varthabharthi

ಸಂಪಾದಕೀಯ

ಕೇಂದ್ರದ ಸಣ್ಣತನದ ಮುಂದೆ ಯುಎಇ ಹೃದಯವಂತಿಕೆ

ವಾರ್ತಾ ಭಾರತಿ : 25 Aug, 2018

ಯಾವುದೇ ಒಂದು ದೇಶ ಇನ್ನೊಂದು ದೇಶದ ಸ್ನೇಹ ಹಸ್ತದ ಬಲವಿಲ್ಲದೆ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಭಾರತ ಸ್ವತಂತ್ರಗೊಂಡಾಗ ಅದನ್ನು ಆಧುನಿಕಗೊಳಿಸುವುದಕ್ಕಾಗಿ ಕೈಚಾಚಿದ ಹತ್ತು ಹಲವು ಮಿತ್ರದೇಶಗಳನ್ನು ನಾವು ಈ ಸಂದರ್ಭದಲ್ಲಿ ನೆನೆದುಕೊಳ್ಳಬೇಕಾಗಿದೆ. ಅವುಗಳು ನಮ್ಮ ಜೊತೆಗೆ ಬಲವಾಗಿ ನಿಲ್ಲದೇ ಇದ್ದಿದ್ದರೆ, ಭಾರತ ವಿಶ್ವದಲ್ಲಿ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಿರುತ್ತಿರಲಿಲ್ಲ. ಹಾಗೆಯೇ ಭಾರತವೂ ನೆರೆಹೊರೆಯ ಸಂಕಟಗಳಿಗೆ ಸ್ಪಂದಿಸಿದೆ. ಆಪತ್ಕಾಲದಲ್ಲಿ ತನ್ನಿಂದಾದಷ್ಟು ನೆರವನ್ನು ನೀಡಿದೆ. ಸಂಕಷ್ಟ ಸಮಯದಲ್ಲಿ ದೇಶಗಳು ಪರಸ್ಪರ ಸ್ನೇಹ ಸಹಕಾರಗಳನ್ನು ಹಂಚಿಕೊಳ್ಳುವುದು ಯಾವ ಕಾರಣಕ್ಕೂ ಕೀಳರಿಮೆ ಪಡಬೇಕಾದ ವಿಷಯವಲ್ಲ. ಒಂದು ವೇಳೆ, ಕಾನೂನು ರೀತಿಯಲ್ಲಿ ಒಂದು ದೇಶದ ನೆರವನ್ನು ಸ್ವೀಕರಿಸಲು ಸಾಧ್ಯವಿಲ್ಲದೇ ಹೋದರೂ, ನೆರವು ನೀಡಲು ಮುಂದಾದ ಆ ದೇಶಕ್ಕೆ ತನ್ನ ಪ್ರೀತಿಯನ್ನು, ಕೃತಜ್ಞತೆಯನ್ನು ಅರ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಕೇರಳದಲ್ಲಿ ಸಂಭವಿಸಿದ ನೆರೆ ಹಾನಿ ವಿಶ್ವದ ಗಮನ ಸೆಳೆದಿದೆ. ಸಹಜವಾಗಿಯೇ ಈ ದುರಂತಕ್ಕೆ ಹಲವು ದೇಶಗಳು ಸ್ಪಂದಿಸಿವೆ. ತಮ್ಮ ಸಹಾಯ ಹಸ್ತವನ್ನು ಚಾಚಿವೆ. ಜೊತೆಗೆ ಸಾಂತ್ವನಗಳನ್ನೂ ಹೇಳಿವೆ. ಇದೇ ಸಂದರ್ಭದಲ್ಲಿ ಯುಎಇ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಕೇರಳವನ್ನು ಪುನರ್ನಿಮಿಸಲು ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ಒಂದು ಹಂತದಲ್ಲಿ ಅದು 700 ಕೋಟಿ ರೂ.ಯನ್ನು ನೀಡಲು ನಿರ್ಧರಿಸಿತ್ತು. ಆದರೆ ಪ್ರಸ್ತಾವ ಇನ್ನೂ ಅಂತಿಮವಾಗಿಲ್ಲ ಎಂದೂ ಯುಎಇ ವಕ್ತಾರರು ತಿಳಿಸಿದ್ದಾರೆ. ತನ್ನ ನಿಲುವಿನಲ್ಲಿ ಅದು ಎಷ್ಟು ಪ್ರಾಮಾಣಿಕವಾಗಿದೆಯೆಂದರೆ, ಅರ್ಹ ಫಲಾನುಭವಿಗಳನ್ನು ಖಾತರಿ ಪಡಿಸಲು ಒಂದು ಸಮಿತಿಯನ್ನೂ ರಚಿಸಿದೆ. ಪರಿಹಾರವನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತದ ವಿದೇಶ ವ್ಯವಹಾರ ಸಚಿವಾಲಯದ ಜೊತೆಗೆ ಸೇರಿ ಕಾರ್ಯ ನಿರ್ವಹಿಸುವ ಭರವಸೆಯನ್ನೂ ನೀಡಿದೆ.

ಯುಎಇ ಇಂತಹದೊಂದು ನೆರವಿನ ಘೋಷಣೆ ಮಾಡಿದಾಗ, ಅದನ್ನು ಸ್ವೀಕರಿಸಲು ಭಾರತಕ್ಕೆ ಸಾಧ್ಯವೋ, ಅಸಾಧ್ಯವೋ, ಆದರೆ ಕನಿಷ್ಠ ಆ ದೇಶದ ಹೃದಯವಂತಿಕೆಗೆ ಕೃತಜ್ಞತೆ ಹೇಳುವುದು ಭಾರತದ ಕರ್ತವ್ಯವಾಗಿತ್ತು. ಈಗಾಗಲೇ ಕೊಲ್ಲಿ ರಾಷ್ಟ್ರಗಳ ಜೊತೆಗೆ ಭಾರತ ಹತ್ತು ಹಲವು ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಮೂಲಕ ಸ್ನೇಹ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸಿದೆ. ಯುಎಇ ನೀಡಿರುವ ನೆರವು ಆ ಸಂಬಂಧ ಸುಧಾರಣೆಯ ಇನ್ನೊಂದು ಭಾಗವೆಂದು ನಾವು ಹೃದಯವೈಶಾಲ್ಯದಿಂದ ಸ್ವೀಕರಿಸಬೇಕಾಗಿತ್ತು. ಆದರೆ ಭಾರತದ ಕೆಲವು ಕ್ಷುದ್ರ ಮನಸ್ಸುಗಳು ಆ ಪರಿಹಾರದಲ್ಲೂ ಹುಳುಕನ್ನು ಹುಡುಕುವುದಕ್ಕೆ ಪ್ರಯತ್ನಿಸಿದವು. ಕೊಲ್ಲಿ ರಾಷ್ಟ್ರದಿಂದ ಕೇರಳ ಪರಿಹಾರವನ್ನು ಸ್ವೀಕರಿಸಿದರೆ ಅದು ಭಾರತಕ್ಕೆ ಅವಮಾನ ಎಂದು ರಾಜಕೀಯ ಪಕ್ಷಗಳ ನಾಯಕರು ವಾದವನ್ನು ಮಂಡಿಸತೊಡಗಿದ್ದಾರೆ. ಕೇರಳದಲ್ಲಿ ಸಂಭವಿಸಿರುವ ದುರಂತದ ಗಾತ್ರವೇನು ಎನ್ನುವುದನ್ನು ಸ್ವತಃ ಪ್ರಧಾನಿ ಮಂತ್ರಿಯವರೇ ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ. ಅಲ್ಲಿಯ ಸ್ಥಿತಿಗತಿಗಳನ್ನು ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಲೇ ಇವೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 20 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ಮೊತ್ತ ರಾಜ್ಯದ 2018-19ರ ಬಜೆಟ್‌ಗೆ ಸಮಾನವಾಗಿದೆ ಎಂದು ಅಲ್ಲಿನ ಸರಕಾರ ಹೇಳಿದೆ.

ಕೇರಳವನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವುದಕ್ಕೆ ಹೂಡಬೇಕಾದ ಹಣವನ್ನು, ಇದೀಗ ಪುನರ್ ನಿರ್ಮಿಸುವುದಕ್ಕಾಗಿ ಹೂಡಬೇಕಾಗಿದೆ. ಕೇಂದ್ರ ಸರಕಾರ ಈ ಹಿಂದೆ ಗುಜರಾತ್, ಉತ್ತರಾಖಂಡಕ್ಕೆ ಸ್ಪಂದಿಸಿದಷ್ಟು ವೇಗವಾಗಿ ಕೇರಳದ ವಿಕೋಪಕ್ಕೆ ಸ್ಪಂದಿಸಿಲ್ಲ. ಆರಂಭದಲ್ಲಿ ಅದು ಘೋಷಿಸಿದ್ದು 100 ಕೋಟಿ ರೂ. ಇದಾದ ಬಳಿಕ 500 ಕೋಟಿ ರೂ.ಅಂದರೆ, ಒಟ್ಟು 600 ಕೋಟಿ ರೂ.ಯನ್ನು ಅದು ಘೋಷಿಸಿದೆ. ಕೇಂದ್ರ ಸರಕಾರ ತೀವ್ರವಾಗಿ ಸ್ಪಂದಿಸುತ್ತಿಲ್ಲ ಎಂದು ಕೇರಳದ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ, ಆಶಾ ಕಿರಣದ ರೂಪದಲ್ಲಿ, ಯುಎಇ 700 ಕೋಟಿ ರೂಪಾಯಿಯ ನೆರವಿನ ಪ್ರಸ್ತಾವವನ್ನು ನೀಡಿತು. ಒಂದು ಮೂಲದ ಪ್ರಕಾರ, ಇದೊಂದು ಅಧಿಕೃತ ಪ್ರಕಟನೆಯೇ ಆಗಿತ್ತು. ಆದರೆ ಯಾವಾಗ, ಈ ನೆರವಿನ ಕುರಿತಂತೆ ಭಾರತದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಯಿತೋ ಆಗ ಯುಎಇ ಸರಕಾರ ಉಭಯ ದೇಶಗಳ ಸಂಬಂಧದ ಹಿತದೃಷ್ಟಿಯಿಂದ, ಪ್ರಸ್ತಾವ ಇನ್ನೂ ನಿರ್ಧಾರವಾಗಿಲ್ಲ ಎಂಬ ಹೇಳಿಕೆಯನ್ನು ನೀಡಿತು. ಯುಎಇ ನೆರವಿನ ತಿರಸ್ಕಾರಕ್ಕೆ ಕೇಂದ್ರ ಸರಕಾರ ತನ್ನದೇ ಆದ ಸಮರ್ಥನೆಗಳನ್ನು ಮುಂದಿಟ್ಟಿದೆ. ನಿಯಮಗಳ ಪ್ರಕಾರ, ವಿದೇಶಿ ಸರಕಾರಗಳ ಆರ್ಥಿಕ ಸಹಾಯವನ್ನು ಸ್ವೀಕರಿಸುವಂತಿಲ್ಲ, ಆದರೆ ಸರಕಾರೇತರ ಪ್ರತಿಷ್ಠಾನಗಳು ನೀಡುವ ನೆರವನ್ನು ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ವಿದೇಶಿ ನೆರವನ್ನು ನಿರಾಕರಿಸುವ ನೀತಿಯನ್ನು ಹದಿನೈದು ವರ್ಷಗಳ ಹಿಂದೆ ಭಾರತ ಅಳವಡಿಸಿಕೊಂಡಿತ್ತು.

2001ರಲ್ಲಿ ಸಂಭವಿಸಿದ ಗುಜರಾತ್ ಭೂಕಂಪ ಮತ್ತು 2004ರಲ್ಲಿ ಉಂಟಾದ ಸುನಾಮಿಯ ಸಂದರ್ಭದಲ್ಲಿಯೂ ವಿದೇಶಿ ನೆರವನ್ನು ಪಡೆದುಕೊಂಡಿರಲಿಲ್ಲ. ಹಾಗಾಗಿ ಈಗಲೂ ಅದೇ ನೀತಿಗೆ ಬದ್ಧವಾಗಿರಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಒಂದು ರಾಜ್ಯ ನೋಡನೋಡುತ್ತಿದ್ದಂತೆಯೇ ಸರ್ವನಾಶವಾಗುತ್ತಿರುವಾಗ ಮತ್ತು ಅದನ್ನು ಪುನರ್ನಿಮಿಸುವಲ್ಲಿ ನಮ್ಮದೇ ಸರಕಾರ ಸೂಕ್ತವಾಗಿ ಸ್ಪಂದಿಸಲು ವಿಫಲವಾದಾಗ, ಹಿಂದಿನ ನಿಯಮಗಳನ್ನು ಮುಂದಿಟ್ಟುಕೊಂಡು, ನೆರವನ್ನು ತಡೆಯುವುದು ಒಂದು ರೀತಿಯಲ್ಲಿ, ಕೇರಳಕ್ಕೆ ನಮ್ಮ ಸರಕಾರವೇ ಅಘೋಷಿತ ದಿಗ್ಬಂಧನವನ್ನು ವಿಧಿಸಿದಂತೆ. ಕೇಂದ್ರ ಸರಕಾರ ಘೋಷಿಸಿದ ಹಣಕ್ಕಿಂತಲೂ ಹೆಚ್ಚುವರಿ ಹಣವನ್ನು ಯುಎಇ ಘೋಷಿಸಿರುವುದು ಮತ್ತು ಅದು ಕೇರಳದ ಜನರ ಕುರಿತಂತೆ ವ್ಯಕ್ತಪಡಿಸಿದ ಪ್ರೀತಿ ಅಭಿಮಾನ ಮೋದಿ ಸರಕಾರವನ್ನು ಮುಜುಗರಕ್ಕೆ ತಳ್ಳಿದೆ. ಈ ಮುಜುಗರವೇ, ಸದ್ಯಕ್ಕೆ ಹಣ ಸ್ವೀಕರಿಸುವುದಕ್ಕೆ ಕೇಂದ್ರದ ಮುಂದಿರುವ ಅತಿ ದೊಡ್ಡ ತಡೆಯಾಗಿದೆ. ಯುಎಇ ಮಾತ್ರವಲ್ಲ, ಇನ್ನೂ ಹಲವು ದೇಶಗಳು ನೀಡುತ್ತಿರುವ ನೆರವನ್ನು ಸರಕಾರ ತಿರಸ್ಕರಿಸಿದೆ. ಇದನ್ನು ‘ಸ್ವಾಭಿಮಾನ’ ‘ಆತ್ಮಾಭಿಮಾನ’ ಎಂಬೆಲ್ಲ ವ್ಯಾಖ್ಯಾನದ ಜೊತೆಗೆ ಸಮರ್ಥಿಸಲು ಮೋದಿ ಅಭಿಮಾನಿಗಳು ಮುಂದಾಗಿದ್ದಾರೆ. ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಜಪಾನ್‌ನಿಂದ ಕೋಟ್ಯಂತರ ರೂಪಾಯಿ ಸಾಲವನ್ನು ಪಡೆದು ಈ ದೇಶಕ್ಕೆ ಅಗತ್ಯವೇ ಇಲ್ಲದ ‘ಬುಲೆಟ್ ಟ್ರೇನ್’ನ್ನು ಒದಗಿಸಲು ಸರಕಾರ ಮುಂದಾಗಿದೆ. ಈ ಸಾಲ ಮುಂದಿನ ದಿನಗಳಲ್ಲಿ ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶವೇ ಆಗಿದೆ. ಸರಿ, ವಿದೇಶಗಳಿಂದ ನೆರವನ್ನು ಪಡೆಯುವುದು ಬೇಡವೆಂದಾದಲ್ಲಿ ಅದನ್ನು ಒಪ್ಪಿಕೊಳ್ಳಲು ಜನರು ಸಿದ್ಧರಿದ್ದಾರೆ. ಇದೇ ಸಂದರ್ಭದಲ್ಲಿ ಶಿವಾಜಿ ಪಾರ್ಕ್, ವಲಭಭಾಯಿ ಪಟೇಲ್ ಪ್ರತಿಮೆಯಂತಹ ಅನಗತ್ಯ ಯೋಜನೆಗಳಿಗೆ ಸುರಿದಿರುವ ಸಾವಿರಾರು ಕೋಟಿ ಹಣವನ್ನು ಕೇರಳದ ಕಡೆಗೆ ತಿರುಗಿಸಲಿ. ಪ್ರತಿಮೆಗಿಂತಲೂ ಮುಖ್ಯ ಈ ದೇಶದ ಜನರು ಎನ್ನುವುದನ್ನು ಆ ಮೂಲಕ ಘೋಷಿಸಲಿ. ಆಗ, ಸರಕಾರದ ನಿಲುವನ್ನು ನಾವು ಸ್ವಾಗತಿಸಬಹುದಾಗಿದೆ.

 ಒಂದೆಡೆ, ಆರೆಸ್ಸೆಸ್‌ನಂತಹ ಸಂಘಟನೆಗಳು ತಮ್ಮ ಅಕ್ರಮ ಚಟುವಟಿಕೆಗಳಿಗಾಗಿ ಅನಿವಾಸಿಗಳಿಂದ ಕೋಟ್ಯಂತರ ಹಣವನ್ನು ಪಡೆಯುತ್ತಿರುವಾಗ ಅದರ ಕಡೆಗೆ ಸರಕಾರ ಕುರುಡಾಗಿದೆ. ಇನ್ನೊಂದೆಡೆ ಬದುಕು ಕಟ್ಟಿಕೊಳ್ಳಲು ಕೇರಳದ ಜನರು ಹಾಹಾಕಾರ ಎಬ್ಬಿಸುತ್ತಿದ್ದರೆ, ಸರಕಾರಕ್ಕೆ ಆತ್ಮಾಭಿಮಾನ ಮತ್ತು ಕಾನೂನಿನ ನೆನಪಾಗಿದೆ. ಇಷ್ಟಕ್ಕೂ ಯುಎಇ 700 ಕೋಟಿ ರೂ.ಯನ್ನು ಸುಮ್ಮನೆ ಕೊಟ್ಟಿಲ್ಲ. ಆ ದೇಶವನ್ನು ಕಟ್ಟುವಲ್ಲಿ ಕೇರಳದ ಜನರು ವಹಿಸಿದ ಪಾತ್ರವನ್ನು ಸ್ಮರಿಸಿ ಕೃತಜ್ಞತಾ ಪೂರ್ವಕವಾಗಿ ನೆರವನ್ನು ಘೋಷಿಸಿದೆ. ಇಂತಹ ಹೃದಯವಂತಿಕೆಯಿಂದ ಪರಸ್ಪರ ದೇಶಗಳ ನಡುವೆ ಸಂಬಂಧ ಇನ್ನಷ್ಟು ಸುಧಾರಣೆಯಾಗುತ್ತದೆ. ಯುಎಇ ಹಣವನ್ನು ನಿರಾಕರಿಸುವ ಮೂಲಕ ಕೇಂದ್ರ ಸರಕಾರ, ತನ್ನ ಸಣ್ಣತನವನ್ನು ವಿಶ್ವದ ಮುಂದೆ ಪ್ರದರ್ಶಿಸಿದಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)