varthabharthi


ಬುಡಬುಡಿಕೆ

ನೆರೆಗೆ ನಾಪತ್ತೆಯಾದ ಪ್ರಲಾಪ ತಿಮ್ಮ....!

ವಾರ್ತಾ ಭಾರತಿ : 26 Aug, 2018
*ಚೇಳಯ್ಯ chelayya@gmail.com

ಕೊಡಗು ಕೊಚ್ಚಿ ಹೋಗುತ್ತಿದ್ದರೂ, ಸಂಸದ ಪ್ರಲಾಪ ತಿಮ್ಮ ಎಲ್ಲೂ ಕಾಣುತ್ತಿಲ್ಲ ಎಂದು ಗೊತ್ತಾದದ್ದೇ ಪತ್ರಕರ್ತ ಎಂಜಲು ಕಾಸಿಗೆ ಹೆದರಿಕೆಯಾಯಿತು. ಸಾಧಾರಣವಾಗಿ ಕೊಡಗಿನಲ್ಲಿ ಸಣ್ಣದೊಂದು ಹೆಣ ಬಿದ್ದರೂ ತನ್ನ ಪರಿವಾರದ ಜೊತೆಗೆ ಓಡೋಡಿ ಬರುತ್ತಿದ್ದ ಈ ಪ್ರಲಾಪ ಇದೀಗ ನಾಪತ್ತೆಯಾದದ್ದು ಹೇಗೆ? ಒಂದು ವೇಳೆ ಕೊಡಗಿನ ನೆರೆಯಲ್ಲಿ ಈ ಸಂಸದರೂ ಕೊಚ್ಚಿ ಹೋಗಿದ್ದಿರಬಹುದೆ? ಪ್ರತಿ ದಿನ ಮಾಧ್ಯಮಗಳಲ್ಲಿ ಕೊಡಗಿನಲ್ಲಿ ಅಷ್ಟು ಜನರು ನಾಪತ್ತೆ, ಇಷ್ಟು ಜನರು ನಾಪತ್ತೆ ಎಂದು ತಲೆಬರಹಗಳು ಬರುತ್ತಿರುವುದರಿಂದ ಅದರಲ್ಲೇನಾದರೂ ಈ ಪ್ರಲಾಪ ತಿಮ್ಮನ ಹೆಸರೂ ಇರಬಹುದೇ? ಪತ್ರಕರ್ತ ಹುಡುಕ ತೊಡಗಿದ. ನೋಡಿದರೆ ಎಲ್ಲೂ ಆತನ ಹೆಸರಿಲ್ಲ. ನೇರವಾಗಿ ಕೊಡಗಿನ ಹಿರಿಯ ಅಧಿಕಾರಿಗಳಿಗೆ ಕಾಸಿ ಫೋನಾಯಿಸಿದ ‘‘ಸಾರ್...ಕೊಡಗಿನ ನೆರೆಗೆ ಪ್ರಮಖ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ....ನೀವು ಇನ್ನೂ ಅವರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯನ್ನೇ ನೀಡಿಲ್ಲ....’’

‘‘ಯಾರ್ರೀ ಅದು...’’ ಅಧಿಕಾರಿ ಕೇಳಿದರು.
‘‘ಸಾರ್...ಸಂಸದ ಪ್ರಲಾಪ ತಿಮ್ಮ ಎಲ್ಲೂ ಕಾಣುತ್ತಿಲ್ಲ....ಕೊಡಗಿನಲ್ಲಿ ಇಷ್ಟೊಂದು ಹಿಂದೂಗಳು ಸಾಯುತ್ತಿದ್ದರೂ ಅವರಿಂದ ಪತ್ರಿಕಾ ಹೇಳಿಕೆಯೇ ಇಲ್ಲ...’’ ಕಾಸಿ ಆತಂಕದಿಂದ ಕೇಳಿದ.
‘‘ನೋಡ್ರೀ....ಈ ನೆರೆಯ ಹಿಂದೆ ಪಾಕಿಸ್ತಾನದ ಕೈವಾಡವೋ, ಐಎಸ್‌ಐ ಕೈವಾಡವೋ ಇದ್ದಿದ್ದರೆ ಅವರು ಬರುತ್ತಿದ್ದರು....ಸುಮ್ಮನೆ ಅವರಿಗೆ ಯಾಕೆ ತೊಂದರೆ ಕೊಡುತ್ತಾ ಇದ್ದೀರಿ...’’ ಅಧಿಕಾರಿ ಕೇಳಿದರು.
‘‘ಅಲ್ಲಾ ಸಾರ್...ಕೊಡಗಿನಲ್ಲಿ ಯಾರು ಎಲ್ಲೇ ಸತ್ತರೂ...ಅವರು ಹೆಣ ಹೊರುವುದಕ್ಕೆ ಹಾಜರಿರುತ್ತಿದ್ದರು...ಈಗ ಅವರು ನಾಪತ್ತೆಯಾಗಿದ್ದಾರೆ ಎಂದರೆ, ಅವರೂ ನೆರೆಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆಗಳಿವೆಯಲ್ಲ?’’ ಕಾಸಿ ಅನುಮಾನವನ್ನು ಮುಂದಿಟ್ಟ.
‘‘ಅದೆಲ್ಲ ಸಾಧ್ಯತೆಗಳಿಲ್ಲ ಕಣ್ರೀ....ಸುಮ್ಮನೆ ವದಂತಿ ಹಬ್ಬಿಸಬೇಡಿ....’’ ಅಧಿಕಾರಿ ಮನವಿ ಮಾಡಿದರು.
‘‘ಹಾಗಲ್ಲ ಸಾರ್...ಕೊಡಗು ನೆರೆಗೆ ಪ್ರಲಾಪ ತಿಮ್ಮ ನಾಪತ್ತೆ? ಎಂದು ಕ್ವಶ್ಚನ್ ಮಾರ್ಕ್ ಹಾಕಿ ಪತ್ರಿಕೆಗೆ ಹಾಕಲಾ?’’ ಕಾಸಿ ಮರು ಮನವಿ ಮಾಡಿದ.

‘‘ನೋಡ್ರೀ...ಈಗಾಗಲೇ ಜನರನ್ನು ಹುಡುಕುವ ಕೆಲಸದಲ್ಲಿ ನಾವಿದ್ದೇವೆ. ಇನ್ನು ಸಂಸದರು ನಾಪತ್ತೆಯಾಗಿದ್ದಾರೆ ಎಂದರೆ ಕೇಂದ್ರದಿಂದ ಒತ್ತಡ ಬರುತ್ತೆ. ಎಲ್ಲ ಕೆಲಸ ಬಿಟ್ಟು ಅವರನ್ನು ಹುಡುಕಬೇಕಾಗುತ್ತದೆ....ಸುಮ್ಮನೆ ನೆರೆ ರಕ್ಷಣೆ ಕಾರ್ಯಕ್ಕೆ ತೊಂದರೆ ಕೊಡಬೇಡಿ...’’
ಅಷ್ಟರಲ್ಲಿ ಕೊಡಗಿಗೆ ರಕ್ಷಣಾ ಸಚಿವರು ಆಗಮಿಸಲಿದ್ದಾರೆ ಎಂಬ ಸುದ್ದಿ ಸಿಕ್ಕಿತು. ಬಹುಶಃ ಸಂಸದ ಪ್ರಲಾಪ ತಿಮ್ಮ ನಾಪತ್ತೆಯಾಗಿರುವ ಸುದ್ದಿ ಕೇಂದ್ರಕ್ಕೆ ಸಿಕ್ಕಿ ಅವರ ರಕ್ಷಣೆಗಾಗಿಯೇ ರಕ್ಷಣಾ ಸಚಿವರು ತಮ್ಮ ಪಡೆಯೊಂದಿಗೆ ಕೊಡಗಿಗೆ ಬರುತ್ತಿರಬಹುದು ಎಂದು, ಅತ್ಯುತ್ಸಾಹದಿಂದ ತನ್ನ ಜೋಳಿಗೆ ಮತ್ತು ಹಳೆಯ ಕೊಡೆಯ ಜೊತೆಗೆ ಎಂಜಲು ಕಾಸಿ ಕೊಡಗಿಗೆ ಹಾರಿದ. ಕೊಡಗಿಗೆ ಬಂದು ನೋಡಿದರೆ, ರಕ್ಷಣ ಸಚಿವರು ‘ಮಿನಿಟ್ ಟು ಮಿನಿಟ್’ ಎಂದು ಅಧಿಕಾರಿಗಳ ವಿರುದ್ಧ ಹಾರಿ ಬೀಳುತ್ತಿದ್ದರೆ ಅವರ ಹಿಂದೆ, ಪಿಳಿ ಪಿಳಿ ಕಣ್ಣು ಬಿಡುತ್ತಾ ಪ್ರಲಾಪ ತಿಮ್ಮ ನಿಂತಿದ್ದರು.
‘‘ಸಾರ್...ಗ್ರೇಟ್ ಸಾರ್....ಪ್ರವಾಹದಲ್ಲಿ ನಾಪತ್ತೆಯಾದ ನಿಮ್ಮನ್ನು ಕೇಂದ್ರದ ಸೇನೆಯ ಮೂಲಕ ರಕ್ಷಿಸಲಾಯಿತು ಎಂದು ಪತ್ರಕರ್ತರು ಹೇಳುತ್ತಿದ್ದಾರೆ. ನಿಜವೇ?’’ ಎಂದು ಮೆಲ್ಲನೆ ಪ್ರಲಾಪ ತಿಮ್ಮನ ಕಿವಿಯಲ್ಲಿ ಎಂಜಲು ಕಾಸಿ ಪಿಸುಗುಟ್ಟಿದ.

ಪ್ರಲಾಪ ತಿಮ್ಮ ಗುರ್ರ್‌ ಎಂದು ಎಂಜಲು ಕಾಸಿಯನ್ನು ದುರುಗುಟ್ಟಿ ನೋಡಿ ಹೇಳಿದರು ‘‘ಮುಳುಗುತ್ತಿರುವ ಇಡೀ ಕೊಡಗನ್ನು ನಾನು ಎತ್ತಿ ಹಿಡಿದ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ, ವಾಟ್ಸ್ ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಿರುವುದು ನೀವು ನೋಡಿಲ್ಲವೆ? ಬಾಯಿಗೆ ಬಂದಂತೆ ಒದರಿದರೆ ಕಚ್ಚಿ ಬಿಡ್ತೇನೆ....’’ ಎಂಜಲು ಕಾಸಿ ಕಂಗಾಲಾಗಿ ಕೇಳಿದ ‘‘ಅಲ್ಲಾ ಸಾರ್...ಫೇಸ್‌ಬುಕ್‌ನಲ್ಲಿ ನೀವು ನೆರೆಯಿಂದ ಕೊಚ್ಚಿ ಹೋಗುತ್ತಿರುವಾಗ ಒಂದು ಮರವನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ಫೋಟೊ ನೋಡಿದೆ. ಬಹುಶಃ ಬಳಿಕ ಅಲ್ಲಿಂದ ನೀವು ನೀರುಪಾಲಾಗಿರಬಹುದು. ಆದುದರಿಂದ ಕೊಡಗಿನಲ್ಲಿ ಕಾಣುತ್ತಿಲ್ಲ ಎಂದು ಭಾವಿಸಿದ್ದೆ...ಹಾಗಾದರೆ ಆ ಫೋಟೊ ಫೇಕ್ ಆಗಿರಬೇಕು ಅಲ್ಲವೆ?’’
‘‘ಅದು ನೆರೆಯಲ್ಲಿ ಬಿದ್ದ ಮರವೊಂದನ್ನು ನಾನು ಎತ್ತುತ್ತಿರುವ ಫೋಟೊ ಕಣ್ರೀ....ಅಷ್ಟೂ ಗೊತ್ತಾಗೋದಿಲ್ವಾ....ಇಡೀ ಮರವನ್ನು ನಾನು ಹಾಗೆ ಗಟ್ಟಿಯಾಗಿ ಹಿಡಿದುಕೊಳ್ಳದೇ ಇದ್ದಿದ್ದರೆ ಕೊಡಗಿಗೆ ಅದೆಷ್ಟು ಡ್ಯಾಮೇಜ್ ಆಗ್ತಿತ್ತು ಗೊತ್ತೇನ್ರೀ...?’’ ಪ್ರಲಾಪ ತಿಮ್ಮ ಕಣ್ಣು ದೊಡ್ಡದು ಮಾಡಿ ಕೇಳಿದ.

‘‘ನೀವು ಇಷ್ಟು ಸಮಯ ಎಲ್ಲಿದ್ರಿ ಸಾರ್...ರಕ್ಷಣಾ ಸಚಿವರು ಕೊಡಗಿಗೆ ಬರುವವರೆಗೆ ನಿಮ್ಮ ಪತ್ತೆಯೇ ಇರಲಿಲ್ಲ...’’ ಕಾಸಿ ಕೇಳಿದ. ‘‘ಏನ್ರೀ ನಿಮ್ಮ ಮಾತಿನ ಅರ್ಥ? ಆ ಫೋಟೊ ನೋಡಿಯೂ ಇಂತಹ ಪ್ರಶ್ನೆ ಕೇಳ್ತೀರಲ್ಲ ? ನಿಮಗೆ ನಾಚಿಕೆಯಿಲ್ಲವೆ? ಬೀಳುತ್ತಿರುವ ಆ ಮರವನ್ನು ನಾನು ಕಳೆದ ಒಂದು ವಾರದಿಂದ ಒಬ್ಬನೇ ಹಿಡಿದು ನಿಂತಿದ್ದೆ. ಇವತ್ತು ಕೇಂದ್ರದಿಂದ ಯೋಧರೆಲ್ಲರೂ ಸೇರಿ ಮರವನ್ನು ಎತ್ತಿ ಪಕ್ಕಕ್ಕೆ ಹಾಕಿದ್ರು....ಮೋದಿಯವರಿಗೆ ಹೇಳಿ ಮುಂದಿನ ಶೌರ್ಯ ಪ್ರಶಸ್ತಿಯನ್ನು ನನಗೆ ಕೊಡಿಸ್ತೀನಿ ಎಂದು ರಕ್ಷಣಾ ಸಚಿವರು ಹೇಳಿದರು. ನಾನೇ ಬೇಡ ಎಂದು ಹೇಳಿದೆ....’’ ತನ್ನ ತ್ಯಾಗ ಬಲಿದಾನವನ್ನು ಪ್ರಲಾಪ ತಿಮ್ಮ ವಿವರಿಸಿದರು.
ಕಾಸಿ ರೋಮಾಂಚಿತನಾದ. ‘‘ಸಾರ್...ಪ್ರಧಾನಿ ಮೋದಿಗೆ ಹೇಳಿ ಕೊಡಗಿಗೆ ಒಂದು 500 ಕೋಟಿ ರೂಪಾಯಿ ಬಿಡುಗಡೆ ಮಾಡ್ಸಿ....’’ ಗೋಗರೆದ.
‘‘ನೋಡ್ರೀ....ಪ್ರಧಾನಿಯವರು ಏನೂಂತ ಮಾಡುವುದು. ಈಗಾಗಲೇ ಕೇರಳಕ್ಕೆ ಅವರು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ....’’ ತಿಮ್ಮ ಹೇಳಿದರು.
ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಕೊಲ್ಲಿರಾಷ್ಟ್ರದಿಂದ ಬಂದ 700 ಕೋಟಿ ರೂಪಾಯಿಯನ್ನು ತಿರಸ್ಕರಿಸಿ ಕೇರಳದ ಮಾನ ಮರ್ಯಾದೆ ನೆರೆಯಲ್ಲಿ ಕೊಚ್ಚಿ ಹೋಗದಂತೆ ನೋಡಿಕೊಂಡಿದ್ದಾರೆ. ಇಲ್ಲಾಂದ್ರೆ ಎಂತಹ ಅನಾಹುತವಾಗುತ್ತಿತ್ತು? ವಿಶ್ವಗುರುವಾಗಿರುವ ನರೇಂದ್ರ ಮೋದಿ ಈ ದೇಶವನ್ನು ಆಳುತ್ತಿರುವಾಗ ನಾವು ಬೇರೆ ದೇಶದಿಂದ ಹಣ ನೆರವನ್ನು ಪಡೆಯುವುದೆಂದರೆ ಎಷ್ಟು ನಾಚಿಕೆಗೇಡು...’’
‘‘ಹಾಗಾದರೆ...ಕೇರಳಕ್ಕೆ ಆ ಹಣವನ್ನು ಮೋದಿಯವರೇ ನೀಡಲಿದ್ದಾರೆಯೆ?’’ ಕಾಸಿ ಕೇಳಿದ.
‘‘ನೋಡ್ರೀ...ನೆರೆ ನೀರು ಇಳಿದ ಬಳಿಕ ನರೇಂದ್ರ ಮೋದಿಯವರು ಕೇರಳದಲ್ಲಿ ಒಂದು ಬೃಹತ್ ನೆರೆ ಸ್ಮಾರಕವನ್ನು ನಿರ್ಮಿಸಲಿದ್ದಾರೆ. ಅದಕ್ಕಾಗಿ ಜಪಾನ್, ಚೀನಾದಿಂದ ನೆರವನ್ನೂ ಕೋರಿದ್ದಾರೆ. ಸಾವಿರಾರು ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗುವ ಈ ನೆರೆ ಸ್ಮಾರಕವನ್ನು ನೋಡಲು ದೇಶ ವಿದೇಶಗಳಿಂದ ಜನರು ಕೇರಳಕ್ಕೆ ಆಗಮಿಸಲಿದ್ದಾರೆ. ಇದರಿಂದಾಗಿ ಕೇರಳದ ಆದಾಯ ಹೆಚ್ಚುತ್ತದೆ. ಪ್ರವಾಸೋದ್ಯಮ ಬೆಳೆಯುತ್ತದೆ. ಕೇರಳ ಅಭಿವೃದ್ಧಿಯ ಕಡೆಗೆ ನಡೆಯುತ್ತದೆ....’’
‘‘ಮತ್ತೆ ಕೊಡಗಿಗೆ?’’ ಕಾಸಿ ಕೇಳಿದ.
‘‘ಸ್ವತಃ ರಕ್ಷಣಾ ಸಚಿವರನ್ನೇ ಕೊಡಗಿಗೆ ಕಳುಹಿಸಿದ್ದಾರೆ. ದೇಶಕ್ಕಾಗಿ ‘ಮಿನಿಟ್ ಟು ಮಿನಿಟ್’ ಕೆಲಸ ಮಾಡುತ್ತಿರುವ ಸಚಿವೆಯ ದರ್ಶನ ಕೊಡಗಿಗೆ ಆಗಿದೆ. ಇದು ಕೊಡಗಿನ ಯೋಧರಿಗೆ ನರೇಂದ್ರ ಮೋದಿಯವರು ನೀಡಿದ ಕೊಡುಗೆ. ಅದಕ್ಕಾಗಿ ನೆರೆ ಇಳಿದಾಕ್ಷಣ ನರೇಂದ್ರ ಮೋದಿಯವರಿಗೆ ಕೃತಜ್ಞತಾ ಸಭೆಯೊಂದನ್ನು ಏರ್ಪಡಿಸಲಿದ್ದೇವೆ....’’ ಎನ್ನುತ್ತಿದ್ದಂತೆಯೇ, ಕಾಸಿ ರಕ್ಷಣಾ ಸಚಿವರ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದು ಧನ್ಯನಾದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)