ಮೂರು ವರ್ಷದ ಬಾಲಕಿಯ ಮೃತದೇಹ ಪತ್ತೆ: ಅತ್ಯಾಚಾರದ ಶಂಕೆ
ಮೈಮೇಲೆ ಕಚ್ಚಿದ ಗಾಯಗಳು
ಮಧ್ಯಪ್ರದೇಶ, ಆ.19: ಮೂರು ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೃತದೇಹ ಚರಂಡಿ ಸಮೀಪ ಪತ್ತೆಯಾಗಿದ್ದು, ಅತ್ಯಾಚಾರ ನಡೆದಿದೆ ಎಂದು ಶಂಕಿಸಲಾಗಿದೆ. ಬಾಲಕಿಯ ಮೃತದೇಹದ ಪೂರ್ತಿ ಕಚ್ಚಿದ ಗುರುತುಗಳಿವೆ. ಈ ಘಟನೆ ಮಧ್ಯ ಪ್ರದೇಶದ ಬುರ್ಹಾನ್ ಪುರದಲ್ಲಿ ಸಂಭವಿಸಿದೆ.
ಬಾಲಕಿಯ ಒಂದು ಕೈಯನ್ನು ಕತ್ತರಿಸಲಾಗಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಎನ್ನುವ ಬಗ್ಗೆ ತಿಳಿದುಬರಲಿದೆ. ಬುಧವಾರ ಬೆಳಗ್ಗೆಯಿಂದ ಬಾಲಕಿ ನಾಪತ್ತೆಯಾಗಿದ್ದಳು.
“ಬಹಿರ್ದೆಸೆಗಾಗಿ ಬಾಲಕಿ ತೆರಳಿದ್ದಳು. ಆದರೆ 5 ನಿಮಿಷಗಳ ನಂತರ ಬಾಲಕಿ ಕಾಣದಿದ್ದಾಗ ಅಜ್ಜ ಹುಡುಕಲು ಆರಂಭಿಸಿದರು. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಕೂಡ ಹುಡುಕಾಟ ಆರಂಭಿಸಿದ್ದರು. ಆದರೆ ಬಾಲಕಿ ಪತ್ತೆಯಾಗಿರಲಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮನೆಯಿಂದ ಒಂದು ಕಿ.ಮೀ. ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. “ಆಕೆಯ ದೇಹದ ಮೇಲೆ ಹುಳಗಳಿದ್ದು, ಗಾಯಗಳ ಕಲೆಗಳಿವೆ. ಲೈಂಗಿಕ ದೌರ್ಜನ್ಯದಿಂದ ಆಕೆ ಮೃತಪಟ್ಟಿದ್ದಾಳೆ ಎನ್ನುವ ಶಂಕೆಯಿದೆ” ಎಂದು ವೈದ್ಯ ಶಕೀಲ್ ಖಾನ್ ತಿಳಿಸಿದ್ದಾರೆ.