ಬೈಕ್ ಹಾಳಾಗಿ ನೆರವು ಕೋರಿದ ಬಾಲಕಿಯರ ಮೇಲೆ 11 ಮಂದಿಯಿಂದ ಅತ್ಯಾಚಾರ
ರಾಂಚಿ, ಆ. 20: ತಾವು ಪ್ರಯಾಣಿಸುತ್ತಿದ್ದ ಬೈಕ್ ಹಾಳಾದಾಗ ಇಬ್ಬರು ಬಾಲಕಿಯರು ಸ್ನೇಹಿತನಿಗೆ ಕರೆ ಮಾಡಿ ನೆರವಾಗುವಂತೆ ಕೋರಿದರು. ಆದರೆ ಸ್ನೇಹಿತ ನೆರವಿಗೆ ಧಾವಿಸುವ ಬದಲು ಹೂಡಿದ ತಂತ್ರವೇ ಬೇರೆ. 11 ಮಂದಿ ಸ್ನೇಹಿತರನ್ನು ಕಳುಹಿಸಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಜಾರ್ಖಂಡ್ನ ಲೋಹರ್ದಗಾ ಬಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿದೆ. ಎಲ್ಲ ಆರೋಪಿಗಳು 18 ರಿಂದ 28 ವರ್ಷ ವಯಸ್ಸಿನವರು. ತಮ್ಮ ನೆರೆಯವರ ಜತೆ ಬಾಲಕಿಯರು ಬೈಕ್ನಲ್ಲಿ ಸವಾರಿ ಹೊರಟಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ.
ಬೈಕ್ನಲ್ಲಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಳು ಸ್ನೇಹಿತನಿಗೆ ಕರೆ ಮಾಡಿ ಬೈಕ್ ಹಾಳಾದ ವಿಷಯ ತಿಳಿಸಿ, ನೆರವಾಗುವಂತೆ ಕೋರಿದಳು. ನೆರವು ಕಳುಹಿಸುವ ಬದಲು ಈತ 11 ಮಂದಿ ಸ್ನೇಹಿತರನ್ನು ಕಳುಹಿಸಿದ ಎನ್ನಲಾಗಿದೆ. 11 ಮಂದಿ ಬಾಲಕಿಯರ ಜತೆಗಾರರನ್ನು ಹೊಡೆದೋಡಿಸಿ, ಈ ಕೃತ್ಯ ಎಸಗಿದರು ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಒಬ್ಬರಾದ ಬಳಿಕ ಮತ್ತೊಬ್ಬರು ಅತ್ಯಾಚಾರ ಎಸಗಿದರು. ಬಾಲಕಿಯರ ಮೊಬೈಲ್ ಕಸಿದುಕೊಂಡು ಪರಾರಿಯಾದರು. ಆದರೆ ಇದನ್ನು ಆರೋಪಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.