varthabharthi

ಸಂಪಾದಕೀಯ

ಸರ್ವರಿಗೆ ಆರೋಗ್ಯ: ವಿಶ್ವದ ಆತ್ಮವಂಚನೆ

ವಾರ್ತಾ ಭಾರತಿ : 3 Sep, 2018

ಸರ್ವರಿಗೆ ಆರೋಗ್ಯ, ಸರ್ವರಿಗೆ ಶಿಕ್ಷಣ ಎನ್ನುವ ಪದವನ್ನು ನಮ್ಮ ನಾಯಕರು ಸದಾ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಆದರೆ, ಶಿಕ್ಷಣ ಮತ್ತು ಆರೋಗ್ಯದಿಂದ ಈ ದೇಶದ ಒಂದು ದೊಡ್ಡ ಸಮೂಹ ದೂರ ಸರಿಯುತ್ತಿದೆ. ಸರಕಾರಿ ಆಸ್ಪತ್ರೆಗಳು ಮತ್ತು ಸರಕಾರಿ ಶಾಲೆಗಳ ದುರವಸ್ಥೆಯೇ ನಮ್ಮ ಆರೋಗ್ಯ ಮತ್ತು ಶಿಕ್ಷಣ ಹೇಗೆ ಸರ್ವರಿಂದ ದೂರವಾಗಿ, ಕೆಲವರಿಗಷ್ಟೇ ಸೀಮಿತವಾಗಿದೆ ಎನ್ನುವುದನ್ನು ಹೇಳುತ್ತವೆೆ. ದೇಶದಲ್ಲಿ ಬೃಹತ್ ಆಸ್ಪತ್ರೆಗಳು ತಲೆಯೆತ್ತುತ್ತಿವೆಯಾದರೂ, ಅದು ಸರ್ವರನ್ನು ಗುರಿಯಾಗಿಟ್ಟುಕೊಂಡು ನಿರ್ಮಾಣವಾಗಿಲ್ಲ. ಆದುದರಿಂದಲೇ, ಬಡತನ, ಆರೋಗ್ಯ, ಶಿಕ್ಷಣದಲ್ಲಿ ಭಾರತ ಮತ್ತೆ ಹಿಂದಕ್ಕೆ ಹೆಜ್ಜೆಯಿಕ್ಕಲು ಆರಂಭಿಸಿದೆ. ಈ ಜಗತ್ತಿನ ತಳಸ್ತರದವರೆಗಿನ ಜನರಿಗೂ ಆರೋಗ್ಯ ಸುರಕ್ಷೆಯ ಭರವಸೆ ಸಿಗಬೇಕು ಎನ್ನುವುದು ಜಗತ್ತಿನ ಅತಿ ದೊಡ್ಡ ಕನಸಾಗಿತ್ತು.

1978ರಲ್ಲಿ ಕಜಕಿಸ್ತಾನದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಸಮ್ಮೇಳನದ ಈ ಹಿನ್ನೆಲೆಯಲ್ಲಿ ‘ಅಲ್ಮ ಅತ’ ಘೋಷಣೆಯನ್ನು ಮಾಡಲಾಯಿತು. ಮೊತ್ತಮೊದಲ ಬಾರಿ 134 ದೇಶಗಳ ಚುನಾಯಿತ ಪ್ರತಿನಿಧಿಗಳು ಮತ್ತು 67 ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಆರೋಗ್ಯದ ಸಾಮಾನ್ಯ ವ್ಯಾಖ್ಯಾನವನ್ನು ಜೊತೆಯಾಗಿ ಒಪ್ಪಿಕೊಂಡು ಈ ಘೋಷಣೆಯನ್ನು ಮಾಡಿದ್ದಾರೆ. ಅನಾರೋಗ್ಯದ ಕಾರಣಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಅರ್ಥೈಸಿ, ಪ್ರಾಥಮಿಕ ಆರೋಗ್ಯ ಸುರಕ್ಷೆಯನ್ನು ಸರ್ವರ ಹಕ್ಕಾಗಿ ಈ ಸಮ್ಮೇಳನ ಪರಿಗಣಿಸಿತ್ತು. ಈ ಘೋಷಣೆಯಲ್ಲಿ ಅನಾರೋಗ್ಯಕ್ಕೆ ಕಾರಣವನ್ನು ಆಸ್ಪತ್ರೆಗಳ ನಾಲ್ಕು ಗೋಡೆಗಳ ಆಚೆಗೆ ಬಂದು ಪರಿಶೀಲಿಸಲಾಗಿತ್ತು. ಈ ಸೆಪ್ಟಂಬರ್‌ಗೆ ಅಲ್ಮ ಅತ ಘೋಷಣೆಗೆ 40 ವರ್ಷ ತುಂಬುತ್ತದೆ. ಅಲ್ಮ ಅತ ಘೋಷಣೆಯಲ್ಲಿ ಆರೋಗ್ಯವನ್ನು ಕೇವಲ ರೋಗಗಳು ಇಲ್ಲದಿರುವುದು ಎಂದು ಪರಿಗಣಿಸದೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವ್ಸಾಸ್ಥ ಎಂದು ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನ ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷತೆಯ ಪರಿಕಲ್ಪನೆ ಜೊತೆಯಾಗಿ ಈ ಘೋಷಣೆಯ ಎರಡು ಮುಖ್ಯ ತತ್ವಗಳನ್ನು ರೂಪಿಸಿವೆ. ಇದರಲ್ಲಿ ಆರೋಗ್ಯವನ್ನು ಮಾನವ ಹಕ್ಕು ಎಂದು ಗುರುತಿಸಲಾಗಿದೆ ಮತ್ತು ಅದನ್ನು ಗಳಿಸಲು ಆರೋಗ್ಯ ಕ್ಷೇತ್ರದ ಜೊತೆಗೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳು ಸಕ್ರಿಯವಾಗಿ ಭಾಗವಹಿಸುವ ಮತ್ತು ಫಲಿತಾಂಶ ನೀಡುವ ಅಗತ್ಯವಿದೆ.

ಉದಾಹರಣೆಗೆ, ಮಹಿಳಾ ಸಾಕ್ಷರತೆ ಯಾವುದೇ ಸಮುದಾಯದ ಆರೋಗ್ಯ ಸ್ಥಿತಿಯನ್ನು ಉತ್ತಮಗೊಳಿಸಲು ಒಂದು ಪರಿಣಾಮಕಾರಿ ಸಾಧನವಾಗಿದೆ. ಕೇರಳ ಮತ್ತು ತಮಿಳುನಾಡು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಆ ರಾಜ್ಯಗಳ ಮಹಿಳಾ ಸಾಕ್ಷರತಾ ಮಟ್ಟವೂ ಸಹಕಾರಿಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿಕ್ಷಣದ ಜೊತೆಗೆ, ಶುದ್ಧ ನೀರು, ಸ್ವಚ್ಛತೆ, ತಾಯಿ ಮತ್ತು ಮಗುವಿನ ಆರೋಗ್ಯ, ಲಸಿಕೆ, ಚಿಕಿತ್ಸೆ ಒದಗುವಿಕೆ ಮತ್ತು ಅಗತ್ಯ ಔಷಧಿಗಳ ಲಭ್ಯತೆ ಈ ಎಂಟು ವಿಷಯಗಳು ಪ್ರಾಥಮಿಕ ಆರೋಗ್ಯ ಸುರಕ್ಷತೆಯ ಪ್ರಮುಖ ಭಾಗಗಳು ಎಂದು ಘೋಷಣೆ ತಿಳಿಸುತ್ತದೆ. ಇವುಗಳ ಮೂಲಕ 2000 ವೇಳೆಗೆ ಸರ್ವರಿಗೂ ಆರೋಗ್ಯದ ಗುರಿಯನ್ನು ತಲುಪಬಹುದು ಎಂದು ಘೋಷಣೆಯಲ್ಲಿ ತಿಳಿಸಲಾಗಿದೆ. ಆದರೆ ಈ ಘೋಷಣೆ ಇಂದು ಭಾರತ ಮಾತ್ರವಲ್ಲ, ವಿಶ್ವಾದ್ಯಂತ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎನ್ನುವುದನ್ನು ಅವಲೋಕಿಸಿದರೆ ನಿರಾಸೆಯಾಗುತ್ತದೆ. ಭಾರತಕ್ಕಂತೂ ಈ ಘೋಷಣೆಯ ಅಂಚನ್ನು ತಲುಪುವುದಕ್ಕೂ ಸಾಧ್ಯವಾಗುತ್ತಿಲ್ಲ. ಸದ್ಯದ ಅಭಿವೃದ್ಧಿ ಪರಿಕಲ್ಪನೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಹಕ್ಕುಗಳನ್ನು ಸಂಪೂರ್ಣ ನಿರ್ಲಕ್ಷಿಸುತ್ತಾ ಬಂದಿದೆ. ಸರ್ವರಿಗೆ ಆರೋಗ್ಯ ಗುರಿಯನ್ನು ಸಾಧಿಸಬೇಕಾದರೆ ಮೊದಲು ನಮ್ಮ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವ ಬಜೆಟ್‌ನ್ನು ಹೆಚ್ಚಿಸಬೇಕು.

ಸದ್ಯ, ಭಾರತ ತನ್ನ ಜಿಡಿಪಿಯ ಕೇವಲ ಶೇ.1.2ರಷ್ಟು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಅತ್ಯಂತ ಕಡಿಮೆ ವೆಚ್ಚ ಮಾಡುವ ದೇಶಗಳ ಸಾಲಿನಲ್ಲಿ ಭಾರತವೂ ಒಂದು. ಎರಡನೆಯದಾಗಿ, ಆರೋಗ್ಯ ಕ್ಷೇತ್ರದಲ್ಲಿರುವ ಕನಿಷ್ಠ ಸಂಪನ್ಮೂಲಗಳು ಕೇವಲ ಬೆರಳೆಣಿಕೆಯ ಜನರಿಗಷ್ಟೇ ತಲುಪುತ್ತದೆ ಮತ್ತು ಬಹುದೊಡ್ಡ ಸಂಖ್ಯೆಯ ಜನರಿಗೆ ಏನೇನೂ ಲಭ್ಯವಾಗುವುದಿಲ್ಲ. ಮೂರನೆಯದಾಗಿ, ಯಾವುದೇ ಜಾತಿ ಮತ್ತು ವರ್ಗ ಆಧಾರಿತ ತಾರತಮ್ಯ ಮಾಡದೆ ಎಲ್ಲರಿಗೂ ಒಂದೇ ಗುಣಮಟ್ಟದ ಆರೋಗ್ಯ ಸೇವೆ ಲಭಿಸುವಂತೆ ಮಾಡಬೇಕು. ಭಾರತದ ಪಾಲಿಗೆ ಇದಾವುದೂ ಸಾಧ್ಯವಾಗುತ್ತಿಲ್ಲ. ಎಲ್ಲಕ್ಕಿಂತ ವಿಷಾದನೀಯ ಸಂಗತಿಯೆಂದರೆ, ಸಾರ್ವಜನಿಕ ಆರೋಗ್ಯಕ್ಕಾಗಿ ಮೀಸಲಿಟ್ಟ ಹಣವನ್ನು ಇದೀಗ ಆಯುರ್ವೇದ, ಹೋಮಿಯೋಪತಿ ಮೊದಲಾದ ಚಿಕಿತ್ಸಾ ಪದ್ಧತಿಗಳಿಗೆ ಹಂಚುತ್ತಿರುವುದು. ಆರೋಗ್ಯಕ್ಕಾಗಿ ಮೀಸಲಿಟ್ಟಿರುವ ವೈಜ್ಞಾನಿಕವಾಗಿ ಅಸ್ಪಷ್ಟವಾಗಿರುವ ಚಿಕಿತ್ಸಾ ವಿಧಾನಗಳಿಗೂ ಹಂಚಿಹೋಗುತ್ತಿದೆ. ಇದರ ನೇರ ಪರಿಣಾಮವನ್ನು ಈ ದೇಶದ ಬಡವರು ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಆರೋಗ್ಯವೆನ್ನುವುದು ಕೇವಲ ಔಷಧಿಗಳು, ಆಸ್ಪತ್ರೆಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಸುತ್ತಿಕೊಂಡಿದೆ. ಆಸ್ಪತ್ರೆಗಳ ನಾಲ್ಕು ಗೋಡೆಗಳ ಆಚೆಗೆ ಅನಾರೋಗ್ಯಕ್ಕೆ ನಿಜವಾದ ಕಾರಣಗಳನ್ನು ಸೃಷ್ಟಿಸುವ ಅಂಶಗಳತ್ತ ಗಮನಹರಿಸುವ ಅಗತ್ಯವಿದೆ. ಅದು ನಿರುದ್ಯೋಗ ಆಗಿರಬಹುದು, ಕಡಿಮೆ ಉದ್ಯೋಗ, ಕಳಪೆ ವಾಸಸ್ಥಳ, ಜನದಟ್ಟಣೆ, ಪೌಷ್ಟಿಕ ಆಹಾರದ ಕೊರತೆ, ಶುದ್ಧ ನೀರಿನ ಕೊರತೆ, ಅನಕ್ಷರತೆ ಮತ್ತು ಲಿಂಗ ತಾರತಮ್ಯವೂ ಆಗಿರಬಹುದು.

ಸಾಮಾಜಿಕ ಜಾಗೃತಿ ಮತ್ತು ಆರೋಗ್ಯ ಜೊತೆ ಜೊತೆಯಾಗಿ ಸಾಗುತ್ತದೆ ಎಂದು ಅಲ್ಮ ಅತಾ ಘೋಷಣೆ ಹೇಳುತ್ತದೆ. ಆದರೆ ದೇಶದಲ್ಲಿ ನೋಟು ನಿಷೇಧದ ಬಳಿಕವಂತೂ ಈ ಸಾಮೂಹಿಕ ಭಾಗೀದಾರಿಕೆಯಲ್ಲಿ ಹಿನ್ನಡೆಯಾಗಿದೆ. ದೇಶ ನಗರ ಮತ್ತು ಗ್ರಾಮವಾಗಿ ಒಡೆದಿದೆ. 1990ರ ವೇಳೆಗೆ, ವಿಶ್ವ ಬ್ಯಾಂಕ್ ಮತ್ತು ಐಎಂಎಫ್‌ನ ಒತ್ತಾಯದ ಮೇರೆಗೆ ಅನೇಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಖಾಸಗೀಕರಣ ಮತ್ತು ಉದಾರವಾದದ ಪ್ರಕ್ರಿಯೆಯನ್ನು ಆರಂಭಿಸಿದ್ದವು. ಸಮಯ ಉರುಳಿದಂತೆ, ಸಾರ್ವಜನಿಕ ಆರೋಗ್ಯ ಸೇವೆ ಕ್ಷೇತ್ರ ಕೂಡಾ ನಿಧಾನವಾಗಿ ಖಾಸಗಿ-ಸರಕಾರ ಭಾಗಿದಾರಿಕೆಯಲ್ಲಿ ಖಾಸಗಿ ಕ್ಷೇತ್ರದ ಪಾಲಾಯಿತು. ಜೊತೆಗೆ, ಸರಕಾರಗಳು, ನಿಯಂತ್ರಿತ ಮತ್ತು ರೋಗಿಗಳನ್ನು ಕೊಳ್ಳೆ ಹೊಡೆಯುವ ಖಾಸಗಿ ಆರೋಗ್ಯ ಸೇವಾ ಕ್ಷೇತ್ರವನ್ನು ಸ್ಥಿರವಾಗಿ ಪ್ರೋತ್ಸಾಹಿಸಲು ಆರಂಭಿಸಿತು. ಅದರ ಫಲವಾಗಿ ಸದ್ಯ ಸರಕಾರ ಆರೋಗ್ಯ ಕ್ಷೇತ್ರವನ್ನು ಬಂಡವಾಳ ಹೂಡಿಕೆಯ ಕ್ಷೇತ್ರವಾಗಿ ಪರಿಗಣಿಸುತ್ತಿದೆ. ಉದಾಹರಣೆಗೆ, ಭಾರತೀಯ ಆರೋಗ್ಯ ಸೇವೆ ಕೈಗಾರಿಕೆಯು 2017ರಲ್ಲಿ 160 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿತ್ತು ಮತ್ತು 2020ರ ವೇಳೆಗೆ ಈ ಮೊತ್ತ 372 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇವೆಲ್ಲವೂ ಅಲ್ಮ ಅತ ಘೊಷಣೆಯ ದೃಷ್ಟಿಕೋನದ ವಿರುದ್ಧವಾಗಿ ನಡೆಯುತ್ತಿದೆ.

ಅಲ್ಮ ಅತ ಘೋಷಣೆಯ ಕುರಿತಂತೆ ಸ್ವತಃ ವಿಶ್ವಸಂಸ್ಥೆಗೇ ಆಸಕ್ತಿ ಇಲ್ಲ. 2000ದಲ್ಲಿ ಸರ್ವರಿಗೂ ಆರೋಗ್ಯ ಗುರಿ ತಲುಪಲು ಸಾಧ್ಯವಾಗದಾಗ ವಿಶ್ವಾದ್ಯಂತದ ಅನೇಕ ಆರೋಗ್ಯ ಕಾರ್ಯಕರ್ತರು ಬಾಂಗ್ಲಾದೇಶದ ಢಾಕಾದ ಸವರ್‌ನಲ್ಲಿ ಸಭೆ ನಡೆಸಿ ಈ ವೈಫಲ್ಯದ ಬಗ್ಗೆ ಚರ್ಚೆ ನಡೆಸಿದರು. ದುರದೃಷ್ಟವಶಾತ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಈ ಸಭೆಗೆ ಗೈರಾಗಿತ್ತು. ಅಂತಿಮವಾಗಿ, ಢಾಕಾ ಸಭೆಯನ್ನು ಜನರ ಆರೋಗ್ಯ ಚಳವಳಿ ಎಂದು ಬದಲಿಸಲಾಯಿತು. ಈ ಚಳವಳಿಯ ಮೂಲಕ 70 ದೇಶಗಳಲ್ಲಿ ಆರೋಗ್ಯದ ಹಕ್ಕಿಗಾಗಿ ಹೋರಾಟ ನಡೆಸಲಾಗುತ್ತಿದೆ. ಈ ಚಳವಳಿಯೊಂದೇ ಸದ್ಯಕ್ಕೆ, ವಿಶ್ವದ ತಳಸ್ತರದ ಜನರ ಆರೋಗ್ಯದ ಕಾಳಜಿಯ ಕುರಿತಂತೆ ಇರುವ ಏಕೈಕ ಆಶಾಕಿರಣವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)