varthabharthi

ಸಂಪಾದಕೀಯ

ಮಹಾದಾಯಿ ಐತೀರ್ಪು ಜಲಸಂಪತ್ತಿನ ಅಸಮರ್ಪಕ ಹಂಚಿಕೆ

ವಾರ್ತಾ ಭಾರತಿ : 16 Aug, 2018

ಸುಮಾರು 20 ವರ್ಷಗಳ ಕಾಲ ಉತ್ತರಕರ್ನಾಟಕದಲ್ಲಿ ಅದರಲ್ಲೂ ಧಾರವಾಡ, ಬಿಜಾಪುರ ಜಿಲ್ಲೆಗಳಲ್ಲಿ ಹೋರಾಟದ ಕಾವು ಮೂಡಿಸಿದ್ದ ಮಹಾದಾಯಿ ನದಿ ನೀರಿನ ವಿವಾದದಲ್ಲಿ ಕೊನೆಗೂ ಮಂಗಳವಾರ ನ್ಯಾಯಮಂಡಳಿ ತನ್ನ ಐತೀರ್ಪನ್ನು ನೀಡಿದೆ. ಕರ್ನಾಟಕದ ಗಡಿ ಭಾಗದಲ್ಲಿ ಹುಟ್ಟಿ ಗೋವಾದಲ್ಲಿ ಹರಿಯುವ ಈ ಮಹಾದಾಯಿ ನದಿ ನೀರಿನ ಮೇಲೆ ಕರ್ನಾಟಕಕ್ಕೆ ಹಕ್ಕಿದೆ ಎಂಬ ವಾದವನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ. ಆದರೆ, ತನ್ನ ಐತೀರ್ಪಿನಲ್ಲಿ ಕರ್ನಾಟಕಕ್ಕೆ ಸಣ್ಣ ಪಾಲು ನೀಡಿ ಗೋವಾಕ್ಕೆ ಸಿಂಹ ಪಾಲು ನೀಡಿದ್ದು ಮಾತ್ರ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಐತೀರ್ಪಿನ ಪ್ರಕಾರ ಗೋವಾಕ್ಕೆ 24 ಟಿಎಂಸಿ ಹಾಗೂ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಾದಾಯಿ ನದಿ ಕಣಿವೆಯಾಚೆಗಿನ ಮಲಪ್ರಭಾ ನದಿಗೆ ತಿರುವು ಯೋಜನೆ ಮೂಲಕ ನೀರನ್ನು ಎತ್ತಿಕೊಳ್ಳಲು ಅವಕಾಶ ಕೊಡಲೇ ಬಾರದೆಂಬ ಗೋವಾದ ವಾದವನ್ನು ನ್ಯಾಯಮಂಡಳಿ ತಿರಸ್ಕರಿಸಿದ್ದು ಸ್ವಾಗತಾರ್ಹವಾಗಿದೆ.

'ಕುಡಿಯುವ ನೀರಿನ ಯೋಜನೆಗೆ ಅನುಮತಿ ದೊರಕಿರುವುದರಿಂದ ಕರ್ನಾಟಕ ನಿರೀಕ್ಷಿಸಿದಂತೆ ಸಮಾಧಾನಕರ ತೀರ್ಪು ಹೊರಬಿದ್ದಿದೆ. ಆದರೆ, ಇದು ಸಂಪೂರ್ಣ ನ್ಯಾಯಸಮ್ಮತವಾಗಿಲ್ಲ. ಮಹಾದಾಯಿ ನದಿಯಲ್ಲಿನ ಪೂರ್ಣ ಪಾಲನ್ನು ಪಡೆಯಲು ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವುದು ಅಗತ್ಯವಾಗಿದೆ. ಮಹಾದಾಯಿ ನೀರಿಗಾಗಿ ಉತ್ತರ ಕರ್ನಾಟಕದ ರೈತರು ಕಳೆದ ಮೂರು ವರ್ಷಗಳಿಂದ ವೀರೋಚಿತವಾದ ಹೋರಾಟವನ್ನು ನಡೆಸಿದರು. ಮೊದಲು ನವಲಗುಂದ ಮತ್ತು ನರಗುಂದಗಳಲ್ಲಿ ಆರಂಭವಾದ ಹೋರಾಟ ಆನಂತರ ಹುಬ್ಬಳ್ಳಿ, ಧಾರವಾಡ, ರಾಮದುರ್ಗ, ಬೈಲಹೊಂಗಲ, ಬಾದಾಮಿ, ಗುಳೇದಗುಡ್ಡ ಮತ್ತು ಬಾಗಲಕೋಟೆಗಳಿಗೂ ವ್ಯಾಪಿಸಿತು. ಪೊಲೀಸರ ದೌರ್ಜನ್ಯಕ್ಕೆ ಹೆದರದೆ ಜನ ಹೋರಾಟಕ್ಕಿಳಿದರು. ಈ ಹೋರಾಟದಲ್ಲಿ 11 ಜನ ಹುತಾತ್ಮರಾದರು. ಮೂರು ವರ್ಷಗಳ ಕಾಲ ಉತ್ತರಕರ್ನಾಟಕದ ಬಿಜೆಪಿ ಸಂಸದರು, ಶಾಸಕರ ಮನೆಗಳ ಮುಂದೆ ಧರಣಿ ಸತ್ಯಾಗ್ರಹ ಮತ್ತು ೇರಾವ್ ನಡೆಸಿದರು.

ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಬಿಜೆಪಿಯ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ನ್ಯಾಯ ಒದಗಿಸಬೇಕೆಂಬುದು ಜನರ ಬೇಡಿಕೆಯಾಗಿತ್ತು. ಈ ಹೋರಾಟ ತೀವ್ರಗೊಂಡಾಗ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ರಾಜಧಾನಿ ದಿಲ್ಲಿಗೆ ಸರ್ವಪಕ್ಷ ನಿಯೋಗವನ್ನು ತೆಗೆದುಕೊಂಡು ಹೋಗಿದ್ದರು. ಮಧ್ಯಸ್ಥಿಕೆ ವಹಿಸಿ ಈ ವಿವಾದವನ್ನು ಬಗೆಹರಿಸಿಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿಕೊಂಡರೂ ಅವರು ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಮಹಾದಾಯಿ ಹೋರಾಟಕ್ಕೆ ಸಂಬಂಧಿಸಿದಂತೆ ಪರಸ್ಪರ ಮಾತುಕತೆಗಳ ಮೂಲಕ ಈ ವಿವಾದವನ್ನು ಇತ್ಯರ್ಥ ಪಡಿಸಿಕೊಳ್ಳುವ ಅವಕಾಶವನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನ್ಯಾಯಮಂಡಳಿ ಕಲ್ಪಿಸಿಕೊಟ್ಟಿತು. ಈ ವಿವಾದ ಇತ್ಯರ್ಥಪಡಿಸಲು ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡಾ ಆಸಕ್ತಿ ವಹಿಸಿತ್ತು. ಆದರೆ, ಕೇಂದ್ರದ ಬಿಜೆಪಿ ಸರಕಾರ ಸಂಪೂರ್ಣವಾಗಿ ನಕಾರಾತ್ಮಕವಾಗಿ ಹಾಗೂ ಬೇಜವಾಬ್ದಾರಿಯಿಂದ ವರ್ತಿಸಿತು. ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿ ಬಿಜೆಪಿ ಸರಕಾರವಿದ್ದರೂ ಕೇಂದ್ರದ ಬಿಜೆಪಿ ಸರಕಾರ ಜವಾಬ್ದಾರಿಯಿಂದ ವರ್ತಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಳಿ ಕರ್ನಾಟಕದ ಸರ್ವಪಕ್ಷ ನಿಯೋಗ ಹೋದಾಗ ಅವರು ಎಷ್ಟು ಉಡಾಫೆಯಿಂದ ಮಾತನಾಡಿದರೆಂದರೆ ‘‘ಗೋವಾ ಮತ್ತು ಮಹಾರಾಷ್ಟ್ರದ ಪ್ರತಿಪಕ್ಷ ನಾಯಕರನ್ನು ಮೊದಲು ಒಪ್ಪಿಸಿಕೊಂಡು ಬನ್ನಿ’’ ಎಂದು ಉಪದೇಶ ನೀಡಿದರು. ಆಗ ನಿಯೋಗದಲ್ಲಿದ್ದ ಕರ್ನಾಟಕದ ಬಿಜೆಪಿ ಸಂಸದರು ಮತ್ತು ಶಾಸಕರು ಮೋದಿ ಎದುರು ಬಾಯಿಮುಚ್ಚಿಕೊಂಡು ಕುಳಿತರು. ಆನಂತರ ಹುಬ್ಬಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಭಾಷಣ ಮಾಡುತ್ತಾ ಮಾತುಕತೆಯ ಮೂಲಕ ಮಹಾದಾಯಿ ವಿವಾದ ಬಗೆಹರಿಸಿಕೊಳ್ಳಲು ಗೋವಾದ ಬಿಜೆಪಿ ಸರಕಾರ ಸಿದ್ಧವಿದೆ.

ಈ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತನಗೆ ಪತ್ರ ಬರೆದಿದ್ದಾರೆಂದು ತಮ್ಮ ಜೇಬಿನಿಂದ ಕಾಗದದ ತುಂಡೊಂದನ್ನು ತೆಗೆದು ತೋರಿಸಿದರು. ಆದರೆ, ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಈ ಬಗ್ಗೆ ಯಾವುದೇ ಆಸಕ್ತಿ ವಹಿಸಲಿಲ್ಲ. ಒಂದು ರೀತಿ ನಕಾರಾತ್ಮಕವಾಗಿ ವರ್ತಿಸಿದರು. ಪ್ರಧಾನಿ ಎದುರು ಬಾಯಿ ಮುಚ್ಚಿಕೊಂಡು ಕುಳಿತಿದ್ದ ಯಡಿಯೂರಪ್ಪನ ಉತ್ತರಕರ್ನಾಟಕದ ಜನರ ದಾರಿ ತಪ್ಪಿಸಲು ಈ ರೀತಿ ನಾಟಕವಾಡಿದರು. ಅದೇನೇ ಇರಲಿ ಮಹಾದಾಯಿ ವಿವಾದ ಕುರಿತು ನ್ಯಾಯಮಂಡಳಿ ನೀಡಿದ ತೀರ್ಪು ಕರ್ನಾಟಕಕ್ಕೆ ಸಂಪೂರ್ಣವಾದ ನ್ಯಾಯವನ್ನು ಒದಗಿಸಿಲ್ಲ. ಆದರೂ ಕರ್ನಾಟಕದ ವಾದವನ್ನು ಅದು ಒಂದು ರೀತಿಯಲ್ಲಿ ಒಪ್ಪಿಕೊಂಡಂತಾಗಿದೆ. ನ್ಯಾಯದ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ಕರ್ನಾಟಕದ ಪಾಲಿನ ನೀರಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶವಿದೆ. ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಕುಡಿಯುವ ನೀರಿಗಾಗಿ ನೀರು ಹಂಚಿಕೆ ಮಾಡುವ ಬಗ್ಗೆ ಒಪ್ಪಿಗೆ ನೀಡಿದೆ. ಕುಡಿಯುವ ನೀರು ಮತ್ತು ಜಲವಿದ್ಯುತ್ ಯೋಜನೆಗಾಗಿ ಪ್ರತ್ಯೇಕವಾಗಿ ನೀರಿನ ಪ್ರಮಾಣವನ್ನು ನಿಗದಿಗೊಳಿಸಿದೆ. ಕುಡಿಯುವ ನೀರಿಗಾಗಿ ನಿಗದಿಪಡಿಸಿದ ನೀರನ್ನು ಕೃಷಿ ಉದ್ದೇಶಗಳಿಗೆ ಬಳಸಲು ಅವಕಾಶವಿಲ್ಲ.

ಈ ಬಗ್ಗೆ ರಾಜ್ಯ ಸರಕಾರ ಕಾನೂನು ತಜ್ಞರ ಸಲಹೆ ಪಡೆದು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಗಿದೆ. ವಾಸ್ತವವಾಗಿ ಕರ್ನಾಟಕ 7.56 ಟಿಎಂಸಿಯನ್ನು ಕುಡಿಯುವ ನೀರಿಗಾಗಿಯೇ ಕೇಳಿತ್ತು. ಆದರೆ, ಮಹಾದಾಯಿ ಕಣಿವೆಯಿಂದ ಒಟ್ಟು 13.37 ಟಿಎಂಸಿ ನೀರು ನಿಗದಿಯಾಗಿರುವುದರಿಂದ ಸಮಾಧಾನ ಪಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸರ್ವಪಕ್ಷಗಳ ನಾಯಕರು ಹಾಗೂ ರೈತ ಸಂಘಗಳ ನಾಯಕರ ಸಭೆಯನ್ನು ಕರೆದು ಅವರೊಂದಿಗೆ ಸಮಾಲೋಚಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟವನ್ನು ಮುಂದುವರಿಸುವ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕಾಗಿದೆ. ಕೇಂದ್ರ ಜಲ ಆಯೋಗದ ಪ್ರಕಾರವೇ ಕರ್ನಾಟಕಕ್ಕೆ 42 ಟಿಎಂಸಿ ನೀರು ಲಭ್ಯವಾಗಬೇಕಾಗಿತ್ತು. ಈಗ ಕೇವಲ 13.37 ಟಿಎಂಸಿ ನೀರು ಸಿಕ್ಕಿದೆ. ಇದರಿಂದ ಈ ಭಾಗದ ರೈತರ ಬವಣೆ ನೀಗಿಸಲು ಸಾಧ್ಯವಿಲ್ಲ. ಕುಡಿಯಲು ನೀರು ದೊರಕಿದೆ. ಆದರೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರು ಇನ್ನೂ ದೊರಕಿಲ್ಲ. ವಿದ್ಯುತ್ ಉತ್ಪಾದನೆಗಾಗಿ ಬಳಸಿದ ನೀರು ಹಾಗೂ ವಿದ್ಯುತ್‌ನ್ನು ಮತ್ತೆ ಗೋವಾಕ್ಕೆ ಕೊಡಬಹುದಾದ ಪ್ರಸಂಗ ಬರಬಹುದು. ಆದ್ದರಿಂದ ನ್ಯಾಯಮಂಡಳಿ ನಿಗದಿ ಪಡಿಸಿದ ನೀರಿನ ಬಳಕೆ ಮಾಡಲು ವಾಸ್ತವವಾಗಿ ತೊಂದರೆಯಾಗುತ್ತದೆ.

ಮಳೆಗಾಲದ ಅವಧಿಯಲ್ಲಿ ನಮ್ಮ ಪಾಲಿನ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲು ನಿರ್ಬಂಧ ವಿಧಿಸಬಾರದು. ಕಳಸಾ ನಾಲೆಯಿಂದ ಗುರುತ್ವಾಕರ್ಷಣೆ ಶಕ್ತಿಯ ಮೂಲಕ ನಾವು ನೀರನ್ನು ಪಡೆಯಬಹುದಾಗಿದೆ. ಆದರೆ, ಬಂಡೂರಿ ನಾಲೆ ಎತ್ತರ ಪ್ರದೇಶದಲ್ಲಿ ಇರುವುದರಿಂದ ಏತ ನೀರಾವರಿಯ ಮೂಲಕ ನೀರನ್ನು ಬಳಸಿಕೊಳ್ಳಬೇಕಾಗುತ್ತದೆ. ರೈತರ ಜಮೀನಿಗೆ ನೀರು ಸಿಗಬೇಕಾದರೆ ತ್ವರಿತವಾಗಿ ಕಾಲುವೆ ಕಾಮಗಾರಿ ಮುಗಿಯಬೇಕು. ಮಲಪ್ರಭಾ ನದಿ ನೀರು ಪೂರೈಕೆ ಕಾಲುವೆಗಳನ್ನು ನವೀಕರಣ ಮಾಡಬೇಕು. ಇದಕ್ಕೆ ಪ್ರತ್ಯೇಕವಾದ ಅನುದಾನವನ್ನು ಮೀಸಲಿಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ತಜ್ಞರ ಸಲಹೆಯನ್ನು ಪಡೆಯಬೇಕು. ಮಹಾದಾಯಿ ನದಿಯಿಂದ 188 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದೆಂಬ ನಮ್ಮ ವಾದವನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ.

ಇದು ಕರ್ನಾಟಕಕ್ಕೆ ಸಿಕ್ಕ ನೈತಿಕ ಗೆಲುವು. ಆದರೆ, ಅದರಲ್ಲಿ 38 ಟಿಎಂಸಿ ನೀರನ್ನು ಮಾತ್ರ ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಉಳಿದ 150 ಟಿಎಂಸಿ ಅಡಿ ನೀರನ್ನು ಯಾವ ರಾಜ್ಯಕ್ಕೂ ಹಂಚಿಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿರುವ ಬಗ್ಗೆ ಅಸಮಾಧಾನವೂ ಇದೆ. ಗೋವಾ ಸರಕಾರ ಸುಪ್ರೀಂ ಕೋರ್ಟ್‌ಗೆ ಹೋಗುವ ಮುನ್ನ ರಾಜ್ಯ ಸರಕಾರವೇ ಮೇಲ್ಮನವಿ ಸಲ್ಲಿಸಿ ನಮ್ಮ ಪಾಲಿನ ನೀರನ್ನು ಪಡೆಯಲು ಮುಂದಾಗಬೇಕು. ಒಟ್ಟಾರೆ ಹೇಳಬೇಕೆಂದರೆ ಮಹಾದಾಯಿ ನ್ಯಾಯಮಂಡಳಿ ರಾಷ್ಟ್ರದ ಜಲಸಂಪತ್ತನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕಾಗಿತ್ತು. ಆದರೆ, ಅಸಮರ್ಪಕ ಹಂಚಿಕೆ ಮಾಡಿರುವುದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ನಿಜ. ಈಗ ಕರ್ನಾಟಕಕ್ಕೆ ಒದಗಿಸಿದ ನೀರು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)