varthabharthi


ಬುಡಬುಡಿಕೆ

ನರೇಂದ್ರ ಮೋದಿಯವರಿಗೆ ಸಾಹಿತ್ಯದಲ್ಲಿ ನೊಬೆಲ್!

ವಾರ್ತಾ ಭಾರತಿ : 19 Aug, 2018
*ಚೇಳಯ್ಯ chelayya@gmail.com

ಈ  ಸಾಲಿನ ನೊಬೆಲ್ ಪ್ರಶಸ್ತಿ ನೀಡುವುದು ಯಾರಿಗೆ? ನೊಬೆಲ್ ಪ್ರಶಸ್ತಿ ವಿತರಣೆ ಮಾಡುವ ಸಮಿತಿಗೆ ಅತಿದೊಡ್ಡ ಸಮಸ್ಯೆ ಕಾಡಿತು. ಸಾಧಾರಣವಾಗಿ ಈ ಹಿಂದೆಲ್ಲ ವಿಶ್ವ ಮಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ ತಜ್ಞರನ್ನು ಗುರುತಿಸುವುದು ತುಂಬಾ ಸುಲಭವಿತ್ತು. ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇನ್ನೊಂದು ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ವಿಶ್ವ ಮಟ್ಟದಲ್ಲಿ ಓರ್ವ ವ್ಯಕ್ತಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ. ಎಲ್ಲ ಕ್ಷೇತ್ರಗಳಲ್ಲೂ ಆತನೇ ಸಾಧನೆ ಮಾಡಿರುವುದರಿಂದ ಒಬ್ಬನಿಗೇ ಹಲವು ನೊಬೆಲ್ ಪ್ರಶಸ್ತಿ ನೀಡಬೇಕಾದ ಅನಿವಾರ್ಯತೆ ಆಯ್ಕೆ ಸಮಿತಿಗೆ ಎದುರಾಗಿದೆ. ಆ ಧೀಮಂತ ಸಾಧಕ ಇನ್ನಾರೂ ಅಲ್ಲ, ಭಾರತದ ಪ್ರಧಾನಿ ಹಾಗೂ ವಿಶ್ವದ ಶ್ರೇಷ್ಠ ಕಲಾವಿದ, ವಿಜ್ಞಾನಿ, ಗಣಿತಜ್ಞ, ಅರ್ಥಶಾಸ್ತ್ರಜ್ಞ, ಸಾಹಿತಿ, ಶಾಂತಿದೂತ ನರೇಂದ್ರ ಮೋದಿ. ಈ ಬಾರಿ ನೊಬೆಲ್‌ನ ಎಲ್ಲ ಕ್ಷೇತ್ರಗಳಿಗೂ ನರೇಂದ್ರ ಮೋದಿಯವರನ್ನೇ ಆಯ್ಕೆ ಮಾಡಲಾಗಿದೆ ಎಂದು ಅಂತಿಮವಾಗಿ ನೊಬೆಲ್ ಆಯ್ಕೆ ಸಮಿತಿ ಘೋಷಿಸಿಯೇ ಬಿಟ್ಟಿತು.
ನರೇಂದ್ರ ಮೋದಿಗೆ ವಿಜ್ಞಾನ ನೊಬೆಲ್:
 ಮೋರಿಯಿಂದ ಗ್ಯಾಸ್ ಉತ್ಪಾದನೆ ಮಾಡುವ ತನ್ನ ಸುದೀರ್ಘ ಸಂಶೋಧನಾ ಪ್ರಬಂಧಕ್ಕಾಗಿ ನರೇಂದ್ರ ಮೋದಿಯವರು ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದೇ ರೀತಿಯಲ್ಲಿ ತಮ್ಮ ಭಾಷಣಗಳಿಂದ ಅವರು ಉತ್ಪಾದಿಸಿದ ಅಪಾರ ವಿದ್ಯುತ್ ಶಕ್ತಿಯಿಂದ ಭಾರತ ಮಾತ್ರವಲ್ಲದೆ, ವಿಶ್ವವೇ ಬೆಳಗುತ್ತಿರುವುದು ವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿ ನರೇಂದ್ರ ಮೋದಿಯವರಿಗೆ ದೊರಕಲು ಮುಖ್ಯ ಕಾರಣವಾಗಿದೆ. ಮೋದಿಯ ಭಾಷಣದಲ್ಲಿರುವ ಪಾಸಿಟಿವ್ ಎನರ್ಜಿಯನ್ನು ಬಳಸಿಕೊಂಡು ಇಂದು ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿ ನಡೆಯುತ್ತಿದೆ. ಇಂದು ಭಾರತದ ಸರ್ವ ಹಳ್ಳಿಗಳಲ್ಲಿರುವ ಬಲ್ಪ್ ಗಳು ಬೆಳಗುತ್ತಿರುವುದು ಈ ಎನರ್ಜಿಯನ್ನು ಬಳಸಿಕೊಂಡು. ಆದುದರಿಂದ, ಈ ಬಾರಿಯ ವಿಜ್ಞಾನ ಕ್ಷೇತ್ರಕ್ಕೆ ನರೇಂದ್ರ ಮೋದಿಯವರಲ್ಲದೆ ಇನ್ನಾರೂ ನೊಬೆಲ್ ಪ್ರಶಸ್ತಿಗೆ ಅರ್ಹರಲ್ಲ ಎಂದು ಸಮಿತಿ ತೀರ್ಮಾನಿಸಿದೆ.
ಗಣಿತ ಕ್ಷೇತ್ರದಲ್ಲಿ ಮೋದಿಯವರಿಗೆ ನೊಬೆಲ್:
ತಮ್ಮ ಆಡಳಿತಾವಧಿಯಲ್ಲಿ ನರೇಂದ್ರ ಮೋದಿಯವರು ಗಣಿತ ಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಗಣಿತ ಕ್ಷೇತ್ರದ ನೊಬೆಲ್‌ನ್ನು ನೀಡಲಾಗಿದೆ. ಭಾರತ ಸೊನ್ನೆಯನ್ನು ಕಂಡು ಹಿಡಿದ ದೇಶವೆನ್ನುವುದನ್ನು ತಮ್ಮ ‘ಸೊನ್ನೆ’ ಸಾಧನೆಯ ಮೂಲಕ ಅವರು ವಿಶ್ವಕ್ಕೆ ಮತ್ತೊಮ್ಮೆ ಭಾರತವನ್ನು ಗಣಿತ ಕ್ಷೇತ್ರದಲ್ಲಿ ಪರಿಚಯಿಸಿದ್ದಾರೆ. ಬಾಯಿ ತುಂಬಾ ಅಂಕಿಗಳನ್ನು ಇಟ್ಟುಕೊಂಡು ವಿಶ್ವಾದ್ಯಂತ ಓಡಾಡಿ ತಮ್ಮ ಆಡಳಿತದ ಸಾಧನೆಯನ್ನು ಗಣಿತಶಾಸ್ತ್ರವಾಗಿ ಬದಲಾಯಿಸಿದ್ದು ಮೋದಿಯವರ ಅತಿ ದೊಡ್ಡ ಹೆಗ್ಗಳಿಕೆ. ಗಣಿತಗಳ ಮೂಲಕ ರಾಜಕೀಯ ಎಂಬ ಅವರು ಮಂಡಿಸಿದ ಮಹತ್ವದ ಪ್ರಬಂಧವನ್ನು ಪರಿಗಣಿಸಿ, ಗಣಿತ ಶಾಸ್ತ್ರದ ನೊಬೆಲ್‌ನ್ನು ನರೇಂದ್ರ ಮೋದಿಯವರಿಗೆ ನೀಡಲಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ. ಗಣಿಗಾರಿಕೆಗೂ ಗಣಿತಗಳಿಗೂ ಇರುವ ಇನ್ನೊಂದು ಸಂಶೋಧನಾ ಪ್ರಬಂಧವನ್ನು ಈ ಸಂದರ್ಭದಲ್ಲಿ ಪರಿಗಣಿಸಲಾಗಿದೆ. ಗಣಿತ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರಕಿರುವುದನ್ನು ಅಭಿನಂದಿಸಿರುವ ಗಣಿ-ತಜ್ಞರಾಗಿರುವ ರೆಡ್ಡಿ ಸಹೋದರರು ‘‘ನರೇಂದ್ರ ಮೋದಿಯವರು ಗಣಿ-ತ ಶಾಸ್ತ್ರದ ಪಿತಾಮಹ’’ ಎಂದು ಕರೆದಿದ್ದಾರೆ. ಭಾರತದ ಗಣಿತ ಪುಸ್ತಕ ಮುಖಪುಟದಲ್ಲಿ ಕಡ್ಡಾಯವಾಗಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಪ್ರಕಟಿಸಲು ವಿಶ್ವಸಂಸ್ಥೆ ಸೂಚನೆ ನೀಡಿದೆ.

ಅರ್ಥಶಾಸ್ತ್ರದಲ್ಲಿ ನೊಬೆಲ್:

ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಕೂಡ ನರೇಂದ್ರ ಮೋದಿಯವರ ಮಡಿಲಿಗೆ ಬಿದ್ದಿದೆ. ಮುಖ್ಯವಾಗಿ ಭಾರತೀಯ ಆರ್ಥಿಕ ಕ್ಷೇತ್ರದಲ್ಲಿ ಅವರು ನಡೆಸಿದ ದಾಂಧಲೆಗಳನ್ನು ಗಮನಿಸಿ ಅವರನ್ನು ಈ ಬಾರಿ ನೊಬೆಲ್‌ಗೆ ಆಯ್ಕೆ ಮಾಡಲಾಗಿದೆ. ಭಾರತದ ಅರ್ಥವ್ಯವಸ್ಥೆಯನ್ನು ಸರ್ವನಾಶ ಮಾಡಿ, ಅಮೆರಿಕ, ಚೀನಾ ಸೇರಿದಂತೆ ವಿದೇಶಿ ಅರ್ಥವ್ಯವಸ್ಥೆಯನ್ನು ಕಾಪಾಡಿದ ಅರ್ಧಶಾಸ್ತ್ರದ ದಾರ್ಶನಿಕ ಎಂದು ಮೋದಿಯವರನ್ನು ನೊಬೆಲ್ ಸಮಿತಿ ಗುರುತಿಸಿದೆ. ‘‘ಮುಳುಗುತ್ತಿರುವ ಬ್ಯಾಂಕ್‌ಗಳನ್ನು ಉಳಿಸುವ ವಿಧಾನ’’ ಎಂಬ ಅವರ ಮಹತ್ವದ ಪ್ರಬಂಧ ಇದೀಗ ವಿವಿಧ ದೇಶಗಳ ಪ್ರಧಾನಿಗಳ ಧರ್ಮಗ್ರಂಥಗಳಾಗಿ ಘೋಷಣೆ ಯಾಗಿವೆ. ಶ್ರೀಮಂತರು ಬ್ಯಾಂಕ್‌ಗಳನ್ನು ದೋಚಿದರೂ, ಹೇಗೆ ಜನಸಾಮಾನ್ಯರಿಂದ ಆ ಬ್ಯಾಂಕ್‌ನ್ನು ಉಳಿಸಬಹುದು ಎನ್ನುವ ಆರ್ಥಿಕ ತಂತ್ರಗಾರಿಕೆಯನ್ನು ಭಾರತದಲ್ಲಿ ಅನುಷ್ಠಾನಗೊಳಿಸಿ ಯಶಸ್ವಿಯಾದ ಕಾರಣಕ್ಕಾಗಿ ಅವರಿಗೆ ಸಮಿತಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದೆ. ವಿಶ್ವದ ವಿವಿಧ ವಿಶ್ವ ವಿದ್ಯಾನಿಲಯಗಳಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದ ಜೊತೆಗೆ ಮೋದಿ ಅರ್ಥಶಾಸ್ತ್ರವನ್ನು ಪಠ್ಯವಾಗಿಡುವ ಕುರಿತಂತೆ ಈಗಾಗಲೇ ವಿಶ್ವಸಂಸ್ಥೆ ಸೂಚನೆ ನೀಡಿದೆ.
ಸಾಹಿತ್ಯದಲ್ಲಿ ನೊಬೆಲ್:
ನರೇಂದ್ರ ಮೋದಿಯವರು ದೇಶದಲ್ಲಿ ಮಾಡಿರುವ ‘ಮಂಕಿ ಬಾತ್’ ಭಾಷಣಗಳನ್ನು ಜಗತ್ತಿನ ಸರ್ವಶ್ರೇಷ್ಠ ಫ್ಯಾಂಟಸಿ ಸಾಹಿತ್ಯ ಎಂದು ಪರಿಗಣಿಸಿರುವ ನೊಬೆಲ್ ಸಮಿತಿ, ಈ ಬಾರಿಯ ಸಾಹಿತ್ಯ ಪ್ರಶಸ್ತಿಯನ್ನು ಅವರಿಗೆ ನೀಡಿದೆ. ‘ಮಂಕಿ ಬಾತ್’ ಸಾಹಿತ್ಯದ ಅತಿ ಮುಖ್ಯ ಹೆಗ್ಗಳಿಕೆ. ಅದು ದೇಶದ ಬಡವರು, ಮಧ್ಯಮವರ್ಗವನ್ನು ಉದ್ದೇಶಿಸಿ ಸೃಷ್ಟಿಯಾದ ಕೃತಿಯಾಗಿದೆ. ಈ ಮಂಕಿ ಬಾತ್ ಸಾಹಿತ್ಯಕ್ಕೆ ದೇಶದ ಜನರ ಹಸಿವು, ಅನಾರೋಗ್ಯ, ಸಂಕಷ್ಟಗಳನ್ನು ಮರೆಸುವ ಶಕ್ತಿಯಿರುವುದರಿಂದ, ಈ ಸಾಹಿತ್ಯ ಉಳಿದೆಲ್ಲ ಸಾಹಿತ್ಯಕ್ಕಿಂತ ಭಿನ್ನವಾಗಿದೆ ಎಂದು ಸಮಿತಿ ಭಾವಿಸಿದೆ. ಮಂಕಿ ಬಾತ್ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದೇ, ದೇಶಾದ್ಯಂತ ಕೇಸರಿ ಬಾತ್, ಉಪ್ಮಾಬಾತ್, ಬೇಳೆಬಾತ್ ಸಾಹಿತಿಗಳೆಲ್ಲ ರೋಮಾಂಚಿತರಾಗಿ, ಅದರ ವಿವಿಧ ನೆಲೆಗಳ ಕುರಿತಂತೆ ಸಂಶೋಧನೆಗಳಿಗೆ ತೊಡಗಿದ್ದಾರೆ ಎಂದು ವಿವಿಧ ವಿಶ್ವವಿದ್ಯಾನಿಲಯಗಳು ಘೋಷಣೆ ಮಾಡಿವೆ. ‘ಮಂಕಿ ಬಾತ್‌ನಲ್ಲಿ ಹಸಿವಿನ ಶೋಧನೆ- ಒಂದು ಅಧ್ಯಯನ’ ‘ಮಂಕಿಬಾತ್-ಸಾಹಿತ್ಯದಲ್ಲಿ ರಾಜಕೀಯ ನೆಲೆಗಳು’ ‘ಮಂಕಿ ಬಾತ್- ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ’ ಹೀಗೆ ಹತ್ತು ಹಲವು ನೆಲೆಗಳಲ್ಲಿ ಮಂಕಿ ಬಾತ್‌ನ್ನು ಶೋಧಿಸಲು ದೇಶದ ಸಾಹಿತಿಗಳು ಸ್ಪರ್ಧೆಗಿಳಿದಿದ್ದಾರೆ ಎಂದು ವಿವಿಧ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹೇಳಿಕೆ ನೀಡಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ಮಾರ್ಕ್ವೆಜ್ ಬಳಿಕ ವಿಶ್ವ ಕಂಡ ಅತಿ ದೊಡ್ಡ ಸಾಹಿತಿ ನರೇಂದ್ರ ಮೋದಿ ಎಂದು ದೊಡ್ಡೆ ರಂಗೇಗೌಡರು ಬಣ್ಣಿಸಿದ್ದಾರೆ. ಅವರ ಕುರಿತಂತೆ ‘ಮಹಾಕಾವ್ಯ’ವೊಂದನ್ನು ಬರೆಯಲು ಸಿದ್ಧತೆ ನೆಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ನರೇಂದ್ರ ಮೋದಿಯವರಿಗೆ ಶಾಂತಿ ನೊಬೆಲ್:
ಅಶಾಂತಿಯಿಂದಲೇ ಹೇಗೆ ಶಾಂತಿಯನ್ನು ಉತ್ಪಾದಿಸಬಹುದು ಎನ್ನುವ ನರೇಂದ್ರ ಮೋದಿಯವರ ಗುಜರಾತ್ ಪ್ರಯೋಗವನ್ನು ಪರಿಗಣಿಸಿ ಅವರಿಗೆ ತಡವಾಗಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಗುಜರಾತಿನ ಸ್ಮಶಾನಗಳಲ್ಲಿ ನೆಲೆಸಿರುವ ಅಗಾಧ ಶಾಂತಿಯು ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ನೆಲೆಸುವುದಕ್ಕೆ ಅವರು ನಾಂದಿ ಹಾಡಿದ್ದಾರೆ ಎನ್ನುವುದನ್ನು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ. ಅವರ ಪ್ರಯೋಗದ ತಂತ್ರಗಳನ್ನು ಅಳವಡಿಸಲು ವಿಶ್ವದ ಹತ್ತು ಹಲವು ನಾಯಕರು ತುದಿಗಾಲಿನಲ್ಲಿ ನಿಂತಿರುವುದರಿಂದ ಈ ಬಾರಿಯ ಶಾಂತಿ ಪ್ರಶಸ್ತಿಯೂ ಅನಿವಾರ್ಯವಾಗಿ ನರೇಂದ್ರ ಮೋದಿಯವರಿಗೆ ಸಂದಾಯವಾಗಿದೆ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)