varthabharthiಅನುಗಾಲ

ನುಡಿಗೂ ನಾಡಿಗೂ ಒಬ್ಬರೇ ನಾಡಿಗರು

ವಾರ್ತಾ ಭಾರತಿ : 9 Aug, 2018
ಬಾಲಸುಬ್ರಹ್ಹಣ್ಯ ಕಂಜರ್ಪಣೆ

2009ರಲ್ಲಿ ಅಂತ ನೆನಪು. ಸುಮತೀಂದ್ರ ನಾಡಿಗರು ಮಡಿಕೇರಿಗೆ ಬಂದಿದ್ದರು. (ಬೇರೆ ಸಂದರ್ಭದಲ್ಲೂ ಅವರು ಮಡಿಕೇರಿಗೆ, ಕೊಡಗಿಗೆ ಬಂದಿರಬಹುದು; ನನಗೆ ಪ್ರಸ್ತುತವೆನ್ನಿಸಿದ ಈ ಭೇಟಿಯಷ್ಟೇ ನನಗೀಗ ನೆನಪಾದದ್ದು.) ಕೆಲವು ಸಮಯಕ್ಕೆ ಹಿಂದೆ ಅವರ ‘ದಾಂಪತ್ಯ ಗೀತ’ ಮತ್ತು ‘ಪಂಚಭೂತ’ ಒಟ್ಟಾಗಿ ಸಪ್ನದಿಂದ ಪ್ರಕಟವಾಗಿದ್ದವು. (ಇವುಗಳ ಕೇವಲ 500 ಪ್ರತಿಗಳನ್ನು ಅಚ್ಚು ಹಾಕಿದ್ದರೆಂದು ಗೊತ್ತಾದಾಗ ನನಗೆ ವಿಪರೀತ ಸಿಟ್ಟು ಬಂದಿತ್ತು!) ಬೆಂಗಳೂರಿನಲ್ಲಿ ನಡೆದ ಅವರ ಒಂದು ಕೃತಿ ಬಿಡುಗಡೆಗೆ ಹೋಗಿದ್ದೆನೆಂದು ನೆನಪು. ಸುಮಾರಾಗಿ ಅದೇ ಸಮಯದಲ್ಲಿ ರಾಮಚಂದ್ರ ಶರ್ಮರ ಒಂದು ಕೃತಿಯೂ ವೈಭವದಿಂದ ಬಿಡುಗಡೆಯಾಗಿತ್ತು.

ನಾಡಿಗರು ಮಡಿಕೇರಿಯಲ್ಲಿ ಒಂದು ಹೋಮ್‌ಸ್ಟೇಯಲ್ಲಿ ತಮ್ಮ ಸಂಸಾರದೊಂದಿಗೆ ತಂಗಿದ್ದರು. ತಾವು ಮೂರು ದಿನಗಳಿದ್ದು ಹೋಗುವುದಕ್ಕೆ ಒಂದು ವ್ಯವಸ್ಥೆಯನ್ನು ಮಾಡಲು ಕೋರಿದ್ದರಿಂದ ನಾನು ಆ ಹೋಮ್‌ಸ್ಟೇಯನ್ನು ವ್ಯವಸ್ಥೆ ಮಾಡಿದ್ದೆ. ಅವರು ಖಾಸಗಿತನವನ್ನು ಬಯಸಿದ್ದರಿಂದ ಅವರ ಭೇಟಿಯನ್ನು ಯಾರಿಗೂ ಪ್ರಚಾರಮಾಡಿರಲಿಲ್ಲ. ಸಾಮಾನ್ಯವಾಗಿ ಸಾಹಿತಿಯೊಬ್ಬರು ಬಂದಾಗ ಅವರ ಭಾಷಣ, ಉಪನ್ಯಾಸ, ಸಂದರ್ಶನ, ಸಂವಾದ ಹೀಗೆಲ್ಲ ಇರುವುದು ವಾಡಿಕೆ. (ಸಾಹಿತಿಗಳು ಇದನ್ನು ಬಯಸುತ್ತಾರೆ!) ಆದರೆ ನಾಡಿಗರು ಇದ್ಯಾವುದೂ ಬೇಡವೆಂಬಂತೆ ಮುನ್ಸೂಚನೆೆ ನೀಡಿದ್ದರು ಮಾತ್ರವಲ್ಲ, ಹೋಮ್‌ಸ್ಟೇಯಲ್ಲೇ ಪೂರ್ಣಾವಧಿಯನ್ನು ಆನಂದದಿಂದ ಉಮರ್‌ಖಯ್ಯಾಮನಂತೆ ಕಳೆದಿದ್ದರು. ಅವರ ಅಪೇಕ್ಷೆಗೆ ಭಂಗ ಬಾರದಂತೆ ಈ ಅವಧಿಯಲ್ಲಿ ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ. ಆದರೆ ಆ ಅವಧಿಯಲ್ಲಿ ಅತ್ಯಂತ ಉತ್ಸಾಹದಿಂದ ಬಹಳಷ್ಟು ಮಾತನಾಡಿದರು. ನಾನೂ ವಾಚಾಳಿಯೇ ಆದರೂ ಅವರ ಮಾತುಗಳನ್ನು ಮೂಕ ಪ್ರೇಕ್ಷಕನಂತೆ ಕೇಳಿದೆ; ನೋಡಿದೆ. ನನ್ನನ್ನು ಹತ್ತಾರು ವರ್ಷಗಳ ಸಹಪಾಠಿಯೊಂದಿಗೆ ಸಂವಾದಿಸುವಂತೆ ತಮ್ಮ ಕಾವ್ಯದ ಬಗ್ಗೆ, ಕನ್ನಡದ ಇತರರ ಕಾವ್ಯದ ಬಗ್ಗೆ, ಸದ್ಯದ ಸಾಹಿತ್ಯ ಸಂಚಾರದ ಬಗ್ಗೆ ಹೀಗೆ ಅನೇಕ ವಿಚಾರಗಳನ್ನು ಹೇಳಿದರು. ಅವರ ಒಂದೆರಡು ಪದ್ಯಗಳನ್ನೂ ಓದಿದ್ದರು. ನನಗೆ ಅವರ ದಾಂಪತ್ಯಗೀತ-ಪಂಚಭೂತ ಕೃತಿಯನ್ನು ‘ಪ್ರೀತಿಯಿಂದ’ ಎಂದು ಬರೆದು ನೀಡಿದ್ದರು.

ಅದೇ ವರ್ಷ ನನ್ನ ‘ಗರುಡಾವತಾರ’ ಕವನ ಸಂಗ್ರಹ ಪ್ರಕಟವಾಗಿತ್ತು. ಅದರ ಒಂದು ಪ್ರತಿಯನ್ನು ಅವರಿಗೆ (ಆಗಲೋ ಅದೇ ವರ್ಷ ಮತ್ಯಾವಾಗಲೋ) ಗೌರವಪೂರ್ವಕವಾಗಿಯೀ ವಿಶ್ವಾಸಪೂರ್ವಕವಾಗಿಯೋ ಕೊಟ್ಟಿದ್ದೆ ಅಥವಾ ಕಳುಹಿಸಿಕೊಟ್ಟಿದ್ದೆ. ಮರುವರ್ಷ ಮಾರ್ಚಿ ತಿಂಗಳಿನಲ್ಲಿ ನನಗೊಂದು ದೀರ್ಘವಾದ ಪತ್ರ ಬರೆದು ಆ ಕೃತಿಯನ್ನು (ಎಚ್‌ಎಸ್‌ವಿಯವರ ಮುನ್ನುಡಿಯ ಸಹಿತ) ವಿಮರ್ಶಿಸಿದ್ದರು. ನನ್ನ ಸಂಕಲನದಲ್ಲಿ ಆಟ ಎಂಬ ಒಂದು ಕವಿತೆ ಹೀಗಿದೆ:

ಕಾಲುಗಳನ್ನೊತ್ತಿ ನಿಂತರೆ ನೆಲಕ್ಕೆ ಬೇರಿಳಿಸಿದಂತೆ
ಕೈಗಳನ್ನೆತ್ತಿ ಎತ್ತರಕ್ಕೆ ಹಿಡಿದರೆ ಸಕಲಕೂ ಪ್ರಾರ್ಥನೆಯಂತೆ
ಸಡಿಲಿಸಿ ಬಿಡುಗಡಿಸಿ ಅತ್ತಿತ್ತ ಸುತ್ತ ಚಾಚಿದರೆ ಆಗಸ ಕೈಯೊಳಗಾದಂತೆ
ಆಗಸ-ನೆಲಗಳ ನಡುವೆ ಪುಟ್ಟ ಹುಡುಗನ ಆಟ.

ಒಂದಿಷ್ಟು ಮಿದು ಮಣ್ಣನಗೆದು ತೆಗೆದರೆ
ಕನ್ನೆಯ ಕೆನ್ನೆಯಲಿ ಚೆಂದದೊಂದು ಗುಳಿ ಬಿದ್ದಂತೆ
ಕುಂಬಾರನ ಶ್ರಮಕ್ಕೆ ಹದಗೊಂಡ ಹೊಸರೂಪ
ಗಟ್ಟಿಗೊಂಡ ಸದಾಶಯದಂತೆ ಮಣ್ಣಿನ ಗಡಿಗೆ.

ಗಡಿಗೆಯೂ ಮಣ್ಣೇ ಆದರೂ ಬೇರೆ
ಗಡಿಗೆಯೊಳಗಿನ ಖಾಲಿ ಖಾಲಿಯಲ್ಲ,
ಅದು ಆಗಸದೊಂದಂಶ-ತುಂಬಿಕೊಂಡಿದೆ
ನೀರಿನಂತೆ ನಿಧಿಯಂತೆ
ಹಿರಿಹಿರಿ ಹಿಗ್ಗುವ ಹುಡುಗ ತನ್ನದೇ ಸಾಧನೆಯೆಂಬಂತೆ
ಗಡಿಗೆಯೊಳಗೆ ಆಗಸ ತುಂಬಿಟ್ಟು
ತಲೆಬಾಗಿದರೆ ಮಾಗಿದ ತೆನೆಯಂತೆ.

ಎಲ್ಲ ಖುಷಿಗೂ ಅಂತ್ಯವಿದೆ;
ಕೈತಪ್ಪಿಗಡಿಗೆ ಒಡೆಯುವುದೂ ಅಷ್ಟೇ ಸಹಜ.
ಅದೀಗ ನಿರಾಶೆಗಳ ರಾಶಿ.
ಚೂರುಚೂರಲ್ಲೂ ನಿರರ್ಥಕತೆ ಪ್ರಾಪ್ತಿ.

ಗಡಿಗೆಯೊಳಗಿನ ಖಾಲಿ ಈಗೆಲ್ಲಿ?
ನೆಲದಲ್ಲಿ, ಆಗಸದಲ್ಲಿ, ಪುಟ್ಟ ಮನಸ್ಸಿನಲ್ಲಿ?

ಆಟ ಮುಂದುವರಿದಿದೆ ಮತ್ತದೇ ವರಸೆಯಲ್ಲಿ;
ನೆಲವೂ ಇದೆ, ಆಗಸವೂ ಇದೆ
ನಡುವಿರುವ ಖಾಲಿಯೂ ಇದೆ
ಒಡೆದು ಅಡಗುವ ಗಡಿಗೆ ಮತ್ತೆ ಸಿದ್ಧವಾಗುತ್ತಿದೆ...’’

ನನ್ನ ಈ ‘ಆಟ’ಕ್ಕೆ ಪ್ರತಿಯಾಗಿ ನಾಡಿಗರು ‘ನನ್ನ ಆಸೆ’ ಎಂಬ ಕವನವನ್ನು ಬರೆದಿದ್ದರು. ಅವರೇ ಹೇಳಿದಂತೆ ‘ಅಟ’ವನ್ನು ‘ಎದುರಿಟ್ಟುಕೊಂಡು’ ಹೀಗೆ ಬರೆದಿದ್ದರು:

‘‘ಮಿದು ಮಣ್ಣ ಕುಲಾಲ ತಿಗುರಿಯಲಿ ರೂಪಿಸಿದಂತೆ ಭಾಷೆ ಮಣ್ಣನ್ನು ಛಂದಸ್ಸು ತಿಗುರಿಯಲಿ ತಿರುಗಿಸಿದಾಗ
ಕುಡಿಕೆ ಮಡಕೆ ಮರಿಗೆ ಬಿಂದಿಗೆ ಹಂಡೆ
ಮನಸ್ಸಲ್ಲಿ ರೂಪ ಪಡೆಯುವ ವಸ್ತು ಪ್ರಕಟವಾಗುತ್ತೆ;
ಅಗ್ನಿಯಲಿ ಸುಟ್ಟದ್ದು ಗಟ್ಟಿಗೊಳ್ಳುತ್ತೆ.

ಮಡಿಕೆಯಲಿ ಆಕಾಶ ತಾನಾಗಿ ತುಂಬಿಕೊಂಡಂತೆ ಛಂದೋರೂಪದಲಿ ಕವಿಯ ಪ್ರಾಣ ವ್ಯಾಪಿಸುತ್ತೆ.

ಪುಟ್ಟ ಪುಟಾಣಿ ಕುಡಿಕೆಗಳು, ಅನ್ನ ಬೇಯಿಸುವ ಮಡಕೆಗಳು
ನೀರು ತುಂಬಲಿಕ್ಕಾಗಿ ಬಿಂದಿಗೆಗಳು,
ನೀರು ತುಂಬುವ ಬಾವಿ, ಕೆರೆಕುಂಟೆ ಹೊಂಡ ಸರೋವರಗಳನ್ನು
ಕವಿಕುಲಾಲರು ಸೃಷ್ಟಿಸುತ್ತಾರೆ,
ಅವರವರ ಪ್ರತಿಭೆ ಇದ್ದಷ್ಟು.
ನನಗೆ ಕಡಲನ್ನು ಸೃಷ್ಟಿಸಬೇಕೆಂದು ಆಸೆಯಿದೆ;
ಅದಾಗದಿದ್ದರೆ ಕನ್ನಂಬಾಡಿ, ತುಂಗಭದ್ರಾ, ಭಾಕ್ರಾನಂಗಲ್‌ನಂಥ
ನಾಕೈದಾರು ಜಲಾಶಯಗಳನ್ನು ಸೃಷ್ಟಿಸಿದರೂ ಸಾಕು.’’

ಮತ್ತೆ ‘‘ನಿಮ್ಮ ಕವಿತೆಯಲ್ಲಿರುವ ಕುಂಬಾರ ಗಡಿಗೆ, ಗಡಿಗೆ ಆಗಸದೊಂದಂಶ ತುಂಬಿಕೊಂಡದ್ದು, ಹುಡುಗನ ಸಾಧನೆ, ಗಡಿಗೆ ಮತ್ತೆ ಸಿದ್ಧವಾಗುವುದು- ಹೀಗೆ ಯಾವ್ಯಾವುದೋ ಅಂಶ ನನ್ನ ಕವಿತೆಯಲ್ಲಿಯೂ ಇದೆ.’’ ‘‘ನನ್ನ ಕವಿತೆ ಕಾವ್ಯಸೃಷ್ಟಿಗೆ ಸೀಮಿತವಾಗಿದೆ’’ ಮತ್ತು ‘‘ನಾನು ಕುಂಬಾರನ ಪ್ರತಿಮೆಯನ್ನಷ್ಟೇ ಇಟ್ಟುಕೊಂಡು ಕವಿಕುಲಾಲನನ್ನು ಯೋಚಿಸುತ್ತ, ಗಡಿಗೆಯಿಂದ ಕಡಲಿಗೆ ಜಿಗಿದಿದ್ದೇನೆ.’’ ಎಂದು ಬರೆದಿದ್ದರು. (ಅದೇ ಸಂಕಲನದಲ್ಲಿದ್ದ ‘ಹರಿ’ ಎಂಬ ನನ್ನ ಇನ್ನೊಂದು ಕವಿತೆಗೂ ಸಮಾನಾಂತರವಾಗಿ ಅವರು ಇನ್ನೊಂದು ಕವಿತೆಯನ್ನು ಬರೆದಿದ್ದರು. ಅದರ ಬಗ್ಗೆ ಇನ್ನೊಮ್ಮೆ.)

ಮತ್ತೊಮ್ಮೆ ರಾತ್ರಿ ಸುಮಾರು ಒಂಬತ್ತು ಗಂಟೆಯಿರಬಹುದು: ಫೋನ್ ಮಾಡಿ ನಾನು ಫೋನ್ ಕೆಳಗಿಡುವುದಕ್ಕೂ ಅವಕಾಶ ನೀಡದೆಯೇ ನಿರರ್ಗಳವಾಗಿ ಸುಮಾರು 15-20 ನಿಮಿಷಗಳ ಕಾಲ ಸಾಹಿತ್ಯದ ಕುರಿತು ಮಾತನಾಡಿದ್ದರು.
ಈ ಮೂಲಕ ನನಗೆ ಹೇಳಬೇಕಾದ್ದು ಈ ಕವಿಯ ನಿಸ್ಸಂಕೋಚ ಹುಡುಗುತನವನ್ನು; ಜೀವನ ಪ್ರೀತಿಯನ್ನು.

ಮೊನ್ನೆ (07.08.2018) ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದ ಸುಮತೀಂದ್ರ ನಾಡಿಗರು (ಹುಟ್ಟು: 1935) ಅನೇಕ ಒಳ್ಳೆಯ ಕವಿತೆಗಳನ್ನು ನೀಡಿದರು. ನಾಡಿಗರು ಎಂದಷ್ಟೇ ಹೇಳಿದರೆ ಸಾಕಿತ್ತು ಕೆಲವು ವರ್ಷಗಳ ಹಿಂದಿನವರೆಗೆ. ಕಾಲಾಂತರದಲ್ಲಿ ಓದುಗರ ಆಸಕ್ತಿಗನುಗುಣವಾಗಿ ಈ ಸರ್‌ನೇಮ್‌ಗಳು ತೆಳುವಾಗುತ್ತವೆ. ಇದನ್ನು ಅಡಿಗರೂ ಅನುಭವಿಸಿದ್ದಾರೆ. ನನ್ನೊಬ್ಬ ಎಳೆಯ ಉತ್ಸಾಹಿ ಗೆಳೆಯನೊಬ್ಬನಲ್ಲಿ ‘‘ಅಡಿಗರನ್ನು ಓದಿದ್ದಿಯಾ?’’ ಎಂದೊಮ್ಮೆ ಕೇಳಿದಾಗ ‘‘ಯಾಕಿಲ್ಲ? ಅವರ ‘ವೈಟ್ ಟೈಗರ್’ ನನಗೆ ತುಂಬಾ ಇಷ್ಟವಾದ ಕೃತಿ’’ ಎಂದಿದ್ದ. (ಅವನಿಗೆ ‘ಅಡಿಗ’ ಅಂದರೆ ಅರವಿಂದ ಅಡಿಗ. ಹಾಗೆಯೇ ಇದೂ.)

ನನಗೆ ನಾಡಿಗರ ತೀರ ಹತ್ತಿರದ ಪರಿಚಯವಿಲ್ಲ. ಅಲ್ಲಿ ಇಲ್ಲಿ ದಾಖಲಿಸಿದ ಅವರ ಬದುಕಿನ ಪರಿಚಯ ಹೀಗಿದೆ: ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರಿನ ಕಳಸದಲ್ಲಿ. ಕಳಸ, ಸಾಗರ, ಆನವಟ್ಟಿ, ಶಿವಮೊಗ್ಗದಲ್ಲಿ ಬಾಲ್ಯವನ್ನೂ ವಿದ್ಯಾಭ್ಯಾಸವನ್ನೂ ನಡೆಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮುಂದುವರಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕರಾದರು. ಗೋರೂರು, ಜಿ.ಪಿ. ರಾಜರತ್ನಂ, ಪುತಿನ, ಜಿಎಸ್‌ಎಸ್, ರಾಮಾನುಜನ್, ಅಡಿಗ ಮುಂತಾದವರ ಪ್ರಭಾವದಲ್ಲಿ ಸಾಹಿತ್ಯದ ಅಭಿರುಚಿಯನ್ನೂ ಕಾಯಕವನ್ನೂ ಕಂಡುಕೊಂಡರು. ‘ಉಲೂಪಿ’, ‘ಕಪ್ಪುದೇವತೆ’, ‘ನಿಮ್ಮ ಪ್ರೇಮ ಕುಮಾರಿಯ ಜಾತಕ’ ಮುಂತಾದ ಕವಿತೆಗಳಿಂದ ಪ್ರಖ್ಯಾತರಾದರು. ‘ದಾಂಪತ್ಯ ಗೀತ’ ಮತ್ತು ‘ಪಂಚಭೂತ’ದಂತಹ ದೀರ್ಘ ಕಾವ್ಯಗಳನ್ನೂ ಬರೆದರು.

ಅವರ ‘ಉಲೂಪಿ’ ‘ಕಪ್ಪುದೇವತೆ’ ಮುಂತಾದ ಕವನಗಳನ್ನು ಕಾವ್ಯದ ಸಹೋದ್ಯೋಗಿಗಳು, ಸಜ್ಜನ ಓದುಗರು, ವಿಮರ್ಶಕರು ಇಂದೂ ಮುಂದೂ ನೆನಪಿಸುತ್ತಾರೆ. ಅಮೃತಘಳಿಗೆಗೆ ಎಲ್ಲರೂ ಕಾಯಬೇಕು. ನಾಡಿಗರೂ ಅನೇಕ ವರ್ಷ ಕಾದರು. ‘ದಾಂಪತ್ಯ ಗೀತ’ ರಚನೆಯಾಯಿತು. ಅವರ ಮಹತ್ವಾಕಾಂಕ್ಷೆಯ ಕಾವ್ಯ ‘ದಾಂಪತ್ಯ ಗೀತ’ ಒಳ್ಳೆಯ ಕಾವ್ಯ. ‘ದಾಂಪತ್ಯ ಗೀತ’ ಒಂದು ಖಂಡಕಾವ್ಯದ ಗಾತ್ರದ್ದು. ಇದರ ಕಥಾ ಚೌಕಟ್ಟು ಸ್ವಂತ ಬದುಕಿನದ್ದೆ. ಆದ್ದರಿಂದ ಇಲ್ಲಿ ‘ಖಂಡ’ವೆಂಬ ಪದ ಗಾತ್ರಕ್ಕಷ್ಟೇ ಸೀಮಿತವಾಗಿದೆ. ಕವಿ ‘‘ದಾಂಪತ್ಯವೆಂದೆಂದು ಜೊತೆಗೆ ಮಾಗುವ ದಿವ್ಯ! ಮಾಗುವವರಿಗೆ ಬೆಂಕಿ ಸುಡುವುದಿಲ್ಲ. ತ್ಯಾಗವಿಲ್ಲದ ಸಖ್ಯ, ಅವರಿವರ ವಿಶೇಷ ! ಉಳಿಸಿ ಬೆಳೆಸಿದ ಸಖ್ಯ ಸಖ್ಯವಲ್ಲ.’’ ಎಂದು ‘ದಾಂಪತ್ಯ’ವನ್ನು ನಿರೂಪಿಸಿದ್ದಾರೆ. ಶೀರ್ಷಿಕೆಯ ‘ದಾಂಪತ್ಯ’ ಹೀಗೆ ಪರಸ್ಪರ ಸ್ವಭಾವ ಪ್ರಭಾವ-ಅನುಭಾವಗಳ ಎರಕ. ಇಲ್ಲಿನ ನಿರೂಪಕ ನಾಡಿಗರೇ, ಕಾವ್ಯವಾದ್ದರಿಂದ ಆತ್ಮ ಕಥೆಯಾಗದೆ ಆತ್ಮಾನುಭಾವವಾಗಿದೆ. ಪ್ರಸ್ತಾವನೆಯಲ್ಲಿ ಕವಿ ಅರ್ಷ್ಟೇಯ ಪರಂಪರೆಯ ನೆನಪಿನ ಸ್ವಾಗತ ಹಾಡಿದ್ದಾರೆ. ಪಂಪನ ಗೋತ್ರದವನು ತಾನೆಂಬ ಅಗ್ಗಳಿಕೆಯಿದೆ. ಹಾಡು ಸಖ್ಯವನೆಂದು ದತ್ತಗುರು ಹೇಳಿದರು ಅಡಿಗರೆಂದರು ಹಾಡು ನಿನ್ನ ಹೃದಯ ಎಂದು ಸ್ಮರಿಸಿ ಈ ಹೇಳಿಕೆಗಳ ಹಿಂದೆ ಕಾರ್ಯವೆಸಗಿದ ಭಾವವನ್ನು ಸಂಶಯ-ವಿಶ್ವಾಸದಿಂದಲೇ ಹೀಗೆ ಬರೆಯುತ್ತಾರೆ: ‘‘ತಮ್ಮ ಯೌವನವನ್ನು ನೆನೆವುದಕ್ಕೆ ನೆಪವೆಂದು ಸೂಚಿಸಿದರೇ ನನಗೆ ‘ಹಾಡು’ ಎಂದು?’’ ಕವಿ ‘‘ಬೇಂದ್ರೆ ತಂಪಿಗೆ ನಾನು ಬಳಲಿಹೋದೆ’’ ಎನ್ನುತ್ತಾರೆ.

ಕಾವ್ಯವನ್ನು ಯಾರಿಗೆ ಬರೆಯಬೇಕು? ಸಖಿಗೆ? ಲೋಕಕ್ಕೆ? ತನ್ನರ್ಧಕ್ಕೆ? ವಾಗ್ದೇವಿಗೆ?
ನಿನಗೆ ರುಚಿಸುವ ಹಾಗೆ ನಾನು ಪರಿವರ್ತಿಸಿದ
ಅನುಭವದ ಲೋಕವಿದು ನನ್ನ ಕಾವ್ಯ,

ನಿನ್ನ ಅಂಗಾಂಗಗಳು ಸ್ಫುಟತೆಯಾಚೆಗೆ ಇರುವ ಲಾವಣ್ಯದಂತೆಯೇ ಸರ್ವಸಂಭಾವ್ಯ:
  ಇಲ್ಲಿರುವುದು ಪರಿವರ್ತಿಸಿದ ಅನುಭವದ ಲೋಕ ಅಂಗಾಂಗಗಳು ಸ್ಫುಟತೆಯಾಚೆಗೆ ಇರುವ ಲಾವಣ್ಯ, ವಾಸ್ತವವು ಅನುಭವವಾಗುವ ಮತ್ತು ನಂತರ ಅಲೌಕಿಕ ಸೌಂದರ್ಯವಾಗುವ ವಿಕಾಸವೇ ಕವಿಯ ಗುರಿ. ಶಬ್ದ, ಅರ್ಥ, ಅನುಭವಗಳ ಪರಿಪಾಕದ ಹಂಬಲ ಕವಿಗೆ. ತಾನು ಬರೆಯುವುದರ ಕುರಿತು ಪೂರ್ಣ ಎಚ್ಚರವನ್ನು ತೋರ್ಪಡಿಸುತ್ತ ‘‘ಬೇಂದ್ರೆ ಅಡಿಗರ ದೃಷ್ಟಿಕೃಪೆಯಿಂದ ನಡೆಸುತ್ತಿದೆ ಈ ನನ್ನ ಕಾವ್ಯ ಸೃಷ್ಟಿ’’ ಎನ್ನುತ್ತಾರೆ. ಇದನ್ನು ಸಮರ್ಥಿಸುವಂತೆ ಅಡಿಗರ ಕಾವ್ಯವನ್ನು ಹೋಲುವ ‘‘ಸಂಸಾರ ಸಾರಸರ್ವಸ್ವ ಫಲಮಾವು ಮಲ್ಲಿಗೆ ಜೊತೆಗೇ ಸಖ್ಯವೆಂದೆನ್ನುವುದು ನನ್ನ ಹಾಡು’’ ಎಂಬ ಸಾಲುಗಳು ಇವೆ. ನಂತರ ‘‘ನನ್ನ ಅನುಭವ ವಿಶೇಷ ನಿನ್ನ ಸ್ವೀಕೃತಿಗಾಗಿ ಈ ಕೃತಿಯು ನಿನ್ನ ಕರುಣೆ’’ ಎಂಬಾಗ ಇದು ದಾಂಪತ್ಯದ ಸಖಿಗೆ ಹೇಳಿದ್ದೆಂದೆನಿಸುವುದಿಲ್ಲ ಬದಲಿಗೆ ವಾಗ್ದೇವಿಗೇ ಹೇಳಿದಂತಿದೆ. ಮುಂದೆ ಬರುವ ‘‘ಕಾವ್ಯಕ್ಕೆ ರಸ ಮುಖ್ಯ ನಾನು ಬದುಕಿಗೆ ಮುಖ್ಯ ಜೀವನದ ಧರ್ಮವೇ ಕಾವ್ಯಧರ್ಮ’’ ಎಂದಾಗ ಕವಿ ಕಾವ್ಯಕ್ಕೂ ಬದುಕಿಗೂ ಒಂದು ಸಂಬಂಧವನ್ನು ಕಲ್ಪಿಸಿ ಅದನ್ನು ಶಾಶ್ವತಗೊಳಿಸುವ ಮೀಮಾಂಸೆಯನ್ನು ಸೃಷ್ಟಿಸುತ್ತಿದ್ದಾರೆಂದೆನ್ನಿಸುತ್ತದೆ.

ಒಟ್ಟು ಓದಿದ ಆನಂತರ ಇದೊಂದು ಸ್ನೇಹಗೀತ, ಪ್ರೀತಿಗೀತ ಎನಿಸುತ್ತದೆ. ಬೇಂದ್ರೆಯವರ ‘ಸಖೀಗೀತ’ದೊಂದಿಗೆ ಹೋಲಿಸಬಹುದಾದ ಕೃತಿ. ಪು.ತಿ.ನ. ಅವರು ಈ ಕೃತಿಯ ಬಗ್ಗೆ ‘‘ಕಾವ್ಯ ಸೊಗಸಾಗಿ ಓಡುತ್ತಾ ಇದೊಂದು ಅಪ್ಪಟ ಕವಿಯ ರಚನೆ ಎನಿಸುತ್ತದೆ’’ ಎಂದಿದ್ದಾರೆ. ಅನಂತಮೂರ್ತಿಯವರು ಹೇಳಿದಂತೆ ಬಾಳುವುದರ ಬಗ್ಗೆ, ಬೆಳೆಯುವುದರ ಬಗ್ಗೆ, ಬೆಳೆಯುತ್ತ ಮಾಗುವುದರ ಬಗ್ಗೆ ಕನ್ನಡದ ಒಂದು ಒಳ್ಳೆಯ ಪದ್ಯ ಸುಮತೀಂದ್ರ ನಾಡಿಗರ ‘ದಾಂಪತ್ಯ ಗೀತ’. ಇದು ಪ್ರಾಯಃ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ತರಬಹುದಾಗಿದ್ದ ಕೃತಿ. ನಾಡಿಗರು ಒಳ್ಳೆಯ ಭಾಷಣಕಾರರೂ ವಿಮರ್ಶಕರೂ ಹೌದು. ಅವರು ವಿಮರ್ಶೆಯೇ ತಮ್ಮ ಸ್ಪೆಷಾಲಿಟಿ ಎಂದುಕೊಂಡವರಲ್ಲದಿದ್ದರೂ ಬೇಂದ್ರೆ, ಅಡಿಗ, ಭೈರಪ್ಪಮುಂತಾದವರ ಆಕರ್ಷಕ ಓದುಗರೂ ವಿಶ್ಲೇಷಕರೂ ಆಗಿದ್ದರು.

ಇತ್ತೀಚೆಗಿನ ವರ್ಷಗಳಲ್ಲಿ ಸ್ವಲ್ಪಮಟ್ಟಿನ ಬಲಪಂಥೀಯರಂತೆ ತಮ್ಮ ಬರಹಗಳನ್ನು ದುಡಿಸಿಕೊಂಡಿದ್ದರು. ಹಾಗೆಯೇ ನಿಷ್ಠುರವಾದಿಯೂ ಹೌದು. ಕಟು ಸತ್ಯಗಳನ್ನು ಅವರು ಹೇಳುವ ಬಗೆ ಹೀಗೆ: ‘‘1968ರಲ್ಲಿ ನಾನು ‘ಎಂ. ಗೋಪಾಲಕೃಷ್ಣ ಅಡಿಗ: ಒಂದು ಕಾವ್ಯಾಭ್ಯಾಸ’ ಎನ್ನುವ ಪುಸ್ತಕವನ್ನು ಬರೆದು, ಸಂಕ್ರಮಣ ಪ್ರಕಾಶನದ ಹೆಸರಿನಲ್ಲಿ ನನ್ನ ಸ್ವಂತ ಹಣದಿಂದಲೇ ಅಚ್ಚುಮಾಡಿಸಿ, ಅದನ್ನು ಊರೂರಿಗೆ ಹೊತ್ತುಕೊಂಡು ಹೋಗಿ ಮಾರಾಟ ಮಾಡಿದ್ದೆ.’’ ತಮ್ಮ ಓರಗೆಯವರೊಂದಿಗೆ ಸೈದ್ಧಾಂತಿಕವಾಗಿಯೂ, ಸಾಹಿತ್ಯಕವಾಗಿಯೂ ಜಗಳ ಮಾಡಿ ಅನಗತ್ಯ ವಿವಾದಗಳನ್ನು ಸೃಷ್ಟಿಸಿಕೊಂಡದ್ದೂ ಇತ್ತು. ಸಾಹಿತ್ಯದಲ್ಲಿನ ಕೃತಿಚೌರ್ಯ, ನೇರ ಪ್ರಭಾವ ಮುಂತಾದವುಗಳ ಅನ್ವೇಷಣೆ ಮತ್ತು ಗೂಢಚರ್ಯೆ ಇವೆರಡರ ಆರೋಪಗಳನ್ನು ಅವರು ಅನೇಕ ಬಾರಿ ಹೊತ್ತಿದ್ದರು. ಕನ್ನಡದ ನವೋದಯ ಮತ್ತು ನವ್ಯರ ನಡುವೆ ಈ ಕವಿ ತನ್ನತನವನ್ನು ಮೆರೆದರು ಎಂಬಲ್ಲಿಗೆ ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಬಹುದು.
ಸಾಹಿತ್ಯದೊಂದಿಗೆ ಕಾಡುವ ಇಂಥ ನಾಡಿಗರು ನಮ್ಮಂದಿಗಿಲ್ಲ; ನಮ್ಮಳಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)