varthabharthi

ಸಂಪಾದಕೀಯ

ಭಾರತ ಬಂದ್ ಮೂಲಕ ಜನತೆ ನೀಡಿದ ಎಚ್ಚರಿಕೆ

ವಾರ್ತಾ ಭಾರತಿ : 11 Sep, 2018

ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಜನತೆ ಎಷ್ಟು ಅಸಮಾಧಾನಗೊಂಡಿದ್ದಾರೆ ಎಂಬುದು ಸೋಮವಾರ ನಡೆದ ಭಾರತ ಬಂದ್‌ನಿಂದ ಸ್ಪಷ್ಟವಾಗಿದೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಹಾಗೂ ಜನಪರ ಸಂಘಟನೆಗಳು ಇಂಧನ ಬೆಲೆ ಏರಿಕೆ ಮತ್ತು ಸರಕಾರದ ಇತರ ಜನವಿರೋಧಿ ನೀತಿಗಳ ವಿರುದ್ಧ ಘೋಷಿಸಿದ್ದ ‘ಭಾರತ ಬಂದ್’ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಇಡೀ ದೇಶ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಜನ ಸ್ವಯಂಪ್ರೇರಣೆಯಿಂದ ಬಂದ್‌ನಲ್ಲಿ ಪಾಲ್ಗೊಂಡಿದ್ದಾರೆ.

ನಾಲ್ಕೂವರೆ ವರ್ಷಗಳ ಹಿಂದೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಗ್ಗೆ ಜನತೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಚುನಾವಣೆಯ ವೇಳೆ ಭರವಸೆ ನೀಡಿದಂತೆ ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತಾರೆಂದು ಜನ ನಂಬಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮೋದಿ ನೀಡಿದ್ದ ಭರವಸೆಯಲ್ಲಿ ಜನ ನಂಬಿಕೆ ಇಟ್ಟುಕೊಂಡಿದ್ದರು. ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಮೋದಿಯ ಮಾತನ್ನು ಜನ ನಂಬಿದ್ದರು. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವುದಾಗಿ ಮೋದಿ ಹೇಳಿದ ಮಾತಿನ ಬಗ್ಗೆ ಜನ ವಿಶ್ವಾಸವಿರಿಸಿಕೊಂಡಿದ್ದರು. ಆದರೆ, ಈ ನಾಲ್ಕೂವರೆ ವರ್ಷಗಳಲ್ಲಿ ಜನತೆಗೆ ನೀಡಿದ್ದ ಯಾವ ಭರವಸೆಗಳನ್ನೂ ಈ ಸರಕಾರ ಈಡೇರಿಸಲಿಲ್ಲ. ಅಷ್ಟೇ ಅಲ್ಲದೆ ತನ್ನ ಜನ ವಿರೋಧಿ ನೀತಿಗಳ ಮೂಲಕ ಜನಸಾಮಾನ್ಯರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.

ಜನಸಾಮಾನ್ಯರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ಒತ್ತಟ್ಟಿಗಿರಲಿ; ಜನರನ್ನು ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಇರಲು ಬಿಡಬೇಕಾಗಿತ್ತು. ಕಪ್ಪು ಹಣ ಹೊರತೆಗೆಯುವ ಹೆಸರಿನಲ್ಲಿ ನೋಟು ಅಮಾನ್ಯೀಕರಣದ ಗಿಮಿಕ್ ಮಾಡಲಾಯಿತು. ಇದರಿಂದ ಜನಸಾಮಾನ್ಯರು ತೊಂದರೆಗೀಡಾದರು. ಕಪ್ಪು ಹಣ ಹೊರಗೆ ಬರಲಿಲ್ಲ. ಜಿಎಸ್‌ಟಿಯ ಹೆಸರಿನಲ್ಲಿ ಇನ್ನೊಂದು ಪ್ರಹಸನ ನಡೆಯಿತು. ಅದೂ ಕೂಡಾ ವಿಫಲಗೊಂಡಿತು. ನೀರವ್ ಮೋದಿ, ವಿಜಯ ಮಲ್ಯ ಮುಂತಾದ ಕಾರ್ಪೊರೇಟ್ ವಂಚಕರು ರಾಷ್ಟ್ರೀಕೃತ ಬ್ಯಾಂಕುಗಳನ್ನು ಲೂಟಿ ಮಾಡಿಕೊಂಡು ವಿದೇಶಕ್ಕೆ ಹಾರಿದರು. ಅವರು ಓಡಿಹೋಗಲು ಸರಕಾರವೇ ಅವಕಾಶ ಮಾಡಿಕೊಟ್ಟಿತು. 3 ಲಕ್ಷ ಕೋಟಿ ರೂ. ನಕಲಿ ನೋಟು ನಿಯಂತ್ರಿಸುತ್ತೇವೆ ಎಂದು ನೋಟು ಅಮಾನ್ಯೀಕರಣ ಮಾಡಿದರು. ಆದರೆ, ಶೇ.99ರಷ್ಟು ಹಣ ಬ್ಯಾಂಕ್‌ಗೆ ವಾಪಸ್ ಬಂತು. ಹೊಸ ನೋಟು ಪ್ರಿಂಟ್ ಮಾಡಲು 8 ಸಾವಿರ ಕೋಟಿ ರೂ.ಅನ್ನು ವಿನಾಕಾರಣ ಖರ್ಚು ಮಾಡಿದರು. ಜನತೆಗೆ ವಿಶ್ವಾಸ ದ್ರೋಹ ಬಗೆದ ಜೊತೆಗೆ ನಾನಾ ತರಹದ ಹಿಂಸೆಗೆ ಗುರಿಪಡಿಸಿದರು. ದನ ರಕ್ಷಣೆಯ ಹೆಸರಿನಲ್ಲಿ ಕೋಮುವಾದಿ ಗೂಂಡಾಗಳು ಅಮಾಯಕರನ್ನು ಹಾದಿಬೀದಿಯಲ್ಲಿ ಹೊಡೆದು ಕೊಂದರು. ಅದರ ವಿರುದ್ಧ ಪ್ರಧಾನಮಂತ್ರಿಯವರು ನೀಡಿದ ಕಾಟಾಚಾರದ ಎಚ್ಚರಿಕೆ ಬರೀ ನಾಟಕವಾಗಿತ್ತು.

ದೇಶಾದ್ಯಂತ ದಲಿತ ಚಳವಳಿಯನ್ನು ಹತ್ತಿಕ್ಕಲು ಮೋದಿ ಸರಕಾರ ನಾನಾ ಹುನ್ನಾರ ನಡೆಸಿತು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಸಂಶಯಾಸ್ಪದ ಸಾವಿಗೆ ಈ ಸರಕಾರ ಕಾರಣವಾಯಿತು. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕೇಸರೀಕರಣ ಮಾಡಲು ಹೋಗಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿತು. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಜನತೆಗೆ ನೀಡಿದ ಭರವಸೆ ವಿಫಲಗೊಂಡಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರೀ ಹಗರಣಗಳಲ್ಲಿ ಈ ಸರಕಾರ ಸಿಲುಕಿದೆ. ರಫೇಲ್ ಯುದ್ಧ ವಿಮಾನ ಹಗರಣದಲ್ಲಿ ವಿದೇಶಾಂಗ ಸಚಿವರಿಗೆ ಹಾಗೂ ರಕ್ಷಣಾ ಸಚಿವರಿಗೆ ಗೊತ್ತಿಲ್ಲದೆ ನೇರವಾಗಿ ಫ್ರಾನ್ಸ್ ಕಂಪೆನಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಂಬಾನಿಗೆ ಸಾವಿರಾರು ಕೋಟಿ ರೂ. ಲಾಭ ಮಾಡಿಕೊಟ್ಟ ಪ್ರಧಾನಿ ಭಕ್ತರ ಪಾಲಿಗೆ ಈಗಲೂ ಆರಾಧ್ಯ ದೈವ. ಆದರೆ, ಜನರಿಗೆ ಇವರ ಬಂಡವಾಳ ಗೊತ್ತಾಗಿದೆ. ರಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಮಾಹಿತಿ ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಸರಕಾರ ಉತ್ತರ ನೀಡುವುದಿಲ್ಲ.

ಇನ್ನು ಬೆಲೆಯೇರಿಕೆ ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲಗೊಂಡಿದೆ. ಜನಸಾಮಾನ್ಯರಿಗೆ ಬೇಕಾದ ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಗಳು ಏರುತ್ತಲೇ ಇವೆ. ದೇಶವ್ಯಾಪಿ ಬಂದ್ ನಡೆದ ದಿನವೂ ಕೂಡಾ ಪೆಟ್ರೋಲ್ ಬೆಲೆ ಲೀ.ಗೆ 85 ರೂ. ಡೀಸೆಲ್ ಲೀ.ಗೆ 75 ರೂ. ಹಾಗೂ ಅಡುಗೆ ಅನಿಲದ ಒಂದು ಸಿಲಿಂಡರ್‌ಗೆ 800 ರೂ. ಆಗಿದೆ. ಹೀಗಾಗಿ ರೋಸಿ ಹೋದ ಜನಸಾಮಾನ್ಯರು ಭಾರತ ಬಂದ್ ಸ್ಪಂದಿಸಿದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಕೂಡಾ ಈ ಸರಕಾರ ವಿಫಲಗೊಂಡಿದೆ. ಸ್ವತಃ ಉದ್ಯೋಗ ಸೃಷ್ಟಿಸುವುದು ಒತ್ತಟ್ಟಿಗಿರಲಿ ಸರಕಾರದಲ್ಲಿರುವ ಖಾಲಿ ಉದ್ಯೋಗಗಳನ್ನು ಭರ್ತಿ ಮಾಡಲು ಸರಕಾರ ಮುಂದಾಗುತ್ತಿಲ್ಲ.

ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಧಾನಮಂತ್ರಿ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲ, ಪಕೋಡಾ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಿ ಎಂದರು. ಇನ್ನೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರು ಹಿಂದುಳಿದವರು ಮತ್ತು ದಲಿತರ ಮೀಸಲಾತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರಕಾರದ ಬಳಿ ಉದ್ಯೋಗವೇ ಇಲ್ಲ. ಮೀಸಲಾತಿ ಎಲ್ಲಿಂದ ಕೊಡಬೇಕು ಎಂದು ಮರು ಪ್ರಶ್ನೆ ಹಾಕಿದರು. ಭಾರತದ ಜನಸಂಖ್ಯೆ ಈಗ 130 ಕೋಟಿ ದಾಟಿದೆ. ನಿರುದ್ಯೋಗ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಒಟ್ಟು ಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಯುವ ಜನರು ತಮ್ಮ ಬದುಕು ಮತ್ತು ಭವಿಷ್ಯದ ಬಗ್ಗೆ ಒಂದು ರೀತಿಯ ಆತಂಕದಲ್ಲಿದ್ದಾರೆ. ಸರಕಾರ ಒಂದು ಹುದ್ದೆಗೆ ಅರ್ಜಿ ಕರೆದರೆ ಸಾವಿರಾರು ಸಂಖ್ಯೆಯಲ್ಲಿ ಅರ್ಜಿಗಳು ಬಂದು ಬೀಳುತ್ತವೆ. ಪೌರ ಕಾರ್ಮಿಕರ ಕೆಲಸಕ್ಕೆ ಉನ್ನತ ಪದವೀಧರರು ಅರ್ಜಿ ಹಾಕುತ್ತಿದ್ದಾರೆ.

ದುಡಿಯುವ ಕೈಗಳು ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಇವೆ. ಆದರೆ, ಕೆಲಸ ಕೊಡುವ ಸಾಮರ್ಥ್ಯ ಸರಕಾರದ ಕೈಯಲ್ಲಿ ಇಲ್ಲ. ಉದ್ಯೋಗ ಸೃಷ್ಟಿಯ ಪ್ರಧಾನಿ ಭರವಸೆ ನೀರಿನ ಮೇಲಿನ ಗುಳ್ಳೆಯಂತೆ ಒಡೆದು ಹೋಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳಲ್ಲಿ 24 ಲಕ್ಷ ಉದ್ಯೋಗಗಳು ಖಾಲಿ ಇವೆ. ಈ ಹುದ್ದೆಗಳಿಗೆ ತುರ್ತಾಗಿ ನೇಮಕಾತಿ ನಡೆಯಬೇಕಾಗಿದೆ. ಖಾಲಿ ಇರುವ ಹುದ್ದೆಗಳಲ್ಲಿ ಶಿಕ್ಷಣ ಇಲಾಖೆಯಲ್ಲೇ 10 ಲಕ್ಷ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿ 6 ಲಕ್ಷ ಹುದ್ದೆಗಳು ಭರ್ತಿಯಾಗಿಲ್ಲ. ಉಳಿದಂತೆ ರೈಲ್ವೆ ಇಲಾಖೆಯಲ್ಲಿ 3 ಲಕ್ಷ, ಅಂಗನವಾಡಿಯಲ್ಲಿ 2.2 ಲಕ್ಷ ಹಾಗೂ ಆರೋಗ್ಯ ಕ್ಷೇತ್ರದಲ್ಲಿ 1.5 ಲಕ್ಷ ಹುದ್ದೆಗಳು ಖಾಲಿ ಇವೆ. ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ 50 ಸಾವಿರ ಹುದ್ದೆಗಳು ಭರ್ತಿಯಾಗಿಲ್ಲ. ಈ ರೀತಿ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರದ ಬಂಡವಾಳ ಬಯಲಾಗಿದೆ. ಜನತೆ ಬಂದ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)