varthabharthi

ಸಂಪಾದಕೀಯ

ಮುಳುಗಿದ ಕೊಡಗು: ಮುಳುಗದಿರಲಿ ಮಾನವೀಯತೆ

ವಾರ್ತಾ ಭಾರತಿ : 18 Aug, 2018

ಕೊಡಗು ಎರಡು ವಿಷಯಗಳಿಗಾಗಿ ಸದಾ ಸುದ್ದಿಯಲ್ಲಿರುತ್ತದೆ. ಒಂದು ‘ಪ್ರತ್ಯೇಕ ರಾಜ್ಯ’ದ ಹೆಸರಿನಲ್ಲಿ. ಮಗದೊಂದು ‘ನೆರೆಯ ಕಾರಣಕ್ಕಾಗಿ’. ಪ್ರತ್ಯೇಕ ರಾಜ್ಯದ ಕೂಗಿಗೂ ಒಂದು ನಿರ್ದಿಷ್ಟ ಕಾರಣವಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ನಾಯಕರು ಕೊಡಗನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎನ್ನುವುದು ಪ್ರತ್ಯೇಕ ರಾಜ್ಯದ ಕೂಗಿಗೆ ಮುಖ್ಯ ಕಾರಣ. ಈ ಆರೋಪದಲ್ಲಿ ಸತ್ಯ ಇಲ್ಲದೇ ಇಲ್ಲ. ಆದರೆ ಕೊಡಗಿನ ಅಭಿವೃದ್ಧಿಗೆ ಕೊಡಗಿನಲ್ಲಿರುವ ಕೆಲವು ಹಿತಾಸಕ್ತಿಗಳೂ ತಡೆಗೋಡೆಯಾಗಿ ನಿಂತಿರುವುದು ಸುಳ್ಳಲ್ಲ. ಕೊಡಗಿನ ನೆರೆ ಮತ್ತು ಅಭಿವೃದ್ಧಿಗೆ ಪೂರಕ ಸಂಬಂಧವಿದೆ. ಕೊಡಗನ್ನು ಸದಾ ಕಾಡುತ್ತಿರುವ ನೆರೆ ಆ ಜಿಲ್ಲೆಯನ್ನು ಪದೇ ಪದೇ ಹಿಂದಕ್ಕೆ ತಳ್ಳುತ್ತಾ ಬಂದಿದೆ. ಬಹುಶಃ ಕರ್ನಾಟಕ ಅದರಲ್ಲೂ ಮಂಡ್ಯದ ಜನರ ಕುರಿತಂತೆ ಕೊಡವರಲ್ಲೊಂದು ಅಸಹನೆಯಿದೆ. ಕೊಡಗಿನಲ್ಲಿ ಮಳೆ ಬಂದರೆ, ಮಂಡ್ಯದವರಿಗೆ ನೀರಾಗುತ್ತದೆ. ಆದರೆ ಕೊಡಗಿಗೆ ನಾಶ ನಷ್ಟವಾಗುತ್ತದೆ. ಈ ನಾಶ ನಷ್ಟದ ಕಡೆಗೆ ಸರಕಾರ ಗಂಭೀರವಾಗಿ ಗಮನ ಹರಿಸುತ್ತಿಲ್ಲ ಎನ್ನುವುದು ಅವರ ದೂರು. ಇದೂ ಸತ್ಯವೇ ಆಗಿದೆ.

ಪ್ರತಿ ವರ್ಷ ಮಳೆಗೆ ಕೊಡಗು ನಲುಗುತ್ತದೆ. ಆದರೂ ಕೊಡಗಿನ ಪರಿಸ್ಥಿತಿಗೆ ಸಣ್ಣ ದೊಂದು ಪರಿಹಾರವನ್ನು ಕಂಡುಕೊಳ್ಳುವುದಕ್ಕೂ ಅಲ್ಲಿನ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ನೆರೆ ತೀವ್ರವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಗಂಜಿ ಕೇಂದ್ರವನ್ನು ಘೋಷಿಸುತ್ತದೆ. ಇದಾದ ಬಳಿಕ ನಾಶ ನಷ್ಟ ಅನುಭವಿಸಿದ ಜನರು ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗುತ್ತದೆ. ಸರಕಾರದಿಂದ ಬರುವ ಪರಿಹಾರದ ಹಣ ಮೊದಲೇ ಸಣ್ಣದು ಮತ್ತು ಅದು ತೀರಾ ಗ್ರಾಮೀಣ ಪ್ರದೇಶದಲ್ಲಿ, ಗುಡ್ಡಗಾಡಿನಲ್ಲಿರುವ ಜನರಿಗೆ ತಲುಪುವುದು ಕಡಿಮೆ. ತಲುಪಿದರೂ, ಆನೆಯ ಬಾಲದ ತುದಿಯೂ ಅಲ್ಲಿರುವುದಿಲ್ಲ. ಸುಮಾರು 20 ವರ್ಷಗಳ ಬಳಿಕ ಮತ್ತೆ ಭೀಕರ ಮಳೆಗೆ ಕೊಡಗು ತತ್ತರಿಸಿದೆ. ಅಕ್ಷರಶಃ ದ್ವೀಪವಾಗಿದೆ. ಊರುಗಳು ಹೊರಗಿನ ಸಂಪರ್ಕವಿಲ್ಲದೆ, ಅತಂತ್ರವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಗುಡ್ಡಗಳು ಏಕಾಏಕಿ ಕುಸಿಯ ತೊಡಗಿವೆ. ಸಾಧಾರಣವಾಗಿ ಕೊಡಗು ಎನ್ನುವುದೇ ಬೆಟ್ಟ ಕಣಿವೆಗಳ ಪ್ರದೇಶ. ಮನೆಗಳಿರುವುದೂ ಗುಡ್ಡಗಳಲ್ಲೇ. ಗುಡ್ಡಗಳು ಕುಸಿದರೆ ಮನೆಗಳಿಗೆ ಹಾನಿಯಾಗುವುದು ಸಹಜ. ಕೊಡಗು ಎನ್ನುವುದು ಮಡಿಕೇರಿ ನಗರ ಅಷ್ಟೇ ಅಲ್ಲ. ತೀರಾ ಒಳ ಪ್ರದೇಶಗಳಲ್ಲೂ ಜನ ವಾಸವಾಗಿದ್ದಾರೆ.

ಸಂತ್ರಸ್ತರು ಎಂದಾಗ ಮೊದಲು ನಾವು ಗುರುತಿಸುವುದು ನಗರ ಪ್ರದೇಶದ ಹತ್ತಿರದಲ್ಲಿರುವ ನಿವಾಸಿಗಳನ್ನು. ಆದರೆ ಕೊಡಗಿನಲ್ಲಿ ವಾಹನಗಳೇ ತಲುಪದ ಪ್ರದೇಶಗಳಿವೆ. ಅವರೆಲ್ಲ ಆಪತ್ತಿನಲ್ಲಿ ಸಿಲುಕಿಕೊಂಡರೆ, ಅವರನ್ನು ಸಂಪರ್ಕಿಸುವುದು ತೀರಾ ಕಷ್ಟ ಸಾಧ್ಯ. ಈಗಾಗಲೇ ಸರಕಾರ ಸೇನೆಯನ್ನು ಬಳಸಲು ಮುಂದಾಗಿದೆ. ಆದರೆ ಊರನ್ನು ಸಂಪರ್ಕಿಸುವ ದಾರಿ ತೀರಾ ಕಷ್ಟಕರವಾಗಿರುವುದರಿಂದ, ಸೇನೆಯೂ ಅಸಹಾಯಕವಾಗಿದೆ. ಅತ್ಯಂತ ಖೇದಕರ ಸಂಗತಿಯೆಂದರೆ, ಈ ಮಳೆಯಲ್ಲಿ ಕೊಡಗಿನ ಅಳಿದುಳಿದ ಭತ್ತದ ಬೆಳೆಯೂ ಕೊಚ್ಚಿಕೊಂಡು ಹೋಗಿದೆ. ಕೊಡಗು ಒಂದು ಕಾಲದಲ್ಲಿ ಕಾಫಿ, ಏಲಕ್ಕಿ ಮಾತ್ರವಲ್ಲ, ಭತ್ತದ ಬೆಳೆಯಲ್ಲೂ ಮುಂಚೂಣಿಯಲ್ಲಿತ್ತು. ಭತ್ತದ ಬೆಳೆಯ ಹಿನ್ನೆಲೆಯಲ್ಲೇ ‘ಹುತ್ತರಿ ಹಬ್ಬ’ ಹುಟ್ಟಿಕೊಂಡಿದೆ. ಭತ್ತದ ಬೆಳೆಯ ನಾಶ, ನಷ್ಟದ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ಈ ಕೃಷಿಯಿಂದ ವರ್ಷದಿಂದ ವರ್ಷಕ್ಕೆ ಹಿಂದೆ ಸರಿಯುತ್ತಿದ್ದಾರೆ. ಕೆಲವರು ಗದ್ದೆಯನ್ನು ಶುಂಠಿಬೆಳೆಗೆ ಬಳಸಿಕೊಳ್ಳುತ್ತಿದ್ದಾರೆ ಅಥವಾ ಶುಂಠಿ ಬೆಳೆ ಕೃಷಿಗೆ ಗುತ್ತಿಗೆಯಾಧಾರದಲ್ಲಿ ನೀಡುತ್ತಾರೆ. ಹಲವರು ಗದ್ದೆಗಳನ್ನು ವಾಣಿಜ್ಯ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಭತ್ತ ಬೆಳೆಗಾರರ ಸಂಖ್ಯೆ ತೀರಾ ಇಳಿಮುಖವಾಗಿದೆ.

ಪ್ರತಿ ಮಳೆಗಾಲದಲ್ಲಿ ಈ ಭತ್ತದ ಬೆಳೆಗಾರರು ಕೊಳೆರೋಗವನ್ನು ಎದುರಿಸಬೇಕಾಗುತ್ತದೆ. ಆದರೆ ಈ ಬಾರಿ ಬೆಳೆಯೆಲ್ಲಾ ನೆರೆಗೆ ಸಂದಾಯವಾಗಿದೆ. ಕೊಡಗಿನ ಬಾಳೆಲೆ ಹೋಬಳಿ ಭತ್ತದ ಕಣಜವೆಂದೇ ಹೆಸರುವಾಸಿ. ಇದೇ ಬಾಳೆಲೆಯ ಆರು ಗ್ರಾಮಗಳು ಜಲಾವೃತಗೊಂಡಿದ್ದು, ಸುಮಾರು 16,000 ಎಕರೆ ನಾಟಿ ಮಾಡಲಾದ ಭತ್ತದ ಗದ್ದೆಗಳು ಮುಳುಗಡೆಯಾಗಿರುವುದಾಗಿ ರೈತರು ಅಲವತ್ತುಕೊಂಡಿದ್ದಾರೆ. ಕಳೆದ ಬಾರಿ ಇದೇ ಬಾಳೆಲೆಯ ರೈತರು ಬರಗಾಲದಿಂದ ನಷ್ಟ ಅನುಭವಿಸಿದ್ದರು. ಈ ಬಾರಿ ನೆರೆಯಿಂದ ಬರೀ ಕೃಷಿ ಕಾರ್ಯಗಳ ಮೇಲೆ ಮಾತ್ರವಲ್ಲ, ಕೊಡಗಿನ ವಾಣಿಜ್ಯೋದ್ಯಮಗಳ ಮೇಲೂ ದುಷ್ಪರಿಣಾಮ ಬೀರಿವೆ. ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲು ಕೂಡ ಪ್ರವಾಹಕ್ಕೆ ಸಿಲುಕಿಕೊಂಡಿದೆ. ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಹೀಗೆ ನೇರ ಮತ್ತು ಪರೋಕ್ಷ ಹಾನಿಯಿಂದ ಕೊಡಗಿನ ಜನರು ತತ್ತರಿಸುತ್ತಿದ್ದಾರೆ.

 ಇದೇ ಸಂದರ್ಭದಲ್ಲಿ ಕೊಡಗಿನ ತೀರಾ ಅಂಚಿನಲ್ಲಿರುವ ಬುಡಕಟ್ಟು ಜನರ ಬವಣೆಯೇ ಇನ್ನೊಂದು ರೀತಿಯದ್ದು. ಕೂಲಿ ಕಾರ್ಮಿಕರು ಇವರು. ನೆರೆಯಿಂದಾಗಿ ಇವರಿಗೆ ಕೆಲಸವಿಲ್ಲದೆ ಬದುಕುವ ದಾರಿ ಮುಚ್ಚಿ ಹೋಗಿದೆ. ಇವರ ಗುಡಿಸಲುಗಳು ಹಾರಿಹೋಗಿವೆ. ಅಷ್ಟೇ ಅಲ್ಲ, ಇವರನ್ನು ಸರಕಾರಿ ಅಧಿಕಾರಿಗಳು, ಸಿಬ್ಬಂದಿ ಸಂಪರ್ಕಿಸುವುದಂತೂ ದೂರದ ಮಾತು. ಇವರ ಬದುಕು ನೆರೆಗೆ ಮುಂಚೆಯೇ ಅತಂತ್ರ. ಈಗಂತೂ ಕೇಳುವವರೇ ಇಲ್ಲ ಎಂಬಂತಹ ಸ್ಥಿತಿ. ಜೊತೆಗೆ ನೂರಾರು ವಲಸೆ ಕಾರ್ಮಿಕರ ಸ್ಥಿತಿಯೂ ಗಂಭೀರವಾಗಿದೆ. ಸರಕಾರದ ಪರಿಹಾರ ಕಾರ್ಯದಲ್ಲಿ ಇವರೆಲ್ಲ ಒಳಗೊಳ್ಳಬೇಕಾಗಿದೆ. ಆದರೆ ಅದು ಎಷ್ಟರಮಟ್ಟಿಗೆ ಸಾಧ್ಯ? ಮೊದಲೇ ವ್ಯವಸ್ಥೆಯಿಂದ ತಿರಸ್ಕೃತರಾದ ಇವರಿಗೆ ಸರಕಾರ ಯಾವ ರೀತಿಯಲ್ಲಿ ಪರಿಹಾರವನ್ನು ನೀಡಬಹುದು?

 ಈ ಬಾರಿ ಅತಿ ಹೆಚ್ಚು ಹಾನಿಯಾಗುವುದಕ್ಕೆ ಕಾರಣ ಸಾಲು ಸಾಲು ಗುಡ್ಡ ಕುಸಿತ. ಮದೆನಾಡಿನಿಂದ ಸಂಪಾಜೆಯವರೆಗೆ ಗುಡ್ಡಗಳು ಸಾಲು ಸಾಲಾಗಿ ಕುಸಿಯುತ್ತಿವೆ. ಹಲವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಮಡಿಕೇರಿ ಸೇರಿದಂತೆ ಬಹುತೇಕ ರಸ್ತೆಗಳು ಸಂಪರ್ಕ ಕಡಿದುಕೊಳ್ಳಲು ಈ ಗುಡ್ಡ ಕುಸಿತ ಮುಖ್ಯ ಕಾರಣ. ಇವು ಸಂಭವಿಸಿರುವುದು ಕೇವಲ ಪ್ರಕೃತಿ ವಿಕೋಪದಿಂದ ಎಂದು ಹೇಳುವಂತಿಲ್ಲ. ಕೊಡಗಿನ ಕಾಡು ಗುಡ್ಡಗಳ ಮೇಲೆ ಮನುಷ್ಯ ಹಸ್ತಕ್ಷೇಪ ಹಾನಿಯನ್ನು ಹೆಚ್ಚಿಸಿದೆ. ರಸ್ತೆ ನಿರ್ಮಾಣ, ಮನೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ ಎಂಬೆಲ್ಲ ಹೆಸರಿನಲ್ಲಿ ಯದ್ವಾತದ್ವಾ ಗುಡ್ಡಗಳನ್ನು ಜೆಸಿಬಿ ನೆಲಸಮಗೊಳಿಸಿದೆ. ಗುಡ್ಡಗಳನ್ನು ಹಿಡಿದಿಡುತ್ತಿದ್ದ ಮರಗಳನ್ನೂ ವ್ಯಾಪಕವಾಗಿ ಕಡಿಯಲಾಗಿದೆ. ಗುಡ್ಡ ಕುಸಿತಕ್ಕೆ ಇದು ಮುಖ್ಯ ಕಾರಣವಾಗಿದೆ.

ಗುಡ್ಡ ಪ್ರದೇಶಗಳಲ್ಲಿ ನಿರ್ಮಾಣವಾಗುವ ಮನೆಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇವೆಲ್ಲದರ ದುಷ್ಪರಿಣಾಮ ಈ ಮಹಾಮಳೆಯಲ್ಲಿ ಕಾಣಿಸಿಕೊಂಡಿದೆ. ಸರಕಾರ ಬರೇ ಬಾಯಿ ಮಾತಿನಲ್ಲಿ ಕೊಡಗಿಗೆ ಸಮಾಧಾನ ಹೇಳಿದರೆ ಪ್ರಯೋಜನವಿಲ್ಲ. ತಕ್ಷಣ ವಿಧಾನಸೌಧವನ್ನು ಕೊಡಗಿಗೆ ಸ್ಥಳಾಂತರಿಸಬೇಕು. ಮುಖ್ಯಮಂತ್ರಿ ಕೊಡಗಿಗೆ ಆಗಮಿಸಿ, ವಾಸ್ತವ್ಯ ಹೂಡಬೇಕು. ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು. ಕೇಂದ್ರದ ನೆರವೂ ಈ ಸಂದರ್ಭದಲ್ಲಿ ಅತ್ಯಗತ್ಯ. ಹಾಗೆಯೇ ಕೊಡಗಿನ ನಾಗರಿಕರಿಗೆ ಇದೊಂದು ಅಗ್ನಿ ಪರೀಕ್ಷೆ. ಪರಸ್ಪರ ಸಹಕಾರ ಸಂಬಂಧಗಳ ಗಟ್ಟಿತನವನ್ನು ಈ ನೆರೆ ಪರೀಕ್ಷಿಸುತ್ತಿದೆ. ಯಾರು ಯಾರನ್ನೂ ಕಾಯದೆ ಪರಸ್ಪರರಿಗೆ ನೆರವಾಗಬೇಕು. ಕರ್ನಾಟಕದ ಜನತೆಯೂ ಕೊಡಗಿನ ಜನತೆಗೆ ನೆರವಿನ ಹಸ್ತ ಚಾಚಬೇಕು. ಕೊಡಗು ಎಂದೆಂದೂ ಕರ್ನಾಟಕಕ್ಕೆ ಸೇರಿದ್ದೂ ಎನ್ನುವುದನ್ನು ಆ ಮೂಲಕ ಕೊಡವರಿಗೆ ಮನವರಿಕೆ ಮಾಡಿಸಬೇಕು. ಮುಳುಗಿದ ಕೊಡಗನ್ನು ನಮ್ಮೆಳಗಿನ ಮನುಷ್ಯತ್ವ ಮಾತ್ರ ಮೇಲೆತ್ತಬಹುದು. ಇದು ನಮ್ಮ ಮನುಷ್ಯತ್ವಕ್ಕೆ ಪ್ರಕೃತಿ ಒಡ್ಡಿದ ಸವಾಲು ಎಂದು ಹೆಜ್ಜೆಗಳನ್ನು ಮುಂದಿಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)