varthabharthi

ಸಂಪಾದಕೀಯ

ಮೋದಿ ರಾಜಕಾರಣದಿಂದ ಬೂದಿ ರಾಜಕಾರಣದತ್ತ

ವಾರ್ತಾ ಭಾರತಿ : 27 Aug, 2018

ಅಸ್ಪಶ್ಯವಾಗಿದ್ದ ಬಿಜೆಪಿಯ ಜೊತೆಗೆ ಇತರ ರಾಜಕೀಯ ಪಕ್ಷಗಳು ಕೈಜೋಡಿಸಿ, ಎನ್‌ಡಿಎ ಸ್ಥಾಪನೆಗೆ ಕಾರಣವಾದುದು ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಿತ್ವ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೋದಿಯ ಮಾತಿನ ಅಬ್ಬರ, ಕಪಟ ರಾಜಕೀಯಗಳ ಆಯಸ್ಸು ಎಷ್ಟು ಸಮಯ ಎನ್ನುವುದನ್ನು ಅರಿತವರಿಲ್ಲ. ಆದರೆ ಬಿಜೆಪಿಗೆ ವಾಜಪೇಯಿ ಹಾಕಿಕೊಟ್ಟ ಅಡಿಗಲ್ಲು ದೀರ್ಘಕಾಲೀನವಾದುದು ಎಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ರಾಜಕೀಯವಾಗಿ ಸ್ವಾತಂತ್ರ ಪೂರ್ವ ಹಿನ್ನೆಲೆ ವಾಜಪೇಯಿಗೆ ಇದೆ. ಉದಾರವಾದಿ ಹಿಂದುತ್ವದ ತಳಹದಿಯಲ್ಲಿ ಅವರು ಬಿಜೆಪಿಯನ್ನು ಕಟ್ಟಿದರು. ಈ ಕಾರಣದಿಂದಲೇ ವಾಜಪೇಯಿ ಮುತ್ಸದ್ದಿತನ ಬಿಜೆಪಿಗೆ ಆದರ್ಶವಾಗಬೇಕೇ ಹೊರತು, ಯಾವುದೇ ವೌಲಿಕ ರಾಜಕೀಯದ ಹಿನ್ನೆಲೆ ಇಲ್ಲದ ಆದಿತ್ಯನಾಥ್, ಅಮಿತ್ ಶಾ, ಮೋದಿ ಖಂಡಿತಾ ಅಲ್ಲ. ವಾಜಪೇಯಿ ಮೃತರಾದ ಬಳಿಕ ಅವರ ಹೆಸರನ್ನು ರಾಜಕೀಯವಾಗಿ ದುರುಪಯೋಗಗೊಳಿಸಲಾಗುತ್ತಿದೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.

ಬಿಜೆಪಿಯನ್ನು ಕಟ್ಟಿ, ಬೆಳೆಸಿ ಅದನ್ನು ಅಕಾರಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ ವಾಜಪೇಯಿಯವರ ಹೆಸರನ್ನು ರಾಜಕೀಯಕ್ಕಾಗಿ ಬಳಸುವ ಎಲ್ಲ ಅಕಾರ ಬಿಜೆಪಿ ನಾಯಕರಿಗಿದೆ. ಅವರ ಹೆಸರನ್ನು ರಾಜಕೀಯವಾಗಿ ಬಳಸಬಾರದು ಎಂದು ವಿಪಕ್ಷ ಹೇಳಿದರೆ ಅದು ಹಾಸ್ಯಾಸ್ಪದವಾಗುತ್ತದೆ. ಇಂದಿರಾಗಾಂ ಮತ್ತು ರಾಜೀವ್ ಗಾಂಯವರ ಹೆಸರನ್ನು ಇಂದಿಗೂ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಇಂದಿರಾಗಾಂ ಜಾರಿಗೆ ತಂದ ಭೂಸುಧಾರಣೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣ, ರಾಜೀವ್‌ಗಾಂಯ ಕಾಲದಲ್ಲಾದ ಕಂಪ್ಯೂಟರ್ ಕ್ರಾಂತಿಯನ್ನು ಇಂದಿಗೂ ಕಾಂಗ್ರೆಸ್ ಜಪಿಸುತ್ತಿದೆ. ಹೀಗಿರುವಾಗ, ಮೊನ್ನೆ ಮೊನ್ನೆಯಷ್ಟೇ ನಿಧನರಾದ ವಾಜಪೇಯಿ ಹೆಸರನ್ನು ಬಳಸಬಾರದು ಎಂದು ಬಿಜೆಪಿಗೆ ಆದೇಶಿಸುವುದು ಎಷ್ಟು ಸರಿ? ಒಂದು ರೀತಿಯಲ್ಲಿ ಅಟಲ್ ಹೆಸರನ್ನು ಮುಂದಿಟ್ಟುಕೊಂಡು ಬಿಜೆಪಿ ಮುಂದಡಿ ಇಡುವುದರಿಂದ ದೇಶಕ್ಕೆ ಕಡಿಮೆ ಅಪಾಯ ಇದೆ. ಆದರೆ ದುರದೃಷ್ಟವಶಾತ್ ಇಂದಿನ ಮೋದಿ ನೇತೃತ್ವದ ಬಿಜೆಪಿಗೆ ಅಟಲ್ ಬಿಹಾರಿ ವಾಜಪೇಯಿಯವರ ಸಾಧನೆ, ಅವರ ಮುತ್ಸದ್ದಿತನ, ಅವರು ಬಿಜೆಪಿಗೆ ತೋರಿಸಿಕೊಟ್ಟ ಉದಾರವಾದಿ ದಾರಿಗಳು ಬೇಕಾಗಿಲ್ಲ. ವಾಜಪೇಯಿ ಉಳಿಸಿ ಹೋದ ವೌಲ್ಯಗಳ ಬಗ್ಗೆಯೂ ಚಿಂತೆಯಿಲ್ಲ. ಸಾಧಾರಣವಾಗಿ, ತಮ್ಮ ತಮ್ಮ ನಾಯಕರನ್ನು ನೆನೆಯುವುದು ಅವರ ಸಾಧನೆಗಳ ಮೂಲಕ. ನೆಹರೂ, ಇಂದಿರಾಗಾಂ, ರಾಜೀವ್ ಗಾಂ ಈ ದೇಶಕ್ಕೆ ಏನೇನು ಮಾಡಿದ್ದಾರೆ ಎನ್ನುವುದನ್ನು ನಾವಿಂದಿಗೂ ನೆನೆಯುತ್ತೇವೆ. ಅಂತೆಯೇ ವಾಜಪೇಯಿಯವರು ತಮ್ಮ ಆಡಳಿತಾವಯಲ್ಲಿ ಮಾಡಿದ ಸಾಧನೆಗಳನ್ನು ದೇಶ ಗುರುತಿಸಿದೆ.

ಅದರಲ್ಲಿ ಮುಖ್ಯವಾದುದು, ನೆರೆರಾಷ್ಟ್ರಗಳ ಜೊತೆಗೆ ಅವರು ಇಟ್ಟುಕೊಂಡಿದ್ದ ಸಂಬಂಧ. ಹಾಗೆಯೇ, ತನ್ನ ಸಿದ್ಧಾಂತ ದೇಶಕ್ಕಿಂತ ತೀರಾ ದೊಡ್ಡದು ಎಂದು ಯಾವತ್ತೂ ವಾಜಪೇಯಿಯವರು ಭಾವಿಸಿರಲಿಲ್ಲ. ಹಿಂದುತ್ವವನ್ನು ಜಾರಿಗೊಳಿಸಲು ದೇಶದ ಹಿತಾಸಕ್ತಿಯನ್ನು ಬಲಿಕೊಡಲು ಕೆಲವು ಶಕ್ತಿಗಳು ಮುಂದಾದಾಗ, ಅದನ್ನು ಶಕ್ತಿ ಮೀರಿ ತಡೆಯಲು ಯತ್ನಿಸಿದ್ದರು. ತನ್ನನ್ನು ಸುತ್ತುವರಿದಿರುವ ತೀವ್ರಗಾಮಿ ಶಕ್ತಿಗಳ ನಡುವೆ ಅವರು ಅಸಹಾಯಕರಾಗಿದ್ದರು. ಪಾಕಿಸ್ತಾನ-ಭಾರತ ನಡುವಿನ ಸಂಬಂಧ ಸುಧಾರಣೆಗೂ ಅವರು ಗರಿಷ್ಠ ಮಟ್ಟದಲ್ಲಿ ಶ್ರಮಿಸಿದ್ದರು. ಅಟಲ್ ಬಿಹಾರಿ ವಾಜಪೇಯಿಯವರನ್ನು ನೆನೆಯುವುದೆಂದರೆ, ಅವರು ಬಿಟ್ಟು ಹೋದ ವೌಲ್ಯಗಳನ್ನು ಜಾರಿಗೆ ತರಲು ಯತ್ನಿಸುವುದು. ಆದರೆ, ಯಾವಾಗ ವಾಜಪೇಯಿ ಕೋಮಾಕ್ಕೆ ಈಡಾದರೋ, ಆಗಲೇ ಅವರ ವೌಲ್ಯಗಳೂ ಕೋಮಾ ತಲುಪಿತ್ತು. ಇಂದು ಯಾರಿಗೂ ಅವರ ಸಿದ್ಧಾಂತ, ಅವರು ತೋರಿಸಿದ ದಾರಿ ಬೇಕಾಗಿಲ್ಲ. ಬಿಜೆಪಿಯ ಮುಖಂಡರಿಗೆ ಬೇಕಾಗಿರುವುದು, ವಾಜಪೇಯಿ ಅವರ ಅಂತ್ಯ ಸಂಸ್ಕಾರದ ಬೂದಿ ಮಾತ್ರ. ಇಂದು ಆ ಬೂದಿಯನ್ನು ಹಿಡಿದುಕೊಂಡು ತನ್ನ ರಾಜಕೀಯ ಉದ್ದೇಶವನ್ನು ಸಾಸಲು ಬಿಜೆಪಿ ಹೊರಟಿದೆ. ಇದು ವಾಜಪೇಯಿ ಅವರ ಹೆಸರಿನ ದುರ್ಬಳಕೆಯಾಗಿದೆ. ಇದರಿಂದ ಅತಿ ಹೆಚ್ಚು ನೊಂದುಕೊಳ್ಳ ಬಹುದಾದವರು ಇದ್ದರೆ ಅದು ಸ್ವತಃ ವಾಜಪೇಯಿಯವರೇ ಆಗಿದ್ದಾರೆ.

ವಾಜಪೇಯಿಯವರ ಹೆಸರನ್ನು ಬಿಜೆಪಿ ದುರ್ಬಳಕೆ ಮಾಡುತ್ತಿರುವುದರ ವಿರುದ್ಧ ಮೊತ್ತ ಮೊದಲು ಆಕ್ಷೇಪ ಎತ್ತಿದವರೇ, ಅವರ ತಂಗಿ ಕರುಣಾ ಶುಕ್ಲ್ಲಾ. ‘ತಮ್ಮ ಜಾತಿ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರಗೈದು ಎಲ್ಲಾ ಬೂದಿಯನ್ನು ಗಂಗೆ ಮತ್ತು ಯಮುನಾ ನದಿಯಲ್ಲಿ ತೇಲಿ ಬಿಟ್ಟಾಗಿದೆ’ ಎನ್ನುವ ಹೇಳಿಕೆಯನ್ನು ಅವರು ಪತ್ರಿಕೆಗಳಿಗೆ ನೀಡಿದ್ದಾರೆ. ಇದೀಗ ಬಿಜೆಪಿ ಮಾತ್ರ, ವಾಜಪೇಯಿ ಅವರದ್ದೆನ್ನಲಾದ ಬೂದಿಯನ್ನು ಬೃಹತ್ ಕುಂಭದಲ್ಲಿ ಹಾಕಿ ಎಲ್ಲ ರಾಜ್ಯಗಳಿಗೆ ವಿತರಿಸುತ್ತಿದೆ. ರಾಜ್ಯದ ಎಲ್ಲ ಪ್ರಮುಖ ನದಿಗಳಲ್ಲಿ ಅವನ್ನು ತೇಲಿ ಬಿಡುವುದು ಅವರ ಉದ್ದೇಶವಂತೆ. ವಾಜಪೇಯಿ ಕುಟುಂಬಸ್ಥರು ಈಗಾಗಲೇ ಯಾರಿಗೂ ಬೂದಿಯನ್ನು ಹಸ್ತಾಂತರಿಸಿಲ್ಲ ಎಂಬ ಹೇಳಿಕೆ ನೀಡಿರುವಾಗ, ಬಿಜೆಪಿಯವರು ಹೊತ್ತು ತಿರುಗುತ್ತಿರುವ ಬೂದಿ ಯಾರದ್ದು? ನಿಜಕ್ಕೂ ಅಷ್ಟೊಂದು ಬೂದಿಯನ್ನು ಅವರಿಗೆ ನೀಡಿದವರು ಯಾರು? ಮತ್ತು ಈ ಬೂದಿಯನ್ನು ಹಿಡಿದುಕೊಂಡು ಬೀದಿ ಬೀದಿ ತಿರುಗುವ ಅಗತ್ಯ ಬಿಜೆಪಿಗೆ ಯಾಕೆ ಬಂತು? ವಾಜಪೇಯಿಯನ್ನು ಮತ್ತು ಸಮಕಾಲೀನ ರಾಜಕೀಯ ಮುತ್ಸದ್ದಿಗಳನ್ನು ಸಂಪೂರ್ಣ ಬದಿಗೆ ತಳ್ಳಿ, ಬಿಜೆಪಿಯನ್ನು ಮುನ್ನಡೆಸಲು ಹೊರಟಿರುವ ಮೋದಿ ಬಳಗಕ್ಕೆ, ವಾಜಪೇಯಿಯವರ ಮೃತದೇಹದ ಬೂದಿಯಷ್ಟೇ ಬೇಕೇ ಹೊರತು, ಅವರ ರಾಜಕೀಯ ವೌಲ್ಯಗಳಲ್ಲ. ಹಿಂದೆ ರಾಮನ ಇಟ್ಟಿಗೆಯನ್ನು ಮುಂದಿಟ್ಟು ಪ್ರಹಸನ ನಡೆಸಿದಂತೆಯೇ, ಇದೀಗ ವಾಜಪೇಯಿ ಬೂದಿಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ಬಳಗ ಮುಂದಿನ ಚುನಾವಣೆಯನ್ನು ಎದುರಿಸಲು ಹೊರಟಿದೆ. ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಉದ್ದೇಶವನ್ನಷ್ಟೇ ಅವರು ಹೊಂದಿದ್ದಾರೆ. ತಮ್ಮ ವೈಲ್ಯಗಳನ್ನು ವಾಜಪೇಯಿಯ ಬೂದಿಯಿಂದ ಮುಚ್ಚಲು ಹೊರಟಿದ್ದಾರೆ.

ಮೃತದೇಹದ ಅವಶೇಷಗಳನ್ನು ನದಿಗೆ ಚೆಲ್ಲಬೇಡಿ ಎಂದು ಸರಕಾರ ಮತ್ತು ಪರಿಸರ ಮಾಲಿನ್ಯ ಇಲಾಖೆ ಇತ್ತೀಚಿನ ದಿನಗಳಲ್ಲಿ ಜೋರು ದನಿಯಲ್ಲಿ ಕರೆ ನೀಡುತ್ತಿವೆ. ಶುಚಿತ್ವ ಆಂದೋಲನದ ಅಂಗವಾಗಿ, ನದಿಗೆ ಉಗುಳಿದರೂ ದಂಡ ವಿಸುತ್ತೇವೆ ಎಂದು ಸರಕಾರ ಹೆದರಿಸುತ್ತಿದೆ. ಇಂತಹ ಸರಕಾರದ ನೇತೃತ್ವದಲ್ಲೇ ಇದೀಗ ಮೃತದೇಹದ ಅವಶೇಷವನ್ನು ನದಿಗೆ ಚೆಲ್ಲುವ ಆಂದೋಲನ ನಡೆಯುತ್ತಿದೆ. ಸರಕಾರವೇ ನದಿಯ ಕುರಿತಂತೆ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವಾಗ, ಇನ್ನು ಜನಸಾಮಾನ್ಯರು, ಮೋಕ್ಷಕ್ಕಾಗಿ ಅರೆಬೆಂದ ಹೆಣಗಳನ್ನು ನದಿಗೆ ಎಸೆಯುವುದರಲ್ಲಿ ಅಚ್ಚರಿಯೇನಿದೆ? ಇಂದು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದಲ್ಲಿ ನದಿಗೆ ಚೆಲ್ಲುತ್ತಿರುವ ಬೂದಿ ಅಟಲ್ ಅವರ ದೇಹವನ್ನು ಸುಟ್ಟು ಪಡೆದಿರುವುದಲ್ಲ. ಅಟಲ್ ಬಿಹಾರಿ ವಾಜಪೇಯಿಯವರ ರಾಜಕೀಯ ವೌಲ್ಯಗಳನ್ನು ಸುಟ್ಟು ಆ ಬೂದಿಯನ್ನು ಅವರು ಮೆರವಣಿಗೆಯಲ್ಲಿ ಕೊಂಡೊಯ್ದು ಕಂಡ ನದಿಗಳಿಗೆ ಚೆಲ್ಲುತ್ತಿದ್ದಾರೆ.

ಬಿಜೆಪಿಯ ಬಳಗ ಸಂಭ್ರಮದಿಂದ ಮೆರವಣಿಗೆಯಲ್ಲಿ ಹೊತ್ತೊಯ್ಯುತ್ತಿರುವ ಕುಂಭದಲ್ಲಿರುವುದು, ‘ರಾಜಧರ್ಮ’ ಪಾಲಿಸಿ’ ಎಂದು ವಾಜಪೇಯಿ ಕರೆ ನೀಡಲು ಕಾರಣವಾದ ಗುಜರಾತ್ ಹತ್ಯಾಕಾಂಡದ ಮೃತರ ಬೂದಿಯಾಗಿದೆ. ಆ ಕುಂಭದಲ್ಲಿರುವುದು, ಸರಕಾರದ ಬೇಜವಾಬ್ದಾರಿ ಆರ್ಥಿಕ ನೀತಿಯಿಂದಾಗಿ, ಬ್ಯಾಂಕ್‌ನ ಮುಂದೆ ಕ್ಯೂ ನಿಂತು ನಾಶವಾದ ಜನರ ಅವಶೇಷಗಳಾಗಿವೆ. ನಕಲಿ ಗೋರಕ್ಷಕರ ದಾಳಿಗೆ ಬೆದರಿ ಗೋವುಗಳನ್ನು ಸಾಕಲಾಗದೆ, ಅದನ್ನು ಮಾರಲೂ ಆಗದೆ ಸರ್ವನಾಶವಾದ ರೈತರ ಬೂದಿಯಾಗಿದೆ. ಗುಂಪು ಹತ್ಯೆಯಿಂದ ಅಮಾನವೀಯವಾಗಿ ಮೃತಪಟ್ಟ ಅಮಾಯಕರ ಬೂದಿಯಾಗಿದೆ. ಆ ಕುಂಭದಲ್ಲಿರುವುದು ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕಾಗಿ ಒದ್ದಾಡಿ ಮೃತಪಟ್ಟ ಹಸುಗೂಸುಗಳ ಬೂದಿಯಾಗಿವೆ. ಅವುಗಳನ್ನು ನದಿಗೆ ಚೆಲ್ಲುವ ಮೂಲಕ, ಸರಕಾರದ ನಮಾಮಿ ಗಂಗೆ ಯೋಜನೆಯನ್ನು ಸ್ವತಃ ಬಿಜೆಪಿ ನಾಯಕರೇ ಅಪಮಾನಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)