varthabharthi

ನೇಸರ ನೋಡು

ಶಾಂತಿ ಮಂತ್ರದ ಪತ್ರಕರ್ತನ ಮುಗಿದ ಅಧ್ಯಾಯ

ವಾರ್ತಾ ಭಾರತಿ : 26 Aug, 2018
ಜಿ.ಎನ್.ರಂಗನಾಥ ರಾವ್

 ಕುಲದೀಪ್ ನಯ್ಯರ್ ಪತ್ರಕರ್ತರಷ್ಟೇ ಆಗಿರಲಿಲ್ಲ. ವ್ಯಾಖ್ಯಾನಕಾರ, ಗ್ರಂಥಕರ್ತ, ಶಾಂತಿ ಮತ್ತು ಮಾನವ ಹಕ್ಕುಗಳ ಕ್ರಿಯಾವಾದಿ ಹೋರಾಟಗಾರ, ರಾಜತಂತ್ರಜ್ಞ ಮತ್ತು ಸಂಸದೀಯ ಪಟು ಇವೆಲ್ಲವೂ ಆಗಿದ್ದರು. ಸ್ವಾತಂತ್ರೋತ್ತರ ಭಾರತೀಯ ಪತ್ರಿಕೋದ್ಯಮದಲ್ಲಿ ಪತ್ರಿಕಾ ಧರ್ಮ ಎತ್ತಿಹಿಡಿದ ಧ್ಯೇಯನಿಷ್ಠ ಪತ್ರಕರ್ತರಾಗಿ ಖ್ಯಾತಿವೆತ್ತರಾದಂತೆಯೇ ಶಾಂತಿ ಮತ್ತು ಮಾನವಹಕ್ಕುಗಳ ಕ್ರಿಯಾವಾದಿಯಾಗಿಯೂ ಅವರ ಕೊಡುಗೆ ಗಣನೀಯವಾದುದು. ಶಾಂತಿ ಕ್ರಿಯಾವಾದಿಯಾಗಿ ಅವರು ಪಾಕಿಸ್ತಾನದೊಂದಿಗೆ ಶಾಂತಿ ಮತ್ತು ಮಧುರ ಬಾಂಧವ್ಯಕ್ಕಾಗಿ ಅವಿರತವಾಗಿ ಶ್ರಮಿಸಿದರು.


ಉಭಯ ರಾಷ್ಟ್ರಗಳ ಜನರು ಪ್ರೀತಿ, ಸ್ನೇಹ, ಸೌಹಾರ್ದಗಳಿಂದ ಬದುಕಲು ಬಯಸುತ್ತಾರೆ. ಆದರೆ ನಡುವೆ ಸರಕಾರದ ಅಡ್ಡಗೋಡೆಯೊಂದು ಅವರನ್ನು ಬೇರ್ಪಡಿಸಿದೆ. ಈ ಗೋಡೆ ಚಾಚಿರುವ ಕರಾಳ ನೆರಳು ಹೋಗಬೇಕು, ಅಲ್ಲಿ ಮಧುರ ಬಾಂಧವ್ಯದ ಬೆಳಕು ಮೂಡಬೇಕು ಎಂದು ತಮ್ಮ ಜೀವಮಾನವನ್ನು ಇದಕ್ಕಾಗಿ ಮುಡುಪಿಟ್ಟವರು 23ರಂದು ಗುರುವಾರ ತೊಂಬತ್ತೈದರ ಇಳಿವಯಸ್ಸಿನಲ್ಲಿ ಇನ್ನಿಲ್ಲವಾದ ಧೀಮಂತ ಪತ್ರಕರ್ತ ಕುಲದೀಪ್ ನಯ್ಯರ್.

ಸ್ವಾತಂತ್ರ್ಯೋತ್ತರ ಭಾರತೀಯ ಪತ್ರಿಕೋದ್ಯಮದ ಧ್ಯೇಯನಿಷ್ಠ ಹೋರಾಟಗಾರ ಪತ್ರಕರ್ತರೆಂದೇ ಖ್ಯಾತರಾದ ಕುಲದೀಪ್ ನಯ್ಯರ್ ಜನಿಸಿದ್ದು 1923ರಲ್ಲಿ, ಈಗ ಪಾಕಿಸ್ತಾನದ ಭಾಗವಾಗಿರುವ ಸಿಯಾಲ್‌ಕೋಟೆಯಲ್ಲಿ. ಲಾಹೋರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿ ಬಿ.ಎ. ಮತ್ತು ಎಲ್.ಎಲ್.ಬಿ. ಪದವಿಗಳನ್ನು ಪಡೆದ ನಯ್ಯರ್ ಅವರು ಭವ್ಯ ಭವಿಷ್ಯದ ಹೊಸ್ತಿಲಿಗೆ ಬಂದು ನಿಂತಾಗ ಬರಸಿಡಿಲಿನಂತೆ ಎರಗಿದ್ದು ಭಾರತ-ಪಾಕಿಸ್ತಾನ ವಿಭಜನೆ. 1947ರ ಆಗಸ್ಟ್ 12ರಂದು, ಭಾರತದ ಸ್ವಾತಂತ್ರ್ಯಕ್ಕೆ ಮೂರುದಿನ ಮೊದಲು ನಯ್ಯರ್ ಅವರ ತಂದೆ ತಮ್ಮ ಮೂವರು ಮಕ್ಕಳನ್ನು ಕೇಳುತ್ತಾರೆ-‘‘ನಿಮ್ಮ ದಾರಿ ಎತ್ತ?’’. ಕುಲದೀಪ್ ಹೇಳುತ್ತಾರೆ, ‘‘ನಾನು ಪಾಕಿಸ್ತಾನದಲ್ಲೇ ಉಳಿಯುತ್ತೇನೆ.’’ ಅಮೃತಸರದಲ್ಲಿ ಮೆಡಿಕಲ್ ಓದುತ್ತಿರುವ ಅಣ್ಣ ಹೇಳುತ್ತಾನೆ: ‘‘ಮನೆಖಾಲಿ ಮಾಡುವಂತೆ ಮುಸ್ಲಿಮರು ಪಶ್ಚಿಮ ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಹೇಳುತ್ತಾರೆ.’’ ‘‘ಹಿಂದೂಗಳು ಹೋಗಲ್ಲ ಎಂದರೆ ಏನುಮಾಡುತ್ತಾರೆ?’’ ಕುಲದೀಪ್ ಪ್ರಶ್ನೆ.ಒತ್ತಾಯದಿಂದ ಹೊರಹಾಕುತ್ತಾರೆ ಎಂಬುದು ಅಣ್ಣನ ಉತ್ತರ.ಇದು ನಿಜವಾಗುತ್ತದೆ. ಕುಲದೀಪ್ ನಯ್ಯರ್ ಕುಟುಂಬ ಚದುರುವುದು ಅನಿವಾರ್ಯವಾಗತ್ತದೆ. ಒಂದು ಷರಟು-ಒಂದು ಪ್ಯಾಂಟು ಹಿಡಿದು ತಂದೆ ಕೂಡಿಸಿದ ಕಾರಿನಲ್ಲಿ ಕುಲದೀಪ್ ನಯ್ಯರ್ ದಿಲ್ಲಿಯ ದರಿಯಾಗಂಜ್‌ನಲ್ಲಿರುವ ಸೋದರಮಾವನ ಮನೆ ಸೇರುತ್ತಾರೆ. ಸಯಾಲ್‌ಕೋಟೆಯಿಂದ ದಿಲ್ಲಿ ಮುಟ್ಟುವವರೆಗೆ ಮಾರ್ಗಮಧ್ಯೆ ನಯ್ಯರ್ ಕಾಣುವುದು ಭಾರತದತ್ತ ಹೊರಟ ಹಿಂದೂಗಳು ಮತ್ತು ಪಾಕಿಸ್ತಾನದತ್ತ ಹೊರಟ ಮುಸ್ಲಿಮರ ‘ಜೀವನಯಾತ್ರೆ’ಯನ್ನು. ದಾರಿಯಲ್ಲಿ ಸಿಖ್ ವೃದ್ಧನೊಬ್ಬ ಇವರ ಕಾರನ್ನು ನಿಲ್ಲಿಸಿ ಈ ಮಗುವನ್ನು ಹೇಗಾದರೂ ದಿಲ್ಲಿ ಮುಟ್ಟಿಸಿ ಉಳಿದಿರುವ(ಕೋಮು ದಳ್ಳುರಿಯಿಂದ) ಈ ಮೊಮ್ಮಗನಾದರೂ ಬದುಕಿಕೊಳ್ಳಲಿ ಎಂದು. ತಮ್ಮ ಭವಿಷ್ಯವೇ ಖಾತ್ರಿ ಇಲ್ಲದಿರುವಾಗ ಆ ಮಗುವಿನ ಪೋಷಣೆ ಹೇಗೆ ಸಾಧ್ಯವಾದೀತು? ಅಂದೇ ಕುಲದೀಪ್ ನಯ್ಯರ್ ಭಾರತ-ಪಾಕಿಸ್ತಾನಗಳ ನಡುವೆ ಮಧುರ ಬಾಂಧವ್ಯ ಉಂಟುಮಾಡುವ ಸಂಕಲ್ಪ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪತ್ರಕರ್ತರಾಗಿ ನಯ್ಯರ್ ಜೀವಮಾನವಿಡೀ ನಡೆಸಿದ ಪ್ರಯತ್ನಗಳಲ್ಲಿ ಒಂದು, ವಾಘಾ ಗಡಿಯಲ್ಲಿ ಮೇಣದಬತ್ತಿ ಬೆಳಗುವ ಕಾರ್ಯಕ್ರಮ.

ಆಗಸ್ಟ್ 14 ನಯ್ಯರ್ ಅವರ ಹುಟ್ಟುಹಬ್ಬದ ದಿನ. ಅದೇ ಆ.14 ಪಾಕಿಸ್ತಾನದ ಸ್ವಾತಂತ್ರ್ಯದ ದಿನ. ಅಂದು ಈ ‘ಬಾಂಧವ್ಯದ ಬೆಳಕು’ ಕಾರ್ಯಕ್ರಮವನ್ನು ಕುಲದೀಪ್ ನಯ್ಯರ್ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪ್ರಾರಂಭಿಸಿದರು. ವಾಘಾ ಗಡಿಯಲ್ಲಿ ಮೇಣದ ಬತ್ತಿಹೊತ್ತಿಸಿ ಆ ಬೆಳಕಿನಲ್ಲಿ ಮಧುರಬಾಂಧವ್ಯ ಅರಸುವ ಕಾರ್ಯಕ್ರಮವನ್ನು ನಯ್ಯರ್ ಪ್ರತಿವರ್ಷ ನಡೆಸಿಕೊಂಡು ಬಂದಿದ್ದರು. ಮೊದಲವರ್ಷ ಹತ್ತಿಪ್ಪತ್ತು ಗೆಳೆಯರೊಂದಿಗೆ ಸಣ್ಣದಾಗಿ ಶುರುವಾದ ಈ ಕಾರ್ಯಕ್ರಮಕ್ಕೆ ಉಭಯ ರಾಷ್ಟ್ರಗಳ ಜನತೆಯಿಂದ ದೊರೆತ ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು.ಬರಬರುತ್ತ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಲಕ್ಷ ದಾಟಿತು. ‘‘ಜನರ ಉತ್ಸಾಹಕ್ಕೆ ಗಡಿಯ ಬಂಧನಗಳಿಲ್ಲ. ಆದರೆ ಸರಕಾರಗಳು ಗಡಿಯಲ್ಲಿ ಅಡ್ಡವಾಗಿ ನಿಂತಿವೆ’’ ಎಂದು ಈ ವರ್ಷದ ಕಾರ್ಯಕ್ರಮದ ನಂತರ ಬರೆದ ತಮ್ಮ ಕೊನೆಯ ಲೇಖನದಲ್ಲಿ ನಯ್ಯರ್ ವಿಷಾದ ವ್ಯಕ್ತಪಡಿಸಿದ್ದಾರೆ. ವಿಭಜನೆಯ ಕೂಸಾಗಿ ದಿಲ್ಲಿ ತಲುಪಿದ ನಯ್ಯರ್ ಅವರ ಪತ್ರಿಕಾ ವ್ಯವಸಾಯ ಶುರುವಾದದ್ದು ‘ಅಂಜಾಮ್’ ಉರ್ದು ಪತ್ರಿಕೆಯಲ್ಲಿ. ಅಲ್ಲಿಂದ ಯು.ಎನ್.ಐ. ವಾರ್ತಾ ಸಂಸ್ಥೆಗೆ. ನಂತರ ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ಜಿಗಿದು ವೃತ್ತಿಯ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡ ನಯ್ಯರ್ ‘ದಿ ಸ್ಟೇಟ್ಸ್‌ಮನ್’ ಪತ್ರಿಕೆಯ ಸಂಪಾದಕರಾದರು. ಮುಂದೆ ‘ಇಂಡಿಯನ್ ಎಕ್ಸ್‌ಪ್ರೆಸ್’ ಕೈ ಮಾಡಿ ಕರೆಯಿತು. ವೃತ್ತಿಜೀವನದುದ್ದಕ್ಕೂ ನಯ್ಯರ್ ಅವರದು ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರವೇ. ನಯ್ಯರ್ ರಾಜಕಾರಣಿಗಳು ಮತ್ತು ರಾಜಕೀಯ ನೀತಿಕಾರರಿಗೆ ಸಿಂಹಸ್ವಪ್ನವಾಗಿದ್ದರು.

ಜನಸಾಮಾನ್ಯರ ಹಿತರಕ್ಷಣೆ, ಜನಸೇವೆ ನಯ್ಯರ್ ಅವರ ಪತ್ರಿಕಾ ವ್ಯವಸಾಯದ ಪರಮ ಧ್ಯೇಯವಾಗಿತ್ತು. ಭಾರತೀಯ ರಾಜಕಾರಣದ ವಸ್ತುನಿಷ್ಠ ವರದಿಗಾರಿಕೆ ಮತ್ತು ವಿಶ್ಲೇಷಣೆಯಲ್ಲಿ ನಂಬಿಕಸ್ಥ ಪತ್ರಕರ್ತರೆಂದೇ ಖ್ಯಾತರಾಗಿದ್ದ ಅವರು ಲಂಡನ್ನಿನ ‘ದಿ ಟೈಮ್ಸ್’ ಪತ್ರಿಕೆಗೂ ಬರೆಯುತ್ತಿದ್ದರು.‘ಬಿಟ್ವೀನ್ ದಿ ಲೈನ್ಸ್’ ಅವರ ಜನಪ್ರಿಯ ಅಂಕಣವಾಗಿತ್ತು. ಸುಮಾರು ಹದಿನಾಲ್ಕು ಭಾಷೆಗಳಲ್ಲಿ, ಎಂಬತ್ತಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಈ ಅಂಕಣ ಅವರನ್ನು ದೇಶವಿದೇಶಗಳಲ್ಲಿ ಲಕ್ಷಾಂತರ ಓದುಗರ ಮನೆಮಾತಾಗಿಸಿತ್ತು. ಪಾಕಿಸ್ತಾನದೊಂದಿಗಿನ ಯುದ್ಧಗಳು, ರಕ್ಷಣಾ ವಿಷಯ-ವಿಚಾರಗಳು, ತುರ್ತುಪರಿಸ್ಥಿತಿಯ ಹಿಂದುಮುಂದುಗಳು, ಇಂಥ ಸಂಕೀರ್ಣ ವಿಷಯ-ವಿದ್ಯಮಾನಗಳನ್ನು ಹತ್ತಿರದಿಂದ ಕಂಡು ವರದಿಮಾಡಿದ ಕೀರ್ತಿ ಅವರದು. ರಾಜಕಾರಣಿಗಳೊಂದಿಗೆ ‘ಹತ್ತಿರ-ದೂರದ’ ವಿಶಿಷ್ಟ ವಿನಯ ಸಂಬಂಧ ಹೊಂದಿದ್ದ ನಯ್ಯರ್ ಅವರು ನೆಹರೂ, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾಗಾಧಿಯವರ ಸರಕಾರಗಳನ್ನು ನಿಕಟ ಸಾಮಿಪ್ಯದಿಂದ ಅವಲೋಕಿಸಿ ಅವುಗಳ ಧನಾತ್ಮಕ-ಋಣಾತ್ಮಕ ಅಂಶಗಳನ್ನು ತಮ್ಮ ವರದಿಗಳಲ್ಲಿ, ವಿಶೇಷ ಲೇಖನಗಳಲ್ಲಿ ಬಹಿರಂಗ ಪಡಿಸುತ್ತಿದ್ದರು. ನಾವು ಪತ್ರಿಕಾ ಭಾಷೆಯಲ್ಲಿ ‘ಸ್ಕೂಪ್ ನ್ಯೂಸ್’ಎಂದು ಕರೆಯುವ, ಪ್ರತಿಸ್ಪರ್ಧಿ ಪತ್ರಿಕೆಗಳಿಗೆ ಮುಂಚೆ ಪ್ರಕಟಿಸುವ ರೋಮಾಂಚಕಾರಿ ಸುದ್ದಿ, ವಿಶೇಷ ವರದಿಗಳಿಗೆ ಖ್ಯಾತರಾಗಿದ್ದ ಅವರು,‘ಸ್ಕೂಪ್ ಸರದಾರ’ ಎಂದೇ ಪತ್ರಕರ್ತರ ಬಳಗದ ಅಭಿಮಾನಕ್ಕೆ ಪಾತ್ರರಾಗಿದ್ದರು. ತುರ್ತುಪರಿಸ್ಥಿತಿಯಲ್ಲಿ ಅವರನ್ನು ಸೆರೆಮನೆಗೆ ಕಳುಹಿಸಿದ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿ ರದ್ದುಗೊಳಿಸಿ ಚುನಾವಣೆ ನಡೆಸುವ ನಿರ್ಧಾರ ಕೈಗೊಂಡಾಗ ಅದನ್ನು ಎಲ್ಲರಿಗಿಂತ ಮೊದಲು ‘ಸ್ಕೂಪ್’ ಆಗಿ ಪ್ರಕಟಿಸಿ ಮತ್ತೆ ಜೈಲಿಗೆ ಹೊರಡಲು ಸಿದ್ಧರಾಗಿ ನಿಂತಿದ್ದರು ನಯ್ಯರ್.

ಪಾಕಿಸ್ತಾನದ ಪರಮಾಣು ವಿಜ್ಞಾನಿ ಎ.ಕ್ಯು.ಖಾನ್ ಸಂದರ್ಶನ ನಡೆಸಿ, ಪಾಕಿಸ್ತಾನ ಪರಮಾಣು ಬಾಂಬ್ ತಯಾರಿಸಿರುವುದನ್ನು ಅವರ ಬಾಯಲ್ಲಿ ಹೇಳಿಸಿ ಸ್ಕೂಪ್ ಮಾಡಿದ ಅವರ ವಿಶೇಷ ವರದಿ ಅಂದು ಭಾರೀ ಸುದ್ದಿಮಾಡಿತ್ತು. 1975ರಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ನಯ್ಯರ್ ಅವರು ಬಂಧನಕ್ಕೂ ಮೊದಲೇ ದಿಲ್ಲಿಯ ಪ್ರೆಸ್ ಕ್ಲಬ್‌ನಲ್ಲಿ ಪ್ರತಿಭಟನಾ ಸಭೆ ನಡೆಸಿದ್ದರು, ಇಂದಿರಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ನಯ್ಯರ್ ಅವರು ವೃತ್ತಿ ಜೀವನದುದ್ದಕ್ಕೂ ಪತ್ರಿಕಾಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದವರು. ರಾಜೀವ್ ಗಾಂಧಿಯವರ ಸರಕಾರ 1988ರಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಪರೋಕ್ಷವಾಗಿ ಕಡಿವಾಣ ಹಾಕಲು ಮಾನನಷ್ಟ ಮೊಕದ್ದಮೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಮುಂಚೂಣಿಯಲ್ಲಿ ನಿಂತು ಪ್ರತಿಭಟಿಸಿದವರು, ಒಂದು ದಿನದ ಮಟ್ಟಿಗೆ ಪತ್ರಿಕಾ ಬಂದ್‌ಗೆ ಕರೆಕೊಟ್ಟವರು ನಯ್ಯರ್. ಜಾತ್ಯತೀತ ನೀತಿ, ಅಭಿವ್ಯಕ್ತಿ ಸ್ವಾತಂತ್ರ್ಯಗಳು ಸೇರಿದಂತೆ ನಮ್ಮ ಸಂವಿಧಾನದತ್ತ ಮೌಲ್ಯಗಳು ಅವರ ಹೃದಯಕ್ಕೆ ಆಪ್ತವಾಗಿದ್ದವು. ಈಚಿನ ದಿನಗಳಲ್ಲಿ ಭಾರತದ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳನ್ನು ಹಿಂದುತ್ವ ಆಕ್ರಮಿಸುತ್ತಿರುವ ಬಗ್ಗೆ ಅವರಿಗೆ ವ್ಯಥೆಯಾಗಿತ್ತು.

ಇತೀಚೆಗೆ ಬರೆದ ಲೇಖನವೊಂದರಲ್ಲಿ ಅವರು ಈ ವ್ಯಥೆಯನ್ನು ತೋಡಿಕೊಂಡಿರುವುದೂ ಉಂಟು. ಕುಲದೀಪ್ ನಯ್ಯರ್ ಪತ್ರಕರ್ತರಷ್ಟೇ ಆಗಿರಲಿಲ್ಲ. ವ್ಯಾಖ್ಯಾನಕಾರ, ಗ್ರಂಥಕರ್ತ, ಶಾಂತಿ ಮತ್ತು ಮಾನವ ಹಕ್ಕುಗಳ ಕ್ರಿಯಾವಾದಿ ಹೋರಾಟಗಾರ, ರಾಜತಂತ್ರಜ್ಞ ಮತ್ತು ಸಂಸದೀಯ ಪಟು ಇವೆಲ್ಲವೂ ಆಗಿದ್ದರು. ಸ್ವಾತಂತ್ರೋತ್ತರ ಭಾರತೀಯ ಪತ್ರಿಕೋದ್ಯಮದಲ್ಲಿ ಪತ್ರಿಕಾ ಧರ್ಮ ಎತ್ತಿಹಿಡಿದ ಧ್ಯೇಯನಿಷ್ಠ ಪತ್ರಕರ್ತರಾಗಿ ಖ್ಯಾತಿವೆತ್ತರಾದಂತೆಯೇ ಶಾಂತಿ ಮತ್ತು ಮಾನವಹಕ್ಕುಗಳ ಕ್ರಿಯಾವಾದಿಯಾಗಿಯೂ ಅವರ ಕೊಡುಗೆ ಗಣನೀಯವಾದುದು. ಶಾಂತಿ ಕ್ರಿಯಾವಾದಿಯಾಗಿ ಅವರು ಪಾಕಿಸ್ತಾನದೊಂದಿಗೆ ಶಾಂತಿ ಮತ್ತು ಮಧುರ ಬಾಂಧವ್ಯಕ್ಕಾಗಿ ಅವಿರತವಾಗಿ ಶ್ರಮಿಸಿದರು. ಎರಡು ರಾಷ್ಟ್ರಗಳ ಮೈತ್ರಿಯ ಸಂಕಷ್ಟ ಕಾಲದಲ್ಲಿ ಶಾಂತಿ ಪ್ರಯತ್ನಗಳನ್ನು ಸಕ್ರಿಯವಾಗಿರಿಸುವ ‘ಟ್ರಾಕ್-2’ ಪ್ರಕ್ರಿಯೆ ತಂಡದ ಸದಸ್ಯರೂ ಆಗಿದ್ದರು. ಶಾಂತಿಯಿಂದ ಉಪಖಂಡದ ಎರಡು ರಾಷ್ಟ್ರಗಳ ಜನತೆಗೆ ಅನುಕೂಲವಾಗಲಿದೆ, ಅವರ ಬದುಕುಬಾಳ್ವೆ ಹಸನಾಗಲಿದೆ ಎಂದು ನಯ್ಯರ್ ಶ್ರದ್ಧಾಪೂರ್ವಕ ನಂಬಿದ್ದರು. ಅವರ ಆ.14ರ ವಾರ್ಷಿಕ ‘ಬಾಂಧವ್ಯದ ಬೆಳಕು’ ಕಾರ್ಯಕ್ರಮ ಉಭಯ ರಾಷ್ಟ್ರಗಳ ನಡುವಣ ಶಾಂತಿ ಪ್ರಯತ್ನಗಳ ಸಂಕೇತವಾಗಿತ್ತು. ಉಭಯ ರಾಷ್ಟ್ರಗಳ ಜನತೆಯ ನಡುವಣ ಈ ರೀತಿಯ ಭಾವನಾತ್ಮಕ ಬೆಸುಗೆ ಒಂದಲ್ಲ ಒಂದು ದಿನ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ವಾಸ್ತವವಾಗಲಿದೆ ಎಂದು ಅವರು ನಂಬಿದ್ದರು.

ಮಾನವಹಕ್ಕುಗಳ ಪ್ರತಿಪಾದಕರಾಗಿ ಅವರು ಸರಕಾರ, ಸೇನಾಪಡೆಗಳು ಅಥವಾ ಖಾಸಗಿ ಸಂಘ ಸಂಸ್ಥೆಗಳಿಂದ ಮಾನವಹಕ್ಕುಗಳ ಉಲ್ಲಂಘನೆಯಾದಾಗಲೆಲ್ಲ ಮುಂಚೂಣಿಯಲ್ಲಿ ನಿಂತು ಪ್ರತಿಭಟಿಸಿದವರು. ಜಾತ್ಯತೀತತೆ ಮತ್ತು ವ್ಯಕ್ತಿ ಸ್ವಾತಂತ್ರ್ಯಗಳಲ್ಲಿ ಗಾಢವಾದ ನಂಬಿಕೆ ಹೊಂದಿದ್ದ ಅವರು ದ್ವೇಷ, ಅಸಹನೆಗಳ ವಿರುದ್ಧ ನಿರಂತರವಾಗಿ ದನಿಯೆತ್ತಿದವರು. ಕುಲದೀಪ್ ನಯ್ಯರ್ ಅವರು ಪತ್ರಿಕಾ ವ್ಯವಸಾಯದ ಮಧ್ಯೆ ಅಲ್ಪವಿರಾಮ ದೊರೆತಾಗ ಬೇರೆ ಬೇರೆ ಹೊಣೆಗಾರಿಕೆಗಳನ್ನೂ ನಿರ್ವಹಿಸಿರುವುದುಂಟು. ಅವರು, ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಶಾಸ್ತ್ರಿಯವರು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಲು ಹೋಗಿ ಅಲ್ಲಿ ನಿಧನರಾದಾಗ ನಯ್ಯರ್ ಅವರ ಜೊತೆ ಇದ್ದರು. 1990ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತದ ಹೈಕಮಿಷನರ್ ಆಗಿದ್ದರು. ಈ ಅಧಿಕಾರಾವಧಿಯಲ್ಲಿ ‘ಕೊಹಿನೂರ್’ ವಜ್ರವನ್ನು ಹಿಂದಿರುಗಿಸುವಂತೆ ಲಂಡನ್ ಸರಕಾರದ ಮನ ಒಲಿಸುವುದರಲ್ಲಿ ಯಶಸ್ವಿಯಾದರು. 1997ರಲ್ಲಿ ರಾಜ್ಯ ಸಭೆಗೆ ನಾಮಕರಣಗೊಂಡಿದ್ದರು. ‘ಬಿಯಾಂಡ್ ದಿ ಲೈನ್ಸ್’ 2012ರಲ್ಲಿ ಪ್ರಕಟಗೊಂಡ ಕುಲದೀಪ್ ನಯ್ಯರ್ ಅವರ ಆತ್ಮ ಕಥೆ. ಒಂದು ದೇಶವನ್ನು ಎರಡಾಗಿ ಹರಿದು ಹಂಚಿದ ವಿಭಜನೆಯ ನೋವಿಗೆ ದನಿಯಾಗಿರುವ ಈ ಕಥೆ ನಯ್ಯರ್ ಅವರ ಆತ್ಮಕಥೆಯೂ ಹೌದು, ಭಾರತದ ಕಥೆಯೂ ಹೌದು ಎನ್ನುವ ವ್ಯಾಖ್ಯೆಗೆ ಪಾತ್ರವಾಗಿದೆ. ತುರ್ತುಪರಿಸ್ಥಿತಿಯ ಹಿಂದಿನ ಕಥೆಯನ್ನು ಬಯಲುಗೊಳಿಸಿರುವ ‘ದಿ ಜಡ್ಜ್‌ಮೆಂಟ್-ಇನ್ಸೈಡ್ ಸ್ಟೋರಿ ಆಫ್ ದಿ ಎಮರ್ಜೆನ್ಸಿ’ ಅವರ ಮತ್ತೊಂದು ಪ್ರಸಿದ್ಧ ಕೃತಿ. ‘ಇಂಡಿಯಾ ಆಫ್ಟರ್ ನೆಹರೂ’, ‘ವಾರ್ ಅಟ್ ವಾಘಾ’, ‘ದಿ ಸ್ಕೂಪ್’, ‘ದಿ ಲೈಫ್ ಆ್ಯಂಡ್ ಟ್ರಯಲ್ ಆಫ್ ಭಗತ್ ಸಿಂಗ್’ ಸೇರಿದಂತೆ ನಯ್ಯರ್ ಅವರು ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಪಾಕಿಸ್ತಾನದೊಂದಿಗೆ ಶಾಂತಿಮಂತ್ರ ಅವರ ಗೀಳಾಗಿದ್ದಂತೆ ಭಾರತದ ಸರ್ವಾಂಗೀಣ ಅಭಿವೃದ್ಧಿ ಅವರ ತೀವ್ರ ಕಾಳಜಿಯ ಮತ್ತೊಂದು ವಿಷಯವಾಗಿತ್ತು. ಸ್ವಾತಂತ್ರ್ಯದ ಉದಯದಲ್ಲೇ ಭಾರತಕ್ಕೆ ಬಂದು ಆ ದಿನಗಳಿಂದಲೇ ಭಾರತದ ಅಭಿವೃದ್ಧಿಯಾನವನ್ನು ಗಮನಿಸುತ್ತಾ ಬಂದವರು. ವರದಿಗಾರರಾಗಿ, ಸಂಪಾದಕರಾಗಿ,ಅಂಕಣಕಾರರಾಗಿ ಭಾರತದ ಬೆಳವಣಿಗೆಯನ್ನು ನೆಹರೂ ದಿನಗಳಿಂದ ಮೋದಿಯವರೆಗೆ ದಾಖಲಿಸಿರುವ ಧೀರ ಪತ್ರಕರ್ತ ಕುಲದೀಪ್ ನಯ್ಯರ್ ಸ್ವಾತಂತ್ರ್ಯೋತ್ತರ ಭಾರತದ ಆತ್ಮಸಾಕ್ಷಿ ಎಂಬ ಅಭಿದಾನಕ್ಕೂ ಪಾತ್ರರಾಗಿದ್ದರು.

ಎಳೆಯ ತಲೆಮಾರಿನ ಪತ್ರಕರ್ತರಿಗೆ ಕುಲದೀಪ್ ನಯ್ಯರ್ ಯವ್ವನಿಗ ಮಿತ್ರನಂತೆಯೇ ಇದ್ದರು. ಇವತ್ತಿನ ಖ್ಯಾತಿಯ ಶೇಖರಗುಪ್ತ ಹೇಳುವಂತೆ, ಅವರು ನಂಬಿಕೆ, ಅಂತರಂಗಗಳನ್ನು ಆಧರಿಸಿದ ರಾಜಕೀಯ/ಸರಕಾರಿ ಸ್ಕೂಪ್ ಸುದ್ದಿಗಳ ವರದಿಗಾರಿಕೆಯ ಕೌಶಲವನ್ನು ಕಲಿಸಿಕೊಟ್ಟವರು. ನಯ್ಯರ್ ಹೊಸ ಪೀಳಿಗೆಯ ಪತ್ರಕರ್ತರನ್ನು ಅಕ್ಕರೆಯಿಂದ ಕಾಣುತ್ತಿದ್ದರು. ಈ ಅಂಕಣಕಾರನಿಗೂ ಇದು ಕೊಂಚ ಮಟ್ಟಿಗೆ ಅನುಭವ ಸಿದ್ಧ. ನಾನು ಮೂವತ್ಮೂರು ವರ್ಷಗಳಷ್ಟು ಸುದೀರ್ಘ ಸೇವೆ ಸಲ್ಲಿಸಿದ ಪ್ರಜಾವಾಣಿ ಪತ್ರಿಕೆಯ ಒಡೆತನದ ಸಂಸ್ಥೆಯ ನಿರ್ದೇಶಕರಾಗಿದ್ದರು ಕುಲದೀಪ್ ನಯ್ಯರ್. ಹೀಗಾಗಿ ಅವರನ್ನು ಸ್ವಲ್ಪಕಾಲ ದೂರದಿಂದ, ಇನ್ನು ಸ್ವಲ್ಪಕಾಲ ಹತ್ತಿರದಿಂದ ನೋಡುವ ಅವಕಾಶಗಳು ನನಗೆ ಲಭಿಸಿದ್ದವು.

ಕರ್ನಾಟಕದಲ್ಲಿ ರಾಜಕೀಯ ತುಮುಲಗಳಾದಾಗ ಫೋನ್ ಮಾಡುತ್ತಿದ್ದರು, ಸ್ಥಳೀಯ ಹವಾ ಹೇಗಿದೆ ಎಂದು ತಿಳಿಯಲು. ಇನ್ನು ನಿರ್ದೇಶಕ ಮಂಡಳಿ ಸಭೆಗಳಿಗೆ, ವಾರ್ಷಿಕ ಸಭೆಗೆ ಬಂದಾಗ, ಸಭೆಗಳನ್ನು ಮುಗಿಸಿಕೊಂಡು ಪ್ರಜಾವಾಣಿ ಸಂಪಾದಕೀಯ ವಿಭಾಗಕ್ಕೆ ಬರುತ್ತಿದ್ದರು. ಹಿರಿಯರು ಕಿರಿಯರು ಎನ್ನದೆ ಎಲ್ಲರ ಜೊತೆ ಬೆರೆತು ಮಾತನಾಡುತ್ತಿದ್ದರು. ‘‘ಕರ್ನಾಟಕದಲ್ಲಿ ಏನಾಗುತ್ತಿದೆ?’’ ಎಂದು ಮಾತು ಶುರುಮಾಡುತ್ತಿದ್ದರು. ದಿಲ್ಲಿಯಲ್ಲಿ ಕುಳಿತು ತಾವು ಕಂಡ ಕರ್ನಾಟಕ ರಾಜಕೀಯದ ಒಳನೋಟಗಳನ್ನು ನಮಗೆ ನೀಡುತ್ತಿದ್ದರು. ಇದರ ಜೊತೆಗೆ ಅವರ ಉಪಸ್ಥಿತಿಯೇ ದಿಲ್ಲಿ ರಾಜಕಾರಣ ನಮ್ಮ ಬಳಿ ಬಂದಂತಾಗುತ್ತಿತ್ತು. ಕುಲದೀಪ್ ನಯ್ಯರ್ ಇನ್ನಿಲ್ಲ. ಅವರೊಂದಿಗೆ ಗಾಂಧಿ ಪ್ರಣೀತ ಸತ್ಯಶಾಂತಿ ಜಯತೇ ಪತ್ರಿಕೊೀದ್ಯಮದ ಶಕೆ ಮುಗಿದಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)