varthabharthi

ಸಂಪಾದಕೀಯ

ಜನಸಂಖ್ಯೆಯನ್ನು ಸರಕಾರ ಸಂಪತ್ತಾಗಿ ಪರಿಗಣಿಸಲಿ

ವಾರ್ತಾ ಭಾರತಿ : 12 Sep, 2018

2025ರ ಹೊತ್ತಿಗೆ ಭಾರತದಲ್ಲಿ ವೃದ್ಧರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ ಎನ್ನುವ ವರದಿಯೊಂದು ಈಗಾಗಲೇ ಹೊರಬಿದ್ದಿದೆ. ಅಂದರೆ ವೃದ್ಧರು-ಯುವಕರ ನಡುವಿನ ಅನುಪಾತದಲ್ಲಿ ಗಮನೀಯ ಏರಿಳಿತವಾಗಲಿದೆ. ಈ ಏರಿಳಿತಗಳ ಪರಿಣಾಮಗಳನ್ನು ಇದೀಗ ಚೀನಾ ಅನುಭವಿಸುತ್ತಿದೆ. ಈ ಏರಿಳಿತಗಳಿಗೆ ಮುಖ್ಯ ಕಾರಣವೇ, ‘ಒಂದು ಮಗು ಸಾಕು’ ಎನ್ನುವ ಕಠಿಣ ಕುಟುಂಬ ಯೋಜನೆ ನೀತಿ. ಇದರಿಂದಾಗಿ ಆ ದೇಶದಲ್ಲಿ ಯುವಕರ ಸಂಖ್ಯೆ ಕಡಿಮೆಯಾಗುತ್ತಾ, ವೃದ್ಧರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಸ್ಥಿತಿ ಅಪಾಯಕಾರಿ ಮಟ್ಟವನ್ನು ಮುಟ್ಟುವ ಮೊದಲು ಎಚ್ಚೆತ್ತುಕೊಂಡ ಚೀನಾ, ಈ ಕಠಿಣ ನೀತಿಯಿಂದ ಹಿಂದೆ ಸರಿದು, ಹೆಚ್ಚು ಮಕ್ಕಳನ್ನು ಹೆರಲು ಪ್ರೋತ್ಸಾಹಿಸ ತೊಡಗಿದೆ. ಒಂದು ದೊಡ್ಡ ದೇಶದಲ್ಲಿ ಅಪಾರ ಜನಸಂಪತ್ತು ಕೂಡ ಅದರ ಅಭಿವೃದ್ಧಿಗೆ ಪೂರಕವಾಗಬಲ್ಲುದು. ದುಡಿಯುವ ಕೈಗಳು ಹೆಚ್ಚಾಗುತ್ತಾ ಹೋದಂತೆಯೇ ದೇಶದ ಅಭಿವೃದ್ಧಿಯ ಮಟ್ಟವೂ ಏರಿಕೆಯಾಗುತ್ತದೆ. ಆದರೆ ದುರದೃಷ್ಟವಶಾತ್ ಇಂದು ಏರುತ್ತಿರುವ ಜನಸಂಖ್ಯೆಯನ್ನು ಉದ್ಯೋಗಗಳನ್ನು ಬೇಡುತ್ತಿರುವ ಕೈಗಳಾಗಿ ನಾವು ನೋಡುತ್ತಿದ್ದೇವೆ. ಒಂದೆಡೆ ಜನಸಂಖ್ಯೆಯನ್ನು ಸಂಪತ್ತು ಎಂದು ಕರೆಯುತ್ತಲೇ, ಮಗದೊಂದೆಡೆ ಆ ಸಂಪತ್ತನ್ನು ಒಂದು ಸಮಸ್ಯೆಯಾಗಿ ನಾವು ಪರಿವರ್ತಿಸಿಕೊಂಡಿದ್ದೇವೆ.

ಭಾರತ ದೇಶ ಅಭಿವೃದ್ಧಿಯ ಕಡೆಗೆ ಮುನ್ನುಗ್ಗುತ್ತಿರುವುದನ್ನು ನಾವು ಗುರುತಿಸುತ್ತೇವೆಯಾದರೂ, ಈ ಅಭಿವೃದ್ಧಿಯ ಕೊಂಡಿಯಿಂದ ದೇಶದ ಬಹುಸಂಖ್ಯೆಯ ದೊಡ್ಡ ಭಾಗ ಕಳಚಿಕೊಂಡಿದ್ದಾರೆ ಎನ್ನುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದೇವೆ. ದೇಶದಲ್ಲಿ ಅಪಾರ ಸಂಪನ್ಮೂಲಗಳಿವೆಯಾದರೂ, ಅವುಗಳು ಕೆಲವೇ ಕೆಲವು ಜನರ ಕೈಯಲ್ಲಿ ಶೇಖರಣೆಗೊಂಡಿದೆ ಎನ್ನುವುದೇ ಎಲ್ಲ ಅಸಮತೋಲನಗಳ ಮೂಲವಾಗಿದೆ. ನೂರು ಜನರು ಉಣ್ಣುವ ಅನ್ನ ಒಬ್ಬನ ತಟ್ಟೆಯಲ್ಲಿದೆ. ಉಳಿದ 99 ಜನರು ಅರೆ ಹೊಟ್ಟೆಯಲ್ಲಿದ್ದಾರೆ ಮತ್ತು ಖಾಲಿತಟ್ಟೆಯನ್ನು ಹೊಂದಿದ್ದಾರೆ. ಇದು ಭಾರತದ ಸ್ಥಿತಿ. ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಅನ್ನದ ಕೊರತೆ ಇಲ್ಲ. ಅಂದರೆ ನೂರು ಜನರು ಉಣ್ಣುವ ಅನ್ನವನ್ನು ಈ ದೇಶ ಹೊಂದಿದೆ. ಆದರೂ 99 ಜನರು ಖಾಲಿ ಹೊಟ್ಟೆಯಲ್ಲಿದ್ದಾರೆ. ಪರಿಹಾರ ಸ್ಪಷ್ಟವಿದೆ. ಇರುವ ಅನ್ನವನ್ನು ಉಳಿದ ತಟ್ಟೆಗೆ ಹಂಚುವ ಕೆಲಸದಲ್ಲಿ ನಾವು ವಿಫಲರಾಗಿದ್ದೇವೆ. ಇದರಿಂದಾಗಿ ಸಂಪನ್ಮೂಲ ಅಪವ್ಯಯವಾಗುತ್ತಿದೆೆ ಮಾತ್ರವಲ್ಲ, ಈ ದೇಶದ ಆಸ್ತಿಯಾಗಬಹುದಾದ 99 ಜನರು ಸಮಸ್ಯೆಯಾಗಿ ಬಿಂಬಿತವಾಗುತ್ತಾರೆ. ಇನ್ನೊಬ್ಬ ಈ ಸಾಲಿಗೆ ಸೇರಿದರೆ, ಸಮಸ್ಯೆ ಬಿಗಡಾಯಿಸುವ ಭಯದಿಂದ ಇರುವ 99 ಜನರ ಸಂಖ್ಯೆಯಲ್ಲಿ ಇಳಿಮುಖವಾಗುವುದೇ ಸಮಸ್ಯೆಗೆ ಪರಿಹಾರವೆಂದು ಭಾವಿಸುತ್ತಿದ್ದೇವೆ. ಅರೆ ಹೊಟ್ಟೆಯಲ್ಲಿ ಬದುಕುವ ಈ ಸಮುದಾಯ ಮೊತ್ತ ಮೊದಲು ಅನಾರೋಗ್ಯಕ್ಕೆ ಸಿಲುಕುತ್ತವೆ. ಆ ಬಳಿಕ, ಶಿಕ್ಷಣಕ್ಕಾಗಿ ಒದ್ದಾಡಬೇಕಾಗುತ್ತದೆ. ಇವರು ಈ ದೇಶದ ಬಹುಸಂಖ್ಯಾತರಾಗಿರುವ ಕಾರಣ, ಅನಾರೋಗ್ಯ, ಅನಕ್ಷರತೆ, ಬಡತನವೇ ಈ ದೇಶದ ಲಕ್ಷಣವಾಗಿ ಪರಿವರ್ತನೆಯಾಗುತ್ತದೆ.

ನೂರು ಜನರ ಅನ್ನವನ್ನು ತನ್ನ ತಟ್ಟೆಯಲ್ಲಿ ಮುಚ್ಚಿಕೊಂಡಿರುವಾತನನ್ನು ಮುಂದೆ ಮಾಡಿ ದೇಶದ ಅಭಿವೃದ್ಧಿಯನ್ನು ಮಂಡಿಸುತ್ತೇವೆ. ಆದುದರಿಂದಲೇ, ನೂರಕ್ಕೂ ಅಧಿಕ ಬಿಲಿಯಾಧಿಪತಿಗಳಿದ್ದಾರಾದರೂ, ಸಮಗ್ರ ಅಭಿವೃದ್ಧಿಯ ಪ್ರಶ್ನೆ ಬಂದಾಗ ದೇಶ ಹಿಂದುಳಿದು ಬಿಡುತ್ತದೆ. ಸರಕಾರವೂ ಇದರ ಕುರಿತಂತೆ ತಲೆಕೆಡಿಸಿಕೊಂಡಂತೆ ಇಲ್ಲ. ಇರುವ ಬಿಲಿಯಾಧಿಪತಿಗಳನ್ನೇ ದೇಶದ ಅಭಿವೃದ್ಧಿಯ ಮುಖಪುಟವನ್ನಾಗಿಸಿ ತನ್ನ ಮಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬಿಲಿಯಾಧಿಪತಿಗಳ ಅವಶ್ಯಕತೆಗಳನ್ನು ಪೂರೈಸುವುದೇ ದೇಶವನ್ನು ಇನ್ನಷ್ಟು ಶ್ರೀಮಂತವಾಗಿಸುವ ದಾರಿ ಎಂಬ ತಪ್ಪು ಕಲ್ಪನೆಯಲ್ಲಿದೆ.

ನಾವು ಆಫ್ರಿಕನ್ನರ ಬಡತನದ ಕುರಿತಂತೆ ಮಾತನಾಡುತ್ತೇವೆ. ಆದರೆ ಭಾರತದ ಮಕ್ಕಳಲ್ಲಿ ಆಫ್ರಿಕಾದ ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆಯಿದೆ. ಆಫ್ರಿಕಾದಲ್ಲಿ ಶೇ. 30 ಅಪೌಷ್ಟಿಕತೆಯಿದೆಯಾದರೆ, ಭಾರತದ ಅಪೌಷ್ಟಿಕತೆ ಶೇ. 40ನ್ನು ದಾಟಿದೆ. ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ. ಇಂದಿಗೂ ಅಪೌಷ್ಟಿಕತೆ ಜನಸಂಪತ್ತನ್ನು ಸಮಸ್ಯೆಯಾಗಿ ಪರಿವರ್ತಿಸಿದೆಯೋ ಅಥವಾ ಜನಸಂಪತ್ತು ಅಪೌಷ್ಟಿಕತೆಯನ್ನು ಸೃಷ್ಟಿಸಿದೆಯೋ ಎನ್ನುವುದರ ಬಗ್ಗೆ ದೇಶ ಖಚಿತ ನಿಲುವಿಗೆ ಬರಲು ಹಿಂದೇಟು ಹಾಕುತ್ತಿದೆ. ಆದರೆ ಬೀಸಾಗಿ, ಹೆಚ್ಚುತ್ತಿರುವ ಜನಸಂಖ್ಯೆಯೇ ಬಡತನಕ್ಕೆ, ಅಪೌಷ್ಟಿಕತೆಗೆ ಕಾರಣ ಎನ್ನುವ ಹೇಳಿಕೆಯನ್ನು ಹಲವು ದಶಕಗಳಿಂದ ನೀಡುತ್ತಾ ಬಂದಿದ್ದೇವೆ. ದೇಶದಲ್ಲಿ ಮಕ್ಕಳು ಹುಟ್ಟುವಾಗಲೇ ರೋಗವನ್ನು ಹೊತ್ತುಕೊಂಡೇ ಬರುತ್ತಾರೆ. ಒಂದು ವರ್ಷದಲ್ಲಿ ಎಂಬತ್ತು ಲಕ್ಷ ‘ಕಡಿಮೆ ತೂಕದ’ ಮಕ್ಕಳು ದೇಶದಲ್ಲಿ ಜನಿಸುತ್ತಾರೆ. ಈ ಮಕ್ಕಳ ಬೆಳವಣಿಗೆಯಲ್ಲೂ ಭಾರತ ತೀರಾ ತಾತ್ಸಾರವನ್ನು ಹೊಂದಿದೆ. ದೇಶದಲ್ಲಿ ಶೇ. 70ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತವೆ ಎನ್ನುವುದನ್ನು ವರದಿಗಳು ಹೇಳುತ್ತವೆ.

ಬೀಜದಂತೆ ಮರ, ಬೆಳೆಯುವ ಗಿಡವನ್ನು ಮೊಳಕೆಯಲ್ಲಿ ನೋಡು ಎನ್ನುವುದು ಜನಪ್ರಿಯ ಗಾದೆ. ಇಂತಹ ಮಕ್ಕಳು ಭಾರತದ ಪಾಲಿಗೆ ಭವಿಷ್ಯದಲ್ಲಿ ಸಂಪತ್ತಾಗಿ ಪರಿವರ್ತನೆಗೊಳ್ಳುವುದಾದರೂ ಹೇಗೆ? ಈ ದೇಶದಲ್ಲಿ ಅತ್ಯುತ್ತಮ ಕ್ರೀಡಾಪಟುಗಳನ್ನು 15 ವರ್ಷ ದಾಟಿದ ತರುಣರಲ್ಲಿ ಹುಡುಕುತ್ತೇವೆ. ಆದರೆ ಒಬ್ಬ ಒಳ್ಳೆಯ ಕ್ರೀಡಾಪಟು 15 ವರ್ಷಗಳ ಬಳಿಕ ಅತ್ಯುತ್ತಮ, ಪೌಷ್ಟಿಕ ಆಹಾರ ಪಡೆಯುವುದರಿಂದ ಹುಟ್ಟುವುದಿಲ್ಲ. ಪೌಷ್ಟಿಕತೆ ಮಗು ಗರ್ಭದಲ್ಲಿರುವಾಗಲೇ ಸಿಗಬೇಕಾಗುತ್ತದೆ. ಅಂದರೆ ಗರ್ಭಿಣಿಯರಿಂದಲೇ ನಮ್ಮ ಭವಿಷ್ಯದ ಆರೈಕೆ ಆರಂಭವಾಗಬೇಕು. ಮೊತ್ತ ಮೊದಲು ಈ ದೇಶದಲ್ಲಿ ಗರ್ಭಿಣಿಯರ ಬದುಕು ಉತ್ತಮವಾಗಬೇಕು. ಆಗ ಶಿಶುವು ಆರೋಗ್ಯವಾಗಿ ಹುಟ್ಟುತ್ತದೆ. ತಾಯಿಯ ಆರೋಗ್ಯ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ದುರದೃಷ್ಟವಶಾತ್ ಈ ದೇಶದಲ್ಲಿ ಅತ್ಯುತ್ತಮವಾಗಿ ಸ್ತನ್ಯಪಾನದ ಭಾಗ್ಯ ಶೇ. 25ರಷ್ಟು ಮಕ್ಕಳಿಗಷ್ಟೇ ಸಿಗುತ್ತದೆ. ಇಂತಹ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ದೇಶದ ಪಾಲಿಗೆ ಭಾರವಾಗುತ್ತಾ ಹೋಗುತ್ತಾರೆ.

ನೋಟು ನಿಷೇಧದ ಬಳಿಕ ಗ್ರಾಮೀಣ ಭಾರತದಲ್ಲಿ, ನಿರುದ್ಯೋಗ, ಹಸಿವು, ಅಪೌಷ್ಟಿಕತೆ ಹೆಚ್ಚಿದೆ ಎಂದು ವರದಿ ಹೇಳಿದೆ. ಜೊತೆ ಜೊತೆಗೇ ಆರೋಗ್ಯಕ್ಕೆ ಹೂಡುತ್ತಿರುವ ಹಣವೂ ಇಳಿಮುಖವಾಗುತ್ತಾ ಬರುತ್ತಿದೆ. ಸರಕಾರ ಈ ದಿಕ್ಕಿಗೆ ತನ್ನ ಗಮನ ಹರಿಸದೆ, ವಿವಿಧ ಮಠಗಳಿಗೆ ಹಣವನ್ನು ಸುರಿಯುತ್ತಿದೆ. ಪಟೇಲರ ವಿಗ್ರಹ, ಶಿವಾಜಿಗೆ ಪಾರ್ಕ್, ರಾಮಾಯಣಕ್ಕೆ ಮ್ಯೂಸಿಯಂ, ಗೋವುಗಳಿಗೆ ಗೋಶಾಲೆಗಳು ಎಂದು ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸಬ್ಸಿಡಿ ಆಹಾರ ವಿತರಣೆ ಭಾಗಶಃ ಕಡಿತಗೊಂಡಿದೆ. ಬಡವರ ಗುರುತಿಸುವಿಕೆಯ ಅಳತೆಗೋಲುಗಳನ್ನೇ ಬದಲಾಯಿಸಿ ಬಡವರ ಸಂಖ್ಯೆಯನ್ನು ಇಳಿಸಲಾಗಿದೆ. ಇದೂ ಅಪೌಷ್ಟಿಕತೆ ಹೆಚ್ಚಲು ಮುಖ್ಯ ಕಾರಣವಾಗಿದೆ. ಇದರ ಪರಿಣಾಮವಾಗಿಯೇ, ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಯಿದ್ದೂ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಪಡೆಯುವಷ್ಟು ಆರೋಗ್ಯವಂತ ಯುವಕರನ್ನು ನಾವು ಹೊಂದಿಲ್ಲ. ಭಾರತದ ಯುವಜನತೆಯನ್ನೂ ್ನ ಸಂಪತ್ತು ಎಂದು ಭಾವಿಸಿ, ಅವರಿಗಾಗಿ ಸರಕಾರ ಎಲ್ಲಿಯವರೆಗೆ ಹೂಡಿಕೆ ಮಾಡುವುದಿಲ್ಲವೋ ಅಲ್ಲಿಯವರೆಗೆ, ಈ ದೇಶದ ಜನಸಂಖ್ಯೆ ಸಮಸ್ಯೆಯಾಗಿಯೇ ಇರುತ್ತದೆ.ಬಡತನ ಅಪೌಷ್ಟಿಕತೆ ಹೆಚ್ಚುತ್ತಲೇ ಹೋಗುತ್ತದೆ. ಸಂಪನ್ಮೂಲಗಳ ಸಮಾನ ಹಂಚಿಕೆಯ ಕಡೆಗೆ ಸರಕಾರ ಆಲೋಚಿಸುವುದೇ ಸಮಸ್ಯೆ ಪರಿಹಾರಕ್ಕೆ ಸರಕಾರದ ಮುಂದಿರುವ ಕಟ್ಟಕಡೆಯ ಮಾರ್ಗವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)