varthabharthi

ಸಂಪಾದಕೀಯ

ಗೃಹ ಬಂಧನದಲ್ಲಿ ಪ್ರಜಾಸತ್ತೆ

ವಾರ್ತಾ ಭಾರತಿ : 7 Sep, 2018

ಉಗ್ರವಾದ, ಭಯೋತ್ಪಾದನೆ ದೇಶದ ಮಾತ್ರವಲ್ಲ ವಿಶ್ವದ ಸಮಸ್ಯೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಉಗ್ರವಾದಿಗಳು, ಭಯೋತ್ಪಾದಕರು ಆಕಾಶದಿಂದ ಇಳಿದವರೂ ಅಲ್ಲ. ಬಲಿಷ್ಟ ರಾಷ್ಟ್ರಗಳ ರಾಜಕೀಯ ಅತಿರೇಕಗಳ ಸೃಷ್ಟಿಯಾಗಿದೆ ಉಗ್ರವಾದ. ಭಾರತದಲ್ಲಿ ನಕ್ಸಲರ ಹುಟ್ಟಿನ ಹಿಂದೆಯೂ ಇದೇ ಕತೆಯಿದೆ. ಈಶಾನ್ಯ ಭಾರತದಲ್ಲಿ ಆದಿವಾಸಿಗಳ ಮೇಲೆ ಪ್ರಭುತ್ವ ನಡೆಸಿದ ಬರ್ಬರ ದಾಳಿ, ಅಂತಿಮವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಜೊತೆಗೆ ಅವರು ನಂಬಿಕೆ ಕಳೆದುಕೊಳ್ಳುವಂತೆ ಮಾಡಿತು. ತಮ್ಮ ಹಕ್ಕುಗಳಿಗಾಗಿ ಅವರು ಅಸ್ತ್ರಗಳನ್ನು ಹಿಡಿಯುವಂತಾಯಿತು. ಭಾರತದಲ್ಲಿ ನಕ್ಸಲ್ ಸೃಷ್ಟಿಯ ಹಿಂದೆ ಸಾಮಾಜಿಕ ಅಸಮಾನತೆ, ಹಸಿವು, ಬಡತನ ಇತ್ಯಾದಿಗಳು ಪ್ರಮುಖ ಪಾತ್ರವಹಿಸಿವೆ. ಜೊತೆಗೆ ಬೃಹತ್ ಬಂಡವಾಳ ಶಾಹಿಗಳ ಉದ್ದಿಮೆಗಾಗಿ ಸೇನೆಯನ್ನು ಬಳಸಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸಿದ್ದು ಕೂಡ ನಕ್ಸಲ್‌ವಾದಿಗಳಿಗೆ ಪೂರಕವಾಯಿತು.

ಅದೇನೇ ಇರಲಿ, ಶಸ್ತ್ರದ ಮೂಲಕ ನಡೆಸುವ ಯಾವುದೇ ಜನಪರ ಹೋರಾಟ ಸಮ್ಮತವಲ್ಲ. ಪ್ರಜಾಸತ್ತಾತ್ಮಕವಾಗಿ ನಡೆಸುವ ಹೋರಾಟದಿಂದಷ್ಟೇ ನಾವು ನ್ಯಾಯವನ್ನು ನಮ್ಮದಾಗಿಸಿಕೊಳ್ಳಬಹುದು. ಭಾರತದ ಇತಿಹಾಸದುದ್ದಕ್ಕೂ ಇದು ಪದೇ ಪದೇ ಸಾಬೀತಾಗಿದೆ. ಆದರೆ ಇಂದು ಪ್ರಭುತ್ವ ತನ್ನ ಹಿತಾಸಕ್ತಿಗಾಗಿ ಉಗ್ರವಾದಿ ಸಂಘಟನೆಗಳನ್ನು ಗುರುತಿಸುವುದರಲ್ಲೇ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದೆ. ಈ ಹಿಂದೆ ದೇಶದಲ್ಲಿ ನಡೆದ ಎಲ್ಲ ಉಗ್ರವಾದಗಳನ್ನು ಸರಕಾರ ಮುಸ್ಲಿಮರ ತಲೆಗೆ ಕಟ್ಟುತ್ತಿತ್ತು. ಸ್ಫೋಟ ನಡೆದ ಬೆನ್ನಿಗೇ ಆರೋಪಿಗಳನ್ನು ಘೋಷಿಸಿ ಅವರಿಗೆ ಶಿಕ್ಷೆ ವಿಧಿಸಿಯೂ ಆಗುತ್ತಿತ್ತು. ಯಾವುದೇ ಸ್ಫೋಟಗಳಿಗೆ ಸಂಬಂಧಿಸಿ ವಿಶೇಷ ತನಿಖೆಯ ಅಗತ್ಯವೇ ಇಲ್ಲ ಎಂದು ತನಿಖಾಧಿಕಾರಿಗಳು, ಮಾಧ್ಯಮಗಳು ಭಾವಿಸಿದ್ದವು. ನಿಜವಾದ ಆರೋಪಿಗಳನ್ನು ಬಂಧಿಸುವ ಬದಲು, ಸ್ಫೋಟಗಳನ್ನು ಅಮಾಯಕರ ತಲೆಗೆ ಕಟ್ಟಿ, ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿತ್ತು.

‘ನಿರ್ದಿಷ್ಟ ಧರ್ಮವೊಂದರ ಸದಸ್ಯರನ್ನು ಬಂಧಿಸುವುದೇ’ ಉಗ್ರವಾದವನ್ನು ತಡೆಯುವ ಕ್ರಮ ಎಂದು ತನಿಖಾ ಸಂಸ್ಥೆಗಳು ನಂಬಿದ್ದವು. ಇದರಿಂದಾಗಿ ನೂರಾರು ಅಮಾಯಕ ಮುಸ್ಲಿಮ್ ತರುಣರು ಜೈಲು ಸೇರಬೇಕಾಯಿತು. ಅವರ ಭವಿಷ್ಯ ನಾಶವಾಯಿತು ಮತ್ತು ಇದರಿಂದ ದೇಶದ ಆಂತರಿಕ ಭದ್ರತೆಗೆ ಎರಡು ರೀತಿಯಲ್ಲಿ ಅನ್ಯಾಯವಾಯಿತು. ಒಂದು, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲ. ಇದು ಇನ್ನಷ್ಟು ವಿಧ್ವಂಸಕ ಕೃತ್ಯಗಳಿಗೆ ಸ್ಫೂರ್ತಿ ನೀಡಿತು. ಇನ್ನೊಂದು, ಅಮಾಯಕರು ಮಾಡದ ತಪ್ಪಿಗೆ ಜೈಲು ಸೇರಿ, ಪರೋಕ್ಷವಾಗಿ ಪ್ರಭುತ್ವದ ವಿರೋಧಿಗಳಾದರು. ಒಂದು ರೀತಿಯಲ್ಲಿ ಅಮಾಯಕ ಮುಸ್ಲಿಮರನ್ನು ಉಗ್ರವಾದಿಗಳನ್ನಾಗಿಸುವ ಪ್ರಯತ್ನ ನಡೆಯಿತು. ಮಾಲೇಗಾಂವ್, ಅಜ್ಮೀರ್, ಮಕ್ಕಾ ಮಸೀದಿ, ಸಂಜೋತಾ ರೈಲು ಸ್ಫೋಟ ಇತ್ಯಾದಿಗಳೆಲ್ಲ ನಡೆದಾಗ, ಮುಸ್ಲಿಮರನ್ನೇ ಗುರಿ ಮಾಡಿ ಅಧಿಕಾರಿಗಳು ತನಿಖೆ ನಡೆಸಿದರು. ಹಲವು ಮುಸ್ಲಿಮ್ ತರುಣರು ಮಾಡದ ತಪ್ಪಿಗಾಗಿ ಜೈಲು ಸೇರಿದರು. ಆದರೆ ವರ್ಷಗಳ ಬಳಿಕ, ಈ ಸ್ಫೋಟದ ಹಿಂದೆ ಸಂಘಪರಿವಾರದ ಉಗ್ರರ ಕೈವಾಡ ಇರುವುದು ಬೆಳಕಿಗೆ ಬಂತು.

ವಿಪರ್ಯಾಸವೆಂದರೆ, ಇಂದಿಗೂ ಈ ನಿಜವಾದ ಉಗ್ರರನ್ನು ಪೂರ್ಣ ಪ್ರಮಾಣದಲ್ಲಿ ದಮನಿಸಲು ಸರಕಾರ ಉತ್ಸಾಹ ತೋರಿಸುತ್ತಿಲ್ಲ. ಉಗ್ರವಾದದ ಕುರಿತಂತೆ ಸರಕಾರದ ದ್ವಂದ್ವ ನೀತಿ ಅಲ್ಲಿಗೇ ನಿಂತಿಲ್ಲ. ಇಂದು ‘ಉಗ್ರವಾದ’ದ ವ್ಯಾಖ್ಯಾನವನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ವಿಸ್ತರಿಸಲು ನೋಡುತ್ತಿದೆ. ಈ ದೇಶದ ಸಂವಿಧಾನವನ್ನು ನಿರಾಕರಿಸಿ, ಹಿಂಸೆಯ ಮೂಲಕ ದೇಶದ ಭದ್ರತೆಯನ್ನು ನಾಶ ಮಾಡುವ ಶಕ್ತಿಗಳನ್ನು ನಾವು ಈವರೆಗೆ ಉಗ್ರವಾದಿಗಳು ಎಂದು ಕರೆಯುತ್ತಿದ್ದರೆ, ಮೋದಿ ನೇತೃತ್ವದ ಸರಕಾರ, ತನ್ನ ಆಡಳಿತದ ವಿರುದ್ಧ ಧ್ವನಿಯೆತ್ತುವ ಪ್ರಗತಿಪರ ಚಿಂತಕರನ್ನೆಲ್ಲ ‘ನಗರ ನಕ್ಸಲೀಯರು’ ಎಂಬ ಹಣೆಪಟ್ಟಿ ಕಟ್ಟಿ ದಮನಿಸಲು ಹೊರಟಿದೆ. ಒಂದೆಡೆ, ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ ಎಂದು ನಕ್ಸಲೀಯರಿಗೆ ಕರೆನೀಡುವ ಸರಕಾರವೇ ಮಗದೊಂದೆಡೆ ಪ್ರಜಾಸತ್ತಾತ್ಮಕವಾಗಿ ಹೋರಾಡುವ ಚಿಂತಕರನ್ನು ‘ಉಗ್ರವಾದಿಗಳು’ ಎಂದು ಕರೆದು ಅವರ ಬಾಯಿ ಮುಚ್ಚಿಸಲು ಮುಂದಾಗಿದೆ.

‘ಸರಕಾರದ ವಿರುದ್ಧ ಮಾತನಾಡುವುದೆಂದರೆ ದೇಶದ ವಿರುದ್ಧ ಮಾತನಾಡುವುದು’ ಎನ್ನುತ್ತಾ ಪ್ರಜಾಸತ್ತಾತ್ಮಕ ಹೋರಾಟದ ದಾರಿಗಳನ್ನೂ ಮುಚ್ಚಲು ಹೊರಟಿದೆ. ಇದು ಸರಕಾರದ ಅಪಾಯಕಾರಿ ಹೆಜ್ಜೆಯಾಗಿದೆ. ಪ್ರಜಾಸತ್ತಾತ್ಮಕ ಹೋರಾಟ ಸೋತಾಗ ಜನರು ಹತಾಶೆಗೊಂಡು ಉಗ್ರವಾದದ ಹಾದಿ ತುಳಿಯುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಇಂದು ಪ್ರಜಾಸತ್ತಾತ್ಮಕ ಹೋರಾಟ ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ರೈತರು, ಕಾರ್ಮಿಕರ ಪರವಾಗಿ ಧ್ವನಿಯೆತ್ತುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಪ್ರಜಾಸತ್ತಾತ್ಮಕ ದಾರಿಯಲ್ಲಿ ಶಾಂತಿಯುತವಾದ ಹೋರಾಟವನ್ನು ಸರಕಾರ ಗಣನೆಗೆ ತೆಗೆದುಕೊಳ್ಳುತ್ತಲೂ ಇಲ್ಲ. ಬದಲಿಗೆ, ಅಂತಹ ಹೋರಾಟದ ನೇತೃತ್ವ ವಹಿಸಿದವರನ್ನೇ ಉಗ್ರರು ಎಂದು ಗುರುತಿಸಿ ಪೊಲೀಸರು ಬಂಧಿಸತೊಡಗಿದ್ದಾರೆ. ಸರಕಾರ ಮಾನವಹಕ್ಕುಗಳಿಗಾಗಿ ಹೋರಾಟ ನಡೆಸಿದ ಯಾರನ್ನೆಲ್ಲ ಬಂಧಿಸಿ ಗೃಹಬಂಧನದಲ್ಲಿ ಇರಿಸಿದೆಯೋ ಅವರೆಲ್ಲ ಸಂವಿಧಾನದ ಮೇಲೆ ಅಪಾರ ಗೌರವವಿರುವವರು.

ದೇಶದಲ್ಲಿ ತಲೆಯೆತ್ತುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳನ್ನು ಖಂಡಿಸುತ್ತಾ ಬಂದವರು. ದುರದೃಷ್ಟ ವಶಾತ್ ಸಂವಿಧಾನ ವಿರೋಧಿ ಶಕ್ತಿಗಳು ಸರಕಾರದ ಪಾದಬುಡದಲ್ಲೇ ಹರಡಿಕೊಂಡಿವೆ. ಆದರೆ ಇವರ ವಿರುದ್ಧ ಈವರೆಗೆ ಕ್ರಮ ಕೈಗೊಳ್ಳದ ಸರಕಾರ, ಸಂವಿಧಾನಪರ ಹೋರಾಟ ಮಾಡುತ್ತಿರುವವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ದೇಶದಲ್ಲಿ ಆಳವಾಗಿ ಬೇರೂರುತ್ತಿರುವ ಸಂವಿಧಾನ ವಿರೋಧಿ ಉಗ್ರವಾದಿಗಳ ಕುಮ್ಮಕ್ಕಿನಿಂದಲೇ ಈ ಪ್ರಗತಿ ಪರ ಹೋರಾಟಗಾರರನ್ನು ಸರಕಾರ ಬಂಧಿಸತೊಡಗಿದೆಯೇನೋ ಎಂದು ಜನರು ಅನುಮಾನ ಪಡುವಂತಾಗಿದೆ.

ಈ ಬಂಧನ ದೇಶದ ದಲಿತರು, ಮುಸ್ಲಿಮರು, ಶೋಷಿತ ಸಮುದಾಯಕ್ಕೆ ಸರಕಾರ ಒಡ್ಡುತ್ತಿರುವ ನೇರ ಬೆದರಿಕೆಯಾಗಿದೆ. ಸರಕಾರದ ವಿರುದ್ಧ ಮಾತನಾಡಿದರೆ ನಾಳೆ ನಿಮ್ಮ ಸ್ಥಿತಿಯೂ ಇದೇ ಆಗಿರುತ್ತದೆ ಎಂಬ ಬೆದರಿಕೆ. ದೇಶದಲ್ಲಿ ತಲೆಯೆತ್ತುತ್ತಿರುವ ಸಂವಿಧಾನವಿರೋಧಿ ಉಗ್ರವಾದಿಗಳು ಸರಕಾರದ ದೃಷ್ಟಿಯಲ್ಲಿ ಸಂಸ್ಕೃತಿ ರಕ್ಷಕರಾದರೆ, ಸಂವಿಧಾನಕ್ಕಾಗಿ ಬೀದಿಗಿಳಿದವರೆಲ್ಲರೂ ಸರಕಾರದ ಪಾಲಿಗೆ ನಕ್ಸಲರಾಗುತ್ತಿದ್ದಾರೆ. ಮೊದಲು ಉಗ್ರರು ಎಂದು ಘೋಷಿಸಿ ಬಳಿಕ ಅವರನ್ನು ದಮನಿಸುವುದು ಸರಕಾರದ ಉದ್ದೇಶ. ಈ ನಡೆ ‘ಉಗ್ರವಾದದ’ ವಿರುದ್ಧದ ಸರಕಾರ ನಡೆಸುತ್ತಿರುವ ಹೋರಾಟವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ. ಇದರ ಲಾಭವನ್ನು ಈ ದೇಶದಲ್ಲಿರುವ ನಿಜವಾದ ಉಗ್ರವಾದಿ ಸಂಘಟನೆಗಳು ತಮ್ಮದಾಗಿಸಿಕೊಳ್ಳಲಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸುವ ಪ್ರಜಾಸತ್ತಾತ್ಮಕವಾದ ದಾರಿಗಳನ್ನು ಮುಚ್ಚುವುದೆಂದರೆ, ಪರೋಕ್ಷವಾಗಿ ಪ್ರಜಾಪ್ರಭುತ್ವವನ್ನು ಅಪಹರಿಸಿದಂತೆ. ಇಂದು ಈ ದೇಶದ ಹಲವೆಡೆ ಸರಕಾರ ಗೃಹ ಬಂಧನದಲ್ಲಿಟ್ಟಿರುವುದು ಪ್ರಜಾಸತ್ತಾತ್ಮಕವಾದ ಹೋರಾಟಗಳನ್ನು. ಒಂದು ಅರ್ಥದಲ್ಲಿ ಪ್ರಜಾಸತ್ತೆಯೇ ಗೃಹಬಂಧನಲ್ಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)