varthabharthi

ಅನುಗಾಲ

ವ್ಯಕ್ತಿತ್ವ ನಿರ್ಣಯದ ಫಲಕಗಳು

ವಾರ್ತಾ ಭಾರತಿ : 13 Sep, 2018
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಸಾಹಿತಿಯೊಬ್ಬ ಯಾವ ಪಕ್ಷಕ್ಕೆ ಮತ ಹಾಕುತ್ತಾನೆ, ಯಾವ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾನೆ ಎಂಬುದು ಅವನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಆತ ಎಡವೋ ಬಲವೋ ಮಧ್ಯಮವೋ ಯಾವುದಾದರೂ ಒಂದು ಪಂಥವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಇತರರಿಗೆ ಆತನನ್ನು ದ್ವೇಷಿಸಲು ಕಾರಣವಾಗಬಾರದು; ನೆಪವೂ ಆಗಬಾರದು.


ಎಡಪಂಥದ ಅದರಲ್ಲೂ ನಕ್ಸಲ್ ಚಿಂತನೆಯನ್ನು ಅನುಕಂಪದಿಂದ ಕಾಣುವ ಒಂದಷ್ಟು ಮಂದಿಯ ಮೇಲೆ ಸರಕಾರದ ಕೆಂಗಣ್ಣು ಬಿತ್ತು. ಕೆಲವು ಗಣ್ಯ ಚಿಂತಕರ ನೆರವು ಮತ್ತು ಸರ್ವೋಚ್ಚ ನ್ಯಾಯಾಲಯದ ಕೃಪೆಯಿಲ್ಲದಿದ್ದರೆ ಬಡಪಾಯಿ ಚಿಂತಕರು ನಮ್ಮ ಘನಂದಾರಿ ಪೊಲೀಸರ ಅಧಿಕಾರದೆದುರು ಬಟ್ಟೆ ಬಿಚ್ಚಿ ನಿಲ್ಲಬೇಕಾಗಿತ್ತೇನೋ? ಹೀಗೆ ದಸ್ತಗಿರಿಯಾದವರನ್ನು ಮತ್ತು ಅಂತಹ ತಳಿಯನ್ನು ‘ಅರ್ಬನ್ ನಕ್ಸಲರು’ ಎಂದು ಬಲಪಂಥದವರು ಟೀಕಿಸಿದರು. (ಈ ಪದಪುಂಜವನ್ನು ಆರ್ನವ್ ಗೋಸ್ವಾಮಿ ಎಂಬ ನಿರಂಕುಶ ಮಾಧ್ಯಮಿ ಮೊದಲಿಗೆ ಹೇಳಿದನೆಂದು ನನ್ನ ನಂಬಿಕೆ.) ಈಗ ‘ಅರ್ಬನ್ ನಕ್ಸಲರು’ ಎಂಬ ಹೊಸ ಪದವನ್ನು ದೇಶದ ಬಲಪಂಥದವರು ಚಲಾವಣೆಗೆ ತಂದಿದ್ದಾರೆ. ಇದನ್ನು ಪ್ರಜ್ಞಾವಂತರು ನಿರ್ಲಕ್ಷಿಸಬಹುದಿತ್ತು. ಆದರೆ ನಮ್ಮ ಚಿಂತಕ, ಬುದ್ಧಿಜೀವಿ ವರ್ಗ ವಿರೋಧಪಕ್ಷದವರಂತೆ ಕ್ರಿಯೆಗೆ ಪ್ರತಿಕ್ರಿಯೆ ಸೂಚಿಸಿ ‘ನಾನು ಅರ್ಬನ್ ನಕ್ಸಲ್’ ಎಂಬ ಫಲಕವನ್ನು ಹಿಡಿದು ಅದನ್ನು ಜಗಜ್ಜಾಹೀರುಮಾಡಿದರು.

ಇದೊಂದು ರೀತಿಯ ಗುಮಾಸ್ತಗಿರಿ; ಪ್ರತಿಯೊಂದಕ್ಕೂ ಸ್ವೀಕೃತಿಪತ್ರ ನೀಡುವ ಶಿಷ್ಟಾಚಾರದಂತೆ. ಒಂದರ್ಥದಲ್ಲಿ ನಮ್ಮ ಅನೇಕ ದೊಡ್ಡವರು ಪ್ರತಿಕ್ರಿಯಾತ್ಮಕ ಚಿಂತಕರು. ಅದರಲ್ಲೂ ಬಲಪಂಥದವರ ಖೆಡ್ಡಾಕ್ಕೆ ಬೀಳುವುದೆಂದರೆ ನಮ್ಮ ಬುದ್ಧಿವಂತರಿಗೆ ಎಲ್ಲಿಲ್ಲದ ಉತ್ಸಾಹ. ಹಿಂದೆ ‘ಢೋಂಗಿ ಬುದ್ಧಿಜೀವಿ’ ಎಂಬ ಪದವುಂಟಾದಾಗ ಈ ಪರಿಯ ಕೋಲಾಹಲವುಂಟಾಗಿರಲಿಲ್ಲ. ಏಕೆಂದರೆ ‘ಬುದ್ಧಿಜೀವಿ’ ಎಂಬ ಪದವೇ ಬಲಪಂಥೀಯರಿಗೆ ಅಸಹ್ಯವಾದ್ದರಿಂದ ಮತ್ತು ಅದನ್ನು ಸಮಾಜವು ಅರ್ಥಮಾಡಿಕೊಂಡಿದ್ದರಿಂದ ಅದಕ್ಕೆ ಯಾವ ವಿಶೇಷಣವನ್ನು ಸೇರಿಸಿದರೂ ಅದರ ಪರಿಣಾಮ ಬೇರೆಯಾಗಲಿಲ್ಲ. ಒಟ್ಟಿನಲ್ಲಿ ಹೆಡ್ಡನಿಗೆ ಒಂದುಕಡೆಯಾದರೆ ಬುದ್ಧಿವಂತನಿಗೆ ಮೂರು ಕಡೆ ಎಂಬ ಹಳ್ಳಿಯ ಮಾತನ್ನು ತಿಳಿದವರು ಸಾಬೀತು ಮಾಡುತ್ತಿದ್ದಾರೆ. ಅರಿವೇ ಗುರು ಎಂದು ಯಾರು ಹೇಳಿದರೋ? ಸಾಮಾನ್ಯ ಪ್ರತಿಭಾವಂತರು ಮತ್ತು ಚಿಂತಕರು ಇತರರಿಗಿಂತ ಅಂದರೆ ಸಾಮಾನ್ಯರಿಗಿಂತ ಭಿನ್ನವಾಗಿರುತ್ತಾರೆ. ಅದಕ್ಕೇ ಅವರು ಅಸಾಮಾನ್ಯರಾಗಿರುತ್ತಾರೆ. ಅಷ್ಟೇ ಅಲ್ಲ ಎಲ್ಲ ವಿದ್ವಾಂಸರೂ ಅಸಾಮಾನ್ಯರಾಗಿರುವುದಿಲ್ಲ. ಅವರಲ್ಲೂ ಸವೆದ ಹಾದಿಯಲ್ಲೇ ನಡೆದು ಉರುಹೊಡೆಯುವವರು ಬೇಕಷ್ಟಿರುತ್ತಾರೆ. ಆದರೆ ಕಡ ತಂದ ವಸ್ತುಗಳನ್ನು ಬಳಸದೆ ತಮ್ಮದೇ ಹಾದಿಯನ್ನು ಸೃಷ್ಟಿಸುವ ಮಂದಿ ವಿದ್ವಾಂಸರಿಗಿಂತಲೂ ಶ್ರೇಷ್ಠರಾಗಿರುತ್ತಾರೆ. ಶಿವರಾಮ ಕಾರಂತರು ಖಂಡಿತ ವಿದ್ವಾಂಸರಲ್ಲ.

ಆದರೆ ವಿದ್ವಾಂಸರನ್ನೂ ಚಿಂದಿಮಾಡುವಷ್ಟು ಅನುಭವ ಮತ್ತು ಪ್ರಯೋಗಶೀಲ ಮನಸ್ಸು ಅವರದಿತ್ತು. ಹೀಗೆ ಅಸಾಮಾನ್ಯರಾಗಿದ್ದು ‘ನಾನು ಅರ್ಬನ್ ನಕ್ಸಲ್’ ಎಂದು ಫಲಕ ಹಾಕಿಕೊಂಡವರು ಶ್ರೇಷ್ಠ ನಾಟಕಕಾರ, ಚಿಂತಕ, ನಟ ಗಿರೀಶ್ ಕಾರ್ನಾಡ್. ಕಾವ್ಯ ಅಂದರೆ ಸಾಹಿತ್ಯದಲ್ಲಿ ಅತೀ ರಮ್ಯವಾದ ನಾಟಕಕಲೆಯನ್ನು ಕೃತಿರೂಪದಲ್ಲಿ ಸೃಷ್ಟಿಸಿ, ಸ್ವತಃ ನಟಿಸಿ ಅಪೂರ್ವವಾದ ಸಾಧನೆಯನ್ನು ಮೆರೆದ ಮೇರು ವ್ಯಕ್ತಿತ್ವ ಅವರದ್ದು. ಕಾರ್ನಾಡರು ನಾಟಕವನ್ನು ಜಗತ್ತಿನ ಅರಿವನ್ನು ಸಾಧಿಸಿಕೊಳ್ಳಲು ಬಳಸಿಕೊಂಡರು. ಅವರ ಒಂದೊಂದು ಕೃತಿಯನ್ನು ವಿಮರ್ಶಿಸಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ ವಿಮರ್ಶಕರಿದ್ದಾರೆ. ಆದರೆ ಕೈಲಾಸಂ, ಶ್ರೀರಂಗ ಮುಂತಾದವರಂತೆ ಕನ್ನಡ ನಾಟಕಕಾರರ ಅಗ್ರಪಂಕ್ತಿಯಲ್ಲಿ ಅವರಿದ್ದಾರೆಂಬುದನ್ನು ಮರೆಯಲಾಗದು.

ಒಬ್ಬ ಸಾಹಿತಿ ಬರೆಯುತ್ತಲೇ ಇರಬೇಕು ಮತ್ತು ಆತನು ಸಮಾಜಮುಖಿಯಾಗಿರಬಾರದು ಎಂಬ ತರ್ಕ ಇತ್ತೀಚೆಗಿನದ್ದು. ಸಾಹಿತಿಯೊಬ್ಬ ಯಾವ ಪಕ್ಷಕ್ಕೆ ಮತ ಹಾಕುತ್ತಾನೆ, ಯಾವ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾನೆ ಎಂಬುದು ಅವನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಆತ ಎಡವೋ ಬಲವೋ ಮಧ್ಯಮವೋ ಯಾವುದಾದರೂ ಒಂದು ಪಂಥವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಅದು ಇತರರಿಗೆ ಆತನನ್ನು ದ್ವೇಷಿಸಲು ಕಾರಣವಾಗಬಾರದು; ನೆಪವೂ ಆಗಬಾರದು. ಆದರೆ ಕಾರ್ನಾಡ್ ಈ ಫಲಕವನ್ನು ಹಾಕಿದ ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾದದ್ದೇ ತಡ, ಮನೆ, ಬೀದಿ ಹೀಗೆ ಎಲ್ಲೆಂದರಲ್ಲಿರುವ ಸಾಮಾನ್ಯರಂತಿರುವವರೆಲ್ಲ ಒಮ್ಮೆಗೇ ಅವರ ಮೇಲೆ ಸಾಮಾಜಿಕ ಜಾಲ ತಾಣಗಳಲ್ಲಿ ಮುಗಿಬಿದ್ದರು. ತಮ್ಮ ಆಚಾರವಿಲ್ಲದ ನಾಲಗೆಯನ್ನು ಚಾಚಿದರು. ಸ್ವಲ್ಪಹೆಸರು ತುಂಬಿಕೊಂಡವರು, ಜನಪ್ರತಿನಿಧಿಗಳೆಂಬವರು, ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ, ಸಭೆಸಮಾರಂಭಗಳಲ್ಲಿ ಪ್ರಸ್ತುತತೆಯನ್ನು ಕೈಬಿಟ್ಟು ಕಾರ್ನಾಡರನ್ನು ಹೀಯಾಳಿಸಿದರು. ಇವರೆಲ್ಲ ಒಂದೇ ರಾಜಕೀಯ ಂಥವನ್ನು, ಕ್ರಮವನ್ನು ಬೆಂಬಲಿಸುವವರೆನ್ನುವುದು ಇಂತಹ ಚರ್ಚೆಯ ಕಳಪೆ ಮಟ್ಟದ ಮೂಲಕ ಪ್ರದರ್ಶಿತವಾಗುತ್ತಿತ್ತು.

 ಈ ರೀತಿಯ ಹೊಲಸು ಹೀಯಾಳಿಕೆಗೆ ತುತ್ತಾದವರಲ್ಲಿ ಕಾರ್ನಾಡ್ ಮೊದಲಿಗರೇನಲ್ಲ. ಪ್ರಸಿದ್ಧ ಚಲನಚಿತ್ರ ನಟ ಪ್ರಕಾಶ ರೈ ಕೆಲ ಸಮಯದ ಹಿಂದೆ ತಮ್ಮ ಬಿಚ್ಚು ಮನಸ್ಸಿನ ಟೀಕೆಗಳನ್ನು ಸಾರ್ವಜನಿಕ ಚರ್ಚೆಗಿರಿಸಿದರು. ಆದರೆ ಅವರು ನಿರೀಕ್ಷಿಸಿದ ಚರ್ಚೆಯಾಗುವ ಬದಲು ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಟೀಕಿಸಲಾಯಿತು. ಅವರ ಚಲನಚಿತ್ರದ ಚಿತ್ರಗಳೂ ವ್ಯಂಗ್ಯಕ್ಕೆ ಬಲಿಯಾದವು. ಕೆಟ್ಟ ಮನಸ್ಸುಗಳು ತಮ್ಮ ತಾಂತ್ರಿಕ ಕೌಶಲ್ಯವನ್ನು ಬಳಸಿ ಚರ್ಚೆಯನ್ನು ವಿಕೃತ ಮತ್ತು ಕೀಳು ಹಂತಕ್ಕೆ ತಲುಪಿಸಿದವು.

ಇದಕ್ಕೂ ಮೊದಲೇ ಡಾ. ಯು. ಆರ್. ಅನಂತ ಮೂರ್ತಿಯವರು ಇಂತಹ ಮಸಿಬಳಿಯುವ ಉದ್ಯಮಕ್ಕೆ ಬಲಿಯಾಗಿದ್ದರು. ತಮಿಳು ಬರಹಗಾರ ಪೆರುಮಾಳ್ ಮುರುಗನ್ ಬಲಪಂಥೀಯರ ಕುಹಕಕ್ಕೆ ಬಲಿಯಾಗಿ ತಾನಿನ್ನು ಬರೆಯುವುದೇ ಇಲ್ಲವೆಂದೂ ತನ್ನೊಳಗಿನ ಬರಹಗಾರ ಸತ್ತನೆಂದೂ ಘೋಷಿಸಿದರು. ಇಂತಹ ಸ್ಥಿತಿಗೆ ಬರಲು ಸರಕಾರದ ಅಧಿಕಾರಶಾಹಿಯೂ ಕಾರಣವಾದದ್ದು ದುರಂತ. ಕೇರಳದಲ್ಲಿ ಮಲೆಯಾಳಿ ಪತ್ರಿಕೆಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಕಥೆಯೊಂದು ಧಾರ್ಮಿಕ ಮೂಲಭೂತವಾದಿಗಳ ವಿರೋಧವನ್ನೆದುರಿಸಿ ನಿಂತೇಹೋಯಿತು. ಈ ಎರಡೂ ಪ್ರಸಂಗಗಳಲ್ಲಿ ನ್ಯಾಯಾಲಯಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದವು. ಆದರೆ ಸದಾ ನ್ಯಾಯಾಲಯಗಳನ್ನು ನಂಬಿ ಬದುಕುವುದು ಸಾಧ್ಯವೇ ಎಂಬುದೇ ಪ್ರಶ್ನೆ. ಹಿಂದೆ ಇಂತಹ ಸಾರ್ವಜನಿಕ ವಿರೋಧದ, ಕಾನೂನಿನ, ಸುವ್ಯವಸ್ಥೆಯ ಸಮಸ್ಯೆಗಳೆದುರಾದಾಗ ಸೂಕ್ತ ಪ್ರಾಧಿಕಾರದ ಆದೇಶ ಬಂದರೆ ಆನಂತರವಾದರೂ ಸಮಾಜವು ಸುಧಾರಿಸಿಕೊಂಡು ಸುಮ್ಮನಿರುತ್ತಿತ್ತು. ಆದರೆ ಈಗ ಸಮಾಜದ ಕೇಡುಗುಂಪುಗಳು ಎಷ್ಟು ಬಲಿಷ್ಠವಾಗಿವೆಯೆಂದರೆ ಅವು ನ್ಯಾಯವನ್ನಾಗಲೀ, ಕಾನೂನನ್ನಾಗಲೀ ಶಾಂತಿ-ಸುವ್ಯವಸ್ಥೆಯನ್ನಾಗಲೀ ಲೆಕ್ಕಿಸುವ ಸ್ಥಿತಿಯಲ್ಲಿಲ್ಲ. ಒಂದಷ್ಟು ಮಂದಿ ಮೂಲಭೂತವಾದದ ವಿಷವನ್ನು ಬಿತ್ತಿಹೋದರೆ ಅಲ್ಲಿ ಕಳೆಯನ್ನು ಬೆಳೆಸಿ ಪೋಷಿಸಿ ಹಬ್ಬಿಸಲು ಬೇಕಷ್ಟು ಮಂದಿಯಿರುತ್ತಾರೆ. ಅವರಿಗೆ ಬೇರೆ ಕೆಲಸವಿರುವುದಿಲ್ಲ; ಇದ್ದರೂ ಇಷ್ಟು ಮುಖ್ಯವೆಂದೆನಿಸುವುದಿಲ್ಲ.

ರಾಜರ ಕಾಲದ ಇತಿಹಾಸ ರಕ್ತಪಾತಗಳಲ್ಲೇ ತುಂಬಿದ್ದು ಅದೇ ನಮ್ಮ ಇತಿಹಾಸವೆಂದು ಕಲಿಯುತ್ತಿರುವುದರಿಂದ ಆ ಕಾಲದ ಸಾಮಾನ್ಯರ ಬವಣೆ ನಮಗೆ ಗೊತ್ತಾಗುವುದಿಲ್ಲ. ಆದರೆ ಉಳ್ಳವರು ಇಲ್ಲದವರ ಮೇಲೆ ಸವಾರಿ ಮಾಡುತ್ತಿರುವ ಮತ್ತು ರಾಜಕಾರಣವೆಂದರೆ ರಾಜ-ಕಾರಣವೇ ಆಗಿತ್ತೆಂಬುದು ಅರಿವಾಗುತ್ತದೆ. ರಾಜನ ಇಷ್ಟಾನಿಷ್ಟಗಳೇ ಪ್ರಜಾಹಿತ-ಅಹಿತವನ್ನವಲಂಬಿಸಿರುತ್ತಿತ್ತು. ದಾರಾಷಿಕೊ ಕೆಟ್ಟವನೆಂಬ ಕಾರಣಕ್ಕೆ ಮರಣದಂಡನೆಯನ್ನು ಹೊಂದಲಿಲ್ಲ. ಆತ ತುಂಬಾ ತಿಳಿವಳಿಕೆಯನ್ನು ಹೊಂದಿದವನೆಂಬುದು ಸರ್ವರಿಗೂ ತಿಳಿದಿತ್ತು. ಆದರೆ ತನ್ನ ತಮ್ಮನೇ ಆದರೂ ಚಕ್ರವರ್ತಿಯಾಗಿದ್ದ ಔರಂಗಜೇಬನಿಗೆ ಇಷ್ಟವಾಗಿರಲಿಲ್ಲವೆಂಬ ಕಾರಣಕ್ಕೆ ಸಾವಿನ ಶಿಕ್ಷೆಗೊಳಪಟ್ಟ. ಯೇಸುವಾಗಲೀ ಸಾಕ್ರೆಟಿಸನಾಗಲೀ ತಪ್ಪುಮಾಡಿದರೆಂದು ಸಾವನ್ನು ಪಡೆಯಲಿಲ್ಲ. ಬದಲಾಗಿ ದುರುಳರ ಆಳ್ವಿಕೆಯ ತಪ್ಪುನಿಯಮಗಳ ವಿರುದ್ಧವಾಗಿರುವ ನಿಲುವನ್ನು ಹೊಂದಿದ ಕಾರಣಕ್ಕೆ ದುರ್ಗತಿಹೊಂದಿದರು. ಈ ಮತ್ತು ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯ ಯೋಗ್ಯತೆ ಮುಖ್ಯವಾಗಲಿಲ್ಲವೆಂಬುದು ಮುಖ್ಯ ಪಾಠ.

ಯಾರೇ ಒಬ್ಬನ ಇಷ್ಟಾನಿಷ್ಟಗಳು ಪ್ರಜೆಗಳ ಭವಿಷ್ಯವನ್ನು ನಿರ್ಧರಿಸಬಾರದು, ಅರಿವನ್ನು ಧಿಕ್ಕರಿಸುವಂತಾಗಬಾರದು ಎಂಬ ಕಾರಣಕ್ಕೆ ಪ್ರಜಾತಂತ್ರ ಸೃಷ್ಟಿಯಾಯಿತು. ಆದರೆ ನಿರಂಕುಶ ಪ್ರಭುತ್ವದಲ್ಲಿ ನಡೆಯುತ್ತಿದ್ದ ಕ್ರೌರ್ಯ ಇಂದು ಪ್ರಜಾತಂತ್ರದಲ್ಲಿ ನಡೆಯುತ್ತಿರುವುದು ಜನಮಾನಸದ ಸಂಸ್ಕೃತಿಯ ಪತನದ ಸಂಕೇತ. ಸಮೂಹಕ್ಕೆ ಸಮೂಹವೇ ಮೂಲಭೂತವಾದವನ್ನು ಎತ್ತಿಹಿಡಿದರೆ ಎಂತಹ ಮೇಧಾವಿಯೇ ಆಗಲಿ ತನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ?

ಒಬ್ಬ ರಾಜಕಾರಣಿ ಸಾರ್ವಜನಿಕ ಟೀಕೆಗೆ ಗುರಿಯಾಗುವುದು ಸಾಮಾನ್ಯ. ಏಕೆಂದರೆ ಆತನ ವ್ಯಕ್ತಿತ್ವವೇ ರಾಜಕೀಯದ್ದು. ಆದರೆ ಕಲಾವಿದನ ಪ್ರಪಂಚವು ಅದಲ್ಲ. ಆತ ತನ್ನ ಅಭಿವ್ಯಕ್ತಿಗೆ ಕಲೆಯ ರೂಪ ನೀಡುತ್ತಾನೆ. ಹಾಗೆಂದು ಚಿತ್ರಗಾರನೊಬ್ಬ ಊಟದ ಚಿತ್ರವನ್ನು ಮಾಡಿ ಹಸಿವನ್ನು ಇಂಗಿಸಿಕೊಳ್ಳುವುದು ಸಾಧ್ಯವಿಲ್ಲ. ನಿಜಕ್ಕೂ ಎದುರಿಗೆ ಊಟದ ತಟ್ಟೆಯಿದ್ದರೆ ಮತ್ತು ಅದರಲ್ಲಿ ಊಟವಿದ್ದರೆ ಮಾತ್ರ ಆತ ಬದುಕಬಲ್ಲ. ಆದ್ದರಿಂದ ಕಲಾವಿದನೊಬ್ಬ ತನ್ನ ಸುತ್ತಣ ಸಮಾಜದ ಓರೆಕೋರೆಗಳನ್ನು ಕಂಡಾಗ ಓರೆಕೋರೆಗಳನ್ನು ಚಿತ್ರಿಸುವುದರ ಜೊತೆಗೇ ಚಿತ್ರಮಾಡುವುದಕ್ಕಿಂತಲೂ ಮುಖ್ಯವಾದ ಅಭಿಮತವನ್ನು ವ್ಯಕ್ತಪಡಿಸುವುದು ಆತನ ಜೀವಂತಿಕೆಗೆ ಸಾಕ್ಷಿಯಾಗುತ್ತದೆ. ಪ್ರಾಮಾಣಿಕ ಬರಹಗಾರನೂ ಇದೇ ರೀತಿಯಲ್ಲಿ ಸಮಾಜದ, ಕಾಲದ, ಇತಿಹಾಸದ, ಸಾಕ್ಷಿಪ್ರಜ್ಞೆಯಾಗಿ ವರ್ತಿಸುತ್ತಾನೆ; ಮತ್ತು ವರ್ತಿಸಬೇಕು.

ಇಂತಹ ಜೀವನ ಜಾಗೃತಿಯ ಕೂಗನ್ನು ನಿಲ್ಲಿಸುವುದೇ ಕೆಲವರ ಹವಣಿಕೆೆಯಾಗಿರುತ್ತದೆ. ಆಗ ಧ್ವನಿಯೆತ್ತುವ ಪ್ರಜ್ಞಾವಂತನ ಸುತ್ತ ಬೆಂಬಲಕ್ಕೆ ಇತರರೂ ನಿಲ್ಲುವುದು ಅವಶ್ಯ. ಕಾರ್ನಾಡರು ಧರಿಸಿದ ಫಲಕವೇನೇ ಇರಲಿ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವಾಗ ಅವರನ್ನು ಬೆಂಬಲಿಸಿ ಸಮಾಜದ ಅರಿವಿನ ಭಾಗ ಅಸಹಾಯಕವಾಗದಂತೆ ಧೃತಿಗೆಡದಂತೆ ಮಾಡಬೇಕಾದದ್ದು ಬೆಂಬಲಿಸುವವರ ಮತ್ತು ಬೆಂಬಲಿಗರ ಸಾರ್ಥಕ ಬದುಕಿನ ಪುರಾವೆಯಾಗಬೇಕು.

ಆದರೆ ಕಾರ್ನಾಡರಿಗೆ ಬೆಂಬಲವಾಗಿ ಕನ್ನಡದ ಬಹುಪಾಲು ಸಾಹಿತಿಗಳು ಮತ್ತು ಅದರಲ್ಲೂ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದವರು ನಿಂತಿಲ್ಲವೆನ್ನುವುದು ದುರಂತ. ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡಮಿಗಳ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಅಭಿವೃದ್ಧಿ, ಕನ್ನಡ ಪುಸ್ತಕ ಮತ್ತಿತರ ಪ್ರಾಧಿಕಾರಗಳ ಅಧ್ಯಕ್ಷರುಗಳು ಮತ್ತು ಸದಸ್ಯರು ಒಕ್ಕೊರಲಿನಿಂದ ಕಾರ್ನಾಡರನ್ನು ಬೆಂಬಲಿಸಬೇಕಿತ್ತು. ಕಾರ್ನಾಡರ ನಿಲುವನ್ನು ಒಪ್ಪಲಿ, ಬಿಡಲಿ, ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಇತರರು ಕಸಿದುಕೊಳ್ಳುವುದು ತಪ್ಪೆಂದು ಹೇಳಬೇಕಿತ್ತು. ಆದರೆ ಈ ಮಂದಿ ಎಲ್ಲಿ ತಮ್ಮ ಸ್ಥಾನಕ್ಕೆ ಚ್ಯುತಿ ಬರುತ್ತದೆಯೋ ಎಂಬ ಭಯದಿಂದೆಂಬಂತೆ ಸುಮ್ಮನಿದ್ದಾರೆ.

ಅವರೊಂದಿಗೆ ಅವರ ಅನೇಕ ಅನುಯಾಯಿಗಳೂ ಇಂದಲ್ಲ ನಾಳೆ ಅವರ ಮೂಲಕ ಅದೇನೋ ಗಿಟ್ಟುತ್ತದೆಯೆಂಬ ನಿರೀಕ್ಷೆ-ಅಪೇಕ್ಷೆಗಳಿಂದೆಂಬಂತೆ ಕಾದು ನೋಡುವ ತಂತ್ರ ಹೂಡಿದ್ದಾರೆ. ದಿನಬೆಳಗಾದರೆ ಸಾಹಿತ್ಯ ಸಮಾರಾಧನೆಗಳಲ್ಲಿ ಭಾಗವಹಿಸುವ ಸರಸ್ವತಿಪುತ್ರರು ಹೀಗೆ ಸುಮ್ಮನಿರುವ ಮೂಲಕ ತಮ್ಮ ಕಾಲಿಗೆ ತಾವೇ ಕಲ್ಲುಹೊತ್ತೊಯ್ಯುತ್ತಿದ್ದಾರೆ. ಕಾರ್ನಾಡರು ಪ್ರಾಯಃ ಬರೆದ ಕಥೆಗಳು ಎರಡೇ ಎರಡು: ‘ಅಳಿದ ಮೇಲೆ’ ಮತ್ತು ‘ಮುಸಲಮಾನ ಬಂದ! ಮುಸಲಮಾನ ಬಂದ’. ಇವೆರಡೂ ಅವರ ಪ್ರಸಿದ್ಧಿಯನ್ನೇನೂ ಹೆಚ್ಚು ಮಾಡಿದ ಕತೆಗಳಲ್ಲ. ಆದರೆ ಇವು ಸಮಕಾಲೀನ ಭಾರತೀಯ ಸಮಾಜದ ವಾಸ್ತವ ಚಿತ್ರಗಳು. ಮೊದಲಿನದ್ದು ಬಾಬರಿ ಮಸೀದಿಯ ಧ್ವಂಸದ ಹಿನ್ನೆಲೆಯುಳ್ಳದ್ದಾದರೆ, ಎರಡನೆಯದು ಹಿಂದೂ ಮುಸಲ್ಮಾನರ ನಡುವಣ ಕೋಮು ವೈಷಮ್ಯವನ್ನು ಮಾರ್ಮಿಕವಾಗಿ ಚಿತ್ರಿಸುವ ಕಥೆ. ಮಲೆಯಾಳದಲ್ಲಿ ‘ಕುಸ್ತಿ’ ಎಂಬ ಕಥೆಯೊಂದು ಇಂತಹ ಕೋಮು ವೈಷಮ್ಯದ ತಳಹದಿಯನ್ನು ಹೊಂದಿತ್ತು. ಮಾಂಟೋವಿನ ಕಥೆಗಳು ಇವನ್ನು ಇನ್ನೂ ಭೀಷಣವಾಗಿ ಚಿತ್ರಿಸಿವೆ.

ಆದರೆ ಈ ಕಥೆಗಳನ್ನು ನಮ್ಮ ಬಹುಪಾಲು ಧಾರ್ಮಿಕ ಮತಾಂಧರು, ಮೂಲಭೂತವಾದಿಗಳು ಓದಿರಲಾರರು. ಆದ್ದರಿಂದ ಆ ಕುರಿತು ಚರ್ಚೆಯೇ ಆಗಿಲ್ಲ. ಓದದೆಯೇ ಒಬ್ಬ ಪ್ರಾಜ್ಞರನ್ನು ಗುರಿಯಾಗಿಸುವುದು ಸುಲಭ. ಅದಕ್ಕೆ ಮಾನಸಿಕ, ಬೌದ್ಧಿಕ ಶಕ್ತಿ ಬೇಡ. ದೈಹಿಕ ಶಕ್ತಿ, ಅಹಂಕಾರ, ಮೂರ್ಖತನ, ಒಂದಿಷ್ಟು ಕುರುಡು ಭಕ್ತಿ -ಇವಿಷ್ಟು ಸಾಧನಗಳಿದ್ದರೆ ಸಾಕು.

ಈಗ ಆಗಿರುವುದು ಇದೇ: ಕುರಿತೋದದೆಯೇ ಅಭಿಪ್ರಾಯ ಮತ್ತು ಪ್ರಯೋಗಪರಿಣತಮತಿಗಳಾಗುತ್ತಿದ್ದಾರೆ ನಮ್ಮ ಜನರು. ಕಾರ್ನಾಡರು ಧರಿಸಿದ ಫಲಕಗಳಿಂದಲೇ ಅವರ ವ್ಯಕ್ತಿತ್ವನಿರ್ಣಯವನ್ನು ಮಾಡುವುದು ವರ್ತಮಾನದ ಸುಖವನ್ನು ಕಾಣುವ ಅನೇಕರಿಗೆ ಸರಿಯಾದೀತು. ಭವಿಷ್ಯದ ಕುರಿತು ಎಷ್ಟು ಮಂದಿ ಚಿಂತಿಸಲು ಸಿದ್ಧವಿದ್ದಾರೆ? ಕಾರ್ನಾಡರು ಚಿತ್ರಿಸಿದ ತುಘಲಕ್ ಕಣ್ಣಮುಂದೆಯೇ ಇದ್ದರೂ ಅದನ್ನು ಅರ್ಥಮಾಡಿಕೊಳ್ಳದವರಿಗೆ ಕಾರ್ನಾಡರೇ ಖಳನಾಯಕರಂತೆ ಕಾಣಿಸಿದರೆ ಅವರ ತಪ್ಪಲ್ಲ; ನಾವು ಬದುಕುತ್ತಿರುವ, ನಮ್ಮ ಕಾಲದ, ತಪ್ಪು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)