varthabharthi

ನೇಸರ ನೋಡು

ಭಿನ್ನದನಿ ಮೇಲೆ ಮತ್ತೆ ಗದಾಪ್ರಹಾರ

ವಾರ್ತಾ ಭಾರತಿ : 2 Sep, 2018
ಜಿ.ಎನ್.ರಂಗನಾಥ ರಾವ್

ಸಾಮಾಜಿಕ ಅಸಮಾನತೆ, ಶೋಷಣೆ, ಅನ್ಯಾಯ ಮೊದಲಾದ ಕಾರಣಗಳಿಂದಾಗಿ ಎಡಪಂಥೀಯರತ್ತ ಒಲವು ಅಥವಾ ಸಹಾನುಭೂತಿ ಉಳ್ಳವರೆಲ್ಲರನ್ನು ಸಾರಾಸಗಟಾಗಿ ಹಿಂಸೆಗೆ ಕುಮ್ಮಕ್ಕು ನೀಡುವವರು, ‘ನಗರ ನಕ್ಸಲೀಯರು’ ಎಂದು ಆಧಾರರಹಿತವಾಗಿ ಆರೋಪಿಸುವುದು ತಪ್ಪಾಗುತ್ತದೆ. ಈ ಐವರು ಮಾನವಹಕ್ಕು ಕಾರ್ಯಕರ್ತರು ಪುಣೆಯ ಸಮೀಪ ಸಂಭವಿಸಿದ ಭೀಮಾ-ಕೋರೆಗಾಂವ್ ಗಲಭೆಯಲ್ಲಿ ಹಿಂಸೆಯನ್ನು ಪ್ರಚೋದಿಸಿದ್ದರೇ? ಹಾಗೂ ಅದಕ್ಕೂ ಮೀರಿದ ಪಿತೂರಿಯಲ್ಲಿ ಭಾಗಿಗಳೇ ಎಂಬುದನ್ನು ಸುಪ್ರೀಂ ಕೋರ್ಟಿನ ಮುಂದೆ ರುಜುವಾತುಪಡಿಸುವ ಹೊಣೆ ಈಗ ಪೊಲೀಸರ ಮೇಲಿದೆ.


ಮೂರು ವರ್ಷಗಳ ಹಿಂದೆ (2015) ದೇಶಾದ್ಯಂತ ಇರುವ ಅಸಹನೆ ಪ್ರವೃತ್ತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾಗಿರುವ ಬೆದರಿಕೆ ವಿರುದ್ಧ ಪ್ರತಿಭಟಿಸಿ ಸಾಹಿತಿ ಕಲಾವಿದರು ಸರಕಾರ/ಅಕಾಡಮಿಗಳಿಂದ ತಾವು ಪಡೆದ ಪ್ರಶಸ್ತಿಗಳನ್ನು ಹಿಂದಿರುಗಿಸಿದಾಗ ಅದು ಕಾಂಗ್ರೆಸ್ ಪ್ರಾಯೋಜಿತವೆಂದು ಅಪಹಾಸ್ಯ ಮಾಡಲಾಯಿತು. ದೇಶದಲ್ಲಿನ ಅಸಹನೆ-ಅಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಂಟಾಗಿರುವ ಬೆದರಿಕೆ ಮತ್ತು ಪ್ರೊ. ಎಂ. ಎಂ. ಕಲಬುರ್ಗಿ ಹತ್ಯೆ ಈ ಪ್ರಕರಣಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ದಿವ್ಯ ಮೌನವಹಿಸಿದ್ದರ ವಿರುದ್ಧವೂ ಈ ಪ್ರತಿಭಟನೆಯಾಗಿತ್ತು. ನಯನತಾರ ಸೆಹಗಾಲ್, ಗುಲಾಂ ನಬಿ ಖಾಯಲ್, ಅನಿಲ್ ಜೋಶಿ, ಸುರ್ಜಿತ್ ಪತಾರ್, ಚಮನ್ ಲಾಲ್, ಬಲದೇವ್ ಸಿಂಗ್ ಮೊದಲಾದವರು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸಿ ಪ್ರತಿಭಟಿಸಿದವರಲ್ಲಿ ಪ್ರಮುಖರು.

ಕನ್ನಡದಲ್ಲಿ ನಾನು, ಚಂಪಾ, ಅರವಿಂದ ಮಾಲಗತ್ತಿ, ರಹಮತ್ ತರೀಕೆರೆ, ಕುಂವೀ, ಡಿ. ಎನ್. ಶ್ರೀನಾಥ್, ಡಿ. ಉಮಾಪತಿ, ಉಗಮ ಶ್ರೀನಿವಾಸ್, ಅರುಣ್ ಚಿದಾನಂದ ಸಾಲಿ, ಅಕ್ಷತಾ ಕೆ. ಹುಂಚದಕಟ್ಟೆ, ಬಿ. ಟಿ. ಜಾಹ್ನವಿ, ಡಾ. ವಿಕ್ರಂ ವಿಸಾಜಿ ಮೊದಲಾದವರು ಪ್ರಶಸ್ತಿಗಳನ್ನು ಹಿಂದಿರುಗಿಸಿ ಪ್ರತಿಭಟಿಸಿದೆವು. ಭಿನ್ನದನಿ ಎತ್ತುವವರ ಸೊಲ್ಲಡಗಿಸಲು ನಡೆಯುತ್ತಿದ್ದ ಪ್ರಯತ್ನಗಳ ವಿರುದ್ಧ ನಾವು ಪ್ರತಿಭಟಿಸಿದಾಗ ಸಾಹಿತಿ ಕಲಾವಿದರಲ್ಲೇ ಕೆಲವರು ನಮ್ಮನ್ನು ಅಪಹಾಸ್ಯ ಮಾಡಿದರು, ಇನ್ನು ಕೆಲವರು ಮೌನಕ್ಕೆ ಶರಣಾದರು. ಸರಕಾರ ನಮ್ಮ ಪ್ರತಿಭಟನೆಗೆ ಜಗ್ಗಲಿಲ್ಲ. ಅಸಹನೆ-ಅಸಹಿಷ್ಣುತೆಗಳು ಈಗ ತಾರಕಕ್ಕೇರಿದೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ ಎಂದು ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ ಅವರೇ ಒಪ್ಪಿಕೊಳ್ಳುವಷ್ಟು ಪರಮಾವಧಿಯ ಹಂತವನ್ನು ಅದು ಮುಟ್ಟಿದೆ ಎಂಬುದಕ್ಕೆ ಮೊನ್ನೆಮೊನ್ನೆ ನಡೆದ ಐವರು ಮಾನವಹಕ್ಕು ಕ್ರಿಯಾವಾದಿಗಳ ಬಂಧನವೇ ಜ್ವಲಂತ ಸಾಕ್ಷಿ.

ಮೂರುವರ್ಷಗಳ ಹಿಂದೆ ಬಾಹ್ಯ ನೋಟಕ್ಕೆ ಕಾಣುವಷ್ಟು ಸ್ಪಷ್ಟವಾಗಿ ತಲೆಎತ್ತಿದ ಅಸಹನೆ-ಅಸಹಿಷ್ಣುತೆಗಳು, ಈಚಿನ ವರ್ಷಗಳಲ್ಲಿ ಮೋದಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ದನಿ ಎತ್ತುವವರನ್ನು ದೇಶದ್ರೋಹಿಗಳೆಂದು ಕರೆಯುವ ಉದ್ಧಟತನದ ಹಂತಕ್ಕೆ ಮುಟ್ಟಿದೆ. ಭಿನ್ನಮತದ ಸೊಲ್ಲು ಎತ್ತಿದವರನ್ನು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಾಚಾಮಗೋಚರವಾಗಿ ನಿಂದಿಸುವ ಸನ್ನಿಯಾಗಿ ಪರಿಣಮಿಸಿದೆ. ಮಾತಿನ ಹಲ್ಲೆ, ದೈಹಿಕ ಹಲ್ಲೆ, ಗುಂಪುಥಳಿತದಿಂದ ಹತ್ಯೆ ಹೀಗೆ ಉಲ್ಬಣಿಸಿದೆ ಈ ಅಸಹನೆ. ಈಗ ಐವರು ಮಾನವಹಕ್ಕು ಕಾರ್ಯಕರ್ತರನ್ನು ಬಂಧಿಸುವ ಮೂಲಕ ಸರಕಾರದಿಂದಲೇ ಜಗಜ್ಜಾಹೀರಾಗಿದೆ. ಕವಿ ವರವರ ರಾವ್, ಸುಧಾ ಭಾರದ್ವಾಜ್, ವರ್ನನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ ಮತ್ತು ಗೌತಮ್ ನವ್ಲಾಖ ಇವರು ದಿಢೀರ್ ಪೊಲೀಸ್ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದ ಮಾನವ ಹಕ್ಕು ಕ್ರಿಯಾವಾದಿಗಳು. ಈ ಐವರೂ ದೇಶದಲ್ಲಿ ನ್ಯಾಯ ಮತ್ತು ಮಾನಹಕ್ಕುಗಳಿಗಾಗಿ, ವಿಶೇಷವಾಗಿ ದಲಿತರು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಖ್ಯಾತಿವಂತರು. ಇವರೆಲ್ಲ ಮಾವೋವಾದಿ ನಕ್ಸಲೀಯರಿಗೆ ಬೆಂಬಲ ನೀಡುತ್ತಿರುವರೆಂದು ಪೊಲೀಸರು ಹೇಳುತ್ತಾರೆ. ಇವರ ಬಂಧನ ರಾಜಕೀಯ ಭಿನ್ನದನಿಗಳನ್ನು ಹತ್ತಿಕ್ಕುವ ಸರಕಾರದ ವ್ಯವಸ್ಥಿತ ಕುಟಿಲಕಾರಾಸ್ಥಾನವಾಗಿದ್ದು ಸಹಜವಾಗಿಯೇ ದೇಶದಾದ್ಯಂತ ಪ್ರಜಾಪ್ರಭುತ್ವವಾದಿಗಳಿಂದ ಖಂಡನೆಗೊಳಗಾಗಿದೆ. ದೇಶದ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶಿಸಿ ಬಂಧನಕ್ಕೆ ತಡೆನೀಡಿರುವುದು ಸಮಾಧಾನಕರ ಅಂಶ. ಇದರ ಗತಿ ಏನಾಗುವುದು ಎಂಬುದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ತಿಳಿಯಲಿದೆ.

ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ಈ ನಾಟಕೀಯ ಬೆಳವಣಿಗೆ ಕೆಲವು ಮೂಲಭೂತ ಪ್ರಶ್ನೆಗಳಿಗೆ ಆಸ್ಪದಮಾಡಿಕೊಟ್ಟಿದೆ. ಪೊಲೀಸರು ಹೇಳುವಂತೆ ಈ ಬಂಧನಗಳು ನಿಜವಾಗಿಯೂ ಮಾವೋವಾದಿ ಕಮ್ಯುನಿಸ್ಟರ ಆರೋಪಿತ ಒಳಸಂಚಿಗೆ ಸಂಬಂಧಿಸಿದ್ದೇ ಅಥವಾ ಮಾವೋವಾದಿಗಳ ಸಕ್ರಿಯ ಬೆಂಬಲಿಗರು ಮತ್ತು ಸಹಾನುಭೂತಿಪರರ ನಡುವಣ ವ್ಯತ್ಯಾಸ ಗುರುತಿಸುವುದರಲ್ಲಿ ಆಗಿರುವ ವೈಫಲ್ಯವೇ?

ಸಾಮಾಜಿಕ ಅಸಮಾನತೆ, ಶೋಷಣೆ, ಅನ್ಯಾಯ ಮೊದಲಾದ ಕಾರಣಗಳಿಂದಾಗಿ ಎಡಪಂಥೀಯರತ್ತ ಒಲವು ಅಥವಾ ಸಹಾನುಭೂತಿ ಉಳ್ಳವರೆಲ್ಲರನ್ನು ಸಾರಾಸಗಟಾಗಿ ಹಿಂಸೆಗೆ ಕುಮ್ಮಕ್ಕು ನೀಡುವವರು, ‘ನಗರ ನಕ್ಸಲೀಯರು’ ಎಂದು ಆಧಾರರಹಿತವಾಗಿ ಆರೋಪಿಸುವುದು ತಪ್ಪಾಗುತ್ತದೆ. ಈ ಐವರು ಮಾನವಹಕ್ಕು ಕಾರ್ಯಕರ್ತರು ಪುಣೆಯ ಸಮೀಪ ಸಂಭವಿಸಿದ ಭೀಮಾ-ಕೋರೆಗಾಂವ್ ಗಲಭೆಯಲ್ಲಿ ಹಿಂಸೆಯನ್ನು ಪ್ರಚೋದಿಸಿದ್ದರೆ? ಹಾಗೂ ಅದಕ್ಕೂ ಮೀರಿದ ಫಿತೂರಿಯಲ್ಲಿ ಭಾಗಿಗಳೇ ಎಂಬುದನ್ನು ಸುಪ್ರೀಂ ಕೋರ್ಟಿನ ಮುಂದೆ ಋಜುವಾತುಪಡಿಸುವ ಹೊಣೆ ಈಗ ಪೊಲೀಸರ ಮೇಲಿದೆ. ಇನ್ನೂರು ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ನಡೆದ ಹೋರಾಟದ ಸ್ಥಳದ ಮಹತ್ವ ಕುರಿತಂತೆ ಸಂಭವಿಸಿದ ಗಲಭೆಯು ಸರಕಾರವನ್ನು ಉರುಳಿಸುವ ಮಾವೋವಾದಿ ಕಮ್ಯುನಿಸ್ಟರ ಸಂಚೆಂದೂ ಈ ಸಂಚಿಗೆ ಮಾನವ ಹಕ್ಕು ಕ್ರಿಯಾವಾದಿಗಳು ಬೆಂಬಲಿಸುತ್ತಿರುವರೆಂಬುದು ಪೊಲೀಸರ ವಾದ. ಇದು ನಿಜವೇ ಅಥವಾ ಕಟ್ಟುಕಥೆಯೇ ಎಂಬುದು ನ್ಯಾಯಾಸ್ಥಾನದಲ್ಲೇ ಇತ್ಯರ್ಥವಾಗಬೇಕು.

ಸಾಮಾಜಿಕ ಸಂಘರ್ಷವುಳ್ಳ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವ ಮಾನವಹಕ್ಕು ಕ್ರಿಯಾವಾದಿಗಳನ್ನು ವ್ಯವಸ್ಥೆ ಅನುಮಾನದ ಕಣ್ಣುಗಳಿಂದ ನೋಡುವುದು ಹೊಸತೇನಲ್ಲ. ಅವರು ತೀವ್ರಗಾಮಿಗಳೊಂದಿಗೆ ಶಾಮೀಲಾಗಿದ್ದು ಸರಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದಾರೆಂಬ ಆರೋಪಗಳು ಹಿಂದೆಯೂ ಕೇಳಿಬಂದಿರುವುದುಂಟು. ಆದರೆ ನ್ಯಾಯಾಲಯದ ಮುಂದೆ ಸಾಬೀತಾಗಿಲ್ಲ. ಈಗ ನ್ಯಾಯಾಲಯದ ಆದೇಶದಂತೆ ಗೃಹಬಂಧನದಲ್ಲಿರುವ ಐವರು ಮಾನವಹಕ್ಕು ಕ್ರಿಯಾವಾದಿಗಳು ಮಾವೋವಾದಿಗಳಿಗೆ ನಿಧಿ ಸಂಗ್ರಹಿಸಿಕೊಡುತ್ತಿದ್ದರು; ಅಕ್ರಮ ಚಟುವಟಿಕೆಗಳಲ್ಲಿ ಭಾಗಿಗಳು ಹಾಗೂ ‘‘ಉನ್ನತ ರಾಜಕೀಯ ಸ್ಥಾನಮಾನದಲ್ಲಿರುವವರನ್ನು ಗುರಿಯಾಗಿಸಿಕೊಂಡು’’ ಪಿತೂರಿ ನಡೆಸುತ್ತಿರುವ ಕಾನೂನುಬಾಹಿರ ತಂಡಗಳೊಂದಿಗೆ ಸಂಬಂಧ ಹೊಂದಿರುವರೆಂಬುದು ಪುಣೆಯ ಪೊಲೀಸರ ಹೇಳಿಕೆ. ದೃಢಪಡದ ಹತ್ಯೆ ಸಂಚಿನಲ್ಲಿ ಭಾಗಿಗಳೆನ್ನುವುದು ಗುರುತರವಾದ ಆರೋಪ. ಇದನ್ನು ಸಾಕ್ಷ್ಯಾಧಾರ ಸಮೇತ ನ್ಯಾಯಾಲಯದ ಮುಂದೆ ಋಜುವಾತುಪಡಿಸುವ ಗುರುತರವಾದ ಹೊಣೆ ಪೊಲೀಸರದ್ದಾಗಿದೆ. ಋಜುವಾತುಪಡಿಸುವುದರಲ್ಲಿ ಪೊಲೀಸರು ವಿಫಲರಾದಲ್ಲಿ ಭಿನ್ನದನಿಯನ್ನು ಹತ್ತಿಕ್ಕಲು ಸರಕಾರ ಕಾನೂನಿನ ದುರುಪಯೋಗಮಾಡಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಇತಿಹಾಸದುದ್ದಕ್ಕೂ ಇಂತಹ ಧರ್ಮನಾಮಾಂಕಿತ ಪ್ರಜಾಪೀಡಕ ವ್ಯವಸ್ಥೆಯನ್ನು ನಾವು ಕಾಣುತ್ತೇವೆ. ಹಾಗೆಯೇ ನಾಗರಿಕ ಪ್ರಜ್ಞೆ ಇಂಥ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತಿರುವ ನಿದರ್ಶನಗಳೂ ಇವೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಮೋದಿ ಮತ್ತು ಅವರ ಬಿಜೆಪಿ ಸರಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ದನಿಗಳಿಗೆ ‘ನಗರ ನಕ್ಸಲೀಯರು’ ಎಂಬ ಹೊಸ ಅಭಿದಾನ ನೀಡಲಾಗಿದೆ. ನಕ್ಸಲೀಯರು ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳಿಗೆ, ಶೋಷಣೆ ಮುಕ್ತ ಸಮಾಜಕ್ಕೆ, ಶ್ರಮಜೀವಿಗಳ ಸರಕಾರಕ್ಕೆ ಹೋರಾಡುತ್ತಾ ಬಂದಿರುವವರು ಎಂಬುದು ಮಾರ್ಕ್ಸ್ ಕಾಲದಿಂದ ಸಾಬೀತಾಗಿರುವ ಸತ್ಯ. ಅವರ ಹಿಂಸಾಮಾರ್ಗವನ್ನು ಒಪ್ಪದಿರುವವರೂ ಅವರ ಧ್ಯೇಯಾದರ್ಶಗಳನ್ನು ಅಲ್ಲಗಳೆಯಲಾರರು. ಅಡವಿಯೊಳಗಿದ್ದುಕೊಂಡೇ ಹೋರಾಟ ನಡೆಸುತ್ತಿರುವ ನಕ್ಸಲೀಯರನ್ನು ಮೂಲೋತ್ಪಾಟನೆಗೊಳಿಸಲು ಕಟಿಬದ್ಧವಾಗಿರುವ ಮೋದಿ ಸರಕಾರ ಈಗ ಅವರ ಪರ ಸಹಾನುಭೂತಿಯುಳ್ಳ ಚಿಂತಕರನ್ನು, ಸಾಮಾಜಿಕ ಕಾರ್ಯಕರ್ತರನ್ನು ‘ನಗರ ನಕ್ಸಲೀಯರು’ ಎಂದು ಬೇಟೆಯಾಡಲು ಶುರುಮಾಡಿದೆ. ಇದು ಮೋದಿ ಸರಕಾರದ ಆರ್ಭಟವೋ ಅಥವಾ ಅಸಹಾಯಕತೆಯಿಂದ ಮೈಪರಚಿಕೊಳ್ಳುತ್ತಿರುವ ಪರಿಯೋ ತಿಳಿಯದು.

ಹಿರಿಯ ರಾಜಕೀಯ ಮುತ್ಸದ್ದಿ ಶರದ್ ಪವಾರ್ ಅವರ ಪ್ರಕಾರ ಇದು ಮೋದಿ ಸರಕಾರ ತನ್ನ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಡೆಸಿರುವ ಹುನ್ನಾರ. ‘‘ಅವರು ವಾಮಪಂಥೀಯರು. ಅವರ ಸಿದ್ಧಾಂತ ವಾಮಪಂಥದ್ದು. ಹಾಗೆಂದು ಪ್ರತಿಯೊಬ್ಬ ವ್ಯಕ್ತಿಯನ್ನೂ ನಾನು ನಕ್ಸಲೈಟ್ ಎಂದು ಕರೆಯಲಾರೆ’’ ಎಂದಿರುವ ಶರದ್ ಪವಾರ್, ‘‘ಪ್ರೊ. ಎಂ. ಎಂ. ಕಲಬುರ್ಗಿ, ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ಪೊಲೀಸರು ನಡೆಸಿರುವ ಬಂಧನಗಳು ಮತ್ತು ಸಾಧಿಸಿರುವ ಪ್ರಗತಿಯಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನವಿದು’’ ಎನ್ನುತ್ತಾರೆ. ಪವಾರ್ ದೇಶದ ಹಿರಿಯ ರಾಜಕಾರಣಿ ಮತ್ತು ರಾಜಕಾರಣವನ್ನು ಚೆನ್ನಾಗಿ ಬಲ್ಲವರು. ಈವರೆಗಿನ ಬಂಧಿತರೆಲ್ಲರೂ ಸಂಘ ಪರಿವಾರಿಗಳು ಎಂಬುದನ್ನು ಗಮನಿಸಿದಾಗ ಪವಾರ್ ಅವರ ಲೆಕ್ಕಾಚಾರ ಸರಿಯಿರಲೂ ಬಹುದು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ತಮ್ಮ ಯೋಗ್ಯತೆಗೆ ತಕ್ಕಂತಹ ಸರಕಾರ ಪಡೆಯುತ್ತಾರೆ ಎಂಬ ನಾಣ್ನುಡಿಯೊಂದಿದೆ. ಇಂಥ ‘ಯೋಗ್ಯ’ ಸರಕಾರದ ಮೇಲೆ ನಿಗಾ ಇಡಲೆಂದೇ ನ್ಯಾಯಾಂಗ, ಪತ್ರಿಕಾ ರಂಗವೆಂಬ ಆಧಾರಸ್ತಂಭಗಳಿವೆ. ಪ್ರಜಾಪ್ರಭುತ್ವದಲ್ಲಿ ಕಾವಲು ನಾಯಿಯಾಗಿ ಕೆಲಸ ಮಾಡುವ ಇನ್ನೊಂದು ಅಂಗ ನಾಗರಿಕ ಪ್ರಜ್ಞೆ. ಸಾಹಿತಿಗಳು, ಕಲಾವಿದರು, ವೈದ್ಯರು, ವಕೀಲರು ಮೊದಲಾದ ಸಮಾಜದ ಕೆನೆಪದರ ಎನ್ನಬಹುದಾದ ಈ ಪ್ರಜ್ಞಾವಂತ ಸಮುದಾಯ ಚುನಾಯಿತ ಸರಕಾರವನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಾ ಬಂದಲ್ಲಿ ಅದು ಹಾದಿತಪ್ಪುವ ಸಂದರ್ಭಗಳಲ್ಲಿ ಎಚ್ಚರಿಸಬಹುದು. ಐವರು ಮಾನವಹಕ್ಕು ಕಾರ್ಯಕರ್ತರನ್ನು ಸ್ವಕಪೋಲಕಲ್ಪಿತ ಆಪಾದನೆಗಳ ಮೇಲೆ ಪುಣೆ ಪೊಲೀಸರು ಬಂಧಿಸಿದಾಗ ನಾಗರಿಕ ಸಮಾಜದ ಗಣ್ಯರಾದ ರೊಮಿಲಾ ಥಾಪರ್, ದೇವಕಿ ಜೈನ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಮತ್ತು ಮಾಜ ಧಾರೂವಾಲ ಮಾಡಿರುವುದು ಇದೇ ಕೆಲಸವನ್ನು. ಅವರ ಅರ್ಜಿಯನ್ನು ಮಾನ್ಯಮಾಡಿರುವ ಸರ್ವೋಚ್ಚ ನ್ಯಾಯಾಲಯ ಬಂಧನಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ‘‘ಪ್ರಜಾಪ್ರಭುತ್ವದಲ್ಲಿ ಭಿನ್ನದನಿಯು ಪ್ರೆಶರ್ ಕುಕ್ಕರ್‌ನಲ್ಲಿರುವ ಸುರಕ್ಷತಾ ಸಾಧನವಿದ್ದಂತೆ’’ ಎಂದು ರೂಪಕ ಭಾಷೆಯಲ್ಲಿ ಅದರ ಮಹತ್ವ ಕುರಿತು ಸರಕಾರಕ್ಕೆ ಕಿವಿಮಾತನ್ನೂ ಹೇಳಿದೆ.

ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ವ್ಯವಸ್ಥಿತವಾಗಿ ನಡೆದಿರುವ ಭಿನ್ನದನಿಯನ್ನು ಹತ್ತಿಕ್ಕುವ ಕೆಲಸವನ್ನು ಗಮನಿಸಿದಾಗ ಇಂದಿರಾಗಾಂಧಿಯವರು 1975ರಲ್ಲಿ ಹೇರಿದ ತುರ್ತು ಪರಿಸ್ಥಿತಿ ನೆನಪಾಗುವುದು ಸಹಜ. ಆಗ ಅದೊಂದು ಸಂವಿಧಾನವಿರೋಧಿ ಸಂವಿಧಾನಾತ್ಮಕ ಕ್ರಮವಾಗಿತ್ತು. ಅದು ಹೇಗೆ ತಪ್ಪು ಎಂದು ಪ್ರಜೆಗಳು ಚರ್ಚಿಸಬಹುದಿತ್ತು ಮತ್ತು ಪ್ರಶ್ನಿಸಬಹುದಿತ್ತು. ಆದರೆ ಈಗಿನ ಅಘೋಷಿತ ತುರ್ತುಪರಿಸ್ಥಿತಿಗೆ ಕಾನೂನಿನ ಬೆಂಬಲವೂ ಇಲ್ಲ.

‘‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವಹಕ್ಕುಗಳ ಉಲ್ಲಂಘನೆ ನಿತ್ಯವಿಧಿಯಂತೆ ನಡೆಯುತ್ತಿದೆ. ಮೋದಿ ಆಡಳಿತವನ್ನು ಯಾರು ಪ್ರಶ್ನಿಸುತ್ತಾರೋ ಅವರ ಮೇಲೆ ದಾಳಿ ನಡೆಸುವುದು ಇವುಗಳ ಹಿಂದಿನ ತರ್ಕವಿರುವಂತಿದೆ. ಇದಕ್ಕೆ ಆಡಳಿತದ ಅಂಗವಾಗಿರುವವರೂ ಹೊರತಲ್ಲ’’ ಎನ್ನುವ ಭಾಷಾ ಶಾಸ್ತ್ರಜ್ಞ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗಣೇಶ್ ಎನ್. ದೇವಿಯವರ ಮಾತಿನಲ್ಲಿ ಸತ್ಯಾಂಶವಿರುವಂತಿದೆ. ಇಂಥ ಪರಿಸ್ಥಿತಿಯಲ್ಲಿ ಸಾಹಿತಿಗಳು- ಕಲಾವಿದರಾದ ನಾವು ಏನು ಮಾಡಬಹುದು? ಪ್ರಜಾಸತ್ತಾತ್ಮಕ ಮೌಲ್ಯ ಗಳನ್ನೂ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ರಾಜಕಾರಣಿಗಳು ರಾಜಕೀಯ ಹೋರಾಟ ನಡೆಸುವಂತೆ ಸಾಹಿತಿಗಳೂ ಬರೆಯುವ ಮೂಲಕ ದನಿ ಎತ್ತಿ ಹೋರಾಟ ನಡೆಸಬೇಕು. ಅಂತೆಯೇ ಸಮಾಜದ ಪ್ರಜ್ಞಾವಂತರೆಲ್ಲರೂ ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹಾಗೂ ಸಂವಿಧಾನ ವನ್ನೂ ರಕ್ಷಿಸುವ ಕರ್ತವ್ಯವನ್ನು ಮಾಡಬೇಕು. ಎಂದೇ ಈ ನಿಟ್ಟಿನಲ್ಲಿ ‘ದಕ್ಷಿಣಾಯಣ’ ಕರ್ನಾಟಕ ಮತ್ತು ಗ್ರಾಮ ಸೇವಾ ಸಂಘ ಇಂದು ಬೆಂಗಳೂರಿನಲ್ಲಿ ಏರ್ಪಡಿಸಿರುವ ‘ಸಹಿಷ್ಣುತೆಗಾಗಿ ಸಾಹಿತ್ಯ’ ಸಮ್ಮೇಳನ ಸ್ವಾಗತಾರ್ಹ ಕ್ರಮವಾಗಿದೆ.

‘ದಕ್ಷಿಣಾಯಣ’ ಪ್ರೊ.ಗಣೇಶ್ ದೇವಿ ಸಂಘಟಿಸಿರುವ ಭಾರತೀಯ ಬರಹಗಾರರು ಮತ್ತು ಕಲಾವಿದರ ಸಂಘಟನೆ. ಅಭಿವ್ಯಕ್ತಿ ಸ್ವಾತಂತ್ರ್ಯಪರವಾದ ಎಲ್ಲ ಭಾಷೆಗಳ ಸಾಹಿತಿಕಲಾವಿದರ ವೇದಿಕೆಯಾಗಿರುವ ದಕ್ಷಿಣಾಯಣವು ಅನೇಕ ರಾಜ್ಯಗಳಲ್ಲಿ ಕ್ರಿಯಾಶೀಲವಾಗಿದೆ. ರಂಗ ಕರ್ಮಿ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಕ್ರಿಯಾಶೀಲವಾಗಿರುವ ಗ್ರಾಮ ಸೇವಾ ಸಂಘ ನಾಟಕ ಮತ್ತು ಇತರ ಕಲಾ ಮಾಧ್ಯಮಗಳ ಮೂಲಕ ಗಾಂಧೀಜಿಯವರ ಕಲ್ಪನೆಯ ಕೂಸಾದ ಗ್ರಾಮ ಸ್ವರಾಜ್ಯ ಮತ್ತು ಕೈ ಉತ್ಪನ್ನಗಳನ್ನು ತಯಾರಿಸುವ ಶ್ರಮಜೀವಿಗಳ ಪರವಾದ ಜನಾಂದೋಲನ ಸಂಘಟಿಸುವುದರಲ್ಲಿ ನಿರತವಾಗಿದೆ. ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದಕ್ಷಿಣಾಯಣ ಮತ್ತು ಗ್ರಾಮ ಸೇವಾಸಂಘ ದೇಶದಲ್ಲಿನ ಅನಧಿಕೃತ ತುರ್ತುಪರಿಸ್ಥಿತಿಯನ್ನು ಹೇಗೆ ನಿಭಾಯಿ ಸಬೇಕು ಎಂಬುದನ್ನು ಚರ್ಚಿಸಲು ಸಾಹಿತಿ ಕಲಾವಿದರ ಸಭೆ ಏರ್ಪಡಿಸಿರುವುದು ಸ್ತುತ್ಯಾರ್ಹವಾದುದು. ಈ ಸಮ್ಮೇಳನವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜಾತ್ಯತೀತ ಮೌಲ್ಯಗಳ ರಕ್ಷಣೆಯ ನಿಟ್ಟಿನಲ್ಲಿ ಬಹುತ್ವ ಭಾರತ ಉಳಿಸುವ ಚಳವಳಿಗೆ ಚಾಲಕಶಕ್ತಿಯಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)