varthabharthi

ಸಂಪಾದಕೀಯ

ಪೊಲೀಸರ ಲಾಠಿಗೆ ಬಂತು...

ವಾರ್ತಾ ಭಾರತಿ : 15 Aug, 2018

ಪೊಲೀಸ್ ಇಲಾಖೆಯ ಸುಧಾರಣೆಯ ಕುರಿತಂತೆ ನ್ಯಾಯಾಲಯ ಆಗಾಗ ನಿರ್ದೇಶನಗಳನ್ನು ನೀಡುತ್ತಾ ಬಂದಿದೆ. ಆದರೆ ಜನಸಾಮಾನ್ಯರು ವರ್ಷದಿಂದ ವರ್ಷಕ್ಕೆ ಪೊಲೀಸ್ ಇಲಾಖೆಗಳ ಬಗ್ಗೆ ನಂಬಿಕೆಗಳನ್ನು ಕಳೆದುಕೊಳ್ಳುತ್ತಾ ಬರುತ್ತಿದ್ದಾರೆ. ಸಾಧಾರಣವಾಗಿ ಪೊಲೀಸ್ ಠಾಣೆಗಳಲ್ಲಿ ನಡೆಯುವ ದೌರ್ಜನ್ಯಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದವು ಕಸ್ಟಡಿ ಸಾವುಗಳು ಪೊಲೀಸರ ಕರ್ತವ್ಯ ನಿರ್ವಹಣೆಯನ್ನು ಪ್ರಶ್ನೆ ಮಾಡುತ್ತಿದ್ದವು. ಆದರೆ ಸದ್ಯದ ದಿನಗಳಲ್ಲಿ ಪೊಲೀಸರು ರೌಡಿಗಳ ಜೊತೆಗೆ ಸಂಘಪರಿವಾರದ ಗೂಂಡಾಗಳ ಜೊತೆಗೆ ಮೃದುವಾಗಿ ನಡೆದುಕೊಳ್ಳುವ ಮೂಲಕ ಅವರ ದುಷ್ಕೃತ್ಯಗಳಿಗೆ ಪರೋಕ್ಷವಾಗಿ ಸಹಕರಿಸುವುದೂ ನಡೆಯುತ್ತಿದೆ. ಈ ಹಿಂದೆ ದೌರ್ಜನ್ಯಗಳಲ್ಲಿ ಪೊಲೀಸರು ನೇರ ಪಾತ್ರವಹಿಸುತ್ತಿದ್ದರೆ, ಇದೀಗ ತಮ್ಮ ಕೆಲಸವನ್ನು ರೌಡಿಗಳು, ಗೂಂಡಾಗಳ ಕೈಯಲ್ಲಿ ಮಾಡಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಪೊಲೀಸರ ಸಹಕಾರದಿಂದ ನಡೆಯುತ್ತಿರುವ ಗುಂಪು ಹತ್ಯೆಗಳು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ.

ಆದುದರಿಂದ ಪೊಲೀಸ್ ಇಲಾಖೆಯ ಸುಧಾರಣೆಯ ವ್ಯಾಪ್ತಿ ಇನ್ನಷ್ಟು ಹಿಗ್ಗಿದಂತಾಗಿದೆ. ಒಟ್ಟಿನಲ್ಲಿ ಪೊಲೀಸ್ ಇಲಾಖೆ ಸುಧಾರಣೆಯಾಗದಷ್ಟು ಹದಗೆಡುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಭಾರತದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವು ಸಂಭವಿಸುವ ದೊಡ್ಡ ಮತ್ತು ಕುಖ್ಯಾತ ಇತಿಹಾಸವೇ ಇದೆ. ಆದರೆ ಈ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ ಎನ್ನುವುದರ ಕುರಿತಂತೆ ಯಾರೂ ಗಂಭೀರವಾಗಿ ಅಧ್ಯಯನ ಮಾಡಿದಂತಿಲ್ಲ. ಅಪರಾಧ ಮತ್ತು ಆರೋಪಿಗಳ ಜೊತೆಗೆ ಪೊಲೀಸರು ವ್ಯವಹರಿಸುವಾಗ ಅನುಸರಿಸಬೇಕಾದ ನೀತಿ ನಿಯಮಗಳಿವೆ. ತೋರಬೇಕಾದ ಉತ್ತರದಾಯಿತ್ವವಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಸುಪ್ರೀಂಕೋರ್ಟ್ 2006ರಲ್ಲಿ ನಿರ್ದೇಶನವನ್ನು ನೀಡಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದರ ಕುರಿತಂತೆ ಗಾಢ ನಿರ್ಲಕ್ಷ ತಾಳಿವೆೆ. ಪರಿಣಾಮವಾಗಿ ಪೊಲೀಸ್ ಇಲಾಖೆ ತನ್ನ ಗೆರೆಯನ್ನು ಇನ್ನಷ್ಟು ದಾಟಿ ಪರ್ಯಾಯ ನ್ಯಾಯಾಲಯ, ಪರ್ಯಾಯ ಸರಕಾರವಾಗಲು ಹೊರಟಿದೆ.

ಪೊಲೀಸ್ ಇಲಾಖೆಯ ಸುಧಾರಣೆಯ ಕುರಿತು 2006ರಲ್ಲಿ ಸುಪ್ರೀಂ ಕೋರ್ಟು ನೀಡಿರುವ ನಿರ್ದೇಶನವು ಐದು ರಾಷ್ಟ್ರೀಯ ಪೊಲೀಸ್ ಆಯೋಗಗಳು ನೀಡಿದ ವರದಿಗಳು ಮತ್ತು ವಿವಿಧ ಸಂದಭರ್ಗಳಲ್ಲಿ ಹಲವು ಗಣ್ಯ ನ್ಯಾಯಾಧೀಶರು ಮತ್ತು ಪೊಲೀಸ್ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ರಚಿತವಾದ ಅಯೋಗಗಳು ಮತ್ತು ಸಮಿತಿಗಳು ಕೊಟ್ಟ ವರದಿಗಳ ಶಿಫಾರಸುಗಳ ಸಾರಾಂಶವನ್ನು ಪ್ರತಿಫಲಿಸುವಂತಿದೆ. ಸುಪ್ರೀಂ ಕೋರ್ಟು ಈ ಆದೇಶವನ್ನು ನೀಡಿದಾಗ ಪೊಲೀಸ್ ಸುಧಾರಣೆಯ ಬಗ್ಗೆ ಆವರೆಗೆ ತೋರುತ್ತಾ ಬಂದಿದ್ದ ಜಡ ಧೋರಣೆಯನ್ನು ಕೊನೆಗೊಳಿಸುವ ನಿರ್ಣಯಾತ್ಮಕ ಹೆಜ್ಜೆಯೆಂದು ಬಣ್ಣಿಸಲಾಗಿತ್ತು. ಆದರೆ ಆ ಭರವಸೆಗಳು ದಿನಗಳೆದಂತೆ ಹುಸಿಯಾಗತೊಡಗಿದವು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಆ ನಿರ್ದೇಶನವನ್ನು ಒಂದೋ ತಮಗೆ ಬೇಕಾದಂತೆ ಮಾತ್ರ ಅನುಷ್ಠಾನಗೊಳಿಸಿದವು ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸಿದವು. ಸುಪ್ರೀಂಕೋರ್ಟಿನ ನಿರ್ದೇಶನದ ಕೆಲವು ಭಾಗಗಳು ಪೊಲೀಸ್ ವ್ಯವಸ್ಥೆಯ ನಿರ್ವಹಣೆಯಲ್ಲಿ ರಾಜ್ಯ ಸರಕಾರಗಳ ಅಧಿಕಾರವನ್ನು ದುರ್ಬಲಗೊಳಿಸುವುದರಿಂದ ಕೋರ್ಟಿನ ನಿರ್ದೇಶನವನ್ನು ಯಾವ ಸರಕಾರಗಳೂ ಉತ್ಸಾಹದಿಂದ ಪಾಲಿಸುತ್ತಿಲ್ಲ. ಸುಪ್ರೀಂ ಕೋರ್ಟು ತನ್ನ ಉಸ್ತುವಾರಿಯಲ್ಲೇ ತನ್ನ ನಿರ್ದೇಶನಗಳ ಅನುಷ್ಠಾನವಾಗಬೇಕೆಂದು ಆದೇಶಿಸಿದ್ದರೆ ಒಂದಿಷ್ಟು ಪರಿಸ್ಥಿತಿ ಸುಧಾರಿಸುತ್ತಿತ್ತೇನೋ.

     ವಿವಿಧ ಆಯೋಗಗಳ ವರದಿಗಳು ಮತ್ತು ಸುಪ್ರೀಂ ಕೋರ್ಟಿನ ನಿರ್ದೇಶನಗಳು ಸಮಗ್ರ ಸಲಹೆಗಳನ್ನು ಮುಂದಿಟ್ಟಿವೆ. ಇದರಲ್ಲಿ 1861ರ ಪೊಲೀಸ್ ಕಾಯ್ದೆಯ ಬದಲಿಗೆ ಹೊಸ ಕಾಯ್ದೆಯನ್ನು ಜಾರಿಗೆ ತರುವ ಪ್ರಸ್ತಾಪವಿದೆ. ಅದರಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳನ್ನೂ ಒಳಗೊಂಡಂತೆ ಪೊಲೀಸರ ನೇಮಕಾತಿ, ವರ್ಗಾವಣೆ ಮತ್ತು ಭಡ್ತಿ ಪದ್ಧತಿಗಳನ್ನು ಸುಧಾರಿಸುವ ಮೂಲಕ ಪೊಲೀಸ್ ಪಡೆಗಳನ್ನು ಸರಕಾರದ ಹಸ್ತಕ್ಷೇಪದಿಂದ ಸ್ವತಂತ್ರಗೊಳಿಸುವ, ಪೊಲೀಸ್ ವ್ಯವಸ್ಥೆಯಲ್ಲಿನ ತನಿಖಾ ವಿಭಾಗವನ್ನು ಕಾನೂನು ಜಾರಿ ವಿಭಾಗದಿಂದ ಪ್ರತ್ಯೇಕಗೊಳಿಸುವ ಮತ್ತು ಪೊಲೀಸರ ವಿರುದ್ಧದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಒಂದು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವ ಶಿಫಾರಸುಗಳನ್ನು ಮಾಡಲಾಗಿದೆ. ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ನಡೆಯುತ್ತಿರುವ ಆಂದೋಲನದ ಪ್ರಧಾನವಾದ ಆಧ್ಯತೆ ಪೊಲೀಸ್ ವ್ಯವಸ್ಥೆಯ ಮೇಲೆ ಜನತೆಯ ನಂಬಿಕೆ ಸಂಪೂರ್ಣವಾಗಿ ಕುಸಿದುಹೋಗದಂತೆ ನೋಡಿಕೊಳ್ಳುವುದೇ ಆಗಿದೆ.

2018ರಲ್ಲಿ ಹೊರತಂದಿರುವ ‘ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಗಳು’ ಎಂಬ ವರದಿಯು ಆರು ಅಂಶಗಳ ಬಗ್ಗೆ ತನ್ನ ಗಮನ ಹರಿಸಿತ್ತು. ಅವೆಂದರೆ ಅಪರಾಧಗಳ ಹೆಚ್ಚಳದ ದರ, ಪೊಲೀಸ್ ಮತ್ತು ನ್ಯಾಯಾಲಯಗಳ ಮೂಲಕ ಬಗೆಹರಿಸಲಾದ ಪ್ರಕರಣಗಳು, ಪೊಲೀಸ್ ಪಡೆಗಳಲ್ಲಿ ವಿವಿಧ ಸಾಮಾಜಿಕ ಹಿನ್ನೆಲೆಯವರ ಇರುವಿಕೆ, ಮೂಲಭೂತ ಸೌಕರ್ಯಗಳು, ಸೆರೆಮನೆಗಳ ಅಂಕಿಅಂಶಗಳು ಮತ್ತು ಪರಿಶಿಷ್ಟ ಜಾತಿ/ಪಂಗಡ, ಮಹಿಳೆ ಮತ್ತು ಮಕ್ಕಳ ಮೇಲಿನ ಪ್ರಕರಣಗಳ ವಿಲೇವಾರಿಯ ದರ. ವಾಸ್ತವವಾಗಿ ಈ ಆರೂ ಅಂಶಗಳಲ್ಲಿ ಪೊಲೀಸ್ ವ್ಯವಸ್ಥೆಯ ನಡಾವಳಿಗಳು ಅಲಕ್ಷಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಹಿತಾಸಕ್ತಿಗೆ ಪೂರಕವಾಗಿರಲಿಲ್ಲವೆಂಬುದನ್ನು ಆ ವರದಿಯು ಹೇಳುತ್ತಿದೆ. ಅದರ ಪ್ರಕಾರ ಆರೋಪಿಗಳ ವರ್ಗ ಮತ್ತು ಜಾತಿ ಹಿನ್ನೆಲೆಯನ್ನು ಆಧರಿಸಿ ಪೊಲೀಸರು ತಾರತಮ್ಯ ತೋರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆ ನಂತರದ ಸ್ಥಾನದಲ್ಲಿ ಲಿಂಗ, ಜಾತಿ ಮತ್ತು ಧರ್ಮಾಧಾರಿತ ಪಕ್ಷಪಾತಿ ಧೋರಣೆಗಳು ವ್ಯಕ್ತವಾಗುತ್ತಿವೆ. ಪೊಲೀಸರ ಬಗ್ಗೆ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಅದರಲ್ಲೂ ಮುಸ್ಲಿಮರಲ್ಲಿ ಅತಿ ಹೆಚ್ಚಿನ ಭೀತಿ ಮನೆ ಮಾಡಿಕೊಂಡಿದೆ.

ಹೀಗಾಗಿ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಜವಾಬ್ದಾರಿಯನ್ನು ಸುಪ್ರೀಂಕೋರ್ಟು ತಾನೇ ವಹಿಸಿಕೊಳ್ಳಬೇಕಿದೆ. ತನ್ನ 2006ರ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದನ್ನು ಖಾತರಿಗೊಳಿಸಬೇಕಿದೆ. ಮತ್ತು ಅದನ್ನು ಉಲ್ಲಂಘಿಸುವ ಸರಕಾರಗಳ ಮೇಲೆ ಕೋರ್ಟ್ ಆದೇಶದ ಉಲ್ಲಂಘನೆಯ ಕಾರಣಕ್ಕೆ ಶಿಕ್ಷೆಗೆ ಒಳಪಡಿಸಬೇಕಿದೆ ಇತ್ತೀಚೆಗೆ ಪೊಲೀಸ್ ಇಲಾಖೆ ತನ್ನ ಮಿತಿಯನ್ನು ಮೀರಿ, ಸಮಾಜಘಾತುಕ ಶಕ್ತಿಗಳ ಜೊತೆಗೆ ಒಳ ಒಪ್ಪಂದ ಮಾಡತೊಡಗಿದೆ. ರಾಜಕೀಯ ಶಕ್ತಿಗಳು ಪೊಲೀಸ್ ಇಲಾಖೆಗಳನ್ನು ತಮ್ಮ ಚಟುವಟಿಕೆಗಳಿಗಾಗಿ ಬಹಿರಂಗವಾಗಿಯೇ ಬಳಕೆ ಮಾಡುತ್ತಿವೆೆ. ಮುಂದೊಂದು ದಿನ, ಪೊಲೀಸ್ ಇಲಾಖೆ ಸಂಘಪರಿವಾರದ ಒಂದು ಶಾಖೆಯಾಗಿ ಬದಲಾಗುವ ಮೊದಲು, ಇಲಾಖೆಯನ್ನು ಬದಲಾಯಿಸಲು ನ್ಯಾಯಾಂಗ ಮುಂದಾಗಬೇಕಾಗಿದೆ. ಇಲ್ಲವಾದರೆ ಈ ದೇಶಕ್ಕೆ ಸ್ವಾತಂತ್ರ ದೊರಕಿರುವುದು ಪೊಲೀಸರ ಲಾಠಿ ಮತ್ತು ಬೂಟುಗಳಿಗೆ ಮಾತ್ರ ಎಂದು ಜನಸಾಮಾನ್ಯರು ನಂಬಬೇಕಾಗುತ್ತದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)