varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 3 Sep, 2018

   ರಾಜ್ಯದಲ್ಲಿ ಮೈತ್ರಿ ಒಡೆದು ಸರಕಾರ ಉರಳಲು ಅದೇನು ಮಡಕೆಯಲ್ಲ - ಡಿ.ಕೆ.ಶಿವಕುಮಾರ್, ಸಚಿವ

 ಅದು ಕಾಗೆ ಗೂಡಿನಲ್ಲಿಟ್ಟ ಕೋಗಿಲೆಯ ಮೊಟ್ಟೆ ಎನ್ನುವ ಆರೋಪ ಇದೆ.

 ---------------------

ಸರಕಾರ ಉರುಳಿಸಬೇಕೆಂದು ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ -ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಆಮಿಷಕ್ಕೆ ಬಲಿಯಾಗದಿದ್ದರಾಯಿತು. ಚಿಂತೆ ಯಾಕೆ?

---------------------

ಯುವಕರಿಗೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ -ನಳಿನ್‌ಕುಮಾರ್ ಕಟೀಲು, ಸಂಸದ

ನಿಮ್ಮಂತಹ ನಾಯಕರಿದ್ದರೆ ಕೊರತೆ ಇರುವುದು ಸಹಜವೇ ಆಗಿದೆ.

 ---------------------

   ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಪಡೆಯುವುದು ನಿಶ್ಚಿತ -ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ

ಮೊದಲು ಮೈತ್ರಿ ಕೂಟ ಎಲ್ಲಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ.

 ---------------------

ದೋಣಿಯಲ್ಲಿ ಸಾಗುತ್ತಿರುವ ಸರಕಾರವನ್ನು ಮುಳುಗಿಸಲು ಕೆಲವರು ಕಾಯುತ್ತಿದ್ದಾರೆ -ಎಚ್.ಡಿ.ರೇವಣ್ಣ, ಸಚಿವ

ಎರಡು ದೋಣಿಯಲ್ಲಿ ಕಾಲಿಟ್ಟು ಸಾಗುತ್ತಿರುವ ಸರಕಾರ ಎಂದರೆ ಚೆನ್ನಾಗಿತ್ತು.

---------------------

ನನಗೆ ಯಾರೂ ಗೌರವ ನೀಡುತ್ತಿಲ್ಲ - ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖಂಡ

ಗೌರವ ಕೊಡುವ ರೀತಿಯಲ್ಲಿ ವರ್ತಿಸಿದರೆ ಗೌರವ ಸಿಕ್ಕೀತು.

---------------------

ಬಿಜೆಪಿ ಮಣಿಸಲು ಪ್ರತಿಪಕ್ಷಗಳ ಮೈತ್ರಿ ಅಗತ್ಯ -ಪಿ.ಚಿದಂಬರಂ, ಮಾಜಿ ಕೇಂದ್ರ ಸಚಿವ

ಮೊದಲು ಪ್ರತಿಪಕ್ಷಗಳು ಎಲ್ಲಿವೆ ಎನ್ನುವುದು ಹುಡುಕಿ.

---------------------

ನಾಯಕ ಹೇಗಿರುತ್ತಾನೋ, ಅವನಂತೆಯೇ ಅವನ ತಂಡದವರು ಇರುತ್ತಾರೆ -ಪ್ರಹ್ಲಾದ್ ಜೋಷಿ, ಸಂಸದ

ಹದಗೆಟ್ಟ ಬಿಜೆಪಿ ತಂಡವನ್ನು ನೋಡಿದಾಗಲೇ ಅದು ಮನವರಿಕೆಯಾಗುತ್ತದೆ.

---------------------

ನಾನು ಯಾರ ಕಾಲನ್ನು ಎಳೆದಿಲ್ಲ, ಎಳೆಯುವುದೂ ಇಲ್ಲ - ಡಿ.ಕೆ.ಶಿವಕುಮಾರ್, ಸಚಿವ

ಮತ್ತೇನನ್ನು ಎಳೆದಿದ್ದೀರಿ ಎನ್ನುವುದನ್ನಾದರೂ ತಿಳಿಸಿ.

---------------------

ಅಟಲ್ ಬಿಹಾರಿ ವಾಜಪೇಯಿ ಶತ್ರುವನ್ನು ಗೌರವಿಸಿದ ನಾಯಕ -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಶಿರೂರು ಸ್ವಾಮೀಜಿಯ ವಿಷಯದಲ್ಲಿ ಅಟಲ್ ನಿಮಗೆ ಆದರ್ಶವಾಗಬೇಕಾಗಿತ್ತು.

---------------------

ಸ್ವತಂತ್ರ ಭಾರತದಲ್ಲಿ ಒಂದು ಗೋಸ್ವರ್ಗ ನಿರ್ಮಾಣ ಮಾಡಲು 72 ವರ್ಷ ಬೇಕಾಯಿತು -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಜನರ ಬದುಕನ್ನು ನರಕವಾಗಿಸಿ ಗೋವುಗಳಿಗೆ ಸ್ವರ್ಗವೇ?

---------------------

ಭಯೋತ್ಪಾದನೆಯೇ ಜಗತ್ತಿನ ಪ್ರಧಾನ ಶತ್ರು -ಎಂ.ಜೆ.ಅಕ್ಬರ್, ಕೇಂದ್ರ ಸಚಿವ

ಭಾರತದ ಪಾಲಿಗೆ ಮಾತ್ರ ಮಿತ್ರ ಎಂದು ಹೇಳಿದರಂತೆ, ಸನಾತನ ಸಂಸ್ಥೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ ರಾಜಕೀಯ ನಾಯಕರು.

---------------------

   ಕೊಡಗು ಈಗ ಒಂದು ದೃಷ್ಟಿಯಿಂದ ಅನಾಥ ಸ್ಥಿತಿಯಲ್ಲಿದೆ -ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ಅಲ್ಲಿರುವ ಬುಡಕಟ್ಟು, ಆದಿವಾಸಿ ಜನರು ಹಲವು ದಶಕಗಳಿಂದ ಅನಾಥರಾಗಿಯೇ ಬದುಕುತ್ತಾ ಬಂದಿದ್ದಾರೆ.

---------------------

ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತ - ನರೇಂದ್ರ ಮೋದಿ, ಪ್ರಧಾನಿ

ಪ್ರಜಾಪ್ರಭುತ್ವ ಆರೋಗ್ಯಕರವಾಗಿದ್ದರೆ, ನಿಮ್ಮ ಪಾಡೇನು?

---------------------

ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರು ಇರಬೇಕು - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ

   ಸಮನ್ವಯ ಇಲ್ಲದಿದ್ದರೂ ಪರವಾಗಿಲ್ಲ ಅಲ್ಲವೇ?

---------------------

ಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಪ್ರಧಾನಿ ಪಟ್ಟ ನೀಡಬೇಕು -ಶರದ್‌ಪವಾರ್, ಎನ್‌ಸಿಪಿ ವರಿಷ್ಠ

ಮೊದಲು ಹೆಚ್ಚು ಸ್ಥಾನ ಪಡೆಯುವ ಕುರಿತಂತೆ ಯೋಚನೆ ಮಾಡಿ.

---------------------

ಸಮ್ಮಿಶ್ರ ಸರಕಾರಕ್ಕೆ ಬಾಲಗ್ರಹ ಪೀಡೆ - ಅನಂತಕುಮಾರ್, ಕೇಂದ್ರ ಸಚಿವ

ಬಾಲ ಕತ್ತರಿಸಿದರೆ ಆಯಿತು.

---------------------

ರಫೇಲ್ ವ್ಯವಹಾರ ಶತಮಾನದ ದೊಡ್ಡ ಹಗರಣ - ವೀರಪ್ಪ ಮೊಯ್ಲಿ, ಸಂಸದ

ಅದರ ಕುರಿತಂತೆಯೇ ಮಹಾಕಾವ್ಯ ಬರೆಯುವ ಯೋಜನೆಯಿದೆಯೇ?

---------------------

ಕನ್ನಡಕಕ್ಕಿಂತಲೂ ಕಣ್ಣು ಮುಖ್ಯ -ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

ಕನ್ನಡಕ್ಕಿಂತಲೂ ಹಿಂದಿ ಮುಖ್ಯ ಎನ್ನುವವರಿಗೆ ಈ ಗಾದೆ ಅನ್ವಯವಾಗುತ್ತದೆ.

---------------------

   ಬಿಜೆಪಿಗೆ ವೋಟು ಹಾಕುವವರು ಮುಸ್ಲಿಂ ಆಗಿರಲು ಸಾಧ್ಯವಿಲ್ಲ -ಝಮೀರ್ ಅಹ್ಮದ್ ಖಾನ್, ಸಚಿವ

ಕಾಂಗ್ರೆಸ್‌ಗೆ ಓಟು ಹಾಕಿದವರಷ್ಟೇ ಮುಸ್ಲಿಮರು ಎಂದು ಹೇಳಲಿಲ್ಲ, ಪುಣ್ಯ.

 ---------------------

ಪ್ರತಿಯೊಂದು ಬಯಕೆಯ ಹಿಂದೆಯೂ ಪ್ರೇಮವಿದೆ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ

   ಅಕ್ರಮ ಭೂಮಿಯ ಮೇಲಿರುವ ಪ್ರೇಮಕ್ಕೂ ಇದು ಅನ್ವಯಿಸುತ್ತದೆಯೇ?

---------------------

ರಾಜ್ಯ ಸರಕಾರ ಕುಸಿದು ಬಿದ್ದರೆ ಬಿಜೆಪಿ ಹೊಣೆಯಲ್ಲ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

 ಕೊಡಗಿನಲ್ಲಿ ಸುರಿದ ಮಳೆಯೇ ಕುಸಿತಕ್ಕೆ ಕಾರಣ ಎಂದರಾಯಿತು.

---------------------

ಬಾತುಕೋಳಿ ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ತನ್ನಿಂದ ತಾನೇ ವೃದ್ಧಿಯಾಗುತ್ತದೆ -ಬಿಪ್ಲವ್‌ಕುಮಾರ್ ದೇಬ್, ತ್ರಿಪುರ ಮುಖ್ಯಮಂತ್ರಿ

ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್ ಬದಲಿಗೆ, ಬಾತುಕೋಳಿಗಳನ್ನು ಸಾಕಲು ಸಲಹೆಯೇ?

---------------------

ಬಿಜೆಪಿಯವರು ಕ್ಯಾನ್ಸರ್ ಇದ್ದಂತೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕ್ಯಾನ್ಸರ್ ಶ್ವಾಸಕೋಶವನ್ನು ಆವರಿಸಿ ಆಗಿದೆ.

---------------------

ಸಚಿವೆ ಜಯಮಾಲಾ ನಮಗಿಂತ ಹೆಚ್ಚು ಗ್ಲಾಮರಸ್ ಆಗಿದ್ದಾರೆ -ಪ್ರಮೋದ್ ಮಧ್ವರಾಜ್, ಮಾಜಿ ಸಚಿವ

ಹೊಸ ಪಿಕ್ಚರ್ ತೆಗೆಯುವ ಉದ್ದೇಶವೇನಾದರೂ ಇದೆಯೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು