varthabharthiಭೀಮ ಚಿಂತನೆ

ಹಿಂದೀ ರಾಜಕಾರಣದ ಗೊಂದಲ

ವಾರ್ತಾ ಭಾರತಿ : 25 Aug, 2018

ಭಾಗ-7

1914ರ ಮಹಾಯುದ್ಧದಲ್ಲಿ ತಿಲಕರು, ಯುದ್ಧದಲ್ಲಿ ಷರತ್ತಿಲ್ಲದೆ ಸಹಾಯ ಮಾಡಬಾರದೆಂದು ದೇಶದಲ್ಲೆಲ್ಲ ಪ್ರಸಾರ ಮಾಡಿದ್ದರು. ಆ ವೇಳೆ ಗಾಂಧಿ ಅವರು ತಿಲಕರನ್ನು ವಿರೋಧಿಸಿ, ಷರತ್ತಿಲ್ಲದ ಸಹಾಯವನ್ನು ಪುರಸ್ಕರಿಸಿದ್ದರು. ಆ ವೇಳೆ ಅವರು ಮುಂಬೈಯ ನಾಮದಾರ್ ಶಾಸ್ತ್ರಿ ಅವರಿಗೆ ಬರೆದ ಪತ್ರ, ‘ಟೈಮ್ಸ್ ಆಫ್ ಇಂಡಿಯಾ’ದ 1918 ಜುಲೈ 19ರ ಸಂಚಿಕೆಯಲ್ಲಿ ಪ್ರಕಟವಾಯಿತು. ‘‘ನನ್ನ ಮಾತುಗಳನ್ನು ಮುಗಿಸುತ್ತಾ, ನಮ್ಮ ಮತವನ್ನು ಜಾರಿಗೊಳಿಸುವ ಸರ್ವೋತ್ತಮ ದಾರಿ ಯಾವುದೆಂಬುದನ್ನು ನಾನಿಲ್ಲಿ ಹೇಳದಿರಲಾರೆ. ಹಿಂದಿ ರಾಜಕೀಯ ಕ್ಷೇತ್ರದ ಸಹಸ್ರಾರು ಕಾರ್ಯಕರ್ತರು ಇಂದು ಉತ್ಸುಕತೆಯಿಂದ ಮನನ ಮಾಡುತ್ತಿರುವ ರಾಜಕೀಯ ಸುಧಾರಣೆಯ ಈ ಐತಿಹಾಸಿಕ ಮಸೂದೆ ಸಿದ್ಧಗೊಳಿಸುತ್ತಿರುವವರು ಹೊರತಂದ ನಿಷ್ಕರ್ಷೆ ನನಗೆ ಸರ್ವತೋಪರಿ ಸಮ್ಮತವಾಗಿದೆ. ಯಾವ ಯೋಜನೆಯ ಪರಿಣಾಮ ಕಲ್ಪನೆಗೂ ಸಿಗದಷ್ಟು ದೊಡ್ಡದಾಗಿದೆಯೋ, ಆ ಯೋಜನೆಯ ಬಗ್ಗೆ ಶಿಫಾರಸು ಮಾಡುವಲ್ಲಿ ನಮ್ಮ ಮೇಲಿರುವ ಜವಾಬ್ದಾರಿಯ ಅರಿವು ಇದ್ದೂ, ಒಂದು ಕಾರಣದಿಂದ ನಮ್ಮ ಮನ ಶಂಕಿತವಾಗುತ್ತಿದೆ. ಅದೆಂದರೆ, ನಮ್ಮ ಅಹವಾಲು ಪೂರ್ಣಗೊಳ್ಳುವ ಮೊದಲ ಹಿಂದೀ ರಾಜಕೀಯ ಸುಧಾರಣೆಯ ಪ್ರಶ್ನೆಗಿಂತ ಅಧಿಕ ಗಂಭೀರ ಪ್ರಶ್ನೆ, ಫ್ರಾನ್ಸ್‌ನ ರಣಾಂಗಣದಲ್ಲಿ ಎದ್ದಿದೆ. ಹಿಂದೂಸ್ಥಾನದ ಭವಿಷ್ಯಕ್ಕೆ ಸಂಬಂಧಿಸಿ ತೆಗೆದುಕೊಳ್ಳುವ ನಿರ್ಣಯ ದಿಲ್ಲಿ ಇಲ್ಲವೇ ವೈಟ್‌ಹಾಲ್‌ನಲ್ಲಾಗದೆ, ಫ್ರಾನ್ಸ್‌ನ ರಣಭೂಮಿಯಲ್ಲಿ ರೂಪುಗೊಳ್ಳಲಿದೆ. ನಮ್ಮ ಸ್ವ್ವರಾಜ್ಯದ ಕಿಂಡಿಬಾಗಿಲು ಫ್ರಾನ್ಸ್‌ನ ಭೂಮಿಯ ಮೇಲಿದೆ. ರಕ್ತಪಾತವಾಗದೆ, ವಿಜಯ ಇನ್ನೂ ಪ್ರಾಪ್ತವಾಗುವಂತಿಲ್ಲ. ಮಿತ್ರರ ವಿಜಯಕ್ಕಾಗಿ ಸೆಣಸುವ ಸ್ವಾತಂತ್ರವಾದಿಗಳ ಅಜೇಯ ಸೇನೆಯನ್ನು ಫ್ರಾನ್ಸ್ ನ ರಣಭೂಮಿಗೆ ಕಳುಹಲು ಶಕ್ಯವಾದರೆ, ನಾವು ನಮ್ಮ ಹಿತಕ್ಕಾಗಿಯೇ ಕಾದುವಂತಾದರೆ, ಭವಿಷ್ಯದಲ್ಲಲ್ಲ, ಈಗಲೇ ಸ್ವಾಯತ್ತತೆ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು.

ಹಾಗೆಂದೇ ನನಗೆ ದೇಶಕ್ಕೆ ಹೇಳಲಿದೆ- ಬ್ರಿಟನ್‌ನ ವಿಜಯಕ್ಕಾಗಿ ಮರಣದ ಪರಿವೆಯನ್ನೂ ಮಾಡದೆ, ಯುದ್ಧಕ್ಕೆ ಎದ್ದು ನಿಲ್ಲಿ ಮತ್ತು ಅದರೊಡನೆಯೇ ನಮಗೆ ಯೋಗ್ಯ ಸುಧಾರಣೆ ಸಿಗುವಂತೆ ಚಳವಳಿ ಮಾಡಿ. ನೌಕರಶಾಹಿಯ ಕಡು ವಿರೋಧದಲ್ಲಿ ಸಮ್ಮಾನನೀಯ ವಿಜಯ ಪ್ರಾಪ್ತವಾಗಲು ಇದುವೇ ನಿಜವಾದ ಮಾರ್ಗ. ಕೇವಲ ಅಡೆತಡೆಯ ವಿಧ್ವಂಸಕ ಮಾರ್ಗದಿಂದ ಧ್ಯೇಯ ಪ್ರಾಪ್ತಿಯಾಗುವುದು ಅವಶ್ಯಕವಲ್ಲ, ಆದರೆ ಅದರಿಂದ ಬ್ರಿಟಿಷರ ಹಾಗೂ ನಮ್ಮ ನಡುವೆ ಪರಸ್ಪರ ವೈರಭಾವ ಹುಟ್ಟಿಕೊಳ್ಳುವುದು ಮತ್ತು ಮುಂದಕ್ಕೆ ಯಾವ ರೀತಿಯಲ್ಲೂ ಪರಸ್ಪರ ಪೋಷಕವಾಗುವುದಿಲ್ಲ.’’ ಇದರಿಂದ ಗಾಂಧೀ ಅವರು, ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡುವುದನ್ನು ಬೆಂಬಲಿಸಿ ಎಷ್ಟು ಪ್ರಚಾರ ಮಾಡಿದರೆಂಬ ಕಲ್ಪನೆ ವಾಚಕರಿಗೆ ಬರುತ್ತದೆ. 1915ರ ಎಪ್ರಿಲ್ ತಿಂಗಳಲ್ಲಿ ಮದರಾಸಿನಲ್ಲಿ ವಕೀಲರ ವಾರ್ಷಿಕ ಭೋಜನ ಸಮಾರಂಭ ನಡೆಯಿತು. ಗಾಂಧಿ ಅವರಿಗೂ ಇದರ ಆಮಂತ್ರಣ ಹೋಗಿತ್ತು. ಇಷ್ಟೇ ಅಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ದೀರ್ಘಯುಷ್ಯ ಸಿಗಲೆಂದು ಭಾಷಣ ಮಾಡುವಂತೆ ಅವರನ್ನು ವಿನಂತಿಸಲಾಯಿತು. ಅವರು ಆ ಪ್ರಸಂಗ ಸಾಧಿಸಿ, ನಿಶ್ಶರ್ತ ವಿರೋಧಕರಿಗೆ ಹೀಗೆ ಉತ್ತರ ನೀಡಿದರು.

‘‘ನನ್ನ ಮೂರು ತಿಂಗಳ ಇಂಡಿಯಾ, ಸೌತ್ ಆಫ್ರಿಕಾ ಸುತ್ತಾಟದಲ್ಲಿ, ಈ ಪ್ರಶ್ನೆಯನ್ನು ಅನೇಕ ಬಾರಿ ಕೇಳಲಾಗಿದೆ; ಆಧುನಿಕ ನಾಗರಿಕತೆಯ ಕಡು ವಿರೋಧಿಯೂ, ಪರಮ ಭಕ್ತನೂ ಆದ ನಾನು, ಬ್ರಿಟಿಷ್ ಸಾಮ್ರಾಜ್ಯಕ್ಕೆ ನಿಷ್ಠನಾಗುವುದು ಹೇಗೆ ಸಾಧ್ಯವಾಯಿತು, ಮತ್ತು ಪರಸ್ಪರ ಲಾಭಕ್ಕಾಗಿ ಇಂಡಿಯಾ, ಇಂಗ್ಲೆಂಡ್ ಜೊತೆಗೂಡಿ ಕೆಲಸ ಮಾಡಬಹುದೆಂದು ಯೋಚಿಸುವುದು ಹೇಗೆ ಸಾಧ್ಯವಾಯಿತು, ಎಂಬುದೇ ಆ ಪ್ರಶ್ನೆ. ಈ ಸಂಜೆಯ ಮಹತ್ವದ ಮಹಾಸಭೆಯಲ್ಲಿ, ಬ್ರಿಟಿಷ್ ಸಾಮ್ರಾಜ್ಯಕ್ಕೆ ನನ್ನ ನಿಷ್ಠೆಯನ್ನು ಪುನಃ ಸಾರಲು ನನಗೆ ಸಂತೋಷವೆನಿಸುತ್ತದೆ ಮತ್ತು ನನ್ನ ನಿಷ್ಠೆ ಬಹು ಸ್ವಾರ್ಥಪರವಾಗಿದೆ. ನಾನೊಬ್ಬ ನಿಸ್ಪಹ ಪ್ರತಿರೋಧಕನಾಗಿದ್ದು, ಹಾಗೆಂದು ಎಂತಹುದೇ ಸಂದರ್ಭದಲ್ಲೂ ಸಾಧಿಸಿ ತೋರುವುದು ಅಗತ್ಯ ಎಂದರಿವಾಗಿದೆ. ಬ್ರಿಟಿಷ್ ಸಾಮ್ರಾಜ್ಯದ ಕೆಲ ಆದರ್ಶಗಳಿಗೆ ನಾನು ಮನ ಸೋತಿದ್ದೇನೆ. ಅವುಗಳಲ್ಲೊಂದು, ಬ್ರಿಟಿಷ್ ಸಾಮ್ರಾಜ್ಯದ ಪ್ರತಿ ಪ್ರಜೆಯೂ ತನ್ನ ಶಕ್ತಿ, ಗೌರವ, ಆತ್ಮ ಸಮ್ಮಾನಕ್ಕೆ ಪಾತ್ರನೆಂಬ ಆದರ್ಶ. ಬೇರಾವ ಸರಕಾರಕ್ಕೂ ಇದು ಅನ್ವಯಿಸದು. ಯಾವ ಸರಕಾರವೂ ನನಗೆ ಪ್ರಿಯವಲ್ಲವೆಂದು ನೀವು ಬಲ್ಲಿರಿ, ಯಾವ ಸರಕಾರ ಅತ್ಯಂತ ಕಡಿಮೆ ಆಳುತ್ತದೋ, ಅದೇ ಉತ್ತಮ ಸರಕಾರ ಎಂದು ನಾನು ಹೇಳಿದ್ದೇನೆ. ಮತ್ತು, ಬ್ರಿಟಿಷ್ ಸರಕಾರದ ಅಡಿಯಲ್ಲಿ ಅತ್ಯಂತ ಕಡಿಮೆ ಆಳಿಸಿಕೊಳ್ಳುವುದು ಸಾಧ್ಯ ಎಂದು ನಾನರಿತಿದ್ದೇನೆ.’’

1914ರ ಯುದ್ಧದಲ್ಲಿ ಗಾಂಧಿ ಅವರ ಈ ಅಭಿಪ್ರಾಯದ ಬಗ್ಗೆ ಯಾರಿಗೇನೂ ಹೇಳಲಿಕ್ಕಿಲ್ಲ. ಈ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡುವುದೋ ಬೇಡವೋ ಎಂಬ ಬಗ್ಗೆ ಕಳೆದ ಹತ್ತು ವರ್ಷಗಳಲ್ಲಿ ಅವರು ಮೂರು ಬಾರಿ ಪರಸ್ಪರ ವಿರೋಧಿ ಮತ ವ್ಯಕ್ತ ಪಡಿಸಿದ್ದು ಕಂಡು ಬರುತ್ತದೆ. ಗಾಂಧೀ ಅವರ ನಿಜವಾದ ಮತ ಏನೆಂದು ತಿಳಿಯುವುದು ಅತ್ಯಂತ ಕಠಿಣ ಲಹರಿ ಬಂದಂತೆ ಮನುಷ್ಯ ಹಿಂದಿನದು ಮುಂದಿನದು ಏನನ್ನೂ ಯೋಚಿಸದೆ ಮನ ಬಂದಂತೆ ವರ್ತಿಸುವಂತೆ, ಮೂರ್ಖರು ಆಗಿಂದಾಗ ಮನಸ್ಸಿಗೆ ತೋಚಿದಂತೆ ಒದರುವಂತೆ, ಗಾಂಧಿ ಅವರ ವಿಚಾರವೂ ಅದೇ ರೀತಿಯದೆಂದು ಖೇದದಿಂದಲೇ ಹೇಳಬೇಕಾಗುತ್ತದೆ. ಗತಕಾಲದಲ್ಲಿ ಅವರ ವಿಚಾರವು ಹೇಗೆ ಬದಲಾಗುತ್ತಾ ಹೋಯಿತೆಂಬುದನ್ನು ಸಂಶೋಧಿಸ ಹೊರಟರೆ, ಅದು ತುಂಬ ಮನರಂಜಕವಾಗಿರುವುದೆಂದು ನಮಗನಿಸುತ್ತದೆ. ಆದರೆ ಹಿಂದಿನದೆಲ್ಲವನ್ನು ಬಿಟ್ಟುಕೊಟ್ಟು, ಈ ಯುದ್ಧ ಸಂಬಂಧ ವಿಷಯವನ್ನಷ್ಟೇ ತೆಗೆದುಕೊಂಡರೂ, ಅದರ ಬಗ್ಗೆ ಈ ಹತ್ತು ತಿಂಗಳಲ್ಲೇ ಮೂರು ಬಾರಿ ಅವರ ವಿಚಾರ ಪರಸ್ಪರ ವಿರೋಧವಾಗಿ ಬದಲಾಗಿರುವುದು ಕಂಡು ಬರುತ್ತದೆ. ಯುದ್ಧ ಆರಂಭವಾದ ಎರಡು ಮೂರು ದಿನಗಳಲ್ಲೇ ಗಾಂಧಿ ಹಾಗೂ ವೈಸರಾಯ್ ಅವರು ಸಿಮ್ಲಾದಲ್ಲಿ ಒಟ್ಟಾದರು. ಗಾಂಧಿ ಅವರ ವಿರುದ್ಧ ಕಾಂಗ್ರೆಸ್‌ನ ಅವರ ಅನುಯಾಯಿಗಳೇ ಹೇಳುವಂತೆ, ಗಾಂಧಿ ಅವರು ಕಾಂಗ್ರೆಸ್ ನಾಯಕರೆಂದು ಕಾಂಗ್ರೆಸ್ ವತಿಯಿಂದ ವೈಸರಾಯ್ ಅವರನ್ನು ಭೇಟಿಯಾದರೂ, ವೈಸರಾಯ್ ಅವರು ಏನೆಂದರೆಂಬುದನ್ನು ಕಾಂಗ್ರೆಸ್ಸಿಗರಿಗೆ ತಿಳಿಯ ಪಡಿಸುವುದೇ ಇಲ್ಲ, ಆದರೆ ಈ ಬಾರಿ ಮಾತ್ರ, ಅವರು, ತಮ್ಮ ಭೇಟಿಯಲ್ಲಿ ವೈಸರಾಯ್ ಅವರು ಏನೆಂದರೆಂಬುದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ;

‘‘ವೈಸರಾಯ್ ಅವರಿಗೆ ಕಾಂಗ್ರೆಸ್‌ನ ಸಂಬಂಧ ನನ್ನ ಸ್ಥಾನವನ್ನು ಸ್ಪಷ್ಟ ಪಡಿಸುತ್ತಾ, ಇಂಗ್ಲೆಂಡ್, ಫ್ರಾನ್ಸ್ ನೊಡನೆ ಮಾನವೀಯ ನೆಲೆಯಲ್ಲಿ ನನ್ನ ಸಹನುಭೂತಿ ಇದೆಯೆಂದೂ, ಇದುವರೆಗೆ ಅಭೇದ್ಯವಾಗಿದ್ದ ಲಂಡನ್‌ನ ನಾಶ, ನನ್ನನ್ನು ಆಳವಾಗಿ ಕಲಕಿದೆ ಎಂದೂ ತಿಳಿಸಿದೆ. ಹೌಸ್ ಆಫ್ ಪಾರ್ಲಿಮೆಂಟ್ ಮತ್ತು ವೆಸ್ಟ್‌ಮಿನಿಸ್ಟರ್ ಅಬೆಯ ನಾಶದ ಸಾಧ್ಯತೆಯ ಬಗ್ಗೆ ಹೇಳುತ್ತಿದ್ದಂತೆ ನಾನು ವಿವಶನಾಗಿ ಅತ್ತು ಬಿಟ್ಟೆ. ಇಂತಹ ಸಂಭವಗಳ ಬಗ್ಗೆ ಭಗವಂತನ ಜೊತೆ ನನ್ನ ಸತತ ಸಂಘರ್ಷ ನಡೆಯುತ್ತಿರುತ್ತದೆ. ನನ್ನ ಹಿಂಸೆ ನಿರ್ವೀರ್ಯವೆನಿಸುತ್ತಿದೆ. ಆದರೂ ದಿನದ ಜಗಳದ ಕೊನೆಗೆ, ದೇವರಾಗಲೀ, ಅಹಿಂಸೆಯಾಗಲೀ ಎರಡೂ ನಿರ್ವೀರ್ಯವಲ್ಲ ಎಂದನಿಸುತ್ತದೆ. ನಿರ್ವೀರ್ಯತೆಯಿರುವುದು ಮನುಷ್ಯರಲ್ಲಿ. ನಂಬಿಕೆ ಕಳೆದುಕೊಳ್ಳದೆ ಸತತ ಪ್ರಯತ್ನಿಸುತ್ತಿರಬೇಕು, ಆ ಯತ್ನದಲ್ಲಿ ಕುಸಿದು ಬಿದ್ದರೂ ಸರಿಯೇ.

ಸದ್ಯ ನಾನು ಹಿಂದೂಸ್ಥಾನದ ಮುಕ್ತಿಯ ಬಗ್ಗೆ ಯೋಚಿಸುತ್ತಿಲ್ಲ. ಅದಂತೂ ಆಗುವುದು. ಆದರೆ, ಇಂಗ್ಲೆಂಡ್ ಮತ್ತು ಫ್ರಾನ್ಸ್‌ನ ಪತನವಾದರೆ, ಮತ್ತೇನುಳಿದಂತಾಯ್ತು?’’ ಈ ಉದ್ಗಾರ ಗಾಂಧಿ ಅವರದೇ. 1939 ಸೆಪ್ಟಂಬರ್ 5ರಂದು ವೈಸರಾಯ್ ಅವರನ್ನು ಭೇಟಿಯಾದ ನಂತರ, ಪತ್ರಕರ್ತರೊಡನೆ ಅವರು ಹಾಗೆಂದು ಉದ್ಗಾರ ತೆಗೆದರು.

ಅದು ಅವರ ಪ್ರಥಮ ಭೂಮಿಕೆ. ಯುದ್ಧದ ಆರಂಭದಲ್ಲಿ ಬ್ರಿಟಿಷರಿಗೆ ಈ ದೇಶದ ಜನರು ಷರತ್ತಿಲ್ಲದೆ ಸಹಾಯ ಮಾಡಬೇಕೆಂದು ಅವರ ವಿಚಾರವಿತ್ತು. ಅ ಬಳಿಕ 15.9.1939ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸಭೆ ಸೇರಿತು. ಅ ಸಭೆಯಲ್ಲಿ, ವರ್ಕಿಂಗ್ ಕಮಿಟಿಯು, ಬ್ರಿಟಿಷರು ಈ ಯುದ್ಧದಲ್ಲಿ ಪ್ರಜಾಸತ್ತೆಯ ಮತ್ತು ಸಾಮ್ರಾಜ್ಯಶಾಹಿಯ ಸಂಬಂಧದ ವಿಷಯದಲ್ಲಿ ತಮ್ಮ ಧ್ಯೇಯ ಮತ್ತು ಆ ಧ್ಯೇಯದ ಲಾಭ ಹಿಂದೂಸ್ಥಾನೀಯರಿಗೆ ಎಷ್ಟು ಸಿಗುವುದೆಂದು ಸ್ಪಷ್ಟ ಶಬ್ದಗಳಲ್ಲಿ ಮತ್ತು ನಿಸ್ಸಂಧಿಗ್ಧ ಭಾಷೆಯಲ್ಲಿ ತೆರೆದಿಡಲಿ; ಮತ್ತು ಹಾಗೆ ಮಾಡುವವರೆಗೆ ಯುದ್ಧದಲ್ಲಿ ಕಾಂಗ್ರೆಸ್ ಸಹಾಯ ಮಾಡಲಾಗದು ಎಂದು ಸಾರಿತು.

ಹೀಗೆ ಒಂದೇ ತಿಂಗಳಲ್ಲಿ ಭಿನ್ನ ವಿಚಾರ ವ್ಯಕ್ತಗೊಂಡಾಗ ಜನರಿಗೆ ಆಶ್ಚರ್ಯವಾಗದಿರಲಿಲ್ಲ. 23 ಸೆಪ್ಟಂಬರ್ 1939ರಲ್ಲಿ ‘‘ಹರಿಜನ’’ ಪತ್ರಿಕೆಯಲ್ಲಿ ಪ್ರಕಟಿಸಿದ ಗಾಂಧಿ ಅವರ ವಿಚಾರದ ಅವತರಣಿಕೆ ಇಲ್ಲಿದೆ.
‘‘ಜಾಗತಿಕ ಆಪತ್ತಿನ ಬಗ್ಗೆ ವರ್ಕಿಂಗ್ ಕಮಿಟಿಯ ಹೇಳಿಕೆ, ತನ್ನ ಅಂತಿಮ ಸ್ವರೂಪ ಪಡೆಯಲು ನಾಲ್ಕು ದಿನಗಳು ಹಿಡಿದವು. ಕಮಿಟಿಯ ಆಮಂತ್ರಣದಂತೆ ಪಂಡಿತ್ ಜವಾಹರಲಾಲ್‌ರಿಂದ ರೂಪಿತವಾದ ಡ್ರಾಫ್ಟ್ ಬಗ್ಗೆ ಪ್ರತಿ ಸದಸ್ಯರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬ್ರಿಟಿಷರಿಗೆ ಕೊಡಬೇಕಾದ ಸಹಾಯ ಏನಿದ್ದರೂ, ಅದು ಷರತ್ತಿಗೊಳಪಟ್ಟಿರಬಾರದು ಎಂದು ಯೋಚಿಸುವವನು ನಾನೊಬ್ಬನೇ ಎಂದು ನನಗೆ ಖೇದವೆನಿಸಿತು. ಇದು ಕೇವಲ ಅಹಿಂಸೆಯ ಮೂಲಕವೇ ಆಗಬೇಕಿತ್ತು. ಆದರೆ ಕಮಿಟಿಗೆ ಅಗಾಧ ಜವಾಬ್ದಾರಿಯಿದೆ. ಪ್ರತಿಸ್ಪರ್ಧಿಯ ಸಂಕಟದ ಲಾಭ ಪಡೆಯುವುದು ತಿರಸ್ಕರಣೀಯ ಅನಿಸುವಂತಹ ಮಾನಸಿಕ ಸಾಮರ್ಥ್ಯ ಪ್ರಾಪ್ತವಾಗಲು ಅಗತ್ಯವಾದ ಅಹಿಂಸಾವೃತ್ತಿ ರಾಷ್ಟ್ರದಲ್ಲಿ ಇದುವರೆಗೆ ಬಿಂಬಿತವಾಗಿಲ್ಲ. ಆದರೆ ಕಮಿಟಿಯು ತೆಗೆದುಕೊಂಡ ಈ ನಿರ್ಣಯದ ಕಾರಣವನ್ನು ನಮೂದಿಸುವಲ್ಲಿ ಇಂಗ್ಲಿಷರ ಬಗ್ಗೆ ಅತಿ ಹೆಚ್ಚು ಕಾಳಜಿಯನ್ನು ಕಮಿಟಿಯು ವ್ಯಕ್ತಮಾಡಿತು.’’

‘‘ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಪಕ್ಷದಲ್ಲಿ ಜಗಳ ಕಾಯಲು ಕಾಂಗ್ರೆಸ್ ಅನುಯಾಯಿಗಳು ಸಿದ್ಧರಿರುವುದು ಖೇದದ ವಿಷಯ. ಕಮಿಟಿಯು ತೆಗೆದುಕೊಂಡ ನಿರ್ಣಯದಿಂದ ಏನಾದರೂ ಮಹತ್ವದ, ಯಥಾಯೋಗ್ಯ ಪರಿಣಾಮ ಉಂಟಾಗ ಬೇಕಾದರೆ ಪ್ರತಿಯೊಬ್ಬ ಕಾಂಗ್ರೆಸ್ ಅನುಯಾಯಿ, ಕಮಿಟಿ, ಮೇಲೆ ಅವಿಭಕ್ತ, ಅಸಂಧಿಗ್ಧ ನಿಷ್ಠೆ ತೋರುವುದು ಅವಶ್ಯಕ. ಅದೇ ರೀತಿ ಬ್ರಿಟಿಷ್ ಸರಕಾರವು ತನ್ನ ಧೋರಣೆಯನ್ನು ಸ್ಪಷ್ಟ ಪಡಿಸಬೇಕು ಮತ್ತು ಅದನ್ನು ಅನುಸರಿಸಿ, ಸದ್ಯದ ಯುದ್ಧದ ಪರಿಸ್ಥಿತಿಯಲ್ಲಿ ಶಕ್ಯವಿರುವುದನ್ನು ಮಾಡಿ ತೋರಲಿ, ಎಂದು ಕಮಿಟಿಯು ಮಂಡಿಸಿದ ಬೇಡಿಕೆಯನ್ನು ಎಲ್ಲ ರಾಜಕೀಯ ಪಕ್ಷಗಳೂ, ಜಾತಿಗಳೂ ಬೆಂಬಲ ನೀಡುವುದೆಂದು ನಾವು ಆಶಿಸುತ್ತೇವೆ.’’

‘‘ಈಗ ಅಗತ್ಯವಿರುವುದು ಬ್ರಿಟಿಷ್ ಮುತ್ಸದ್ದಿಗಳ ಮಾನಸಿಕ ಕ್ರಾಂತಿ.. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಗತ್ಯವಿರುವುದು ಯುದ್ಧದ ಆರಂಭದಲ್ಲಿ ಮಾಡಿದ ಮತ್ತು ಪುನಃ ಪುನಃ ಬ್ರಿಟಿಷ್ ವೇದಿಕೆಗಳಲ್ಲಿ ಪಠಿಸಿದ ಪ್ರಜಾಸತ್ತೆಯಲ್ಲಿನ ನಂಬಿಕೆಯನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ. ಗ್ರೇಟ್ ಬ್ರಿಟನ್, ಹಿಂದೂಸ್ಥಾನವನ್ನು ಅದರ ಇಚ್ಛೆಯ ವಿರುದ್ಧ ಯುದ್ಧ ಕ್ಷೇತ್ರಕ್ಕೆಳೆಯುವುದೇ, ಇಲ್ಲ, ನಿಜವಾದ ಪ್ರಜಾಸತ್ತೆಯ ರಕ್ಷಣೆಯ ಕೆಲಸದಲ್ಲಿ ಸ್ವಸಂತೋಷದಿಂದ ಸಹಕರಿಸುವ ಮಿತ್ರನೆಂದು ಬರಮಾಡಿಕೊಳ್ಳುವರೇ?’’

ಮೊದಲ ಮತ ನಿಶ್ಶರ್ತ ಶರ್ತ; ಏರಡನೆಯದು ಸಶರ್ತ ಶರ್ತ. ಎರಡನೇ ಮತ ಪ್ರತಿಪಾದಿಸಿದ ನಂತರ ಮೂರನೆಯದು, ಸಹಾಯ ಮಾಡಿದರೆ ಅಹಿಂಸೆಯ ತತ್ವಕ್ಕೆ ಬಾಧೆ ಬರುವುದೆಂಬ ಕಾರಣದಿಂದ ಸ್ವಲ್ಪವೂ ಸಹಾಯ ಮಾಡದಿರುವುದು. ಗಾಂಧಿ ಅವರ ಮೊದಲ ಮತ, ನಮ್ಮ ಮತದಂತೆಯೇ ಇದ್ದು, ಅದೇ ಒಳ್ಳೆಯದೆಂದು ನಮಗನಿಸುತ್ತದೆ. ಎರಡನೆಯದು ಮೊದಲಿನದಕ್ಕಿಂತ ಭಿನ್ನವಿದ್ದರೂ ಅದು ವ್ಯಾವಹಾರಿಕವಾಗಿದೆ ಎಂಬುದು ನಮಗೆ ಒಪ್ಪಿಗೆ. ಆದರೆ ಮೂರನೆಯದು ಮಾತ್ರ ಬರೀ ಮೂರ್ಖತನದ್ದಾಗಿದೆ. ಯುದ್ಧದ ವಿಷಯದಲ್ಲಿ ನನ್ನ ಭೂಮಿಕೆಯನ್ನು ನಾನು ಸ್ಪಷ್ಟಪಡಿಸಿದ್ದೇನೆ. ನಿರ್ಧಾರ ಡೋಲಾಯಮಾನವಾಗಿದ್ದಕ್ಕಿಂತ ಈ ದೇಶದ ಜನರು ಯುದ್ಧದಲ್ಲಿ ಇಂಗ್ಲಿಷರಿಗೆ ಸಹಾಯ ಮಾಡುವುದು ಒಳ್ಳೆಯದು. ಅದು ಅಪ್ರಾಮಾಣಿಕ ವಿಚಾರವೆಂದು ಯಾರಾದರೂ ಹೇಳಿದರೆ ಹೇಳಲಿ. ನಮ್ಮ ಈ ವಿಚಾರವೇ 1914ರಲ್ಲಿ ಗಾಂಧಿ ಅವರದೂ ಆಗಿತ್ತು, ಎನ್ನುವೆ. ನಾನು ನನ್ನ ಭೂಮಿಕೆ ಬದಲಿಸುವಂತಹ ತಪ್ಪೇನೂ ಬ್ರಿಟಿಷರಿಂದ ಆಗಿಲ್ಲ. ನಾಯಕರೆನಿಸಿಕೊಂಡವರು ವಿನಾಕಾರಣ ತಮ್ಮ ವಿಚಾರ ಬದಲಿಸುತ್ತಿದ್ದರೆ ಇಂತಹುದನ್ನು ಕಿತ್ತೊಗೆಯುವುದು ನಮ್ಮ ಕರ್ತವ್ಯವೇ ಆಗಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)