varthabharthi

ಸಂಪಾದಕೀಯ

ಗೆಲ್ಲುವ ಅಭ್ಯರ್ಥಿಯ ಅರ್ಹತೆಯೇನು?

ವಾರ್ತಾ ಭಾರತಿ : 4 Sep, 2018

ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಪಕ್ಷಗಳು ತಂತ್ರಗಳನ್ನು ರೂಪಿಸುತ್ತಿವೆ. ಎಲ್ಲ ಪಕ್ಷಗಳ ಏಕೈಕ ಗುರಿ ಗೆಲ್ಲುವುದೇ ಹೊರತು, ಗೆಲ್ಲುವುದಕ್ಕಾಗಿ ತಾವು ಆಯ್ಕೆ ಮಾಡಿಕೊಂಡಿರುವ ಅಥವಾ ಮಾಡಿಕೊಳ್ಳಬೇಕಾದ ದಾರಿಗಳ ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೇಗಾದರೂ ಸರಿ, ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವುದಷ್ಟೇ ಅವುಗಳ ಸದ್ಯದ ಅಗತ್ಯ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಮುಂದಿರುವ ಸಾಧಕ ಬಾಧಕಗಳ ಬಗ್ಗೆ ಅವಲೋಕನ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆಯಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ ರಾಜ್ಯ ಕಾಂಗ್ರೆಸ್. ಈ ಹಿನ್ನೆಲೆಯಲ್ಲಿ ಅದು ''ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಷ್ಟೇ ಟಿಕೆಟ್'' ಎಂದು ಸಭೆಯಲ್ಲಿ ಘೋಷಣೆ ಮಾಡಿದೆ ಎನ್ನುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ರಾಷ್ಟ್ರೀಯ ಪಕ್ಷಗಳು ಇಂತಹದೊಂದು ಹೇಳಿಕೆಗಳ ಮೊರೆ ಹೋಗತೊಡಗಿವೆ. ಈ ಹಿಂದೆ ಬಿಜೆಪಿ ಮುಖಂಡ ಯಡಿಯೂರಪ್ಪ ಕೂಡ ''ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್'' ಎಂಬ ಘೋಷಣೆಯನ್ನು ಮಾಡಿದ್ದರು. ಈ ಗೆಲ್ಲುವ ಅಭ್ಯರ್ಥಿಗಳು ಯಾರು? ಅವರಿಗಿರುವ ಮಾನದಂಡಗಳು ಏನು? ಈ ಕುರಿತಂತೆ ಯಾವ ಪಕ್ಷಗಳೂ ವಿವರಣೆಗಳನ್ನು ನೀಡಿಲ್ಲ.

 ಹಿಂದೆಲ್ಲ, ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ''ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ಇಲ್ಲ'' ''ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ಇಲ್ಲ'' ''ಸ್ವಚ್ಚಾರಿತ್ರ ಇರುವವರಿಗೆ ಟಿಕೆಟ್'' ''ಹೊಸ ಮುಖಗಳಿಗೆ ಟಿಕೆಟ್'' ''ಯುವ ಮುಖಗಳಿಗೆ ಆದ್ಯತೆ'' ಎಂದೆಲ್ಲ ಘೋಷಣೆಗಳನ್ನು ಮಾಡುತ್ತಿದ್ದವು. ಆದರೆ ಇಂದು ರಾಜಕೀಯ ಪಕ್ಷಗಳು ಅಂತಹ ಹೇಳಿಕೆಗಳನ್ನು ತೋರಿಕೆಗಾಗಿಯಾದರೂ ನೀಡುತ್ತಿಲ್ಲ. ಯಾಕೆಂದರೆ ಇಂದು ರಾಜಕೀಯ ಪಕ್ಷಗಳಿಗೆ ಭ್ರಷ್ಟರು ಮತ್ತು ಕ್ರಿಮಿನಲ್‌ಗಳು ಹೆಚ್ಚು ಹೆಚ್ಚು ಅನಿವಾರ್ಯವಾಗುತ್ತಿದ್ದಾರೆ. ಅಕ್ರಮ ಆರೋಪಗಳಿರುವ ರಾಜಕೀಯ ನಾಯಕರಿಗೆ ಟಿಕೆಟ್ ನೀಡುವುದಿಲ್ಲ, ಸಚಿವ ಸ್ಥಾನ ನೀಡುವುದಿಲ್ಲ ಎಂದು ಹಟ ಹಿಡಿದರೆ, ಹಾಗೆ ಘೋಷಿಸಿದ ನಾಯಕನೇ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆದುದರಿಂದಲೇ ಇಂದು ಬಿಜೆಪಿಯ ನಾಯಕರು ಗಣಿ ದೊರೆಗಳಾಗಿರುವ ರೆಡ್ಡಿ ಸಹೋದರರನ್ನು ಹೊರಗಿಟ್ಟು ಮಾತನಾಡುವ ಪರಿಸ್ಥಿತಿಯಿಲ್ಲ. ಡಿಕೆಶಿಯವರಂತಹ ಕುಳಗಳನ್ನು ಹೊರಗಿಟ್ಟು, ಕಾಂಗ್ರೆಸ್ ಪಕ್ಷ ಒಂದು ಹೆಜ್ಜೆಯೂ ಮುಂದಕ್ಕೆ ಇಡದಂತಹ ಸನ್ನಿವೇಶವಿದೆ. ಆದುದರಿಂದಲೇ ಈ ಪಕ್ಷಗಳೆಲ್ಲ, ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡುವುದಿಲ್ಲ, ಭ್ರಷ್ಟರಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ಘೋಷಣೆಗಳೊಂದಿಗೆ ಚುನಾವಣೆಯನ್ನು ಎದುರಿಸುವ ಧೈರ್ಯ ಮಾಡುತ್ತಿಲ್ಲ. ಇಂದು ದೇಶಾದ್ಯಂತ ಅತ್ಯಧಿಕ ಕ್ರಿಮಿನಲ್ ಹಿನ್ನೆಲೆಯಿರುವ ಶಾಸಕರನ್ನು ಮತ್ತು ಸಂಸದರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದೆ. ಆದಿತ್ಯನಾಥ್‌ರಂತಹ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ನಾಯಕರೇ ಬಿಜೆಪಿಯ ಪಾಲಿಗೆ ಆದರ್ಶ ನಾಯಕರು ಎಂಬಂತಾಗಿರುವಾಗ, ರಾಜ್ಯದಲ್ಲಿ ಅನಂತಕುಮಾರ್ ಹೆಗಡೆಯಂತಹ ಮೂರನೇ ದರ್ಜೆಯ ನಾಯಕರೇ ಬಿಜೆಪಿಯ ಪಾಲಿಗೆ ಅನಿವಾರ್ಯವಾಗಿರುವಾಗ ಸಚ್ಚಾರಿತ್ರವಿರುವ ಅಭ್ಯರ್ಥಿಗಳಿಗೆ ಟಿಕೆಟ್ ದೊರಕುವುದಾದರೂ ಹೇಗೆ?

 ''ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್'' ಎನ್ನುವ ಘೋಷಣೆಯ ಮೂಲಕ ರಾಜಕೀಯ ಪಕ್ಷಗಳು ಪರೋಕ್ಷವಾಗಿ ತಮ್ಮ ಅಭ್ಯರ್ಥಿಗಳಿಗೆ, ''ಹೇಗಾದರೂ ಸರಿ, ಗೆದ್ದರೆ ಸಾಕು'' ಎಂಬ ಸೂಚನೆಯನ್ನು ನೀಡುತ್ತಿವೆ. ಸದ್ಯಕ್ಕೆ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೇ ಗೆಲ್ಲುವುದಕ್ಕೆ ಅಭ್ಯರ್ಥಿಗಿರುವ ಅರ್ಹತೆ ಹಣ. ಶ್ರೀರಾಮುಲುವಿನಂತಹ ನಾಯಕರು ಸಿದ್ದರಾಮಯ್ಯನಂತಹ ಮುತ್ಸದ್ದಿಯನ್ನು ಇನ್ನೇನು ಸೋಲಿಸಿಯೇ ಬಿಟ್ಟರು ಎಂಬಂತಹ ಫಲಿತಾಂಶ ಕಳೆದ ವಿಧಾನಸಭೆಯಲ್ಲಿ ಬಂದಿದ್ದರೆ ಅದಕ್ಕೆ ಕಾರಣ, ಶ್ರೀರಾಮುಲುವಿನ ರಾಜಕೀಯ ಮುತ್ಸದ್ದಿತನವೋ ಅಥವಾ ಅವರ ಬೆನ್ನಿಗಿರುವ ರಾಜಕೀಯ ಸಚ್ಚಾರಿತ್ರವೋ ಅಲ್ಲ. ಹಣವನ್ನು ನೀರಿನಂತೆ ಸುರಿದು ಜನರ ಮತಗಳನ್ನು ಅವರು ಸಾಲೀಸಾಗಿ ಖರೀದಿಸಿದರು. ಅಕ್ರಮ ಗಣಿಗಾರಿಕೆಯ ಆರೋಪದಲ್ಲಿ ಜನಾರ್ದನ ರೆಡ್ಡಿ ಜೈಲು ಪಾಲಾದ ಬಳಿಕ, ಈ ಸಹೋದರರ ಜೊತೆಗೆ ನೇರವಾಗಿ ಗುರುತಿಸಿಕೊಳ್ಳಲು ಬಿಜೆಪಿ ಹಿಂಜರಿಯುತ್ತಿತ್ತು. ಆದರೆ ನೋಟು ನಿಷೇಧದ ಬಳಿಕ, ರಾಜಕೀಯ ಪಕ್ಷಗಳು ತೀವ್ರ ಹಣದ ಬಿಕ್ಕಟ್ಟು ಎದುರಿಸುತ್ತಿದ್ದುದರಿಂದ, ರೆಡ್ಡಿ ಸಹೋದರರ ಸ್ನೇಹ ಬಿಜೆಪಿಗೆ ಅನಿವಾರ್ಯವಾಯಿತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬರುವಲ್ಲಿ ರೆಡ್ಡಿ ಸಹೋದರರ ಹಣ ಮಹತ್ತರ ಪಾತ್ರವನ್ನು ವಹಿಸಿದೆ. ಹಣ ಹೊರತು ಪಡಿಸಿದರೆ, ಕ್ರಿಮಿನಲ್ ಹಿನ್ನೆಲೆಯೂ ಗೆಲ್ಲುವ ಅಭ್ಯರ್ಥಿಯ ಪ್ರಮುಖ ಅರ್ಹತೆ ಎನ್ನುವುದನ್ನು ರಾಜಕೀಯ ಪಕ್ಷಗಳು ಕಂಡುಕೊಂಡಿವೆ.

ಸಾರ್ವಜನಿಕವಾಗಿ ಉದ್ವಿಗ್ನಕಾರಿ ಭಾಷಣಗಳನ್ನು ಮಾಡುತ್ತಾ ಸುದ್ದಿಯಲ್ಲಿರುವವರೂ ಬಿಜೆಪಿಯ ಪಾಲಿಗೆ ಗೆಲ್ಲುವ ಅಭ್ಯರ್ಥಿಗಳೇ ಆಗಿದ್ದಾರೆ. ಸಂಸದರಾಗಿ ರಾಜ್ಯಕ್ಕೆ ನಯಾಪೈಸೆಯ ಕೊಡುಗೆಯನ್ನೂ ನೀಡದ ಅನಂತಕುಮಾರ್ ಹೆಗಡೆ, ಪ್ರತಾಪಸಿಂಹರಂತಹ ಸಂಸದರು ಇಂದಿಗೂ ತಮ್ಮ ಅಸ್ತಿತ್ವವನ್ನು ಕ್ಷೇತ್ರದಲ್ಲಿ ಉಳಿಸಿಕೊಂಡಿರುವುದು ಉದ್ವಿಗ್ನಕಾರಿ ಭಾಷಣಗಳ ಮೂಲಕ. ಜನರನ್ನು ಕೋಮು, ಧರ್ಮ, ಜಾತಿಯ ಹೆಸರಿನಲ್ಲಿ ಎತ್ತಿಕಟ್ಟಿ, ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ತಮ್ಮನ್ನು ತಾವು ಚಲಾವಣೆಯಲ್ಲಿ ಇರಿಸಿಕೊಂಡಿದ್ದಾರೆ. ಈ ಅರ್ಹತೆಯನ್ನು ಹೊರತುಪಡಿಸಿದರೆ ಗೆಲ್ಲುವುದಕ್ಕೆ ಇವರಲ್ಲಿ ಯಾವ ಯೋಗ್ಯತೆಯೂ ಇಲ್ಲ. ತಮ್ಮ ಈ ಅರ್ಹತೆಯನ್ನೇ ಮುಂದಿಟ್ಟುಕೊಂಡು ಅವರು ಮತ್ತೆ ಬಿಜೆಪಿಯಿಂದ ಟಿಕೆಟ್ ಪಡೆದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಉಗ್ರ ಕೋಮುವಾದಿಗಳಾಗಿ ಸಮಾಜದ ಶಾಂತಿಯನ್ನು ಕೆಡಿಸುವುದೂ ಚುನಾವಣೆಗೆ ಸ್ಪರ್ಧಿಸುವವರ ಒಂದು ಪ್ರಮುಖ ಅರ್ಹತೆ. ಆ ಅರ್ಹತೆಯ ಆಧಾರದಲ್ಲೇ, ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮೂಡಿಬಂದರು ಎನ್ನುವುದನ್ನು ನಾವು ಗಮನಿಸಬೇಕು.

ಉಳಿದಂತೆ ಗೂಂಡಾಗಳು, ಹಿಂಬಾಲಕರು, ಚೇಲಾಗಳನ್ನು ಹೊಂದಿರುವುದು ಗೆಲ್ಲುವ ಅಭ್ಯರ್ಥಿಗಳ ಪ್ರಮುಖ ಅರ್ಹತೆಯಾಗಿದೆ. ವಿರೋಧಿ ಪಕ್ಷವನ್ನು ಹೇಗಾದರೂ ಸೋಲಿಸಿ ಅಧಿಕಾರ ಹಿಡಿಯುವುದೇ ಮೊದಲ ಆದ್ಯತೆಯಾಗಿರುವ ಈ ದಿನಗಳಲ್ಲಿ, ಹೊಸ ಮುಖಗಳು, ಸಚ್ಚಾರಿತ್ರವಂತರು, ಮುತ್ಸದ್ದಿಗಳು ಯಾವ ಪಕ್ಷಗಳಿಗೂ ಬೇಡವಾಗಿದೆ. ಹೀಗಿರುವಾಗ ಈ ದೇಶದಲ್ಲಿ ಹೊಸ ನಾಯಕರು ರೂಪುಗೊಳ್ಳುವುದಾದರೂ ಹೇಗೆ ಸಾಧ್ಯ? ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾದವರಲ್ಲಿ ದುಡ್ಡು, ಬೆಂಬಲ, ಹಿಂಬಾಲಕರು ಎಲ್ಲವೂ ಇರುವುದರಿಂದ ಹೊಸಬರಿಗೆ ಅವಕಾಶ ನೀಡುವುದು ಅಪಾಯಕಾರಿ ಎಂದು ರಾಜಕೀಯ ಪಕ್ಷಗಳು ಭಾವಿಸುತ್ತಿವೆ. ಅಷ್ಟೇ ಅಲ್ಲ, ಹೊಸಬರಿಗೆ, ಸಜ್ಜನರಿಗೆ ಅವಕಾಶ ನೀಡಿದರೆ ಅವರಿಗಾಗಿ ಪಕ್ಷವೇ ಚುನಾವಣಾ ನಿಧಿಯನ್ನು ನೀಡಬೇಕು. ಜೊತೆಗೆ ಹಳಬರ ಬಂಡಾಯವನ್ನೂ ಎದುರಿಸಬೇಕು. ಇದರ ಪರಿಣಾಮ ಅಂತಿಮವಾಗಿ ಈ ದೇಶ ಭ್ರಷ್ಟರು, ಕ್ರಿಮಿನಲ್‌ಗಳ ಕೈಯಲ್ಲಿ ಆಳಿಸಿಕೊಳ್ಳಬೇಕಾದ ಸ್ಥಿತಿಗೆ ಬಂದು ನಿಂತಿದೆ.

ರಾಷ್ಟ್ರೀಯ ಪಕ್ಷಗಳ ಇಂತಹ ಮನಸ್ಥಿತಿಯನ್ನು ಹೋಗಲಾಡಿಸಬೇಕಾದರೆ, ಮತದಾರರು ಜಾಗೃತರಾಗಬೇಕಾಗಿದೆ. ಸಜ್ಜನರನ್ನು, ಸಚ್ಚಾರಿತ್ರವಂತರನ್ನು ಗುರುತಿಸಿ ಮತ ಹಾಕುವುದೊಂದೇ ಇದಕ್ಕೆ ಪರಿಹಾರ. ಎಲ್ಲಿಯವರೆಗೆ ಮತದಾರರು ಜಾಗೃತರಾಗುವುದಿಲ್ಲವೋ, ಅಲ್ಲಿಯವರೆಗೆ ಪ್ರಜಾಸತ್ತೆ ಅನರ್ಹರ ಕೈಯಲ್ಲಿ ಸಿಕ್ಕಿ ನರಳುತ್ತಿರಬೇಕಾಗುತ್ತದೆ. ಇದಕ್ಕಾಗಿ ನಾವು ನಮ್ಮನ್ನೇ ಹೊಣೆ ಮಾಡಿಕೊಳ್ಳಬೇಕಾಗಿದೆ ಮತ್ತು ತಿದ್ದಿಕೊಳ್ಳಬೇಕಾಗಿದೆ. ಆಗ ರಾಜಕಾರಣಿಗಳೂ ತಮ್ಮನ್ನು ತಾವು ತಿದ್ದಿಕೊಳ್ಳುವ ಪ್ರಯತ್ನಕ್ಕಿಳಿಯಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)