varthabharthi

ಸಂಪಾದಕೀಯ

ಗಂಗಾನದಿಯನ್ನು ಕೊಂದು ಸರಸ್ವತಿಗಾಗಿ ಹುಡುಕುವವರು!

ವಾರ್ತಾ ಭಾರತಿ : 22 Aug, 2018

ಚಿಂತಕ, ನಿರ್ದೇಶಕ ಅಮಿತ್ ಮಧೇಸಿಯಾ ‘‘ಸರ್ಚಿಂಗ್ ಫಾರ್ ಸರಸ್ವತಿ’’ ಎನ್ನುವಂತಹ ಸಾಕ್ಷ ಚಿತ್ರವೊಂದನ್ನು ತೆಗೆದಿದ್ದಾರೆ. ಪುರಾಣ ಕಾಲದಲ್ಲಿ ಅಥವಾ ಋಗ್ವೇದ ಕಾಲದಲ್ಲಿ ಇತ್ತು ಎನ್ನುವ ಸರಸ್ವತಿ ಎಂಬ ನದಿಯ ಹುಡುಕಾಟಕ್ಕಾಗಿ ಮುಂದಾಗಿರುವ ಸರಕಾರದ ನಿಲುವನ್ನು ನಿಕಷಕೊಡ್ಡುವ ಸಾಕ್ಷ ಚಿತ್ರ ಇದು. ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ವರ್ಷದೊಳಗೆ, ಋಗ್ವೇದ ಕಾಲದಲ್ಲಿರುವ ಸರಸ್ವತಿ ನದಿಯನ್ನು ಹುಡುಕುವುದಕ್ಕಾಗಿ 50 ಕೋಟಿಗು ಅಧಿಕ ಹಣವನ್ನು ಘೋಷಿಸಿತ್ತು. ಪುರಾಣವನ್ನು ವಾಸ್ತವದ ಜೊತೆಗೆ ಕಲಬೆರಕೆ ಮಾಡುವ ಅಪಾಯಗಳ ಕುರಿತಂತೆ ಈ ಚಿತ್ರ ನಮ್ಮನ್ನು ಎಚ್ಚರಿಸುತ್ತದೆ. ಯಾವುದೇ ಸಂಶೋಧನೆಗೆ ವೈಜ್ಞಾನಿಕ ಹಿನ್ನೆಲೆಯಿರಬೇಕು. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಮ್ಮ ಶೋಧನೆಗಳು ಪುರಾಣಗಳನ್ನು ಆಧರಿಸಿ ನಡೆಯುತ್ತಿದೆ. ಗೋಮೂತ್ರದಲ್ಲಿ ಔಷಧೀಯ ಅಂಶವಿದೆಯೇ ಎನ್ನುವುದನ್ನು ಶೋಧಿಸುವುಕ್ಕೂ ಹಣ ಮೀಸಲಿಟ್ಟ ಸರಕಾರ ನಮ್ಮದು. ಈ ಮೂಲಕ ಈ ದೇಶವನ್ನು ಆಧುನಿಕ ದಿನದೆಡೆಗೆ ಮುನ್ನಡೆಸಿದ ವಿಜ್ಞಾನವನ್ನು ತಿರಸ್ಕರಿಸಿ, ಪುರಾಣಗಳ ಕಂತೆಗಳನ್ನು ವಿಜ್ಞಾನ ಪುಸ್ತಕವಾಗಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲದಿರುವುದನ್ನು ಇದೆ ಎಂದು ಘೋಷಿಸಿ ಹುಡುಕುವುದರ ಬದಲು ಇರುವುದನ್ನು ಉಳಿಸುವ ಕಡೆಗೆ ಮನ ಮಾಡಬೇಕು ಎನ್ನುವ ಸಂದೇಶವನ್ನು ಚಿತ್ರ ನೀಡುತ್ತದೆ.

ಭಾರತ ನದಿಗಳ ನೆಲ. ಗಂಗಾ, ಯಮುನಾ, ಸಿಂಧು, ಕಾವೇರಿಯ ಜೊತೆ ಜೊತೆಗೆ ನಾವು ಸರಸ್ವತಿಯ ಹೆಸರನ್ನೂ ಹೇಳುತ್ತೇವೆ. ಸರಸ್ವತಿ ಈ ದೇಶದ ನೆಲದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಎಂದು ಪುರಾಣಗಳ ಮೂಲಕ ನಾವು ನಂಬಿದ್ದೇವೆ. ಹರ್ಯಾಣ, ರಾಜಸ್ಥಾನದಂತಹ ಪ್ರದೇಶದಲ್ಲಿ ನಿಜಕ್ಕೂ ಅಂತಹದೊಂದು ನದಿ ಅಸ್ತಿತ್ವದಲ್ಲಿದ್ದಿದ್ದರೆ ಆ ಪ್ರದೇಶಗಳ ಸ್ಥಿತಿಯೇ ಬೇರೆಯಾಗಿರುತ್ತಿತ್ತು. ಹಾಗೆಂದು ಇಲ್ಲದ ನದಿಯನ್ನು ಹುಡುಕುವ ಬದಲು ಇರುವ ನದಿಗಳನ್ನು ನಾವೆಷ್ಟು ಉಳಿಸಿಕೊಂಡಿದ್ದೇವೆ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಇಡೀ ದೇಶದ ಸಾಂಸ್ಕೃತಿಕ,ರಾಜಕೀಯ,ಸಾಮಾಜಿಕ ವಲಯಗಳು ಕೆಟ್ಟು ಕೆರ ಹಿಡಿಯುತ್ತಿರುವುದಕ್ಕೆ ರೂಪಕವಾಗಿ ಇಂದು ಗಂಗಾ ನದಿ ಹರಿಯುತ್ತಿದೆ.ನಮ್ಮ ಪುಣ್ಯ ಕ್ಷೇತ್ರಗಳ ತಡಿಯಲ್ಲಿ ಹರಿಯುವ ಆಕೆಯ ಸ್ಥಿತಿಯನ್ನೊಮ್ಮೆ ಕಣ್ಣು ಮತ್ತು ಹೃದಯವನ್ನು ತೆರೆದು ನೋಡಬೇಕಾಗಿದೆ.ಒಂದೆಡೆ ಧರ್ಮದ ತ್ಯಾಜ್ಯಗಳು,ಇನ್ನೊಂದೆಡೆ ಅಭಿವದ್ಧ್ಧಿಯ ತ್ಯಾಜ್ಯಗಳು. ಒಂದು ನದಿಯನ್ನು ತ್ಯಾಜ್ಯ ಹರಿಯ ಬಿಡುವ ಚರಂಡಿಯನ್ನಾಗಿ ಪರಿವರ್ತಿಸಿದ ಮನುಷ್ಯನ ಕ್ರೌರ್ಯಕ್ಕೆ ಈ ನದಿ ಸಾಕ್ಷಿಯಾಗಿದೆ.

ಇದು ಗಂಗಾನದಿಗಷ್ಟೇ ಸೀಮಿತವಲ್ಲ. ಗಂಗಾ ನದಿಯ ಶುದ್ಧೀಕರಣಕ್ಕಾಗಿ ಸರಕಾರ ಸಹಸ್ರಾರು ಕೋಟಿ ರೂಪಾಯಿ ಚೆಲ್ಲಿ ಸುಸ್ತಾಗಿದೆ. ಪರಿಸರ ತಜ್ಞರು, ಗಂಗಾ ನದಿಯ ನೀರು ಕುಡಿಯಲು ಅರ್ಹವಲ್ಲ ಎನ್ನುವುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ನಾವು ಗಂಗೆಯನ್ನು ತಾಯಿ ಎಂದು ಕರೆಯುತ್ತಲೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದೇವೆ. ಧಾರ್ಮಿಕ ನಂಬಿಕೆಯ ಹೆಸರಲ್ಲಿ ಅರೆಬೆಂದ ಸಹಸ್ರಾರು ಹೆಣಗಳನ್ನು ಆಕೆಯ ಮಡಿಲಿಗೆ ಎಸೆದಿದ್ದೇವೆ. ಪೂಜೆ ಸಂಪ್ರದಾಯಗಳು ವಾಣಿಜ್ಯೀಕರಣಗೊಂಡ ಪರಿಣಾಮವಾಗಿ ಇಕ್ಕೆಡೆಗಳಲ್ಲಿರುವ ಪುಣ್ಯ ಕ್ಷೇತ್ರಗಳಿಂದ ಗಂಗಾನದಿ ಸೇರಿದ ತ್ಯಾಜ್ಯಗಳು, ಯಾವ ಕಾರ್ಖಾನೆಯ ತ್ಯಾಜ್ಯಗಳಿಗಿಂತ ಕಡಿಮೆಯಿಲ್ಲ. ಗಂಗಾನದಿಯ ಶುದ್ಧೀಕರಣದಲ್ಲಿ ಒಂದಿಷ್ಟು ಪ್ರಾಮಾಣಿಕತೆಯಿದ್ದರೆ, ಮೊತ್ತ ಮೊದಲು ಇಂತಹ ತ್ಯಾಜ್ಯಗಳು ನದಿ ಸೇರದಂತೆ ತಡೆಯುವ ಕೆಲಸಗಳನ್ನು ಮಾಡಬೇಕು. ಕಾರ್ಖಾನೆಗಳಿಂದ ಮತ್ತು ದೇವಸ್ಥಾನಗಳಿಂದ ಹೊರ ಬರುವ ತ್ಯಾಜ್ಯಗಳನ್ನು ತಡೆದ ಬಳಿಕವಷ್ಟೇ, ಶುದ್ಧೀಕರಣ ಶುರುವಾಗಬೇಕು. ಇಲ್ಲವಾದರೆ, ಒಂದೆಡೆ ಶುದ್ಧ್ದ ಮಾಡಿದಂತೆಯೇ ಮಗದೊಂದೆಡೆ ಅಶುದ್ಧವಾಗುತ್ತಾ ಹೋಗುತ್ತದೆ. ಸಂಪೂರ್ಣ ಕಲುಷಿತಗೊಂಡ ನದಿಯನ್ನು ಒಂದು ಸರಕಾರ ಇಚ್ಛಿಸಿದರೆ ಸ್ವಚ್ಛ ನದಿಯಾಗಿ ಪರಿವರ್ತನೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಲಂಡನ್‌ನ ಥೇಮ್ಸ್ ನದಿಯಿದೆ.

ಒಂದು ಕಾಲದಲ್ಲಿ ಸತ್ತ ನದಿ ಎಂದು ಗುರುತಿಸಲ್ಪಟ್ಟಿದ್ದ ಥೇಮ್ಸ್ ಅಲ್ಲಿನ ಸರಕಾರ ಮತ್ತು ಜನರ ಪ್ರಾಮಾಣಿಕ ಪ್ರಯತ್ನದಿಂದ ಅತ್ಯಂತ ಸ್ವಚ್ಛ ನದಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಒಂದು ನದಿಯನ್ನು ಸಾಯಿಸುವುದು ನಮ್ಮಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ನಮ್ಮ ಮುಂದೆ ಚೀನಾ ಇದೆ.ನದಿಯನ್ನು ಅಪ್ಪಟ ಭೌತಿಕ ಕಣ್ಣಲ್ಲಿ ನೋಡಿದ ಪರಿಣಾಮ ಇಲ್ಲಿ ಕಣ್ಮರೆಯಾಗಿ ರುವ ನದಿಗಳ ಸಂಖ್ಯೆ ಎಷ್ಟು ಗೊತ್ತೇ?ಸುಮಾರು 2 ಸಾವಿರ ನದಿಗಳು! ಮಾತ್ರವಲ್ಲ,ನದಿಗಳನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿರುವುದರ ಪರಿಣಾಮವಾಗಿ ಹಲವು ಕಿರುನದಿಗಳು ಅವಸಾನದ ಅಂಚಿನಲ್ಲಿವೆ.ನದಿಯೆಂದರೆ ಬರೇ ನೀರಲ್ಲ.ಲಕ್ಷಾಂತರ ಜಲಚರಗಳನ್ನು ಪೊರೆವ ತಾಯಿ.ಹಾಗೆಯೇ ಇಕ್ಕೆಡೆಗಳನ್ನು ಹಸಿರಾಗಿಸುತ್ತಾ,ಆ ಮೂಲಕ ಪ್ರಾಣಿ ಪಕ್ಷಿಗಳಿಗೆ ನೆಲೆಯನ್ನು ಒದಗಿಸಿಕೊಡುತ್ತಾ ಹೋಗುತ್ತದೆ.

ಒಂದು ನದಿಯನ್ನು ಕೊಲ್ಲುವು ದೆಂದರೆ,ಪಕ್ಷಿ ಸಂಕುಲವನ್ನು,ಕಾಡುಗಳನ್ನು,ಕೀಟಗಳನ್ನು ಕೊಲ್ಲುವುದೆಂದು ಅರ್ಥ.ಅಷ್ಟೇ ಅಲ್ಲ,ಹರಿಯುವ ನದಿ ಕಟ್ಟ ಕಡೆಗೆ ಸಮುದ್ರ ಸೇರುವುದೆಂದರೆ ಅದು ವ್ಯರ್ಥ ಅಲ್ಲವೇ ಅಲ್ಲ.ಸಮುದ್ರ ಸೇರುವ ಮೂಲಕ ಒಂದು ನದಿ ಮುಗಿದು ಹೋಗುವುದಿಲ್ಲ.ಸಮುದ್ರದ ಚೈತನ್ಯದಲ್ಲಿ ನದಿಗಳ ಪಾತ್ರವೂ ಇದೆ. ನಾವು ನದಿಯನ್ನು ಮುಟ್ಟುವುದಿಲ್ಲ.ಬರೇ ನೀರನ್ನಷ್ಟೇ ಪೈಪ್ ಮೂಲಕ ಸಾಗಿಸುತ್ತೇವೆ ಎನ್ನುವ ಮೂರ್ಖ ರಾಜಕಾರಣಿಗಳೂ ಇದ್ದಾರೆ.ಒಂದು ನದಿಗೂ ಡ್ರೈನೇಜಿಗೂ ವ್ಯತ್ಯಾಸ ಇದೆ.ನದಿಯೆಂದರೆ ಬರೀ ಹರಿಯುವ ನೀರಲ್ಲ.ಅದೊಂದು ಚೈತನ್ಯ.ಜೀವವಿಕಾಸದಲ್ಲಿ ನದಿಗಳಿಗೂ ಪಾತ್ರವಿತು ಮತ್ತು ಇದೆ.ಗಣಿಗಾರಿಕೆ ಸೇರಿದಂತೆ ಅಭಿವದ್ಧಿಯ ಮೋಹಕ್ಕೆ ಸಿಲುಕಿ ನದಿ ಪಾತ್ರಗಳನ್ನೇ ಒಡೆದು ಹಾಕಿದ ಪರಿಣಾಮವನ್ನು ನಾವು ಉತ್ತರಾಖಂಡದಲ್ಲಿ ನೋಡಿದ್ದೇವೆ. ಇಂತಹ ನೂರಾರು ಉತ್ತರಾಖಂಡಗಳನ್ನು ಸಷ್ಟಿಸುವುದಕ್ಕೆ ಹೊರಟಿದ್ದೇವೆ.

ಭಾರತ ಹಮ್ಮಿಕೊಂಡಿರುವ ನದಿ ಜೋಡಣೆೆ ಕೂಡ ಒಂದು ಅಪಾಯಕಾರಿ ಸಾಹಸವೇ ಆಗಿದೆ. ಸುಮಾರು ಐದು ಲಕ್ಷ ಕೋಟಿ ರೂ.ವೌಲ್ಯದ ಯೋಜನೆ ಇದು.ಆದರೆ ಈ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದರ ಬಗ್ಗೆ ತಜ್ಞರಿಗೆ ಅನುಮಾನ ಈಗಲೂ ಇದ್ದೇ ಇದೆ.ಹಾಗೆಂದು ಜನರಿಗೆ ಕುಡಿಯುವ ನೀರನ್ನು ಒದಗಿಸುವುದು ಬೇಡವೇ ಎಂದು ರಾಜಕಾರಣಿಗಳು ಕೇಳುತ್ತಾರೆ.ಈ ದೇಶದಲ್ಲಿರುವ ಲಕ್ಷಾಂತರ ಕೆರೆ,ಕಾಲುವೆಗಳನ್ನು ಬತ್ತಿಸಿ,ನೀರಿನ ಸಾಧ್ಯತೆಗಳಿರುವ ತೊರೆಗಳನ್ನೆಲ್ಲ ನಾಶ ಮಾಡಿದ ಬಳಿಕ ನದಿಗಳ ಸೆರಗಿಗೆ ಕೈ ಹಾಕಿ ನೀರು ಒದಗಿಸುತ್ತೇವೆ ಎಂದು ಹೇಳುವುದು ಸರಿಯಾದ ಮಾರ್ಗವಲ್ಲ.ಈ ನೆಲ ಬಂಜೆಯಲ್ಲ.ಇಲ್ಲಿ ಒಸರು ಇದ್ದೇ ಇದೆ.ರಾಜಸ್ಥ್ಥಾನದಲ್ಲಿ ಮಳೆ ನೀರು ಇಂಗಿಸುವ ಮೂಲಕ ಇಡೀ ಪ್ರದೇಶವನ್ನು ಹಸಿರಾಗಿಸಿದ ಹೆಮ್ಮೆ ಪರಿಸರ ಹೋರಾಟಗಾರ ರಾಜೇಂದ್ರ ಸಿಂಗ್‌ರಂತಹ ಪರಿಸರ ತಜ್ಞರು ನಮ್ಮ ನಡುವೆ ಇದ್ದಾರೆ. ರಾಜಸ್ಥಾನದ ಆಲ್ವಾರ್ ಒಂದು ಕಾಲದಲ್ಲಿ ನೀರಿಲ್ಲದ ಕಪ್ಪು ಪ್ರದೇಶ ಎಂದು ಘೋಷಿಸಲ್ಪಟ್ಟಿತ್ತು.ಅಂತಹ ಪ್ರದೇಶದಲ್ಲಿ ಮಳೆನೀರು ಇಂಗುಗುಂಡಿಗಳನ್ನು ಸೃಷ್ಟಿಸಿ ಇಡೀ ಪ್ರದೇಶವನ್ನೇ ಹಸಿರಾಗಿಸಿದ ಸಿಂಗ್‌ರಂತಹ ಪರಿಸರ ತಜ್ಞರು ರಾಜಕಾರಣಿಗಳಿಗೆ ಮಾರ್ಗ ದರ್ಶಕರಾಗಬೇಕು.ಅಂತಹ ತಜ್ಞರನ್ನು ಒಟ್ಟು ಮಾಡಿ,ಅವರೊಂದಿಗೆ ಚರ್ಚೆ ನಡೆಸಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕೇ ಹೊರತು,ಕಾರ್ಪೊರೇಟ್ ಲಾಬಿಗಳ ಜೊತೆಗಲ್ಲ.

 ಕೊನೆಯ ಮಾತು. ಇತ್ತೀಚೆಗೆ ಅಟಲ್ ಬಿಹಾರಿ ವಾಜಪೇಯಿ ತೀರಿ ಹೋದರು. ಅವರ ಮೃತದೇಹದ ಬೂದಿ ಮತ್ತು ಅವಶೇಷಗಳನ್ನು ಭಾರತದ ಎಲ್ಲ ನದಿಗಳಲ್ಲಿ ತೇಲಿ ಬಿಡುವ ಘೋಷಣೆಯನ್ನು ಸರಕಾರ ಮಾಡಿತು. ಒಂದೆಡೆ ನದಿಗಳಿಗೆ ಉಗುಳಿದರೂ ದಂಡ ಎಂಬ ನಿಯಮ ಮಾಡುವ ಸರಕಾರದ ನೇತೃತ್ವದಲ್ಲೇ ಒಬ್ಬ ನಾಯಕರ ಮೃತದೇಹದ ಅವಶೇಷಗಳನ್ನು ನದಿಗಳಿಗೆ ಎಸೆಯುವುದು ಎಷ್ಟು ಸರಿ? ಇಂತಹ ಸರಕಾರಕ್ಕೆ, ಗಂಗಾ ನದಿಗೆ ಅರೆಬೆಂದ ಮೃತದೇಹಗಳನ್ನು ಎಸೆಯುವ ಮೂರ್ಖ ಭಕ್ತರನ್ನು ಟೀಕಿಸುವ ನೈತಿಕತೆಯಿದೆಯೇ? ಯಥಾರಾಜ ತಥಾ ಪ್ರಜಾ ಎಂಬಂತೆ, ನಾಯಕರು ಬೂದಿ, ಎಲುಬುಚೂರುಗಳನ್ನು ಮೋಕ್ಷಕ್ಕಾಗಿ ಎಸೆದರೆ, ಜನರು ಅರೆಬೆಂದ ಮೃತದೇಹಗಳನ್ನೇ ಎಸೆಯುತ್ತಾರೆ.

ಬಕ್ರೀದ್ ಬಂದಾಗ ಸಾರ್ವಜನಿಕ ಪ್ರದೇಶಗಳಲ್ಲಿ ಆಡು ಕುರಿಗಳನ್ನು ಬಲಿಕೊಟ್ಟು ಅದರ ರಕ್ತವನ್ನು ಚರಂಡಿಯಲ್ಲಿ ಹರಿಯಬಿಡುವುದನ್ನು ನೋಡುತ್ತೇವೆ. ಕುರಿ, ಕೋಳಿಯ ಅವಶೇಷಗಳನ್ನು ನದಿಗೆ ಎಸೆಯುವ ನೀಚರು ಇನ್ನೂ ನಮ್ಮ ನಡುವೆ ಇದ್ದಾರೆ. ಇದು ಹಬ್ಬ ನಮಗೆ ತಿಳಿಸಿಕೊಡುವ ಅಂತರಂಗ ಶುದ್ಧಿ ಬಹಿರಂಗ ಶುದ್ಧಿಗೆ ಮಾಡುವ ಅವಮಾನವಾಗಿದೆ. ಗಣೇಶೋತ್ಸವ ಬಂದಾಗ ನಮ್ಮ ಅಳಿದುಳಿದ ಕೆರೆಗಳ ಸ್ಥಿತಿ ಅತ್ಯಂತ ಭಯಾನಕವಾಗಿರುತ್ತದೆ. ಕುರಿ ಕೋಳಿಗಳ ಅವಶೇಷಗಳನ್ನು ನದಿ, ಕೆರೆಗೆ ಎಸೆಯುವವರು ಮೃತದೇಹದ ಅವಶೇಷಗಳನ್ನು ನದಿಯಲ್ಲಿ ಬಿಡುವವರು, ಗಣೇಶನ ಪ್ರತಿಮೆಯನ್ನು ಕೆರೆಗಳಲ್ಲಿ ವಿಸರ್ಜಿಸುವವರು ತಮ್ಮ ಮನೆಯ ಬಾವಿಗಳಿಗೆ ಎಸೆಯಲಾರರು. ಈ ದೇಶದ ನದಿಗಳು, ಕೆರೆಗಳೂ ನಮ್ಮ ಮನೆಯ ಬಾವಿಯಷ್ಟೇ ಅಮೂಲ್ಯ ಎಂದು ತಿಳಿದುಕೊಂಡ ದಿನವೇ ಗಂಗಾನದಿಯ ನಿಜವಾದ ಶುದ್ಧೀಕರಣ ಆರಂಭವಾಗುತ್ತ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)