ಬೈಕ್ ಅಪಘಾತ: ಗಂಭೀರ ಗಾಯಗೊಂಡಿದ್ದ ಸಹಸವಾರ ಮೃತ್ಯು
ಮಂಗಳೂರು, ಆ.20: ನಗರದ ಸೈಂಟ್ ಆಗ್ನೇಸ್ ಜಂಕ್ಷನ್ ಬಳಿಯ ಪೊಲೀಸ್ ಅಂಬ್ರೆಲ್ಲಾಕ್ಕೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಗಂಭೀರ ಗಾಯಗೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ಪುತ್ತೂರು ನಿವಾಸಿ ಗೊಡ್ವಿನ್ ಪಾಯಸ್ (25) ಮೃತಪಟ್ಟವರು. ಮೃತರು ಸೇಲ್ಸ್ ಸೂಪರ್ವೈಸರ್ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ.20ರಂದು ಬೆಳಗ್ಗೆ 1:15ಕ್ಕೆ ಬೆಂದೂರ್ವೆಲ್ ಕಡೆಯಿಂದ ಶಿವಭಾಗ್ ಕಡೆಗೆ ಗ್ರೇಗರಿ ಪಿಂಟೋ ಚಾಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ನಲ್ಲಿ ಮೃತ ಗೊಡ್ವಿನ್ ಪಾಯಸ್ ಸಹಸವಾರರಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಸೈಂಟ್ ಆಗ್ನೇಸ್ ಜಂಕ್ಷನ್ ಬಳಿಯ ಪೊಲೀಸ್ ಅಂಬ್ರೆಲ್ಲಾಕ್ಕೆ ಢಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್ ಸಮೇತ ಕಾಂಕ್ರೀಟ್ ರಸ್ತೆಗೆಸೆಯಲ್ಪಟ್ಟ ಸಹಸವಾರ ಗೊಡ್ವಿನ್ ಪಾಯಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗಿನ ಜಾವ 4:50ಕ್ಕೆ ಮೃತಪಟ್ಟಿದ್ದಾರೆ. ಈ ಕುರಿತು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.