varthabharthi

ಸಂಪಾದಕೀಯ

ಲೋಕಪಾಲರ ನೇಮಕ ಯಾವಾಗ?

ವಾರ್ತಾ ಭಾರತಿ : 5 Sep, 2018

ತಾನು ತಿನ್ನುವುದಿಲ್ಲ ಇನ್ನೊಬ್ಬರನ್ನು ತಿನ್ನಲು ಬಿಡುವುದಿಲ್ಲ ಎಂದು ಹೇಳಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ‘‘ಈ ದೇಶದಲ್ಲಿ 70 ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಮೋಸ ಮಾಡಿದ್ದಾರೆ. ಅದನ್ನು ನಾನು ಸರಿಪಡಿಸುತ್ತೇನೆ’’ ಎಂದು ಹೇಳಿ ಅವರು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾಯಿತು. ಅವರ ಭಕ್ತರು ಕೂಡ ಇದೇ ಪ್ರಚಾರ ಮಾಡುತ್ತಾ ಬಂದರು. ಇನ್ನು 8 ತಿಂಗಳಲ್ಲಿ ಅವರ ಅಧಿಕಾರಾವಧಿ ಮುಗಿಯುತ್ತದೆ. ಮತ್ತೆ ಜನರ ಬಳಿ ಹೋಗಬೇಕಾಗಿ ಬರುತ್ತದೆ. ಈ ನಾಲ್ಕೂವರೆ ವರ್ಷಗಳಲ್ಲಿ ದೇಶ ಯಾವ ಬದಲಾವಣೆಯನ್ನೂ ಕಾಣಲಿಲ್ಲ. ಬದಲಾಗಿ ನೋಟು ಅಮಾನ್ಯೀಕರಣ, ಜಿಎಸ್‌ಟಿಯಂತಹ ಆತುರದ ಕ್ರಮಗಳಿಂದ ಜನಸಾಮಾನ್ಯರು ತೊಂದರೆಗೊಳಗಾದರು. ಆಡಳಿತ ಪಾರದರ್ಶಕವಾಗಿರಬೇಕೆಂದು ಹಿಂದಿನ ಮನಮೋಹನ್ ಸಿಂಗ್ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಇದರ ಪರಿಣಾಮವಾಗಿ ಟೆಲಿಕಾಂ ಹಗರಣ ಬಯಲಿಗೆ ಬಂತು. ಹಿಂದಿನ ಸರಕಾರದ ಕೆಲ ಮಂತ್ರಿಗಳು ಜೈಲಿಗೆ ಹೋಗಿ ಬಂದರು. ಪಂಚಾಯತ್ ಮಟ್ಟದಲ್ಲಿ ಕೂಡಾ ಈ ಕಾಯ್ದೆ ಚುರುಕು ಮುಟ್ಟಿಸಿತು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಈ ಮಾಹಿತಿ ಹಕ್ಕು ಕಾಯ್ದೆ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಜನರಿಗೆ ಬೇಕಾದ ಯಾವ ಮಾಹಿತಿಯೂ ಲಭಿಸುತ್ತಿಲ್ಲ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭದ್ರತೆಗಾಗಿ ಖರ್ಚು ಮಾಡಿದ ಸಾರ್ವಜನಿಕ ಬೊಕ್ಕಸದ ಹಣದ ಬಗ್ಗೆ ಮಾಹಿತಿ ಕೇಳಿದರೆ ಉತ್ತರ ಸಿಗುವುದಿಲ್ಲ. ಪ್ರಧಾನ ಮಂತ್ರಿಗಳ ಜತೆಗೆ ವಿಮಾನದಲ್ಲಿ ಪ್ರಯಾಣಿಸಿದ ಉದ್ಯಮಿಯ ಮಾಹಿತಿ ಕೇಳಿದರೆ ಅದನ್ನು ಬಹಿರಂಗ ಪಡಿಸಲು ಆಗುವುದಿಲ್ಲ ಎಂಬ ಉತ್ತರ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಕೇಳಿದರೆ ಮಾಹಿತಿ ಲಭಿಸುವುದಿಲ್ಲ. ಯುದ್ಧ ವಿಮಾನ ಖರೀದಿಯ ಬಗ್ಗೆ ಮಾಹಿತಿ ಕೇಳಿದರೆ ಉತ್ತರ ಸಿಗುವುದಿಲ್ಲ. ಹೀಗೆ ಮಾಹಿತಿ ಹಕ್ಕು ಕಾಯ್ದೆ ಈಗ ಸಂಪೂರ್ಣ ನಿರರ್ಥಕವಾಗಿದೆ. ಜನಸಾಮಾನ್ಯರಿಗೆ ಬೇಕಾದ ಯಾವ ಮಾಹಿತಿಯೂ ಲಭಿಸುತ್ತಿಲ್ಲ. ಆದರೂ ಪ್ರಧಾನ ಮಂತ್ರಿಗಳು ಆಗಾಗ ದೂರದರ್ಶನದಲ್ಲಿ ಪ್ರತ್ಯಕ್ಷರಾಗಿ ನಮ್ಮದು ಪಾರದರ್ಶಕ ಆಡಳಿತ ಎಂದು ತುಟಿ ಸೇವೆ ಸಲ್ಲಿಸುತ್ತಾರೆ. ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲರ ನೇಮಕ ಮಾಡುವುದಾಗಿ ಪ್ರಧಾನಿ ಮೋದಿ ಚುನಾವಣೆಯ ಸಂದರ್ಭ ಭರವಸೆ ನೀಡಿದ್ದರು. ಆದರೆ ಸರಕಾರದ ನಿರಾಸಕ್ತಿಯಿಂದಾಗಿ ಲೋಕಪಾಲರ ನೇಮಕ ಆಗಲೇ ಇಲ್ಲ. ಲೋಕಪಾಲರ ನೇಮಕಕ್ಕೆ ರಚನೆಯಾಗಬೇಕಾದ ಲೋಕಪಾಲರ ಆಯ್ಕೆಯ ಶೋಧ ಸಮಿತಿ ಸದಸ್ಯರ ನೇಮಕಕ್ಕೆ ಸರಕಾರ ಆಸಕ್ತಿ ವಹಿಸಿಕೊಳ್ಳಲಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಇದಾದ ನಂತರ ಸರಕಾರ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ನಾಯಕ ಇಲ್ಲ ಎಂಬ ನೆಪ ಹೇಳಿತು.

2013ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯ ಪ್ರಕಾರ ಕೇಂದ್ರದಲ್ಲಿ ಲೋಕಪಾಲ ಹಾಗೂ ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬರಲೇ ಬೇಕು. ಈ ಕಾನೂನು ಜಾರಿಯಾಗಿ 5 ವರ್ಷಗಳಾದವು. ಆದರೆ ಲೋಕಪಾಲರ ನೇಮಕಕ್ಕೆ ಸರಕಾರ ಹಿಂದೇಟು ಹಾಕುತ್ತಿದೆ. ಇದಕ್ಕೆ ಅದು ತಾಂತ್ರಿಕ ನೆಪವನ್ನು ಮುಂದೆ ಮಾಡುತ್ತದೆ. ಲೋಕಸಭೆಯಲ್ಲಿ ಮಾನ್ಯತೆ ಪಡೆದ ಅಧಿಕೃತ ಪ್ರತಿಪಕ್ಷ ಇಲ್ಲದಿರುವುದರಿಂದ ಆಯ್ಕೆ ಸಮಿತಿ ರಚನೆಗೆ ವಿಳಂಬವಾಗಿದೆಯೆಂದು ಅದು ನೀಡುತ್ತಿರುವ ತಾಂತ್ರಿಕ ಕಾರಣಕ್ಕೆ ಅರ್ಥವಿಲ್ಲ. ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಸಮಿತಿಯನ್ನು ರಚನೆ ಮಾಡಲಾಯಿತು. ಆದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಸಮಿತಿಯಲ್ಲಿ ಸದಸ್ಯ ಸ್ಥಾನಮಾನ ನೀಡಲಿಲ್ಲ. ಬರೀ ಆಹ್ವಾನಿತರನ್ನಾಗಿ ಮಾಡಲಾಯಿತು. ಇದರಿಂದ ಅಸಮಾಧಾನಗೊಂಡ ಖರ್ಗೆ ಸಮಿತಿ ಸಭೆಗೆ ಹೋಗಲಿಲ್ಲ. ಏಕೆಂದರೆ ಲೋಕಪಾಲರ ನೇಮಕದಲ್ಲಿ ಆಹ್ವಾನಿತರ ಮಾತಿಗೆ ಯಾವುದೇ ಬೆಲೆ ಇರುವುದಿಲ್ಲ. ಇತ್ತೀಚೆಗೆ ಸಂಸತ್‌ನಲ್ಲಿ ಲಂಚ ತೆಗೆದುಕೊಂಡವರಷ್ಟೇ ಅಲ್ಲ, ಲಂಚ ಕೊಡುವವರನ್ನೂ ಶಿಕ್ಷಿಸುವಂತಹ ಭ್ರಷ್ಟಾಚಾರ ತಡೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ವಿಧೇಯಕ ಆ ಉದ್ದೇಶವನ್ನು ಹೊಂದಿದೆ ಎಂದು ಸರಕಾರ ಹೇಳಿದೆ. ಹೀಗಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವುದಕ್ಕಾಗಿ ಲಂಚ ಕೊಡುವವರನ್ನು ಕೂಡಾ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುವುದು ಎಂದು ಕಾನೂನಿನಲ್ಲಿ ಹೇಳಲಾಗಿದೆ. ಭ್ರಷ್ಟಾಚಾರ ಪ್ರಕರಣಗಳನ್ನು 2 ವರ್ಷಗಳ ಒಳಗಾಗಿ ವಿಲೇವಾರಿ ಮಾಡಬೇಕೆಂದು ಈ ವಿಧೇಯಕ ಹೇಳುತ್ತದೆ. ಈ ವಿಧೇಯಕದ ಪ್ರಕಾರ ಅಧಿಕಾರಿಗಳ ವಿರುದ್ಧ ಸ್ವತಂತ್ರವಾಗಿ ತಾವೇ ತನಿಖೆ ಆರಂಭಿಸಲು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳಿಗೆ ಇನ್ನು ಮುಂದೆ ಅವಕಾಶ ಇರುವುದಿಲ್ಲ. ಇದಕ್ಕಾಗಿ ಸೂಕ್ತ ಪ್ರಾಧಿಕಾರದ ಪೂರ್ವಾನುಮತಿ ಪಡೆಯ ಬೇಕಾಗುತ್ತದೆ. ಇದರಲ್ಲಿ ನಿವೃತ್ತ ಅಧಿಕಾರಿಗಳಿಗೆ ರಕ್ಷಣೆಯನ್ನು ಒದಗಿಸಲಾಗಿದೆ. ಇದರ ಪ್ರಕಾರ ಘೋಷಿತ ಆದಾಯಕ್ಕಿಂತ ಹೆಚ್ಚಿನ ಗಳಿಕೆ ಹೊಂದಿರುವುದು ಮಾತ್ರ ಕ್ರಿಮಿನಲ್ ದುರ್ನಡತೆಯಾಗುತ್ತದೆ ಎಂದು ಲಂಚದ ವ್ಯಾಖ್ಯಾನವನ್ನು ಮಾಡಲಾಗಿದೆ.

ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಈ ಕಾಯ್ದೆಯನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಟೀಕೆ ವ್ಯಕ್ತವಾಗುತ್ತಿದೆ. ಈ ಹಿಂದಿನ ಕಾಯ್ದೆಯಲ್ಲಿ ಅಧಿಕಾರ ದುರ್ಬಳಕೆ ಹಾಗೂ ಸಾರ್ವಜನಿಕ ಹಿತಕ್ಕೆ ಧಕ್ಕೆ ತರುವ ಎಲ್ಲವನ್ನು ಕ್ರಿಮಿನಲ್ ದುರ್ನಡತೆ ಎಂದು ವ್ಯಾಖ್ಯಾನಿಸಲಾಗಿತ್ತು. ಈಗ ಅದನ್ನು ಸಡಿಲಗೊಳಿಸಲಾಗಿದೆ. ಇದರಿಂದ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ದೊರೆತಂತಾಗಿದೆ. ಲಂಚದ ಪ್ರಕರಣದಲ್ಲಿ ಸಿಲುಕಿದ ಯಾವುದೇ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕಾದರೆ ಸೂಕ್ತ ಪ್ರಾಧಿಕಾರದ ಅನುಮತಿ ಪಡೆಯಬೇಕೆಂದು ಹೇಳಲಾಗಿದೆ. ಆದರೆ ಸೂಕ್ತ ಪ್ರಾಧಿಕಾರ ಅಂದರೆ ಯಾವುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ನ್ಯಾಯ ಸಮ್ಮತವಾಗಿ ಕೇಂದ್ರದಲ್ಲಿ ಲೋಕಪಾಲ್ ವ್ಯವಸ್ಥೆ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಯಲ್ಲಿರಬೇಕು. ಆದರೆ ಈಗಿನ ಸರಕಾರಕ್ಕೆ ಅದರ ಬಗ್ಗೆ ಆಸಕ್ತಿ ಇಲ್ಲ. ಇಲ್ಲದ ನೆಪಗಳನ್ನು ಹೇಳಿ ಲೋಕಪಾಲ್ ವ್ಯವಸ್ಥೆ ಜಾರಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೂಡ ಲೋಕಾಯುಕ್ತ ವ್ಯವಸ್ಥೆಯನ್ನು ಸಂಪೂರ್ಣ ಮೂಲೆಗುಂಪು ಮಾಡಿದ್ದರು. ತಮ್ಮನ್ನಾಗಲಿ ತಮ್ಮ ಸರಕಾರವನ್ನಾಗಲಿ ಯಾರೂ ಪ್ರಶ್ನಿಸಬಾರದೆಂಬ ಸರ್ವಾಧಿಕಾರಿ ಮನೋಭಾವ ಅವರಲ್ಲಿದೆ. ಭ್ರಷ್ಟಾಚಾರ ಎಂಬುದು ಭಾರತದ ಮುನ್ನಡೆಗೆ ಅಡ್ಡಿಯಾಗಿದೆ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಲಂಚ ತೆಗೆದುಕೊಳ್ಳುವ ಅಧಿಕಾರಿಯನ್ನು ರಕ್ಷಿಸಿ ಲಂಚ ಕೊಡುವವರನ್ನು ಮಾತ್ರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ತಿದ್ದುಪಡಿಗಳ ಕಸರತ್ತಿನ ಬದಲಾಗಿ ಲೋಕಾಯುಕ್ತ, ಲೋಕಪಾಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರ ಕ್ರಮ ಕೈಗೊಳ್ಳಬೇಕು. ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಪಕ್ಷಗಳ ಸಾಲಿನಲ್ಲಿ ಏಕೈಕ ದೊಡ್ಡ ಗುಂಪಿನ ನಾಯಕರಾಗಿದ್ದಾರೆ. ಅವರಿಗೆ ಸದಸ್ಯತ್ವದ ಸ್ಥಾನಮಾನ ನೀಡಿ ಲೋಕಪಾಲ್ ಮಸೂದೆ ಜಾರಿಯಾಗಲು ಸರಕಾರ ಕ್ರಮ ಕೈಗೊಳ್ಳದಿದ್ದರೆ ಈ ಸರಕಾರದ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಸಂದೇಹ ಉಂಟಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)