varthabharthi

ಸಂಪಾದಕೀಯ

ಕೇಸರಿ ಉಗ್ರರ ನಿಷೇಧವನ್ನು ಆಗ್ರಹಿಸುತ್ತಿರುವ ಗೌರಿ ಹತ್ಯೆ ತನಿಖೆ

ವಾರ್ತಾ ಭಾರತಿ : 5 Sep, 2018

ಬಹುಶಃ ಕರ್ಕರೆ ನೇತೃತ್ವದ ಎಟಿಎಸ್ ತಂಡ ಮಾಲೇಗಾಂವ್ ಸ್ಫೋಟದ ತನಿಖೆಯನ್ನು ಮಾಡುತ್ತಾ ಮಾಡುತ್ತಾ ಮೊದಲ ಬಾರಿಗೆ, ಈ ದೇಶದೊಳಗೆ ಹರಡಿಕೊಳ್ಳುತ್ತಿರುವ ಕೇಸರಿ ಉಗ್ರ ಸಂಘಟನೆಗಳ ಬೇರುಗಳನ್ನು ಗುರುತಿಸಿತು ಮತ್ತು ಆ ಬಳಿಕ ತನಿಖೆ ನಡೆಸುತ್ತಿದ್ದ ಇಡೀ ತಂಡ ನಿಗೂಢವಾಗಿ ದುಷ್ಕರ್ಮಿಗಳ ದಾಳಿಗೆ ಬಲಿಯಾಯಿತು. ಕರ್ಕರೆ ತಂಡವನ್ನು ಕೊಂದದ್ದು ಹೊರಗಿನ ದುಷ್ಕರ್ಮಿಗಳೋ, ಒಳಗಿನ ದುಷ್ಕರ್ಮಿಗಳೋ ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಅದೇನೇ ಇರಲಿ, ಈ ದೇಶ ಆತ್ಮವನ್ನು ಹೇಗೆ ಒಳಗಿನ ಕ್ರಿಮಿಗಳೇ ಕೊರೆಯ ತೊಡಗಿವೆ ಎನ್ನುವ ಸತ್ಯವನ್ನು ಬೆಳಕಿಗೆ ತಂದು ಅವರು ಹುತಾತ್ಮರಾದರು. ದೇಶದ ಭದ್ರತೆಗೆ ದೊಡ್ಡ ಮಟ್ಟದಲ್ಲಿ ಧಕ್ಕೆ ತರುವ ಸಂಘಟನೆಗಳ ಬಗ್ಗೆ ಬೆಂಕಿಯಂತಹ ಸತ್ಯಗಳು ಹೊರಬಂದ ಬಳಿಕವೂ ಆ ಸಂಘಟನೆಗಳನ್ನು ನಿಷೇಧಿಸಲು ಸರಕಾರ ಈವರೆಗೆ ಮುಂದಾಗಲಿಲ್ಲ ಎನ್ನುವುದೇ, ಕರ್ಕರೆ ತಂಡದ ತ್ಯಾಗ, ಬಲಿದಾನಕ್ಕೆ ಮಾಡಿರುವ ಬಹುದೊಡ್ಡ ಅವಮಾನವಾಗಿದೆ. ಮಾಲೇಗಾಂವ್, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಕೇಸರಿ ಉಗ್ರವಾದಿ ಸಂಘಟನೆಗಳು ಭಾಗಿಯಾಗಿರುವುದು ಬಹುತೇಕ ಬೆಳಕಿಗೆ ಬಂದಿದೆ. ದೇಶದಲ್ಲಿ ನಡೆದಿರುವ ಅಳಿದುಳಿದ ಸಣ್ಣ ಪುಟ್ಟ ಸ್ಫೋಟಗಳಲ್ಲಿ ಇವರ ಪಾತ್ರ ಎಷ್ಟಿದೆ ಎನ್ನುವುದು ಗಂಭೀರ ತನಿಖೆ ನಡೆದರೆ ಬಹಿರಂಗವಾಗಲೂ ಬಹುದು.

ಒಂದೆಡೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ನೆಲೆಯೂರಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರೀ ಕಳವಳ ವ್ಯಕ್ತಪಡಿಸುವ ನಮ್ಮ ಸರಕಾರ ದೇಶದೊಳಗೇ ಬೀಡು ಬಿಟ್ಟಿರುವ, ತನ್ನ ಪಾದ ಬುಡದಲ್ಲೇ ಆಶ್ರಯ ಪಡೆದಿರುವ ಉಗ್ರವಾದಿ ಸಂಘಟನೆಗಳ ಕುರಿತಂತೆ ವೌನ ತಾಳಿರುವುದು ದೇಶದಲ್ಲಿ ಇನ್ನಷ್ಟು ದುರಂತಗಳು ನಡೆಯುವುದಕ್ಕೆ ಕಾರಣವಾಯಿತು. ವೈಚಾರಿಕ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತುವ ಚಿಂತಕರನ್ನೇ ಈ ಉಗ್ರವಾದಿ ಸಂಘಟನೆಗಳು ಗುರಿಯಾಗಿಸತೊಡಗಿದವು. ದಾಭೋಲ್ಕರ್, ಪನ್ಸಾರೆಯಂತಹ ಹಿರಿಯ ವಿಚಾರವಾದಿಗಳು ಇವರ ಗುಂಡಿಗೆ ಬಲಿಯಾದವರು. ಇದಾದ ಬಳಿಕ ಎಂ. ಎಂ. ಕಲಬುರ್ಗಿಯವರ ಹತ್ಯೆಯಾಯಿತು. ಆಗಲೂ ಸರಕಾರ ಮಾತ್ರ ತನ್ನ ವೌನ ಸಮ್ಮತಿಯ ಮೂಲಕ ಈ ಉಗ್ರವಾದಿ ಸಂಘಟನೆಗಳನ್ನು ಪೋಷಿಸುತ್ತಲೇ ಹೋಯಿತು. ಸರಕಾರದ ದೃತರಾಷ್ಟ್ರ ಪ್ರೇಮಕ್ಕೆ ಅಂತಿಮವಾಗಿ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾಗಬೇಕಾಯಿತು. ಗೌರಿ ಲಂಕೇಶ್ ಹತ್ಯೆಯಾದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದ ಕಾರಣ, ತನಿಖೆ ಪ್ರಾಮಾಣಿಕ ದಾರಿಯಲ್ಲಿ ಸಾಗಿತು. ಈ ಸಂದರ್ಭದಲ್ಲೂ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಒತ್ತಡವನ್ನು ಕುಟುಂಬದ ಸದಸ್ಯರ ಮೂಲಕವೇ ಹಾಕಿಸಲಾಯಿತು. ಹಾಗೆಯೇ, ಕೊಲೆಯಲ್ಲಿ ನಕ್ಸಲರ ಪಾತ್ರವಿದೆ ಎಂದು ತನಿಖೆಯ ಮಾರ್ಗ ತಪ್ಪಿಸುವ ಪ್ರಯತ್ನವೂ ದೊಡ್ಡದಾಗಿ ನಡೆಯಿತು. ಆದರೆ ಅಧಿಕಾರಿಗಳು ಯಾವ ಒತ್ತಡಕ್ಕೂ ಮಣಿಯದೆ ತಮ್ಮ ದಾರಿಯಲ್ಲಿ ನಡೆದ ಪರಿಣಾಮವಾಗಿ, ಇದೀಗ ಹತ್ಯೆ ನಡೆದು ಒಂದು ವರ್ಷವಾಗುತ್ತಿರುವ ಹೊತ್ತಿನಲ್ಲಿ ಆರೋಪಿಗಳನ್ನು ಒಬ್ಬೊಬ್ಬರನ್ನಾಗಿ ಬಂಧಿಸುತ್ತಿದ್ದಾರೆ. ಬಹುಶಃ ಕರ್ಕರೆ ತಂಡ ಕೇಸರಿ ಉಗ್ರರ ಜಾಲವನ್ನು ಜಾಲಾಡಿಸಿದ ಬಳಿಕ, ಒಂದು ಕೊಲೆಯ ಜಾಡು ಹಿಡಿದು ತನಿಖಾಧಿಕಾರಿಗಳು ಇನ್ನಷ್ಟು ಆಳವಾಗಿ ಕೇಸರಿ ಉಗ್ರರ ನೆಲೆಗಳನ್ನು ಗುರುತಿಸಿದ್ದು ಗೌರಿ ಪ್ರಕರಣದಲ್ಲೇ ಇರಬೇಕು. ಗೌರಿ ಪ್ರಕರಣದ ತನಿಖೆ, ಕೊಲೆಯ ಆರೋಪಿಗಳನ್ನಷ್ಟೇ ಬೆಳಕಿಗೆ ತಂದಿರುವುದಲ್ಲ, ಆ ಮೂಲಕ ಈ ದೇಶವನ್ನು ವಿಚ್ಛಿದ್ರಗೊಳಿಸುವ ‘ಸ್ವದೇಶಿ ಉಗ್ರವಾದ’ ನಿಧಾನಕ್ಕೆ ಬಲವಾಗುತ್ತಿರುವುದನ್ನು ಒತ್ತಿ ಹೇಳಿದೆ. ಬಂಧನಕ್ಕೊಳಗಾಗಿರುವ ಆರೋಪಿಗಳು ಬರೇ ಕಾಲಾಳುಗಳಷ್ಟೇ. ಬರೇ ಅವರಿಗಷ್ಟೇ ಶಿಕ್ಷೆಯಾಗುವ ಮೂಲಕ ಗೌರಿ ಹತ್ಯೆಗೆ ನ್ಯಾಯ ನೀಡುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಕೊಲೆಗೈದವರು ಗೌರಿ ಜೊತೆಗೆ ಯಾವುದೇ ವೈಯಕ್ತಿಕ ದ್ವೇಷವನ್ನು ಹೊಂದಿದವರಲ್ಲ. ಗೌರಿ ಹೊಂದಿರುವ ವಿಚಾರಧಾರೆಯೇ ಕೊಲೆಗಡುಕರನ್ನು ಸಿದ್ಧಗೊಳಿಸಿದ ಸಂಘಟನೆಗಳಿಗೆ ಅಪಥ್ಯವಾಗಿತ್ತು. ಅವರು ಕೊಲ್ಲಲು ಹೊರಟದ್ದು ಗೌರಿಯನ್ನಲ್ಲ, ಗೌರಿಯ ವಿಚಾರಧಾರೆಯನ್ನು. ಆದರೆ ಒಬ್ಬ ಗೌರಿಯನ್ನು ಕೊಂದು ಹಾಕುವ ಮೂಲಕ ಈ ವಿಚಾರಧಾರೆಯನ್ನು ಕೊಲ್ಲಲು ಸಾಧ್ಯವಿಲ್ಲ. ದೇಶದೊಳಗೆ ವೈಚಾರಿಕವಾಗಿ ಚಿಂತಿಸುವವರನ್ನು ಬೆದರಿಸಲು, ಅವರ ಬಾಯಿ ಮುಚ್ಚಿಸಲು ಗೌರಿಯನ್ನು ಕೊಂದಿದ್ದಾರೆ. ನಾಳೆ ನಿಮಗೂ ಇದೇ ಗತಿ ಎನ್ನುವುದನ್ನು ಅವರು ಹೇಳಲು ಹೊರಟಿದ್ದಾರೆ. ಕೊಂದವರು ಜೈಲು ಸೇರಬಹುದು. ಆದರೆ ಕೊಲೆಗಡುಕರನ್ನು ತಯಾರುಗೊಳಿಸಿದವರು ಇನ್ನೂ ಹೊರಗಡೆಯೇ ಇದ್ದಾರೆ.ಅವರೇನೂ ಅಜ್ಞಾತವಾಗಿ ಇಲ್ಲ. ಅವರಿಗೊಂದು ಗುರುತಿದೆ. ಹೆಸರಿದೆ. ಹಿಂಸೆಯನ್ನು ಅವರು ಬಹಿರಂಗವಾಗಿ ಘೋಷಿಸುತ್ತಿದ್ದಾರೆ ಮತ್ತು ಪೋಷಿಸುತ್ತಿದ್ದಾರೆ. ಇವರನ್ನು ಶಿಕ್ಷಿಸದೇ, ನಿಷೇಧಿಸದೇ ಗೌರಿ ಹತ್ಯೆ ತನಿಖೆ ತಾರ್ಕಿಕ ಅಂತ್ಯವನ್ನು ಕಾಣಲಾರದು.

 ಸ್ವಾತಂತ್ರೋತ್ತರ ಭಾರತ ನಿಂತಿರುವುದೇ ವೈಚಾರಿಕತೆ ಮತ್ತು ವೈಜ್ಞಾನಿಕತೆಯ ತಳಹದಿಯ ಮೇಲೆ. ನೆಹರೂ ಪ್ರಧಾನಿಯಾಗಿ ‘‘ಅಣೆಕಟ್ಟುಗಳೇ ಈ ದೇಶದ ಆಧುನಿಕ ದೇವಾಲಯಗಳು’’ ಎಂದು ಘೋಷಿಸಿದ್ದರು. ಈ ದೇಶದಲ್ಲಿ ಗಟ್ಟಿಯಾಗಿ ಬೇರೂರಿದ್ದ ಜಾತೀಯತೆ, ಮೂಢನಂಬಿಕೆ, ಅನಕ್ಷರತೆ ಇತ್ಯಾದಿಗಳನ್ನೆಲ್ಲ ಗುಡಿಸಿ ಹಾಕಿರುವವರು ವಿಚಾರವಾದಿಗಳಾಗಿದ್ದಾರೆ. ಶತಶತಮಾನಗಳಿಂದ ಕಂದಾಚಾರದಲ್ಲಿ ಗಬ್ಬೆದ್ದು ಹೋಗಿದ್ದ ದೇಶವನ್ನು ವೈಚಾರಿಕತೆಯ ಬೆಳಕು ಶುಚಿಗೊಳಿಸಿತು. ಈ ದೇಶದ ಬೃಹತ್ ಆಸ್ಪತ್ರೆಗಳು, ವಿಜ್ಞಾನ ಸಂಸ್ಥೆಗಳು, ಬೃಹತ್ ಅಣೆಕಟ್ಟುಗಳು, ಇಸ್ರೋದಂತಹ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಇವೆಲ್ಲವೂ ವೈಚಾರಿಕತೆಯ ಫಲ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಚಿಂತಕರು, ಪರಿಸರ ತಜ್ಞರು ಇರುವ ದೇಶ ನಮ್ಮದು. ಈ ದೇಶವನ್ನು ಕಟ್ಟಿದ ವಿಚಾರಗಳ ಮೇಲೆ ಒಂದು ನಿರ್ದಿಷ್ಟ ಉಗ್ರವಾದಿ ಸಂಘಟನೆ ದಾಳಿ ನಡೆಸುತ್ತದೆಯೆಂದರೆ, ಅದು ದೇಶದ ವಿರುದ್ಧ ನಡೆಸುವ ದಾಳಿಯಾಗಿದೆ. ಅಂತಹ ಸಂಘಟನೆಗಳು ನಿಸ್ಸಂಶಯವಾಗಿ ದೇಶದ್ರೋಹಿ ಸಂಘಟನೆಗಳಾಗಿವೆ. ಈ ಹಿನ್ನೆಲೆಯಲ್ಲಿ ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿಯಂತಹ ವಿಚಾರವಾದಿಗಳನ್ನು ಕೊಂದ ಆರೋಪಿಗಳನ್ನು ಮಾತ್ರವಲ್ಲ, ಅವರನ್ನು ತಯಾರಿಸಿದ ಸಂಘಟನೆಗಳನ್ನು ಗುರುತಿಸಿ ಅವುಗಳಿಗೆ ನಿಷೇಧ ಹೇರಬೇಕು. ಇದೇ ಸಂದರ್ಭದಲ್ಲಿ ದೇಶಾದ್ಯಂತ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿವೆ. ಸಂವಿಧಾನ ವಿರೋಧಿ ಕೃತ್ಯಗಳು ಹೆಚ್ಚುತ್ತಿವೆ. ಈ ಶಕ್ತಿಗಳು ಹೊಸ ತಲೆಮಾರುಗಳನ್ನು ದಾರಿ ತಪ್ಪಿಸಲು ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸಿವೆ. ಇದರ ವಿರುದ್ಧ ಪ್ರಗತಿಪರ ಶಕ್ತಿಗಳೆಲ್ಲ ಒಂದಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಕನಿಷ್ಠ ಹೊಸತಲೆಮಾರಿನ ಯುವಕರು, ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ತುಂಬುವ, ಸಂವಿಧಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಇದುವೇ ನಾವು ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ ಅವರಿಗೆ ಸಲ್ಲಿಸುವ ನಿಜವಾದ ಅರ್ಥದ ಶ್ರದ್ಧಾಂಜಲಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)