ಇದ್ದಿದ್ದರೂ ಅದೀಗ ಸತ್ತುಹೋಗಿದೆಯೇನೋ ಅನ್ನಿಸುತ್ತಿದೆ.

ಇದಕ್ಕೆ ಯಾರು ಹೊಣೆ? ಮತ್ತು ಇದಕ್ಕೆ ಪರಿಹಾರವೇನು? ಭಾರತವು ಪ್ರಜಾತಂತ್ರವೆಂಬ ವ್ಯವಸ್ಥೆಯನ್ನು ನಂಬಿಕೊಂಡಿದೆ. ಇದೂ ಒಂದು ರೀತಿಯಲ್ಲಿ ದೇವರನ್ನು ನಂಬಿದಂತೆ. ಕೆಲಸವು ಫಲಪ್ರದವಾಯಿತೋ ದೇವರು ನೆರವೇರಿಸಿದ ಎನ್ನುವುದು; ವಿಫಲವಾಯಿತೋ ಅದು ನಮ್ಮ ಗ್ರಹಚಾರ ಎಂದುಕೊಳ್ಳುವುದು.
ಇತ್ತೀಚೆಗಿನ ದಿನಗಳಲ್ಲಿ ದೇಶದ ಎಲ್ಲರೂ ಕಾನೂನನ್ನು ಪಾಲಿಸುವುದರ ಬದಲು ತಾವೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕಾನೂನು ಪಾಲಕರ ಹೊಣೆಗೇಡಿತನವೂ ಇದಕ್ಕೆ ಕಾರಣವಾಗಿರಬಹುದಾದರೂ ಅದಕ್ಕೊಂದು ಶಿಸ್ತಾದರೂ ಇರಬೇಕಲ್ಲ! ಕೊಲೆ, ಹಿಂಸೆ ಇವೆಲ್ಲ ಹಿಂದೆ ವೈಯಕ್ತಿಕ ಗುಣಗಳಾಗಿದ್ದು ಈಗ ಅವು ಸಾಮೂಹಿಕ ಗುಣಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಕಾನೂನನ್ನು ಎತ್ತಿಹಿಡಿಯಬೇಕಾದವರು ಅದನ್ನೊಂದು ಆಯುಧವಾಗಿ ಬಳಸುತ್ತಿದ್ದಾರೆಂಬುದು ನಮ್ಮ ನ್ಯಾಯಾಲಯಗಳಲ್ಲಿ ಬರುವ ತೀರ್ಪುಗಳಿಂದಲಾದರೂ ಗೊತ್ತಾಗುತ್ತದೆ. ಕೇರಳದಲ್ಲಿ ಲಾಕಪ್ಪಿನಲ್ಲಿ ಅಮಾಯಕನೊಬ್ಬನಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಪ್ರಕರಣವೊಂದರಲ್ಲಿ ಇಬ್ಬರು ಪೊಲೀಸರಿಗೆ ಮರಣದಂಡನೆಯ ಶಿಕ್ಷೆ ಘೋಷಣೆಯಾಗಿದೆ. ಅವರ ಈ ಚಿತ್ರಹಿಂಸೆಯನ್ನು ಪೋಷಿಸಿದ ಮೇಲಧಿಕಾರಿಗಳಿಗೂ ಶಿಕ್ಷೆಯಾಗಿದೆ. ಗುಜರಾತ್‌ನಲ್ಲಂತೂ 2002ರ ನರಮೇಧದ ನೆರಳಿನಡಿ ಇನ್ನೂ ಶಿಕ್ಷೆಗಳಾಗು ತ್ತಲೇ ಇವೆ. ಬಾಲಕಿಯರ ಮೇಲಣ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳ ವಿರುದ್ಧ ಕಠಿನ ಶಿಕ್ಷೆಯ ತಿದ್ದುಪಡಿಗಳನ್ನು ಕಾನೂನಿಗೆ ತಂದರೂ ಅಂತಹ ಅಪರಾಧಗಳು ಸ್ಪರ್ಧಾತ್ಮಕವಾಗಿ ಮುಂದುವರಿಯುತ್ತಿವೆ. ಸತ್ಯ ಮತ್ತು ಸೌಂದರ್ಯದ ಪ್ರಜ್ಞೆಯೇ ಕುಂಠಿತವಾಗುತ್ತಿದೆ. ಅಫ್ಘಾನಿಸ್ತಾನದಲ್ಲಿನ ಪುರಾತನ ಬಾಮಿಯಾನ್ ಬುದ್ಧನ ವಿಗ್ರಹವನ್ನು ತಾಲಿಬಾನ್ ಕೆಡವಿದಾಗ ಅದು ಸಂಸ್ಕೃತಿಯ ದೋಷವಲ್ಲ, ಅಭಾವವೆಂದು ಟೀಕಿಸಿದ ನಾವೇ ಈಗ ತಾಜ್‌ಮಹಲಿನಂತಹ ಸುಂದರ ಕಲಾಕೃತಿಯ ನಾಶವನ್ನು ಎದುರುನೋಡುತ್ತಿದ್ದೇವೆ. ನಮ್ಮಲ್ಲಿರುವ ವಿವೇಕವು ಅಳಿಸಿಹೋಗುತ್ತಿದೆ.

ಗಡಿಯಲ್ಲಿರುವ ಜವಾನನು ಗಡಿಯಾಚೆಗಿನ ಜವಾನನ್ನು ಕೊಲ್ಲುವಾಗ  ಅವನಿಗೆ ತಾನು ಈ ದೇಶದ ರಕ್ಷಕ ಎಂದಷ್ಟೇ ಮನಸ್ಸಿನಲ್ಲಿರುತ್ತದೆ; ಎದುರಾಳಿಯ ಮೇಲೆ ವೈಯಕ್ತಿಕ ದ್ವೇಷವಿರುವುದಿಲ್ಲ. ಆದರೆ ದೇಶದೊಳಗೆ ನಿತ್ಯ ನೋಡುತ್ತಿರುವ ನೆರೆಹೊರೆಯವರನ್ನು ಜಾತಿ-ಧರ್ಮ- ಭಾಷೆ-ಮತಾಧಾರಿತವಾಗಿ ದ್ವೇಷಿಸುವುದು, ಸಂಶಯಪಡುವುದು ಎಂದಿಗಿಂತ ಹೆಚ್ಚಾಗಿದೆ. ಎಲ್ಲವನ್ನೂ ನಮ್ಮ ನಮ್ಮ ಮೂಗಿನ ನೇರಕ್ಕೆ ನೋಡುವುದು ಮನುಷ್ಯ ಸಹಜ ದೌರ್ಬಲ್ಯವೆಂದು ಪರಿಗಣಿಸಿದರೂ ಅದು ಇನ್ನೊಬ್ಬನ ನಾಶಕ್ಕೆ ಪಣತೊಡುವಷ್ಟು ಅಥವಾ ಮಾನವೀಯತೆಯ ಘನತೆಯನ್ನು ಅಲ್ಲಗಳೆಯುವಷ್ಟು ಮತ್ತು ಬದುಕನ್ನು ಇಷ್ಟೊಂದು ಕ್ಷಣಿಕವಾಗುವಷ್ಟು, ಅಸಹನೀಯವಾಗುವಷ್ಟು ಕೆಡಬಾರದಲ್ಲ! ಭಾರತವೆಂಬ ಭವ್ಯ ರಾಷ್ಟ್ರದಲ್ಲಿ ನಡೆಯಬಾರದ್ದು ನಡೆಯುತ್ತಿದೆ ಎಂದರೆ ಹೇಳಬೇಕಾದ್ದನ್ನು ಹೇಳಿದಂತಾಗುವುದಿಲ್ಲ. ಕಳೆದ ವಾರ ರಾಜ್ಯ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸಭಾಪತಿಯವರು ‘‘ಈ ದೇಶದ ಪ್ರಜಾಪ್ರಭುತ್ವವನ್ನು ದೇವರೇ ಕಾಪಾಡಬೇಕು’’ ಎಂದರೆಂದು ವರದಿಯಾಗಿದೆ.

ಇದಕ್ಕೆ ಕಾರಣರಾರು ಅಥವಾ ಏನಿರಬಹುದು ಎಂದು ಅರ್ಥವಾಗದವರು ಅವರೇನಲ್ಲ. ಈ ಸೂಚನೆಗಳು ಸಾಕಾಗುವುದಿಲ್ಲ; ಬದಲಿಗೆ ಸ್ಪಷ್ಟಮಾತುಗಳು, ಕ್ರಿಯೆಗಳು ಬೇಕು. ನಮ್ಮನ್ನು ಆಳುವವರು ಎಂತಹವರು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ನಾವೇ ಆರಿಸಿ ಕಳುಹಿಸಿರುವುದರಿಂದ ನಾವೇ ನಮ್ಮನ್ನು ಆಳುವವರು. ಜನರಿಂದ, ಜನರಿಗಾಗಿ, ಜನರೇ ಎಂಬುದು ಒಂದು ಆಕರ್ಷಕ ನುಡಿಮುತ್ತು. ಪರಿಣಾಮವಾಗಿ ಸರಕಾರದ, ಆಡಳಿತದ ಯಾವುದೇ ತಪ್ಪುಗಳೂ ಮತದಾರರ ಬಹುಮತದ ಮೇಲೆ ತಮ್ಮ ಭಾರವನ್ನು ಹೇರುತ್ತವೆ. ಜನತೆ ತಮ್ಮ ಯೋಗ್ಯತೆಗನುಸಾರವಾದ ಸರಕಾರವನ್ನು ಪಡೆಯುತ್ತದೆ ಎಂಬ ಮಾತಿದೆ. ಹಾಗೆಯೇ ನಾವು ಯೋಗ್ಯರಾದರೆ ನಮ್ಮ ಸರಕಾರವು ಯೋಗ್ಯವಾಗಿರುತ್ತದೆ; ಪರ್ಯಾಯವಾಗಿ ನಾವು ಆಯೋಗ್ಯರಾದರೆ ನಮ್ಮ ಸರಕಾರವೂ ಅಯೋಗ್ಯ ವಾಗಿರುತ್ತದೆ. ಇದು ಕೇಂದ್ರಕ್ಕಾದರೂ ಸರಿಯೆ: ರಾಜ್ಯಕ್ಕಾದರೂ ಸರಿಯೆ. ಇದೊಂದು ವಿಷವೃತ್ತ; ವಿಷುವವೃತ್ತ. ಒಬ್ಬ ಹಿತಕಾರಿ ಸರ್ವಾಧಿಕಾರಿ (ಚಿಛ್ಞಿಛಿಟ್ಝಛ್ಞಿಠಿ ಜ್ಚಿಠಿಠಿಟ್ಟ) ಬಂದರೆ ದೇಶ ಸರಿಯಾಗಬಹುದು ಎಂದು ಹೇಳುವವರನ್ನು ಕಂಡಿದ್ದೇವೆ. ಸರ್ವಾಧಿಕಾರದಲ್ಲೇ ಕೇಡು ಅಡಗಿದೆ. ಒಬ್ಬ ವ್ಯಕ್ತಿ ಎಷ್ಟೇ ಒಳ್ಳೆಯವನಾದರೂ ಸಜ್ಜನನಾದರೂ ಅಧಿಕಾರದ ಅಮಲು ಅವನನ್ನು ಕೆಡಿಸುತ್ತದೆಯೆಂಬುದನ್ನು ಇತಿಹಾಸ ಅನೇಕ ಬಾರಿ ಹೇಳಿದೆ. ಅವನು ಒಂದೋ ತನ್ನ ನಾಶಕ್ಕೆ, ಇಲ್ಲವೇ ಇತರರ ನಾಶಕ್ಕೆ ಕಾರಣನಾಗುತ್ತಾನೆ. ಇದಕ್ಕೆ ಪರ್ಯಾಯವಾಗಿ ಕೆಲವೇ ಜನರು ಅಧಿಕಾರ ಹಿಡಿಯುವುದೂ ಅಷ್ಟೇ ಅಪಾಯಕಾರಿ. ಬಹುತೇಕ ಕಮ್ಯುನಿಸ್ಟ್ ರಾಷ್ಟ್ರಗಳು ಸರ್ವಾಧಿಕಾರದಿಂದಾಗಿ ನಲುಗಿಲ್ಲ; ಕೆಲವೇ ಜನರ ಇಷ್ಟಾನಿಷ್ಟಗಳ ಮೇಲೆ ಅಲ್ಲಿನ ಜನತೆಯ ಭವಿಷ್ಯವು ಅವಲಂಬಿಸಿರುವುದರಿಂದ ಸದಾ ಅಂತಹ ವ್ಯವಸ್ಥೆಗೆ ಮಂಕು ಕವಿದಿರುತ್ತದೆ.

ಯಾವುದೇ ಜಾತಿ-ಮತ-ಧರ್ಮಗಳ ಮಠಕಟ್ಟಿಕೊಂಡವರೂ ಸಕ್ರಿಯ ರಾಜಕಾರಣಿಗಳಿಗಿಂತ ಕೀಳಾಗಿ ವ್ಯವಹರಿಸುವುದನ್ನು ಮತ್ತು ಕಾಮ-ಕ್ರೋಧ- ಲೋಭ-ಮೋಹ ಮುಂತಾದ ರಾಗದ್ವೇಷಗಳ ಪೋಷಣೆಯಲ್ಲಿ ನಿರತರಾಗಿರು ವುದನ್ನು ಗಮನಿಸಿದರೆ ಇಲ್ಲಿ ಲೌಕಿಕವೂ ಆಧ್ಯಾತ್ಮಿಕವೂ ಕೆಟ್ಟದ್ದನ್ನೆಸಗುವುದರಲ್ಲಿ ಸಂಗಮಿಸಿವೆಯೆಂದನ್ನಿಸುತ್ತದೆ. ಯಾವುದೇ ಸಕ್ರಿಯ ರಾಜಕಾರಣದಲ್ಲಿಲ್ಲದ ಮಂದಿಯೂ ಒಬ್ಬರ ಕೆಟ್ಟದ್ದನ್ನು ಇನ್ನೊಬ್ಬನ ಒಳ್ಳೆಯತನದೊಂದಿಗೆ ಹೋಲಿಸುವುದಿಲ್ಲ; ಬದಲಾಗಿ ಇನ್ನೊಬ್ಬನ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಕೆಟ್ಟತನದೊಂದಿಗೆ ಹೋಲಿಸುತ್ತಾರೆ. ಅವರಿಗಿಂತ ಇವರಾದೀತು ಎಂಬಲ್ಲಿ ನಿಜಕ್ಕೂ ಧ್ವನಿ ಈ ಇಬ್ಬರೂ ಅಯೋಗ್ಯರು ಎಂದೇ.

ಇನ್ನೂ ವಿಚಿತ್ರವೆಂದರೆ ಯಾರನ್ನಾದರೂ ಬೆಂಬಲಿಸಬೇಕೆಂದರೆ ಆಗ ನಮಗೆ ಸಮಾಜದ, ದೇಶದ ಒಳಿತು ಮಾನ್ಯವಾಗುವುದಿಲ್ಲ. ತೀರ್ಪು ನೀಡಿ ಅದಕ್ಕೆ ಕಾರಣ-ಅದೂ ಇಲ್ಲವಾದರೆ-ನೆಪ- ಹೀಗೆ ಸಮರ್ಥನೆಯನ್ನು ಹುಡುಕುತ್ತೇವೆ. ಮೂಲಭೂತ ಆದ್ಯತೆಯು ಕಟ್ಟುವುದಕ್ಕಿಂತ ಮುರಿಯುವುದಕ್ಕೇ ಇದ್ದರೆ ದೇಶ ಕಟ್ಟುವುದಾದರೂ ಹೇಗೆ?

ದೇವರೆಂಬುದು ವೈಯಕ್ತಿಕ; ದೇಶವೆಂಬುದು ಸಾಮೂಹಿಕ. ಸಾಮೂಹಿಕ ಹಿತಾಸಕ್ತಿಗೆ ವರ್ತಮಾನದ ಸಲಕರಣೆಗಳಷ್ಟೇ ಸಾಕಾಗುವುದಿಲ್ಲ. ಭೂತಕಾಲದ ದ್ರವ್ಯಗಳನ್ನು ಬಳಸಿಕೊಂಡು ಭವಿಷ್ಯದ ಕಲ್ಪನೆಯನ್ನಿಟ್ಟುಕೊಂಡು ಹಿತವಾಗಿ, ಮಿತವಾಗಿ ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕವಾಗಿ ಬದುಕಬೇಕಾದದ್ದು ತೀರ ಅಗತ್ಯ. ಇದು ನಿಸ್ವಾರ್ಥಸೇವೆಯೆಂದು ಯಾರೂ ತಿಳಿಯಬೇಕಾಗಿಲ್ಲ. ಇದರಲ್ಲಿ ಮನುಷ್ಯನ ಶಾಶ್ವತ ಸುಖದ, ಸಂತೋಷದ ಪ್ರಾಪ್ತಿಯಿದೆ. ಇದನ್ನು ಬಯಸುವವರು ಹೆಚ್ಚಾದರೆ ಮಾತ್ರ ದೇಶ ಹೂವಿನ ಹಾಸಿಗೆಯಾದೀತು. ಬಹುಜನ ಹಿತಾಯ ಬಹುಜನ ಸುಖಾಯ ಸರಿ; ಆದರೆ ಈ ಬಹುಜನ ಒಳ್ಳೆಯವರಾದರೆ ಮಾತ್ರ ಇಂತಹ ಮಾತುಗಳು ಅರ್ಥಪೂರ್ಣವಾದಾವು; ಇಲ್ಲವಾದರೆ ಅವು ನಮ್ಮ ಕಾನೂನುಗಳನ್ನು ಕೈಗೆತ್ತಿಕೊಳ್ಳುವವರ ಕೈಯಲ್ಲಿ ಅತ್ಯಾಚಾರಕ್ಕೊಳಗಾಗಿ ನಲುಗುವ ಮುಗ್ಧರಂತೆ ಅರ್ಥ ಕಳಕೊಳ್ಳುತ್ತವೆ.
ಅಲ್ಲಿಯವರೆಗೆ ದೇವರೇ ಈ ದೇಶವನ್ನು ಕಾಪಾಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)