varthabharthi


ಬುಡಬುಡಿಕೆ

ಕಾಸಿಯ ಫೇಸ್‌ಬುಕ್ ಉಗ್ರವಾದ !

ವಾರ್ತಾ ಭಾರತಿ : 9 Sep, 2018
*ಚೇಳಯ್ಯ chelayya@gmail.com

ಇತ್ತೀಚೆಗೆ ಪತ್ರಕರ್ತ ಎಂಜಲು ಕಾಸಿಯ ಗ್ರಹಗತಿಯೇ ಚೆನ್ನಾಗಿದ್ದಿರಲಿಲ್ಲ. ಒಂದು ದಿನ ಬೆಳಗ್ಗೆ ನೋಡಿದರೆ, ಕಾನ್‌ಸ್ಟೇಬಲ್ ಒಬ್ಬ ಅವರ ಮನೆ ಮುಂದೆ ನಿಂತಿದ್ದ.
‘‘ಸಾರ್, ಪೊಲೀಸ್ ಸ್ಟೇಶನ್‌ಗೆ ಬರಬೇಕಂತೆ...’’ ಹೇಳಿದ. ಕಾಸಿಯ ತೊಡೆ ಸಂಧಿಯೊಳಗೆ ಸಣ್ಣಗೆ ನಡುಕ. ಮೊನ್ನೆಯಷ್ಟೇ ‘ಅರ್ಬನ್ ನಕ್ಸಲ್’ ಎಂದು ಪೊಲೀಸರು ಕರೆದೊಯ್ದಿದ್ದರು. ಈ ಬಾರಿ, ಇನ್ನೇನು ಕಂಡು ಹಿಡಿದಿದ್ದಾರೋ....‘‘ಯಾಕೆ ಸಾರ್? ಪ್ರೆಸ್ ಮೀಟ್ ಏನಾದರೂ ಇದೆಯಾ?’’ ಕಾಸಿ ಅಂಜುತ್ತಾ ಕೇಳಿದ.
‘‘ಗೊತ್ತಿಲ್ಲ, ಸಾಹೇಬರು ತಕ್ಷಣ ಕರಕೊಂಡು ಬಾ ಎಂದು ಹೇಳಿ ಕಳುಹಿಸಿದ್ದಾರೆ...ಈಗಲೇ ಬರಬೇಕಂತೆ...’’ ಪೊಲೀಸ್ ಪೇದೆ ಹೇಳಿದ.
ಮೊದಲೆಲ್ಲ ಏನಾದರೂ ವಿಶೇಷ ಕ್ರೈಂ ನಡೆದರೆ ತಕ್ಷಣ ಕಾಸಿಗೆ ಬುಲಾವ್ ಬರುತ್ತಿತ್ತು. ಆದರೆ ಈಗೀಗ, ಪೊಲೀಸ್ ಠಾಣೆಯಿಂದ ಬುಲಾವ್ ಬಂತು ಎನ್ನುವಾಗಲೇ ಗ್ರಹಚಾರ ಕೆಟ್ಟಿದೆ ಎನ್ನುವುದು ಕಾಸಿಗೆ ಗೊತ್ತಾಗಿ ಬಿಡುತ್ತಿತ್ತು. ಸರಿ, ಕಟುಕನನ್ನು ಹಿಂಬಾಲಿಸುವ ಕುರಿಯಂತೆ ಪೇದೆಯನ್ನು ಕಾಸಿ ಹಿಂಬಾಲಿಸಿದ.
ಪೊಲೀಸ್ ಮೆಟ್ಟಿಲು ಹತ್ತಿದ್ದೇ ಕಾಸಿಯನ್ನು ಗುರಾಯಿಸಿ ನೋಡಿದ ಸಾಹೇಬರು ‘‘ಏನ್ರೀ...ಪತ್ರಕರ್ತರಾಗಿ ನೀವೇ ಹೀಗೆ ಮಾಡಿದರೆ ಹೇಗೆ?’’ ಕೇಳಿದರು.
‘‘ನಾನೇನು ಮಾಡಿದೆ ಸಾರ್?’’ ಕಾಸಿ ಕಂಗಾಲಾಗಿ ಕೇಳಿದ.
‘‘ಪತ್ರಿಕೆಯಲ್ಲಿ ಏನೇನೋ ಬರೆಯೋದು ಸಾಲದು ಅಂತ ಫೇಸ್‌ಬುಕ್‌ನಲ್ಲೂ ಬರೆಯೋಕೆ ಶುರು ಮಾಡಿದ್ದೀರಲ್ಲ....?’’ ಸಾಹೇಬರು ಕೇಳಿದರು.
‘‘ನಾನೇನು ಬರೆದೆ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ‘ಮೋ...’ದಿಂದ ಆರಂಭವಾಗುವ ಯಾವ ಶಬ್ದವನ್ನ್ನೂ ಕಾಸಿ ಬಳಸುತ್ತಿರಲಿಲ್ಲ ಅಥವಾ ತನ್ನ ಫೇಸ್‌ಬುಕ್‌ನ್ನು ಯಾರಾದರೂ ಹ್ಯಾಕ್ ಮಾಡಿರಬಹುದೇ? ಎಂಬ ಅನುಮಾನ ಬಂತು.
‘‘ನೋಡ್ರೀ...ಇವತ್ತು ಬೆಳಗ್ಗೆ ಫೇಸ್‌ಬುಕ್‌ನಲ್ಲಿ ನೀವು ಬರೆದಿರುವುದರ ಬಗ್ಗೆ ಪೊಲೀಸ್ ಇಲಾಖೆ ಸ್ವಯಂ ಕೇಸು ದಾಖಲಿಸಿದೆ....ಜಾಮೀನಿಲ್ಲದ ಕೇಸ್ ಕಣ್ರೀ...ಇದು...’’
‘‘ಸಾರ್ ಅಂಥದ್ದೇನೂ ಬರೆದೇ ಇಲ್ಲ ಸಾರ್...ಬೇಕಾದರೆ ನೋಡಿ....’’ ಕಾಸಿ ಅಂಗಲಾಚಿದ.
ಅಷ್ಟರಲ್ಲೇ ಇನ್‌ಸ್ಟೆಕ್ಟರ್ ಸಾಹೇಬರು ಮೊಬೈಲ್‌ನಿಂದ ಸ್ಕ್ರೀನ್ ಶಾಟ್ ತೋರಿಸಿದರು.
‘‘ಈ ಸ್ಟೇಟಸ್ ನೀವೇ ಹಾಕಿರುವುದಲ್ವಾ...?’’ ಕೇಳಿದರು.
 ಕಾಸಿ ನೋಡಿ ‘‘ಹೌದು ಸಾರ್’’ ಎಂದ. ಆ ಸ್ಟೇಟಸ್‌ನಲ್ಲಿ ಹೀಗೆ ಬರೆದಿತ್ತು ‘‘ನಿನ್ನೆ ಬೆಳಗ್ಗೆ ನಾನು ಸೈಕಲ್‌ನಲ್ಲಿ ಇಡೀ ಬೆಂಗಳೂರು ಸುತ್ತು ಹಾಕಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದೆ. ಸಂಜೆ ಮನೆ ಸೇರಿದೆ...’’
‘‘ಸಾರ್, ಮೇಲಿನ ಸ್ಟೇಟಸ್‌ನಲ್ಲಿ ತಪ್ಪೇನಿದೆ ಸಾರ್?’’ ಕಾಸಿ ಕೇಳಿದ.
‘‘ನಮಗೆಲ್ಲ ಗೊತ್ತಾಗತ್ತೆ....ನಮಗೆಲ್ಲ ಗೊತ್ತಾಗತ್ತೆ...ಬರೆಯೋದನ್ನು ಬರೆದು ಬಿಟ್ಟು ಅಮಾಯಕರ ಹಾಗೆ ಮಾತನಾಡ್ತೀರಾ? ರಾಜಕೀಯ ವಿಷಯಗಳನ್ನು ಬರೆದು ಜನರ ಭಾವನೆಗಳನ್ನು ಕೆರಳಿಸುವುದು ನಿಮ್ಮ ಉದ್ದೇಶ ಎನ್ನುವುದು ನಮಗೆ ಚೆನ್ನಾಗಿ ಗೊತ್ತು...ನಾವು ಕೇಸು ದಾಖಲಿಸಿಕೊಂಡಿದ್ದೇವೆ....’’
‘‘ಸಾರ್ ಇದರಲ್ಲಿ ರಾಜಕೀಯ ಏನಿದೆ?’’ ಕಾಸಿಗೆ ಅರ್ಥವಾಗಲಿಲ್ಲ.
‘‘ನೋಡ್ರೀ...ಮೋದಿಯವರನ್ನು ವ್ಯಂಗ್ಯ ಮಾಡುವ ಮೂಲಕ ಮೋದಿಯ ಭಕ್ತರ ಭಾವನೆಗಳಿಗೆ ಘಾಸಿ ಮಾಡಿದ್ದಕ್ಕಾಗಿ ಹಾಗೂ ಮೋದಿಯನ್ನು ಟೀಕಿಸಿ ದೇಶದ ವರ್ಚಸ್ಸಿಗೆ ಧಕ್ಕೆ ತಂದುದಕ್ಕಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡಿದ್ದೇೆ...’’ ಸಾಹೇಬರು ಬಿಡಿಸಿ ಹೇಳಿದರು.
‘‘ಸಾರ್...ಮೋದಿಯವರ ಭಕ್ತರಿಗೆ ಎಲ್ಲಿ ನೋವಾಗಿ ಬಿಡುತ್ತದೆಯೋ ಎಂದು ಹೆದರಿ ಇತ್ತೀಚೆಗೆ ಮೋ-ದಿಂದ ಆರಂಭವಾಗುವ ಯಾವುದೇ ಪದಗಳನ್ನು ನಾನು ಬಳಸುತ್ತಿಲ್ಲ ಸಾರ್....ಮೇಲಿನ ಸ್ಟೇಟಸ್‌ನಲ್ಲಿ ಮೋ ಎನ್ನುವ ಪದವೇ ಇಲ್ಲ ಸಾರ್...’’ ಕಾಸಿ ದೈನ್ಯದಿಂದ ಹೇಳಿದ.
‘‘ನೋಡ್ರೀ...ನಮ್ಮ ಸೈಬರ್ ವಿಭಾಗದವರು ಈ ಸ್ಟೇಟಸ್‌ನ್ನು ಪೂರ್ಣವಾಗಿ ತನಿಖೆ ನಡೆಸಿದ್ದಾರೆ. ಇದರಲ್ಲಿ ಮೋದಿ ಕುರಿತಂತೆ ವ್ಯಂಗ್ಯ ಟೀಕೆ ಎದ್ದು ಕಾಣುತ್ತಿದೆ....ಇಡೀ ದಿನ ಸೈಕಲ್‌ನಲ್ಲಿ ಬೆಂಗಳೂರು ಸುತ್ತು ಹಾಕಿದೆ...ಎನ್ನುವುದರ ಅರ್ಥ ಏನು?’’
‘‘ಅದು ಕನ್ನಡದಲ್ಲೇ ಇದೆ ಸಾರ್...ಅದೇ ಅದರ ಅರ್ಥ...’’ ಕಾಸಿ ಗೊಂದಲದಿಂದ ಹೇಳಿದ.
 ‘‘ನೋಡ್ರೀ...ಬಸ್ ವ್ಯವಸ್ಥೆ, ನಿಮ್ಮಲ್ಲಿ ಸ್ಕೂಟರ್ ಇರುವಾಗ ಯಾಕೆ ಸೈಕಲ್‌ನಲ್ಲಿ ಹೋಗಬೇಕು? ಪರೋಕ್ಷವಾಗಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ ಎನ್ನುವುದನ್ನು ಈ ರೀತಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದೀರಿ ಎನ್ನುವುದು ನಮಗೆ ಗೊತ್ತಾಗಿದೆ. ಇಡೀ ವಿಶ್ವ ಮೋದಿಯವರನ್ನು ಹೊಗಳುತ್ತಿರುವಾಗ, ನೀವು ಹೀಗೆ ಮೋದಿಯನ್ನು ಟೀಕೆ ಮಾಡುವುದಕ್ಕೆ ನಾಚಿಕೆಯಾಗುವುದಿಲ್ಲವೆ?’’ ಸಾಹೇಬರು ಕೇಳಿದರು. ಕಾಸಿ ಕಕ್ಕಾಬಿಕ್ಕಿಯಾದ.
‘‘ಇಂದಿರಾ ಕ್ಯಾಂಟೀನ್‌ನಲ್ಲೇ ಯಾಕೆ ಊಟ ಮಾಡಬೇಕು?’’ ಸಾಹೇಬರು ಕೇಳಿದರು.
‘‘ಸಾರ್...ಅಲ್ಲಿ ಕಡಿಮೆ ದುಡ್ಡಿಗೆ ಊಟ ಸಿಗತ್ತೆ ಸಾರ್...’’ ಕಾಸಿ ಸ್ಪಷ್ಟೀಕರಣ ನೀಡಿದ.

‘‘ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದ್ದರು. ಇದೀಗ ಇಂದಿರಾಗಾಂಧಿ ಕ್ಯಾಂಟೀನ್‌ನ ನೆಪದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಇದೆ ಎನ್ನುವುದನ್ನು ನೆನಪಿಸುತ್ತಿದ್ದೀರಿ...’’ ಸಾಹೇಬರು ಮೀಸೆ ತಿರುವುತ್ತಾ ಕಾಸಿಯ ತಪ್ಪುಗಳನ್ನು ಎತ್ತಿ ತೋರಿಸತೊಡಗಿದರು. ಕಾಸಿ ದಿಗ್ಭ್ರಾಂತನಾದ.
‘‘ನೋಡ್ರೀ...ಸಂಜೆ ಮನೆ ಸೇರಿದೆ ಎಂದು ಬರೆದಿದ್ದೀರಿ...ಹೀಗೆ ಯಾಕೆ ಬರೆದಿದ್ದೀರಿ?’’ ಸಾಹೇಬರು ಕೇಳಿದರು.
‘‘ಯಾಕೆ ಬರೆದೆ ಸಾರ್? ಅದನ್ನು ನೀವೇ ಹೇಳಿ ಬಿಡಿ’’ ಕಾಸಿ ಅಸಹಾಯಕನಾಗಿ ಹೇಳಿದ.
‘‘ಯಾಕೆಂದರೆ ಮೋದಿಯ ಭಾರತದಲ್ಲಿ ಸಂಜೆಯೊಳಗೆ ಮನೆ ಸೇರದೇ ಇದ್ದರೆ ಅಪಾಯವಿದೆ. ಆದುದರಿಂದ ರಾತ್ರಿಯಾಗುವ ಮೊದಲೇ ಮನೆ ಸೇರಿದೆ ಎಂದು ವ್ಯಂಗ್ಯವಾಡಿದ್ದೀರಿ.....’’ ಸಾಹೇಬರು ಹೇಳಿದರು.
‘‘ಹೌದಾ ಸಾರ್...ಈ ಒಂದು ಸ್ಟೇಟಸ್‌ನಲ್ಲಿ ಇಷ್ಟೆಲ್ಲ ಇದೆಯಾ ಸಾರ್? ನನಗೆ ಗೊತ್ತಿರಲಿಲ್ಲ ಸಾರ್?’’ ಕಾಸಿ ಕೈ ಮುಗಿದು ಹೇಳಿದ.
  ‘‘ಗೊತ್ತಿಲ್ಲ ಅಂದ ಮೇಲೆ ಯಾಕೆ ಬರೆದ್ರೀ....ಇದೆಲ್ಲ ರಾಜಕೀಯ ನಿಮಗೆ ಬೇಕಾ? ಟಿವಿಯಲ್ಲಿ ಬಾಹುಬಲಿ ಭಾಗ ಎರಡು ಫಿಲಂ ಹಾಕಿದ್ದಾರೆ. ಅದನ್ನು ನೋಡುತ್ತಾ ಇರೋದು ಬಿಟ್ಟು ಫೇಸ್‌ಬುಕ್‌ನಲ್ಲಿ ಹೀಗೆಲ್ಲ ಬರೆದು ಜನರಲ್ಲಿ ಗಾಬರಿ, ಆತಂಕ ಹುಟ್ಟಿಸುವುದು ದೇಶದ್ರೋಹವಲ್ಲವೇ? ಕಾನೂನು ವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ....’’ ಸಾಹೇಬರು ಕಾಸಿಯನ್ನೇ ದುರುಗುಟ್ಟಿ ನೋಡಿ ಹೇಳಿದರು.
ಅಷ್ಟರಲ್ಲಿ ಕಾಸಿಯ ಮೊಬೈಲ್ ರಿಂಗಣಿಸಿತು. ನೋಡಿದರೆ ಅತ್ತ ಕಡೆಯಿಂದ ಸಂಪಾದಕರು ‘‘ಹಲೋ ಕಾಸಿ, ಅಲ್ಲಿ ಪೊಲೀಸರು ಯಾರೋ ಒಬ್ಬ ದೊಡ್ಡ ಉಗ್ರವಾದಿಯನ್ನು ಬಂಧಿಸಿದ್ದಾರಂತೆ....ಫೇಸ್‌ಬುಕ್‌ನಲ್ಲಿ ದೇಶದ್ರೋಹದ ಹೇಳಿಕೆ ಬರೆದ ಕಾರಣಕ್ಕೆ ಬಂಧಿಸಿದ್ದಾರೆ...ಪೊಲೀಸರು ದೊಡ್ಡ ಅಪಾಯವೊಂದನ್ನು ತಪ್ಪಿಸಿದ್ದಾರೆ...ತಕ್ಷಣ ಅದನ್ನು ಸವಿವರವಾಗಿ ವರದಿ ಮಾಡಿ ಕಳುಹಿಸಿ....’’ ಆದೇಶಿಸಿದರು.
ಕಾಸಿ ಒಮ್ಮೆಲೆ ಗೊಳೋ ಎಂದು ಅಳತೊಡಗಿದ ‘‘ಸಾರ್...ಆ ಉಗ್ರವಾದಿ ಸ್ಟೇಟಸ್ ಹಾಕಿರೋದು ನಾನೇ ಸಾರ್....ಬಂಧನಕ್ಕೊಳಗಾಗಿರುವುದೂ ನಾನೆ...ಪ್ಲೀಸ್ ಬಂದು ಬಿಡಿಸಿ ಸಾರ್....’’ ಆ ಕಡೆಯಿಂದ ಸಂಪಾದಕರು ಪೋನ್ ಕುಕ್ಕಿದ ಸದ್ದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)