varthabharthi

ಸಂಪಾದಕೀಯ

ಉದಾರವಾದಿ ಹಿಂದುತ್ವ ರಾಜಕಾರಣದ ಯುಗಾಂತ್ಯ

ವಾರ್ತಾ ಭಾರತಿ : 17 Aug, 2018

ಬಿಜೆಪಿಯ ಹಿಂದುತ್ವ ರಾಷ್ಟ್ರೀಯವಾದ ತನ್ನ ಉದಾರವಾದಿ ಮಾರ್ಗದಿಂದ ಉಗ್ರವಾದಿ ಮಾರ್ಗಕ್ಕೆ ಹೊರಳುತ್ತಿರುವ ದಿನಗಳನ್ನು ಸಂಕೇತಿಸುವಂತೆ ಹಿರಿಯ ರಾಜಕೀಯ ಮುತ್ಸದ್ದಿ, ಆರೆಸ್ಸೆಸ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾಗಿದ್ದಾರೆ. ವಾಜಪೇಯಿ ಸಾರ್ವಜನಿಕ ರಾಜಕಾರಣದಿಂದ ದೂರ ಉಳಿದು ಒಂದು ದಶಕವೇ ಉರುಳಿದೆ. ಅವರು ಬಿಜೆಪಿಯೊಳಗಿರುವ ಅಳಿದುಳಿದ ಉದಾರವಾದಿ ವೌಲ್ಯಗಳ ರೂಪಕವಾಗಿ ತಮ್ಮ ಒಂದು ದಶಕವನ್ನು ಐಸಿಯುವಿನಲ್ಲಿ ಕಳೆದರು.

ಅತ್ಯಂತ ಹೃದಯವಿದ್ರಾವಕ ವಿಷಯವೆಂದರೆ, ಬಿಜೆಪಿಯನ್ನು ಕಟ್ಟುವಲ್ಲಿ ಅವರ ಜೊತೆಗೆ ಕೈ ಜೋಡಿಸಿದ್ದ ಅವರ ತಲೆಮಾರಿನ ಉಳಿದ ನಾಯಕರ ಸ್ಥಿತಿ ಅದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಬಹುತೇಕ ಹಿರಿಯರನ್ನು ಬಿಜೆಪಿ ರಾಜಕೀಯವಾಗಿ ಐಸಿಯು ಸೇರಿಸಿದೆ. ಉಳಿದವರನ್ನು ಪಕ್ಷದ ವೃದ್ಧಾಶ್ರಮಕ್ಕೆ ಹಸ್ತಾಂತರಿಸಿದೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್...ಎಲ್ಲರೂ ಬಿಜೆಪಿ ಮತ್ತು ಆರೆಸ್ಸೆಸ್‌ನ ಸದ್ಯದ ರಾಜಕೀಯಕ್ಕೆ ಅಪ್ರಸ್ತುತರಾಗಿದ್ದಾರೆ. ಅವರ ಸ್ಥಾನದಲ್ಲಿ ಮೋದಿ, ಅಮಿತ್‌ಶಾ, ಆದಿತ್ಯನಾಥ್‌ನಂತಹ ನಾಯಕರು ಅರಚಾಡುತ್ತಿದ್ದಾರೆ. ವಾಜಪೇಯಿ ನಿಧನ ಬಿಜೆಪಿಯ ಒಂದು ತಲೆಮಾರಿನ ರಾಜಕೀಯ ಮುತ್ಸದ್ದಿಗಳ ಕಾಲ ಮುಗಿದಿದೆಯೆನ್ನುವುದನ್ನು ಸ್ಪಷ್ಟವಾಗಿ ಘೋಷಿಸಿದೆ.

ಆರೆಸ್ಸೆಸ್‌ನೊಳಗಿದ್ದೂ ಇಲ್ಲದವರಂತೆ ಬದುಕಿದವರು ವಾಜಪೇಯಿ. ಅಡ್ವಾಣಿ, ಉಮಾಭಾರತಿಯ ಬೆಂಕಿಚೆಂಡುಗಳಂತಹ ದ್ವೇಷ ಭಾಷಣಗಳ ಅಬ್ಬರ ದೇಶವನ್ನು ನಿಧಾನವಾಗಿ ಆಹುತಿ ತೆಗೆದುಕೊಳ್ಳುತ್ತಿರುವಾಗ ವಾಜಪೇಯಿಯ ಮೃದು ಮಾತುಗಳು ಹೆಚ್ಚು ಆಪ್ತವಾಗಿ ಕೇಳಿಸುತ್ತಿತ್ತು. ಕಾಂಗ್ರೆಸ್‌ಗೆ ಪರ್ಯಾಯವಾಗಿ ಒಂದು ಪಕ್ಷವನ್ನು ಕಂಡುಕೊಳ್ಳುವ ತುರ್ತು ದೇಶಕ್ಕೆ ಬಂದಾಗ ಅದು ಜನಸಂಘವನ್ನೋ ಅಥವಾ ಬಿಜೆಪಿಯನ್ನೋ ಆರಿಸಿರಲಿಲ್ಲ. ಆದು ತೃತೀಯಶಕ್ತಿಯಾಗಿ ಜನತಾಪರಿವಾರವನ್ನು ಆರಿಸಿಕೊಂಡಿತು. ಆದರೆ ಜನತಾ ಪರಿವಾರ ಒಂದಾಗಿ ದೇಶದ ನಿಮಾಣರ್ದಲ್ಲಿ ತೊಡಗಿಕೊಳ್ಳಲು ವಿಫಲವಾದ ಸಂದರ್ಭವನ್ನು ಬಿಜೆಪಿ ಬಳಸಿಕೊಂಡಿತು. ಕಾಂಗ್ರೆಸ್‌ಗೆ ಪರ್ಯಾಯವಾಗಿ ದೇಶದ ಜನರು ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿಯನ್ನು ಆರಿಸಿಕೊಂಡರು.

ಇದೊಂದು ರೀತಿಯಲ್ಲಿ ಆರೆಸ್ಸೆಸ್‌ನ ರಾಜಕೀಯ ತಂತ್ರವೂ ಹೌದು. ಒಂದೆಡೆ ರಾಮರಥಯಾತ್ರೆಯ ಹೆಸರಿನಲ್ಲಿ ಅಡ್ವಾಣಿಯವರು ದೇಶಾದ್ಯಂತ ವಿಜೃಂಭಿಸುತ್ತಿದ್ದರು. ರಥಯಾತ್ರೆ ಹೋದಡೆಯೆಲ್ಲ ರಕ್ತದ ಓಕುಳಿಯಾಗುತ್ತಿತ್ತು. ಇದೇ ಸಂದರ್ಭದಲ್ಲಿ ಈ ದೇಶದ ಜಾತ್ಯತೀತ ಪ್ರಜ್ಞೆ, ಪ್ರಜಾಸತ್ತಾತ್ಮಕ ವೌಲ್ಯಗಳು ಇನ್ನೂ ಜೀವಂತವಿದೆ ಎನ್ನುವ ಅರಿವು ಆರೆಸ್ಸೆಸ್‌ಗಿತ್ತು. ಒಂದೆಡೆ ಅಡ್ವಾಣಿಯನ್ನು ಮುಂದಿಟ್ಟು ಹಿಂದುತ್ವವನ್ನು ತಳಸ್ತರಕ್ಕೆ ವಿಸ್ತರಿಸುವ ಕೆಲಸ ಮಾಡುತ್ತಲೇ, ಅಟಲ್ ಬಿಹಾರಿ ವಾಜಪೇಯಿಯವರನ್ನು ಮುಂದಿಟ್ಟು, ಮೇಲ್‌ಸ್ತರದ ಜಾತ್ಯತೀತ ಮಂದಿಯನ್ನು ಸೆಳೆಯುವ ಪ್ರಯತ್ನ ಮಾಡಿತು. ಹಿಂಸಾಚಾರ, ಕೋಮುಗಲಭೆಗಳ ಮೂಲಕ ಬಿಜೆಪಿಯ ಸ್ಥಾನಗಳನ್ನು ಹೆಚ್ಚಿಸಿದವರು, ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಎಲ್. ಕೆ. ಅಡ್ವಾಣಿಯೇ ಆಗಿದ್ದರೂ, ಪ್ರಧಾನಿ ಅಭ್ಯರ್ಥಿಯಾಗಿ ಅಟಲ್ ಬಿಹಾರಿ ವಾಜಪೇಯಿಯನ್ನು ಆರೆಸ್ಸೆಸ್ ಬಿಂಬಿಸಿತು. ‘‘ನಮ್ಮ ಓಟು ಬಿಜೆಪಿಗಲ್ಲ, ವಾಜಪೇಯಿಗೆ’’ ಎಂಬ ಹೇಳಿಕೆ ಜಾತ್ಯತೀತ ರಿಂದಲೂ ಹೊರಬೀಳುತ್ತಿತ್ತು. ಬಹುಶಃ ಕಾಂಗ್ರೆಸ್‌ನ ಭ್ರಷ್ಟತೆಯಿಂದ ರೋಸಿ ಹೋದವರು,

ಬಿಜೆಪಿಯನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲದೆ ವಾಜಪೇಯಿಯ ಹೆಸರಲ್ಲಿ ಬಿಜೆಪಿಯನ್ನು ಒಪ್ಪಿಕೊಳ್ಳತೊಡಗಿದರು. ಆರೆಸ್ಸೆಸ್‌ನ ತಂತ್ರ ಫಲಿಸಿತು ಕೂಡ. ಬಹುಶಃ ವಾಜಪೇಯಿ ಇಲ್ಲದೇ ಇದ್ದಿದ್ದರೆ ಅಂದು ಇತರ ಜಾತ್ಯತೀತ ಪಕ್ಷಗಳು ಬಿಜೆಪಿಯ ಜೊತೆಗೆ ಕೈಜೋಡಿಸುತ್ತಿರಲಿಲ್ಲ. ವಾಜಪೇಯಿಯನ್ನು ಮುಂದಿಟ್ಟುಕೊಂಡು ಅಡ್ವಾಣಿ ಎನ್‌ಡಿಎ ಮೈತ್ರಿ ಕೂಟವನ್ನು ಕಟ್ಟಿದರು ಅಥವಾ ಅಧಿಕಾರದಲ್ಲಿ ಪಾಲುದಾರರಾಗಲು ಉಳಿದ ಸಮಯ ಸಾಧಕ ರಾಜಕಾರಣಿಗಳಿಗೆ ವಾಜಪೇಯಿ ಒಂದು ನೆನಪಾದರು. ಜಾರ್ಜ್‌ಫೆರ್ನಾಂಡಿಸ್‌ರಂತಹ ಸಮಾಜವಾದಿ ನಾಯಕನನ್ನೂ ಅಟಲ್ ಬಿಹಾರಿ ವಾಜಪೇಯಿಯ ಹೆಸರು ಆಹುತಿ ತೆಗೆದುಕೊಂಡಿತು. ಅಟಲ್ ಬಿಹಾರಿ ವಾಜಪೇಯಿ ಯವರನ್ನು ಜಾತ್ಯತೀತ ವ್ಯಕ್ತಿ ಎಂದು ಕರೆಯುವವರಿದ್ದಾರೆ. ಆದರೆ ಅವರೆಂದೂ ಆರೆಸ್ಸೆಸ್ ನಿಲುವು ಮತ್ತು ಹಿಂದುತ್ವ ರಾಜಕಾರಣದ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದವ ರಾಗಿರಲಿಲ್ಲ. ಆ ರಾಜಕಾರಣಕ್ಕೆ ಆರಿಸಿದ ಮಾರ್ಗವನ್ನಷ್ಟೇ ಅವರು ವಿರೋಧಿಸುತ್ತಿದ್ದರು. ತನ್ನದೇ ಆದ ಉದಾರ ಮಾರ್ಗವೊಂದನ್ನು ಅವರು ಹೊಂದಿದ್ದರು. ಈ ಮಾರ್ಗದ ಕುರಿತಂತೆ ಸಂಘಪರಿವಾರ ಮತ್ತು ವಾಜಪೇಯಿ ನಡುವೆ ಭಿನ್ನಾಭಿಪ್ರಾಯವಿತ್ತು.

ಕಾವ್ಯಮಯವಾದ ಅವರ ಮಾತುಗಾರಿಕೆಯೇ ವಾಜಪೇಯಿ ಹೆಗ್ಗಳಿಕೆ. ಅವರದು ಹೃದಯದ ಭಾಷೆ. ಆ ಮೂಲಕವೇ ಅವರು ಎಲ್ಲ ವರ್ಗದ ಜನಮನವನ್ನು ಪ್ರಧಾನಿಯಾಗಿ ಗೆದ್ದರು. ಪ್ರಧಾನಿಯಾಗಿ ಯಶಸ್ವಿಯಾದರು. ಅವರು ಅನಗತ್ಯ ವಾಚಾಳಿಯಲ್ಲ. ಸಂದರ್ಭಕ್ಕೆ ಪೂರಕವಾಗಿ ಸ್ಪಂದಿಸುವುದು ಅವರಿಗೆ ತಿಳಿದಿತ್ತು. ಪ್ರಧಾನಿಯಾಗಿ ರಾಜಧರ್ಮ ಪಾಲಿಸಲು ಗರಿಷ್ಠ ರೀತಿಯಲ್ಲಿ ಪ್ರಯತ್ನಿಸಿದರು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಪ್ರಯತ್ನವಾಗಿಯಷ್ಟೇ ಉಳಿಯಿತು. ಪಾಕ್ ಮತ್ತು ಬಾಂಗ್ಲಾ ದೇಶಗಳ ನಡುವೆ ಸಂಬಂಧ ಕುದುರಿಸಲು ಅವರು ಅತ್ಯಂತ ಪ್ರಾಮಾಣಿಕವಾಗಿ ಯತ್ನಿಸಿದರು. ಪಾಕಿಸ್ತಾನ ಮತ್ತು ಬಾಂಗ್ಲಾವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಅಧಿಕಾರ ಹಿಡಿದ ಪಕ್ಷ ಬಿಜೆಪಿ. ಹೀಗಿರುವಾಗ ಅಟಲ್ ಬಿಹಾರಿ ವಾಜಪೇಯಿಯವರ ಪ್ರಯತ್ನ ಯಶಸ್ವಿಯಾಗುವುದು ಕಷ್ಟವಿತ್ತು. ಇಷ್ಟಾದರೂ ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಅದರಲ್ಲಿ ಭಾಗಶಃ ಯಶಸ್ವಿಯಾದರು. ಆದರೆ ಅವರು ತಮ್ಮ ಬಗಲಲ್ಲಿ ಕಟ್ಟಿಕೊಂಡಿರುವ ಸಂಘಪರಿವಾರ ಅವರ ಎಲ್ಲ ಪ್ರಯತ್ನವನ್ನು ವಿಫಲಗೊಳಿಸುತ್ತಾ ಬಂತು. ಏಕಕಾಲದಲ್ಲಿ ಸಂಘಪರಿವಾರ ಕಾರ್ಯಕರ್ತನೂ, ದೇಶದ ಪ್ರಧಾನಿಯೂ ಆಗಿ ಅವರು ಅಧಿಕಾರ ನಿರ್ವಹಿಸಬೇಕಾಗಿತ್ತು. ಅದರ ಪರಿಣಾಮ ಆಡಳಿತದ ಮೇಲೆ ಬಿತ್ತು. ಇದೇ ಸಂದರ್ಭದಲ್ಲಿ ದೇಶದ ವಿದೇಶಾಂಗ ನೀತಿ ನೆಲೆ ಕಳೆದುಕೊಂಡದ್ದು ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ. ತನ್ನ ಅಲಿಪ್ತ ನೀತಿಯಿಂದ ಬದಿಗೆ ಸರಿದು ಅಮೆರಿಕದ ಜೊತೆಗೆ ಬಹಿರಂಗವಾಗಿ ಭಾರತ ಗುರುತಿಸಿಕೊಂಡಿತು. ತೃತೀಯ ದೇಶಗಳ ನಂಬಿಕೆಯನ್ನು ಭಾರತ ಕಳೆದುಕೊಂಡಿತು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಆಡಳಿತದಲ್ಲಿ ಭಾರತ ಅತ್ಯಧಿಕ ಉಗ್ರರದಾಳಿಗಳನ್ನು ಎದುರಿಸಬೇಕಾಯಿತು. ಇದು ವಾಜಪೇಯಿಗೆ ತೀವ್ರ ಮುಜುಗರ ತಂದಿತ್ತು. ಕಾರ್ಗಿಲ್‌ನ ವೈಫಲ್ಯ ಭಾರತದ ಮೇಲೆ ಅನಗತ್ಯವಾಗಿ ಒಂದು ಯುದ್ಧವನ್ನು ಹೇರಿತು. ಅಪಾರ ನಾಶ ನಷ್ಟವನ್ನು ದೇಶ ಅನುಭವಿಸಬೇಕಾಯಿತು. ಇಂಡಿಯನ್ ಏರ್‌ಲೈನ್ಸ್ ಅಪಹರಣ ಮತ್ತು ಉಗ್ರರ ಬಿಡುಗಡೆ ವಾಜಪೇಯಿ ಆಡಳಿತಕ್ಕೆ ಇನ್ನೊಂದು ಕಳಂಕವಾಗಿತ್ತು. ಸಂಸತ್ ಭವನದ ಮೇಲೆ ಉಗ್ರರುದಾಳಿ ನಡೆಸಿರುವುದು ವಾಜಪೇಯಿ ಕಾಲದಲ್ಲೇ. ಎಲ್ಲಕ್ಕಿಂತ ಮುಖ್ಯವಾಗಿ ಭೀಕರ ಗುಜರಾತ್ ಹತ್ಯಾಕಾಂಡ ನಡೆದಾಗ, ಅವರು ದ್ವಂದ್ವ ನಿಲುವನ್ನು ತಳೆದರು. ಒಂದೆಡೆ ರಾಜಧರ್ಮವನ್ನು ಪಾಲಿಸಿ ಎಂದು ಕರೆ ನೀಡುತ್ತಲೇ, ಮಗದೊಂದೆಡೆ ಗುಜರಾತ್ ಹತ್ಯಾಕಾಂಡವನ್ನು ಸಮರ್ಥಿಸುವ ಮಾತನ್ನಾಡಿದರು. ಗುಜರಾತ್ ಹತ್ಯಾಕಾಂಡದ ವೈಫಲ್ಯಕ್ಕಾಗಿ ಅಟಲ್ ರಾಜೀನಾಮೆ ನೀಡಲು ಮುಂದಾಗಿದ್ದರೆಂದೂ, ಅಡ್ವಾಣಿಯವರು ಅದನ್ನು ತಡೆದರೆಂದೂ ಸುದ್ದಿಯಿದೆ. ಗುಜರಾತ್ ಹತ್ಯಾಕಾಂಡದ ಕುರಿತಂತೆ ವಾಜಪೇಯಿ ತಳೆದ ನಿಲುವೇ, ದೇಶದ ಇಂದಿನ ಸ್ಥಿತಿಗೆ ಕಾರಣವಾಗಿದೆ ಎನ್ನುವುದನ್ನು ನಾವು ಮರೆಯಬಾರದು. ಅಂದು ಅಡ್ವಾಣಿ ಮಾಡಿದ ತಪ್ಪಿಗೆ ಅವರಷ್ಟೇ ಅಲ್ಲ, ದೇಶವೂ ತೆರಿಗೆ ಕಟ್ಟುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)