varthabharthi

ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ದಲಿತ ಬಹುಜನರ ಅಜ್ಞಾತ ಕೊಡುಗೆಗಳನ್ನು ತೆರೆದಿಡುವ ‘ಹಿಂದೂ ಧರ್ಮೋತ್ತರ ಭಾರತ’

ವಾರ್ತಾ ಭಾರತಿ : 4 Sep, 2018
-ಕಾರುಣ್ಯಾ

ದಲಿತ ಬಹುಜನರು ಸಾಮಾಜಿಕ, ಧಾರ್ಮಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಕ್ರಾಂತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಾಂಚ ಐಲಯ್ಯ ಅವರು ಬರೆದ ಕೃತಿ ‘ಹಿಂದೂ ಧರ್ಮೋತ್ತರ ಭಾರತ’. ಡಾ. ಜಾಜಿ ದೇವೇಂದ್ರಪ್ಪ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿ ಆಂಧ್ರ ಪ್ರದೇಶದ ದಲಿತ ಬಹುಜನರನ್ನು ಕೇಂದ್ರವಾಗಿಟ್ಟುಕೊಂಡು ರಚಿಸಲ್ಪಟ್ಟಿದೆ. ಇಲ್ಲಿನ ದುಡಿಯುವ ವರ್ಗಗಳಲ್ಲಿ ಹುಟ್ಟಿದ, ಬೆಳೆದ ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಸಾಮಾಜಿಕ, ತತ್ವಶಾಸ್ತ್ರ, ಧಾರ್ಮಿಕ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಗ್ರಾಮೀಣ ಪ್ರಕ್ರಿಯೆಯಲ್ಲಿರುವ ವೈಜ್ಞಾನಿಕ, ತಾಂತ್ರಿಕ, ತಾತ್ವಿಕ ಅಂಶಗಳ ಮೇಲೆ ಸುದೀರ್ಘ ಸಂಶೋಧನೆಯ ಅನಂತರ ಹಿಂದೂಯಿಸಂ ಈ ದೇಶದಲ್ಲಿ ವಿಜ್ಞಾನ ಅಭಿವೃದ್ಧಿಯಾಗಲು ಒಡ್ಡಿದ ಅಡ್ಡ ಗೋಡೆಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
 ‘‘ಪ್ರತಿಯೊಂದು ಸಂಸ್ಕೃತಿ, ನಾಗರಿಕತೆಗಳಿಗೆ ಆಯಾ ಕಾಲಘಟ್ಟಗಳಲ್ಲಿ ಹೆಜ್ಜೆ ಗುರುತುಗಳು, ತಲ್ಲಣಗಳಿರುತ್ತವೆ. ಅದರಲ್ಲಿಯೂ ವೈದಿಕರ ಸಾಂಸ್ಕೃತಿಕ ಚಹರೆಯು ಉಳಿದ ಕುಲಗಳಿಂದಲೇ ರೂಪು ಪಡೆದಿವೆಯೆಂಬುದು ಮುಖ್ಯ. ಈ ವೈದಿಕರ ಸಾಂಸ್ಕೃತಿಕತೆಯು ಉತ್ಪಾದನಾ, ಶ್ರಮಮೂಲ ವರ್ಗಗಳನ್ನು ಅವಲಂಬಿಸಿದೆೆ. ಮನುಷ್ಯ ಸಮಾಜದ ಮೂಲಕ ಸಂಸ್ಕೃತಿಯನ್ನು, ನಾಗರಿಕತೆಗಳನ್ನು ಶೋಷಕ ಜಾತಿಗಳು ಹಿಮ್ಮೆಟ್ಟಿಸಿವೆ. ಇತರ ಕುಲಗಳ ಸಂಸ್ಕೃತಿಯನ್ನು ಅವರ ಮೂಲಚಹರೆಯನ್ನು ಬ್ರಾಹ್ಮಣ ಸಂಸ್ಕೃತಿಯು ಸರ್ವನಾಶ ಮಾಡಿದೆ. ಬ್ರಾಹ್ಮಣ ಸಂಸ್ಕೃತಿ, ನಾಗರಿಕತೆಯೇ ಶ್ರೇಷ್ಠವೆಂಬ ಭ್ರಮೆಯನ್ನು ಬಿತ್ತಲಾಯಿತು. ಅಲ್ಲದೆ ಉತ್ಪಾದನೆಯ ಹರಿಕಾರರಾದ ದುಡಿಯುವ ವರ್ಗವು ಇದನ್ನು ನಂಬುವಂತೆ ಮಾಡಲಾಯಿತು. ಇಂತಹ ಆಕ್ರಮಣಕಾರಿ ನೀತಿಯಿಂದಾಗಿ ಮಾನವೀಯ ಸೃಜನಶೀಲತೆಯ ಮೂಲಗಳು ಬೆಳಕಿಗೆ ಬಾರದೇ ಹೋಯಿತು. ಇವೆಲ್ಲವೂ ಉದ್ದೇಶಪೂರ್ವಕವಾಗಿಯೇ ನಡೆಯಿತು. ಆದರೆ ಆದಿವಾಸಿ ಸಮುದಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾನವೀಯ ಸೃಜನಾತ್ಮಕ ನೆಲೆಗಳು ಇರುವುದು ಇಂದಿಗೂ ಸ್ಪಷ್ಟವಾಗಿ ಗೋಚರವಾಗುತ್ತದೆ’’ ಎನ್ನುವ ಅಂಶವನ್ನು ಈ ಕೃತಿ ಹೇಳುತ್ತದೆ.
ಉಚಿತ ಶಿಕ್ಷಕರು ಅಧ್ಯಾಯದಲ್ಲಿ, ಹೇಗೆ ಆದಿವಾಸಿ ಜ್ಞಾನವ್ಯವಸ್ಥೆ ನೆಲದಲ್ಲಿ ಹರಡಿಕೊಂಡಿತು ಎನ್ನುವುದನ್ನು ವಿವರಿಸುತ್ತಾ, ಅವರು ತಮ್ಮ ಜ್ಞಾನವು ಮಾರಾಟದ ಸರಕಾಗಿ ಮಾಡಲಿಲ್ಲ. ಅದು ಅವರಿಗೆ ಸಾಮಾಜಿಕ ಅರಿವಿನ ಭಾಗವಾಗಿದೆ. ಅವರ ಮಾನವೀಯ ಸಂಬಂಧಗಳು ವೌಲಿಕವಾದುದೆಂದು ಚರಿತ್ರೆಯೇ ತಿಳಿಸುತ್ತದೆ. ಅದಕ್ಕಾಗಿಯೇ ಆದಿವಾಸಿಗಳು ನಮ್ಮ ಮೊದಲ ಉಪಾಧ್ಯಾಯರು ಎಂದು ಲೇಖಕರು ಹೇಳುತ್ತಾರೆ. ಒಂದು ರೀತಿಯಲ್ಲಿ, ಇವರು ಉಚಿತ ಶಿಕ್ಷಕರು. ಇದೇ ರೀತಿಯಲ್ಲಿ ಅವರು ಸಮಾಜದ ಬೇರೇ ಬೇರೆ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ದುಡಿಯುತ್ತಾ ಉಚಿತ ಶಾಸ್ತ್ರಜ್ಞರಾಗಿ, ಉತ್ಪತ್ತಿ ಸೈನಿಕರಾಗಿ, ಸಾಮಾಜಿಕ ವೈದ್ಯರಾಗಿ, ಅಜ್ಞಾತ ಇಂಜಿನಿಯರ್‌ಗಳಾಗಿ, ಆಹಾರ ಉತ್ಪಾದಕರಾಗಿ ಭಾರತೀಯ ಸಮಾಜವನ್ನು ಕಟ್ಟಿದರು ಎನ್ನುವುದನ್ನು ಸವಿವರವಾಗಿ ಕೃತಿ ಕಟ್ಟಿಕೊಡುತ್ತದೆ. ಭಾರತ ದೇಶದಲ್ಲಿ ಹಿಂದೂ ಜಾತಿ ಆಧಿಪತ್ಯ, ಉತ್ಪಾದನಾ ವಿರೋಧಿ ಬ್ರಾಹ್ಮಣ, ವೈಶ್ಯ ಜಾತಿಗಳೆಂದು ಯಾವುದೇ ಬದಲಾವಣೆಯಾಗದೇ ಸಾಗುತ್ತಿರುವುದರ ಬಗ್ಗೆ ಲೇಖಕರು ಆತಂಕ ವ್ಯಕ್ತಪಡಿಸುತ್ತಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 280. ಮುಖಬೆಲೆ 180 ರೂಪಾಯಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)