varthabharthi

ಪ್ರಚಲಿತ

ಪ್ರವಾಹ ಕಾಲದ ನೋವು, ಸಂಕಟಗಳು

ವಾರ್ತಾ ಭಾರತಿ : 27 Aug, 2018
ಸನತ್ ಕುಮಾರ ಬೆಳಗಲಿ

ನೆರೆ, ಬರಗಾಲದಂತಹ ಪ್ರಕೃತಿ ಪ್ರಕೋಪದ ಸಂದರ್ಭದಲ್ಲಿ ಮನುಷ್ಯರಾದವರು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಹಲವು ಉದಾಹರಣೆಗಳು ಕೇರಳ ಮತ್ತು ಕೊಡಗಿನ ದುರಂತದ ಸನ್ನಿವೇಶದಲ್ಲಿ ನಮ್ಮ ಕಣ್ಣೆದುರು ಗೋಚರಿಸಿವೆ. ಹಾಗೆಯೇ, ಹೇಗೆ ನಡೆದುಕೊಳ್ಳಬಾರದು ಎಂಬುದಕ್ಕೆ ಕೆಲ ಕೆಟ್ಟ ಉದಾಹರಣೆಗಳೂ ಇವೆ. ತಾಯಿಯ ಗರ್ಭದಿಂದ ಹೊರಗೆ ಬರುವಾಗ, ಕೇವಲ ಮನುಷ್ಯರಾಗಿರುವ ನಾವು ನಾಗರಿಕ ಜಗತ್ತಿನಲ್ಲಿ ಬೆಳೆಯುತ್ತ ಹೋದಂತೆ ಜಾತಿ-ಮತಗಳ ಪ್ರಪಾತಕ್ಕೆ ಬಿದ್ದು ಮನುಷ್ಯತ್ವ ಕಳೆದುಕೊಳ್ಳುತ್ತೇವೆ. ಇದು ಅತಿರೇಕಕ್ಕೆ ಹೋದಾಗ, ಭಾರತದಂತಹ ದೇಶವೂ ಕಳೆದು ಹೋಗುತ್ತದೆ.

ಕಳೆದ ವಾರದ ಭೀಕರ ಮಳೆ, ಭೂ ಕುಸಿತ, ಪ್ರವಾಹದಿಂದ ಕೇರಳ ಮತ್ತು ಕೊಡಗು ಸಂಪೂರ್ಣ ನಲುಗಿ ಹೋಗಿವೆ. ಇಂಥ ಕಷ್ಟಕಾಲದಲ್ಲಿ ನೊಂದವರ ನೋವಿಗೆ ಜಾತಿ-ಮತ ಎನ್ನದೆ ಬೇರೆ ಪ್ರದೇಶದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ. ಕೇರಳದ ಮೀನು ಮಾರುವ ಹುಡುಗಿ ಪೈಸೆಗೆ ಪೈಸೆ ಸೇರಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಗೆ ಒಂದು ಲಕ್ಷ ರೂಪಾಯಿ ನೀಡಿದ್ದಾಳೆ. ಕರ್ನಾಟಕದಲ್ಲಿ ನಿ ಸಂಗ್ರಹಕ್ಕೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋದಾಗ, ಹೋಟೆಲ್ ಕಾರ್ಮಿಕರು, ತರಕಾರಿ ಮಾರುವವರು, ಭಿಕ್ಷುಕರು ತಮ್ಮ ಬಳಿಯಿದ್ದ ಬಿಡಿಗಾಸನ್ನೂ ಬಳಿದು ಕೊಟ್ಟಿದ್ದಾರೆ. ಸರಕಾರಿ ನೌಕರರೊಬ್ಬರು ತಮ್ಮ ಮೂರು ತಿಂಗಳ ಪಿಂಚಣಿ ಹಣವನ್ನು ಪರಿಹಾರ ನಿಗೆ ಕೊಟ್ಟಿದ್ದಾರೆ. ಶಾಲಾ ಮಕ್ಕಳು ತಮ್ಮ ಪಾಕೆಟ್ ಮನಿಯನ್ನೂ ನೀಡಿದ್ದಾರೆ.

ಅನೇಕ ಕಡೆ ಹಿಂದೂ ನಿರಾಶ್ರಿತರಿಗೆ ಮುಸಲ್ಮಾನರು ತಮ್ಮ ಮಸೀದಿ ಮತ್ತು ದರ್ಗಾಗಳಲ್ಲಿ ಆಶ್ರಯ ನೀಡಿದ್ದಾರೆ. ಇನ್ನೂ ಅನೇಕ ಕಡೆ, ಮುಸ್ಲಿಂ ನಿರಾಶ್ರಿತರಿಗೆ ಹಿಂದೂ ಮಠ, ಮಂದಿರಗಳಲ್ಲಿ ಆಶ್ರಯ ನೀಡಲಾಗಿದೆ. ನಿರಾಶ್ರಿತರ ಕೇಂದ್ರದಲ್ಲಿ ಹಿಂದೂ, ಮುಸ್ಲಿಂ, ಕ್ರೆಸ್ತರು ಒಟ್ಟಾಗಿ ಸೇರಿ ಬಕ್ರೀದ್ ಆಚರಿಸಿದ್ದಾರೆ. ಪರಸ್ಪರ ನೋವಿಗೆ ಸ್ಪಂದಿಸಿದ್ದಾರೆ.

ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಲಿನ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಜೊತೆಗೆ ಒಂದೇ ಹೆಲಿಕಾಪ್ಟರ್‌ನಲ್ಲಿ ಕೂತು ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಪರಿಹಾರದ ದೋಣಿಯಲ್ಲಿ ಕೂತು ಮಕ್ಕಳನ್ನು ದಡಕ್ಕೆ ಸೇರಿಸುವ ಸುದ್ದಿ-ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅಲ್ಲಿನ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಒಟ್ಟಾಗಿ ಸೇರಿ ಪ್ರವಾಹ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೊಡಗಿನಲ್ಲೂ ಇದೇ ದೃಶ್ಯ ಕಾಣುತ್ತೇವೆ.

ಆದರೆ, ಈ ಆಶಾಕಿರಣಗಳ ನಡುವೆಯೂ ಕೋಮು ಅಸಹನೆಯ ಅಪಸ್ವರಗಳು ಕೇಳಿ ಬರುತ್ತಿವೆ. ಕೇರಳದಲ್ಲಿ ಕಮ್ಯುನಿಸ್ಟ್ ಆಡಳಿತ ಇರುವ ಕಾರಣ ದುರಂತ ಸಂಭವಿಸಿದೆ ಎಂದು ಕೆಲ ಕೋಮು ವ್ಯಾಗಳು ಲೇವಡಿ ಮಾಡುತ್ತಿದ್ದಾರೆ. ಅಲ್ಲಿ ದನದ ಮಾಂಸ ತಿನ್ನುವವರು ಹೆಚ್ಚಿರುವ ಕಾರಣ ಹೀಗಾಯಿತೆಂದು ಹಿಂದೂ ಮಹಾಸಭೆಯ ಸನ್ಯಾಸಿಯೊಬ್ಬ ವ್ಯಂಗ್ಯ ಮಾಡಿದ್ದಾರೆೆ.

ಈ ದುರಂತದಲ್ಲಿ ಸಂಪೂರ್ಣ ನೆಲ ಕಚ್ಚಿದ ಕೇರಳವನ್ನು ಮತ್ತೆ ಎದ್ದು ನಿಲ್ಲಿಸಲು ಸುಮಾರು 20 ಸಾವಿರ ಕೋಟಿ ರೂ. ಬೇಕಾಗುತ್ತದೆ. ತುರ್ತಾಗಿ 2 ಸಾವಿರ ಕೋಟಿ ರೂ.ಯನ್ನಾದರೂ ನೀಡಿ ಎಂದು ಕೇರಳ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತಃ ಅಲ್ಲಿಗೆ ಹೋಗಿ, ವೈಮಾನಿಕ ಸಮೀಕ್ಷೆ ನಡೆಸಿ, ಎಲ್ಲವನ್ನೂ ಕಂಡು 600 ಕೋಟಿ ರೂಪಾಯಿ ಪರಿಹಾರ ಘೋಷಿಸಿ ಕೈ ತೊಳೆದುಕೊಂಡಿದ್ದಾರೆ.

ಈ ಕಷ್ಟಕಾಲದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಕೇರಳಕ್ಕೆ 700 ಕೋಟಿ ನೆರವು ನೀಡುವುದಾಗಿ ಪ್ರಸ್ತಾಪ ಮುಂದಿಟ್ಟಿದೆ. ಬಹುತೇಕ ಅರಬ್ ದೇಶಗಳನ್ನು ಕಟ್ಟಿ ಬೆಳೆಸಿದವರು ಅದರ ಸಂಪತ್ತಿನ ಸಾಮ್ರಾಜ್ಯಕ್ಕೆ ತಮ್ಮ ಮೈಬೆವರನ್ನು ಸುರಿಸಿದವರು ಕೇರಳದಿಂದ ವಲಸೆ ಹೋದ ಕಾರ್ಮಿಕರು. ಇದನ್ನು ನೆನಪಿಸಿಕೊಂಡ ಅರಬ್ ಸರಕಾರ ಕೃತಜ್ಞತಾಪೂರ್ವಕವಾಗಿ ಕಷ್ಟದಲ್ಲಿ ಇರುವ ಕೇರಳಕ್ಕೆ ನೆರವು ನೀಡಲು ಮುಂದಾಗಿದೆ. ಆದರೆ, ನರೇಂದ್ರ ಮೋದಿಯವರ ಕೇಂದ್ರ ಸರಕಾರ ತಾಂತ್ರಿಕ ನೆಪವೊಡ್ಡಿ, ಈ ನೆರವನ್ನು ಪಡೆಯಲು ಅಡ್ಡಗಾಲು ಹಾಕಿದೆ. ಇದರಿಂದ ಕೆರಳಿ, ಕೆಂಡವಾದ ಪಿಣರಾಯಿ ವಿಜಯನ್ ಅರಬ್ ನೆರವು ಪಡೆಯಲು ಅವಕಾಶ ನೀಡಿ ಇಲ್ಲವೇ ನೀವಾದರೂ ಆ ಹಣವನ್ನು ಕೊಡಿ ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಕೇಂದ್ರದಲ್ಲಿ ಮನಮೋಹನ್‌ಸಿಂಗ್ ಸರಕಾರ ಇದ್ದಾಗ, 2004ರಲ್ಲಿ ಸುನಾಮಿ ಸಂಭವಿಸಿತ್ತು. ಆಗ, ನಮಗಾದ ನಷ್ಟವನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ, ವಿದೇಶಿ ಸಹಾಯ ಬೇಡ ಎಂದು ಅಂದಿನ ಸರಕಾರ ತೀರ್ಮಾನಿಸಿತ್ತು. 14 ವರ್ಷಗಳ ಹಿಂದಿನ ಅದೇ ನೀತಿಯನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದ ಕೇಂದ್ರ ಸರಕಾರ ನೆರವಿಗೆ ಅಡ್ಡಗಾಲು ಹಾಕಿದೆ. ವಿದೇಶಿ ನೆರವು ಪಡೆಯಬಾರದು ಎಂಬ ಕಾನೂನು ಇಲ್ಲ. ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದ ವೇಳೆ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿದೇಶಿ ನೆರವನ್ನು ಪಡೆದಿದ್ದಾರೆ. ಆದರೆ ಈಗ ಅವರಿಗೆ ಬೇಡವಾಗಿದೆ. ಕೇರಳದ ಎಡ ರಂಗ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅವರು ನಕಾರಾತ್ಮಕ ನೀತಿ ಅನುಸರಿಸುತ್ತಿದ್ದಾರೆ.

ಕೇರಳದಲ್ಲಿ ನೀರುಪಾಲಾದ ಜನರ ಬದುಕು ಚೇತರಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಕಾಲಾವಕಾಶ ಬೇಕು. ದೇಶ-ವಿದೇಶಗಳಿಂದ ನೆರವಿನ ಮಹಾಪೂರ ಹರಿದು ಬರಬೇಕು. ಅದು ಬರುತ್ತಿದೆ. ಆದರೆ ಇಂಥ ಸಂದರ್ಭದಲ್ಲೂ ಜಾತಿ ಮತ್ತು ಕೋಮು ವಿಷಗಳನ್ನು ತುಂಬಿಕೊಂಡ ಕ್ರಿಮಿಗಳು ಕುಹಕದ ಮಾತನ್ನು ಆಡುತ್ತಿವೆ. ಅಲ್ಲಿ ಎಲ್ಲಾ ಸಮುದಾಯದ ಜನರು ತೊಂದರೆಗೆ ಒಳಗಾಗಿದ್ದಾರೆ. ಪ್ರಕೃತಿ ಪ್ರಕೋಪ ಜಾತಿ-ಮತ ಎನ್ನದೆ ಎಲ್ಲರನ್ನೂ ಬೀದಿಗೆ ತಳ್ಳಿದೆ. ಬೀದಿಗೆ ಬಿದ್ದವರನ್ನು ಬದುಕಿಸಲು ಜನಸಾಮಾನ್ಯರು ನೆರವು ನೀಡುತ್ತಿದ್ದಾರೆ. ಆದರೆ, ಕೆಲ ಸಂಕುಚಿತ ಮನಸ್ಸಿನ ವ್ಯಕ್ತಿಗಳು ಕೊಳಕು ಮಾತುಗಳನ್ನಾಡಿ ಬೆತ್ತಲಾಗುತ್ತಿದ್ದಾರೆ. ಇಂಥವರ ಸಾಲಿನಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಸೇರಿದ್ದಾರೆ. ಶತಮಾನದಲ್ಲಿ ಕಂಡರಿಯದ ಜಲಪ್ರಳಯ 400ಕ್ಕೂ ಹೆಚ್ಚು ಜನರ ಬದುಕನ್ನು ಬಲಿ ತೆಗೆದುಕೊಂಡಿದೆ. ಮನುಷ್ಯರು ಮಾತ್ರವಲ್ಲ ಗಿಡಮರಗಳು ನೀರು ಪಾಲಾಗಿವೆ. ಇಂಥ ದಾರುಣ ಸಂದರ್ಭದ ದುರಂತದಲ್ಲೂ ಕೋಮು ವಿಷವನ್ನು ಹರಡುವ ಸ್ಟೇಟಸ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಾಕುತ್ತಿದ್ದಾರೆ. ರಾಜೀವ್ ಮಲ್ಹೋತ್ರ ಎಂಬ ವ್ಯಕ್ತಿ ಕೇರಳದ ಹಿಂದೂಳಿಗೆ ನೆರವು ನೀಡಿ, ಮುಸಲ್ಮಾನರು ಮತ್ತು ಕ್ರೆಸ್ತರಿಗೆ ಬೇಡ. ಅವರಿಗೆ ಬೇರೆ ದೇಶಗಳಿಂದ ನೆರವು ಹರಿದು ಬರುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ನಾಚಿಕೆಗೇಡಿನ ಸಂಗತಿಯೆಂದರೆ, ನಮ್ಮ ದೇಶದ ಪ್ರಮುಖ ಉದ್ಯಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ಎ.ಮೋಹನದಾಸ್ ಪೈ ಇದನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರವಾಹ ಸಂತ್ರಸ್ತರ ನೆರವಿಗಾಗಿ ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಗೆ ಹಣ ನೀಡಬೇಡಿ. ಆ ಹಣವನ್ನು ಎಡಪಂಥೀಯರು, ನಕ್ಸಲೀಯರು ಮತ್ತು ಜೆಎನ್‌ಯುನ ತುಕಡೇ ತುಕಡೇ ಗ್ಯಾಂಗ್‌ಗೆ ನೀಡುತ್ತಾರೆ ಎಂದು ಈ ಪದ್ಮಶ್ರೀ ಪುರಸ್ಕೃತರು ಕಾಮೆಂಟ್ ಮಾಡಿದ್ದಾರೆ. ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಕೇರಳದ ಜನರಿಗೆ ನೆರವು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದವರಲ್ಲಿ ರವಿಶಂಕರ್ ಗುರೂಜಿಯವರ ಶಿಷ್ಯ, ಆರ್ಟ್ ಆ್ ಲಿವಿಂಗ್‌ನ ಸಂಯೋಜಕ ಧನಂಜಯ ಉಪಾಧ್ಯಾಯ ಕೂಡ ಸೇರಿದ್ದಾರೆೆ. ಈತ ತನ್ನ ಸ್ಟೇಟಸ್‌ನಲ್ಲಿ ಮುಸ್ಲಿಮರು ಮತ್ತು ಕ್ರೆಸ್ತರು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿದೆ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆೆ.

ಕೇರಳದ ಅಯ್ಯಪ್ಪನ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಲು ಸುಪ್ರೀಂ ಕೋರ್ಟ್ ಸಹಮತ ವ್ಯಕ್ತಪಡಿಸಿದ್ದರಿಂದ ಜಲಪ್ರಳಯ ಉಂಟಾಗಿದೆ ಎಂದು ಸಂಘ ಪರಿವಾರದ ಪ್ರಮುಖರು ಪ್ರಚಾರ ಮಾಡುತ್ತಿದ್ದಾರೆ. ರಿಸರ್ವ್ ಬ್ಯಾಂಕ್‌ನ ನಿರ್ದೇಶಕರಾಗಿ ಇತ್ತೀಚೆಗೆ ನೇಮಕಗೊಂಡ ಆರೆಸ್ಸೆಸ್‌ನ ಐಡಿಯಾಲಾಗ್ ಗುರುಮೂರ್ತಿ ಸುಪ್ರೀಂ ಕೋರ್ಟ್ ಈ ಅಂಶವನ್ನು ಗಮನಿಸಬೇಕೆಂದು ಟ್ವೀಟ್ ಮಾಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಅನೇಕ ಕಡೆ ದಲಿತರೊಂದಿಗೆ ಇರಲು ಮೇಲ್ಜಾತಿಯ ಜನರು ನಿರಾಕರಿಸಿದ ವರದಿಗಳು ಬಂದಿವೆ. ದಲಿತರು ಬೇಯಿಸಿದ ಅಡುಗೆಯನ್ನು ಸ್ವೀಕರಿಸಲು ಸಹ ಕೆಲವರು ನಿರಾಕರಿಸಿದ್ದಾರೆ. ಕರ್ನಾಟಕದ ಕೊಡಗಿನಲ್ಲಿ ನಿರಾಶ್ರಿತರ ಶಿಬಿರಗಳನ್ನು ವಶಕ್ಕೆ ತೆಗೆದುಕೊಂಡ ಸಂಘ ಪರಿವಾರದ ಕಾರ್ಯಕರ್ತರು ಅಲ್ಲಿ ಬೇರೆಯವರು ಪರಿಹಾರ ಕಾರ್ಯಕ್ಕೆ ನೆರವು ನೀಡಲು ಮುಂದಾದರೆ, ಅದಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಎಲ್ಲೆಡೆ ಜನಸಾಮಾನ್ಯರು ಉದಾರವಾಗಿ ನೆರವು ನೀಡುತ್ತಿದ್ದರೂ ಮಠ, ಮಂದಿರಗಳು ಜಗದ್ಗುರುಗಳು ತಮ್ಮ ಹುಂಡಿಗಳನ್ನು ತೆರೆದು ಕಷ್ಟದಲ್ಲಿ ಇದ್ದವರಿಗೆ ನೆರವು ನೀಡಲು ಮುಂದಾಗಿಲ್ಲ. ನಮ್ಮ ಕೆಲ ಯುವಕರ ಮನಸ್ಸು ಎಷ್ಟು ಮಲಿನಗೊಂಡಿದೆಯೆಂದರೆ, ಮಠ-ಮಂದಿರಗಳ ದುಡ್ಡೇಕೆ, ಮಸೀದಿ-ಚರ್ಚುಗಳು ಕೊಡಲಿಯೆಂದು ಅಪಸ್ವರ ತೆಗೆಯುತ್ತಿದ್ದಾರೆ. ಆದರೆ, ಅಲ್ಪಸಂಖ್ಯಾತರ ಸಂಸ್ಥೆಗಳು ಈಗಾಗಲೇ ನೆರವಿಗೆ ಮುಂದಾಗಿವೆ. ಇಂಥ ಸಂದರ್ಭದಲ್ಲಿ ಅನಿವಾಸಿ ಭಾರತೀಯರಲ್ಲಿ ಸೇರಿಕೊಂಡಿರುವ ಸಂಘ ಪರಿವಾರದ ಕೆಲ ಬೆಂಬಲಿಗರು ಅಲ್ಲಿ ಕುಳಿತೇ ಇಲ್ಲಿ ದ್ವೇಷದ ವಿಷ ಹರಡಿಸಲು ಯತ್ನಿಸುತ್ತಿದ್ದಾರೆ.

ಈ ಎಲ್ಲಾ ಅಡ್ಡಿಆತಂಕಗಳ ನಡುವೆಯೂ ಕೇರಳ ಮತ್ತು ಕೊಡಗಿನ ಜನತೆ ಹರಿದು ಹೋದ ತಮ್ಮ ಬದುಕನ್ನು ಮತ್ತೆ ಜೋಡಿಸಿಕೊಂಡು ಪುನರ್ ನಿರ್ಮಿಸಲು ಛಲದಿಂದ ಶ್ರಮಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)