varthabharthiಅನುಗಾಲ

ಬಿಚ್ಚು ಮನದ ಅಂತರಾಳ: 'ನನ್ನೊಳಗಿನ ನಾನು'

ವಾರ್ತಾ ಭಾರತಿ : 16 Aug, 2018
ಬಾಲಸುಬ್ರಹ್ಹಣ್ಯ ಕಂಜರ್ಪಣೆ

ಸಾಹಿತಿಗಳು, ಕಲಾವಿದರು, ಸಮಾಜಸೇವಕರು, ನಿವೃತ್ತ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಕ್ರೀಡಾಪಟುಗಳು- ಹೀಗೆ ಆತ್ಮಕಥನಗಳು ಪ್ರಾಯಃ ಸಮಾಜದ ಎಲ್ಲ ಕ್ಷೇತ್ರಗಳಲ್ಲಿರುವವರಿಂದ ರಚನೆಗೊಂಡಿವೆ. ಆತ್ಮಕಥನಗಳ ಲೇಖಕರ ಕುರಿತು ತಿಳಿಯಬೇಕಾದ್ದಕ್ಕಿಂತಲೂ ಹೆಚ್ಚಾಗಿ ಅವರು ಸಮಾಜದ ಬಗ್ಗೆ, ಇತರರ ಬಗ್ಗೆ ಎಂತಹ ಭಾವನೆಗಳನ್ನು, ವಿಚಾರಗಳನ್ನು ಇಟ್ಟುಕೊಂಡಿದ್ದಾರೆಂಬ ಕದನ ಕುತೂಹಲದಿಂದಲೇ ಬಹುಪಾಲು ಜನರು ಆತ್ಮಕಥನಗಳನ್ನು ಓದುತ್ತಾರೆ. ಗಾಂಧಿಯಿಂದ ಮೊದಲ್ಗೊಂಡು ಮರಾಠಿ ದಲಿತ ಆತ್ಮಕಥನಗಳ ವರೆಗೆ ವಿವಿಧ ಹಿನ್ನೆಲೆಯ ವಿವಿಧ ವರ್ಗಗಳ ಮಂದಿ ಬರೆದ ಆತ್ಮಕಥನಗಳು ಸರ್ವವ್ಯಾಪಿ ಓದುಗರನ್ನು ಹೊಂದಿದ್ದು ಜನಪ್ರಿಯವಾಗಿವೆ.

ಅವರವರೇ ಬರೆದ ಆತ್ಮಕಥನಗಳಿಗೂ, ಬರೆಯಲಾರದ ಅಥವಾ ಬರೆಯಲು ಇಚ್ಛಿಸದ ವ್ಯಕ್ತಿಗಳ ಚರಿತ್ರೆಯನ್ನು ಅವರದೇ ಮಾತುಗಳಲ್ಲಿ ಇನ್ನೊಬ್ಬರು ನಿರೂಪಿಸುವ ಮಾದರಿಗಳು ಬೇಕಷ್ಟಿವೆ. ಇಂತಹ ಆತ್ಮಚರಿತ್ರೆಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರೂಪಕನ ಅನಿಸಿಕೆಗಳನ್ನು ತಮ್ಮ ಕುಸುರಿ ಕೆಲಸದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಿ ಆಕರ್ಷಕ ಗೊಳಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಆದರೆ ಎಲ್ಲೂ ಆತ್ಮರತಿಗೆ ಅವಕಾಶವಿಲ್ಲದೆ ತನ್ನ ಬದುಕಿನ ಅಂಕುಡೊಂಕುಗಳನ್ನು, ಓರೆಕೋರೆಗಳನ್ನು ಇದ್ದಂತೆಯೇ ಚಿತ್ರಿಸಿ ಜೀವ ನೀಡಬಲ್ಲ ನಿರೂಪಣೆಗಳು ನೈಜ ಆತ್ಮಕಥನಗಳಾಗುತ್ತವೆ.

ಕರಾವಳಿಯ ಮತ್ತು ಕನ್ನಡನಾಡಿನ ಜನರಿಗೆ ಬಿ.ಎ.ಮೊಹಿದೀನ್ ಪರಿಚಿತ ರಾಜಕಾರಣಿ. ರಾಜಕಾರಣದಿಂದ ನಿವೃತ್ತರಾದರೆ ಜನಮಾನಸದ ನೆನಪಿನಿಂದ ಮರೆಯಾಗುವ, ಮಾಸುವ ರಾಜಕಾರಣಿಗಳೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ ಭೌತಿಕ ಸಂಪತ್ತನ್ನು ಸಂಪಾದಿಸುವುದಕ್ಕಿಂತ ಹೆಚ್ಚಾಗಿ ತನ್ನ ವರ್ತುಲವನ್ನು ಪ್ರಭಾವಿಸಿ, ಪರಿವರ್ತಿಸಿ ಜನಾನುರಾಗವನ್ನು ಸಂಪಾದಿಸಿದರೆಂಬುದೇ ಬಿ.ಎ.ಮೊಹಿದೀನ್ ಅವರ ಅನನ್ಯತೆ. ಸುಮಾರು 1937-38ರಲ್ಲಿ ಹುಟ್ಟಿ- ''ನಾನು ಹುಟ್ಟಿದ ದಿನಾಂಕ ನನಗೆ ಗೊತ್ತಿಲ್ಲ'' (ಪುಟ 22) ಮತ್ತು ''ಶಾಲೆಯಲ್ಲಿ ತಂದೆಯವರು ದಿನಾಂಕ 5-6-1938 ಎಂದು ಬರೆಸಿದ್ದಾರೆ'' (ಪುಟ 24) ಎನ್ನುವಾಗ ಅದರ ಬಗ್ಗೆ ಖಾತ್ರಿಯಿಲ್ಲವೆಂಬ ಅರಿವನ್ನು ಮೂಡಿಸುವ ಮಾತುಗಳನ್ನು ಯಾವ ಕೀಳರಿಮೆಯೂ ಇಲ್ಲದೆ ಪ್ರಾಂಜಲವಾಗಿ ಹೇಳುವ- ಮೊಹಿದೀನ್ ಜುಲೈ 10, 2018ರಂದು ಈ ಕೃತಿಯ ಬಿಡುಗಡೆಯ ಕೆಲವೇ ದಿನಗಳ ಮೊದಲು ಗತಿಸಿ ಸಾವಷ್ಟೇ ಆತ್ಮರೂಪದ ಖಚಿತತೆಯನ್ನು ಹೊಂದಬಹುದಾದ ಘಟನೆಯೆಂಬುದನ್ನು ನಿರೂಪಿಸುತ್ತಾರೆ. ಈ ಆತ್ಮಕಥನವನ್ನು ಅವರು ತನ್ನ ಕೊನೆಗಾಲದ ಅರಿವಿಲ್ಲದೆ ಮತ್ತು 80 ವರ್ಷಗಳ ಪಕ್ವತೆಯಲ್ಲಿ ವಿವರಿಸಿದರೆಂಬುದನ್ನು ಗಮನಿಸಿದರೆ ಅವರ ವಿಷಯ ಸೂಕ್ಷ್ಮತೆಯ ಕುರಿತು ಮೆಚ್ಚುಗೆ ವ್ಯಕ್ತವಾಗದಿರಲಾರದು.

204 ಪುಟಗಳ ಈ ನಡುಗಾತ್ರದ ಕೃತಿಯನ್ನು ನಿರೂಪಕರು ಅನುಕೂಲಕ್ಕಾಗಿ 1.ಬಾಲ್ಯ, 2.ಕಾಲೇಜಿನ ದಿನಗಳು, 3.ಹಿಂದಿನ ಕಾಲದ ಮದುವೆ, 4.ನನ್ನ ಮದುವೆ, 5.ಹೊಸ ಬದುಕನ್ನು ಅರಸುತ್ತಾ.., 6.ರಾಜಕೀಯ ಎಂಬ ಮುಖ್ಯ ವಿಭಾಗಗಳೊಂದಿಗೆ ಇತರ 7 ಅನುಷಂಗಿಕ ಉಪವಿಭಾಗಗಳನ್ನೂ ಸೇರಿಸಿ ಮೊಹಿದೀನ್ ಅವರ ಬದುಕಿನ ಕಥಾನಕವನ್ನು ಪೂರೈಸಿದ್ದಾರೆ. ಪೂರ್ವಾರ್ಧವು ಮೊದಲ 5 ಅಧ್ಯಾಯಗಳನ್ನು ಒಳಗೊಂಡಿದ್ದು ಈ ಕಥನದ ಅತ್ಯಂತ ಆಳವಾದ, ಆಪ್ತವಾದ ಅನುಭವವನ್ನು ನೀಡುತ್ತದೆ. ಒಮ್ಮೆ ರಾಜಕಾರಣದೊಳಗೆ ಪ್ರವೇಶವಾದಾಗ ಆತ್ಮಕಥನದ ವ್ಯಾಪ್ತಿ ಬಯಲು ಸೀಮೆಯ ಸರಾಗ ನಡೆಯಾಗುತ್ತದೆ; ಸಾರ್ವಜನಿಕವಾಗುತ್ತದೆ. ಮೊಹಿದೀನ್ ಕರಾವಳಿಯ ಬ್ಯಾರಿ ಜನಾಂಗದ ಬಡಕುಟುಂಬದಲ್ಲಿ ಹುಟ್ಟಿದವರು. ತಂದೆ ಅನಕ್ಷರಸ್ಥರು, ಅಂಗಡಿ ವ್ಯಾಪಾರದ ಜೊತೆಗೆ ಬೀಡಿ ಕಟ್ಟುತ್ತಿದ್ದವರು. ಇಂತಹ ಬದುಕನ್ನು ಮೊಹಿದೀನ್ ಯಾವ ರೇಷ್ಮೆದೊಗಲನ್ನೂ ಹಾಕದೆ ಅನುದ್ವೇಗಕರ ವಾಕ್ಯಗಳಲ್ಲಿ ವಿವರಿಸುತ್ತಾರೆ.

ಇಡೀ ಕೃತಿಯಲ್ಲಿ ಮೊಹಿದೀನ್ ಅವರ ಬದುಕಿನ ಅನುಭವದ ಮತ್ತು ವಿಚಾರಗಳ ವಿವರಣೆಗಳೊಂದಿಗೆ ಬ್ಯಾರಿ ಸಂಸ್ಕೃತಿಯ ಮತ್ತು ಸುಮಾರು 1940-50ರ ಕರಾವಳಿ-ಮಲೆನಾಡಿನ ಜನಜೀವನದ ದರ್ಶನವಾಗುತ್ತದೆ. ಬದುಕು ಎಲ್ಲ ವೈಪರೀತ್ಯಗಳೊಂದಿಗೂ ಸಾಮರಸ್ಯದ ಸಾಧನವಾಗಿದ್ದುದಕ್ಕೆ ನಿದರ್ಶನವಾಗಿ ಮಾನವೀಯ ಮತ್ತು ಆಪ್ತಕ್ಷಣಗಳ ಪರಿಚಯಮಾಡಿಸುತ್ತಾರೆ. ಹಳ್ಳಿಗಳಲ್ಲಿ ಮನೆಗಳ ಮಾಡಿಗೆ ಮುಳಿ ಹಾಕುವುದನ್ನು ಹೇಳುತ್ತಾ ''ಅವರ ಮನೆ-ಇವರ ಮನೆ, ಆ ಜಾತಿ-ಈ ಜಾತಿ ಎಂಬ ಭೇದ ಇರಲಿಲ್ಲ'' ಎನ್ನುತ್ತಾರೆ. ವರ್ಗ ವ್ಯತ್ಯಾಸದ ಅನುಭವವನ್ನು ಕಹಿಯಾಗಿ ಕಾಣದೆ ''ನೆಲದಲ್ಲಿ ಕುಳಿತು ಯಕ್ಷಗಾನ ಆಟ ನೋಡಬೇಕಿತ್ತು. ಊರಿನ ಗಣ್ಯರಿಗೆ ಮಾತ್ರ ಎದುರು ಸಾಲಿನಲ್ಲಿ ಕೆಲವು ಮರದ ಕುರ್ಚಿ, ಆರಾಮಕುರ್ಚಿಗಳನ್ನು ಹಾಕುತ್ತಿದ್ದರು'' ಎಂದು ಗಮನಿಸುತ್ತಾರೆ.

''ಮುಸ್ಲಿಮರು ಅದನ್ನು ನೋಡುವುದು ಹರಾಂ ಎಂದು ಕೆಲವರು ಹೇಳುತ್ತಿದ್ದರು'' ಎಂಬ ಜಾತೀಯ ಮೂಢನಂಬಿಕೆಗಳು ಮತ್ತು ಇಂದು ವ್ಯಕ್ತವಾಗುತ್ತಿರುವ ಮತಾಂಧತೆಗಳಿಗಿರುವ ವ್ಯತ್ಯಾಸಗಳನ್ನು ಅವರು ಆಗಲೇ ಗುರುತುಹಾಕಿದ್ದರು. ''ಇಂದು ನಾನು ಒಳ್ಳೆಯ ಕನ್ನಡ ಮಾತನಾಡುತ್ತಿದ್ದರೆ ಅದಕ್ಕೆ ಕಾರಣ ನಾನು ಬಾಲ್ಯದಲ್ಲಿ ಯಕ್ಷಗಾನ ನೋಡುತ್ತಿದ್ದುದು'' ಎಂಬ ಆತ್ಮವಿಶ್ವಾಸದ ನುಡಿಗಳು ಬದುಕಿಗೂ-ಭಾಷೆಗೂ-ಕಲೆಗೂ ಇರುವ ಅವಿನಾ ಸಂಬಂಧದ ಅಗತ್ಯವನ್ನು ಶ್ಲಾಘಿಸುತ್ತವೆ. ಇನ್ನೊಂದು ಸಂದರ್ಭದಲ್ಲಿ ಅವರು ''ಅಂದು ಯಕ್ಷಗಾನಕ್ಕೆ ಇಂದಿನಂತೆ ಧಾರ್ಮಿಕ ಭಾವನೆ ಇರಲಿಲ್ಲ. ಅದು ಈ ಮಣ್ಣಿನ ಒಂದು ಕಲೆ, ಸಂಸ್ಕೃತಿಯಾಗಿತ್ತು. ಜಾತ್ರೆ ಕೂಡ ಹಾಗೆಯೇ. ಅದು ಹಿಂದೂಗಳದ್ದು ಮಾತ್ರವಲ್ಲ ಇಡೀ ಊರಿನ ಉತ್ಸವವಾಗಿತ್ತು. ಎಲ್ಲ ಧರ್ಮಗಳವರೂ ಅದರಲ್ಲಿ ಭಾಗವಹಿಸುತ್ತಿದ್ದರು'' ಎನ್ನುತ್ತಾರೆ. ಈ ಮಣ್ಣು ಮತ್ತೆ ಅಂತಹ ಸರ್ವಜನಾಂಗದ ಶಾಂತಿಯ ತೋಟವಾಗುವುದು ಸಾಧ್ಯವೇ ಮತ್ತು ಅಗತ್ಯವಲ್ಲವೇ ಎಂಬ ಪ್ರಶ್ನೆ ಮುಖ್ಯವಾಗುವುದೇ ಇಂತಹ ಚರಿತ್ರೆಗಳಲ್ಲಿ.

 ಮೊಹಿದೀನ್ ಎತ್ತರದ ಸ್ಪುರದ್ರೂಪಿ ಆಳು. ಈ ಆಕಾರ ಅವರ ವ್ಯಕ್ತಿತ್ವಕ್ಕೂ ನೆರವಾಗಿದೆ. ಅವರು ''ನನ್ನ ಬಿಳಿ ಬಣ್ಣ, ರೂಪ, ಚಂದ ನೋಡಿ ಅವರು (ಇತರ ಮಕ್ಕಳು) ಮೊದಮೊದಲು ನನ್ನನ್ನು ಕ್ರಿಶ್ಚಿಯನ್ ಎಂದೇ ಭಾವಿಸಿದ್ದರು'' ಎಂದು ಹೇಳುವಾಗ ಅವರು ಕ್ರಿಶ್ಚಿಯನ್ ಧರ್ಮೀಯರ ರೂಪದ ಬಗ್ಗೆ ತೋರಿದ ಅಭಿನಂದನೆಯ ಭಾವವನ್ನೂ ಸೂಚಿಸುತ್ತಾರೆ. ಶಾಲೆಯ, ಸಹಪಾಠಿಗಳ ಬಗ್ಗೆ ಇರುವ ಸಹಜ ಆತ್ಮೀಯತೆ ಪ್ರಕಟವಾಗುವುದು ''ಈಗಲೂ ಆತ (ಲಾರ್ಫಿ ಪಿಂಟೋ) ನನ್ನನ್ನು ಬಹಳ ಕಾಡುತ್ತಿದ್ದಾನೆ'' ಎನ್ನುವಾಗ. ಈ ಕಾಡುವಿಕೆ ಮನುಷ್ಯನ ಅತ್ಯಂತ ಗೂಢ ಮತ್ತು ಗಾಢ ಅನುಭವ ದ್ರವ್ಯ.

ಶಾಲೆಯ ಕುರಿತು ಹೇಳುವಾಗ ''ಈಗಿನಂತೆ ಪುಸ್ತಕಗಳ ಹೊರೆ ಆಗ ಇರಲಿಲ್ಲ'', ''ಆಗ ಈಗಿನಂತೆ ಮನೆಕೆಲಸ ಕೂಡಾ ಇರಲಿಲ್ಲ'' ಮತ್ತು ''ಈಗಿನ ಕಾಲದಲ್ಲಿ ಟಿವಿ ಇದ್ದ ಹಾಗೆ ಆಗ ನಮಗೆ ಅಜ್ಜಿ, ಅತ್ತೆಯಂದಿರು'' ಎನ್ನುತ್ತ ಎಳೆಯ ಬದುಕಿನ ವ್ಯವಸ್ಥೆಯು ಕಾಲಾಂತರದಲ್ಲಿ ಹೊಂದಿದ ವಿಪರ್ಯಾಸವನ್ನು ಸರಳವಾಗಿ ಹೇಳುತ್ತಾರೆ.

ಎಲ್ಲರ ಪ್ರೀತಿಪಾತ್ರವಾದ, ಸಾಧುವಾದ ಗೋವು ಇಂದು ಒಂದು ಅನಗತ್ಯ ವಿವಾದದ ಪ್ರಾಣಿಯಾಗಿದೆ. ಮೊಹಿದೀನ್ ಅವರ ಬಾಲ್ಯದಲ್ಲಿ ದನಗಳನ್ನು ಅವರ ಮನೆಮಂದಿ ಪ್ರೀತಿಸುವ ಮತ್ತು ದನಗಳೊಂದಿಗೆ ಮಾಡುತ್ತಿದ್ದ ಸಂಭಾಷಣೆಗಳ ವಿವರಗಳು ಆತ್ಮೀಯವಾಗಿವೆ. ''ಬಯಲು ಉರೂಸನ್ನು ಹೆಚ್ಚಿನ ಸಂದರ್ಭಗಳಲ್ಲಿ ಬಂಟರೇ (ಹಿಂದೂಗಳೇ) ಮಾಡಿಸುತ್ತಿದ್ದುದು'' ಎಂಬ ಮಾಹಿತಿಯು ಜಾತಿ-ಮತಗಳನ್ನು ಮೀರಿ, ಧಿಕ್ಕರಿಸಿ ಒಂದು ಮಾನವೀಯ ದರ್ಪಣವನ್ನೊದಗಿಸುತ್ತವೆ. ಎಲ್ಲ ಧರ್ಮ ಜಾತಿಗಳಲ್ಲಿ ಇರುವ ದೊಡ್ಡ-ಸಣ್ಣ ಎಂಬ ಮೌಲ್ಯಗಳ ಪ್ರತಿಪಾದನೆ, ತಾರತಮ್ಯ ಆಗಿನ ಬದುಕಿನ ಸಹಜಭಾಗವೇ ಹೊರತು ದುರುದ್ದೇಶಪೂರ್ವಕವಾದದ್ದಲ್ಲವೆಂಬ ದೃಷ್ಟಿಯನ್ನು ಬಹಳಷ್ಟು ವಿವರಣೆಗಳು ನೀಡುತ್ತವೆ.

ಕಾಲೇಜಿನ ದಿನಗಳನ್ನು ವಿವರಿಸುವಾಗಲೂ ಜೀವನೋತ್ಸಾಹವೇ ಹೊರತು ಬಳಲಿಕೆಯಿಲ್ಲ. ಒಂದು ಚಿಕ್ಕ ವಿವರಣೆ ಹೀಗಿದೆ: ''ಆಗ ಈಗಿನ ಹಾಗೆ ರಸ್ತೆಯಲ್ಲಿ ವಾಹನದಟ್ಟಣೆಯಾಗಲಿ, ಜನಸಂದಣಿಯಾಗಲಿ ಇರಲಿಲ್ಲ.'' ಸ್ಥಿತ್ಯಂತರಗಳ ಘೋಷರಹಿತ ಚಿತ್ರ ಇದು. ಆ ಕಾಲದಲ್ಲಿ ಸಮಾಜದ ಬಹುಭಾಗ ಬಡವರೇ ಇದ್ದರಾದ್ದರಿಂದ ಬದುಕಿನ ವಿಧಿವಿಧಾನ ಮೊಹಿದೀನ್ ಅವರ ಬದುಕಿನಂತೆಯೇ ಇದ್ದಿರಬೇಕು. ಅವುಗಳ ನಡುವೆಯೂ ಮೊಹಿದೀನ್ ತನ್ನನ್ನು ಇಷ್ಟಪಟ್ಟ, ತಾನು ಇಷ್ಟಪಟ್ಟ ಹುಡುಗಿಯರ ಬಗ್ಗೆ ನಿರ್ಮಮವಾಗಿ ಹೇಳುತ್ತ ''ಹೀಗೆ ಆಗಿನ ಕಾಲದಲ್ಲೂ ವಿದ್ಯಾರ್ಥಿಗಳ ನಡುವೆ ಈ ಪ್ರೇಮ, ಪ್ರೀತಿ, ಸಂಬಂಧಗಳೆಲ್ಲ ಇದ್ದವು. ಆದರೆ ಈಗಿನ ಹಾಗೆ ಸುತ್ತಾಡುವುದು, ಮಜಾ ಮಾಡುವುದು, ಮನೆ ಬಿಟ್ಟು ಓಡುವುದು ಮುಂತಾದವುಗಳೆಲ್ಲ ಇರಲಿಲ್ಲ. ಆ ಬಗ್ಗೆ ಪರಸ್ಪರ ಮಾತನಾಡಲೂ ಹೆದರುತ್ತಿದ್ದೆವು.'' ಎನ್ನುತ್ತ ಆಗಿನ ಸಾಮಾಜಿಕ ಸಂದರ್ಭದ ಬಗ್ಗೆ ಬೆಳಕು ಬೀರಿ ಇವೆಲ್ಲ ಯೌವನದ ಒಂದು ಭಾಗವಷ್ಟೇ ಎಂದು ತೋರಿಸುತ್ತಾರೆ.

ಒಬ್ಬ ವ್ಯಕ್ತಿಯ ಶ್ರೇಷ್ಠತೆಯ ಸೂಕ್ಷ್ಮತೆಗಳನ್ನು ನವಿರಾಗಿ ವಿವರಿಸುವ ಕ್ರಮ ಮೊಹಿದೀನ್ ಅವರಿಗೆ ಸಿದ್ಧಿಸಿದೆ. ಡಾ.ರಾಜಕುಮಾರ್ ಬಗ್ಗೆ ಹಿಡಿದ ಪುಟ್ಟ ಕನ್ನಡಿ ಹೀಗಿದೆ: ''ಡಾ. ರಾಜಕುಮಾರ್ ಕೂಡ ಆಗಾಗ ನಮ್ಮ ರೂಮಿಗೆ ಬರುತ್ತಿದ್ದರು. ಸುಮ್ಮನೆ ಕುಳಿತು ನಾವು ಆಡುವುದನ್ನು ನೋಡುತ್ತಿದ್ದರು. ಒಂದು ದಿನವೂ ಅವರು ಆಡಿರಲಿಲ್ಲ.'' ರಾಜಕುಮಾರ್ ಅವರನ್ನು ಇಷ್ಟು ಸುಲಭವಾಗಿ, ಸರಳವಾಗಿ ವಿವರಿಸಿದ ಉದಾಹರಣೆಗಳು ಅಪರೂಪ.

ಇನ್ನೊಂದು ಮುಖ್ಯವಾದ ವಿವರಣೆಯಿರುವುದು ಬ್ಯಾರಿ ಜನಾಂಗದ ವಿವಾಹ ಪದ್ಧತಿಯ ಕುರಿತು. ಇದು ಮುಂದೆ ಅವರದೇ ಮದುವೆಯ ವಿವರಗಳಲ್ಲಿ ಕೊನೆಗೊಳ್ಳುತ್ತದೆ. ''ಹೆಣ್ಣು ಇಷ್ಟವಾದ ಮೇಲೆ ಮಲ್ಲಿಗೆ ಹೂ ಮುಡಿಸುವ ಸಂಪ್ರದಾಯ ಕೆಲವು ಕಡೆ ಇತ್ತು'' ಎನ್ನುವಾಗ ಸಂಪ್ರದಾಯದ ನವಿರು ಘಮಘಮಿಸುತ್ತದೆ. ಇವುಗಳೊಂದಿಗೇ ಆಗಿನ ಜನಜೀವನದೊಂದಿಗೆ ಅರೋಗ್ಯ, ಶಿಕ್ಷಣ, ವ್ಯವಹಾರ, ಕಲೆ ಮುಂತಾದ ಅನೇಕ ಪ್ರಮುಖ ಘಟನೆಗಳು ಬಿಚ್ಚಿಕೊಳ್ಳುತ್ತವೆ. ಕಥೆ-ಕಾದಂಬರಿಗಳಲ್ಲಷ್ಟೇ ಸಂಸ್ಕೃತಿಯು ಅನಾವರಣಗೊಳ್ಳುತ್ತದೆ ಎಂಬವರಿಗೆ ಈ ಕೃತಿಯಲ್ಲಿ ಸಮಾಜೋ-ಸಾಂಸ್ಕೃತಿಕ ಅಧ್ಯಯನಕ್ಕೆ ಬೇಕಾದ ಪರಿಕರಗಳಿವೆ. ಹಾಗೆ ನೊಡಿದರೆ ಮೊಹಿದೀನ್ ಅವರು ಹೊಸ ಬದುಕನ್ನು ಅರಸುತ್ತಾ ಮುಂದುವರಿದ ಆನಂತರ ಈ ಮಂಗಳೂರು ಮಲ್ಲಿಗೆಯ ಚೆಲುವು ಕಾಣಸಿಗುವುದಿಲ್ಲ. ಅವು ಪ್ರಾಮಾಣಿಕ, ದಕ್ಷ, ಕಾರ್ಯನಿಷ್ಠನೊಬ್ಬನ ಮಾದರಿ ಜೀವನದಂತಿದೆ. ರಾಜಕೀಯದ ಕುರಿತು ಬರೆಯುವಾಗ ಮೊಹಿದೀನ್ ಅವರು ತಮ್ಮ ಈ ಮುಗ್ಧತೆಯನ್ನು ಕಳೆದುಕೊಂಡ ಭಾವನೆ ಮೂಡುತ್ತದೆ.

ಅಲ್ಲಿ ಎಷ್ಟೇ ಇಲ್ಲವೆಂದರೂ ರಾಗದ್ವೇಷಗಳ ನೆರಳು ಸುಳಿಯುತ್ತದೆ. ತಮ್ಮ ನಿಷ್ಠೆಯ ಕುರಿತು ಸ್ವಾಭಿಮಾನದಿಂದಲೇ ನಿರೂಪಿಸುವಾಗಲೂ ಮೊಹಿದೀನ್ ಜನಾರ್ದನ ಪೂಜಾರಿ, ವೀರಪ್ಪಮೊಯ್ಲಿ, ಆಸ್ಕರ್ ಫೆರ್ನಾಂಡಿಸ್ ಮುಂತಾದವರ ಬಗ್ಗೆ ತಾಳುವ ಅಭಿಪ್ರಾಯಗಳು ಅವರ ದುಗುಡ-ದುಮ್ಮಾನಗಳ ಸಾಕ್ಷೀರೂಪದಂತೆ ಅನ್ನಿಸುತ್ತ ಇವು ಅಗತ್ಯವಿದ್ದವೇ ಎಂದನ್ನಿಸುತ್ತದೆ. ಅವರ ಒಟ್ಟಾರೆ ವ್ಯಕ್ತಿತ್ವವು ದಿವಂಗತ ನಝೀರ್ ಸಾಬ್‌ರನ್ನು ಹೋಲುತ್ತದೆಯಾದ್ದರಿಂದ ಎಷ್ಟೇ ಮುಕ್ತವಾಗಿದ್ದಾಗಲೂ ಕಹಿಯನ್ನು ಮರೆಯುವುದು ಅಗತ್ಯವಿತ್ತೆಂದು ಅನ್ನಿಸುತ್ತದೆ. ಅವರ 'ಐಕಾನ್' ದೇವರಾಜ ಅರಸು ಅವರಿಗಾದ ಗತಿಯನ್ನು ಅವರ ಮಾತಿನಿಂದಲೇ ಕೇಳಿದ ಮೇಲೆ ಉಳಿದ ಎಲ್ಲ ಸಂಕಟಗಳು, ಸೋಲುಗೆಲುವುಗಳು, ಏಳುಬೀಳುಗಳು ರಾಜಕೀಯದಲ್ಲಿ ಅನಿವಾರ್ಯ ಸ್ವಭಾವಸಿದ್ಧವೆನ್ನಿಸುತ್ತದೆ. ಜನರ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಬೇರಿಲ್ಲ. ಅದನ್ನು ಗಳಿಸಿದ ಮೊಹಿದೀನ್ ಅವರಿಗೆ ನಿರ್ಲಕ್ಷ್ಯದ ಪ್ರಶ್ನೆಯೇ ಎದುರಾಗಬಾರದಿತ್ತು. ಅವರಿಗಾಗಿದೆಯೆನ್ನಲಾದ ಅನ್ಯಾಯದ ನಡುವೆಯೂ ರಾಜಕೀಯದಿಂದ ನಿವೃತ್ತಿ ಹೊಂದಿದ ಮೇಲೆ ಅವರು ಹಸಿರನ್ನಷ್ಟೇ ಮೆಲುಕು ಹಾಕಬಹುದಾಗಿತ್ತೆನ್ನಿಸುತ್ತದೆ. ಅವರೊಳಗಿರುವ ಮುಗ್ಧ ಸಜ್ಜನ 'ನಾನು' ರಾಜಕೀಯದ ಕೇಡುಗಳನ್ನು ನೆನಪಿಸದಿದ್ದರೆ ಪ್ರಾಯಃ ಅವರ ವ್ಯಕ್ತಿತ್ವಕ್ಕೆ ಅಜಾತಶತ್ರುವಿನ ಮೆರುಗು ನೀಡಬಹುದಾಗಿತ್ತೆನ್ನಿಸುತ್ತದೆ. ಇದಕ್ಕೆ ಪುಷ್ಟಿ ನೀಡುವ ಪ್ರಸಂಗ ಅವರು ಕೊನೆಗೆ ನೆನಪಿಸುವ ಅವರ ಪತ್ನಿಯ ಉಲ್ಲೇಖ. ಅಲ್ಲಿ ನಗಣ್ಯವಾಗಬಹುದಾಗಿದ್ದ ಪ್ರಸಂಗವೊಂದರ ಮಾನವೀಯ ವರ್ಣನೆಯಿದೆ; ಅದರ ಹಿಂದೆ ನೋವಿದೆ; ಪಶ್ಚಾತ್ತಾಪವಿದೆ. ಈ ಅಗ್ನಿದಿವ್ಯದಲ್ಲಿ ಮೊಹಿದೀನ್ ಬೆಂದು ಹೋಗುತ್ತಾರೆ. ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಾರೆ. ಕೃತಿಯ ಶಿಖರಪ್ರಾಯ ಘಟ್ಟವಿದು.

ಲೇಖಕರಾದ ಮುಹಮ್ಮದ್ ಕುಳಾಯಿ ಮತ್ತು ಬಿ.ಎ.ಮುಹಮ್ಮದ್ ಅಲಿ ನಿರೂಪಿಸಿದ ನನ್ನೊಳಗಿನ ನಾನು ವಿಶಿಷ್ಟವಾಗುವುದೇ ಅದರಲ್ಲಿರುವ ಆತ್ಮರತಿಯ ಗೈರುಹಾಜರಿಯಿಂದ. ಬಡತನವನ್ನು ವೈಭವೀಕರಿಸದೆ, ಅನಕ್ಷರತೆಯನ್ನು ಅನುಕಂಪದ ಅಲೆಯಾಗಿಸದೆ, ಆತ್ಮಕಥಾ ನಾಯಕನನ್ನು ಪಂದ್ಯಪುರುಷೋತ್ತಮನನ್ನಾಗಿಸದೆ ಸರಳೀಕರಿಸಿ ಮೊಹಿದೀನ್ ಅವರೊಳಗಿನ ಅವರನ್ನು ಜಗತ್ತಿಗೆ ಪರಿಚಯಿಸಿದ ರೀತಿ ಅನನ್ಯ. ಅನೇಕ ಪ್ರಸಂಗಗಳಲ್ಲಿ ಮೆಲೊಡ್ರಾಮವಾಗಬಹುದಾದ ಸನ್ನಿವೇಶಗಳನ್ನು ಹದನಿಧಾನದಿಂದ ನಿಯಂತ್ರಿಸಿದ ವಸ್ತುನಿಷ್ಠೆ ಈ ಇಬ್ಬರು ನಿರೂಪಕರ ಮತ್ತು ಈ ಕೃತಿಯ ಶ್ರೇಷ್ಠತೆ. ಸೊಗಸಾದ ಮುನ್ನುಡಿ-ಹಿನ್ನುಡಿಗಳು-ವಿಶಾಲ ವೃಕ್ಷದ ನೆರಳಿನಲ್ಲಿ ಕುಳಿತ ಅನುಭವ- ಇವೆಲ್ಲ ಇದಕ್ಕೆ ಕಲಶಪ್ರಾಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)